Saturday, June 20, 2020

ತುಳುವರ ಮೂಲತಾನ –ಕ್ಷೇತ್ರ ಕಾರ್ಯ--ಚಾರ ದಂಡ್‍ದ ಪೂಜೆ ಗೆಂಡದ ಪರ್ಬ

ತುಳುವರ ಮೂಲತಾನ –ಕ್ಷೇತ್ರ ಕಾರ್ಯ--ಚಾರ

ದಂಡ್‍ದ ಪೂಜೆ ಗೆಂಡದ ಪರ್ಬ

ಹೆಬ್ರಿ ಬಳಿ ಚಾರ ಎಂಬ ಊರು ಇದೆ. ಅಲ್ಲಿ ಹೋದರೆ ತುಳುವರ ವಿಶಿಷ್ಟ ಸಂಪ್ರದಾಯ ಆಚರಣೆಗಳನ್ನು ದಾಖಲಿಸಬಹುದು ಎಂದರು ನಮ್ಮ ಬಳಗದವರು. ಅದೂ ಅಯ್ಯಪ್ಪನ ಕ್ಷೇತ್ರದಲ್ಲಿ ನಡೆಯುವಂತೆ ಧನು ಸಂಕ್ರಮಣದಂದು. ನಡೆಯುವ ಉಪಾಸನೆ. ಆ ದಿನ ತುಳುನಾಡಿನ ಕೆಲವು ಶಕ್ತಿ ಕ್ಷೇತ್ರಗಳಲ್ಲಿ ರಾತ್ರಿ ಇಡೀ ಉತ್ಸವ ಕೆಂಡ ತುಳಿಯುವುದು -ಇತ್ಯಾದಿ ಉಪಾಸನಾ ಆಚರಣೆಗಳು ಇರುತ್ತವೆ ಎಂಬ ಮಾಹಿತಿ ದೊರಕಿತು.

ನಾನು ಈ ಮೊದಲು ಬಂಟರ ಅಧ್ಯಯನ ಸಂದರ್ಭದಲ್ಲಿ (1998)ಹೆಬ್ರಿಗೆ ಹೋಗಿದ್ದೆ. ಆಗ ಹೆಬ್ರಿ ಪೇಟೆಯ ಸುಬೋಧ ಬಲ್ಲಾಳರ ಮನೆಯಲ್ಲಿ ಕುಳಿತು ಆ ಭಾಗದ ಪರಿಸರದಲ್ಲಿ ಕ್ಷೇತ್ರ ಕಾರ್ಯ ನಡೆಸಿದ್ದೆ. ಆ ಸಂದರ್ಭದಲ್ಲಿ ಚಾರದ ಕ್ಷೇತ್ರದ ಬಗ್ಗೆ ಹೇಳಿರಲಿಲ್ಲ. ಬಹುಷಃ ಅದು ಬಂಟರ ಅಧ್ಯಯನ ಎಂದಿರಬಹುದು.
ಈ ಬಾರಿ ನನಗೆ ಬೇಕಾಗಿರುವ ಮಾಹಿತಿ ಒಟ್ಟು ತುಳು ನೆಲಮೂಲದ ಆದಿ ಆಲಡೆ, ಕ್ಷೇತ್ರಗಳ ಬಗ್ಗೆ.

ಹೀಗಾಗಿ ಚಾರಕ್ಕೆ ಹೋಗಲು ಚಾರ ಪರಿಸರದಲ್ಲಿ ಯಾರು ಇದ್ದಾರೆ ಎಂದು ಬೆಂಗಳೂರಲ್ಲಿ ವಿಚಾರಿಸಿದೆವು. ನಮ್ಮ ಕುಟುಂಬ ಮಿತ್ರರಾದ ಶಶಿಧರ ಸೆಟ್ಟರು ಆಸಕ್ತಿಯಿಂದ ಅವರ ಮಾವ ರತ್ನಾಕರ ಸೆಟ್ಟರ ವಿವರ ನೀಡಿದರು.
ಚಾರ ಕ್ಷೇತ್ರದ ಆಡಳಿಮೊಕ್ತೇಸರರು ಆದ ರತ್ನಾಕರ ಸೆಟ್ಟರು ಶಶಿದರ ಸೆಟ್ಟರ ಹತ್ತಿರದ ಸಂಬಂಧಿ. ಅಲ್ಲಿಗೇ ಹೋಗಿ ಅವರ ಮನೆಯಲ್ಲಿಯೇ ಇರಿ. ನಾನು ವ್ಯವಸ್ಥೆ ಮಾಡುತ್ತೇನೆ ಎಂದರು. ಚಾರ ಕ್ಷೇತ್ರದಲ್ಲಿ ನನ್ನ ನಿರೀಕ್ಷೆಯ ಆಚರಣೆ ಜನವರಿ 14 ರಾತ್ರಿಯಲ್ಲಿ ನಡೆಯಲಿತ್ತು.

ನನ್ನ ಕಾರ್ಯಕ್ರಮ ಪ್ರಕಾರ 2017 ಜನವರಿ 14 ರಂದು ನಾನು ಚಾರದಲ್ಲಿರಬೇಕು. ಅದೇ ದಿನ ಕುಡ್ಲ ನಗರದಲ್ಲಿ ಹೆಗ್ಗಡೆಯರ ಸೋದರಳಿಯನ ವಿವಾಹ ಮಹೋತ್ಸವ.

ನಾನು ಮಧ್ಯಾಹ್ನ ಮದುವೆಯಲ್ಲಿ ಭಾಗವಹಿಸಿ ಮದುವೆ ಸೀರೆಯಲ್ಲಿ ಮಂಗಳೂರಿನಿಂದ ಉಡುಪಿ ಬಸ್ಸು ಹಿಡಿದೆ. ನಾನು ವಿವಾಹಕ್ಕೂ ಹೆಚ್ಚು ಒಡವೆ ಧರಿಸದೆ ಇರುವುದರಿಂದ ಮದುವೆ ಮಂಟಪದಿಂದ ಕ್ಷೇತ್ರಕಾರ್ಯಕ್ಕೆ ಹೋಗಲು ಮುಜುಗರ ಆಗಲಿಲ್ಲ. ಉಡುಪಿಯಲ್ಲಿ ಹೆಬ್ರಿಗೆ ಹೋಗುವ ಬಸ್ಸು ಹಿಡಿದೆ. ಹೆಬ್ರಿಯಲ್ಲಿ ಬಸ್ಸು ನಿಲ್ದಾಣದಲ್ಲಿ ಇಳಿದೆ. ಒಂದು ರಿಕ್ಷಾವನ್ನು ಮಾತನಾಡಿಸಿದೆ. ಆತನೂ ಆತ್ಮೀಯವಾಗಿ ಸ್ಪಂಧಿಸಿದ. ಹೆಬ್ರಿಯಿಂದ 6 ಕಿಲೋಮೀಟರ್ ದೂರದ ಒಳ ರಸ್ತೆಯಲ್ಲಿ ಚಾರ ದೊಡ್ಡಮನೆಗೆ ಹೋದೆವು. ಮನೆಯ ಮುಂದೆ ಅಟೋರಿಕ್ಷಾದಿಂದ ಇಳಿದು ಒಮ್ಮೆ ಸುತ್ತ ನೋಡಿದೆ. ನಿಜವಾಗಿಯೂ ಅದು ದೊಡ್ಡ ಮನೆ.

ಮನೆಯಂಗಳದಲ್ಲಿ ಒಂದು ದೊಡ್ಡ ಬಾವಿ ಇತ್ತು. ಬಾವಿಗೆ ಇಣಿಕಿದೆ. ಕರಿ ಪಾದೆ ಕಲ್ಲಿನ ಬಾವಿ. ಬಾವಿ ತುಂಬಾ ನಗುವ ನೀರು! ಆನಂದವಾಯಿತು. ರತ್ನಾಕರ ಸೆಟ್ಟರು ಮತ್ತು ಮನೆಯವರು ನನ್ನನ್ನು ಆತ್ಮೀಯತೆಯಿಂದ ಸ್ವಾಗತಿಸಿದರು. ಚಾರ ಕ್ಷೇತ್ರೋತ್ಸವ ಆದ್ದರಿಂದ ಇತರ ನೆಂಟರೂ ಬಂದಿದ್ದರು. ಮನೆ ತುಂಬಾ ಜನ. ಹಬ್ಬದಡಿಗೆಯೂ ಆಗುತ್ತಿತ್ತು. ನಾನು ಸ್ನಾನ ಮಾಡಿ ಚುರುಕಾದೆ.
ರಾತ್ರಿ ಆಗಲು ಸಮಯ ಇನ್ನೂ ಬಾಕಿ ಇತ್ತು. ರತ್ನಾಕರ ಸೆಟ್ರು ಚಾರಕ್ಷೇತ್ರಗಳ ಬಗ್ಗೆ ಹೇಳತೊಡಗಿದರು .

ರತ್ನಾಕರ ಸೆಟ್ಟರ ಪ್ರಕಾರ ಚಾರ ಎನ್ನುವುದು ಪೂರ್ವ ಕಾಲದ ಶಹರ. ಅದು ನೆಲಮೂಲದವರ ಉಚ್ಚ್ಚಾರಣೆಯಲ್ಲಿ ಚಾರ ಆಗಿದೆ. ರತ್ನಾಕರ ಸೆಟ್ಟರಿಗೆ ಸ್ವಲ್ಪ ಸಾಹಿತ್ಯಾಸಕ್ತಿ ಹೆಚ್ಚು. ಅವರು ಕವನಗಳನ್ನೂ ಬರೆಯುತ್ತಿದ್ದರು.

ಚಾರದಲ್ಲಿ ಅನೇಕ ನಾಗಬ್ರಹ್ಮಸ್ಥಾನಗಳಿವೆ. ಒಂದು ಕಾಡ್ಯ,ರದ್ದು. ಅದಕ್ಕೆ ಕಾಡ್ಯರೇ ಅರ್ಚನೆ ಮಾಡುವುದು. ಮತ್ತೊಂದು ಮುಗೇರರ ಮೂಲಸ್ಥಾನ. ಅದಕ್ಕೆ ಮುಗೇರರು ಅರ್ಚನೆ ಮಾಡುವುದು. ಬಿಲ್ಲವರು (ಪೂಜಾರಿಗಳು) ಅರ್ಚಕರಾಗಿ ದರ್ಶನಪಾತ್ರಗಳಗಿರುವ ನಾಗ ಬ್ರಹ್ಮಸ್ಥ್ತಾನಗಳೂ ಇವೆ ಎಂದರು.

ಹಿಂದೆ ಚಾರ ಕ್ಷೇತ್ರದ ಪರಿಸರ ಬಹು ದೊಡ್ಡ ಪಾಡಿ(ಕಾಡು)ಆಗಿತ್ತಂತೆ. ಹೊನ್ನಮ್ಮ ಸ್ಥಾನದ ಕಾಡನ್ನು ಕಡಿದುದು ಜೀರ್ಣೋದ್ಧಾರ ಕಾಲದಲ್ಲಿ. ಆಗ ನಾಗ ದೂಪೆಗಳನ್ನು ಅದರಲ್ಲಿ ಬರುವ ಸುಗಂಧ ದ್ರವ್ಯದ ಬಗ್ಗೆ ತಿಳಿಯಲು ಜನ ತಂಡೋಪ ತಂಡವಾಗಿ ಬರುತ್ತಿದ್ದರು ಎಂದರು ರತ್ನಾಕರ ಸೆಟ್ಟರು. ಕಾಡು ಕಡಿದಾಗ ಸುರಭಿ ಮರವನ್ನು ಉಳಿಸಿದ್ದೇವೆ ಎಂದರು.
ಮನೆಯ ಹಿಂದಿನ ಪಾಡಿಯಲ್ಲಿ ಮುಗೇರರ ಕಾಡ್ಯರ ಕ್ಷೇತ್ರಗಳಿವೆ ಎಂದರು. ಪಾಡಿಗೆ ನಾಳೆ ಹೋಗುವುದು ಎಂದು ನಿರ್ಧರಿಸಿದೆವು. ಈಗ ಕತ್ತಲಾಗಿದೆಯಲ್ಲ.
ಚಾರ ಕ್ಷೇತ್ರ ಪಂಚ ನಾಗಕನ್ಯೆಯರಲ್ಲಿ ಒಬ್ಬಳ ಕ್ಷೇತ್ರ.

2 ಮಂದರ್ತಿದುರ್ಗಾಪರಮೆಶ್ವರಿ ಮೂಲತಃ ಹುತ್ತ ರೂಪದಲ್ಲಿ ಇದ್ದ ಬಗ್ಗೆ ಮಾಹಿತಿ ಇವೆ. ದುರ್ಗಾಮೂರ್ತಿಯನ್ನು ಪ್ರತಿಷ್ಠಾಪಿಸಿ ಹೆಚ್ಚು ಕಾಲ ಆಗಿಲ್ಲ. ಪಂಚ ನಾಗ ಕನ್ಯೆಯರ ಕ್ಷೇತ್ರಗಳಲ್ಲಿ ಮಂದರ್ತಿಯೂ ಒಂದು. ಈ ಐದು ಕ್ಷೇತ್ರಗಳಲ್ಲೂ ಧನು ಸಂಕ್ರಾಂತಿಗೆ ಕೆಂಡ ಸೇವೆ ನಡೆಯುತ್ತದೆ.

3 ಮತ್ತೊಬ್ಬಾಕೆ ನೀಲರತಿ. ಈಗಿನ ನೀಲಾವರದ ಶಕ್ತಿ! ಆಳುಪರಾಣಿ ಬಲ್ಲಮಹಾದೇವಿಯ ಕ್ರಿ,ಶ. 12ನೆಯ ಶತಮಾನದ ಶಾಸನದಲ್ಲಿ “ನಿರುವಾರದ ಭಗವತಿ” ಎಂದು ಉಲ್ಲೇಖವಿದೆ. ಇದು ಮಹಿಷಮರ್ದಿನಿ ದೇವಸ್ಥಾನ ಆಗಿ ರೂಪಾಂತರ ಆದ ಕಾಲದ ಬಗ್ಗೆ ಮಾಹಿತಿ.
ತುಳುನಾಡಿನಲ್ಲಿ ಎಲ್ಲಡೆ ಭಗವತಿಗೆ ಈಗಲೂ ಮಲೆಯಾಳಿ ಬಿಲ್ಲವರು ಪೂಜೆ ಮಾಡುತ್ತಾರೆ. ಈ ಕ್ಷೇತ್ರದಲ್ಲಿ ವೀರಭದ್ರ ಶಿಲ್ಪವನ್ನೂ ಸ್ಥಾಪಿಸಲಾಗಿದೆ. ನೆಲಮೂಲದ ಶಕ್ತಿಗಳೂ ಇವೆ. ನೀಲಾವರ ಸೀತಾನದಿಯ ಆಚೆ ದಡದಲ್ಲಿ ನಾಗಶಿಲ್ಪಗಳ ಒಳ್ಳೆಯ ಸಂಗ್ರಹ ಕ್ಷೇತ್ರ ಇದೆ. ನಾನು ನೋಡಿದಾಗ ಆ ಶಿಲ್ಪಗಳಲ್ಲಿ ಕೆಲವಕ್ಕೆ ಕರಿ ಗಾಜಿನ ಬಳೆಗಳನ್ನೂ ಅರ್ಪಿಸಲಾಗಿತ್ತು.
4 ಮತ್ತೊಂದು ನಾಗರತಿ, ನಾಗರ್ತಿ.

5 ಇನ್ನೊಂದು ದೇವರತಿ (ಅರಸಮ್ಮನ ಕಾನು ಕುಂದಾಪುರ )-ಈ ದೇವಸ್ಥಾನಗಳು ಮೂಲತಃ ನಾಗ ಕನ್ನಿಕೆಯರ ಕ್ಷೇತ್ರ ಎಂದು ಪರಿಚಯಿಸಿದರು. ಈ ಎಲ್ಲಾ ಕ್ಷೇತ್ರಗಳು ನಾಗಕನ್ನಿಕೆಯರನ್ನು ದುರ್ಗೆಗಳಾಗಿಸಲಾಗಿದೆ.
ಈ ಪಂಚ ನಾಗ ಕನ್ಯೆಯರು ಸುಬ್ತಹ್ಮಣ್ಯನನ್ನು ಮದುವೆಯಾದರು ಎಂಬುದು ಪ್ರತೀತಿ. ಇದ ಕೇಳಿದ ನನಗೆ ‘ಐವರು ಸಿರಿಕುಲೆ ಒರಿ ಕುಮಾರೆ’ ಎನ್ನುವ ಮಾಚರು ಗೋಪಾಲ ನಾಯ್ಕರ ಮಾತು ನೆನಪಾಯಿತು. ಐವರು ಸಿರಿಗಳ ಒಬ್ಬ ಕುಮಾರ ತಮೆರಿಯಾಗಿ ಮಾತೃಕುಟುಂಬದ ರಕ್ಷಕನಾಗುತ್ತನೆ. ಇದೇ ವೈದಿಕ ಧರ್ಮ ಮತ್ತು ತುಳು ನೆಲದ ಧರ್ಮಕ್ಕೂ ಇರುವ ವ್ಯತ್ಯಾಸ.

ಚಾರ ದುರ್ಗಮ್ಮ/ಮಹಿಷ ಮರ್ದಿನಿ: ಮಕರ ಸಂಕ್ರಮಣದಂದು ರಾತ್ರಿ ಇಲ್ಲಿ ದೇವಿಗೆ ಕೆಂಡ ಸೇವೆ ನಡೆಯುತ್ತದೆ. ಇಲ್ಲಿ ಅರ್ಚಕರು ಬ್ರಾಹ್ಮಣರು. ದರ್ಶನ ಪಾತ್ರಿಗಳೂ ಬ್ರಾಹ್ಮಣರು. ಆದರೆ ಭಕ್ತರು ಅಬ್ರಾಹ್ಮಣರು ಮಾತ್ರ ಕಂಡು ಬರುತ್ತಾರೆ.
ಕಾಡ್ ದೆರ್ಲು, ಅಂದರೆ ಮೂಲ ಮೈಸಂದಾಯನಿಗೆ ತುಳುನೆಲದಲ್ಲಿ ಮೊದಲ ಪೂಜೆ, ಮೊದಲ ಕೋಲ. ಮಹಿಷಗ್ ಉಳಿದ ರಾಜನ್ ದೈವಗಳಿಗಿಂತಲೂ ಮೊದಲು ಕೋಲ ಕೊಡುವ ಸಂಪ್ರದಾಯ! ಭತ್ತದ ಕನ್ನೆ ನೆಲ ತುಳುನಾಡಿನ ಪ್ರಮುಖ ಪ್ರಾಣಿ, ಅಗತ್ಯ ಪ್ರಾಣಿ ಕೋಣ! ಹೀಗಾಗಿ ಕೃಷಿ ಪೋಷಕ ಕೋಣಗಳನ್ನು ದೈವಗಳೆಂದು ಇಲ್ಲಿ ಪೂಜಿಸಲಾಗುತ್ತದೆ. ಅದು ಸಹಜ ಕೂಡಾ!
ಹಾಗಿರುವಾಗ ವಿಂದ್ಯಾಪರ್ವತದ ಮೇಲಿನ ಮಹಿಷಮರ್ದಿನಿ ತುಳುನಾಡಿಗೆ ಬಂದುದಾದರೂ ಯಾಕೆ? ಹೇಗೆ? ಇಲಿಗೆ ಬಂದು ಬೇಸಾಯಗಾರರು ಅವಲಂಬಿಸಿರುವ ಕೋಣವನ್ನು ಕೊಲ್ಲುವುದು ಹೇಗೆ ಮತ್ತು ಯಾಕೆ? ಎರು/ಮಹಿಷಾಸುರ ಅಂದರೆ ರಕ್ಕಸ ಆದುದಾದರೂ ಹೇಗೆ? ಇವೆಲ್ಲಾ ನನ್ನನ್ನು ಸೇರಿ ಈಗಿನ ಸಂಶೋಧಕರ ತಲೆ ತಿನ್ನುವ ವಿಷಯ.

ಮಹಿಷ ಮರ್ದಿನಿ ವಿಂದ್ಯಾನಿವಾಸಿನಿ. ಅವಳು ವಿಂದ್ಯ ಪರ್ವತದ ಮೇಲ್ಭಾಗದವಳು. ನಮ್ಮ ದಕ್ಷಿಣ ಭಾರತದಲ್ಲಿ ಸಿಂಹ ಇಲ್ಲ. ಹಾಗಿರುವಾಗ ಸಿಂಹವಾಹಿನಿ ತುಳು ಬೇಸಾಯ ಸಂಸ್ಕøತಿಗೆ ಪೋಷಕಳಲ್ಲ. ನಮ್ಮ ನೆಲದ ದೇವಿಯರು ಚಂಡಿ ಚಾಮುಂಡಿ. ಅವರಿಗೆ ಹುಲಿವಾಹನ. ಹೀಗಾಗಿ ಚಾಮುಂಡಿ ಅತಿಕಾರೆ ಭತ್ತವನ್ನೂ ಪೋಷಿಸುತ್ತದೆ.
ಚಾರ, ಬಾರ್ಕೂರು, ಬ್ರಹ್ಮಾವರ ಕಡೆ ಬಿಲ್ಲವರು ಅಧಿಕ. ಚಾರದಲ್ಲು ನಾಗಾರಾಧನೆ ಬಿಲ್ಲವರಿಂದ ನಡೆಯುತ್ತಿದೆ. ಹೀಗಾಗಿ ಪೂರ್ವ ಕಾಲದಲ್ಲಿ ದುರ್ಗಮ್ಮನಿಗೂ ಬಿಲ್ಲವರೇ ಪೂಜಾ ಕೈಕಂರ್ಯ ಮಾಡಿರುವ ಸಾಧ್ಯತೆ ಇದೆ.
ಇಲ್ಲಿ ಈಗ ಬ್ರಾಹ್ಮಣ ಅರ್ಚಕ ಇದ್ದರೂ ನೆಲ ಮೂಲದ ಆಚರಣೆಗೆ, ಪದ್ಧತಿಗೆ ಅಡಚಣೆ ಅಗಿಲ್ಲ.

ಈ ಕ್ಷೇತ್ರಕ್ಕೆ ಲೀಲಾ ಭಟ್ ಅವರೂ ಉಲ್ಲಾಲ್ತಿಗಳನ್ನು ಹುಡುಕುತ್ತಾ ಬಂದಿದ್ದರು. ಅವರು ಅರ್ಚಕರ ಸಂಪರ್ಕ ಸಿಕ್ಕಿದೆ. ಸ್ಥಳೀಯರ ದುರ್ಗಮ್ಮನ ಗುಡಿಯಲ್ಲಿ ಇರುವ ವಿಗ್ರಹ ಮಹಿಷಮರ್ದಿನಿಯ ವಿಗ್ರಹ ಎಂದೂ ಅದು 16ನೆಯ ಶತಮಾನದ ವಿಗ್ರಹ ಎಂದೂ ತಮ್ಮ ‘ಶಕ್ತಿಯ ಶೋಧನೆಯಲ್ಲಿ’ ಕೃತಿಯಲ್ಲಿ ದಾಖಲಿಸಿದ್ದಾರೆ. ಬಹುಷ ನಾಗಶಕ್ತಿ ದುರ್ಗಮ್ಮ ಆದ ಕಾಲದಲ್ಲಿ ಈ ಶಿಲ್ಪ ಪ್ರತಿಷ್ಟಾಪನೆ ಆಗಿರಬಹುದು.

ದುರ್ಗಮ್ಮನಿಗೆ ದಂಡ್‍ದ ಪೂಜೆ ಕೆಂಡದ ಪರ್ಬ:
ನಾನು ಇಲ್ಲಿ ನೋಡಿದ ರಂಗಪೂಜೆ ಅದ್ದೂರಿಯಾಗಿ ನಡೆದಿತ್ತು, ತುಲಾ ಭಾರವೂ ಇಲ್ಲಿ ನಡೆಯಿತು. ಗರ್ಭಗುಡಿಯಿಂದ ಹೊರಗೆ ಬಹುದೂರದವೆರೆಗೆ ಉದ್ದಕ್ಕೆ ಬಡಿಸಿದ್ದ ನೈವೇದ್ಯ ಮತ್ತು ಇಕ್ಕಲೆಗಳ ದೀಪಗಳು ಆಕರ್ಷಕವಾಗಿಯೂ ಇತ್ತು. ನಾನದ ಕಂಡು ಸಂಭ್ರಮ ಪಟ್ಟೆ.
ಇಲ್ಲಿ ದುರ್ಗಮ್ಮನಿಗೆ ಪಟ್ಟೆ ಸೀರೆಯ ಹರಕೆ, ಕಾಣಿಕೆ ವಿಶಿಷ್ಠವಾದುದು.
ಗುಡಿಯಿಂದ ಹೊರಬಂದ ಅರ್ಚಕರು ಗುಡಿಗೊಂದು ಪ್ರದಕ್ಷಿಣೆ ಹಾಕಿ ರೆಕ್ಕೆಸಿರಿ, ಕ್ಷೇತ್ರಪಾಲ, ನಾಗ-ಹೀಗೆ ಪರಿವಾರ ಶಕ್ತಿಗಳಿಗೆ ಬಲಿಪೂಜೆ ಮಾಡಿದರು.
ಇದು ಮುಗಿಯುವಾಗ ಹೊರಗೆ ನಿಗಿ ನಿಗಿ ಕೆಂಡ ಸಿದ್ಧವಾಯಿತು.
ದುರ್ಗಮ್ಮನ ದರ್ಶನ ಪಾತ್ರಿ ಸೋಮಯಾಜಿಗಳು.
ಆತ ಬಲಿ ಪೂಜೆ ಮುಗಿಸಿ ಕೆಂಡದ ರಾಶಿಯ ಬಳಿ ಬಂದರು. ಸುಮಾರು 4 ಅಡಿ ಎತ್ತರದ ನಿಗಿ ನಿಗಿ ಕೆಂಡದ ಗುಪ್ಪೆ ಅದು. ನೆರೆದ ಭಕ್ತರ ಮುಂದೆ ಸೋಮಯಾಜಿಗಳು ಒಂದು ಸುತ್ತು ಕೆಂಡ ತುಳಿದರು. ಅನಂತರ ಚಾರ ಮನೆಯ ಕುಟುಂಬದ ಮಹಿಳೆಯರು ಕೆಂಡ ತುಳಿದರು. ಕೊನೆಗೆ ಹರಕೆ ಹಾಕಿದ ಅನೇಕ ಮಹಿಳೆಯರು ಕೆಂಡ ತುಳಿದರು. ಮಕ್ಕಳನ್ನು ಹೆರುವ ಮೊದಲು ಇಲ್ಲಿ ಕೆಂಡ ತುಳಿಯುವ ಹರಕೆÀ ಹಾಕಿದವರು ತಾವು ಹೆತ್ತ ಮಕ್ಕಳನ್ನು ಸೊಂಟದಲ್ಲಿ ಹೊತ್ತು ಅಥವಾ ಮಕ್ಕಳ ಕೈ ಹಿಡಿದು ಅವರೊಂದಿಗೆ ಕೆಂಡ ತುಳಿಯುತ್ತಾರೆ. ನಾನು ನೋಡಿದ ಮಹಿಳೆಯ ಸೋಟದಲ್ಲಿ ಒಂದು ಮಗು ಇತ್ತು. ಮತ್ತೊಂದನ್ನು ಕೈ ಹಿಡಿದು ನಡೆಸಿದಳು ಕೆಂಡದ ಮೇಲೆ.
ಅನೇಕ ಮಹಿಳೆಯರು ಕೆಂಡ ತುಳಿಯುವುದರಿಂದ ಕೊನೆಯ ಸರದಿಯಲ್ಲಿ ತುಳಿಯುವವರಿಗೆ ಕೆಂಡ ಹೋಗಿ ಬೂದಿ ಮಾತ್ರ ಉಳಿಯುತ್ತದೆ.

ಚಾರ ಹೊನ್ನಮ್ಮ ಕ್ಷೇತ್ರ: ಚಾರ ಕ್ಷೇತ್ರವನ್ನು ಸಂದರ್ಶಿಸಿ ಬಂದ ಬಿ. ಲೀಲಾ ಭಟ್ ಅವರು ಶಕ್ತಿಯ ಶೋಧನೆಯಲ್ಲಿ ಎಂಬ ತನ್ನ ಕೃತಿಯಲ್ಲಿ ಹೀಗೆ ಬರೆಯುತ್ತಾರೆ. “ದಟ್ಟ ಮರಗಳ ಕತ್ತಲೆಯಲ್ಲಿ ಎದುರು ಬದುರಾಗಿರುವ ಎರಡು ಗುಡಿಗಳು. ಒಂದು ಹೊನ್ನಮ್ಮನದೆಂದೂ ಮತ್ತೊಂದು ಹುಲಿದೇವರದೆಂದೂ ಟ್ಯಾಕ್ಸಿ ಡ್ರೈವರ್ ಹೇಳಿದ. ಟ್ಯಾಕ್ಸಿ ಅಲ್ಲಿಂದ ಮುಂದಕ್ಕೆ ಹೋಗದು. ಅನೇಕ ಅಡ್ಡಿ, ಅಭ್ಯಂತರಗಳು -ಹಳ್ಳ ತಿಟ್ಟು, ಗುಡ್ಡ, ಕೊರಕಲು, ಗದ್ದೆ. ಕುರುಚಲು ಕಾಡು, ಹಾಡಿ ಇದ್ದು ಜನ ಸಂಚಾರಕ್ಕಿರುವುದು ಒಂದು ಕಾಲು ದಾರಿ ಮಾತ್ರ. ಗುಡಿಗಳಲ್ಲಿ ಇಣುಕಿ ನೋಡಿದೆ ಹೊನ್ನಮ್ಮನ ಮಾಡದಲ್ಲಿ ಒಂದು ಚಿಕ್ಕ ಹೆಣ್ಣು ಉರುವಿದೆ.: ಇನ್ನೊಂದರಲ್ಲಿ ಮರದ ಹುಲಿ. ನಮ್ಮನ್ನು ದೂರದಿಂದ ಕಂಡ ಹಳ್ಳಿಗರು ಒಡೋಡಿ ಬಂದು ಸೇರಿದರು. ಹಿರಿಯರೊಬ್ಬರು ಬಂದು ಎಲ್ಲರನ್ನೂ ಹಿಂದೆ ಸರಿಸಿ ಒಂದು ಚಿಕ್ಕ ಭಾಷಣವನ್ನೆ ಮಾಡಿದರು. ಹೊನ್ನಮ್ಮ ಗ್ರಾಮದ ಅಚ್ಚು ಮೆಚ್ಚಿನ ದೈವ. ಮಕರ ಸಂಕ್ರಮಣಕ್ಕೆ ಅಲ್ಲಿ ದರ್ಶನವಿದೆ. ಹರಿವಾಣ ಪೂಜೆ, ರಂಗ ಪೂಜೆ, ಗೆಂಡಸೇವೆ, ಇದೆ. ದಶರ್Àನಕ್ಕೆ ಬ್ರಾಹ್ಮಣ ಪಾತ್ರಿ. ಆ ದಿನದಿಂದ 17ನೆಯ ದಿನಕ್ಕೆ ಮಾರಿ ಓಡಿಸುವುದು.” (ಪು 53-1989)

ಇಲ್ಲಿ ಹುಲಿಯ ಶಿಲ್ಪ ಈಗಲೂ ಇದೆ. ಹುಲಿಯ ಶಿಲ್ಪ ಇಲ್ಲಿ ಇರುವುದರಿಂದ ಈ ಕ್ಷೇತ್ರ್ರದಲ್ಲಿ ‘ಪಿಲಿಚಂಡಿ’ (ಹುಲಿಯ ಕುಳಿತ ಚಂಡಿಕೆ ಆರ್ಥಾತ್ ದುರ್ಗೆ) ಇದ್ದಿರುವ ಸಾಧ್ಯತೆ ಹೆಚ್ಚು. (ಜೀಣೋದ್ಧಾರ ಮಾಡುವವರು ನಡೆದ, ನಡೆಸಿದ ಬದಲಾವಣೆಗಳನ್ನು ದಾಖಲಿಸಿದರೆ ಒಳ್ಳೆಯದು.)
ರತ್ನಾಕರ ಸೆಟ್ಟರು ಹೇಳಿದಂತೆ ಕಡಿದ ಕಾಡಿನಲ್ಲಿ ಅಲ್ಲಲ್ಲಿ ಒಂದೊಂದು ಮರಗಳು ಉಳಿದಿದ್ದುವು. ಅಲ್ಲದೆ ಕಡಿದ ಕಾಡಿನ ನೆಲ ಕಾಡಿನ ಘಮಲನ್ನು ಇನ್ನೂ ಬಿಟ್ಟಿಲ್ಲ.

ಹೊನ್ನಮ್ಮ ಮತ್ತು ಚೆನ್ನಮ್ಮ ಇಬ್ಬರು ಬಿಲ್ಲವ ಮಹಿಳೆಯರು. ಅಕ್ಕ ತಂಗಿಯರು. ಹಸು ಮೇಯಿಸಲು ಗುಡ್ಡಕ್ಕೆ ಹೋದವರು ಮಾಯವಾದವರು ಎನ್ನುವುದು ನನಗೆ ಮೇಲ್ನೋಟಕ್ಕೆ ದಕ್ಕಿದ ಮಾಹಿತಿ. ದುರ್ಗಮ್ಮ ಯಾನೆ ಮಹಿಷ ಮರ್ದಿನ ಗುಡಿಯಲ್ಲಿ ಉತ್ಸವ ಮುಗಿಸಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ ಭಕ್ತ ವೃಂದ ಹೊನ್ನಮ್ಮನ ಗುಡಿಯತ್ತ ಧಾವಿಸುತ್ತದೆ. ಬಹಳ ವೇಗವಾಗಿ. ಸುಮಾರು 3 ಕಿಲೋಮೀಟರ್ ದೂರದಲ್ಲಿ ಇರುವ ಬ್ರಹ್ಮ ಬೈದರ್ಕಳ ಗರೊಡಿಯಿಂದ ಕೂಡಾ ಕಾಲ್ನಡಿಯಲ್ಲಿ ಭಂಡಾರ ಹೊನ್ನಮ್ಮನ ತಾನಕ್ಕೆ ಬರುತ್ತದೆ. ಅದನ್ನು ಚಾರ ದೊಡ್ಡ ಮನೆ ಮತ್ತು ಉರ ಸಮಸ್ತರು ಹೋಗಿ ಎದುರುಗಾಣಿಸಿಕೊಂಡು ಬರುತ್ತಾರೆ.

ಹೊನ್ನಮ್ಮನ ತಾನದಲ್ಲಿ ತಂಗಿ ಹೊನ್ನಮ್ಮ£ಗೆ ಮರದ ಉರು ಹಾಗೂ ಚಿಕ್ಕ ಗುಡಿ ಇದೆ. ಅಕ್ಕ ಚೆನ್ನಮ್ಮ£ಗೆ ಕಟ್ಟೆ ಇದೆ.
ಹೊನ್ನಮ್ಮನ ಎಡ ಮಗ್ಗುಳಲ್ಲಿ ನಾಗ ಶಿಲ್ಪಗಳ ಕಟ್ಟೆ ಹಾಗೂ ಎರಡು ಮುರಕಲ್ಲಿನ ಸಣ್ಣ ದೂಪೆಗಳಿವೆ. ಒಂದು ದೂಪೆಯಲ್ಲಿ ಸುಗಂಧ ಸೂಸುತ್ತದೆಯೆಂದೂ ಮತ್ತೊಂದು ದೂಪೆ ದ್ರವದ್ದು ಎಂದು ತಿಳಿದು ಬಂತು. ದೂಪೆ ಮತ್ತು ನಾಗ ಶಿಲ್ಪಗಳ ಸುತ್ತ ಕಟ್ಟೆ ಕಟ್ಟಲಾಗಿದೆ.

ಗರೊಡಿಯಿಂದ ಕೋಟಿ- ಚನ್ನೆಯ, ಕುಜುಂಬ ಕಾಂಜವ ಭಂಡಾರ ಹೊನ್ನಮ್ಮನ ಕ್ಷೇತ್ರಕ್ಕೆ (ಪೂಜಾರಿಯರ ಮೈ ಆವೇಶದಲ್ಲಿ) ಬರುತ್ತದೆ.
ಇಲ್ಲಿ ನಿಂತು ದೈವ ಪಾತ್ರಿಗಳು ಪಾರಿ ಹೇಳಿ ನುಡಿಕೊಡುತ್ತಾ “ನಾಗ ಬೆರ್ಮರೆ ತಾನೊಡು ..ದುರ್ಗಮ್ಮ ದೇವೆರೆ ದಂಡ್ ಪೂಜೆ, ಕೆಂಡದ ಪರ್ಬ ಮಲ್‍ಪಾದ್ ಕೊರಿಯ.” ಎನ್ನುತ್ತಾರೆ. ವಸಯದ ಕೋಟಿ ಚೆನ್ನಯರು ಸುರಿಯದಿಂದ ಇರಿದು ಕೊಳ್ಳುತ್ತಾರೆ. ನಾಗ ಪಾತ್ರಿಗಳಾಗಲೀ, ಕೋಟಿ ಚೆನ್ನಯರಾಗಲೀ ಹೊನ್ನಮ್ಮನ ಗುಡಿಗೆ ಅಭಿಮುಖವಾಗಿ ಇರುತ್ತಾರೆ.
ಇಲ್ಲಿ ಇವರ ಪಾರಿಯಲ್ಲಿ ಹೇಳುವ ‘ದಂಡ್‍ದ ಸೇವೆ’ ಎಂದರೇನು ? ಎಂಬ ಪ್ರಶ್ನೆ ಮೂಡಿತು. ಈ ಕ್ಷೇತ್ರಕ್ಕೂ ಯುದ್ಧದ ಹಿನ್ನೆಲೆ ಇರಬೇಕು. ಅನಂತಾಡಿಯಲ್ಲಿ ಒಂದು ಕಂಬುಲ ಗದ್ದೆಯ ಹೆಸರು “ದಂಡೆತ್ತಿಮಾರ್” ಎಂದು. ಆಲಡೆ ಕ್ಷೇತ್ರಗಳಲ್ಲಿ ಆಗುವ ಅಂಕ, ಅಂಬೊಡಿ ಹಾಗೂ ಇತರ ಸ್ಪರ್ಧೆಗಳು ಯುದ್ದಕ್ಕ್ಕೆ ಬೇಕಾದುವುಗಳು.
ಹೊನ್ನಮ್ಮನಿಗೆ ಮಾಡುವ ಕೆಂಡದಾರತಿನ್ನೂ ಈ ಹಿನ್ನೆಲೆಯಿಂದ ಗಮನಿಸಬೇಕಾಗುತ್ತದೆ.

ಗೆಂಡಾದಾರತಿ: ಹೊನ್ನಮ್ಮನ ಗುಡಿಯಲ್ಲಿ ಒಂದು ಮುಡಿ ಅಕ್ಕಿಗೆ ಭತ್ತ ಬೇಯಿಸುವಷ್ಟು ದೊಡ್ಡ ಗುರ್ಕೆ (ಅಂಡೆ) ಯಲ್ಲಿ ಕೆಂಡ ಇಡುತ್ತಾರೆ. ಅದೇ ಅಂಡೆಯನ್ನು ಎತ್ತಿ ಹೊನ್ನಮ್ಮನಿಗೆ ಕೆಂಡದಾರತಿ ಮಾಡುತ್ತಾರೆ. ಆ ಮೇಲೆ ನಾಗ ಶಿಲ್ಪಗಳಿಗೆ ಆ ಅಂಡೆಯಿಂದ ಆರತಿ ಎತ್ತುತ್ತಾರೆ. ನಂತರ ಪಾತ್ರಿ ಕೆಂಡ ತುಂಬಿದ ಅಂಡೆಯನ್ನು ಹೆಗಲ ಮೆಲೆ ಹೊತ್ತು ಪರಿವಾರ ದೈವಗಳಿಗೆ ಆರತಿ ಎತ್ತಲು ಓಡುತ್ತಾನೆ. ಅವನ ಹಿಂದೆ ಜನರೂ ಓಡುತ್ತಾರೆ. ವಿಶಾಲ ಪ್ರದೇಶದಲ್ಲಿ ಕುಳಿತ ಜನಸಾಗರವನ್ನು ಪ್ರದಕ್ಷಿಣೆ ಹಾಕಿ ಪಾತ್ರಿ, ಒಂದು ಸುತ್ತು ಮುಗಿಸಿ ಬರುವಾಗ ಆ ದಿನ ಪಾತ್ರಿಗೆ ಬೋಧ ತಪ್ಪಿತ್ತು. ಪಾತ್ರಿಯ ಹಿಂದೆ ಇದ್ದ ಸಹಾಯಕರು ಅಂಡೆ ಕೆಳಗೆ ಬೀಳದಂತೆ ಅದು ಒಡೆದು ಹೋಗದಂತೆ ಎತ್ತಿಕೊಂಡು ನಡೆದರು. ಕೆಲವರು ಬೋಧ ತಪ್ಪಿದ ಪಾತ್ರಿಯನ್ನು ಎತ್ತಿಕೊಂಡು ಹೊನ್ನಮ್ಮನ ಗುಡಿಯ ಹೊಸಿಲಲ್ಲಿ ಮಲಗಿಸಿದರು. ಸ್ವಲ್ಪ ಹೊತ್ತಿನಲ್ಲಿ ಪಾತ್ರಿ ಚೇತರಿಸಿದ.

ಬಿಲ್ಲವ ನಾಗ ಪಾತ್ರಿಗಳು:
ತುಳುವರ ಆಚರಣೆಗಳ, ಉಪಾಸನೆಗಳ ಮೂಲವನ್ನು ಹುಡುಕುತ್ತಾ ಹೋದರೆ ನೆಲ ಮೂಲದ ಸತ್ವ ಎದುರಾಗುತ್ತದೆ.
ಮೇಲಿನ ಆಚರಣೆ ಮುಗಿದ ಮೇಲೆ ನಾಗದರ್ಶನ ಸಿದ್ಧತೆ ನಡೆಯಿತು. ಇಬ್ಬರು ಬಿಲ್ಲವ ಪಾತ್ರಿಗಳು ಕೈಯಲ್ಲಿ ಪಿಂಗಾರ ಹಿಡಿದು ನಾಗ ಪಾತ್ರಿಯಾಗಲು ಸನ್ನದ್ಧರಾಗಿದ್ದರು.
ನಾಗ ಪಾತ್ರಿಗಳಿಗೂ ಪಟ್ಟೆ ಒಪ್ಪಿಸುವ ಪಾತ್ರಿಗಳ ಮುಂದೆ ತುಲಾಭಾರ ಮಾಡಿಸುವ ಹರಕೆ ನಡೆಯಿತು.
ಈ ನಾಗ ಪಾತ್ರಿಗಳು ಥೇಟ್ ನಾಗನಂತೆ! ನಾಗ ಶಿಲ್ಪಗಳ ಕ್ಷೇತ್ರದೊಳಗೆ ಹೊಟ್ಟೆ ಎಳೆಯುತ್ತಾ, ತೆವಳಿಸಾಗುವುದು ಒಂದು ರೋಚಕ ಸನ್ನಿವೇಶ! ಭಕ್ತ ವೃಂದ ಪರವಶಗೊಳ್ಳುವ ದÀೃಶ್ಯ.. ಹೊರಳುತ್ತಾ ಮಧ್ಯೆ ಮಧ್ಯೆ ನೆಲದಿಂದ ತಲೆಯೆತ್ತಿ ದೂಪೆಯ ಕಿಂಡಿಯಲ್ಲಿ ಮುಖವಿಟ್ಟು ಈ ನಾಗ ಪಾತ್ರಿಗಳು ದೂಪೆಯೊಳಗಿನ ಸುಗಂಧ ಹೀರುತ್ತಾರೆ. ಬ್ರಾಹ್ಮಣೇತರರು ನಾಗ ಪಾತ್ರಿಗಳು ಆಗಿ ತುಳು ಪರಂಪರೆಯಲ್ಲಿ ಇದ್ದರು ಎಂಬ ಅರಿವಿರಲಿಲ್ಲ ನನಗೆ. ಇಲ್ಲಿ ತನು ತಂಬಿಲ ಮಾತ್ರವಲ್ಲ ನಾಗ ಶಿಲ್ಪ ಪ್ರತಿಷ್ಠಾಪನೆಯನ್ನೂ ಬಿಲ್ಲವರೇ ಮಾಡುತ್ತಾರೆ. ಹೀಗಾಗಿ ಕಣ್ಣಲ್ಲಿ ಕಂಡ ಈ ಸತ್ಯ ನನ್ನ ಅಧ್ಯಯನಕ್ಕೊಂದು ಬೆಲೆ ತಂದಿತು ಎಂದು ಭಾವಿಸಿದೆ.

ಕಂಚಿಲು ಸೇವೆ : ಮಕ್ಕಳಾಗದಿದ್ದರೆ ಅಥವಾ ಇನ್ನಾವ ಕಾರಣದಿಂದಲೋ ಮೂಲಸ್ಥಾನಗಳಲ್ಲಿ ಕಂಚಿಲು ಹರಕೆ ನೀಡುವ ಪದ್ಧತಿ ಇದೆ. ಇಲ್ಲೂ ಕಂಚಿಲು ಹರಕೆ ನಡೆಯುತ್ತದೆ.
ಈ ಕ್ಷೇತ್ರಕ್ಕೆ ಬ್ರಾಹ್ಮಣರು ಬರುವುದಿಲ್ಲ. ಹೀಗಾಗಿ ತೀರ್ಥ ಕೊಡುವ ಪದ್ಧತಿ ಇಲ್ಲ.
ಬೆಳಗಿನವರಗೆ ಇಲ್ಲಿಯ ಉತ್ಸವ ನಡೆಯುತ್ತದೆ.
.....................................
ಹೊನ್ನಮ್ಮ ಚೆನ್ನಮ್ಮರನ್ನು ನಾಗ ಶಕ್ತಿಯ ಪ್ರತೀಕ ಎಂದು ಇಲ್ಲಿ ಹೇಳುತ್ತಾರೆ.
ಹೊನ್ನಮ್ಮ ಚೆನ್ನಮ್ಮರೂ ಅವಳಿ ಶಕ್ತಿಗಳು. ಅಬ್ಬಗ ದಾರಗರೂ ಅವಳಿ ಶಕ್ತಿಗಳು. ಹೀಗಾಗಿ ಈ ಹಿನ್ನೆಲೆಯಿಂದ ಹೊನ್ನಮ್ಮ ಚೆನ್ನಮ್ಮರ ಪಾಡ್ದನ ಏನಾದರು ಇದೆಯಾ ಎಂದು ಪ್ರಯತ್ನಿಸಿದೆ. ಮರುದಿನ ಅದಕ್ಕಾಗಿ ಗರೊಡಿಗೂ ಹೋದೆ. ಆದರೆ ನಾನು ಈ ವಿಷಯದಲ್ಲಿ ಸೋತೆ. ಸರಿಯಾದ ಮಾಹಿತಿ ಯಾರೂ ನೀಡಲಿಲ್ಲ. ಆ ಬೇಸರ ಈಗಲೂ ಇದೆ.
(ಚಾರ ಗರೊಡಿಯಲ್ಲಿ ಶಿವರಾಯನಿಗೆ ದರ್ಶನ ಇದೆ. ಈ ಪಾಡಿಯಲ್ಲಿ ರಾತ್ರಿಯಿಡೀ ಜಾಗರಣೆ ಇರಬೇಕು. ಅಲ್ಲಿ ಏಳು ಬಾರಿ ದರ್ಶನ ಆಗಬೇಕು. ಆಮೇಲೆ ದೀಪ ತಂದು ಪ್ರತಿಷ್ಠೆ ಮಾಡುತ್ತಾರೆ. - ಹೇಳಿದವರು
ಹಿರಿಯಣ್ಣ ಶೆಟ್ಟಿ ಮುಕ್ಕಾಲ್ದಿ ಗರೊಡಿ ಚಾರ )

ಪಾಡಿ/ಕಾಡಿನಲ್ಲಿ ಮೂಲದವರ ಕ್ಷೇತ್ರದ ಹುಡುಕಾಟ:
ಚಾರ ಮನೆ ಎತ್ತರವಾದ ಜಾಗದಲ್ಲಿದೆ. ಅದರೆ ಮುಂದೆ ಎಡ ಬಲ ಬೈಲು ಗದ್ದೆಗಳು. ಹಿಂಭಾಗದಲ್ಲಿ ಪಾಡಿ.
ಮರುದಿನ ನಾನೂ ರತ್ನಾಕರ ಸೆಟ್ಟಿಯವರೂ ಸೇರಿ ಪಾಡಿಯಲ್ಲಿ ಹುಡುಕಾಟ ಮಾಡತೊಡಗಿದೆವು.
ನನಗೆ ಒಂದೆಡೆ ಕಾಡ್ಯರ ಕ್ಷೇತ್ರ ಕಾಣಸಿಕ್ತು. ಅಲ್ಲಿ ಬಂಡೆಗಳ ಸಂದಿಗಳಲ್ಲಿ ಒಡೆದ ಅನೇಕ ಮುರಿಗಳು ಇದ್ದುವು. ತರೆಗಲೆಗಳಿಂದ ಅವು ಅರ್ಧಮುಚ್ಚಿದ್ದುವು. ಇಲ್ಲಿ ಕ್ಷೇತ್ರ ಕಾರ್ಯ ಮಾಡುವ ಶಕ್ತಿ ನನಗೆ ಇರಲಿಲ್ಲ.

ಚಾರ ದೊಡ್ಡ ಮನೆಯ ಖಾಸಗಿ ನಾಗ ಬ್ರಹ್ಮಸ್ಥಾನ ಬಳಿ ಮೂರು ನಾಗ ಬ್ರಹ್ಮಸ್ಥಾನಗಳಿವೆ. ಅವುಗಳಲ್ಲಿ ಒಂದು ಕಾಡ್ಯರು ಅರ್ಚನೆÉ ಮಾಡುವುದು.

ಅಲ್ಲಿಂದ ಕೆಳಗೆ ಇನ್ನೊಂದು ನಾಗ ಬ್ರಹ್ಮ ಸ್ಥಾನ ಇದೆ. ಅದಕ್ಕೆ ಈಗ ಪೂಜೆ ಮಾಡುತ್ತಾರೆ. ಇಲ್ಲಿ ಒಂದು ಸಣ್ಣ ದೂಪೆ (ಹೊನ್ನಮ್ಮನ ನಾಗ ಸಾನಿಧ್ಯದಲ್ಲಿ ಇರುವಂತೆ) ಇದೆ. ನಾಗನ ಎತ್ತರದ ಮುರ ಕಲ್ಲಿನಕಟ್ಟೆ ಇದೆ. ಅದರ ಮುಂದೆ ಶಿಲಾ ದೂಪೆ ಇದ್ದು ದೂಪೆಗೆ ಒರಗಿ ಮೂರು ಹೆಡೆಯ ಸುರುಳಿ ಸುತ್ತಿದ ನಾಗ ಶಿಲ್ಪ ಇದೆ.
ಬಿರ್ಮೆರ ಕಟ್ಟೆಯಲ್ಲಿ ಹುತ್ತ ಬೆಳೆದಿದೆ.
ತಗ್ಗಿನಲ್ಲಿ ಕೆರೆ ಇದ್ದು ಇದಕ್ಕೆ ಇಳಿಯಲು ಮೆಟ್ಟಲು ಇದೆ. ಇಲ್ಲಿಯ ಗದ್ದೆಗಳು ಬೇಸಗೆಯಲ್ಲೂ ತೇವಾಂಶದಿಂದ ಕೂಡಿರುತ್ತದೆ.
ನಾಗ ಬ್ರಹ್ಮಸ್ಥಾನದ ಮುಂದೆ ಕಂಬುಲ ಗದ್ದೆ ಇದೆ.
ಚಾರ ದೊಡ್ಡ ಮನೆಯ ಪಾಡಿಯಲ್ಲಿ ಒಂದೆಡೆ ಉಪೇಕ್ಷೆಗೆ ಒಳಗಾದ ಮೂರು ಶಿಲ್ಪಗಳಿವೆ . ಅವುಗಳಲ್ಲಿ ಒಂದು ಶಿಲ್ಪದಲ್ಲಿ ನಾಗನಚಿತ್ರ ಸ್ಪಷ್ಟವಾಗಿಲ್ಲ. ತೆಳ್ಳಗಿನ ಶಿಲೆಯಲ್ಲಿಯ ಇನ್ನೊಂದು ಶಿಲ್ಪದಲ್ಲಿ 5 ಹೆಡೆ ಇದೆ. ಮತ್ತೊಂದು ತರೆಗೆಲೆಯ ಮಧ್ಯೆ ಸರಿಯಾಗಿ ಕಾಣಿಸುವುದಿಲ್ಲ.
ಚಾರ ಮೇಲ್ಬೆಟ್ಟು ರವೀಂದ್ರ ಶೆಟ್ಟಿಯವರು ಹೇಳುವ ಪ್ರಕಾರ ಇಲ್ಲಿ ಸುತ್ತ ಮುಗೆರರು ಪೂಜೆ ಮಾಡುವ ಬನ, ಕಾಡ್ಯರು ಪೂಜೆ ಮಾಡುವ ಬನ, ಬನ ಪೂಜಾರಿಗಳೂ ಪೂಜಿಸುವ ಬನ - ಹೀಗೆ ಕೆಲವು ಜಾತಿಗಳ ಕುಟುಂಬಸ್ಥರ ಮೂಲಸ್ಥಾನವಿದೆ.
ರವೀಂದ್ರ ಶೆಟ್ಟಿಯವರ ಪ್ರಕಾರ ಅಷ್ಟ ಕುಲ ನಾಗ ಎಂಬ ನಂಬಿಕೆ. ಬ್ರಹ್ಮ ಅಂದರೆ ಸರ್ಪ ಅಲ್ಲದೆ ಬೇರೇನೂ ಅಲ್ಲ. ಕಾಡ್ಯರಲ್ಲೂ ಬ್ರಹ್ಮ ಉಂಟು. ಕಾಡ್ಯರು ಮಾಡುವ ನಾಗ-ಬೆರ್ಮ ಸೇವೆ ಕಾಡ್ಯನಾಟ, ಪಾನರು ಮಾಡುವುದು ಪಾನರಾಟ. ಎಂದರು.
ನನಗೆ ತಿಳಿದಂತೆ ಕಾಡ್ಯರು ಅವರದೇ ಕ್ಷೇತ್ರದಲ್ಲಿ ಕಾಡ್ಯನಾಟ ಮಾಡುತ್ತಾರೆ. ಪಾನರು ಬಂಟರ ಕ್ಷೇತ್ರದಲ್ಲಿ ಪಾನರಾಟ ಮಾಡುತ್ತಾರೆ.







No comments:

Post a Comment