ಡಾ:
ಇಂದಿರಾ ಹೆಗ್ಗಡೆ
ನಾನು
ಈ ಬಾರಿ ಚೌತಿಗೆ ಅಗೊಳಿ ಮಂಞಣ್ಣ ಹುಟ್ಟು ಮನೆ ಚೇಳಾರು ಗುತ್ತಿನಲ್ಲಿ ಇದ್ದೆ. ಅಗೊಳಿ ಮಂಞಣ್ಣನಿಗೆ
ಅದು ಹುಟ್ಟು ಮನೆಯಾದರೆ ನಾನು ಸೇರಿದ ಮನೆ. ನನ್ನ ಗಂಡ ಹುಟ್ಟಿದ್ದೂ ಅವನದೇ ಮನೆಯಲ್ಲಿ. ಅವನು ಕುಡಿದ
ಬಾವಿಯ ನೀರು ಕುಡಿದು ಅವನು ಓಡಾಡಿದ ನೆಲದಲ್ಲಿ ಓಡಾಡಿದವ, ಅವನು ವಾಸವಾಗಿದ್ದ ಬೈಹುಲ್ಲಿನ ಮಾಡಿನ
ಮನೆಯ ಮಣ್ಣಿನ ನೆಲದಲ್ಲಿ ಮಲಗಿದ್ದವ. ಸರ್ಪಗಳು ಮನೆಯ ಮಹಿಳೆಯರೊಂದಿಗೆ ಸರಸವಾಡಿದ್ದಂತೆ ಅಗೊಳಿ ಮಂಞಣ್ಣನ
ಜೊತೆಯೂ ಆಡಿದ್ದಿರಬಹುದು. \ಹೆಂಗುಸರು ನೀರು ತುಂಬಿದ ಕಡ್ಯವನ್ನು ಸೊಂಟದಲ್ಲಿ ಹಿಡಿದು ಹೋಗುವಾಗ ಮನೆಯ
ಪಕ್ಕಾಸಿಗೆ ಬಾಲವನ್ನು ಬಿಗಿದು ಬಿಚ್ಚಿದ ಹೆಡೆಯನ್ನು ಜೋಕಾಲಿಯಾಡಿಸಿ ಮಹಿಳೆಯರ ಮಂಡೆಗೆ ಬಡಿಯುತ್ತಿದ್ದ ಪೋಕರಿ ಸರ್ಪಗಳ ಮನೆ ಅದು. ಮಂಜಣ್ಣನ ಕಾಲದ ಮನೆ ಮಣ್ಣಿನ ಗೋಡೆಯ ಮುಳಿ ಹುಲ್ಲಿನ ಮನೆ. ಹಾವು ಬಡಿದಾಗ ನೆತ್ತಿ ಪೂಸಿ, ತಿರುಗಿ ತಲೆ ಎತ್ತಿ ನೋಡಿ ಬೆದರಿ ಚೀರಿ ಓಡುವ ಮಹಿಳೆಯರನ್ನು ಕಂಡು ತಣ್ಣನೆ
ಸರಿದು ಹೋಗುತ್ತಿದ್ದ ಸರ್ಪ. ಆದರೂ ನೀರು ತುಂಬಿದ
ಕಡ್ಯ ದೊಪ್ಪನೆ ನೆಲಕ್ಕೆ ಅಪ್ಪಳಿಸುತ್ತಿತ್ತು. ನೀರಿನೊಂದಿಗೆ
ನೆಲಕ್ಕೆ ಅಪ್ಪಳಿಸುವ ಕಡ್ಯ ಚೂರು ಚೂರಾಗಿ, ಮಣ್ಣಿನ ನೆಲೆದ ಮೇಲೆ ಮೆಲ್ಲಮೆಲ್ಲನೆ ಸರಿವ ನೀರು ಸರ್ಪನಡೆ
/ನಾಗ ಬೀದಿಯನ್ನು ನೆನಪಿಸುತ್ತಿತ್ತು….ನಾಗಹೆಡೆಯಿಂದಬಡಿಸಿಕೊಂಡವರಿಗೆ ಅಂದು ಮೈ ಬೆವರಿತ್ತು. ಇವೆಲ್ಲ ಈಗಿನ ನೆನಪಿಗೆ ಮೋಜಿನಾಟ! ಇವನ್ನೆಲ್ಲ ನೋಡಿ ಸರ್ಪ ಸಂತಾನ
ಆಗ ನಗುತ್ತಿದ್ದರಬಹುದು. ಹೆಡೆ ಬಿಚ್ಚುವ ಸರ್ಪ ಅಗೊಳಿ ಮಂಞಣ್ಣನಿಗೂ ಸತಾಯಿಸಿರಬಹುದು. ಅಗೊಳಿ ಮಂಞಣ್ಣ ಹಂದಿಯನ್ನು ಸೊಪ್ಪಿನ ಕಟ್ಟದಲ್ಲಿ ಕಟ್ಟಿ
ತಂದಷ್ಟು ಸುಲಭ ಅಲ್ಲ ಈ ಸರ್ಪ ಸಂತಾನದೊಂದಿಗೆ ಸರಸವಾಡುವುದು.
ಅದು ಯಾರಿಗೂ ಕಚ್ಚಿದ್ದ ಮೌಖಿಕ ದಾಖಲೆಯೂ ಇಲ್ಲ ಆ ಮನೆಯಲ್ಲಿ ಎಂದು, ಮನೆಯವರು ಎಷ್ಟೇ ಹೇಳಿದರೂ ಆಗಂತುಕರು
ಅಲ್ಲಿ ರಾತ್ರಿ ಮಲಗುವ ಧೈರ್ಯ ಮಾಡುತ್ತಿರಲಿಲ್ಲ. ಆ ಮನೆಯ ಹೆಣ್ಣನ್ನು ಮದುವೆಯಾದ ತಪ್ಪಿಗೆ ಆ ಮನೆಯ ಮಣ್ಣಿನ
ಮನೆಯಲ್ಲಿ ಮಲಗಲೇ ಬೇಕಾದ ಅನಿವಾರ್ಯತೆ ಬಂದಾಗ ರಾತ್ರಿ
ಇಬ್ಬರ ಮಧ್ಯೆ ಮೂರನೆಯವನಾ(ಳಾ)ಗಿ ಬಂದ ಸರ್ಪ ತನ್ನ ತಣ್ಣನೆಯ ಮೈ ಸೋಕಿಸಿದಾಗ ದಿಗ್ಗನೆದ್ದು ಕೂತ ಪುರುಷನ ನೋಟವನ್ನು ಎದುರಿಸಲಾಗದೆ ಸರ್ಪ
ಸರಿದುದು ಸತ್ಯ. ಅದು ನಾಚಿತ್ತೋ ಇಲ್ಲವೋ ಗೊತ್ತಿಲ್ಲ. ಇದು ಜಾನಪದ ಕಥೆಯಲ್ಲ. ಚೇಳಾರು ಗುತ್ತಿನಲ್ಲಿ
ನಡೆದಿರುವಂತಹುದು. ಆ ದಿನಗಳಲ್ಲಿ ಅಂತರ್ ಜಲ ಮೇಲ್ಮಟ್ಟದಲ್ಲಿ
ಇತ್ತು. ಸಣ್ಣ ನಿರಾವರಿಯನ್ನು ಹಳ್ಳಿಯ ಜನರೇ ವ್ಯವಸ್ಥೆಗೊಳಿಸುತ್ತಿದ್ದರು. ಸಹಕಾರ ಪದ್ಧತಿ ಜಾರಿಯಲ್ಲಿತ್ತು.
ಉಳ್ಳವನು ವಸ್ತು, ಇಲ್ಲದವನು ಮಾನವ ಸಂಪನ್ಮೂಲವನ್ನು ನೀಡುವ ಸಹಕಾರ ಪದ್ಧತಿ ಜಾರಿಯಲ್ಲಿತ್ತು.
ನಾನು
ಮದುವೆಯಾಗಿ ಚೇಳಾರಿಗೆ ಬಂದುದು 1969ರಲ್ಲಿ. ಚೇಳಾರು ಅಂದರೆ ನೀರಿನ ಸೆಲೆ ಇದ್ದ ಕನ್ಯೆ ಭೂಮಿ ಆಗಿತ್ತು
ಇಲ್ಲಿಯ ಮಜಲು ಗದ್ದೆ ನೋಡಿ,”ಅಯ್ಯಾ ನನ್ನ ಕೈಗೆ ಇಂತಹ ಗದ್ದೆ ಕೊಟ್ಟರೆ ಬಂಗಾರದ ತೆನೆ ತೆಗೆಯುತ್ತಿದ್ದೆ”
ಎಂದು ನನ್ನ ತಂದೆ ಅಂದಿದ್ದು ನನಗೆ ಕಿವಿಯಲ್ಲಿ ಅನುರಣಿಸುತ್ತಿದೆ.
ಒಂದು ಮೇ ತಿಂಗಳು. ರಾತ್ರಿ ಕುಂಭದ್ರೋಣ ಮಳೆ. ಬೆಳಗಾಗುವ ಮೊದಲೇ ಮೈಗೆ ತಣ್ಣನೆ ಸೋಂಕಿದಾಗ ನಾನು ಬೆಚ್ಚಿ ಕಿರುಚಿ ನೋಡಿದಾಗ ನನ್ನ ಚಾಪೆಯಲ್ಲಿ ಪುರಿಯೊಲು ಮೀನುಗಳ ದಂಡೇ ಬಂದಿತ್ತು ನನ್ನ ಜೊತೆ ರಾತ್ರಿ ಕಲೆಯಲು…..ಮೊದಲ ಮಳೆಗೆ ‘ಉಬರ್ ಮಿತಾವು’ ಮೀನುಗಳು ಇವು. ಮಜಲು ಗದ್ದೆಯ ನಾಲ್ಕಡಿ ಎತ್ತರಕ್ಕೆ ಜಿಗಿದು ಅಲ್ಲಿ ಉರುಳುತ್ತಾ ಹೊರಳುತ್ತಾ ನಾಲ್ಕು ಮೆಟ್ಟಲ ಮೇಲೆ ಮಡಸ್ತನ ಹಾಕಿ ಚಾವಡಿ ದಾಟಿ, ಅಂತರ ,ಅಡುಗೆ ಕೋಣೆಯ ಮೂಲಕ ನಮ್ಮ ಮಲಗುವ ಕೋಣೆ ಹುಡುಕಿ ಬಂದಿತ್ತು….
ಕಾಲದ
ಹರಿವು ನೀರಿನ ಹರಿವನ್ನು ತಡೆದ ಆಧುನಿಕ ದಿನದಲ್ಲಿ ಮೊದಲ ಮಳೆಗೆ ಮಜಲು ಗದ್ದೆಯನ್ನು ಮಣಿಸಲು ಸಾಧ್ಯವಾಗದು.
No comments:
Post a Comment