ಕರ್ನಾಟಕದ ಕರಾವಳಿ ಭಾಗವಾದ ಐತಿಹಾಸಿಕ ತುಳುರಾಜ್ಯ ಕಾಸರಗೋಡಿನಿಂದ ಉತ್ತರಕನ್ನಡದವರೆಗೆ ಹಬ್ಬಿತ್ತು ಎಂಬ ಬಗ್ಗೆ ಐತಿಹಾಸಿಕ ದಾಖಲೆಗಳು ದೊರೆಯುತ್ತವೆ.
ತುಳು ರಾಜ್ಯದ ರಾಜಧಾನಿ ಬಾರ್ಕೂರು ಆಗಿತ್ತು. ಆರಂಭದಲ್ಲಿ ಆಳುಪರು, ಅನಂತರ ಹೊಯ್ಸಳರು, ವಿಜಯನಗರದ ಅರಸರು ಬಾರ್ಕೂರಿನಿಂದ ಆಳುತ್ತಿದ್ದರು. ಪಾಡ್ದನ ಕಥನ ಗೀತಗಳಲ್ಲೂ ಬಾರ್ಕೂರು ತುಳುರಾಜ್ಯದ ರಾಜಧಾನಿ ಆಗಿದ್ದ ಬಗ್ಗೆ ಮಾಹಿತಿ ದೊರಕುತ್ತದೆ. ಬಾರ್ಕೂರು ಐತಿಹಾಸಿಕ ಪಟ್ಟಣ.
ಕರ್ನಾಟಕದ ಕರಾವಳಿ ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ 17ರಲ್ಲಿ ಬ್ರಹ್ಮಾವರ ಬಸ್ ನಿಲ್ದಾಣದಿಂದ 3 ಕಿಲೋಮೀಟರ್ ಉತ್ತರಕ್ಕೆ ಸೀತಾನದಿಯ ಆಚೆ ದಡದಲ್ಲಿ ಬಾರ್ಕೂರು ಪಟ್ಟಣ ಇದೆ.
ಬಾರ್ಕೂರಿನಲ್ಲಿ ಒಟ್ಟು 365 ದೇವಸ್ಥಾನಗಳಿವೆ. ಅಂದಿನ ಅರಸರು ದಿನಕ್ಕೊಂದು ದೇವಸ್ಥಾನಕ್ಕೆ ಭೇಟಿ
ನೀಡುತ್ತಿದ್ದರೆನ್ನುವುದು ಪ್ರತೀತಿ. ಬಾರ್ಕೂರು ಸಂಸ್ಥಾನಕ್ಕೆ ಸುಮಾರು 8 ಕೇರಿಗಳಿವೆ.
ಬಾರ್ಕೂರು ಪಂಚಲಿಂಗೇಶ್ವರ ದೇವಸ್ಥಾನದ ಹಿಂಭಾಗÀದಲ್ಲಿ ಸಿಂಹಾಸನ ಗುಡ್ಡೆ ಇದೆ. ಸಿಂಹಾಸನ ಗುಡ್ಡೆಯಲ್ಲಿ ತುಳುನಾಡಿನ ಆರಂಭದ ಅರಸರಾದ ಆಳುಪರ ಅರಮನೆ ಇದ್ದ ಮೈದಾನ ಇದೆ. ಅರಮನೆ ಮೈದಾನದ ಬಳಿ ರಾಜರಾಜೇಶ್ವರಿಯ ಗುಡಿ ಇದೆ. ಗುಡಿಯ ಬಳಿ ನಿತ್ಯ ಪೂಜೆ ನಡೆಯುವ ಶಮೀ ವೃಕ್ಷ ಇದೆ. ಗುಡಿಯ ಮುಂದೆ ಬಲಿ ಕಂಬ ಮತ್ತು ಬಲಿ ಕಟ್ಟೆ ಇದೆ. ಬಾರ್ಕೂರಿನ 365 ದೇವಸ್ಥಾನಗಳಿಂದ ರಾಜರಾಜೇಶ್ವರಿ ದೇವರಿಗೆ ಕಪ್ಪ ಕಾಣಿಕೆ ಬರುವ ಪದ್ಧತಿ ಇದೆ.
ಗುಡಿಯಲ್ಲಿ ರಾಜ ರಾಜೇಶ್ವರಿ ಪ್ರತಿಮೆ ಇದೆ. ಪ್ರತಿಮೆಯ ಪೀಠದಲ್ಲಿ ಶ್ರೀ ಚಕ್ರ ಪ್ರತಿಷ್ಟಾಪಿಸಲಾಗಿದೆ. ಪ್ರತಿಮೆಯ ಮುಂದೆ ಗರ್ಭ ಗುಡಿಯಲ್ಲಿಯೇ ಸುಮಾರು 8ಅಡಿ ಚ್ಚಚೌಕದ ಕಟ್ಟೆ ನೆಲದಿಂದ ಸುಮಾರು ಒಂದುವರೆ ಅಡಿ ಎತ್ತರಕ್ಕೆ ಎದ್ದಿದೆ. ಇದನ್ನು ‘ವಿಕ್ರಮಾದಿತ್ಯನ ಸಿಂಹಾಸನ ಕಟ್ಟೆ’ ಎನ್ನುತ್ತಾರೆ. ಅದರ ಮೇಲೆ ಪುಟ್ಟ ಪಾಣಿ ಪೀಠ ಮತ್ತು ಲಿಂಗ ಇದೆ. ಯಾವ ವಿಕ್ರಮಾದಿತ್ಯ ಈತ ಎಂಬ ಬಗ್ಗೆ ಗುರುರಾಜ ಭಟ್ಟರು ಚರ್ಚಿಸುತ್ತಾರೆ. ಈ `ಸಿಂಹಾಸನ’ದಿಂದಾಗಿ ಈ ಕ್ಷೇತ್ರಕ್ಕೆ ‘ಸಿಂಹಾಸನ ಗುಡ್ಡೆ’ ಎಂಬ ಹೆಸರಾಯಿತು ಎನ್ನುವ ಮಾಹಿತಿಯನ್ನು ಇಲ್ಲಿಯ ಅರ್ಚಕ ಗಣಪಯ್ಯ ಅಡಿಗರು ನೀಡಿದ್ದರು. ಅಡಿಗರ ಪ್ರಕಾರ “ವಿಕ್ರಮಾದಿತ್ಯನ ಕಾಲಾನಂತರ ಭೂಗತ ಆದ ಆತನ ಸಿಂಹಾಸನ ಕುಂಡೋದರ ಭೂತದ ಕೃಪೆಯಿಂದ ಭೂತಾಳ ಪಾಂಡ್ಯನೆಗೆ ಸಿಗುತ್ತದೆ”
ಇವತ್ತಿಗೂ ನವರಾತ್ರಿಯ ದಶಮಿ ದಿನ ಊರವರು ಸೇರಿ ಶಮಿ ಪೂಜೆ ಮಾಡಿ ದಾನ ಧರ್ಮಾದಿಗಳನ್ನು ಮಾಡುವ ಪದ್ಧತಿ ಇದೆ. ಈ ಕ್ಷೇತ್ರÀ ತ್ಯಾಂಪಾಡಿ ಹನೆಹಳ್ಳಿ ಅರ್ಥಾತ್ ಪನ್ನೀರ್ಪಳ್ಳಿ (ಕ್ರಿ.ಶ. 12ನೆಯ ಶಮಾನದ ಕವಿ ಆಳುಪೇಂದ್ರನ ಕಾಲದಲ್ಲಿ ಪಾಂಡ್ಯ ಮಹಾದೇವಿಯು ಪನ್ನೀರ್ಪಳ್ಳಿಯನ್ನು ಆಳುತ್ತಿದ್ದಳು.) ಮಾಗಣೆಯ ಅಧಿಕಾರ ವ್ಯಾಪ್ತಿಗೆ ಬರುತ್ತದೆ. ದಶಮಿಯಂದು ಹನೆಹಳ್ಳಿಯ ತ್ಯಾಂಪಾಡಿ ಮನೆಯ ಸೆಟ್ರು ಸಿಂಹಾಸನ ಗುಡ್ಡೆಗೆ ಬಂದು ಎಲ್ಲಾ ವ್ಯವಸ್ಥೆ ಮಾಡಬೇಕು. ಅರ್ಚಕ ಅಡಿಗರ ಪ್ರಕಾರ ‘`ಅಳಿಯ ಸಂತಾನ’ದವರೇ ಈ ಕಾರ್ಯಗಳನ್ನು ನಡೆಸಿ ಕೊಡಬೇಕು. ಚೌಟರಿಗೆ ಬಾರ್ಕೂರು ಮೂಲ. ಬಂಗರೂ ಸಿಂಹಾಸನ ಗುಡ್ಡೆಯ ಈ ಕ್ಷೇತ್ರಕ್ಕೆ ಬರಬೇಕಿತ್ತು. ಹೀಗೆ ಚೌಟರು, ಬಂಗರು, ಆಳುಪರು ಮುಂತಾದ ಊರಿನವರಿಗೆ ಗೌರವ ಸಂದಾಯ ಆಗುವ ಪದ್ಧತಿ ಇದೆ. ಓಲಗದಲ್ಲೂ ಇದೇ ಪದ್ಧತಿ. ಬಂದವರಿಗೆ ಊಳಿಗದವರು ಚಾಪೆ ಹಾಸಿ ಕೊಡಬೇಕು.’
ರಾಜ ರಾಜೇಶ್ವರಿ ಗುಡಿಯಲ್ಲಿ ತೂಗು ಹಾಕಿರುವ ಹಾಸಿಗೆ ಕೆಳಗಿಟ್ಟು ದಶಮಿ ದಿವಸ ಪಟ್ಟಾಭಿಷೇಕ (ರಾಜ ರಾಜೇಶ್ವರಿಗೆ?) ಮಾಡಬೇಕು. ತ್ಯಾಂಪಾಡಿ ಮನೆಯವರು ಪಟ್ಟಾಭಿಷೇಕ ವಿಧಿಯನ್ನು ನಡೆಸಿಕೊಡುವವರು.
ಹಿಂದೆ ತಾಲೂಕು ಆಫೀಸಲ್ಲಿ ಪಟ್ಟದ ಉಂಗುರ, ಪಟ್ಟದ ಕತ್ತಿ ಮತ್ತು ಈ ಹಾಸಿಗೆ ಇತ್ತಂತೆ. ಅದನ್ನು ಪಾಡ್ಯದ ದಿವಸ ಇಲ್ಲಿಗೆ ತಂದು ದಶಮಿಯ ಮರುದಿನ ತಾಲೂಕಿಗೆ ಮರಳಿ ಕೊಂಡು ಹೋಗುತ್ತಿದ್ದರಂತೆ. ಈಗ ಹಾಸಿಗೆಯನ್ನು ಗುಡಿಯಲ್ಲಿ ತೂಗು ಹಾಕಿ ಇಟ್ಟಿದ್ದಾರೆ. ಪಟ್ಟದ ಉಂಗುರ ಮತ್ತು ಪಟ್ಟದ ಕತ್ತಿ ಕಳೆದು ಹೋಗಿದೆ.
ದಶಮಿಯ ದಿನ ಎಲ್ಲಾ ದೇವಸ್ಥಾನಗಳಿಂದ ಕಪ್ಪಕಾಣಿಕೆ, ಫಲ ಹೊರೆಕಾಣಿಕೆಯನ್ನೂ ನೀಡಬೇಕು. ಬಾರ್ಕೂರಿನಲ್ಲಿ ಎಲ್ಲಿ ಏನು ನಡೆದರೂ ಆ ಪ್ರಯುಕ್ತ ಸಿಂಹಾಸನ ಗುಡ್ಡೆÉಯ ರಾಜರಾಜೇಶ್ವರಿಗೆ ಪ್ರಥಮವಾಗಿ ಪೂಜೆ ಆಗಬೇಕು. ಬಾರ್ಕೂರಿನ ಸೀಮೆ ದೇವರಾದ ಪಂಚಲಿಂಗ ರಥೋತ್ಸವ ಪ್ರಯುಕ್ತವೂ ಇಲ್ಲಿ ಮೊದಲ ಪೂಜೆ ನಡೆಯಬೇಕು. ಇದು ಪದ್ಧತಿ. (ಹೇಳಿದವರು : ಗಣಪಯ್ಯ ಅಡಿಗ ವ. 80 16-4-2011)
ಪಂಚಲಿಂಗೇಶ್ವರ ದೇವಸ್ಥಾನ ಸಿಂಹಾಸನ ಗುಡ್ಡೆಯಿಂದ 200 ಮೀಟರ್ ಆಗ್ನೇಯಕ್ಕೆ ಇದೆ. ಇನ್ನೂ ಆಗ್ನೇಯಕ್ಕೆ ಸುಮಾರು ಅರ್ಧ ಕಿಲೋ ಮೀಟರ್ ದೂರ ಹೋದರೆ ಹೊಯ್ಸಳ, ವಿಜಯನಗರ ಕಾಲದ ಅರಮನೆ ಮೈದಾನ ಸಿಗುತ್ತದೆ. ಈ ಮೈದಾನದ ಸಮೀಪ ವಿಶಾಲ ಬಯಲು ಭೂಮಿ ಇದೆ. ಕುಂಡೋದರ ಗುಡಿ ಇದೆ.
ಅಳಿಯ ಸಂತಾನ ಪದ್ಧತಿ ಅಥವಾ ಮಾತೃವಂಶೀಯ ಪದ್ಧತಿ:
ಅಳಿಯ ಸಂತಾನ ಸಾಮಾಜಿಕ ಪದ್ಧತಿ ಜಾರಿ ಇದ್ದ ರಾಜ್ಯ ಐತಿಹಾಸಿಕ ತುಳುನಾಡು ಮತ್ತು ಕೇರಳ.
ಈಗಲೂ ಅಳಿಯ ಸಂತಾನ ಪದ್ಧತಿ ನಾಶವಾಗಿಲ್ಲ ರಾಜಕೀಯ ಮತ್ತು ಆಸ್ತಿಯಧಿಕಾರ ತಂದೆಯಿಂದ ಮಗನಿಗೆ ಹೋಗಲು ಕಾನೂನಿನಲ್ಲಿ ಅವಕಾಶ ಕಲ್ಪಿಸಲಾಗಿದ್ದರೂ ಇನ್ನಿತರ ಸಾಮಾಜಿಕ, ಕೌಟುಂಬಿಕ ಮತ್ತು ಧಾರ್ಮಿಕ ಅಧಿಕಾರಗಳು ಮಾತೃವಂಶೀಯ ಅಳಿಯ ಸಂತಾನ ಪದ್ಧತಿಯಲ್ಲಿ ಮುಂದುವರಿಯುತ್ತಿದೆ.
ತುಳುನಾಡಿನಲ್ಲಿ ಮಾತೃವಂಶೀಯ ಅಳಿಯ ಸಂತಾನ ಪದ್ಧತಿಯನ್ನು ಜಾರಿಗೆ ತಂದವ ಭೂತಾಳ ಪಾಂಡ್ಯ ಎಂಬ ಕಥೆ ಗ್ರಾಮ ಪದ್ಧತಿಯಲ್ಲಿ ದಾಖಲಾಗಿದೆ. ಆದರೆ ಇದೇ ಆಶಯವನ್ನು ಹೊಂದಿದ್ದ ಇನ್ನೂ ಎರಡು ಜನಪದ ಕಥೆಗಳು ಇವೆ.
ಕಥೆ 1 ಡಾ. ಗುರುರಾಜ ಭಟ್ಟರು ಬಾರಕೂರು ಕೃತಿಯಲ್ಲಿ ವಿಮರ್ಶೆಗೆ ಒಳಪಡಿಸಿರುವ, ಗ್ರಾಮ ಪದ್ಧತಿಯಲ್ಲಿ ದಾಖಲಾಗಿರುವ ಕಥೆ.
“ಭೂತಾಳ ಪಾಂಡ್ಯನು ಮಧುರೆಯ ರಾಜವಂಶದವನು. ಬಹಳ ಪೂರ್ವ ಕಾಲದಲ್ಲಿ ಇವನ ಸಂತತಿಯವರು ಮಧುರೆಯನ್ನು ಬಿಟ್ಟು ತುಳುನಾಡಿಗೆ ಬಂದರು. ಭೂತಾಳ ಪಾಂಡ್ಯನು ಸೌಮ್ಯ ವೀರಪಾಂಡ್ಯನ ಮಗನು. ಇವನಿಗೆ ಜಯಪಾಂಡ್ಯನೆಂದು ಮೊದಲು ಹೆಸರಿದ್ದಿತು. ಇವನು ಜೈನ ಮತಸ್ಥನಾಗಿದ್ದನು. ಇವನ ತಂದೆಯು ಭೂತನಾಥನಾದ ಕುಂಡೋದರನ (ಮಹಿಷಾಸುರ) ಭಕ್ತನಾಗಿದ್ದನು. ಜಯಪಾಂಡ್ಯನು ದೇವಪಾಂಡ್ಯನ ಸೋದರಳಿಯನು. ದೇವಪಾಂಡ್ಯನಿಗೆ ಒಬ್ಬಳು ತಂಗಿ ಇದ್ದಳು. ಇವಳ ಹೆಸರು ಸತ್ಯವತಿ. ಇವಳಿಗೆ ಸೌಮ್ಯ ವೀರಪಾಂಡ್ಯನೊಡನೆ ವಿವಾಹವಾಗಿತ್ತು. ಜಯಪಾಂಡ್ಯನು ಸೌಮ್ಯವೀರಪಾಂಡ್ಯ ಮತ್ತು ಸತ್ಯವತಿಯ ಮಗನು. ದೇವಪಾಂಡ್ಯನು ವ್ಯಾಪಾರಾರ್ಥವಾಗಿ ಒಂದು ದೊಡ್ಡ ಹಡಗನ್ನು ಬಾರಕೂರಲ್ಲಿ ಕಟ್ಟಿಸಿ ಅದನ್ನು ನೀರಿಗಿಳಿಸಲುದ್ಯುಕ್ತನಾದನು. ಆಗ ಆ ಹಡಗಿನಲ್ಲಿದ್ದ ಭೂತರಾಜನಾದ ಕುಂಡೋದರನು ತನಗೆ ನರಾಹುತಿಯನ್ನು ಕೊಡಬೇಕೆಂದೂ, ಕೊಡದಿದ್ದಲ್ಲಿ ಹಡಗನ್ನು ನೀರಿಗಿಳಿಸಲಿಕ್ಕೆ ಬಿಡಲಿಕ್ಕಿಲ್ಲವೆಂದೂ ತಿಳಿಸಿದನು. ಇದರಿಂದ ಚಿಂತಿತನಾದ ದೇವಪಾಂಡ್ಯನು ತನ್ನ ಮಡದಿಯಲ್ಲಿ ಒಬ್ಬ ಮಗನನ್ನು ಆಹುತಿ ನೀಡಲು ಕೇಳಿಕೊಳ್ಳುತ್ತಾನೆ ಅವಳು ಒಪ್ಪುವುದಿಲ್ಲ.
ಈ ವಿಷಯ ತಿಳಿದ ಸತ್ಯವತಿ ಅಣ್ಣನನ್ನು ಸಂಕಟದಿಂದ ಪಾರುಮಾಡಲು ತನ್ನ ಮಗನಾದ ಜಯನನ್ನು ಕುಂಡೋದರನಿಗೆ ನರಾಹುತಿ ನೀಡಲು ಒಪ್ಪುತ್ತಾಳೆ. ಆದರೆ ಕುಂಡೋದರನು ಜಯಪಾಂಡ್ಯನಲ್ಲಿರುವ ರಾಜಲಕ್ಷಣಗಳನ್ನು ಕಂಡು ತನಗೆ ನರಾಹುತಿ ಅಗತ್ಯ ಇಲ್ಲ ಎಂದು ಹೇಳಿ ಹಡಗನ್ನು ನೀರಿಗಿಳಿಸಲು ಒಪ್ಪುತ್ತಾನೆ. ಆ ಹಡಗು ಹಲವು ಬಂದರುಗಳಲ್ಲಿ ವ್ಯಾಪಾರ ಮುಗಿಸಿ ಸಂಪತ್ತು ಹೇರಿಕೊಂಡು ಮರಳಿ ಬಾರಕೂರಿಗೆ ಬರುತ್ತದೆ. ಆಗ ಮತ್ತೆ ಕುಂಡೋದರ ಭೂತ ಮೈದೋರಿ ಹಡಗಿನ ಸಂಪತ್ತು ಇಳಿಸುವ ಮೊದಲು ನರಾಹುತಿ ನೀಡಲು ಹೇಳುತ್ತದೆ. ಮತ್ತೆ ಮಡದಿಯನ್ನು ಕೇಳಿದಾಗÀ ಅವಳು ನಿರಾಕರಿಸುತ್ತಾಳೆ. ಇದನ್ನು ಸತ್ಯವತಿ ಕೇಳಿ ತನ್ನ ಮಗ ಜಯಪಾಂಡ್ಯನನ್ನು ನರಾಹುತಿ ನೀಡಲು ಒಪ್ಪಿಕೊಳ್ಳುತ್ತಾಳೆ. ಇದನ್ನು ನೋಡಿ ಕುಂಡೋದರನು “ಈ ಕುವರ ತನ್ನ ಭಕ್ತರ ಕುಟುಂಬಕ್ಕೆ (ತನ್ನ ಕುಟುಂಬ -ಮಾತೃವಂಶೀಯ?) ಸೇರಿದವನಾದುದರಿಂದ ಅವನ ಮೇಲೆ ಕರುಣೆ ಪಟ್ಟು ತನಗೆ ನರಾಹುತಿ ಬೇಡವೆಂದು ಹೇಳಿ ಜಯಪಾಂಡ್ಯನ ಪ್ರಾಣವನ್ನು ಉಳಿಸಿದುದು ಮಾತ್ರವಲ್ಲದೆ ಕುಂಡೋದರನು ಈ ರೀತಿಯಾಗಿ ಆಜ್ಞಾಪಿಸಿದನು: “ಈ ಹಡಗಿನಲ್ಲಿ ತಂದ ಯಾವತ್ತೂ ಸರಕಿಗೆ ದೇವಪಾಂಡ್ಯನ ಮಕ್ಕಳು ಭಾದ್ಯಸ್ಥರಲ್ಲ. ಅವೆಲ್ಲವನ್ನೂ ಸೋದರಳಿಯನಾದ ಸತ್ಯವತಿಯ ಪುತ್ರನಾದ ಜಯಪಾಂಡ್ಯನಿಗೆ ಕೊಡಬೇಕು. ಆತನನು ದೇವಪಾಂಡ್ಯನು ತನ್ನ ಮರಣಾನಂತರ ಉತ್ತರಾಧಿಕಾರಿಯನ್ನಾಗಿ ಮಾಡಿ ತನ್ನ ಎಲ್ಲಾ ಸ್ಥಿರ, ಚರ ಆಸ್ತಿಗಳನ್ನು ಅವನಿಗೆ ಕೊಡಬೇಕು” ಕುಂಡೋದರನ ಆದೇಶದಂತೆ ದೇವ ಪಾಂಡ್ಯನ ಉತ್ತರಾಧಿಕಾರಿಯಾಗಿ ಆತನ ಅಧಿಕಾರ ಆಸ್ತಿಗಳಿಗೆ ಸೋದರಳಿಯ ಉತ್ತರಾಧಿಕಾರಿಯಾಗುತ್ತಾನೆ. ಭೂತದ ಕೃಪೆಗೆ ಪಾತ್ರನಾದ ಜಯಪಾಂಡ್ಯ ಭೂತಾಳಪಾಂಡ್ಯನಾಗುತ್ತಾನೆ. ಭೂತಾಳ ಪಾಂಡ್ಯನು ಕುಂಡೋದರನ ಸಹಾಯದಿಂದ ಸಿದ್ಧವರ್ಮನೆಂಬ ಅರಸನನ್ನು ಯುದ್ಧದಲ್ಲಿ ಸೋಲಿಸಿ ಬಾರಕೂರಿನ ಅರಸನಾದನು. ಈತನ (ಅಳಿಯ ಸಂತಾನ) ಸಂತತಿ ಹಲವಾರು ವರ್ಷಗಳಿಂದ ಬಾರಕೂರಿನಲ್ಲಿ ಆಳಿಕೊಂಡಿದ್ದರು. ಇವನ ಕಾಲದಿಂದ ತುಳುನಾಡಿನಲ್ಲಿ ಅಳಿಯ ಸಂತಾನ ಪದ್ಧತಿ ಜಾರಿಗೆ ಬರುತ್ತದೆ. ಮುಂದೆ ಕುಂಡೋದರ ಭೂತ ಶಿವನ ಸಭಗೆ ಹೋಗಿ ಶಿವನಿಂದ ಉಜ್ಜಯಿನಿಯ ವಿಕ್ರಮಾದಿತ್ಯನ ಸಿಂಹಾಸನವನ್ನು ಕೇಳಿ ಪಡೆದು ಆ ಸಿಂಹಾಸನದಲ್ಲಿ ಭೂತಾಳಪಾಂಡ್ಯನಿಗೆ ಪಟ್ಟ ಕಟ್ಟುತ್ತದೆ. (ಕ್ರಿ.ಶ. 77-148) ಹಾಗೂ ಮುಂದೆ ಜಯಪಾಂಡ್ಯನು ಅಳಿಯ ಕಟ್ಟು ಕಟ್ಟಲೆಗನ್ನು ರಚಿಸುತ್ತಾನೆ. (ಗುರುರಾಜ ಭಟ್ :ಬಾರಕೂರು ಪು.41-44) ಭೂತಾಳಪಾಂಡ್ಯನು ಕುಂಡೋದರನಿಗೆ ಗುಡಿಯೊಂದನ್ನುಕಟ್ಟಿಸಿದನು......”
ಜಯಪಾಂಡ್ಯ ಭೂತಾಳ ಪಾಂಡ್ಯ ಆಗುವ ವರೆಗಿನ ಕಥೆ ಪ್ರಾರ್ಥಮಿಕ ಶಾಲಾ ಪಠ್ಯದಲ್ಲಿ ಪದ್ಯ ರೂಪದಲ್ಲಿ ಸೇರಿ ಹಾಡಿನ ಮೂಲಕ ತುಳುನಾಡಿನ ಮನೆಮನೆ ತಲುಪಿತು. ಹೀಗೆ ಅಳಿಯ ಸಂತಾನ ಪದ್ಧತಿಯನ್ನು ಜಾರಿಗೆ ತಂದವನು ದೇವ ಪಾಂಡ್ಯ ಅಥವಾ ಭೂತಾಳ ಪಾಂಡ್ಯ ಎನ್ನುವುದು ಪ್ರಸಿದ್ಧವಾಯಿತು. ಆದರೆ ಈ ಕಥೆಯನ್ನು ವಿದ್ವಾಂಸರು ಒಪ್ಪುವುದಿಲ್ಲ.
“ಭೂತಾಳ ಪಾಂಡ್ಯನ ಕತೆಗೆ ನಮಗಿಷ್ಟರ ತನಕ ಯಾವ ಆಧಾರವೂ ದೊರಕಿಲ್ಲ. ಭೂತಾಳ ಪಾಂಡ್ಯನೆಂಬ ಈ ಹೆಸರು ಯಾವ ಕಲ್ಬರಹದಲ್ಲಿಯೂ ತಾಮ್ರ ಶಾಸನದಲ್ಲಿಯೂ ಕಂಡುಬರುವುದಿಲ್ಲ. ಕ್ರಿ..ಶ.15ನೆಯ ಶತಕದ ಒಂದು ಶಿಲಾ ಲೇಖದಲ್ಲಿ ‘ಭೂತ ಪಾಂಡ್ಯನ ಜತಿಕಲ್ಲು’ ಎಂಬ ಉಲ್ಲೇಖವಿದೆ. ಈ ಶಾಸನವು ಉಡುಪಿ ತಾಲೂಕಿನ ಚೊಕ್ಕಾಡಿ ಎಂಬಲ್ಲಿ ದೊರಕಿದ್ದು ಕ್ರಿ.ಶ. 1474ರದ್ದಾಗಿದೆ. ಇದು ವಿಜಯನಗರದ ಚಕ್ರಾಧಿಪತಿಯಾದ ವಿರೂಪಾಕ್ಷನ ಕಾಲದ್ದಾಗಿದೆ........ ಅಳಿಯ ಸಂತಾನ ಕಟ್ಟುಕಟ್ಟಳೆಗಳನ್ನು ಒಳಗೊಂಡ ಸಾಹಿತ್ಯವನ್ನೋದಿದರೆ ಅದು ಅರ್ವಾಚೀನವೆಂಬುದಕ್ಕೆ ಯಾವ ಸಂದೇಹವೂ ಇಲ್ಲ. ತುಳುನಾಡಿನಲ್ಲಿ ಎಷ್ಟೋ ಕಾಲದಿಂದ ಪ್ರಚಾರದಲ್ಲಿದ್ದ ಅಳಿಯ ಸಂತಾನವೆಂಬ ಪ್ರಾಚೀನ ಸಾಮಾಜಿಕ ವ್ಯವಸ್ಥೆಯ ಪರವಾಗಿ ಒಂದು ಕಟ್ಟು ಕಥೆ ಕಳೆದ ಶತಮಾನದಲ್ಲಿ ಹುಟ್ಟಿಕೊಂಡಿಂತೆಂದು ಊಹಿಸಬಹುದು. ಈ ಸ್ಥಳಪುರಾಣದಲ್ಲಾಗಲೀ, ಭೂತಾಳ ಪಾಂಡ್ಯರಾಯನ ಕಥೆಯಲ್ಲಾಗಲೀ ಆಳುಪರ ಉಲ್ಲೇಖವಿಲ್ಲದಿರುವುದನ್ನು ಕಂಡಾಗ ಈ ಹಲವಾರು ಶಾಸನಗಳ ಅಭ್ಯಾಸ ಮಾಡುವ ಮೊದಲು ಹುಟ್ಟಿಕೊಂಡ ಕಥೆ ಇದೆಂದು ಭಾಸವಾಗುತ್ತದೆ. ಐತಿಹ್ಯವು ಒಂದು ವಿಕ್ರಮಾದಿತ್ಯನ ಕಥೆಯನ್ನು ತಿಳಿಸುತ್ತದೆ ನಮ್ಮ ಜಿಲ್ಲೆಯಲ್ಲಿ ಯಾವ ದಾಖಲೆಯೂ ಇಷ್ಟರವರೆಗೆ ಈ ವಿಕ್ರಮಾದಿತ್ಯನ ಪ್ರಸ್ತಾಪ ಮಾಡುವುದಿಲ್ಲ. ಬಾರಕೂರಿನ ಮೇಲೆ ಯಾವನಾದರೂ ಒಬ್ಬ ವಿಕ್ರಮಾದಿತ್ಯನೆಂಬ ಅರಸನು ಅಧಕಾರ ಅಧಿಪತ್ಯ ನಡೆಸಿದ್ದರೆ ಅದು ಕಲ್ಯಾಣಿ ಚಾಲೂಕ್ಯ ವಂಶದ 6ನೆಯ ವಿಕ್ರಮಾದಿತ್ಯನೆಂದು ಅಭಿಪ್ರಾಯ ಪಡಬಹುದು. ಈತನ ಕಾಲ ಕ್ರಿ.ಶ. 11-12ನೆಯ ಶತಮಾನ. ಈ ವಿಕ್ರಮಾದಿತ್ಯನ ಅಧಿಪತ್ಯಕ್ಕೆ ಆಳುವಖೇಡ”ವು ಸೇರಿತ್ತೆಂಬುದಕ್ಕೆ ಅನುಮಾನ ಇಲ್ಲ. (ಗುರುರಾಜ ಭಟ್ಟ: ಬಾರ್ಕೂರು ಪು. 20)
“ಕುಂಡೋದರನ ಕಥೆ ಜಾನಪದ ಕಥೆಯಾಗಿರದೆ ಬ್ರಾಹ್ಮಣ ಅಕ್ಷರಕಾರರಿಂದ ಗ್ರಾಮ ಪದ್ಧತಿಯಲ್ಲಿ ಕಳೆದ ಶತಮಾನದಲ್ಲಿ ಬರೆದ ಕಥೆ ಎನ್ನುವುದನ್ನು ವಿದೇಶಿ ವಿದ್ವಾಂಸರು ಮತ್ತು ಸಂಶೋಧನಕಾರರು ಒಮ್ಮತದಿಂದ ಒಪ್ಪಿದ್ದಾರೆ. 1894ರಲ್ಲಿ ಭಾರತಕ್ಕೆ ಬಂದಿದ್ದ ಎ.ಸಿ.ಬರ್ನೆಲ್ ಅವರು ಇದು ಸುಮಾರು 30 ವರ್ಷಗಳ ಹಿಂದೆ ಬರೆದ ಕಟ್ಟುಕಥೆ ಎಂದು ಹೇಳಿದ್ದಾರೆ. ಮಾತ್ರವಲ್ಲ ಯಾರೋ "Notorious forgers and scroundrels" ಬರೆದಿರಬೇಕು ಎನ್ನುತ್ತಾರೆ. (ಸೂರ್ಯನಾಥ್ ಯು. ಕಾಮತ್. ವಿಜಯನಗರ ಕಾಲದ ತುಳುವರು ಅಪ್ರಕಟಿತ)
`ಭೂತಾಳ ಪಾಂಡ್ಯನ ಕಟ್ಟು ಕಟ್ಟಲೆ’ ಎನ್ನುವ ಕಥೆಯನ್ನು ಸುಮಾರು 1840ರಲ್ಲಿ ರಚಿಸಲಾಗಿರಬಹುದು ಎಂಬ ಥಸ್ರ್ಟನ್ ಅವರ ಅಭಿಪ್ರಾಯವನ್ನು ಗುರುರಾಜ ಭಟ್ಟರು ಸಮರ್ಥಿಸುತ್ತ್ತಾರೆ. ""It is rightly remarked by Thurston that the kattu-kattale of Bhutala-Pandaya is a foregery composed about A.D. 1840'' (ಇಂದಿರಾ ಹೆಗ್ಗಡೆ 2009 ಪು. 162)
ಈ `ಅಳಿಯ ಸಂತಾನದ ಕಟ್ಟುಕಟ್ಟಲೆ’ ಕಥೆಯಲ್ಲಿ ಚೌಟ, ಬಂಗರಸರ ಮುಂತಾದ ತುಳುನಾಡಿನ ತುಂಡರಸರ ಪ್ರಸ್ತಾಪ ಇದೆ. ಇತಿಹಾಸಕಾರರ ಪ್ರಕಾರ ಇವರು ವಿಜಯನಗರ ಕಾಲಾನಂತರ ಬೆಳಕಿಗೆ ಬಂದ ಅರಸರು ಎಂದು ತುಳು ಸಂಶೋಧಕ ಶೀನಪ್ಪ ಹೆಗ್ಗಡೆಯವರು ಈ ಕಥೆ ಕಟ್ಟು ಕಥೆ ಎನ್ನುವುದಕ್ಕೆ ಸಮಥರ್Àನೆ ಒದಗಿಸುತ್ತಾರೆ.
ದೇವ ಪಾಂಡ್ಯನನ್ನು ಜೈನ ವ್ಯಾಪಾರಿ ಎನ್ನುವ ಈ ಕಥೆಯು ಆತ ನರಬಲಿ ಕೊಡಲು ಸಿದ್ಧತೆ ಮಾಡುವ ಬಗ್ಗೆ ಹೇಳುತ್ತದೆ.
ಕಥೆ 2
ಕುಂಜಿಬೆಟ್ಟು ಸುಬ್ರಹ್ಮಣ್ಯ ಸಂಪಾದಿಸಿದ ಹಾಡಿಗೆ ಹನ್ನೆರಡು ಕಬರು ಕೃತಿಯಲ್ಲಿ ಇರುವ ಬಾರ್ಕೂರು ಹಿರಿಯಣ್ಣ ಸೆಟ್ರು:
`ಬಾರ್ಕೂರು ಹಿರಿಯಣ್ಣ ಸೆಟ್ರು ಮುತ್ತು ರತ್ನ ವ್ಯಾಪಾರಿಗಳು. ಒಮ್ಮೆ ರತ್ನ ವ್ಯಾಪಾರಕ್ಕಾಗಿ ತಮ್ಮದೇ ಹಡಗಿನಲ್ಲಿ ಪ್ರಯಾಣಿಸಲು ಮುಂದಾಗುತ್ತಾರೆ. ಪ್ರಯಾಣಕ್ಕೆ ಹೊರಟರೆ ಅವರ ಹಡಗು ಚಲಿಸುವುದಿಲ್ಲ. ಹಡಗು ಯಾಕೆ ಚಲಿಸುವುದಿಲ್ಲ ಎಂದು ಚಿಂತಿತರಾದ ಹಿರಿಯಣ್ಣಸೆಟ್ರು ಜೋಯಿಸರ ಮನೆಗೆ ಹೊರಡುತ್ತಾರೆ. ಜೋಯಿಸರು ಹಡಗು ನರಾಹುತಿ ಬೇಡುತ್ತದೆ ಎನ್ನುತ್ತಾರೆ. ಮನೆಗೆ ಬಂದ ಹಿರಿಯಣ್ಣ ಸೆಟ್ರು,” ಮುತ್ತು ರತ್ನ ವ್ಯಾಪಾರಕ್ಕೆ ಹೊರಟಿದ್ದೆ. ಹಡಗು ಮುಂದೆ ಚಲಿಸುವುದಿಲ್ಲ. ನರಾಹುತಿ ಬೇಡುತ್ತಿದೆ. ನಮಗೆ ಹತ್ತು ಮಕ್ಕಳು ಇದ್ದಾರಲ್ಲ ಒಂದನ್ನು ಬಲಿಕೊಡುವ’ ಎನ್ನುತ್ತಾರೆ. `ಹಡಗು ಬಿದ್ದೇ ಹೋಗಲಿ. ಮುತ್ತು ರತ್ನವೂ ಬೇಡ ಮಗನನ್ನೂ ಕೊಡುವುದಿಲ’್ಲ ಎಂದು ಹಿರಿಯಣ್ಣ ಸೆಟ್ರ ಮಡದಿ ಹೇಳುತ್ತಾರೆ.
ಹಿರಿಯಣ್ಣ ಸೆಟ್ರು ತಂಗಿ ಮನೆಗೆ ಹೋಗುತ್ತಾರೆ. ಎಂದೂ ಬಾರದಿದ್ದ ಅಣ್ಣಯ್ಯ ಇಂದೇಕೆ ಬಂದ ಎನ್ನುತ್ತಾ ಆಕೆ ಸಡಗರದಿಂದ ಅವನನ್ನು ಸ್ವಾಗತಿಸುತ್ತಾಳೆ. ಅಣ್ಣ ಹಡಗಿನ ಕಥೆ ಹೇಳಿ `ಹಡಗು ನರಬಲಿ ಕೇಳುತ್ತದೆ. ನಿಮಿತ್ತ ಕೇಳಿದ ಜೋಯಿಸರು ಹೇಳಿದರು’ ಎನ್ನುತ್ತಾರೆ. ‘ಮನೆಗೆ ಬಂದು ಮಡದಿಯ ಬಳಿ ಒಂದು ಮಗು ಕೊಡು ಎಂದೆ. ಆಕೆ ಹಡಗು ಬಿದ್ದೇ ಹೋಗಲಿ, ಮುತ್ತು ರತ್ನವೂ ಬೇಡ ಮಗನನ್ನೂ ಕೊಡಲಾರೆ ಎಂದಳು, ನೆಟ್ಟಗೆ ಇಲ್ಲಿಗೆ ಬಂದೆ’ ಎನ್ನುತ್ತಾನೆ. ಅಷ್ಟು ಕೇಳಿದ ತಂಗಿ ಹೊನ್ನಮ್ಮ ನೆರೆಮನೆಯ ಆಟಕ್ಕೆ ಹೋಗಿದ್ದ ಗೆಜ್ಜೆಕಾಲಿನ ಒಬ್ಬನೇ ಮಗನನ್ನು ಕರೆಯುತ್ತಾಳೆ. ಆತ ಓಡೋಡಿ ಬರುತ್ತಾನೆÉ. `ಯಾಕಮ್ಮ ಕರೆದಿ, ಎಂದೂ ಬಾರದ ಮಾವಯ್ಯ ಇಂದ್ಯಾಕಮ್ಮ ಬಂದ’ ಎನ್ನುತ್ತಾನೆ. ಮಗನಿಗೆ `ಮಾವಯ್ಯ ಹಡಗು ಹೊಡಿಸಿದ್ದಾರೆ’ ಎಂದು ಅಂಗಿ ಬಿಚ್ಚಿ ಮಾವÀನ ಸಂಗಡ ಕಳುಹಿಸುತ್ತಾಳೆ.
ಮಾವ ಅಳಿಯ ಒಟ್ಟಾಗಿ ಹಡಗಿನತ್ತ ನಡೆಯುತ್ತಾರೆ. ದಾರಿಯಲ್ಲಿ ಅಳಿಯ ಮಾವಿನ ಹಣ್ಣನ್ನು ತೆಗೆಸಿಕೊಡಲು ಮಾವನಿಗೆ ಹೇಳುತ್ತಾನೆ. ಹಣ್ಣು ತೆಗೆಸಿ ಕೊಟ್ಟರೆ ಒಂದು ಚೂರಿಯನ್ನು ಕೊಡಿಸಲು ಹೇಳುತ್ತಾನೆ. ಇಬ್ಬರೂ ಹಡಗಿನ ಬಳಿ ಬರುತ್ತಾರೆ ಅಳಿಯ ಮಾವಿನ ಹಣ್ಣು ಕುಯ್ಯುತ್ತಾನೆ. ಆಗ ಅವನ ಕಿರು ಬೆರಳು ಕಡಿದು ರಕ್ತ ಹಡಗಿಗೆ ಬೀಳುತ್ತದೆ. ಹಡಗು ಚಲಿಸುತ್ತದೆ. ಮಾವ ಅಳಿಯ ಇಬ್ಬರೂ ಸೇರಿ ಹಡಗು ಹೊರಡಿಸಿ ತರುತ್ತಾರೆ.
ಮಾವ ಅಳಿಯ ಮುತ್ತು ರತ್ನ ಹೇರಿ ಹಡಗಿನೊಂದಿಗೆ ಬರುತ್ತಿರುವುದನ್ನು ಹಿರಿಯಣ್ಣ ಸೆಟ್ರ ಮಡದಿ ಮಕ್ಕಳು ನೋಡುತ್ತಾರೆ. ಸಡಗರದಿಂದ ಬಳಿಗೆ ಬರುತ್ತಾರೆ. ಹಿರಿಯಣ್ಣ ಸೆಟ್ರು ಹಡಗನ್ನು ತಂಗಿ ಮನೆಗೆ ಕೊಂಡು ಒಯ್ದು ಮುತ್ತು ರತ್ನಗಳನ್ನು ಅಳಿಯನಿಗೆ ಮತ್ತು ತಂಗಿಗೆ ನೀಡುತ್ತಾರೆ. ಮರಳಿ ಮನೆಗೆ ಬಂದ ಹಿರಿಯಣ್ಣ ಸೆಟ್ರಿಗೆ ಅವರ ಮಡದಿ ಬಾಗಿಲು ತೆರೆಯುವುದಿಲ್ಲ. `ಹಾದಿ ಬೀದಿಯಲ್ಲಿ ಹೋಗುವವರು ಮನೆಗೆ ಬರಬೇಡಿ. ತಮ್ಮದು ಗಂಡುಸರಿಲ್ಲದ ಮನೆ’ ಎನ್ನುತ್ತಾಳೆ. ಮಾತು ಕೇಳಿದ ಹಿರಿಯಣ್ಣ ಸೆಟ್ರು ತಂಗಿಯ ಮನೆಗೆ ಬಂದು, ತಂಗಿಯ ಮನೆಯಲ್ಲಿ ಇರುತ್ತಾರೆ.
ಕಥೆ 3
ಭೂತಾಳ ಪಾಂಡ್ಯನ ಕಥೆಯ ಆಶಯ ಇರುವ ಇನ್ನೊಂದು ಪಾಡ್ದನ ಕಥೆ ಸುರತ್ಕಲ್ ಬಳಿಯ ಚೇಳಾರು ಗ್ರಾಮದ ಕಂಡೆವು ಬೀಡಿನ ದೇವರಾಯ, ಕಾಮರಾಯ ಬಲ್ಲಾಳರ ಕಥೆ.
ದೇವರಾಯ, ಕಾಮರಾಯ ಬಲ್ಲಾಳರು ಕೊಡಿ ಕಂಡೆವು ಬೀಡಿನಲ್ಲಿ ಇದ್ದರು. ಅವರಿಗೆ ನಡು ಇರುಳು ಸರಿಯುವ ಹೊತ್ತಿನಲ್ಲಿ ಸ್ವಪ್ನ ಬೀಳುತ್ತದೆ.
ಬೆಳಗೆದ್ದು ಸ್ವಪ್ನ ನೆನೆಪಿಸಿಕೊಂಡು ‘ಕಾನಗಳ ಕಾನ ಮಜಲೊಟ್ಟು ಕಾನ’ಕ್ಕೆ ಹೋಗಿ ಬಿಳಿಯ ಕಿಸಗಾರ (ಕೇಪುಲ) ಮರ ಹುಡುಕುತ್ತಾರೆ. ಕದಿಕೆ ಸಾವಿರ, ಮುಲ್ಕಿ ಮುನ್ನೂರು ಒಕ್ಕಲು ಮಕ್ಕಳನ್ನು ಹಿಡಿದು ಅಳತೆ ಹಾಕಿಸಿದರು, ಕೋಲು ಹಿಡಿದರು ....
........ಮಲೆನಾಡ ಆಚಾರಿ ತುಳುನಾಡ ಕೊಲ್ಲನ್ ಹಿಡಿದು ಬಿಳಿಯ ಕೇಪುಲದ ಮರವೊಂದು ಕಡಿಸಿದರು. ಆ ಹೊತ್ತು ಏನಾಯಿತು ಕೇಳಿದರೆ ಮರ ಬೀಳದೇ ಹೋಯಿತು. ಆಗ ಕದಿಕೆಸಾವಿರ, ಮುಲ್ಕಿ ಮುನ್ನೂರು ಒಕ್ಕಲು ಮಕ್ಕಳನ್ನು ಪೊದೆ ಪೊದೆ ಹಿಡಿದು ಕೇಪುಲ ಪೂ ಕೊಯ್ಯಿಸಿದರು. ಹತ್ತು ಸೇರಿ (ಸರ್ವರು) ಪುಷ್ಪ ಹಿಡಿದು ಕೈಮುಗಿಯುತ್ತಾರೆ. ಈ ಮರ ಬಿದ್ದರೆ ಕಡೆ ತುಂಡು ಕಾಂತೇಶ್ವರಗೆ ಒಪ್ಪಿಸುತ್ತೇವೆ, ಕೊಡಿ(ತುದಿ)ಕೋಟೇಶ್ವರಗೆ ಒಪ್ಪಿಸುತ್ತೇವೆ, ನಡು ಭಾಗ ಕಂಡೆವು ಬೀಡಿಗೆ ಹಡಗು ಕಟ್ಟಲು ಸೀಳುತ್ತೇವೆ.’ ಎನ್ನುವಾಗ ಮರ ಬೀಳುತ್ತದೆ. ಹಾಗೆಯೇ ಕಡೆ ತುಂಡು ಕಾಂತೇಶ್ವರ, ಕೊಡಿ ಕೋಟೇಶ್ವರ ದೇವರಿಗೆ ಒಪ್ಪಿಸಿ, ನಡು ಭಾಗÀ ಕಂಡೆವು ಬೀಡಿಗೆ ಹಡಗು ಕಟ್ಟಲು ಸೀಳುತ್ತಾರೆ. ಹಡಗು ಕಟ್ಟಿ ಹಡಗನ್ನು ಜರಗಿಸುವ ಮೊದಲು ಲೆಕ್ಕ (ಜ್ಯೋತಿಷ್ಯ) ಕೇಳಬೇಕು ಎನ್ನುತ್ತಾರೆ. ಜ್ಯೋತಿಷ್ಯ ಕೇಳುತ್ತಾರೆ. “ನೀವು ಯಾವ ಗದ್ದಲ ಮಾಡಿದರೂ ಹಡಗು ಚಲಿಸದು. ಹಡಗು ಚಲಿಸಲು “ಜೀವರಾಶಿ” (ನರಬಲಿ) ನೀಡಬೇಕು ಎಂಬ ವಿಷಯ ಹೊರಬರುತ್ತದೆ.
ಹಡಗನ್ನು ಮಜಲೊಟ್ಟು ಕಾನದಲ್ಲಿ ಬಿಟ್ಟು ಮರಳುತ್ತಾರೆ. ‘ಬಾವ ನೀವು ಇಲ್ಲಿಯೇ ಇರಿ ನಾನು ಕಂಡೆವುದ ಬೀಡಿಗೆ ಹೋಗಿ ಬರುತ್ತೇನೆ’ ಎಂದರು. ನನ್ನ ಮಡದಿಯ ಬಳಿ 16 ಮಕ್ಕಳಿದ್ದಾರೆ. ಅವುಗಳಲ್ಲಿ ಒಬ್ಬ ಮಗನÀನ್ನು ನಾನು ತರುತ್ತೇನೆ’ ಎಂದು ಕಾನದಲ್ಲಿ ಕಾನ ಮಜಲೊಟ್ಟು ಕಾನದಿಂದ ಕೊಡಿ ಕಂಡೆವು ಬೀಡಿಗೆ ಬರುತ್ತಾರೆ. ಬೀಡಿಗೆ ಬಂದು ಮಡದಿಗೆ ವಿಷಯ ತಿಳಿಸುತ್ತಾರೆ. “ಪಡವು ಒಂದು ಜೀವರಾಶಿ ಕೊಡಬೇಕಾಗುತ್ತದೆ. ಒಂದು ಮಗನನು ಕೊಡುವೆಯಾ? ಹದಿನಾರು ಮಕ್ಕಳಲ್ಲಿ?’ಎನ್ನುತ್ತಾರೆ. ಆ ಸಮಯದಲ್ಲಿ ಮಡದಿ `ನಾನು ಮಗನನ್ನು ಯಾತಕ್ಕೂ ನೀಡಲಾರೆ, ಹೆರಲು ಸಾಕಲು ನಾನಾಗುವಾಗ ಆ ಮಕ್ಕಳು ನನಗೇ ಸೇರಿದವು. ಎಷ್ಟು ಮಾತ್ರಕ್ಕೂ ನೀಡಲಾರೆ.’ ಎನ್ನುತ್ತಾರೆ.
ಕೋಪಿಸಿಕೊಂಡ ದೇವರಾಯ ಬಲ್ಲಾಳರು ಕಂಡೆವು ಬೀಡಿನಿಂದ ಕಂಡೆವು ಗುತ್ತು ಇಳಿದು ಹೋಗುತ್ತಾರೆ. ಕಂಡೇವು ಗುತ್ತಿಗೆ ಹೋಗಿ “ ಯಾರು ಮಗಾ ತಂಗೀ, ಕೇಳಿದೆಯಾ ಕೊಡಿ ಕಂಡೆವು ಬೀಡಿನಿಂದ ಹೋಗಿ, ಮಗು ತಂಗಿ, ಹಡಗೊಂದನ್ನು ಕಟ್ಟಿಸಿದ್ದೇನೆ. ಕಟ್ಟಿಸಿದ ಹಡಗು ಜರುಗುವುದಿಲ್ಲ. ನನ್ನ ಮಡದಿಯ ಬಳಿ ನಾನೊಂದು ಮಗನನ್ನು ಕೇಳಿದೆನೇ, ಅವಳು ಕೊಡಲಾರೆನೆಂದಳು. ಹೆರಲು ಸಾಕಲು ಅವಳಿಗೆ ಅಂತೆ ನನಗೆ ಸಂದ ಮಕ್ಕಳಲ್ಲವಂತೆ, ಕೊಡಲಾರೆನೆಂದಳು ಏನು ಮಾಡಲಿ?” ಎನ್ನುತ್ತಾರೆ.
“ನೀವು ಅಳುವುದು ಬೇಡ. ನನಗೆ ಒಬ್ಬ ಮಗನಾದರೂ ನಾನು ಕೊಡುತ್ತೇನೆ’ ಎಂದರು ತಂಗಿ. ಮಗನನ್ನು ಕರೆದು ಸೋದರ ಮಾವನೊಂದಿಗೆ ಕಳಿಸಿಕೊಟ್ಟರು. ಅಲ್ಲಿಂದ ಬೇಗನೇ ಮಜಲೊಟ್ಟು ಕಾನಗೆ ಹೋಗುತ್ತಾರೆ. ಅಲ್ಲಿ ಅಂಡೆಯಲ್ಲಿ ಕಳ್ಳು(ನೀರಾ) ತುಂಬಿಸುತ್ತಾರೆ, ಕಡ್ಯದಲ್ಲಿ ಓಕುಳಿ(ಕುದ್ರಿ) ನೀರು ತುಂಬಿಸುತ್ತಾರೆ. ದೊಡ್ಡ ಹೆಡಿಗೆಯಲ್ಲಿ ಅರಳು ತುಂಬಿಸುತ್ತಾರೆ. ಬೊಂಡದ ಗೊಂಚಲು, ಹೆಣೆದ ಜೋಡು ತೆಂಗಿನಕಾಯಿ ಸೇರಿಸಿ ನಟ್ಟ ನಡುರಾತ್ರಿ ಸರಿಯುವ ಹೊತ್ತಲ್ಲಿ ಹಡಗಿಗೆ ಆವಾರ(ಬಲಿ) ಕೊಡಲು ಮಗುವನ್ನು ಕರೆ ತರುತ್ತಾರೆ. ಅಷ್ಟಾಗುವಾಗ ಮಗು “ ಮಾವ ನೀವು ಕೇಳಿದಿರೆ, ನನ್ನ ತಲೆಯನ್ನೇ ಕಡಿದರೆ ಸಾಕೇ ಮಾವ? ನನ್ನ ಬೆರಳು ಕಡಿದರೆ ಸಾಕೆ ಮಾವ?” ಎಂದು ಕೇಳುತ್ತಾನೆ. ‘ಬೆರಳು ಕಡಿದರೆ ಮಗಾ ಹಡಗು ಸರಿಯದು. ನನಗೆ ಹಡಗು ಸರಿದರೆ ಸಾಕು’ ಎನ್ನುತ್ತಾರೆ ಬಲ್ಲಾಳರು. ಮಗುವಿನ ಜೊತೆಗೆ ಆವಾರಕ್ಕೆ ಇಟ್ಟ ಎಲ್ಲಾ ಸಾಯಿತಿ (ಸಾಮಾನು) ಹಿಡಿದು ಹಡಗಿಗೆ ಆವಾರ ಕೊಟ್ಟರು. ಮಗುವಿನ ಕೈ ಬೆರಳು ಕಡಿದು ಮೂರು ಸುತ್ತು ಆವಾರ ಕೊಡುವಾಗ ಹಡಗು ಚಲಿಸುತ್ತದೆ.......ಅವರು ಬರುವಾಗ ಏಳು ಗಂಗೆಗೆ ಹೋಗಿ ಮುತ್ತು ರತ್ನ ತರಬೇಕು ತಂಗಿಗೆ ನೀಡಬೇಕು ಎಂದು ಏಳು ಕಡಲಾಚೆ ಹೋಗಿ ಮುತ್ತು ರತ್ನ ಹೇರಿ ಬರುತ್ತಾರೆ. ಅವರಿಗೆ ಗಂಗೆಯಲ್ಲಿ ಉಲ್ಲಾಯ ದೈವದ ಬಾಳ್ ಭಂಡಾರ ಸಿಗುತ್ತದೆ. ಅದನ್ನು ಹಡಗಲ್ಲಿ ತುಂಬಿಸಿ ಬರುವಾಗ ಹಡಗು ಶಶಿಹಿತ್ಲಿನಲ್ಲಿ (ಸುರತ್ಕಲ್ ಸಮೀಪ) ದಡ ಸೇರುತ್ತದೆ. ಬಾಳ್ ಭಂಡಾರದಲ್ಲಿ ಇದ್ದ ಉಲ್ಲಾಯ ದೈವ (ಅರಸು ದೈವ/ಧರ್ಮ ದೈವ) ಓಡಂತಾಯ ಗರಡಿ ಪ್ರವೇಶಿಸುತ್ತದೆ. ಧರ್ಮ ದೈವದ ಪ್ರವೇಶ ನೋಡಿ ಅಲ್ಲಿ ಆ ಮೊದಲಿದ್ದ ‘ಕಾಂತಾ ಬಾರೆ ಬೂದಾ ಬಾರೆ’ ಅವಳಿ ದೈವಗಳು ಹಿಂಬಾಗಿಲಿನಿಂದ ಹೊರಡು ಹೋಗುತ್ತಾರೆ. ಆದರೆ ಉಲ್ಲಾಯ ಮೈದೋರಿ “ ನನಗೆ ವರ್ಷಕ್ಕೆ ಒಮ್ಮೆ ಈ ಕ್ಷೇತ್ರದಲ್ಲಿ ನನ್ನ ಭಂಡಾರ ಸಮೇತ ಇಲ್ಲಿಗೆ ಬಂದು ನೇಮ ಆಗಬೇಕು” ಎಂದು ಆದೇಶಿಸುತ್ತದೆ. ಅಲ್ಲಿಂದ ಹಡಗು ಉತ್ತರ ದಿಕ್ಕಿಗೆ ಕಂಡೆವುಗೆ ಪ್ರಯಾಣಿಸುತ್ತದೆ. ದಾರಿಯಲ್ಲಿ ಸುವರ್ಣ ಸಂತಾಣದ ಕುಮಾರ ಸಿಗುತ್ತಾನೆ. ಅವನನ್ನೂ ಅವನ ಏಳುಜನ ತಂಗಿಯರನ್ನೂ ಕರೆದುಕೊಂಡು ಕಂಡೆವು ಕಾಡಿನ ಬಳಿ ಬೀಡಿಗೆ ಹಡಗು ಬರುತ್ತದೆ. ಬೀಡಿನ ಬಳಿ ಹಡಗು ನಿಲ್ಲಿಸಿದ ಬಲ್ಲಾಳರು ತಂಗಿಗೆ, ಐತ ಅಲಂಕಾರ ಗೊಂಡು ಬರಲು ಕರೆ ಕಳುಹಿಸುತ್ತಾರೆ. ದೈವದ ಭಂಡಾರವನ್ನು ಬೀಡಿಗೆ ತುಂಬಿಸುತ್ತಾರೆ. ಮಗುವನ್ನು (ನರಾಹುತಿಗೆ ಹೋದ) ಮಾಯ ಮಾಡುತ್ತಾರೆ. ತಂಗಿ ಬರುತ್ತಾಳೆ. “ಇಂದಿನಿಂದ ಕಂಡೆವು ಬೀಡು ಇದ್ದವಳಿಗಾ ಬಂದವಳಿಗಾ” ಎನ್ನುತ್ತಾರೆ. ಆಕೆ ಇದ್ದವಳಿಗೆ ಎನ್ನುತ್ತಾಳೆ.
ಒಬ್ಬ ಕುಮಾರ (ಏಳು)ಎಳ್ವರ್ ಸಿರಿಗಳು ಸಾವಿರಾರು ದೈವ ದೇವರನ್ನು ಜೊತೆಗೂಡಿ ಬಂದು ಕಂಡೆವು ಬೀಡಿನಲ್ಲಿ ಕೊನಿ ಊರಿದರು ಉಲ್ಲಾಯ ಧರ್ಮರಸು. ( ಆಧಾರ ಗಣೇಶ ಸಂಕಮಾರ್ : ಪಾಡ್ದನ ಸಂಗ್ರಹ 5-5-1993 ಹಾಡುಗಾರರು ಅಚ್ಚಕ್ಕ, ಸುವರ್ಣಬಳಿ: ಕೃತಿ: ಧರ್ಮರಸು ಉಲ್ಲಾಯ : ಸಿರಿ ಪ್ರಕಾಶನ 2000)
ವ್ಯಾಪಾರಿ ಹಡಗು ಕಟ್ಟಲು ಮರ ಕಡಿಯುವುದು, ಆ ಮರದಲ್ಲಿ ಇದ್ದ ದೈವ ಮಾನವ ಬಲಿ ಕೇಳುವುದು -ಇವು ಮೂರೂ ಕಥೆಗಳಲ್ಲಿಯೂ ಒಂದೇ ಆಶಯದಿಂದ ಕೂಡಿವೆ. ಎರಡು ಕಥೆಗಳ ಕಥಾನಾಯಕ ವ್ಯಾಪಾರಿ. ಮೂರನೆಯ ಕಥೆ ಸುರತ್ಕಲ್ ಬಳಿಯ ಕಂಡೇವು ಕ್ಷೇತ್ರದ ಬಲ್ಲಾಲರು ಹಡಗು ಕಟ್ಟಲು ಮರಕಡಿಯುವ ಬಗ್ಗೆ ಹೇಳುತ್ತದೆ.
ಸುರತ್ಕಲ್ ಬಳಿಯ ಕಂಡೇವು ಬಲ್ಲಾಳರು ಆ ಕಾಲದ ಪಾಳೆಯಗಾರರು. ಕದಿಕೆ ಸಾವಿರಾಳು ಮುಲ್ಕಿ ಮುನ್ನೂರು ಒಕ್ಕಲುಮಕ್ಕಳು ಅವರ ಅಂಕೆಯಲ್ಲಿ ಇತ್ತು ಎಂದು ಪಾಡ್ದನ ನಿರೂಪಿಸುತ್ತದೆ.
ಕಂಡೇವು ಆಲಡೆ ಕ್ಷೇತ್ರ ಕೂಡಾ (ಗುರ್ಜರ /ಗುಜರನ್ನ ವಂಶದವರ- ಬಿಲ್ಲವ, ಬಂಟ, ಬೆಸ್ತ) ಕಾಡಿನಲ್ಲಿ ಇದ್ದ ಆದಿ ಮೂಲಸ್ಥಾನ. ಮೇತಿಂಗಳ 14ರಂದು ಮೀನು ಬೇಟೆಯೊಂದಿಗೆ ಸಿರಿಬಳಗ ಕುಮಾರ -ನಾಗಬ್ರಹ್ಮ ಮಹಿಷಂತಾಯ ಉತ್ಸವ ನಡೆಯುತ್ತದೆ. ಇಲ್ಲಿ ನಂದಿಗೋಣ/ಮಹಿಷ ಬಹಳ ಕಾರಣಿಕದ ದೈವ ಎಂಬ ನಂಬಿಕೆ ಇದೆ.
ಹಡಗು ಕಟ್ಟಲು ಮರ ಕಡಿದ ಕ್ಷೇತ್ರ “ಮುಜಲೊಟ್ಟು ಕಾಡು ಮೂಲಸ್ತಾನ. ಪಂಚ ಶಕ್ತಿಗಳ ಕಾಡು. ಅಲ್ಲೂ ನಂದಿಗೋನ /ಮಹಿಷ ಮತ್ತು ನಾಗಬೆರ್ಮ ಸಿರಿ ಶಕ್ತಿಗಳಿವೆÉ.” ಈಗಲೂ ಮೂಲಸ್ಥಾನದ ಉಪಾಸನೆ ಅದ್ದೂರಿಯಾಗಿ ನಡೆಯುತ್ತಿದೆ.
ಸ್ಥಳೀಯ ವಕ್ತøಗಳ ಪ್ರಕಾರ ಒಂದನೆಯ ಕಥೆಯ ದೇವ ಪಾಂಡ್ಯನು ಬಾರ್ಕೂರಿನ ಮಂದರ್ತಿ ಎಂಬ ಮೂಲಸ್ಥಾನ ಕಾಡಿನ ಕ್ಷೇತ್ರದ ಮರವನ್ನು ಹಡಗು ಕಟ್ಟಲು ಕಡಿಯುತ್ತಾನೆ. ಆ ಮರದಲ್ಲಿ ಮಹಿಷ/ನಂದಿಗೋನ ದೈವ (ತುಳುವರ ಕುಲದೈವ) ಇತ್ತು. ಅದು ನರಬಳಿ ಕೇಳುತ್ತದೆ. ಮುಂದೆ ಆ ದೈವವನ್ನು ಬಾರ್ಕೂರಿನ ಈ ಕ್ಷೇತ್ರದಲ್ಲಿ “ನಂಬು”(ಪ್ರತಿಷ್ಟಾಪಿಸು)ತ್ತಾರೆ. ಇದು ನೆಲಮೂಲ ಐತಿಹ್ಯ
ಈ ಮೂರೂ ಕಥೆಗಳಲ್ಲಿ ಬಹುಮುಖ್ಯವಾಗಿ ಗಮನಿಸ ಬೇಕಾದುದು ನರಾಹುತಿ ಕೊಡುವ ಪದ್ಧತಿಯನ್ನು. ಅಂದರೆ ಈ ಘಟನೆÉ ನಡೆದ ಕಾಲ ಅಥವಾ ಈ ಕಥೆ ಸೃಷ್ಟಿಯಾದಾಗ ಮಾನವ ಬಲಿ ನೀಡುವ ಪದ್ಧತಿ ಇದ್ದಿರಬಹುದು. ಆದಾಗಲೇ ಮೌಖಿಕ ಪರಂಪರೆಯಲ್ಲಿ ಮುಂದುವರಿಯುತ್ತಿದ್ದ ಕುಂಡೋದರ ಭೂತದ ಕಥೆಯನ್ನು ಗ್ರಾಮ ಪದ್ಧತಿಯಲ್ಲಿ ಅಕ್ಷರ ರೂಪಕ್ಕೆ ಇಳಿಸಿರುವ ಸಾಧ್ಯತೆ ಇದೆ. (ಗುರುರಾಜ ಭಟ್ಟರ ಕಾಲದಲ್ಲಿ ಮೌಖಿಕ ಪರಂಪರೆಯ ಕಥನ ಶೋಧವಾಗಿರಲಿಲ್ಲ)
ಮನೆ ಕಟ್ಟುವಾಗ ಕೋಳಿ ಬಲಿ ಕೊಡುತ್ತಿದ್ದ ಪದ್ಧತಿ ನನ್ನ ಬಾಲ್ಯದಲ್ಲಿ ನಾನು ಕಂಡಿದ್ದೆ. ಮುಳಿ ಹುಲ್ಲಿನ ಮಾಡು ನಿರ್ಮಿಸುವಾಗ ಅಥವಾ ಹೆಂಚಿನ ಮನೆಗೆ ಹೆಂಚು ಹೊದೆಯಲು ಮರದ ಚೌಕಟ್ಟನ್ನು ಸಿದ್ಧ ಪಡಿಸುತ್ತಾರೆ. ಈ ಚೌಕಟ್ಟನ್ನು ತುಳು ಬಾಷೆಯಲ್ಲಿ `ಕೂಟು’ ಎನ್ನುತ್ತಾರೆ. ಇದರ ಮೇಲೆ ಮಾಡಿನ ರಚನೆಯಾಗುತ್ತದೆ. ಈ ಕೂಟನ್ನು ಗೋಡೆಯ ಮೇಲೆ ಇರಿಸುವ ಮೊದಲು ನೆಲದ ಮೇಲಿರುವಾಲೇ ನಾಲ್ಕು ಮೂಲೆಗಳಿಗೂ ಪ್ರಾಣಿ ಬಲಿ ನೀಡಿ ರಕ್ತ ಚೆಲ್ಲುವ ಪದ್ಧತಿ ಇದೆ.
ಹೀಗೆ ಹಡಗು, ಮನೆ -ಇತ್ಯಾದಿ ನಿರ್ಮಿಸುವಾಗ ಪ್ರಾಣಿ/ರಕ್ತ ಬಲಿಕೊಡುವ ಪದ್ಧತಿ ಇತ್ತು. ಮೇಲಿನ ಮೂರು ಸಂದರ್ಭಗಳಲ್ಲಿಯೂ ವ್ಯಾಪಾರಿಯ ಸೋದರಿ ಅಣ್ಣನ ರಕ್ಷಣೆಗೆ ಧಾವಿಸುತ್ತಾಳೆ. ಮಡದಿ ತನ್ನ ಮಕ್ಕಳ ಮೇಲೆ ತನ್ನ ಹಕ್ಕನ್ನು ಸ್ಥಾಪಿಸುತ್ತಾಳೆ. ಕಂಡಿಗೆ ಬೀಡಿನ ಪಾಡ್ದನ ಕಥೆಯಲ್ಲಿ ಬಲ್ಲಾಳರು ತನ್ನ ಸಹೋದರಿಯ ಬಳಿ ಹೀಗೆ ಹೇಳುತ್ತಾರೆ, “ ಹೆರಲು ಸಾಕಲು ಆಕೆಗಂತೆ. ಅವು ನನಗೆ ಸೇರಿದ ಮಕ್ಕಳಲ್ಲವಂತೆ ನನಗೆ ಕೊಡಲಾರೆನೆಂದಳು”
ಹೀಗೆ ಮೂರು ಸಂದರ್ಭಗಳಲ್ಲಿಯೂ ಗಂಡನನ್ನು ತೊರೆದು ತವರಿಗೆ ತೆರಳುವ ಮೂಲಕ ತನಗೆ ತವರಿನಲ್ಲಿ ಇರುವ ಹಕ್ಕನ್ನು ಮಡದಿ ಪ್ರತಿಪಾದಿಸುತ್ತಾಳೆ. ಈ ಕಥೆಯು ಆ ಕಾಲದಲ್ಲಿ ಮಾತೃವಂಶೀಯತೆ ಜಾರಿಯಲ್ಲಿತ್ತು ಎನ್ನುವುದನ್ನು ಸಾಕ್ಷೀಕರಿಸುತ್ತದೆ.
ಬಾರ್ಕೂರಿನಲ್ಲಿ ಪ್ರಚಲಿತವಿದ್ದ ಹಳೆಯ (ಬಾರ್ಕೂರು ಹಿರಿಯಣ್ಣ ಸೆಟ್ರು)ಕಥೆಯೊಂದನ್ನು ಇತಿಹಾಸದಲ್ಲಿ ದಾಖಲಾಗಿರುವ ಪಾಂಡ್ಯ ಹೆಸರನ್ನು ಉಪಯೋಗಿಸಿ ದೇವಪಾಂಡ್ಯನ ಹೆಸರಲ್ಲಿ ಮರುರಚಿಸಿ ಗ್ರಾಮ ಪದ್ಧತಿಯಲ್ಲಿ ಅಳಿಯ ಸಂತಾನ ಕಟ್ಟುಕಟ್ಟಲೆಗಳನ್ನು ಮರು ಸ್ಥಾಪಿಸಲು ಮಾಡಿದ ಪ್ರಯತ್ನ ಇದಾಗಿರಬಹುದು.
ಕುಂಡೋದರ ಗುಡಿ |
ಬಲಿಕಂಬದ ಬಳಿ ನಾಗ ಶಿಲ್ಪ |
ಕುಂಡೋದರ ಗುಡಿ |
ಕುಂಡೋದರ-ಮಹಿಷಂತಾಯ |
ಕುಂಡೋದರ :
ತುಳುನಾಡಿನ ಶಾಸನಗಳಲ್ಲಿ ಕುಂಡೋದರ ಭೂತದ ಬಗ್ಗೆ ಅಥÀವಾ ಭೂತಾಳ ಪಾಂಡ್ಯನ ಬಗ್ಗೆ ಉಲ್ಲ್ಲೇಖ ಇಲ್ಲ. ಕುಂಡೋದರ ಗುಡಿ ಬಾರ್ಕೂರಿನ ಮಹಿಷಾಸುರ ಗುಡ್ಡದಲ್ಲಿ ಇದೆ ಎಂದು ನನಗೆ ಮಾಹಿತಿ ನೀಡಿದವರು ಸಿಂಹಾಸನ ಗುಡ್ಡೆಯ ಅರ್ಚಕರಾದ ಗಣಪಯ್ಯ ಅಡಿಗರು. ಈ ಗುಡಿಯ ಬಗ್ಗೆ ಗುರುರಾಜ ಭಟ್ಟ.ರು ಹೀಗೆ ಬರೆಯುತ್ತಾರೆ:
“ಮಹಿಷಾಸುರ ದೇಗುಲದ ರೇವಂತ (ಕ್ರಿ.ಶ. 10-12ನೇ ಶತಕ) - ಇದೊಂದು ಮೂರು ಅಡಿ ಎತ್ತರದ ಶಿಲ್ಪ. ಕುದುರೆಯ ಮೇಲೆ ಸವಾರಿ ಮಾಡಿಕೊಂಡ ರೇವಂತನ ನಿರ್ದೇಶನವೂ ಕುದುರೆಯ ನಿರ್ದೇಶನವೂ ಚೈತನ್ಯ ಪೂರ್ಣವಾಗಿವೆ. ಕುದುರೆಯ ಮುಂಗಾಲಿನ ಕೈಕೆಳಗೆ ಹುಲಿಯ ನಿರ್ದೇಶನವಿದೆ. ಕುಂಡೋದರ ಮತ್ತು ಭೂತಾಳ ಪಾಂಡ್ಯರಾಯನಿಗೆ ಸಂಬಂಧಿಸಿದ ಕತೆಗೂ ಈ ದೇಗುಲಕ್ಕೂ ಸಂಬಂಧವಿದೆ ಎಂದು ಪ್ರತೀತಿ. ಆದರೆ ಈ ಬಿಂಬವು ಜೈನ ಬ್ರಹ್ಮನಂತೆ ಕಂಡು ಬರುತ್ತದೆ. ಇಲ್ಲಿಯೇ ಮರದಿಂದ ಮಾಡಿದ ಪಂಚ ಮುಖ ನಂದಿಯೂ ಒಂದು ಕೋಡಿನಿಂದ ಕೂಡಿದ ನಂದಿಯೂ ಇವೆ. ಈ ದೇಗುಲವು ಈಗ ಸಂಪೂರ್ಣವಾಗಿ ಜೀರ್ಣೋದ್ಧಾರಗೊಂಡಿದೆ.” ( ಬಾರ್ಕೂರು ಪು. 34.)”
ಬಾರ್ಕೂರಿನ ಪಂಚಲಿಂಗೇಶ್ವರ ದೇವಸ್ಥಾನದ ಹಿಂದೆ ಇರುವ ಗುಡಿಯಲ್ಲಿ ಕುದುರೆ ಸವಾರನ ಶಿಲ್ಪ ಇದೆ. ಇಲ್ಲಿ “ರೇವಂತ ದೇವಸ್ಥಾನ” ಎಂಬ ಫಲಕ ಇದೆ. ಇದು ಭವ್ಯ ಶಿಲ್ಪ ಅಲ್ಲ. ಎಡದ ಕೈಯಲ್ಲಿ ಖಡ್ಗ, ಬಲದ ಕೈಯಲ್ಲಿ ಫಲ ಇರುವÀ ಕಿರೀಟಧಾರಿ ಶಿಲ್ಪ. ಕುದುರೆ ನಿಂತ ಭಂಗಿಯಲ್ಲಿ ಇದೆ. ಇದು ಬಾರ್ಕೂರಿನ `ಕಾವಲು ದೈವ’ ಎಂದೂ ಹೇಳುತ್ತಾರೆ. ಈ ರೇವಂತ ಶಿಲ್ಪಕ್ಕೂ ಕುಂಡೋದರ ಗುಡಿಯಲ್ಲಿ ಕುದುರೆ ಮೇಲೆ ಕುಳಿತ ಸುಂದರ ಶಿಲ್ಪಕ್ಕೂ ಸಾಕಷ್ಟು ವ್ಯತ್ಯಾಸ ಇದೆ. ರೇವಂತ ಶಿಲ್ಪದ ಮುಂದೆ ಹುಲಿ ಇಲ್ಲ.
ರೇವಂತ |
ಭಟ್ಟರು ಮೇಲಿನ ವ್ಯಾಖ್ಯಾನ ನೀಡುವಾಗ ಸ್ಥಳೀಯ ಉಪಾಸಕರ ಬಳಿ ಮಾಹಿತಿ ಕೇಳಿದ್ದಿರಲಾರರು. ಅವರದು ಶಿಲ್ಪಶಾಸ್ತ್ರೀಯ ಅಧ್ಯಯನ. ಕುದುರೆಯ ಮೇಲೆ ಕುಳಿತ ಶಿಲ್ಪದ ಪೀಠದ ಒತ್ತಿನಲ್ಲಿ ಅಷ್ಟೇ ಪ್ರಾಮುಖ್ಯತೆ ನೀಡಲಾದ, ಪೂಜೆಗೊಳ್ಳುವ ಸ್ಥಳೀಯ ಹಾಸುಕಲ್ಲಿನ ಶಿಲ್ಪ ಇದೆ. ಇದು ಎಮ್ಮೆ(ಮಹಿಷಂದಾಯ) ಶಿಲ್ಪ. ಈ ಶಿಲ್ಪವು ಪುರಾತನವಾದುದು.
ಅದಕ್ಕಿಂತಲೂ ಪುರಾತನವಾದ ಮೂಲ ಮಹಿಷಂದಾಯನ ಭಗ್ನ ಶಿಲ್ಪ ಎಡಮೂಲೆಗೆ ಇದೆ. ಭಟ್ಟರ ಕೃತಿಯಲ್ಲಿ ಇರುವ ಈ ಗುಡಿಯ ಹಾಸುಗಲ್ಲಿನ ಮಹಿಷಂದಾಯ ಶಿಲ್ಪ 13ನೆಯ ಶತಮಾನಕ್ಕೆ ಸೇರಿದ್ದು ಎನ್ನುತ್ತಾರೆ. ಹಾಗಿದ್ದಲ್ಲಿ ಮಹಿಷಂದಾಯನ ಉಪಾಸನೆ 13ನೆಯ ಶತಮಾನಕ್ಕೂ ಆಚಿನದ್ದು ಎಂದಾಗುತ್ತದೆ. ಮರದ ಪಂಚಮುಖಿ ನಂದಿ (ಮಹಿಷ) 15ನೆಯ ಶತಮಾನಕ್ಕೆ ಸೇರಿದೆ, ಮತ್ತು ಏಕಶೃಂಗಿ 16ನೆಯ ಶತಮಾನಕ್ಕೆ ಸೇರಿದೆ.
ಮಹಿಷಂತಾಯ ಹೆಸರು ಇರಬೇಕಾದಲ್ಲಿ ‘ಮಹಿಷಾಸುರ’ ಎಂದು ಅಸುರ ಹೆಸರನ್ನು ಯಾವಕಾರಣದಿಂದ ಈ ದೇವಾಲಯಕ್ಕೆ ನೀಡಲಾಯಿತು ಎಂದು ತಿಳಿದು ಬಂದಿಲ್ಲ. ತುಳುವರು ಮಹಿಷ ರಾಕ್ಷಸನಲ್ಲ. ಕೃಷಿ ಸಂಸ್ಕøತಿಯ ಪೋಷಕ ದೈವ. ತುಳುವರು ಎಮ್ಮೆಯನ್ನು ‘ಸಂಸ್ಕøತದಲ್ಲಿ ‘ಮಹಿಷಂತಾಯ’ ಎನ್ನಲಾಗಿದೆ. ಸಾಮಾನ್ಯವಾಗಿ ‘ಮೂಲದ ಮಹಿಷಂದಾಯ’ ಎಂದು ಕರೆಯುತ್ತಾರೆ. `ಆದಿ ಮೂಲತಾನದ ಮಹಿಷಂದಾಯ.’ ಈ ಶಕ್ತಿಗೆ ಇಡಿಯ ತುಳುನಾಡಿನಲ್ಲಿ ಅಗ್ರಪೂಜೆ. ಮೊದಲ ಉಪಾಸನಾ ಆಚರಣೆ ಅರ್ಥಾತ್ ಕೋಲ ನಡೆಯುತ್ತದೆ.
ಮಹಿಷಂತಾಯ ನಾಗಬೆರ್ಮನ ಪರಿವಾರ ದೈವ. ಪರಿವಾರ ದೈವಗಳಲ್ಲಿ ಪಂಚ ಶಕ್ತಿಗಳು ಇವೆ. (ನಾನು ಇದುವರೆಗೆ ಮಹಿಷಂತಾಯ ಎಂದರೆ ಕೋಣ ಎಂದು ತಿಳಿದೆದ್ದೆ ಅದು ಎಮ್ಮೆ ಎಂಬ ವಿಷಯ ನನಗೆ ಎಸ್. ಕೆ. ರಾಮ ಚಂದ್ರರಾವ್ ಅವರ ಕೃತಿಯಲ್ಲಿ ದೊರಕಿತು. ರಾಮಚಂದ್ರರಾವ್ ಅವರ ಅಭಿಪ್ರಾಯವೇ ಸರಿ. ತುಳುನಾಡಿನ ಶಕ್ತಿಗಳೆಲ್ಲ ಸ್ತ್ರೀ ಶಕ್ತಿಗಳು ಎಂಬುದಾಗಿ ಉಪಾಸನಾ ವಿಧಿಗಳಲ್ಲಿ ಭಾಗವಹಿಸುವವರು ಹೇಳುತ್ತಾರೆ)
ಇಡಿಯ ತುಳುನಾಡಿನಲ್ಲಿ ಮೂಲಸ್ಥಾನದ ಪ್ರಧಾನ ದೈವ ನಾಗಬೆರ್ಮರ್ ಅರ್ಥಾತ್ ನಾಗಬ್ರಹ್ಮ (ಸರ್ಪ). ಹುತ್ತದ ರೂಪದಲ್ಲಿ ಅಥವಾ ಭಿನ್ನ ಸಂಕೇತದ ಮೂಲಕ ನಾಗಬೆರ್ಮರ ಉಪಾಸನೆ ನಡೆಯುತ್ತದೆ. ನೇಮ/ಕೋಲದ ಉಪಾಸನೆಯೂ ಮುಂದುವರಿದಿದೆ. ಮಹಿಷನ/ಗುಡಿಯಲ್ಲೂ ಪಂಚ ಶಕ್ತಿಗಳಿವೆ. ಹೀಗಿರುವಾಗ ಇಲ್ಲಿ ಕಾಣುವ ಸುಂದರವಾದ ಶಿಲ್ಪ ‘ನಾಗಬೆರ್ಮ’ ಎನ್ನುವುದರಲ್ಲಿ ಅನುಮಾನ ಇಲ್ಲ. ಕುಂಭ/ಕುಂಡದಿಂದ ಉದಿಸಿದ ನಾಗಶಕ್ತಿ. ಮಹಿಷ ನಾಗಬೆರ್ಮರ ಪರಿವಾರ ಶಕ್ತಿ.
ಕುಂಡೋದರ : ಕುಂಡ ಪದದ ವ್ಯತ್ಪತ್ತಿ:
ಕುಂಡ = 1 ಮಡಕೆ (ಕ.ನಿ.) 2 ನೀರು ತುಂಬಿದ ಕೊಳ. 3 ಕುಂಡಣಿ =ಹಾವು ಸರ್ಪ(ಕುಂಡಲಿನಿ) ಕುಂಡಲಿನಿ ಶಕ್ತಿ ಯೋಗ ಶಾಸ್ತ್ರದಲ್ಲಿ ಸರ್ಪರೂಪವಾಗಿ ರೂಪಿಸಲ್ಪಟ್ಟ ಒಂದು ಶಕ್ತಿ, ದುರ್ಗೆ. 4 ‘ಕುಂಡಳೀಶ’ =ಹಾವುಗಳ ಒಡೆಯ 5 ಕುಂಡಲೀ ಶಯನ: ಶೇಷನ ಮೇಲೆ ಮಲಗಿದವನು 6 ‘ಕುಂಡಲೀಶ್ವರ ಕುಂಡಲ’ ಎಂದರೆ ಸರ್ಪರಾಜನನ್ನೇ ಕಿವಿಯ ಆಭರಣ ಮಾಡಿಕೊಂಡವನು (ಕ.ನಿ.)
ನಾಗ ಬೆರ್ಮರ ಪರಿವಾರ ದೈವಗಳಾದ ರೆಕ್ಕೆಸಿರಿಯೂ ಕುಂಭದಿಂದ (ಕಡ್ಯ/ಮಡಕೆ)ಯಿಂದ ಉದಿಸಿದ ನಾಗ ಕನ್ಯಾಶಕ್ತಿ. ಕೊಡಮಣಿತ್ತಾಯ ದೈವ ಕೊಡ/ಕುಂಭದಿಂದ ಉದಿಸಿದ ನಾಗ ಕನ್ಯಾ ಶಕ್ತಿ. ಕಾಸರಗೋಡಿನಲ್ಲಿ ನೆಲೆಯಾಗಿರುವ ತುಳುವರ ದೈವ ಬಿರ್ನಾಳ್ ಶಕ್ತಿಯೂ ಕೊಡದಿಂದ ಉದಿಸಿದ ನಾಗಶಕ್ತಿ. ಕಾಸರಗೊಡಿನ ಬಂಬ್ರಾಣ ಮನೆಯ ರಾಜನ್ ದೈವ ‘ಕುಂಡಕ್ಕರ”. ತುಳುವರ ಮೂಲಸ್ಥಾನದ ಮೂಲ ರೂಪದ ಆರಾಧನೆಯಲ್ಲಿ ಈಗಲೂ ಮಡಕೆಯಲ್ಲಿ ನೀರು ಹಾಕಿ ನಾಗಶಕ್ತಿಗಳನ್ನು ಉಪಾಸನೆ ಮಾಡಲಾಗುತ್ತದೆ. ಕಾಡಿನಲ್ಲೂ ನಾಡಿನಲ್ಲೂ ಈ ರೀತಿಯ ಉಪಾಸನೆ ಮುಂದುವರಿದಿದೆ. (ನೋಡಿ ಇಂದಿರಾ ಹೆಗ್ಗಡೆ: ತುಳುವರ ಮೂಲತಾನ ಆದಿ ಆಲಡೆ ಪರಂಪರೆ ಮತ್ತು ಪರಿವರ್ತನೆ. 20012 ನವಕರ್ನಾಟಕ) ಈ ಅರ್ಥದಲ್ಲಿ ಕುಂಡೋದರ ಎಂದರೆ ಕುಂಡದ ಉದರದಿಂದ/ಗರ್ಭದಿಂದ ಉದಿಸಿದ ತುಳುವರು ಪೂಜಿಸುವ ಮೂಲಸ್ಥಾನ ದೈವ, ಸಂಕಪಾಲ ಸರ್ಪ. ನಾಗಬೆರ್ಮರ ನೆಲ ಮೂಲ ಸಂಕೇತದ ಬದಲಿಗೆ ಕುದುರೆ ಮೇಲೆ ಕುಳಿತ ಸುಂದರ ಶಿಲ್ಪವನ್ನು 10/12ನೆಯ ಶತಮಾನದಲ್ಲಿ ಪ್ರತಿಷ್ಟಾಪಿಸಿದ್ದಿರಬೇಕು. ಈ ರೀತಿಯ ಪರಿವರ್ತನೆಗಳು ಸರ್ವೇಸಾಮಾನ್ಯವಾಗಿ ನಡೆಯುತ್ತಿದೆ.
ಲೀಲಾ ಭಟ್ ಅವರ ಕುಂಡೋದರಿ ಶಕ್ತಿಯ ವಿವರಣೆ ಹೀಗಿದೆ:
“ ಶಾಂತಾ ದುರ್ಗಾಗಳಂತೆ ಕುಂಡೋದರಿಯೂ (ಕೈಗಳಲ್ಲಿ ಸರ್ಪ ಧರಿಸಿದ) ಭೂಮಿತಾಯಿಯ ಉಗ್ರ ರೂಪವೇ ಆಗಿದ್ದಾಳೆ) ಹುತ್ತವನ್ನು ಭೂಮಿಯೆಂದೂ ಸರ್ಪವನ್ನು ಅವಳ ಪುತ್ರನೆಂದೂ ಬಗೆಯುವುದು ಒಂದು ಕಲ್ಪನೆ. ಭೂಮಿತಾಯಿಯು ದುರ್ಗೆಯೊಡನೆ ಅಭೇದ ಭಾವದಿಂದ ಶಾಂತಾ ದುರ್ಗಾ (ಸಾಂತೇರಿ)ಆಗಿ ಗೋವಾ ಉತ್ತರ ಕನ್ನಡದಲ್ಲೆಲ್ಲಾ ಆರಾಧಿಸಲ್ಪಡುತ್ತಾಳೆ. ನಾಗನೆಂದರೆ ಕ್ಷೇತ್ರಪಾಲನೆಂದು ಕೆಲವರು ಅಭಿಪ್ರಾಯ ಪಡುತ್ತಾರೆ. ಆದರೆ ಶಾಂತ ದುರ್ಗೆಯನ್ನು ಸರ್ಪರೂಪದಲ್ಲಿ (ಸುಬ್ರಹ್ಮಣ್ಯನನ್ನು ಪೂಜಿಸಿದಂತೆ ಪೂಜಿಸುತ್ತಾರೆ. (ಅದೇ ಪುಟ)”
ಕುಡೆಲ್ತಿ ಮಾರ್ : ಬಂಟ್ವಾಳ ಅನಂತಾಡಿ ಮೂಲಸ್ಥಾನ ನಾಗಬನ ಕುಡೆಲ್ತಿ ಬನ ಆದರೆ ಅದರ ಬಳಿಯ ಕಂಬುಲ ಗದ್ದೆ ಕುಡೆಲ್ತಿ ಮಾರ್. ತಿಮರು/ತಿಮಾರ್ ಅಂದರೆ ಗದ್ದೆ. ಕುಡೆಲ್ತಿ ಎಂದರೆ ನಾಗ ಶಕ್ತಿಯ ಹೆಸರು ಇರಬಹುದು.
ಮೂಲಸ್ಥಾನ ದೈವವಾದ ನಾಗಬೆರ್ಮ ಪುರುಷನಾಗಿ ಉಲ್ಲಾಯನಾದರೆ ಆತನೊಳಗೆ ಇರುವ ಸ್ತ್ರೀ ಶಕ್ತಿ ಉಲ್ಲಾಲ್ತಿ. ಇವೆರಡೂ ಸೋದರ ಶಕ್ತಿಗಳು. ತುಳುನಾಡಿನ ಪರಂಪರೆಯಲ್ಲಿ ಉಲ್ಲಾಯ ಅರಸು ದೈವವಾಗಿ ಕುದುರೆ ಮೇಲೆ ಕುಳಿತರೆ, ಉಲ್ಲಾಲ್ತಿ ಹುಲಿಯ ಮೇಲೆ ಸವಾರಿ ಮಾಡುತ್ತಾಳೆ. “ಪಿಲಿ ಚಂಡಿ (ಹುಲಿಚಾಮುಂಡಿ)” ಯೂ ಮೂಲಸ್ಥಾನ ದೈವ. ಈ ಗುಡಿಯ ಉಪಾಸನೆಯ ಸಂದರ್ಭದಲ್ಲಿ ಕುಂಡೋದರನ ಮಾಧ್ಯಮನಾಗುವುದು ಬ್ರಾಹ್ಮಣ ಪಾತ್ರಿ.
ಕೆಲವೊಂದು ಮೂಲಸ್ಥಾನಗಳಲ್ಲಿ ಹುಲಿಯ ಪ್ರತಿಮೆಗಳು ಇವೆ. ಬಾಯ್ದೆರೆದು ಅರಚುವ ರೀತಿಯಲ್ಲಿ ಹುಲಿಯ ಪ್ರತಿಮೆಗಳು ಇರುತ್ತವೆ. ಮೂಲಸ್ಥಾನ ಮೂಲತಃ ಇದ್ದುದು ಕಾಡಿನೊಳಗೆ. ಈಗಲೂ ಹೆಚ್ಚಿನ ಕಡೆ ಕಾಡೊಳಗೆ ಮೂಲಸ್ಥಾನÀ ಇದೆ. ಸಾಂಕೇತಿಕವಾಗಿ ಮರ ಮತ್ತು ಶಿಲೆಗಳಲ್ಲಿ ತಾವು ಉಪಾಸಿಸುವ ಶಕ್ತಿಗಳನ್ನು ಆರೋಪಿಸಿ ಉಪಾಸನೆ ಮಾಡುವ ಪರಂಪರೆ ತುಳುನಾಡಿನಲ್ಲಿ ಇದೆ. ಮಹಿಷಾಸುರ ದೇಗುಲದ ಶಿಲ್ಪ ನಾಗರಿಕ ಜಗತ್ತಿನ ಕೊಡುಗೆ. ತುಳುನಾಡಿನಲ್ಲಿ ಬ್ರಾಹ್ಮಣ ಅರ್ಚಕರ ಪ್ರವೇಶ ಆದ ನಾಗಬ್ರಹ್ಮಸ್ಥಾನಗಳಲ್ಲಿ ತುಳು ನೆಲಮೂಲದ ಶಕ್ತಿಗಳಿಗೆ ಸಂಸ್ಕøತ ಹೆಸರನ್ನು ಆರೋಪಿಸಲಾಗುತ್ತಿದೆ. ಉದಾ “ಕೊಡಮಣಿತ್ತಾಯಿ=ಕುಂಭ ಕಂಠಿಣಿ, ರೆಕ್ಕೆಸಿರಿ=ರಕ್ತೇಶ್ವರಿ, ಪಿಲಿಚಂಡಿ=ವ್ಯಾಗ್ರಚಾಮುಂಡಿ, ಮಲರಾಯಿ ಮತ್ತು ಪಂಜುರ್ಲಿಗೆ=ವರಾಹಿ, ಬೊಬ್ಬರ್ಯ =ಬಾರ್ಬರಿಕಾ -ಹೀಗೆ ಅನೇಕ ಹೆಸರುಗಳು ಸಂಸ್ಕತೀಕರಣ ಗೊಂಡಿವೆ. ತುಳುವರ ನಂಬಿಕೆಯಂತೆ ನಾಗಬ್ರಹ್ಮ ಭೂತಗಳ ಒಡೆಯ. (ನೋಡಿ : ಡಾ.ಇಂದಿರಾ ಹೆಗ್ಗಡೆ ಅದೇ. 2012) ಹಾಗಾಗಿ ಇಲ್ಲೂ ನಾಗಬ್ರಹ್ಮನ ಹೆಸರನ್ನು ಸಂಸ್ಕøತೀಕರಿಸಿರುವ ಸಾದ್ಯತೆ ಇದೆ.
ಕುಂಡೋದರನ ಕುದುರೆ ಕೆನೆಯುವ ಭಂಗಿಯಲ್ಲಿದೆ. ಕುದುರೆಯ ಮೇಲೆ ಕುಳಿತ ಸವಾರನ ಎಡದ ಕೈಯಲ್ಲಿ ‘ಸುರಿಯ’ ಎನ್ನುವ ಯುದ್ಧಾಯುಧ ಇದೆ. ಬಲದ ಅಂಗೈಯಲ್ಲಿ ಫಲ ಇದೆ. ಕುದುರೆಯ ಎತ್ತಿದ ಬಲಗಾಲ ಬಳಿ ಇರುವ ಹುಲಿಯ ಶಿಲ್ಪ ನಡಿಗೆಯ ಗಂಭೀರ ಭಂಗಿಯಲ್ಲಿದೆ. ನಮ್ಮನ್ನು ದಿಟ್ಟಿಸುತ್ತಿದೆ. ಗುರುರಾಜ ಭಟ್ಟರ ಪ್ರಕಾರ `ಕುದುರೆ ಮೇಲೆ ಕುಳಿತ ಶಿಲ್ಪ ಜೈನ ಬ್ರಹ್ಮ, ಸುಮಾರು ಕ್ರಿ.ಶ. 11ನೆಯ ಶತಮಾನಕ್ಕೆ ಇದನ್ನು ರಚಿಸಿರಬಹುದು. ಜಯ ಪಾಂಡ್ಯ ಜೈನ ಮತಸ್ಥ. ಇವನ ತಂದೆ ಭೂತನಾಥ ಕುಂಡೋದರನ (ಮಹಿಷಾಸುರ)ನ ಭಕ್ತನಾಗಿದ್ದನು. (ಅದೇ ಪು. 41) ಆದರೆ ನನ್ನ ಪ್ರಕಾರ ಇದು ನಾಗ ಬ್ರಹ್ಮನ ಶಿಲ್ಪ. ಮಹಿಷ ಖಂಡಿತಾ ಅಲ್ಲ. ಮಹಿಷನ ಶಿಲಾ ಶಿಲ್ಪ ನಾಗಬ್ರಹ್ಮ ಶಿಲ್ಪದ ಬಳಿ ಪ್ರತ್ಯೇಕ ಇದೆ. ಇನ್ನೂ 5 ಮಹಿಷ ಶಿಲ್ಪಗಳು ಇಲ್ಲಿವೆ. ಇಲ್ಲಿ ಈಗಲೂ ಉಳಿದು ಬಂದಿರುವ ಆಚರಣೆಗಳನ್ನು ಗಮನಿಸುವಾಗ ಈ ಕ್ಷೇತ್ರವು ತುಳುವರ ಆದಿ ಮೂಲಸ್ಥಾನ ಎನ್ನುವುದು ಖಚಿತವಾಗುತ್ತದೆ. ಅಲ್ಲದೆ ಮಹತ್ವದ ಸಂಗತಿಯೆಂದರೆ ಇಲ್ಲಿ ಏಕಶೃಂಗದ ಮಹಿಷ (ಒಂದು ಕೊಂಬಿನ ಕೋಣ ಅಥವಾ ಎತ್ತು)ಇರುವುದು. ಉಡುಪಿಯಿಂದ ಉತ್ತರಕ್ಕೆ ಕೆಲವೆಡೆ ಏಕಶೃಂಗಿ ಶಿಲ್ಪ ಇದೆ. ಗುರುರಾಜ ಭಟ್ಟರ (1975)ಕೃತಿಯಲ್ಲಿ ಇಲ್ಲಿಯ ಕುಂಡೋದರನನ್ನೇ ಹೋಲುವ ಕುದುರೆಯ ಕಾಲ ಬಳಿ ಹುಲಿ ಇರುವ ಎರಡು ಶಿಲ್ಪಗಳ ಚಿತ್ರಗಳಿವೆ. ಇವು ಜೈನ ಬಸದಿಯ ಶಿಲ್ಪಗಳು.
ಐದುಮೊಗದ ಮಹಿಷಮದಾಯ |
ಮಹಿಷಾಸುರ ದೇಗುಲದ ಕುಂಡೋದರ (ನಾಗ ಬ್ರಹ್ಮ)ಶಿಲ್ಪಕ್ಕೆ ಹೊಂದಿಕೊಂಡಂತೆ ಮೂಲ ಮಹಿಷಂದಾಯ ಶಿಲ್ಪ ಇದೆ. ಅದರ ಬಲ ಭಾಗದಲ್ಲಿ ಸರಳ ರೇಖೆಯಿಂದ ಸ್ವಲ್ಪ ಮುಂದಕ್ಕೆ ಐದು ಮೊಗದ ಕೋಣ (ಪಂಚ ಮುಖಿ ನಂದಿಗೋನ) ಇದೆ. ಅದರ ಹಿಂದೆ ಮೂಲೆಗೆ ಬಹಳ ಹಿಂದೆ ನೆಲಮೂಲ ಸಂಸ್ಕøತಿಯಲ್ಲಿ ದೈವವನ್ನು ಆರೋಪಿಸಲಾಗುವ ಮರದ ಮುಂಡಿಗೆ ಇದೆ. (ಹಳೆಯ ಭಗ್ನ ಪ್ರಧಾನ ಮಹಿಷ ಶಿಲ್ಪವೂ ಅಲ್ಲಿಯೇ ಎಡ ಮೂಲೆಗೆ ಇದೆ)ಕುಂಡೋದರ ಗುಡಿಯ ಒಳಗಿನ ಹೊರ ಆವರಣದ ಬಲ ಭಾಗದಲ್ಲಿ ಎರಡು ಸ್ತ್ರೀ ಪ್ರತಿಮೆಗಳಿವೆ. ಅವುಗಳ ಮಧ್ಯೆ ಒಂದು ಮಹಿಷ ಇದೆ. ಅದರ ಮುಂದೆ ಒಂದು ಮಹಿಷ ಇದೆ ಅದಕ್ಕೂ ಮುಂದೆ ಮತ್ತೊಂದು ಏಕಶೃಂಗಿ ಮಹಿಷ ಇದೆ. ಅವುಗಳ ಮುಂದೆ ಎರಡು ಮರದ ‘ಮುಂಡಿಗೆ’ಗಳಿವೆ. ಎರಡು ಸ್ತ್ರೀ ವಿಗ್ರಹಗಳಲ್ಲಿ ಒಂದರ ಗಾತ್ರ ಎತ್ತರ ಇದೆ. ಇನ್ನೊಂದು ಪುಟ್ಟ ಪ್ರತಿಮೆ. ಅವುಗಳ ಎಡದ ಕೈಯಲ್ಲಿ ತ್ರಿಶೂಲ ಇದೆ. ಬಲದ ಕೈ ಇಳಿಬಿಡಲಾಗಿದೆ. ಕುದುರೆ ಮೇಲೆ ಕುಳಿತ ಮತ್ತು ಮೂಲ ಮಹಿಷ ಮಾತ್ರ ಶಿಲಾ ಶಿಲ್ಪ. ಉಳಿದವು ಮರದಿಂದ ರಚಿಸಿದವು.
ಚಿಕ್ಕುಗಳು ಮತ್ತು ಮಹಿಷಂದಾಯ |
ಇವುಗಳ ಎಡ ಭಾಗದಲ್ಲಿ ಕುದುರೆ ಏರಿ ಕುಳಿತ ಮಾನವನ ಮರದ ಪ್ರತಿಮೆ ಇದೆ. ಇವನ ಎಡದ ಕೈಯಲ್ಲಿ ಬಾಕು ಇದೆ. ಬಲದ ಕೈಯಲ್ಲಿ ಖಡ್ಗ ಇದೆ. ಈ ಮಾನವ ಪ್ರತಿಮೆಯನ್ನು ‘ಜಯಂತ’ ಎಂದು ಈ ಕ್ಷೇತ್ರದ ಅರ್ಚಕರಾದ ಭಾಸ್ಕರ ಶಾಸ್ತ್ರಿಯವರು ಹೇಳುತ್ತಾರೆ. ಈ ಕ್ಷೇತ್ರದ ರಕ್ಷಕ ದೈವ ಕುದುರೆ ಮೇಲೆ ಕುಳಿತ ಜಯಂತ. ದೇವಪಾಂಡ್ಯನ ಕಥೆಯ ಕಾಲಕ್ಕೂ ಹಿಂದೆ ಬಾರ್ಕೂರನ್ನು ‘ಜಯಂತಿಕಾ ನಗರ’ವೆಂದು ಕರೆಯಲಾಗುತ್ತಿತ್ತು. ಕುದುರೆಯ ಆಸು ಪಾಸಿನಲ್ಲಿ ಎರಡು ‘ಮುಂಡಿಗೆ’ಗಳಿವೆ. ಕುಂಡೋದರ ಮತ್ತು ಅದರ ಒತ್ತಿನಲ್ಲಿರುವ ಶಿಲ್ಪಗಳು ಮಾತ್ರ ಶಿಲೆಯಲ್ಲಿ ರಚನೆಯಾಗಿವೆ. ಉಳಿದೆಲ್ಲ ಶಿಲ್ಪಗಳು ಮರದಿಂದ ರಚನೆಯಾಗಿವೆ.
ಬಾರ್ಕೂರಿನಿಂದ ಉತ್ತರಕ್ಕೆ ಮರದಿಂದ ರಚಿಸಲಾದ ಐದು ಮುಖದ ನಂದಿಗೋನ ವಿಗ್ರಹಗಳು ಮೂಲಸ್ಥಾನಗಳಲ್ಲಿ ಹೆಚ್ಚಾಗಿ ಇವೆ. ಮೂಲದ ಮಹಿಷಂದಾಯ ಎಂದು ಕರೆಯುವ ಈ ಪ್ರತಿಮೆ ಬಾಯ್ದೆರೆದು ‘ಅಂಬಾ ಎನ್ನುವ ಆರ್ತನಾದ’ ಮಾಡುವಂತೆ ರಚಿಸಲಾಗುತ್ತದೆ. ಮೂಲಸ್ಥಾನಗಳ ಹುಲಿಗಳ ಪ್ರತಿಮೆಯೂ ಆರ್ತನಾದ ಮಾಡುವಂತೆ ಇವೆ.
ಕೆಲವು ಕಡೆ ಬಾಯ್ದೆರೆದ ಐದು ತಲೆಗಳ ಮಹಿಷನ ಐದು ಹೆಡೆಬಿಚ್ಚಿದ ನಾಗನನ್ನು ನೆನಪಿಸುತ್ತವೆ. ತುಳುನಾಡಿನಲ್ಲಿ ನಡೆಯುವ ಕೃಷಿ ಸಂಸ್ಕøತಿಯ ದೆಯ್ಯೊಲೆ ನಲಿಕೆಯ ಅವಳಿ ಸಿರಿಗಳು ತುಳುನಾಡಿಗೆ ಬರುವಾಗ ಅವುಗಳ ಜೊತೆಗೆ ಅತಿಕಾರೆ ಭತ್ತ (ಬೀಜಕ್ಕೆ) ಮತ್ತು ನಾಗಬ್ರಹ್ಮ, ಮಯಿಸಂದಾಯ ದೈವ ಮತ್ತು ಪರಿವಾರ ದೈವಗಳು ಬರುತ್ತವೆ. ಕಂಬುಲ ನಡೆಯುವ ಮೊದಲು ಇವುಗಳಿಗೆ ಅದ್ದೂರಿಯ ಉಪಾಸನೆ ನಡೆಯುತ್ತಿತ್ತು.
ತುಳುನಾಡ ಸಿರಿ ಪಾಡ್ದನದ ಅವಳಿ ಶಕ್ತಿಗಳಾದ ಅಬ್ಬಗದಾರಗರು ಸಾಕಿದ ಕೋಣಗಳು ಮಯಿಸಂದಾಯ ಎಂಬ ಕಥೆ ಇದೆ. ಅಬ್ಬಗ ದಾರಗರು ಅಕಾಲ ಮರಣಕ್ಕೆ ಈಡಾದಾಗ ಅವರ ಕಾಷ್ಟದಿಂದ ಎದ್ದ ಹೊಗೆಯಲ್ಲಿ ಬೆಳ್ಳಿ ದುಂಬಿಗಳಾಗಿ ಅಬ್ಬಗ ದಾರಗರು ಮಹಿಷಂತಾಯನಿಗೆ ಗೋಚರಿಸುತ್ತಾರೆ. ಅವರು ಆಕಾಶದಲ್ಲಿ ಹೋಗುವುದನ್ನು ಕಂಡು ‘ಅಂಬಾ’ ಎಂದು ಅದು ಆರ್ತನಾದ ಮಾಡುತ್ತದೆ. ಆಗ ಅಬ್ಬಗ ದಾರಗರು “ನೀನು ಮೂಲಸ್ಥಾನಕ್ಕೆ ಹೋಗು ನಿನಗೆ ಮೊದಲ ಉಪಾಸನೆ ಅಲ್ಲಿ “ಎಂದು ಹರಸುತ್ತಾರೆ. ಈ ಗುಡಿಯ ಎರಡು ಸ್ತ್ರೀ ವಿಗ್ರಹಗಳು ಮತ್ತು ಅವುಗಳ ನಡುವೆ ಇರುವ ಮಹಿಷ ‘ಅಬ್ಬಗ ದಾರಗ’ಸಿರಿ ಶಿಲ್ಪಗಳು ಹಾಗೂ ಅವರ ಸಾಕು ಕೋಣವನ್ನು ನೆನಪಿಸುತ್ತದೆ.
\
ಮಹಿಷಂದಾಯ: ಕೃಷಿ ಸಂಸ್ಕøತಿಯ ಪೋಷಕ ದೈವ. ಕಂಬುಲದ ಆಚರಣೆಯಲ್ಲಿ ಇವನಿಗೆ ಉಪಾಸನೆ ಇದೆ. ನಾಗಬ್ರಹ್ಮರ ಉಪಾಸನೆಯೇ ಕಂಬುಲ.
ಮಹಿಷಾಸುರ ಗುಡಿಯ ಮುಂದೆ ನೇರವಾಗಿ 100 ಮೀಟರ್ ದೂರದಲ್ಲಿ ಕಟ್ಟೆ ಇದೆ. ಇದನ್ನು ‘ಸಿಡಿ ಕಟ್ಟೆ’ ಎನ್ನುತ್ತಾರೆ. ಅಲ್ಲಿಂದ ಮೂರು ಮೀಟರ್ ನೇರ ದೂರದಲ್ಲಿ ಸಿಡಿ ಕಂಬ ಇದೆ.
ಮುಂದುಗಡೆ ಇರುವುದು ದರ್ಶನ ಕಟ್ಟೆ ಹಿಂದೆ ಕಾಣುವುದು ಸಿಡಿಕಂಬ |
ಈ ಗುಡಿಯಲ್ಲಿ ದರ್ಶನ ಇದೆ. ಇಬ್ಬರು ದಶರ್ನ ಪಾತ್ರಿಗಳಿದ್ದಾರೆ. ಕುಂಡೋದರ ಭೂತಕ್ಕೆ ಬ್ರಾಹ್ಮಣ ಪಾತ್ರಿ. ಹೆಸರು ಗೋಪಾಲರಾವ್. ಈಗ ನಿಧನರಾಗಿದ್ದಾರೆ. ಹಾಯ್ಗೂಳಿ ಪಾತ್ರಿಯಾಗಿ ಕುಂಬಾರ ಜಾತಿಯವರು. ಅವರ ಹೆಸರು ಬಾಬು. ಬಾಬು ಈಗಲೂ ದರ್ಶನ ಪಾತ್ರಿಯಾಗಿದ್ದಾರೆ. ಗುಡಿಯ ಮುಂದಿನ ‘ದಶರ್ನ ಕಟ್ಟೆ’ಯಲ್ಲಿ ದರ್ಶನ ನಡೆಯುತ್ತದೆ. ಸ್ಥಳೀಯರ ಪ್ರಕಾರ ಕುಂಡೋದರ ದರ್ಶನ ಬಂದವರು ಈ ಕಟ್ಟೆಯ ಮೇಲೆ ನಿಂತು ಕೊಳ್ಳುತ್ತಾರೆ. ಆಗ ಕಷ್ಟ ಪರಿಹಾರವನ್ನು ದೈವಗಳ ಬಾಯಿಯಿಂದ ಭಕ್ತರು ಬಯಸುತ್ತಾರೆ. ಗುಡಿಯ ಮುಂದೆ ಎಡ ಮೂಲೆಯಲ್ಲಿ ಬಾವಿ ಇದೆ.
ಗುಡಿಯ ಎಡಭಾಗದಲ್ಲಿ ಬಲಿಕಂಬ ಇದೆ. ಈ ಕಂಬದಡಿ ಒಂದು ನಾಗ ಶಿಲ್ಪ ಇದೆ. ಬಹಳ ಹಿಂದೆ ಈ ಕಂಬದ ಬುಡದಲ್ಲಿ ಕೋಳಿ ಬಲಿ ನೀಡಲಾಗುತ್ತಿತ್ತು ಎಂದು ಕೆಲವರು ಮಾಹಿತಿ ನೀಡಿದ್ದರು. ಆದರೆ ಈಗಿನ ಅರ್ಚಕರಿಗೆ ಈ ಬಗ್ಗೆ ಮಾಹಿತಿ ಇಲ್ಲ.
ಪೂಜಾ ಪದ್ಧತಿ ಮತ್ತು ಉಪಾಸನಾ ವಿಧಿ:
ಕುಂಡೋದರ ಗುಡಿಯಲ್ಲಿ ಅರ್ಚಕ ವೃತ್ತಿ ಹಿಂದೆ ಕೃಷ್ಣ ಬಾಯರಿ ಕುಟುಂಬದವರಲ್ಲಿ ಇತ್ತು. ಮಕ್ಕಳಿಲ್ಲದ ಅವರು ಅರ್ಚಕ ಹಕ್ಕನ್ನು ಈಗಿನ ನರಸಿಂಹ ಶಾಸ್ತ್ರಿ ಕುಟುಂಬಕ್ಕೆ ಹಸ್ತಾಂತರಿಸಿದರು. ಈಗ ನರಸಿಂಹ ಶಾಸ್ತ್ರಿಯವರ ಮಗ ಗಣೇಶ ಶಾಸ್ತ್ರಿ ಅರ್ಚನೆಯ ಕೆಲಸ ಮಾಡುತ್ತಾರೆ. ನಿತ್ಯ ಅರ್ಚನೆ ಇದೆ.
ಉಪಾಸನಾ ವಿಧಿ: ಪ್ರತಿ ತಿಂಗಳ ಸಂಕ್ರಾಂತಿಯ ಮೊದಲ ರಾತ್ರಿ ಕುಂಡೋದರನ ಬಳಗದಲ್ಲಿ ಇರುವ ಏಳು ದೈವಗಳಿಗೆ ಚರು ( ಅನ್ನ ನೈವೇದ್ಯ ಹಾಕುತ್ತಾರೆ) ಸಂಕ್ರಾಂತಿಯ ದಿನ ಗುಡಿಯ ಹೊರಗೆ ಎರಡು ‘ಚರು’ ಹಾಕುತ್ತಾರೆ. ಅದರ ಮಾರನೆಯ ದಿನ ಎರಡು ಪ್ರಾಣಿ ಆಹುತಿ/ಬಲಿ ಇದೆ.
ಮಾಯಿ ಹೋಗಿ ಸುಗ್ಗಿ ಬರುವ ಸಂಕ್ರಾಂತಿಗೆ (ಮಾರ್ಚ್ 14) ವಾರ್ಷಿಕ ಜಾತ್ರೆ.. ಅಂದು ಗುಡಿಯ ಮುಂದೆ ಕೆಂಡದ ಗುಡ್ಡ ನಿರ್ಮಿಸಿ ಕೆಂಡಸೇವೆ ನಡೆಸುತ್ತಾರೆ. ಕೆಂಡವನ್ನು ತುಳಿಯುವವರು ಮಹಿಳೆಯರು ಮತ್ತು ಮಕ್ಕಳು. ಈ ಸೇವೆ ಹಾಯ್ಗೂಳಿಗೆ. (ಏಕಶೃಂಗಿ ಮಹಿಷನಿಗೆ)
ಮಹಿಷ ಮಂದರ್ತಿಯ ಕಾಡಿನ ದೈವ
ಕುಂಡೋದರ/ಮಹಿಷನ ಗುಡಿಯ ಮುಂದೆ ಉರಿಸಲಾದ ಕೆಂಡದ ರಾಶಿಯಿಂದ ಕೆಂಡವನ್ನು ಅನತಿದೂರದಲ್ಲಿ ಇರುವ ಮಂದರ್ತಿ ಕ್ಷೇತ್ರದ ಕೆಂಡ ಸೇವೆಗೆ ಕೊಂಡು ಹೋಗುವ ಪದ್ಧತಿಯು ಕುಂಡೋದರ ಭೂತಕ್ಕೆ ಸಂಬಂಧಿಸಿದೆ.
ಮಂದರ್ತಿ ಮೂಲತಃ ನಾಗಮೂಲ ಕ್ಷೇತ್ರ. ಇಲ್ಲಿಯ ಹುತ್ತದ ಮುಂದೆ ದುರ್ಗಾ ಶಿಲ್ಪವನ್ನು ಪ್ರತಿಷ್ಠಾಪಿಸಿದ್ದು ಅನಂತರದ ಬೆಳವಣಿಗೆ.
ಸ್ಥಳೀಯರ ಪ್ರಕಾರ ಐತಿಹ್ಯದ ದೇವ ಪಾಂಡ್ಯ ಹೊಸ ಹಡಗು ಕಟ್ಟಲು ಮರ ಕಡಿದುದು ಮಂದರ್ತಿಯ ಕಾಡಿನಿಂದ. ಕಡಿದ ಮರದಲ್ಲಿ ಮೂಲ ದೈವ ಮಹಿಷಂತಾಯ ನೆಲೆಸಿದ್ದ. ಮೂಲಸ್ಥಾನದ ಮರ ಕಡಿದಾಗ ಆತ ನರ ಬಲಿ ಕೇಳಿದ್ದ.
ಈ ಪ್ರದೇಶದ ಬಾಬು ಪೂಜಾರಿ ಮತ್ತು ಕೆಲವರ ಪ್ರಕಾರ ಮಂದರ್ತಿಯ ಮಹಿಷಂತಾಯ ಕುಂಡೋದರ ಆದುದು ಕುದುರೆ ಮೇಲೆ ಕುಳಿತ ಶಿಲ್ಪ ರೂಪ ಪಡೆದುದು ಅನಂತರದ ಬೆಳವಣಿಗೆ. ಕುಂಡೋದರ ಗುಡಿಯ ಮುಂದೆ ಕೆಂಡ ಸೇವೆ ಆದ ಮೇಲೆ ಕೆಂಡದ ರಾಶಿಯಿಂದ ಕೆಂಡವನ್ನು ಮಂದರ್ತಿಗೆ ತೆಗೆದುಕೊಂಡು ಹೋಗುವ ಪದ್ಧತಿ ಇತ್ತು. ಈ ಕೆಂಡದಲ್ಲಿ ಮಂದರ್ತಿಯ ಕೆಂಡ ಸೇವೆಗೆ ಕೆಂಡ ಉರಿಯ ಬೇಕಿತ್ತು. ಕೆಲವು ವರ್ಷಗಳಿಂದ ಮಂದರ್ತಿ ಜಾತ್ರೆಯನ್ನು ಎಪ್ರಿಲ್ ತಿಂಗಳಿಗೆ ಮುಂದೂಡಲಾಗಿದೆ. ಹೀಗಾಗಿ ಕೆಂಡವನ್ನು ಮಂದರ್ತಿಗೆ ಕೊಂಡು ಹೋಗುವ ಪದ್ಧತಿ ನಿಂತು ಹೋಗಿದೆ.
ಸಿಡಿ ಆಚರಣೆ:
ಕೆಂಡ ಸೇವೆಯ ಮರುದಿನ ಸಿಡಿ ಆಚರಣೆ ನಡೆಯುತ್ತದೆ. ಈ ಪದ್ಧತಿ ಪೂರ್ವ ಕಾಲದಿಂದ ಮುಂದುವರಿದಿದೆ. ಆದರೆ ಆಚರಣೆಯ ಸ್ವರೂಪದಲ್ಲಿ ಬದಲಾವಣೆ ಬಂದಿದೆ.
ಸಿಡಿ ಕಂಬದ ತುದಿಯಲ್ಲಿ ‘ಅಡ್ಡಮರ ಪಟ್ಟಿ’ ಕಟ್ಟುತ್ತಾರೆ. ಇದನ್ನು ಗಿರಗಿರನೇ ತಿರುಗಿಸುವ ತಂತ್ರ ಇದೆ. ಸುಮಾರು ಕಾಲದ ಹಿಂದೆ ಬೆನ್ನಿನ ಚರ್ಮಕ್ಕೆ ಕೊಕ್ಕೆ ಸಿಕ್ಕಿಸುವ ಸಿಡಿ ಆಚರಣೆ ಇಲ್ಲಿ ನಡೆಯುತ್ತಿತ್ತು. ಬದಲಾದ ಪದ್ಧತಿಯಂತೆ ತಿರುಗಣೆ ಚಕ್ರಕ್ಕೆ ತೊಟ್ಟಿಲು ಕಟ್ಟುತ್ತಾರೆ. ಸಿಡಿ ಸೇವೆ ನೀಡುವವರು ತೊಟ್ಟಿಲಲ್ಲಿ ಕುಳಿತು ಸಿಡಿ ಸೇವೆ ನೀಡುತ್ತಾರೆ. ತೊಟ್ಟಿಲು ಮೇಲ್ಭಾಗÀದಲ್ಲಿ ಬಾಳೆ ಹಣ್ಣಿನ ಗೊನೆ ಕಟ್ಟುತ್ತಾರೆ. ತೊಟ್ಟಿಲು ಗಿರ ಗಿರನೇ ತಿರುಗುತ್ತದೆ. ಬಾಳೆ ಗೊನೆಯೂ ತಿರುಗುತ್ತದೆ. ತೊಟ್ಟಿಲಲ್ಲಿ ಇರುವವರು ಬಾಳೆ ಹಣ್ಣನ್ನು ಕಿತ್ತು ಕೆಳಗೆ ನೆರೆದ ಜನಸ್ತೋಮದ ಮಧ್ಯೆ ಎಸೆಯುತ್ತಾರೆ. ಅದನ್ನು ಪ್ರಸಾದ ಎಂದು ಹಿಡಿಯಲು ಪೈಪೋಟಿ ನಡೆಯುತ್ತದೆ.
ಸಿಡಿ ಸೇವೆ ನೀಡುವವರು ಗಂಡು ಮಕ್ಕಳು ಮತ್ತು ಪುರುಷರು ಮಾತ್ರ.
ಮಾರಿ ಪೂಜೆ ಮತ್ತು ಕುಂಡೋದರ:
ಕುಂಡೋದರ/ಮಹಿಷ ಗುಡಿಯ ಪಶ್ಚಿಮಕ್ಕೆ ‘ಬಾರ್ಕೂರು ಶಿವರಾಯ ಗರಡಿ’ ಇದೆ. ಈ ಗುಡಿಯ ಒಳಗೆ ಕುದುರೆ ಮೇಲೆ ಕುಳಿತ ತುಳು ಬ್ರಹ್ಮ (ಬೆರ್ಮೆರ್) ಪ್ರಧಾನ ಶಿಲ್ಪ ಇದೆ. ಕೋಟಿ ಚೆನ್ನಯರ ಮತ್ತು ಇತರ ಪರಿವಾರ ದೈವಗಳಿವೆ. ಹೊರಗೆ ಶಿವರಾಯ ಶಿಲ್ಪ ಇದೆ.
ಮಹಜಿಷಂದಾಯ ಮತ್ತು ಏಕಶೃಂಗಿ |
ಅಲ್ಲಿಂದ ಮಾರಿ ಓಡಿಸುತ್ತಾ ಕುಂಡೋದರ ಗುಡಿಯ ಬಳಿಗೆ ಬರುತ್ತಾರೆ. ಗುಡಿಯ ಒಳಗೆ ಚರು ಹಾಕಿ ಪೂಜೆ ಮಾಡುತ್ತಾರೆ. ಅನಂತರ ಬಾವಿ ಕಟ್ಟೆಯಲ್ಲಿ ಬಾಳೆ ಎಲೆಹಾಕಿ ಬಿಳಿ ಬಟ್ಟೆ ಹಾಕಿ ಚರು ಹಾಕುತ್ತಾರೆ. ಚರುವಿನ ಮೇಲೆ ಕುಂಕುಮ (ಅಥವಾ ಓಕುಳಿ ನೀರು) ಉದುರಿಸುತ್ತಾರೆ. ಕೆಲವು ಕೋಳಿಗಳನ್ನು ಕಡಿದು ಈ ಚರುವಿನ ಮೇಲೆ ರಕ್ತ ಹಿಂಡುತ್ತಾರೆ.
ಅಲ್ಲಿಂದ ಮಾರಿ ಓಡಿಸುವ ಕೂಗು ಹಾಕುತ್ತಾ ಬಾರ್ಕೂರಿನ ಗಡಿ ಪ್ರದೇಶ ಎಡ್ತಾಡಿಯವರೆಗೆ ಓಡುತ್ತಾರೆ. ಅಲ್ಲಿ ಗಡಿಯಲ್ಲಿ ಕೋಳಿ ಕಡಿಯುತ್ತಾರೆ. ಮರಳಿ ಎಲ್ಲರೂ ಶಿವರಾಯನ ಗುಡಿಗೆ ತೆರಳುತ್ತಾರೆ. ಶಿವರಾಯ ಕಟ್ಟೆಯಲ್ಲಿ ಶಿವರಾಯ ದಶರ್ನ ಇದೆ. ಹೀಗೆ ಈ ಗುಡಿಯ ಬಳಿ ಪ್ರಾಣಿ ಬಲಿ ಈಗಲೂ ನಡೆಯುತ್ತಿದೆ.
ಉಪಸಂಹಾರ
ಬಾರ್ಕೂರಿನ ಕುಂಡೋದರ ಕ್ಷೇತ್ರ ಮೂಲತಃ ತುಳುವರ ಮೂಲಕ್ಷೇತ್ರ. ನಾಗ ಬ್ರಹ್ಮ ಮತ್ತು ಪರಿವಾರ ದೈವಗಳ ಕ್ಷೇತ್ರ. ಇಲ್ಲಿ ಇರುವ ದೈವಗಳು ತುಳುವರ ಮೂಲತಾನದಲ್ಲಿ/ಹುಟ್ಟಿನ ಚಿತ್ತೇರಿಯಲ್ಲಿ ಇರುವ ದೈವಗಳು. ಕೃಷಿಪೋಷಕ ದೈವಗಳು. ಹಿಂದೆ ಇದು ಕಾಡು ಆಗಿದ್ದಿರಬಹುದು. ಇತ್ತೀಚಿನವರೆಗೂ ಬಿಲ್ಲವರು ಮಾವಿನ ರೆಂಬೆಗಳ ಪೊರಕೆ ಕಟ್ಟಿ ಈ ಗುಡಿ ಗುಡಿಸುತ್ತಾ ಒಳಗೆ ಪ್ರವೇಶಿಸುವ ಪದ್ಧತಿ ಇತ್ತು. ಇಂತಹ ಅನೇಕ ಆಚರಣೆಗಳು ಈ ಕ್ಷೇತ್ರ ಕಾಡಿನ ಮೂಲದ ಮಾನವನ ಉಪಾಸನಾ ಕ್ಷೇತ್ರ ಎನ್ನುವುದನ್ನು ಸಾಕ್ಷೀಕರಿಸುತ್ತದೆ.
ಮಹಿಷ ಅಥವಾ ನಂದಿಕೋಣ ಮೊದಲ ಉಪಾಸನೆ ಪಡೆಯುವ ದೈವ ಆದುದರಿಂದ ಈ ದೇಗುಲಕ್ಕೆ ಮಹಿಷಂತಾಯ ದೇಗುಲ ಎಂದು ಹೆಸರಾಗಿರಬೇಕು.
ಅಳಿಯ ಸಂತಾನವನ್ನು ಜಾರಿಗೆ ತಂದನೆಂಬ ಐತಿಹ್ಯದ ಕಥಾ ನಾಯಕ ದೇವ ಪಾಂಡ್ಯ ಮತ್ತು ಮೇಲೆ ನಾನು ತಿಳಿಸಿದ ಕಥಾನಾಯಕ ಹಿರಿಯಣ್ಣ ಸೆಟ್ರು ಇವರಿಬ್ಬರೂ ಬಾರ್ಕೂರಿನ ವ್ಯಾಪಾರಿಗಳು. ಬಹುಷಃ ಬಾರ್ಕೂರು ಹಿರಿಯಣ್ಣ್ಣ ಸೆಟ್ರ ಕಥೆಯೇ ಮರುರಚನೆಗೊಂಡು ದೇವಪಾಂಡ್ಯ ಕಥೆ ಆಗಿ ಬೆಳಕಿಗೆ ಬಂದಿರಬಹುದು. ಆದರೆ ಇವರು ಆಡಳಿತಕ್ಕೆ ಸಂಬಂಧಪಟ್ಟವರಲ್ಲ. ಮಂಗಳೂರು ತಾಲೂಕಿನ ದೇವರಾಯ ಕಾಮರಾಯ ಬಲ್ಲಾಳರು ಒಂದು ಬೀಡಿನ ಆಡಳಿತದಾರರು. ಕಂಡೆವು ಬೀಡು ಇಂದೂ ಮೂಲಸ್ಥಾನದ ಉಪಸನಾ ಆಚರಣೆಗಳನ್ನು ಮುಂದುವರಿಸಿದೆ. ಇಲ್ಲಿ ಮೂಲ ಮಹಿಷಂದಾಯ ಬಹಳ ಪ್ರಭಾವಶಾಲಿ. ಕುಮಾರ ಸಿರಿಶಕ್ತಿಗಳು ಹಾಗೂ ಧೂಮಾವತಿ, ಜಾರಂದಾಯ ಕೊಡಮಣಿತ್ತಾಯ-ಮುಂತಾದ ಪರಿವಾರ ಶಕ್ತಿಗಳು ಇವೆ. ಆದರೂ ಇವರು ಇಡಿಯ ತುಳುನಾಡಿನ ಪಿತೃಪ್ರದಾನ ಸಮಾಜವನ್ನು ಮಾತೃಪ್ರಧಾನ ಸಮಾಜವನ್ನಾಗಿ ಪರಿವರ್ತಿಸುವಷ್ಟು ದೊಡ್ಡ ಅರಸರಲ್ಲ. ಮಾನವ ಶಾಸ್ತ್ರಜ್ಞರ ಪ್ರಕಾರ ಮಾತೃಪ್ರದಾನತೆ ಪಿತೃಪ್ರಧಾನತೆಗೆ ಜಗತ್ತಿನ ಅನೇಕ ಕಡೆ ಪರಿವರ್ತನೆ ಆಗಿವೆ. ಆದರೆ ಪಿತೃಪ್ರಧಾನ ಸಮಾಜ ವ್ಯವಸ್ಥೆ ಮಾತೃಪ್ರಧಾನತೆಗೆ ಪರಿವರ್ತನೆಗೊಂಡಿರುವ ಉದಾಹರಣೆ ಇಲ್ಲ.
>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>
ಅಧ್ಯಯನಕ್ಕೆ ನೆರವಾದವರು : ಗಣಪಯ್ಯ ಅಡಿಗ ಅರ್ಚಕರು ಸಿಂಹಾಸನ ಗುಡ್ಡೆ
ಭಾಸ್ಕರ ಶಾಸ್ತ್ರಿ ಅರ್ಚಕರು ಮಹಿಷಾಸುರ ದೇವಸ್ತಾನ
ಅನೆ ಹಳ್ಳಿ ಗ್ರಾಮ ಬಾರ್ಕೂರು ಉಡುಪಿ
ಬಾಬು ಪೂಜಾರಿ ಬಾರ್ಕೂರು ಮುಂಬಯಿ
ಆಕರ ಕೃತಿಗಳು
ಬಿ. ಲೀಲಾಭಟ್ ಶಕ್ತಿಯ ಶೋಧನೆಯಲ್ಲಿ 1989 ಕರ್ನಾಟಕ ಸಂಘ ಪುತ್ತೂರು
ಗುರುರಾಜ ಭಟ್: ಬಾರ್ಕೂರು
ಕುಂಜಿಬೆಟ್ಟು ಸುಬ್ರಹ್ಮಣ್ಯ ಕೆದಿಲಾಯ: ಹಾಡಿಗೆ ಹನ್ನೆರಡು ಕಬರು.
ಇಂದಿರಾ ಹೆಗ್ಗಡೆ: ಬಂಟರು ಒಂದು ಸಮಜೋ ಸಾಂಸ್ಕøತಿಕ ಅಧ್ಯಯನ (ಕನ್ನಡ ಪುಸ್ತಕ ಪ್ರಾಧಿಕಾರ 2009)
ಇಂದಿರಾ ಹೆಗ್ಗಡೆ : ತುಳುವರ ಮೂಲತಾನ ಆದಿ ಆಲಡೆ :ಪರಂಪರೆ ಮತ್ತು ಪರಿವರ್ತನೆ. (ನವಕರ್ನಾಟಕ 2012)
ಸೂರ್ಯನಾಥ್ ಯು. ಕಾಮತ್ :(ವಿಜಯನಗರ ಕಾಲದ ತುಳುವರು)
ಶೀನಪ್ಪ ಹೆಗ್ಗಡೆ ಸಮಗ್ರ ಸಾಹಿತ್ಯ(1991)
ಕೃಪೆ ಇತಿಹಾಸ ದರ್ಶನ ಸಂಪುಟ 20-2014
No comments:
Post a Comment