Tuesday, January 30, 2018ಬತ್ತಿ ಹೋಯಿತೆ ನಿನ್ನೆದೆ ತುಳುವಪ್ಯೆ

ಹತ್ತು ತಾಯಿಯ ಮಕ್ಕಳನ್ನು ಒಂದು ಮಡಿಲಲ್ಲಿಟ್ಟು
ಎದೆಯ ನೊರೆ ಹಾಲು ಮೊಗೆ ಮೊಗೆದು ಕುಡಿಸಿದ ಶಕ್ತಿ
ಅಪ್ಯೆ ತುಳುವಪ್ಯೆ!

ಮಾಯದ ಬೇಲಿ ಹಾಕಿ ಹೆಣ್ಣಿನ ನೆರಿಗೆ ಗಂಡಿನ ಶಿರವ
ರಕ್ಷಿಸಿದ ಶಕ್ತಿ ಅಪ್ಯೆ ತುಳುವಪ್ತೆ!

ಮತ ಬೇಧ ಇಲ್ಲದೆ ಮಸೀದಿಯ ಭೇಟಿ ಮಾಡಿದೆ
 ಶುಕ್ರವಾರದಂದು ನಿನ್ನಾಗಮನಕ್ಕಾಗಿ
ತೆರವು ಮಾಡುತ್ತಾರೆ ಮಸೀದಿಯನ್ನು  ಬ್ಯಾರಿಗಳು.
ಶೇಖರಂಕರನೊಂದಿಗೆ ನಿನ್ನ ಮಾಯಯೆ ಭೇಟಿ !
ಬ್ಯಾರಿಗಳ ಕಟ್ಟೆ ಪೂಜೆ ವೀಳ್ಯ ಮಲ್ಲ್ಲಿಗೆ ನಿನಗಾಗಿ 
ಇಲ್ಲಿ ಉದ್ಯಾವರದಲ್ಲಿ

ಅಲ್ಲಿ ಬಾರ್ಕೂರಲ್ಲಿ ಪಂಚಲಿಂಗೇಶ್ವರನ  
ಓಕುಳಿಯಾಟದಲ್ಲಿ  ಹಂಜಮಾನದವರ ಯಜಮಾನಿಕೆ
ಬಂಬ್ರಾಣದ ಬ್ಯಾರಿಆಲಿಗೆ  ತುಳುವರ ಕೋಲ!
ಆಲಿ ಅಭಯ ನೀಡುತ್ತಾನೆ ಜೋಗದಲ್ಲಿ!
ಹತ್ತು ತಾಯಿಯ ಮಕ್ಕಳನ್ನು ಒಂದು ಮಡಿಲಲ್ಲಿಟ್ಟು
ಎದೆಯ ನೊರೆ ಹಾಲು ಮೊಗೆ ಮೊಗೆದು ಕುಡಿಸಿದ ತಾಯೆ
ಬತ್ತಿ ಹೋಯಿತೆ ನಿನ್ನೆದೆ ?

ಆನ ತರೆ ಕಡಿಯುತ್ತಾರೆ ಈಗ ಇಲ್ಲಿ
ಪೊಣ್ಣ ನೆರಿ ಬಿಚ್ಚುತ್ತಾರೆ ಈಗ ಇಲ್ಲಿ
ಹೆತ್ತ ಕರುಳ ಸಂಕಟ ಕೇಳದೇ ನಿನಗೆ?
ಮಾಯವಾದೆಯ ನೀನು ತುಳುವ ಮಣ್ಣಿನಿಂದ?


(1 ಪೊಣ್ಣ ನೆರಿ=ಹೆಣ್ಣಿ ಸೀರೆಯ ನೆರಿಗೆ 2 ಆನ ತರೆ =ಗಂಡಿನ ತಲೆ 3 ಜೋಗ =ಲೌಕಿಕ)

13-1-2018


Thursday, January 25, 2018


          

ಇಂದಿರಾ ಹೆಗ್ಗಡೆಯವರ ಪ್ರಕಟಿತ ಕೃತಿಗಳು    

ಕಥಾ ಸಂಕಲನಗಳು  
     
1.        ಮೋಹಿನಿಯ ಸೇಡು       ಕರಾವಳಿ ಪ್ರಕಾಶನ        1987
2.       ಪುರುಷರೇ ನಿಮಗೆ ನೂರು ನಮನಗಳು      (ಅದೇ)  1987
3        ಬದುಕು                                        (ಅದೇ) 1995
            
ಕಾದಂಬರಿಗಳು          
             
1.        ಅಮಾಯಕಿ       ಕರಾವಳಿ ಪ್ರಕಾಶನ        1987
2.       ಒಡಲುರಿ          (ಆದೇ)                      1990
3.       ಮಂಥನ          (ಅದೇ)                      1995
4.       ಬದಿ     ನವಕರ್ನಾಟಕ    ಪ್ರಕಾಶನ         1997

         
1 ಗುತ್ತಿನಿಂದ ಸೈನಿಕ ಜಗತ್ತಿಗೆ
(ಸೈನಿಕ ಜೀವನದ ಅನುಭವ ಕಥನ ಎಸ್.ಆರ್. ಹೆಗ್ಗಡೆಯ ಸಹಯೋಗದೊಂದಿಗೆ) ನವಕರ್ನಾಟಕ ಪ್ರಕಾಶನ 2002
         
ಸಂಶೋಧನಾ ಕೃತಿಗಳು  
         
1.        ಬಂಟರು – ಒಂದು ಸಮಾಜೋ ಸಾಂಸ್ಕøತಿಕ ಅಧ್ಯಯನ  ಕನ್ನಡ ಪುಸ್ತಕ ಪ್ರಾಧಿಕಾರ - ಮೊದಲನೆಯ                        ಮುದ್ರಣ  2004   - ಎರಡನೆಯ ಮುದ್ರಣ      2009
         (ಇಂಗ್ಲಿಷ್ ಆವೃತ್ತಿ) ಕುವೆಂಪು ಅನುವಾದ ಅಕಾಡೆಮಿ  (ಕರ್ಣಾಟಕ ಸರಕಾರ 2015)

2.       ತುಳುನಾಡಿನ ಗ್ರಾಮಾಡಳಿತ ಮತ್ತು ಅಜಲು ಕನ್ನಡ ಸಾಹಿತ್ಯ ಪರಿಷತ್ತು  2004

3.       ತುಳುವೆರೆ ಅಟಿಲ ಅರಗಣೆ (ತುಳು)  ದ್ರಾವಿಡ ವಿಶ್ವವಿದ್ಯಾನಿಲಯ ಕುಪ್ಪಂ, ಆಂದ್ರಪ್ರದೇಶ   2008

4.       ಚೇಳಾರು ಗುತ್ತು ಮಂಜನ್ನಾಯ್ಗೆರ್ – ಐತಿಹಾಸಿಕ ಸಾಂಸ್ಕøತಿಕ ಶೋಧ.
          ಚೇಳಾರು ಗುತ್ತು ಅಗೊಳಿ ಮಞಣ ಟ್ರಸ್ಟ್  2009                                                             5.       ತುಳುವರ ಮೂಲತಾನ ಆದಿ ಆಲಡೆ : ಪರಂಪರೆ ಮತ್ತು ಪರಿವರ್ತನೆ     ನವಕರ್ನಾಟಕ  ಪ್ರಕಾಶನ    2012                ಮರುಮುದ್ರಣ 2016                       

          ಕವನ ಸಂಕಲನ  
        
1.        ಕಾವ್ಯಗಳ ಪುಟದಿಂದ ನೀನೆದ್ದುನಿಲ್ಲು ಕರಾವಳಿ                  1993

          ಸಂಪಾದನೆ     
          
1.        ಕೆಲವು ಲಲಿತ ಪ್ರಬಂಧಗಳು ಕನ್ನಡ ಸಾಹಿತ್ಯ ಪರಿಷತ್ತು          2000 
 
2        ನುಡಿ ಚಿತ್ರ (ಯಸ್ ಆರ್. ಹೆಗ್ಡೆ ಬದುಕು ಬರಹ) ಯಸ್ ಆರ್ ಹೆಗ್ಡೆ ಚಾರಿಟೇಬಲ್ ಟ್ರಸ್ಟ್. 2017
                            
3       ಮೂಲತಾನ ಪರಿವಾರ ದೈವಗಳ ಪಾಡ್ದನ   ಜಾನಪದ ವಿಶ್ವ ವಿದ್ಯಾಲಯ ಹಾವೇರಿ 2014
 ಜೀವನ ಚರಿತ್ರೆ

1   ಸರ್ ಎಮ್ ವಿಶ್ವೇಶ್ವರಯ್ಯ ನವಕರ್ನಾಟಕ 2015 -ಮರುಮಮುದ್ರಣ 2016
 ಯಸ್ ಆರ್ ಹೆಗ್ಡೆ 

ಪ್ರವಾಸ ಕಥನ

1 ಸಪ್ತ ಕನ್ಯೆಯರ ಕನ್ಯೆ ಭೂಮಿಯಲ್ಲಿ ನಮ್ಮ ನಡೆ (ಐ .ಬಿ ಯಚ್ ಪ್ರಕಶಾನ) 2017

ಬರಲಿರುವ ಕೃತಿಗಳು
1   ಇಂದ್ರ ಪ್ರಸ್ಥದಿಂದ ಇತಿಹಾಸದ ನಡೆ (ಪ್ರವಾಸ ಕಥನ)                           
2  ಸಿರಿಬಾರಿ ಲೋಕ. (ಸಂಶೋಧನೆ)
ನನಗೂ ಸಾವು ಬೇಕು 
ಅಮ್ಮ ಬದುಕಿರುವಾಗ 
ಅಮ್ಮನ ಮನೆಗೆ 
ನಗು ನಗುತ್ತಾ ಹೋಗುವಂತೆ
 ಸಾವಿನ ಮನೆಗೆ ನಡೆದು ಹೋಗಬೇಕು
 ನೋವಿಲ್ಲದ ಅರಿವಾಗದ ಸಾವು ಬೇಕು.
 Indira Hegde

ಕೃತಿ ಪರಿಚಯ -‘ಸಪ್ತ ಕನ್ಯೆಯರ ಕನ್ಯೆ ಭೂಮಿಯಲ್ಲಿ ನಮ್ಮ ನಡೆ’ -2017


ಹೆಣ್ಣು ನೋಟದ ಕನ್ಯೆ ಭೂಮಿಯ ನಡೆ

ಲೋಕ ಗ್ರಹಿಕೆಗೆ ದೇಶ ಸುತ್ತುವುದು ಕೋಶ ಓದುವುದು ಅವಶ್ಯ. ಹೀಗೆ ಕಂಡದನ್ನು ದಾಖಲುಗೊಳಿಸುತ್ತಾ ತಮ್ಮ ವಿವೇಚನೆಯ ಚಿಂತನೆಯೊಳಗೆ ಮರುಸೃಷ್ಟಿ ಮಾಡಿ ತಿಳುವಳಿಕೆಯ ವಿಸ್ತಾರವನ್ನು ಹೆಚ್ಚಿಸುವುದೇ ಪ್ರವಾಸ ಸಾಹಿತ್ಯ. ಪಾಶ್ಚಿಮಾತ್ಯರ ಲೋಕ ದೃಷ್ಟಿ ಮತ್ತು ಸಹಾಸಿ ಪ್ರವೃತ್ತಿಯ ಕೊಡುಗೆಯಾದ ಪ್ರವಾಸ ಹೊಸ ಅನ್ವೇಷಣೆಗಳ ಮೂಲವೂ ಹೌದು. ಹೀಗೆ ಪ್ರಯಾಣ ಹೊರಟವರೆಲ್ಲಾ ಬರೆದುದು ವರದಿಯ ರೂಪವಾದರೆ ದಾಖಲು ಸಾಹಿತ್ಯವಾಗುತ್ತದೆ. ಅದಕ್ಕಿಂತ ಭಿನ್ನವಾಗಿ ತಮ್ಮ ಪಯಣದ ಅನುಭವಗಳನ್ನು ವಿಚಾರ, ಚಿಂತನೆಗಳಿಂದ ಕಥಿಸುತ್ತ ಹೋಗುವವರು ಕಂಡ ಲೋಕ ದೃಷ್ಟಿಯು ಪ್ರವಾಸ ಸಾಹಿತ್ಯದ ಸೃಜನಶೀಲತೆಗೆ ಮಾದರಿಯಾಗುತ್ತದೆ. ಬಹಳ ದೀರ್ಘ ಪರಂಪರೆಯಿರುವ ಕನ್ನಡದ ಪ್ರವಾಸ ಸಾಹಿತ್ಯ ಅಧ್ಯಯನ ಯೋಗ್ಯವಾಗಿ ಹೊಸ ಹೊಳಹುಗಳನ್ನು ಸಾಹಿತ್ಯ ಕ್ಷೇತ್ರಕ್ಕೆ ನೀಡಿದೆ. ವೃತ್ತಿ ಮತ್ತು ಪ್ರವೃತ್ತಿಗಳೊಂದಿಗೆ ಜೀವನ ಪ್ರೀತಿ ಲೋಕವನ್ನು ನೋಡುವ ‘ಕಣ್ಣ ನೋಟ’ ದ ಕಾಣ್ಕಿಗೆ ಹೊಸ ಅರ್ಥ ಸಾಧ್ಯತೆಗಳನ್ನು ತೊಡಗುತ್ತದೆ. ಅಂತಹ ಕೃತಿಯಾಗಿ ಹೊರ ಹೊಮ್ಮಿದೆ ಇಂದಿರಾ ಹೆಗ್ಗಡೆಯವರ ಪ್ರವಾಸ ಕಥನ – ‘ಸಪ್ತ ಕನೈಯರ ಕನ್ಯೆ ಭೂಮಿಯಲ್ಲಿ ನಡೆ’.

ಮೂಲತಃ ಕರ್ನಾಟಕ ಕರಾವಳಿಯವರಾದ ಇಂದಿರಾ ಹೆಗ್ಗಡೆ ತುಳುನಾಡಿನ ಸಂಸ್ಕøತಿ ಚಿಂತನೆಯ ಸಂಶೋಧನೆಯಾಗಿ ಮಹತ್ತ್ವದ ಲೇಖಕಿ. ತುಳು ನಾಡಿನ ಚರಿತ್ರೆ, ಸಮುದಾಯಗಳ ಸಾಂಸ್ಕøತಿಕ ವೈಶಿಷ್ಟ್ಯಗಳು, ಜನಪದದ ತಾತ್ತ್ವಿಕತೆ, ಆರಾಧನಾ ಪರಂಪರೆಯ ಮೂಲಗಳು ಹೀಗೆ ಮೂರು-ನಾಲ್ಕು ಧಾರೆಗಳಾದ ಚರಿತ್ರೆ, ಮಾನವಶಾಸ್ತ್ರ, ಸಂಸ್ಕøತಿ ಚಿಂತನೆ, ಜನಪದ, ಕ್ಷೇತ್ರಕಾರ್ಯ ಅನುಭವಗಳು ಅವರ ಲೋಕ ದೃಷ್ಟಿಯನ್ನು ವಿಸ್ತಾರಗೊಳಿಸಿವೆ. ಜಗತ್ತನ್ನು ಬಹುತ್ವದ ಮೂಲಧಾತುವಿನಲ್ಲಿ ಕಾಣುವ ವಾಸ್ತವಿಕ ದೃಷ್ಟಿ ಅವರಲ್ಲಿದೆ. ಒಬ್ಬ ಒಳ್ಳೆಯ ಸಂಶೋಧಕಿಯೂ ಆಗಿರುವ ಅವರಿಗೆ ಕಂಡದನ್ನು, ಕೇಳಿದನ್ನು ಒರೆಗೆ ಹಚ್ಚಿ ನೋಡುವ ಸತ್ಯ ಶೋಧದ ದೃಷ್ಟಿಯೂ ಇದೆ. ಈ ಎಲ್ಲಾ ಮೂಲ ಧಾತುಗಳನ್ನಿರಿಸಿಕೊಂಡು ಕಾಣುವಾಗ ಕಣ್ಣಿಗೆ ಪಟ್ಟಿಕಟ್ಟಿ ಕೊಳ್ಳದೆ ಎಲ್ಲವನ್ನೂ ತೆರೆದ ಮನದಿಂದ ಪರಿಭಾವಿಸುತ್ತಾ ಹೋಗುತ್ತಾರೆ. ಒಬ್ಬ ಪ್ರವಾಸಿಗನಿಗೆ ಇರಬೇಕಾದ ಎಚ್ಚರವಿದು. ಆರಾಧನಾ ಭಾವವನ್ನು ತ್ಯಜಿಸಿ ಸಕಾರಾತ್ಮಕ ಮತ್ತು ನಕರಾತ್ಮಕತೆಗೆರಡರ ಸಮ್ಮಿಲನದಿಂದ ಕಂಡಿರುವುದರಿಂದಲೇ ಅವರು ಹೇಳಿರುವ ಪ್ರವಾಸ ಅನುಭವಗಳು ಕಿರಿದಾಗಿ, ಸೊಗಸಾಗಿ, ಬಿಡಿ ಬಿಡಿಯಾಗಿದ್ದರೂ ಅದರಾಚೆಗೆ ಆಳವಾದ ಆಲೋಚನೆ ಚಿಂತನೆಗಳೊಂದಿಗೆ ನೂರು ಪ್ರಶ್ನೆಗಳನ್ನೆತ್ತಿ ಮತ್ತೊಂದಿಷ್ಟು ಅಧ್ಯಯನದ ಹುಡುಕಾಟದೊಂದಿಗೆ, ಕೃತಿಯನ್ನು ಸ್ಥಳಗಳನ್ನು ಮತ್ತೊಮ್ಮೆ ನೋಡಬೇಕೆಂಬ ಹುಮ್ಮಸ್ಸು ಮೂಡುತ್ತದೆ.

ಪ್ರವಾಸ ತೆರಳಲು ನಾಲ್ಕರಿಂದ ಆರು ಜನರು ಚೇತೋಹಾರಿ ಎಂಬ ಯೋಜನೆಯಲ್ಲಿ ಯೋಚನೆ ಮತ್ತು ಯೋಜನೆಗಳನ್ನು ಸಮ್ಮಿಲಸಿಕೊಂಡು ಬೇರೆ ಬೇರೆ ಸಂದರ್ಭಗಳಲ್ಲಿ ಈಶಾನ್ಯ ರಾಜ್ಯಗಳಲ್ಲಿ ಮಾಡಿರುವ ಪ್ರವಾಸದ ಕಥನವಿದು. ಯೋಧ, ಸಂಘಟಕ ಲೇಖಕ, ಮನುಜ ಪ್ರೇಮದ ಒಲವಿನ ಪತಿ ಎಸ್. ಆರ್. ಹೆಗಡೆಯವರೊಂದಿಗೆ ತಮ್ಮ ಆಪ್ತ ವರ್ಗದವರ ಜತೆ ಈಶಾನ್ಯ ರಾಜ್ಯಗಳಾದ ಅಸ್ಸಾಂ, ಮಣಿಪುರ, ಮೇಘಾಲಯ, ನಾಗಾಲ್ಯಾಂಡ್, ತ್ರಿಪುರ, ಅರುಣಾಚಲ, ಮಿಝೋರಾಮ್ ಮತ್ತು ಸಿಕ್ಕಿಂ ರಾಜ್ಯಗಳಲ್ಲಿ ಮಾಡಿದ ಪ್ರವಾಸಗಳ ಕಥನವು ಈ ಕೃತಿಯಲ್ಲಿ ಸಮ್ಮಿಲನಗೊಂಡಿದೆ. ಭಾರತದ ಈಶಾನ್ಯ ರಾಜ್ಯಗಳನ್ನು ವಸಾಹತುಶಾಹಿ ಪ್ರಭುತ್ವವು ‘Seveಟಿ Sisಣeಡಿs’ ಎಂದಿದೆ. ಈ ಪರಿಭಾಷೆಯನ್ನು ಹೊಸ ಅರ್ಥದಲ್ಲಿ ಸಹೋದರತ್ವದಿಂದ ಕನ್ಯತ್ವದ ನೆಲೆಯಲ್ಲಿ ಪರಿಭಾವಿಸಿದ ರೀತಿಯೇ ಕೃತಿಯ ಸೃಜನಶೀಲತ್ವ ಮತ್ತು ಹೊಸ ಎಚ್ಚರದ ಕಾಣ್ಕಿಗೆ ಸಾಕ್ಷಿಯಾಗಿದೆ. ‘ಸಪ್ತಕನ್ಯೆಯರ ಕನ್ಯೆ ಭೂಮಿ’ ಎಂಬ ಸಂಶೋಧನೆ ಸಂಸ್ಕøತಿ ವಿಕಾಸದ ಹೆಜ್ಜೆ ಗುರುತುಗಳಿಗೆ ಸಾಕ್ಷಿ ಪ್ರಜ್ಞೆಯಾಗಿದೆ. ಬುಡಕಟ್ಟು ಸಮುದಾಯಗಳ ನೆ¯ದ ಪಿಸುಮಾತುಗಳು ಮಾತೃಮೂಲ ಪರಂಪರೆಯ ಹೆಜ್ಜೆ ಗುರುತುಗಳಾಗಿ ಆ ಸಂಸ್ಕøತಿಯ ಸೂಕ್ಷ್ಮ ಒಳನೋಟಗಳ ಗ್ರಹಿಕೆಯೂ ನಿರೂಪಣೆಗೊಳ್ಳಲು ಸಾಧ್ಯವಾಗಿದೆ. ಕರಾವಳಿಯು ಮಾತೃಮೂಲ ಸಮುದಾಯದ ಬೇರುಗಳನ್ನು ಹೊಂದಿದ್ದು, ತುಳು ಸಂಸ್ಕøತಿಯ ನಾಗಾರಾಧನೆ, ಸಿರಿಯಾರಾಧನೆ, ದೈವರಾಧನೆಗಳು ಬಹಳ ಆಳವಾಗಿ ಜೀವಪರವಾದ ಮೌಲ್ಯಗಳನ್ನು ಸಾಬೀತು ಪಡಿಸುತ್ತದೆ. ಈ ಬಗ್ಗೆ ಒಳ ನೋಟಗಳುಳ್ಳ ಲೇಖಕಿ ಈ ಕೃತಿಯ ಹದಿನಾಲ್ಕು ಅಧ್ಯಾಯಗಳಲ್ಲಿ ಬಿಚ್ಚಿಕೊಳ್ಳುವ ಪ್ರವಾಸ ಕಥನ ಯೋನಿ ಭೂಮಿಯಲ್ಲಿ ನಡೆದ ಹೆಜ್ಜೆ ಗುರುತುವಿನೊಂದಿಗೆ ಆರಂಭಗೊಂಡು ಭಾರತೀಯ ಸಂಸ್ಕøತಿಯ ವಿವಾಹ ಪೂರ್ವ ಸಹಬಾಳ್ವೆಯಲ್ಲಿ ಕೊನೆಗೊಳ್ಳುತ್ತದೆ. ಲೋಕವನ್ನು ಕಂಡ ಲೇಖಕಿಯ ಮಹಿಳಾಪರ ದೃಷ್ಟಿಕೋನವೂ ಇಲ್ಲಿ ಬಹಳ ಮುಖ್ಯವೆನಿಸುತ್ತದೆ.

ಚರಿತ್ರೆ, ಮಾನವಶಾಸ್ತ್ರ, ಜಾನಪದ, ಸಂಸ್ಕøತಿ ಚಿಂತನೆಯ ಧಾರೆಗಳ ಹುಡುಕಾಟಗಳ ಮೂಲಕ ಹೊರಗಿನ ಜಗತ್ತನ್ನು ನೋಡುತ್ತಾ ಮಾನವನೊಳಗಿನ ಜೀವ ಜಗತ್ತನ್ನು ಅರ್ಥೈಸುವ ಪ್ರಯತ್ನ ಮಾಡಲಾಗಿದೆ. ಭೂಮಿಯ ತತ್ವ, ಸೃಷ್ಟಿಯ ಮಹತ್ವ, ಜೀವ ಸೃಷ್ಟಿಗೆ ಮೂಲಧಾತುವಾದ ನೀರು, ಮಣ್ಣು ಇವುಗಳು ಆರಾಧನಾ ಪರಂಪರೆಯಲ್ಲಿ ಹೇಗೆ ದಾಖಲಾಗಿದೆ ಎನ್ನುವುದನ್ನು ವಿವರಿಸುತ್ತಾರೆ. ಯೋನಿ ಭೂಮಿ, ಯೋನಿ ದೇವಿ ಎಂದು ಸಂಭೋಧಿಸುತ್ತಾ  ಅಸ್ಸಾಂನ ಅಂಬಾವಾಟಿ ದೇವಿಯ, ಕಾಮುಕ್ಯ ಕ್ಷೇತ್ರದ ಆಚರಣೆಯನ್ನು ತುಳುನಾಡಿನ ಕೆಡ್ಡಸದೊಂದಿಗೆ ಸಮೀಕರಿಸುತ್ತಾರೆ. ಯೋನಿ ಕೂಲು ಜಗನ್ಮಾತೆ ಎಂದು ವಿಶ್ಲೇಷಿಸುವಾಗ ಮಾತೃಮೂಲ ಸಂಸ್ಕøತಿಯ ಒಳ ಹೊರಗುಗಳನ್ನು ಅರ್ಥೈಸಿದ ಸೂಕ್ಷ್ಮ ಒಳನೋಟ ಇದೆ.  ಬೋಡೋ ಬುಡಕಟ್ಟಿನ ಜನ ಗ್ರಹಿಸಿದ ಪ್ರಕೃತಿಯೇ ಸೃಷ್ಟಿರೂಪಿಣಿ ಯೋನಿ ಎಂಬ ತಿಳುವಳಿಕೆಯನ್ನು ಅವರ ಹಿನ್ನಲೆಯನ್ನು ವಿಶ್ಲೇಷಿಸುತ್ತಾರೆ.

ಹೆಣ್ಣಿನ ನಿಹಿತ ಶಕ್ತಿಯನ್ನು ಅರಿತು ಕಾಲಾಂತರದಲ್ಲಿ ಸ್ಥಿತ್ಯಂತರಗೊಂಡ ಸ್ವರೂಪವನ್ನು ಅರ್ಥೈಸುತ್ತಾರೆ. ಅಸ್ಸಾಂನ್ನು ಕಾಮರೂಪ ಎಂಬ ಹೆಸರಿನಿಂದ ಕರೆಯಲ್ಪಡುವ ಬ್ರಹ್ಮಪುತ್ರಾ ನದಿ ಬಯಲಿನಲ್ಲಿರುವ ಈ ದೇವಾಲಯದ ಬಗೆಗೆ ಇರುವ ಅಧ್ಯಯನದ ವಿವರಗಳನ್ನು ನೀಡುತ್ತಾರೆ. ಆರಾಧನಾ ಪರಂಪರೆಯಲ್ಲಿ ಬೇರೆ ಬೇರೆ ಪಂಥಗಳು ಮಾಡಿದ ಪ್ರಭಾವ ಇದ್ದರೂ ಮೂಲದಲ್ಲಿರುವ ಅದರ ತಾತ್ವಕತೆಯ ಅರ್ಥವನ್ನು ಪ್ರತಿಪಾದಿಸುತ್ತಾರೆ. ಬುಡಕಟ್ಟು ಧರ್ಮ ಮೂಲದಲ್ಲಿರಿಸಿಕೊಂಡ ಆದಿಮದರ್ಮದ ಪ್ರಕೃತಿಯ ಪೂಜೆಯನ್ನು ಬೇರೆ ಬೇರೆ ಪ್ರದೇಶಗಳಿಗೆ ಹೋದಾಗಲೂ ಅದು ಅನುರಣನಗೊಳ್ಳುತ್ತದೆ. ಮೇಲ್ನೋಟಕ್ಕೆ ಬುಟಕಟ್ಟಿನ ಜನರು ಹೊರನೋಟಕ್ಕೆ ಬೇರೆ ಬೇರೆ ಧರ್ಮಗಳನ್ನು ಒಪ್ಪಿಕೊಂಡಿದ್ದರೂ ಮೂಲದಲ್ಲಿ ಅಪ್ಪಿಕೊಂಡಿರುವುದು ಬುಡಕಟ್ಟು ಧರ್ಮವನ್ನೇ. ಹೆಣ್ಣಿಗೆ ಇರುವ ಸ್ವಾತಂತ್ರ್ಯದ ಮುಕ್ರತೆ ಇಂದಿನ ಪರಿಭಾಷೆಯಲ್ಲಿ ‘ಲಿವಿಂಗ್ ಟುಗೆದರ್’ ಎಂದು ಕರೆದರೂ ಮೆಚ್ಚಿಗೆಯಾಗುವ ಹೆಣ್ಣು ಗಂಡು ಕಾಡಿನಲ್ಲಿ ರಾತ್ರಿ ಕಳೆದು ಬಂದು ವಿವಾಹವಾಗುವ ವರ್ಷ ಜತೆಗಿದ್ದು ವಿವಾಹವಾಗುವ ಪ್ರಸಂಗಗಳನ್ನು ವಿವರಿಸಲಾಗಿದೆ. ಒಟ್ಟು ಭೂಮಿಯನ್ನು ಮಾತ್ರವಲ್ಲ ಬದುಕನ್ನು ಹೆಣ್ಣಿನ ನೆಲೆಯಿಂದಲೇ ಕಟ್ಟಿಕೊಳ್ಳುವ ಬುಡಕಟ್ಟು ಸಂಸ್ಕøತಿಯನ್ನು ವಿಶ್ಲೇಷಿಸುತ್ತಾರೆ. ಇಲ್ಲಿ ಸರಿ ತಪ್ಪುಗಳ ವಿಶ್ಲೇಷಣೆಗೆ ಇರುವ ಸಮುದಾಯದ ಬದುಕಿನ ಮೌಲ್ಯಗಳು ಮುಖ್ಯವೆನಿಸುತ್ತವೆ. ಮತೃಮೂಲ ಸಮುದಾಯದ ಮೂಲಬೇರುಗಳನ್ನು ತಡಕಾಡುತ್ತಾ ಅದಕ್ಕೆ ರೂಪಕದಂತಿರುವ ಇಮಾ ಮಾರುಕಟ್ಟೆಯ ಬಗೆಗಿನ ವಿವರಣೆಗಳು ಸ್ವತಂತ್ರ್ಯವಾಗಿ ಬದುಕುವ ಸ್ತ್ರೀಯರ ಸ್ವಾಯತ್ತತೆಯನ್ನು ನಿರೂಪಿಸುತ್ತದೆ. ಹೆಣ್ಣಿಗಿರುವ ಲೈಂಗಿಕ ಸ್ವಾತಂತ್ರ್ಯದಿಂದ ದೌರ್ಜನ್ಯದ ಪ್ರಕರಣಗಳಿಲ್ಲ ಎಂಬ ಸೂಕ್ಷ್ಮ ದಾಖಲಾಗಿದೆ. ಆರ್ಥಿಕವಾಗಿಯೂ ಸ್ವತಂತ್ರರಾಗಿರುವುದಲ್ಲದೆ, ಸಂಸಾರವನ್ನು ಕಷ್ಟ ಪಟ್ಟು ದುಡಿದು ಸಾಕುವ ‘ಮಣಿಪುರದ ಮಹಿಳಾ ಶಕ್ತಿ’ಯ ಬೇರೆ ಬೇರೆ ಆಯಾಮಗಳ ವಿವರಣೆಗಳಿವೆ. ವಾಸ್ತವದ ನೂರು ಪರಶ್ನೆಗಳಿವೆ. ಉತ್ತರದ ಹುಡುಕಾಟವಿದೆ. ‘ಎಮಾ ಮಾರ್ಕೆಟ್’ ಬಗ್ಗೆ ನಿರೂಪಿಸುತ್ತಾ ‘ಎಮಾ’ ಎಂದರೆ ತಾಯಿ ಎಂಬ ವಿವರಣೆ ನೀಡುತ್ತಾ ಇಡೀ ಸಮುದಾಯದ ತಾಯ್ತನದ ಭಾವವನ್ನು ನಿರೂಪಿಸುತ್ತಾರೆ. ಹೆಣ್ಣಿನ ನೆಲೆಯಿಂದ ನೆಲವನ್ನು ಪ್ರೀತಿಸಿ ಬದುಕನ್ನು ಕಟ್ಟಿದ ಸಮುದಾಯಗಳು ಬದುಕಿನ ಪ್ರೀತಿಯನ್ನು ಹಂಚಿದ ಸ್ವರೂಪ ಆಚರಣೆ, ಆರಾಧನೆಗಳಲ್ಲೂ ಪ್ರಕಟಗೊಂಡಿವೆ.
ಸಂಸ್ಕøತಿಯ ಮುಖ್ಯಭಾಗವಾಗಿರುವ ಆಹಾರ ಸಂಸ್ಕøತಿಯ ಬಗೆಗೆ ಸಾಂದರ್ಭಿಕ ವಿವರಣೆಗಳು ಲಭ್ಯ. ನಾಗಾಲ್ಯಾಂಡ್, ಮಿಜೋರಾಂ ರಾಜ್ಯಗಳ ಜನರು ದಟ್ಟವಾದ ಕಾಡಿದ್ದರೂ ಪೂರ್ವಜರು ಒಂದೂ ಪ್ರಾಣಿಯೂ ಬಿಡದೆ ಇರುವುದರಿಂದ ಕಾಡುಪ್ರಾಣಿಗಳ ಅಲಭ್ಯತೆ ಮತ್ತು ಲಭ್ಯವಾಗಿರುವ ಪ್ರಾಣಿಗಳನ್ನು ಮಾಂಸಹಾರಿಗಳು ತಿನ್ನುವ ಉಲ್ಲೇಖಗಳ ಕುತೂಹಲ ಹುಟ್ಟಿಸುತ್ತವೆ. ಕಾಡು ಮತ್ತು ನಾಡುಗಳ ಮಧ್ಯೆ ಅಭೇಧ್ಯ ಪರಿಕಲ್ಪನೆಗಳ ನಡುವೆ ಬದುಕಿನ ಅಭದ್ರತೆಯೊಂದಿಗೆ ಕಟ್ಟಿಕೊಂಡ ಲೋಕದೃಷ್ಟಿಗಳೂ ಮುಖ್ಯ.

ವರ್ತಮಾನದ ಬಕ್ಕಟ್ಟುಗಳ ಮೂರು ಪ್ರಶ್ನೆಗಳಿಗೆ ಪ್ರವಾಸದ ಅನುಭವಗಳಿಂದ ಸೂಕ್ಷ್ಮ ಒಳನೋಟಗಳಿಂದ ಉತ್ತರವಿದೆ. ಹೆಣ್ಣಿನ ನೋಟದ ಗ್ರಹಿಕೆಯ ಲೋಕ ದೃಷ್ಟಿ ಮತ್ತು ಸೂಕ್ಷ್ಮ ಗ್ರಹಿಕೆಗಳು ಸೆಳೆಮಿಂಚಿನಂತೆ ದಾಖಲೆಯೊಂದಿಗೆ ಹೊಸತನ್ನು ಅರಿಯುವ ಪ್ರಯತ್ನವೂ ಆಗಿದೆ. ತಮ್ಮ ಪತಿ ಮಾಜಿ ಸೈನಿಕ ಸಂಘಟಕರಾದ ಎಸ್. ಆರ್. ಹೆಗಡೆಯವರ ಧೈರ್ಯ ಮತ್ತು ಸಾಹಸದ ಬದುಕಿನ ಪ್ರವಾಸದ ನೆನಪಿನ ಸ್ಮಾರಕವಾಗಿ ಈ ಪ್ರವಾಸ ಕಥನವನ್ನು ಕಟ್ಟಿಕೊಟ್ಟಿದ್ದಾರೆ. ನಿಜದ ಅರ್ಥದಲ್ಲಿ ಬದುಕಿನ ಪಯಣದಲ್ಲಿ ಸಾಹಸ ಮತ್ತು ಕುತೂಹಲಗಳು ನಮ್ಮನ್ನು ಹೊಸ ಹೊಳಹಿನೆಡೆಗೆ ಒಯ್ಯುತ್ತದೆ. ಪ್ರವಾಸದ ಕೃತಿಯೊಂದು ಸಂಸ್ಕøತಿಯ ಶೋಧ ನಡೆಸುತ್ತಾ ಗಂಡು ಹೆಣ್ಣಿನ ತಾರತಮ್ಯಕ್ಕೆ ಉತ್ತರವಾಗಿ ನೆಲದ ಶೋಧವನ್ನು ನಾಡಿಮಿಡಿತದಂತೆ ಮಿಡಿದು ನಿಜದ ಅರ್ಥದಲ್ಲಿ ಕಾಣುವ ಕಾಣ್ಕಿಯೇ ಅಯಾಚಿತವಾಗಿ ಸಾಹಿತ್ಯದ ಓದಿನ ರಸಾನೂಭೂತಿಯನ್ನು ನೀಡುತ್ತದೆ. ಒಂದಿಷ್ಟು ಹಿಡಿ ಮಣ್ಣಿನ ಪರಿಮಳದ ಈ ಕೃತಿ ರಚನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡ ಇಂದಿರಾ ಹೆಗ್ಗಡೆಯವರಿಗೆ ಅಭಿನಂದನೆಗಳು.

ಜ್ಯೋತಿ ಚೇಳಾರು


.


 

Friday, December 22, 2017

Wednesday, December 20, 2017

Sapta knyeyara Nadinalli namma nadeಡಾ. ಇಂದಿರಾ ಹೆಗ್ಗಡೆಯವರ ಪ್ರವಾಸ ಕಥನ “ಸಪ್ತ ಕನ್ಯೆಯರ ಕನ್ಯೆ ಭೂಮಿಯಲ್ಲಿ ನಮ್ಮ ನಡೆ” ದಿನಾಂಕ 16-12-2017ರಂದು ರವೀಂದ್ರ ಕಲಾಕ್ಷೇತ್ರದ ಮಹಿಳಾ ವಿಶ್ರಾಂತಿ ಗೃಹದಲ್ಲಿ ಡಾ. ವಿಜಯಮ್ಮ ಅವರಿಂದ ಲೋಕಾರ್ಪಣೆಗೊಂಡಿತು. ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಡಾ, ವಸುಂದರಾ ಭೂಪತಿಯವರು ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಲೇಖಕಿಯರ ಸಂಘ   ಐ ಬಿ. ಎಚ್ ಪ್ರಕಾಶನ  ಮತ್ತು ಯಸ್ ಆರ್ ಹೆಗ್ಡೆ ಚಾರಿಟೇಬಲ್  ಟ್ರಸ್ಟ್ ಜಂಟಿಯಾಗಿ ಪುಸ್ತಕ ಬಿಡುಗಡೆ ಸಮಾರಂಭವನ್ನು ಏರ್ಪಡಿಸಿತ್ತು
ಕೃತಿಯನ್ನು ಲೋಕಾರ್ಪಣೆಗೊಳಿಸಿದ ಡಾ ವಿಜಯಾ ಅವರು ತನಗಾದ ಆಘಾತದಿಂದ  ಖಿನ್ನತೆಯಿಂದ ಬಳಲುತ್ತಿದ್ದ ಡಾ. ಇಂದಿರಾ ಹೆಗ್ಗಡೆಯವರನ್ನು ತಟ್ಟಿ ಹುರುಪುಗಳನ್ನು ತುಂಬಿಸಿ ಬರವಣಿಗೆಯ ಕಡೆ ಮುಖ ಮಾಡಲು ಹೇಳಿದಾಗ ‘ಈ ಮೊದಲು ಬರೆದಿರುವು ಕೃತಿಗಳು ಪ್ರಕಟಣೆಗೆ ಕಾದಿವೆ. ಅವು ಮೊದಲು ಹೊರ ಬರಲಿ ಆಮೇಲೆ ನೋಡುವಾ’ ಎಂದರಾಕೆ. ಆಗ ತಾನು ಕೆಲವು ಪ್ರಕಾಶಕರನ್ನು ಸಂಪರ್ಕಿಸಿದ್ದೆ.  ನನ್ನ ಸಲಹೆಯಂತೆ ಈ ಕೃತಿಯನ್ನು ಹೊರತಂದ  ಐ.ಬಿ.ಎಚ್ ನ ಸಂಜಯ ಅಡಿಗರು ಅವರಲ್ಲಿ ಒಬ್ಬರು ಎಂದರು.
ಇಂದಿರಾ ಹೆಗ್ಗಡೆಯವರ ಪತಿ ಸೈನ್ಯದಲ್ಲಿ ಇದ್ದುದಕ್ಕೆ ಅವರಿಗಿದ್ದ  ಧೈರ್ಯ ಇಂತಹ ಆತಂಕ ಕಾರಿ ಪ್ರವಾಸ ಕೈಗೊಳ್ಳಲು ಸಾಧ್ಯವಾಗಿರಬೇಕು ಎಂದರು. ಅವರು ತಾನು ಸ್ತ್ರೀವಾದಿ ಎಂದು ತಮ್ಮನ್ನು ಕರೆದುಕೊಂಡವರಲ್ಲ. ಆದರೆ ಇಲ್ಲಿ ಪುಟ ಪುಟಗಳಲ್ಲೂ ಮಾತೃ ಸಂಸ್ಕೃತಿಯ ಬಗ್ಗೆ ವಿವರಿಸಿದ್ದಾರೆ. ಸ್ತ್ರೀ ಪ್ರಧಾನವಾದ ದೇವಸ್ಥಾನಗಳು, ನೆಲಗಳು, ಯೋನಿಗರ್ಭದಲ್ಲಿ ಇರುವ ಶಿವನ ಬಗ್ಗೆ ವಿವರಿಸಿದ್ದಾರೆ. ಶಿವನನ್ನು ಬಗೆದು  ಮೆಟ್ಟಿ ನಿಂತ ಕಾಳಿಯನ್ನು ನೋಡಿ ಬೆರಗುಗೊಂಡು ಅದರ ಹಿನ್ನಲೆ ಹುಡುಕಿ ವಿವರಿಸಿದ್ದಾರೆ. ಇಂತಹ ಒಳ್ಳೆಯ ಪುಸ್ತಕವನ್ನು ಕೊಟ್ಟು ನಮ್ಮನ್ನು ಗಂಭೀರ ಚಿಂತನೆಗೆ ಒಡ್ಡುತ್ತಾರೆ- ಎಂದು ಡಾ. ವಿಜಯಮ್ಮ ವಿವರಿಸಿದರು.
ಪುಸ್ತಕದ ಪರಿಚಯವನ್ನು ಡಾ. ಭೈರಮಂಗಲ ರಾಮೇ ಗೌಡ ಅವರು ಬಹಳ ಸೊಗಸಾಗಿ ಮಾಡಿದರು. ಒಂದು ಪ್ರವಾಸ ಕಥನ ಹೇಗಿರಬೇಕೆಂಬುದಕ್ಕೆ ಇದೊಂದು ಮಾದರಿ ಕೃತಿ ಎಂದರು. ತಾನು ಓಡಾಡಿದ ನೆಲದಲ್ಲಿ ಪಡೆದ ಅನುಭವಗಳನ್ನು , ಎದುರಿಸಿದ ಆತಂಕಗಳನ್ನು ಬಹಳ ರೋಮಾಂಚನಕಾರಿಯಾಗಿ ವಿವರಿಸಿದ್ದಾರೆ ಎಂದರು.
ಮಾತೃಪ್ರಧಾನ ಕುಟುಂಬದಲ್ಲಿ ಜನಿಸಿ, ಅದರ ದಟ್ಟ  ಪ್ರಭಾವದ  ನಡುವೆ ಬೆಳೆದ ಇವರು  ‘ಬಂಟರು ಒಂದು ಸಮಾಜೋ ಸಾಂಸ್ಕೃತಿಕ ಅಧ್ಯಯನ’ ಕೃತಿಯನ್ನು ರಚಿಸಿದ್ದಾರೆ.  ಎಲ್ಲಾ ಜನಾಂಗ ಗಳ ಅಧ್ಯಯನಕ್ಕೆ  ಉತ್ತಮ ಆಕರ ಗ್ರಂಥವಾಗುವ  ರೀತಿಯಲ್ಲಿ ಆ ಕೃತಿಯನ್ನು ಇಂದಿರಾ ಹೆಗ್ಗಡೆಯವರು ನೀಡಿದ್ದಾರೆ. ತುಳುನಾಡಿನ ಸಂಸ್ಕೃತಿಯ ಬಗ್ಗೆ ಬುಡಗಟ್ಟಗಳ ಬಗ್ಗೆ ಅಧಿಕೃತವಾಗಿ ಮಾತನಾಡಬಲ್ಲ ಕೆಲವೇ ಮಂದಿಗಳಲ್ಲಿ ಇಂದಿರಾ ಹೆಗ್ಗಡೆಯವರು ಕೂಡಾ ಒಬ್ಬರು.

 ಮಾತೃಪ್ರದಾನ ಸಂಸ್ಕೃತಿಯ ಈಶಾನ್ಯ ಭಾರತದ ಏಳು ರಾಜ್ಯಗಳ ಸಂಸ್ಕೃತಿಯನ್ನು, ಉಪಾಸನೆಯನ್ನು ತನ್ನ ನೆಲದ ಸಂಸ್ಕೃತಿ ಮತ್ತು ಉಪಾಸನೆಯ ಜೊತೆ ತುಲನೆ ಮಾಡಿ ಇಲ್ಲಿ ಬರೆದಿದ್ದಾರೆ. ಈ ಭಾಗಕ್ಕೆ 2010 ಮತ್ತು 2012ರಲ್ಲಿ ಹೀಗೆ ಎರಡು ಬಾರಿ ಪ್ರವಾಸ ಹೋಗಿದ್ದಾರೆ. ಜೊತೆಗೆ ಇಲ್ಲಿ ಸಿಕ್ಕಿಂ ಕೂಡಾ ಸೇರಿದೆ.
ಈ ಪ್ರವಾಸ ಕಥನಕ್ಕೆ  ಉತ್ತಮ ಪ್ರವೇಶಿಕೆಯನ್ನು ತುಳುನಾಡಿನ  ಸಂಸ್ಕೃತಿ ಸಂಪ್ರದಾಯಗಳ ಬಗ್ಗೆ ಅಧಿಕೃತವಾಗಿ.,ಖಚಿತವಾಗಿ ಮಾತನಾಡಬಲ್ಲ ಡಾ. ಬಿ. ಎ. ವಿವೇಕ್ ರೈ ಅವರು ನೀಡಿ ಇವರನ್ನು ಹರಸಿದ್ದಾರೆ.
ಮಾತೃ ಪ್ರಧಾನ ವ್ಯವಸ್ಥೆಯಲ್ಲಿ ಹೆಣ್ಣು ಮಕ್ಕಳಗೆ ಆಗುವ ಲಾಭಗಳೇನು ಎಂಬುದನ್ನು ತಿಳಿದುಕೊಳ್ಳಬೇಕಾದರೆ ಈ ಕೃತಿಯನ್ನು ಓದಬೇಕು.
ನಮ್ಮ ಹೆಣ್ಣು ಮಕ್ಕಳ ಬಗ್ಗೆ ಪುರುಷರೂ ಮಾತನಾಡುತ್ತೇವೆ, ಮಹಿಳೆಯರೂ ಮಾತನಾಡುತ್ತಾರೆ. ಆದರೆ ನಮ್ಮ ಹೆಣ್ಣು ಮಕ್ಕಳಿಗೆ ಬೇಕಾಗುವಂತಹ,  ಅವರನ್ನು ಇಕ್ಕಟ್ಟಿನಿಂದ ಬಿಡಿಸುವಂತಹ ಪ್ರಾಮಾಣಿಕ ಪ್ರಯತ್ನವನ್ನು ನಾವು ಮಾಡುತ್ತಿದ್ದೇವೆಯೇ ಎನ್ನುವುದನ್ನು, ನಾವು  ಪ್ರಶ್ನಿಸಿಕೊಳ್ಳಬೇಕಾಗಿದೆ.
ಬುಡಕಟ್ಟು ಜನಾಂಗಗಳ ಬಗ್ಗೆ ಈ ಪ್ರವಾಸ ಕಥನದಲ್ಲಿ ಇವರು ಬಹಳ ಚೆನ್ನಾಗಿ ಬರೆಯುತ್ತಾರೆ. ಉದಾಹರಣೆಗೆ ಪರಸ್ಪರ ಮೆಚ್ಚುವ ಗಂಡು ಹೆಣ್ಣು ಗಳ ವಿವಾಹದ ಬಗ್ಗೆ ಬರೆಯುತ್ತಾರೆ, ತಮಗೆ ಡ್ರೈವರ್ ಆಗಿ ಬಂದಿದ್ದ ಅಪ್ಪ ಮಗನ ಸಂಭಾಷಣೆಯನ್ನು ಬರೆಯುತ್ತಾ ವಿವಾಹದ ಬಗೆಗೆ ಅವರ ನಿಲುವನ್ನು ಬರೆಯುತ್ತಾರೆ.  ಅಲ್ಲಿಯ ವಿವಾಹ ಪದ್ಧತಿಯ ಬಗ್ಗೆ ಬರೆಯುತ್ತಾರೆ. ಅಲ್ಲಿ ಹೆಣ್ಣು ಗಂಡನ್ನು ಮೆಚ್ಚಬೇಕು ಗಂಡು ಹೆಣ್ಣನ್ನು ಮೆಚ್ಚಬೇಕು – ಆಮೇಲೆ ಹಿರಿಯರು ಆ ಮದುವೆಯಲ್ಲಿ ತಮ್ಮ ಕರ್ತವ್ಯ ಮಾಡುತ್ತಾರೆ.
ಹೋಟೇಲ್ ನೌಕರಿಂದ ತೊಡಗಿ ಎಲ್ಲರನ್ನೂ ಮಾತನಾಡಿಸಿ ಅವರಿಂದ ಅವರ ಭಾವನೆಗಳನ್ನು ,ವಿಷಯಗಳನ್ನು ಅಚ್ಚುಕಟ್ಟಾಗಿ ಇಂದಿರಾ ಹೆಗ್ಗಡೆಯವರು ಸಂಗ್ರಹಿಸುತ್ತಾರೆ.
ಇಲ್ಲಿ ಇಂದಿರಾ ಹೆಗ್ಗಡೆಯವರು ಬುಡಕಟ್ಟು ಜನಾಂಗದ  ತಾವು ನೋಡಿದ ಒಂದು ಮದುವೆಯ ಬಗ್ಗೆ ಬರೆಯುತ್ತಾರೆ. ವರ ಮತ್ತು ವಧುವಿನ ಕಡೆಯ ಹತ್ತು ಹದಿನೈದು ಮಂದಿಯ ಉಪಸ್ಥಿತಿಯಲ್ಲಿ ಆ ವಿವಾಹ ನಡೆಯುತ್ತದೆ. ಮತ್ತೇನೂ ಅಲ್ಲಿ ಖರ್ಚಿಲ್ಲ. ನಮ್ಮಲ್ಲಿ ಆದರೆ ಒಂದು ಹೆಣ್ಣು ಮಗುವಿನ ವಿವಾಹ ಅಂದರೆ ಅದು ಹೆಣ್ಣಿನ ಮತ್ತು  ಹೆತ್ತವರಿಗೆ  ಶೋಷಣೆ ಕೂಡಾ ಎಂದರು.
ಇಲ್ಲಿಯ  ಆಚರಣೆಗಳನ್ನು ನಮ್ಮಲ್ಲೂ ಅಳವಡಿಸಿಕೊಂಡರೂ, ನಮ್ಮಲ್ಲಿ  ಹೆಣ್ಣು ಮಕ್ಕಳ ಮೇಲೆ ಆಗುವ ದೌರ್ಜನ್ಯ ವನ್ನು ಕಡಿಮೆ ಮಾಡಬಹುದು..
ಬಾಬ್ರಿ ಮಸೀದಿಯ ಬಗ್ಗೆ ತೀರ್ಪು ಬರುವ ದಿನ ಇವರು ಅಸ್ಸಾಮ್ ನ ಗ್ವಹಾಟಿಯಲ್ಲಿ ಇದ್ದರು. ಅವರು ಬೆಂಗಳೂರು ಬಿಡುವ ಮೊದಲು ಆ ತೀರ್ಪಿನಿಂದ ಸಂಭವಿಸಬಹುದಾದ ಘಟನೆಗಳ ಬಗ್ಗೆ ಪೂರ್ವ ಬಾವಿ ಸುರಕ್ಷತೆಯನ್ನು ಕರ್ನಾಟಕ ಸರಕಾರ ಮಾಡಿತ್ತು.  ಆದರೆ ಅಲ್ಲಿ ಹೋದಾಗ ಎಲ್ಲವೂ ಮಾಮೂಲಿಯಾಗಿತ್ತು. ಈ ಬಗ್ಗೆ ಇಂದಿರಾ ಹೆಗ್ಗಡೆಯವರು ಸ್ಥಳೀಯರನ್ನು ಪ್ರಶ್ನಿಸುತ್ತಾರೆ. “ ಹಸಿದ ಹೊಟ್ಟೆಗಳಿಗೆ ಮಸೀದಿಯೂ ಬೇಕಾಗಿಲ್ಲ ರಾಮನೂ ಬೇಕಾಗಿಲ್ಲ. ನಮಗೆ  ರಾಮನೂ ಬೇಡ ರಹಿಮನೂ ಬೇಡ” ಎನ್ನುತ್ತಾರೆ ಇವರು ಪ್ರಶ್ನಿಸಿದ ಜನಗಳು. ಅವರಿಗೆ  ದುಡಿಮೆ ಮುಖ್ಯ.
ಕಾಮಾಖ್ಯ ಕ್ಷೇತ್ರದಲ್ಲಿ ಇಂದಿರಾ ಹೆಗ್ಗಡೆಯವರು ಜಗಜನನಿಯ ಗರ್ಭರೂಪದ ಬಾವಿಗೆ ಇಳಿಯುವ ಸಂದರ್ಭ.  ಅದು ಒಂದು ಸಾಹಸ ಮಾತ್ರವಲ್ಲ ದುಸ್ಸಾಹಸ ಎಂದೇ ಹೇಳಬಹುದು. ತನ್ನ ಸೈನಿಕ ಪತಿ ಬಾರದೆ ಇದ್ದರೂ ಅವರು ಬೆನ್ನಿಗೆ ಇದ್ದಾರೆ ಎಂಬ ಧೈರ್ಯವನ್ನು ಕಟ್ಟಿಕೊಂಡು ಪ್ರಪಾತದಲ್ಲಿ ಇರುವ ಶಕ್ತಿ ದೇವತೆಯ ಗರ್ಭ ರೂಪದ, ಯೋನಿ ರೂಪದ  ಗರ್ಭಗೃಹಕ್ಕೆ ಇವರು ಇಳಿಯುತ್ತಾರೆ.
 ಮತ್ತೊಂದೆಡೆ ಗರ್ಭರೂಪದ ಯೋನಿ ಯೊಳಗೆ ಇರುವ ಶಿವಲಿಂಗದ ಬಗ್ಗೆ ಬರೆಯುತ್ತಾರೆ.
ಜಸ್ವಂತ್ ಸಿಂಗ್ ರಾವತ್ 1962ರಲ್ಲಿ ಚೀನಾ ಯುದ್ಧದಲ್ಲಿ ಏಕಾಂಗಿಯಾಗಿ ಹೋರಾಡಿದ ಕಥೆಯನ್ನು ಹಾಗೂ ಅವನ ಹೋರಾಟದ ಸಂದರ್ಭದಲ್ಲಿ ಅವರಿಗೆ ಆಹಾರ ಸರಬರಾಜು ಮಾಡಿದ ಇಬ್ಬರು ಸೋದರಿಯರ ಬಗ್ಗೆ ಬರೆಯುತ್ತಾರೆ. ಅವರಲ್ಲಿ ಒಬ್ಬಳು ಅವರ ಗುಂಡಿಗೆ ಆಹುತಿಯಾಗುತ್ತಾಳೆ. ಮತ್ತೊಬ್ಬಳನ್ನು ಸೆರೆ ಹಿಡಿದು ಚೀನಾದ ಸೈನಿಕ ಅಧಿಕಾರಿ ಮದ್ದುಗುಂಡು ದಾಸ್ತಾನು ಇಟ್ಟ ಸ್ಥಳ ತೋರಿಸು ಎಂದು ಶಿಖರಗಳ ತುದಿಯಲ್ಲಿ ಕರೆದೊಯ್ಯುವಾಗ ಶಿಖರದಿಂದ ಅವನನ್ನೂ ಎಳದು ಕಣಿವೆಗೆ ಹಾರುತ್ತಾಳೆ. ಈ ಘಟಣೆಯ ಬಗ್ಗೆ ಇಂದಿರಾ ಹೆಗ್ಗಡೆಯವರು ಬರೆಯುತ್ತಾ ಆ ಸೈನಿಕನಿಗೆ ಮರೋತ್ತರ ಪ್ರಶಸ್ತಿ ಬಂತು. ಆದರೆ ಈ ಇಬ್ಬರು ಹೆಣ್ಣಮಕ್ಕಳ ಬಗ್ಗೆ ಸೈನ್ಯದ  ಇತಿಹಾಸದಲ್ಲಿ ದಾಖಲಾಗಿಲ್ಲ. ಮೌಖಿಕವಾಗಿ ಮಾತ್ರ ಉಳಿದು ಬಂದಿದೆ ಎಂದು ಬರೆಯುತ್ತಾರೆ.
ಹೀಗೆ ತಮಗೆ ದಕ್ಕಿದ ವಿಶಿಷ್ಟ ಅನುಭವಗಳನ್ನು ಬಹಳ ಸ್ವಾರಸ್ಯವಾಗಿ ವಿವರಿಸುತ್ತಾರೆ.
ನಾವು ಈ ಭಾಗಕ್ಕೆ ಹೋಗದೆ ಇದ್ದರೂ ಈ ಭಾಗದ ಪರಿಚಯವನ್ನು ಬಹಳ ಚೆನ್ನಾಗಿ  ಸಂಪೂರ್ಣ ಕೊಟ್ಟಿದ್ದಾರೆ ಎಂಬ ರೀತಿಯಲ್ಲಿ ಇಂದಿರಾ ಹೆಗ್ಗಡೆಯವರು ಈ ಕೃತಿಯಲ್ಲಿ ಬರೆದಿದ್ದಾರೆ
ಆ ಮೇಲೆ ಮಾತನಾಡಿದ ಇಂದಿರಾ ಹೆಗ್ಗಡೆಯವರು ತಾವು ತನಗಾದ ಆಘಾತದಿಂದ  ಚೇತರರಿಸಿ ಕೊಳ್ಳಲಾಗದೆ ಖಿನ್ನತೆಯಲ್ಲಿ  ಇದ್ದಾಗ ಬರವಣಿಗೆ ನಿಲ್ಲಿಸ ಬಾರದೆಂದು ಪದೇ ಪದೇ ತನ್ನನ್ನು ವಿಚಾರಿಸುತ್ತಿದ್ದ ಡಾ. ಬಿ. ಎ. ವಿವೇಕ ರೈ ಹಾಗೂ ತನ್ನ ಬರವಣಿಗೆ ನಿಲ್ಲಬಾರದು ಎಂದು ತನ್ನನ್ನು ಮತ್ತೆ ಹೊರ ಪ್ರಪಂಚಕ್ಕೆ ಎಳೆಯುತ್ತಾ  ಮಂಗಳೂರು ಪರಿಸರದಲ್ಲಿ ಸಾರ್ವಜನಿಕ ವೇದಿಕೆಗಳಲ್ಲಿ ತನ್ನನ್ನು ಭಾಗವಹಿಸುವಂತೆ ಮಾಡಿದ ಭಾಸ್ಕರ ರೈ ಕುಕ್ಕುವಳ್ಳಿಯವರನ್ನು ನೆನಸಿಕೊಂಡರು. ಬೆಂಗಳೂರಲ್ಲಿ ಡಾ. ವಿಜಯಾ ಅವರು ಬರವಣಿಗೆ ಮುಂದುವರಿಸಮ್ಮಾ ಎಂದಾಗ ತಾನು ಈ ಮೊದಲೇ ಬರೆದ ಕೃತಿ ರೂಪದ ಬರವಣಿಗೆಗಳು ಕೆಲವು ಇವೆ. ಅವು ಈಚೆ ಗೆ ಬರಲಿ. ಮುಂದಿನ ಬರವಣಿಗೆ ಆ ಮೆಲೆ ನೋಡೋಣ ಎಂದಾಗ ತನ್ನ ಬಳಗದ ಪ್ರಕಾಶಕರನ್ನು ಸಂಪರ್ಕಿಸಿ ಈ ಕೃತಿ ಹೊರ ಬರುವಂತೆ ಮಾಡಿದ ವಿಜಯಾ ಅವರಿಗೂ ಈ ಪ್ರವಾಸ ಕಥನವನ್ನು ಹೊರತಂದ ಐ.ಬಿ. ಎಚ್ ಪ್ರಕಾಶನದ ಸಂಜಯ ಅಡಿಗಾ ಅವರಿಗೂ ಕೃತಜ್ಞತೆಯನ್ನು ಸಲ್ಲಿಸಿದರು.
ಇಂದಿರಾ ಹೆಗ್ಗಡೆಯವರ ಮಾತಿನ ಅನಂತರ ಸುಮಾರು ಒಂದು ಗಂಟೆ ಸಂವಾದ ಕಾರ್ಯಕ್ರಮ ನಡೆಯಿತು. ಪುರುಷರು ಮಹಿಳೆಯರು ಎಲ್ಲರೂ ಕುತೂಹಲದಿಂದ ಇಂದಿರಾ ಹೆಗ್ಗಡೆಯವರ ಜೊತೆ  ಸಂವಾದ ನಡೆಸಿದರು.
ಅಧ್ಯಕ್ಷಸ್ಥಾನದಿಂದ ಮಾತನಾಡಿದ ಲೇಖಕಿಯರ ಸಂಘದ ಮತ್ತು ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ಡಾ, ವಸುಂದರಾ ಭೂಪತಿಯವರು ನಾವೆಲ್ಲಾ ಅದರಲ್ಲೂ ಮಹಿಳೆಯರು ಈ ಭಾಗಕ್ಕೆ ಪ್ರವಾಸ ಹೋಗಲೇ ಬೇಕು. ನನ್ನ ಮಗ ಒಂದುವರೆ ವರ್ಷದ ಮಗುವಾಗಿದ್ದಾಗ ನಾನೂ ಈ ಭಾಗಕ್ಕೆ ಹೋಗಿದ್ದೆ. ದೈವ ಭಕ್ತಳಲ್ಲ ವಾದರೂ ಕಾಮಾಖ್ಯ ದೇವಸ್ಥಾನ ನೋಡಬೇಕೆಂದು ಹೋದೆ. ಆ ದೇವಿಗೆ ಇರುವ ಮುಟ್ಟಿನ ಆಚರಣೆಯನ್ನು ಬಹಳ ಪವಿತ್ರ ಎಂದು ಅಲ್ಲಿ ಮಾಡುತ್ತಾರೆ. ಮತ್ತೇಕೆ ನಮ್ಮಲ್ಲಿ ಮುಟ್ಟಾಗುವ ಮಹಿಳೆಯನ್ನು ಅಸ್ಪೃಶ್ಯಳನ್ನಾಗಿಸುತ್ತಾರೆ ಎಂಬ ಚಿಂತನೆಯನ್ನು ಹರಿಯ ಬಿಟ್ಟರು. ಕೃತಿಯ ಬಗ್ಗೆ ಮಾತನಾಡುತ್ತಾ ಈ ಭಾಗದ ಜನರ ಬಗ್ಗೆ ಬಹಳ ಚೆನ್ನಾಗಿ ಈ ಕೃತಿಯಲ್ಲಿ ವಿವರಿಸಲಾಗಿದೆ ಎಂದರು. ಮುಂದೊಂದು ದಿನ ಈ ಕೃತಿಯ ಬಗ್ಗೆ ಸಂವಾದ  ಕಾರ್ಯಕ್ರಮ ಇಡೋಣ ಎಂದರು.

 ಡಾ. ಸರ್ವ ಮಂಗಳಾ ಅವರು ನಿರೂಪಿಸಿದರು. ಸಂಘದ ಉಪಾಧ್ಯಕ್ಷೆ ವನಮಾಲಾ ಅವರು ಸ್ವಾಗತಿಸಿದರು.
…ಸೌಜನ್ಯ : ಸುಜಾತಾ ಕೊಡ್ಮನ್

Wednesday, November 22, 2017

Sapta knneyru
ನನ್ನ ಪ್ರವಾಸ ಕಥನ ಓದುಗರ ಕೈ ಸೇರಲಿದೆ. ಮೈಸೂರು ಸಮ್ಮೇಳನದಲ್ಲಿ ಮಾರಾಟವಾಗಲಿದೆ ಎಂದು ಐ.ಬಿ ಎಚ್ ನ ಸಂಜಯ ಅಡಿಗರು ದೂರವಾಣಿ ಮಾಡಿದಾಗ ನಾನು ಮಂಗಳೂರಿಗೆ ಪ್ರಯಾಣಿಸುತ್ತಿದ್ದೆ. ಪ್ರೊ. ವಿವೇಕ ರೈ ಅವರ ಮುನ್ನುಡಿಯೊಂದಿಗೆ ಈ ಕೃತಿ ಹೊರಬರುತ್ತಿದೆ. ಬರೆದು ಕೆವು ವರ್ಷಗಳಾಗಿದ್ದರೂ ಅದು ಸೂಕ್ತ ಪ್ರಕಾಶಕರಿಗಾಗಿ ಕಾಯುತ್ತಿತ್ತು.

ಓದುಗರ ಬೆಂಬಲ ಬೇಕಾಗಿದೆ. ಇನ್ನೂ ಎರಡು ಪುಸ್ತಕ ಗಳು ಹೊರ ಬರಲು ತವಕಿಸುತ್ತಿದೆ. ನಿಮ್ಮಗಳ ಬೆಂಬಲದ ನಿರೀಕ್ಷೆಯಲ್ಲಿ.

Munnudi
ಕನ್ನಡದಲ್ಲಿ ಪ್ರವಾಸಸಾಹಿತ್ಯಕ್ಕೆ ಸುದೀರ್ಘವಾದ ಪರಂಪರೆ ಇದೆ . ಸಾವಿರಾರು ಪುಟಗಳ ಹರಹಿನಲ್ಲಿ ವೈವಿಧ್ಯಮಯ ಪ್ರವಾಸಸಾಹಿತ್ಯ ಕನ್ನಡದಲ್ಲಿ ರಚನೆಯಾಗಿದೆ. ಕನ್ನಡ ಪ್ರವಾಸಸಾಹಿತ್ಯವನ್ನು ಕುರಿತೇ ಪಿ ಎಚ್ ಡಿ ಮಹಾಪ್ರಬಂಧಗಳು ನಿರ್ಮಾಣವಾಗಿವೆ. ಆಧುನಿಕ ಕನ್ನಡ ಸಾಹಿತ್ಯದಲ್ಲಿ ಪ್ರವಾಸಸಾಹಿತ್ಯವು ಒಂದು ಮುಖ್ಯ ಮತ್ತು ವಿಶಿಷ್ಟ ಪ್ರಕಾರವಾಗಿ ಗುರುತಿಸಲ್ಪಟ್ಟಿದೆ. ಪ್ರವಾಸಾಹಿತ್ಯವೆಂದರೆ ನೋಡಿದ ಸ್ಥಳಗಳ, ಭೇಟಿಯಾದ ವ್ಯಕ್ತಿಗಳ, ಕಲಿತುಕೊಂಡ ಸಂಗತಿಗಳ, ಹೊಸತಾಗಿ ಶೋಧಿಸಿದ ವಸ್ತು ವ್ಯಕ್ತಿ ವಿಚಾರಗಳ ಜ್ಞಾನಕೋಶವಾಗಿ ಅಪೂರ್ವ ದಾಖಲೆಯಾಗಿ ಮಹತ್ವದ್ದಾಗಿದೆ. ಅಷ್ಟೇ ಮುಖ್ಯವಾದುದು ಪ್ರವಾಸಮಾಡಿದ ವ್ಯಕ್ತಿಗಳ ಕಥನದ ಮಾದರಿ . ಪ್ರವಾಸಕಥನವೊಂದು ಯಾವಾಗ ಪ್ರವಾಸಸಾಹಿತ್ಯವಾಗುತ್ತದೆ ಎಂದರೆ, ಅದನ್ನು ಕಥಿಸಿವವರು ತಮ್ಮ ಅನುಭವಗಳಿಗೆ ವಿಶ್ಲೇಷಣೆಯ ದೃಷ್ಟಿಕೋನದ ಆಯಾಮವನ್ನು ತಮ್ಮ ಬರವಣಿಗೆಯಲ್ಲಿ ಒಡಮೂಡಿಸಿದಾಗ . ಆದ್ದರಿಂದಲೇ ಕನ್ನಡದ ಪ್ರವಾಸ ಸಾಹಿತ್ಯದಲ್ಲಿ ಅತ್ಯದ್ಭುತ ಚಿಂತನೆಯ ಕೆಲವು ಕೃತಿಗಳು ಸಿಗುವಂತೆಯೇ , ಕೇವಲ ವರದಿ ರೂಪದ ಸಾಮಾನ್ಯ ದರ್ಜೆಯ ಕೃತಿಗಳೂ ದೊಡ್ಡ ಸಂಖ್ಯೆಯಲ್ಲಿ ದೊರೆಯುತ್ತವೆ . ಪ್ರವಾಸದ ಸಂದರ್ಭದಲ್ಲಿ ಬೇರೆ ಬೇರೆ ಮೂಲಗಳಿಂದ ದೊರೆಯುವ ಮಾಹಿತಿಗಳನ್ನು ಅಂಕೆ ಸಂಖ್ಯೆಗಳ ಮತ್ತು ಅಂತೆಕಂತೆಗಳ ವರದಿಯ ರೂಪದಲ್ಲಿ ಕೊಟ್ಟಾಗ ಅದು ನಿಜವಾದ ಅರ್ಥದಲ್ಲಿ ಸಾಹಿತ್ಯದ ಗುಣಗಳನ್ನು ಹೊಂದುವುದಿಲ್ಲ. ಹೊಸ ಪರಿಸರವನ್ನು ಹೊಸ ಜೀವನಕ್ರಮವನ್ನು ಸಂಸ್ಕೃತಿಯ ಒಳನೋಟಗಳಿಂದ ನೋಡಿದಾಗ ಮತ್ತು ಅವುಗಳ ಮೂಲಕ ಹೊಸ ಚಿಂತನೆಗಳನ್ನು ಹುಟ್ಟುಹಾಕಿದಾಗ ಪ್ರವಾಸಸಾಹಿತ್ಯ ಕೃತಿಯೊಂದು ಗಮನಾರ್ಹವಾಗುತ್ತದೆ .
ಲೇಖಕಿ ಡಾ . ಇಂದಿರಾ ಹೆಗ್ಗಡೆಯವರು ತಮ್ಮ ತುಳುನಾಡಿನ ಸಂಸ್ಕೃತಿಯ ಅಧ್ಯಯನದ ಕೃತಿಗಳಿಂದ ಸಾಂಸ್ಕೃತಿಕ ಸಂಶೋಧನೆಯಲ್ಲಿ ವಿಶಿಷ್ಟ ಸಾಧನೆಯನ್ನು ಮಾಡಿದ್ದಾರೆ. ಈಗ ಅವರು ಈಶಾನ್ಯ ರಾಜ್ಯಗಳ ತಮ್ಮ ಪ್ರವಾಸಕಥನವನ್ನು 'ಸಪ್ತಕನ್ಯೆಯರ ಕನ್ಯೆಭೂಮಿಯಲ್ಲಿ ನಮ್ಮ ನಡೆ ' ಎನ್ನುವ ಹೆಸರಿನಲ್ಲಿ ಪ್ರಕಟಿಸಿದ್ದಾರೆ . ಇಂದಿರಾ ಹೆಗ್ಗಡೆ ತಮ್ಮ ಪತಿ ಮಾಜಿ ಸೈನಿಕ ಲೇಖಕ ಸಂಘಟಕ ಎಸ ಆರ್ ಹೆಗ್ಗಡೆಯವರ ಜೊತೆಗೆ ಇತರ ಆಪ್ತ ಸ್ನೇಹಿತರ ಸಂಗದಲ್ಲಿ ಈಶಾನ್ಯ ರಾಜ್ಯಗಳಾದ ಅಸ್ಸಾಮ್ , ಮಣಿಪುರ , ಮೇಘಾಲಯ , ನಾಗಾಲ್ಯಾಂಡ್, ತ್ರಿಪುರ , ಅರುಣಾಚಲ, ಮಿಝೋರಾಮ್ ಮತ್ತು ಸಿಕ್ಕಿಂ ರಾಜ್ಯಗಳಳ್ಳಿ ಮಾಡಿದ ಪ್ರವಾಸಗಳ ಕಥನವು ಈ ಕೃತಿಯಲ್ಲಿ ಸಮ್ಮಿಲನಗೊಂಡಿದೆ .
ಇಂದಿರಾ ಹೆಗ್ಗಡೆಯವರ ಪ್ರವಾಸಕಥನದ ಕೆಲವು ವೈಶಿಷ್ಟ್ಯಗಳೆಂದರೆ ಅವರ ಶೈಕ್ಷಣಿಕ ಪೂರ್ವಸಿದ್ಧತೆ, ಪ್ರವಾಸದ ಸಂದರ್ಭದಲ್ಲಿ ಜನಸಾಮಾನ್ಯರಿಂದ ಮಾಹಿತಿ ಸಂಗ್ರಹ, ಸಾಂಸ್ಕೃತಿಕ ಕಣ್ಣಿನಿಂದ ಸ್ಥಳ ಆಚಾರವಿಚಾರಗಳ ಅವಲೋಕನ, ಮಹಿಳಾಪರವಾದ ನೋಟ, ತನ್ನ ಅನುಭವದ ತುಳು ಸಂಸ್ಕೃತಿಯ ಜೊತೆಗೆ ಮುಖಾಮುಖಿಯಾಗಿ ಇರಿಸಿ ನೋಡುವ ತುಲನೆಯ ದೃಷ್ಟಿಕೋನ. ಇವುಗಳ ಜೊತೆಗೆ ಈಶಾನ್ಯ ರಾಜ್ಯಗಳ ಅನೇಕ ಬುಡಕಟ್ಟುಗಳ ಜೀವನಪದ್ಧತಿಯ ಕುರಿತ ವಿವರವಾದ ವಿಶ್ಲೇಷಣೆಗಳು ಇಲ್ಲಿ ದೊರೆಯುತ್ತವೆ. ನಿಸರ್ಗದ ಸೊಬಗನ್ನು ಕಂಡು ಭಾವಪರವಶರಾಗುವ , ಜನರ ಜೀವಪರ ಬದುಕನ್ನು ಕೊಂಡಾಡುವ, ಮಹಿಳೆಯ ಸಾಹಸಗಾಥೆಗಳನ್ನು ಮುನ್ನೆಲೆಗೆ ತರುವ ಅನೇಕ ಪ್ರಸಂಗಗಳು ಈ ಪ್ರವಾಸಕಥನದ ಕೆಲವು ತೋರುಗಂಬಗಳು .
'ಯೋನಿ ಭೂಮಿಯಲ್ಲಿ ನಡೆದ ಹೆಜ್ಜೆಗುರುತು ' ಎಂದು ಆರಂಭವಾಗುವ ಭಾಗದಲ್ಲಿಯೇ ಈ ಇಡೀ ಗ್ರಂಥದ ಧೋರಣೆಯ ಹಿನ್ನೆಲೆ ಸ್ಪಷ್ಟವಾಗುತ್ತದೆ . ಹೆಣ್ಣಿನ ನೆಲೆಯಿಂದ ನೆಲಗಳನ್ನು ಪರಿಭಾವಿಸುವ ನಿಲುವು ಇಲ್ಲಿ ಸ್ಪಷ್ಟವಾಗುತ್ತದೆ. ಬುಡಕಟ್ಟಿನ ಜನರು ಹೊರನೋಟಕ್ಕೆ ಬೇರೆ ಬೇರೆ ಧರ್ಮಗಳನ್ನು ಒಪ್ಪಿಕೊಂಡಿದ್ದರೂ, ನಿಜದ ನೆಲೆಯಲ್ಲಿ ಅವರೆಲ್ಲರೂ ಅಪ್ಪಿಕೊಂಡಿರುವುದು ತಮ್ಮ ಮೂಲ ಬುಡಕಟ್ಟು ಧರ್ಮವನ್ನೇ ಎನ್ನುವ ಸತ್ಯದ ವಿವರಣೆ ಇಲ್ಲಿ ಸಿಗುತ್ತದೆ. ಈ ಆಶಯವು ಮುಂದೆ ಎಲ್ಲಾ ರಾಜ್ಯಗಳ ಪ್ರವಾಸದ ವಿವರಣೆಗಳಲ್ಲಿ ಪ್ರಾದೇಶಿಕ ನೆಲೆಯಲ್ಲಿ ಅನುರಣನಗೊಳ್ಳುತ್ತದೆ . ಜಾನಪದ ಆರಾಧನಾ ಸಂಪ್ರದಾಯಗಳನ್ನು ಕುರಿತು ಅನೇಕ ಕಡೆ ಅಧ್ಯಯನಾತ್ಮಕ ಮತ್ತು ತುಲನೆಯ ವಿವರಣೆಗಳಿವೆ . ಕಾಮಕ್ಯ ಕ್ಷೇತ್ರದ ಅವೈದಿಕ ವಿವರಣೆ ಮತ್ತು ತುಳುನಾಡಿನ ಜುಮಾದಿ ದೈವದ ಜೊತೆಗಿನ ಹೋಲಿಕೆ ಅಂತಹ ಒಂದು ನಿದರ್ಶನ . ಹಾಗೆಯೇ ವೈದಿಕ ಮತ್ತು ಅವೈದಿಕ ಧರ್ಮಗಳ ಪರಸ್ಪರ ಸಂಕರದ ಚರ್ಚೆ ಕೂಡಾ ಅನೇಕ ಕಡೆ ಬರುತ್ತದೆ .ಶೈವ , ಶಾಕ್ತ , ನಾಥ , ಬೌದ್ಧ ಧಾರ್ಮಿಕ ಪಂಥಗಳ ಮೂಲಕ ಸ್ಥಳೀಯ ಧಾರ್ಮಿಕ ಕೇಂದ್ರಗಳ ವ್ಯಾಖ್ಯಾನ ಸಿಗುತ್ತದೆ . ಮತಪಂಥಗಳ ಹೋಲಿಕೆಯ ವಿವರಣೆಗಳು ಈ ಕೃತಿಯ ಉದ್ದಕ್ಕೂ ದೊರೆಯುತ್ತವೆ .
ಭಾರತ ಮತ್ತು ಬಾಂಗ್ಲಾ , ಭಾರತ ಮತ್ತು ಚೀನಾ ದೇಶಗಳ ಗಡಿಗಳ ನಡುವಿನ ಅಡಚಣೆ ಮತ್ತು ಆತಂಕ ಗಳ ನೋಟಗಳು ಮತ್ತು ಕಥನಗಳು ತ್ರಿಪುರ ಮತ್ತು ಸಿಕ್ಕಿಂರಾಜ್ಯಗಳ ಪ್ರವಾಸದ ಭಾಗಗಳಲ್ಲಿ ವಿಶೇಷವಾಗಿ ದೊರೆಯುತ್ತವೆ. ದೇಶಗಳ ಗಡಿ ಎನ್ನುವುದು ಒಂದೇ ಸಂಸ್ಕೃತಿಯ ಜನರನ್ನು ರಾಜಕೀಯವಾಗಿ ಬೇರ್ಪಡಿಸುವ ಹುನ್ನಾರ ಎನ್ನುವ ಹೊಳಹು ಇಲ್ಲಿ ಪ್ರಕಟವಾಗಿದೆ. ಯುದ್ಧಗಳು ಮತ್ತು ಯುದ್ಧಸ್ಮಾರಕಗಳ ನೆನಪುಗಳನ್ನು ಆ ಸ್ಥಳಗಳ ಮತ್ತು ಸ್ಮಾರಕಗಳ ಸಂದರ್ಶನದ ಮೂಲಕ ಇಲ್ಲಿ ಮತ್ತೆ ಕಟ್ಟಿಕೊಡಲಾಗಿದೆ. ನಾಗಾಲ್ಯಾಂಡ್ ಮತ್ತು ಅರುಣಾಚಲ ರಾಜ್ಯಗಳ ಯುದ್ಧ ಸ್ಮಾರಕಗಳ ಚಿತ್ರಣ ಈ ರೀತಿಯಿಂದ ಗಮನ ಸೆಳೆಯುತ್ತದೆ. ತವಾಂಗ್ ನ ಬಳಿಯ ಯುದ್ಧ ಸ್ಮಾರಕದ ವಿವರಣೆ ಮನೋಜ್ಞವಾಗಿದೆ. ಜಸ್ವಂತ್ ಸಿಂಗ್ ರಾವತ್ ನ ಸಾಹಸಗಾಥೆ ರೋಮಾಂಚಕವಾಗಿದೆ; ಸಾಹಸಿ ಯೋಧನ ಅತ್ಯುನ್ನತ ಸಾಧನೆಯ ಹೆಗ್ಗುರುತು ಆಗಿದೆ .
ಇಂದಿರಾ ಹೆಗ್ಗಡೆಯವರ ಈ ಪ್ರವಾಸಕಥನದಲ್ಲಿ ಎಲ್ಲ ರಾಜ್ಯಗಳ ತಿರುಗಾಟದ ಸಂದರ್ಭಗಳಲ್ಲಿ ಮಹಿಳೆಯರ ಬದುಕು ಮತ್ತು ಆತ್ಮವಿಶ್ವಾಸದ ಅನೇಕ ಸೂಕ್ಷ್ಮ ಸಂಗತಿಗಳು ದಾಖಲಾಗಿವೆ. ಮಣಿಪುರದ ಮಹಿಳೆಯರ ಮಾರುಕಟ್ಟೆಯ ವಿವರಣೆ ಅಂತಹ ಒಂದು ನಿದರ್ಶನ. ಸೂಕ್ಷ್ಮ ಮನಸ್ಸಿನ ಹೆಣ್ಣು ತನ್ನ ಪ್ರವಾಸದಲ್ಲಿ ಹೆಣ್ಣಿನ ದೃಷ್ಟಿಯಿಂದ ನೋಡಿದಾಗ ಹೇಗೆ ಹೊಸಸಂಗತಿಗಳನ್ನು ಕಾಣಲು ಸಾಧ್ಯ ಎಂಬುದನ್ನು ಇಲ್ಲಿ ಗಮನಿಸಬಹುದು . .
ಹೀಗೆ ಏಳು ಸಣ್ಣ ರಾಜ್ಯಗಳ ಸಣ್ಣ ಪ್ರವಾಸದ ಅನುಭವದ ಈ ಕಿರು ಪ್ರವಾಸ ಕಥನದಲ್ಲಿ ಸಾಂಸ್ಕೃತಿಕ ಸಂಶೋಧಕಿ ಡಾ. ಇಂದಿರಾ ಹೆಗ್ಗಡೆಯವರು ಅನೇಕ ಸಣ್ಣ ಸಣ್ಣ ಸಂಗತಿಗಳ ಕಡೆಗೆ ತಮ್ಮ ಕಣ್ಣು ಹಾಯಿಸಿ , ಸಾಮಾನ್ಯ ನೋಟಕ್ಕೆ ದೊರೆಯದ ಸಾಂಸ್ಕೃತಿಕ ಸಂಗತಿಗಳಿಗೆ ಮರುಜೀವ ತುಂಬಿದ್ದಾರೆ ; ತಮ್ಮ ಅನುಭವದ ಅಧ್ಯಯನದ ತುಳುವ ಸಂಸ್ಕೃತಿಯ ಜೊತೆಗೆ ಮರುಜೋಡಿಸಿದ್ದಾರೆ . ಅವರ ಪತಿ ಮಾಜಿ ಸೈನಿಕ ಎಸ ಆರ್ ಹೆಗ್ಗಡೆಯವರ ಧೈರ್ಯ ಮತ್ತು ಸಾಹಸದ ಬದುಕಿನ ಪ್ರವಾಸದ ನೆನಪಿನ ಸ್ಮಾರಕವಾಗಿ ಈ ಪ್ರವಾಸಕಥನವನ್ನು ಕಟ್ಟಿಕೊಟ್ಟಿದ್ದಾರೆ . ಇಂತಹ ನಡೆನುಡಿಯ ಸ್ಮಾರಕದ ರಚನೆಯ ಸಾಹಸ ಮತ್ತು ವಿಶ್ವಾಸಕ್ಕಾಗಿ ಡಾ . ಇಂದಿರಾ ಹೆಗ್ಗಡೆಯವರಿಗೆ ಅಭಿನಂದನೆಗಳು .

ಡಾ. ಬಿ . ಎ . ವಿವೇಕ ರೈ
ಮಂಗಳೂರು