Friday, November 7, 2014

ಕುಲಶೇಖರ ಆಳುಪೇಂದ್ರನ ಶಾಸನದಲ್ಲಿ ಅಳಿಯ ಸಂತಾನ ಕುಟುಂಬ ಪದ್ಧತಿ

Link ಅಳಿಯ ಕಟ್ಟು ಮತ್ತು ಬಾರ್ಕೂರು ಕುಂಡೋದರ :ಒಂದು ಅಧ್ಯಯನ


ಕರ್ನಾಟಕದ ಕರಾವಳಿ ಭಾಗದ ತುಳುನಾಡು ಕರ್ನಾಟಕದ ಇತರ ಭಾಗಕ್ಕಿಂತ  ಸಾಂಸ್ಕøತಿಕ ಮತ್ತು ಸಾಮಾಜಿಕ ಪದ್ಧತಿಯಲ್ಲಿ ಭಾರತದ ಇತರ ಭಾಗಕ್ಕಿಂತ ಭಿನ್ನವಾಗಿ ವಿಶಿಷ್ಠತೆಯನ್ನು ಪಡೆದಿದೆ. ಅಂತರ ಒಂದು ವಿಶಿಷ್ಠ ಸಾಮಾಜಿಕ ಪದ್ಧತಿ ಅಳಿಯ ಸಂತಾನ ಕುಟುಂಬ ಪದ್ಧತಿ ಅಥವಾ ಮಾತೃವಂಶೀಯ ಕುಟುಂಬ ಪದ್ಧತಿ. ಮಾತೃವಂಶೀಯ ಪದ್ಧತಿಯಲ್ಲೂ ರಾಜ್ಯವನ್ನು ಆಳುವ ಅರಸ ಪುರುಷನೇ. ಹೀಗಾಗಿ ಒಬ್ಬ ಅರಸ ಸತ್ತ ಅನಂತರ ಅವನ ಸೋದರಳಿಯ  ಆ ಸಿಂಹಾಸನಕ್ಕೆ ವಾರಸುದಾರನಾಗುತ್ತಾನೆ.  ಆದ್ದರಿಂದ ಅಳಿಯ ಸಂತಾನ ಪದ್ಧತಿ ಎನ್ನುವ ರೂಢಿ ಬೆಳೆದಿದೆ. ಆದರೆ ವಂಶದ ವಿಷಯದಲ್ಲಿ ಆತನ ತಾಯಿಯ ಮೂಲವನ್ನು ನೋಡುವುದರಿಂದ ಮಾತೃವಂಶೀಯ ಕುಟುಂಬ ಪದ್ಧತಿ ಎನ್ನುತ್ತಾರೆ. ವಾಸ್ತವವಾಗಿ ಇವೆರಡೂ ಒಂದೇ.

ಅಳಿಯಸಂತಾನ ಪದ್ಧತಿಯ ಬಗ್ಗೆ ಶಾಸನಾಂಕಿತ ದಾಖಲೆ ಸಿಗುವುದು ತಡವಾಗಿ. ಕ್ರಿ.ಶ. ಹತ್ತನೆಯ ಶತಮಾನದ ತಳಂಗರೆಯ ಜಯಸಿಂಹನ ಶಾಸನದಲ್ಲಿ ಆ ಆಸ್ತಿಯ ಉತ್ತರಾಧಿಕಾರವು ಹೆಣ್ಣುಮಕ್ಕಳಿಗಲ್ಲದೆ ಗಂಡುಮಕ್ಕಳಿಗೆ ಹೋಗ ಸಲ್ಲದು ಎಂದು ಜೋಗವ್ವೆಯು ಶಾಸನೀಕರಿಸಿದ್ದಾಳೆ. ಈ ಆಸ್ತಿಯು ಆಕೆಯ ತಾಯಿಯ ಮೂಲದಿಂದ (ಮಾತೃ ಮೂಲ) ಬಂದ ಆಸ್ತಿಯಾಗಿರದೆ ಆಕೆಯ ಸ್ವಯಾರ್ಜಿತ (ಕನ್ಯಾದಾನವಾಗಿ) ಆಸ್ತಿಯಾಗಿದೆ. ಹೀಗಾಗಿ ಆಕೆಗೆ ಶಾಸನಾಂಕಿತಗೊಳಿಸುವ ಅಗತ್ಯ ಬಂದಿರಬೇಕು.  10ನೆಯ ಶತಮಾನಕ್ಕಾಗಲೇ ತುಳುವ ರೂಢಿ ಪದ್ಧತಿಯಂತೆ ಹೆಣ್ಣುಮಕ್ಕಳಿಗೆ ತಾಯಿಯ/ಮಾತೃಮೂಲದ ಆಸ್ತಿ ಸಲ್ಲುತ್ತಿದ್ದು ಇತರ ಮೂಲಗಳ ಆಸ್ತಿಯಲ್ಲಿ ಗಂಡುಮಕ್ಕಳೂ ಪಾಲು ಪಡೆಯುತ್ತಿದ್ದಿರಬೇಕು. ಹೀಗಾಗಿ ಜೋಗವ್ವೆ ತನ್ನ ಆಸ್ತಿ ಹೆಣ್ಣು ಸಂತಾನಕ್ಕೆ ಮಾತ್ರ ಹೋಗಬೇಕೆಂದೂ ಹೆಣ್ಣು ಮಕ್ಕಳಿಲ್ಲವಾದರೆ ಗಂಡು ಮಕ್ಕಳಿಗೆ ಹೋಗಬಹುದೆಂದು ಶಾಸನ ಬರೆಸಿರಬೇಕು. ತಳಂಗೆರೆ ಆಳುಪರಸರ ಆಳ್ವಖೇಡಕ್ಕೆ ಸೇರಿದ ಭಾಗ.


ವರಾಂಗದ ಶಾಸನದ ಪ್ರಕಾರ ಕುಲಸೇಖರಾಳ್ಪೆಂದ್ರನಿಗೆ ಜಾಕಮಲಾದೇವಿ ಎಂಬ ರಾಣಿಯೂ ಇದ್ದಳು.
 ***********************************************************************************
 ಕ್ರಿ.ಶ. 1204ರ ವೀರ ಕುಲಶೇಖರನ ಮಂಗಳೂರು ಶಾಸನವು ಮಂಗಲಾಪುರದ ಭುವನಾಶ್ರಯದ ಮೊಗಸಾಲೆಯಲ್ಲಿ ನಡೆದ ರಾಜ ಶಭೆಯಲ್ಲಿ ಅಳಿಯ ವೀರ ಬಂಕಿದೇವನಿಗೆ ಮುಗುರುನಾಡಿನ ರಾಜಭಾರವನ್ನು ಬಿಟ್ಟುಕೊಟ್ಟ ಬಗ್ಗೆ ಉಲ್ಲೇಖ ನೀಡುತ್ತದೆ. ಶಾಸನದ ಕೊನೆಗೆ  “ ಯೀ ಧರ್ಮವನ್ನು ಶಿಲಾಶಾಸನಂಗೆಯಿದು ಕೊಟ್ಟ ಮಾವ ಕುಲಸೇಖರ ದೇವರ್ಗೆ ಅಳಿಯಂದಿರು ಬಂಕಿದೇವರು, ಬಂಮದೇವರು ಕುಲಸೇಖರ ದೇವರರ್ಗೇ ಮಂಗಳ ಮಹಾ .......” (ಕೆ.ವಿ ರಮೇಶ ಮತ್ತು ಎಂ.ಜೆ.ಶರ್ಮ ತುಳುನಾಡಿನ ಶಾಸನಗಳು ಸಂ. 36) ಎಂದಿದೆ. ಕೂರ್ಸಿ ಶಾಸನ ಬರೆದ 43 ವರ್ಷಗಳ ಬಳಿಕ ಮಂಗಳೂರು ಶಾಸನವನ್ನು ಬರೆಯಲಾಗಿದೆ. 1162ರಲ್ಲಿ ಕೂರ್ಸಿಯ ಭೂಮಿಯನ್ನು ದಾನ ನೀಡುವಾಗ ಕುಲಸೇಖರನ ಕುಟುಂಬದಲ್ಲಿ ಇದ್ದ ಇತರ ಆತನ ಸೋದರಳಿಯ ಪಾಂಡ್ಯ ಪಟ್ಟಿಗದೇವರುಂ, ಬಲ್ಲಹದೇವರುಂ, ಕುಲಶೇಖರ ದೇವರುಂ, ಕೀರ್ತಿದೇವರುಂ -ಇವರೆಲ್ಲರ ಪ್ರಸ್ತಾಪ ಮಂಗಳೂರಿನ ಮೇಲಿನ ಶಾಸನದಲ್ಲಿ ಇಲ್ಲ. ಬಂಕಿದೇವನ ಸೋದರ ಸಾಂತರ ದೇವನ ಪ್ರಸ್ತಾಪ ಕೂಡಾ ಇಲ್ಲಿ ಇಲ್ಲ.  ‘ಅಳಿಯಂದಿರು ಬಂಕಿದೇವರು, ಬಂಮದೇವರು ಕುಲಸೇಖರ ದೇವರರ್ಗೇ’ ಎಂದಿದೆ. ಸಾಂತರ ದೇವ ಆ ಸಂದರ್ಭದಲ್ಲಿ ರಾಜ ಸಭೆಯಲ್ಲಿ ಇಲ್ಲದೆ ಹೋಗಿರಬಹುದು. ಆದರೆ ಕೊಲಶೇಖರನ ಉತ್ತರಾಧಿಕಾರಿಯಾಗಬೇಕಾಗಿದ್ದ ಪಾಂಡ್ಯ ಪಟ್ಟಿಗದೇವ ಏನಾದ? ಬಹುಷ ಮುಗುರುನಾಡನ್ನು ಬಂಕಿದೇವನಿಗೆ ಕೊಟ್ಟು ಹಿರಿಯ ಅಳಿಯ ಪಾಂಡ್ಯ ಪಟ್ಟಿಗದೇವನು  ಆಳುಪ ಸಿಂಹಾಸನಕ್ಕೆ ಕೊಲಶೇಖರನ ಉತ್ತರಾಧಿಕಾರಿಯಾಗಿದ್ದಿರಬೇಕು.  .  ಈ ಮೂಲಕ ಆತ ತನ್ನ ಇಬ್ಬರು ಸೋದರಿಯರಲ್ಲಿ ರಾಜ್ಯವನ್ನು ಹಂಚಿರಬೇಕು. ತುಳುನಾಡಿನ ಅಳಿಯ ಸಂತಾನ ಪದ್ಧತಿಯಲ್ಲಿ ಎಲ್ಲಾ ಹೆಣ್ಣು ಮಕ್ಕಳಿಗೆ ಸಮಾನ ಭಾಗ ದೊರಕುತ್ತದೆ. ಮೂಲ ಭಾಗ ಹಿರಿಯವಳಿಗೆ ಸೇರುತ್ತದೆ.

ವರಾಂಗದ 13ನೆಯ ಶತಮಾನದ ಶಾಸನದಲ್ಲಿ ಆಳುಪ ಅರಸರಾದ ಪಟ್ಟಿಯೊಡೆಯ , ಪಾಂಡ್ಯ ಪಟ್ಟಿಯೊಡೆಯ, ಕವಿಯಾಳುಪ, ಮತ್ತು ಪಟ್ಟಿಯೊಡೆಯ ಕುಲಶೇಖರ ಇವರುಗಳ ಹೆಸರು ಕ್ರಮವಾಗಿ ಬಂದಿದೆ. ಶಾಸನದ ಕೊನೆಯ ಭಾಗದಲ್ಲಿ “ತ್ರಿಭುವನ ಶಾನ್ತರನನ್ನು ಹೊಗುಳುತ್ತಾ ಇವನಿಗೆ ‘ಶಾಂತರನೆಂಬನ್ವತ್ರ್ಥ ಸಂಜ್ಞೆಯ(0)’ ಎನ್ನುವುದಲ್ಲದೆ ಇವನನ್ನು ‘ವೀರ ಭೂಪಾಲ’ ಎನ್ನುತ್ತದೆ. “ರಿಪುರಾಯರ ತೂಳ್ದಿ ಧರ್ಮಮಂ ಪಾಳಿಸಿ ರಾಜ್ಯಲಕ್ಷ್ಮಿಯಂ ಮಿಳಿಸಿ ರಾಜ್ಯಂಗೈಯ್ಯುತ್ತಿರಲಾ ಮಹೀಭುಜ ನಿಜಾನುಜನ ಪಾರೋದರ ಶೌರ್ಯಚಾರ ವೀರಭೂಪಾಳನಿಂ ಕಿರಿಯನಪ್ಪ ಕುಂಡಣ ಕ್ಷೋಣೀಪಾಳನಖಿಲ ದಿಕ್ಪಾಳ ನಿಳಯಮಂ ನಿಜಕೀರ್ತಿಯಿಂ  ಧವಳಿಸಿ ಜಗತ್ಪ್ರಸಿದ್ಧ ವಿದ್ಯಾ ವಿಳಾಸಿನೀ ಸ್ವರ್ಣ ಕಣ್ರ್ಣಕುಂಡಲಾಭರಣನಪ್ಪು(ದ)..........ಪಂಡಿತ ಪಾಂಡ್ಯನೆನೆನಿಸಿ ಪಾಂಡ್ಯ ದನಂಜಯ ನಪ್ಪು ........ .” (ಕೆ.ವಿ ರಮೇಶ ಮತ್ತು ಎಂ.ಜೆ.ಶರ್ಮ ತುಳುನಾಡಿನ ಶಾಸನಗಳು ಸಂ. 39) ಹೀಗೆ ಶಾಸನ ಪಾಠ ಮುಂದುವರಿಯುತ್ತದೆ. ಈ ಶಾಸನದಲ್ಲಿ ಬರುವ ಕುಲಸೇಖರನೇ ಕೂರ್ಸಿ ಶಾಸನದ ಕುಲಶೇಖರ. ಇಲ್ಲಿ ಬುರವ ಬಂಕಿದೇವನಿಗೆ ಮೊಗರುನಾಡಿನ ರಾಜ್ಯವನ್ನು ಕುಲಶೇಖರ ಬಿಟ್ಟುಕೊಟ್ಟಿದ್ದ. (ಅದೇ. ಸಂ. 36) ಆದರೆ ಮುಂದಿನ ಇತಿಹಾಸಗಳ ಪುಟದಲ್ಲಿ ಮುಗುರುನಾಡಿನ ಬಂಕಿದೇವನ ಪ್ರಸ್ತಾಪ ಕಾಣಬರುವುದಿಲ್ಲ.
ಕುಂಡಣನ ಶಾಸನದಲ್ಲಿ ಮೇಲಿನ ಅರಸರನ್ನು ‘ನಲ್ಲಿಂ’ ಬಳಿಯವರು ಎನ್ನಲಾಗಿದೆ.

ಮುಂದೆ ಆಳುಪ ಸಿಂಹಾಸನ ದತ್ತಾಳುಪ ಬಳಿಯರಿಗೆ ಸೇರುತ್ತದೆ. ವೀರ ಪಾಂಡ್ಯನ ಅಳಿಯ ಬಂಕಿದೇವ ದತ್ತಾಳುಪ ಬಳಿಯವನೆಂದು ಹೇಳಲಾಗಿದೆ. ( SII.,Vol. 27,ಓo, 216,  1281 A.D)   ಹೀಗಾಗಿ ಬಂಕಿದೇವನ ಸೋದರಮಾವನಾದ ವೀರ ಪಾಂಡ್ಯನೂ ದತ್ತಾಳುಪ ಬಳಿಯವನು ಆಗುತ್ತಾನೆ. ವೀರಪಾಂಡ್ಯದೇವಾಳುಪೇಂದ್ರನ ಕಾಲ ಕ್ರಿ.ಶ 1250-1275.

ಕ್ರಿ.ಶ. 1204ರಲ್ಲಿ ನಲ್ಲಿ ಬಳಿಯ ಕುಲಸೇಖರ ಮಂಗಳಾಪುರದಿಂದ ಆಳುತ್ತಿದ್ದ. ಮುಂದೆ ಆಳುಪ ಸಿಂಹಾಸನದಲ್ಲಿ  ತ್ರಿಭುವನ ಸಾಂತರ ಮತ್ತು ಕುಂಡಣರು ಕಾಣಬರುತ್ತಾರಾದರೂ ಇವರ ಕಾಲ 13ನೆಯ ಶತಮಾನ ಎಂದಿದೆ. ದತ್ತಾಳುಪೇಂದ್ರ ಶ್ರೀ ಮಾರ ಒಡ್ಡಮದೇವ ಕೆಲವು ಕಾಲ ಆಳಿರಬಹುದು. ಕ್ರಿ.ಶ. 1250ರಲ್ಲಿ ದತ್ತಾಳುಪ ಬಳಿಯ ವೀರ ಪಾಂಡ್ಯದೇವ ಮಂಗಳೂರಿನಿಂದ ಆಳುತ್ತಾನೆ. ಇಲ್ಲಿಯ ಸುಮಾರು 85ವರುಷಗಳ ಅವಧಿಯ ರಾಜಕೀಯ ಇತಿಹಾಸ ಕತ್ತಲೆಯಲ್ಲಿ ಉಳಿದಿದೆ.

ವೀರ ಪಾಂಡ್ಯಾಳುಪೇಂದ್ರನ ಶಾಸನದಲ್ಲೂ ಆತನ ತಾಯಿಯನ್ನು ಸ್ಮರಿಸಲಾಗಿದೆ. ತಂದೆಯನ್ನಲ್ಲ:
“ ಶ್ರೀ ಮತ್ಪಟ್ಟದ ಪಿರಿಯರಸಿ ಪಟ್ಟಮಹಾದೇವಿಯ ಸುಪುತ್ರರಹ ಶ್ರೀಮತು ಪಾಂಡ್ಯ ಚಕ್ರವರ್ತಿ ಅರಿರಾಯ ಗಜಕೆಸರಿ ವೀರ ಪಾಂಡ್ಯ ದೇವಾಳುಪೇಂದ್ರ ದೇವರಸರು......ತನ್ನ ರಾಣಿ ಬಲ್ಲಮಹಾದೇವಿಯೊಂದಿಗೆ ಬಾರಹ ಕನ್ಯಾಪುರದಿಂದ ಆಳುವ ಮಾಹಿತಿ ಸಿಗುತ್ತದೆ. (SII.,Vol. 27,ಓo .213 , 13ಶತಮಾನ) ವೀರಪಾಂಡ್ಯದೇವಾಳುಪೇಂದ್ರನನ್ನು ಪಟ್ಟದ ಪಿರಿಯರಸಿ ಪಟ್ಟಮಹಾದೇವಿಯ ಪುತ್ರ ಎಂದಿದೆ. ಕೂರ್ಸಿಯ ಶಾಸನದಲ್ಲಿ ಕುಲಶೇಖರನ ಸೋದರಿ ಬಮ್ಮಲದೇವಿಯನ್ನು ‘ಪಟ್ಟಮಹಾದೇವಿ’ ಎನ್ನಲಾಗಿದೆ. ಕ್ರಿ.ಶ. 1292ರ ಶಾಸನದಲ್ಲಿಯೂ ನಾಗದೇವರಸನನ್ನು ‘ಪಿರಿಯರಸಿ ಬಲ್ಲಮಹಾದೇವಿಯ ಪುತ್ರ’ ಎನ್ನಲಾಗಿದೆ.   (A.R.S.I..E 1927&28 A.Appx B.No. 415 ) ಈ ರೀತಿ ಪಿರಿಯರಸಿ ಪಟ್ಟಮಹಾದೇವಿಯ ಪುತ್ರ ಎನ್ನುವುದು ಮತ್ತು ಪಿರಿಯಸರಿ ಪಟ್ಟಮಹಾದೇವಿಯರು ವಡ್ಡೋಲಗದಲ್ಲಿ  ಭಾಗಿಯಾಗುವುದ ತುಳುನಾಡಿನ ಮಾತೃಪ್ರಧಾನ ಪರಂಪರೆಯಲ್ಲಿ ಮಾತ್ರ ಸಾಧ್ಯ. ಇಲ್ಲವಾದಲ್ಲಿ ಇಲ್ಲಿಯ ಶಾಸನಗಳು ತಂದೆಯನ್ನು ಹೆಸರಿಸಬೇಕಿತ್ತು. ತುಳುವರಲ್ಲಿ ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ ಆಗುವುದಿಲ್ಲ. ಇಲ್ಲಿ ಕನ್ಯಾದಾನ ಇಲ್ಲ. ಹೀಗಾಗಿ ಕಿಕ್ಕಾಯಿ ತಾಯಿ 3ನೆಯ ಹೊಯ್ಸಳ ಬಲ್ಲಾಳನ ಪಟ್ಟದ ಪಿರಿಯರಸಿ ಆಗಿದ್ದರೂ ಆಕೆ ತನ್ನ ಸೋದರಮಾವ ಸೋಯಿದೇವ ಆಳುಪೇಂದ್ರನು ಆಳಿದ್ದಿರಬಹುದಾದ ಬಾರ್ಕೂರಿನಿಂದಲೇ ಆಳುತ್ತಾಳೆ. ಹೊಯ್ಸಳರು ತುಳುನಾಡಿನ ಮೇಲೆ ಪ್ರಭುತ್ವ ಸಾಧಿಸಿದ್ದರೂ ಆಳುಪ ರಾಜಕುಮಾರಿ ಕಿಕ್ಕಾಯಿತಾಯಿಯೊಂದಿಗೆ 3ನೆಯ ಬಲ್ಲಾಳನ ಮದುವೆ ಆಗುವುದರ ಮೂಲಕ  ಎರಡೂ ಮನೆತನದೊಳಗೆ ಬಂಧುತ್ವ ಬೆಸೆದಿತ್ತು. ರಾಜಕೀಯ ದ್ವೇಷó ಕೊನೆಗೊಂಡಿತ್ತು. ಹೀಗಾಗಿ ಮಾತೃವಂಶೀಯ ತುಳು ಸಂಪ್ರದಾಯದಂತೆ ಕಿಕ್ಕಾಯಿತಾಯಿ ಮತ್ತು ಆಕೆಯ ಮಗ ಹೊಯ್ಸಳ ಬಲ್ಲಾಳನ ರಾಜ್ಯಕ್ಕೆ ಹೋಗದೆ ತುಳುನಾಡಿನಲ್ಲಿ ಉಳಿದು ಹಿರಿಯರ ರಾಜ್ಯಕ್ಕೆ (ಕ್ರಿ.ಶ.1336) ರಾಣಿಯಾಗುತ್ತಾಳೆ. ಈ ಕಾಲದಲ್ಲಿ  ಅಳಿಯ ಸಂತಾನ ಅರ್ಥಾತ್ ಮಾತೃವಂಶೀಯ ಕುಟುಂಬ ಪದ್ಧತಿ ರೂಢಿಯಲ್ಲಿ ಇತ್ತು ಎನ್ನುವುದಕ್ಕೆ ಇದೂ ಆಧಾರವಾಗುತ್ತದೆ.

ಕ್ರಿ.ಶ. 1302ರಕ್ಕೆ ವೀರಪಾಂಡ್ಯದೇವಾಳುಪೇಂದ್ರನ ಅಳಿಯ ಬಂಕಿದೇವ ಬಂಕಿದೇವಾಳುಪೇಂದ್ರನಾಗಿ ರಾಜಧಾನಿ ಮಂಗಳಾಪುರದಿಂದ ಆಳುತ್ತಾನೆ. ಕುಲಸೇಖರ ಮಂಗಳಾಪುರದರಮನೆಯ ಮೊಗಸಾಲೆಯಲ್ಲಿ ಕುಳಿತು ನಡೆಸಿದ ಒಡ್ಡೋಲಗವನ್ನು ಈತ ನಡೆಸುತ್ತಾನೆ. (ಕೆ.ವಿ ರಮೇಶ ಮತ್ತು ಎಂ.ಜೆ.ಶರ್ಮ ತುಳುನಾಡಿನ ಶಾಸನಗಳು. ಸಂ .45) ಈತನ ಅಕ್ಕ ವೋಚಮಲಾ ದೇವಿಗೆ ಈತ ವಾಮನನ ಕೈಯಲ್ಲಿ ನೀರದೇವಾಲಯದಲ್ಲಿ ಪಿಂಡಪ್ರಧಾನ ಮಾಡಿಸುತ್ತಾನೆ. ಹೀಗಾಗಿ ಬಂಕಿದೇವನಿಗೆ ವಾಮನನೆಂಬ ಅಳಿಯನಿದ್ದ ಎಂದಾಗುತ್ತದೆ. ಸತ್ತವರ ಗಂಡು ಮಕ್ಕಳ ಕೈಯಲ್ಲಿ ಪಿಂಡ ಪ್ರಧಾನ ಮಾಡುವುದು ಪದ್ಧತಿ. ಹಾಗಿದ್ದಲ್ಲಿ ವೋಚಮಲಾ ದೇವಿಗೆ ವೋಮನ ಎಂಬ ಮಗನಿದ್ದ. ಆತ ಬಂಕಿದೇವನ ಉತ್ತರಾಧಿಕಾರಿಯಾಗಬೇಕಾದವನು.

ಮುಂದೆ ಬರುವ ಅರಸರ ಸಾಮಾಜಿಕ ಪದ್ಧತಿಯಲ್ಲಿಯೂ ಮಾತೃ ವಂಶೀಯ, ಮಾತೃಪ್ರಧಾನ, ಅಳಿಯ ಸಂತಾನ ಪದ್ಧತಿಯನ್ನು ಕಾಣಬಹುದು.  ‘ಕ್ರಿ.ಶ. 1455ರ ಶಾಸನವು ‘ಶ್ರೀ ಚಂದಲ ದೇವಿಯರ ಕುಮಾರ ಅರಿರಾಯ ಗಂಡರಧಾವಣಿ ಶ್ರೀ ವೀರ ಪಾಂಡ್ಯಪ್ಪೊಡೆಯರು.’ (ಕೆ.ವಿ.ರಮೆಶ ಮತ್ತು ಎಂ ಜೆ. ಶರ್ಮ ತುಳುನಾಡಿನ ಶಾಸನಗಳು ಸಂ. 86.)ಎಂಬಲ್ಲಿ  ತಾಯಿಯೇ ಪ್ರಧಾನಳಾಗುತ್ತಾಳೆ. ಕಿರಿತಾಯಿಗೂ ಇಲ್ಲಿ ಅಧಿಕಾರ ಇರುತ್ತದೆ. ಕ್ರಿ.ಶ. 1546ರ ಕುಂದಾಪುರ ತಾಲೂಕಿನ ಹಾಡುವಳ್ಳಿ ಶಾಸನದಲ್ಲಿ “....ಚಿಕ್ಕ ಅರಮನೆಯ  ಕಿರಿತಾಯಿ ಬಸವನಾಯಕತಿ ಹಾಕಿಸಿದ ಕಲ್ಲು ಎಂದಿದೆ. (ಡಾ| ಪಿ.ಎನ್. ನರಸಿಂಹಮೂರ್ತಿ, ಕುಂದಾನಾಡಿನ ಶಾಸನಗಳು. ಸಂ.56 ) ‘ಶ್ರೀ ಮದ್ಭೈರವರಾಜ ತುಂಗ ಭಗಿನೀ ಶ್ರೀ ಗುಮ್ಮಟಾಂಬಸುತ ..’.ಎಂದು ಭೈರವರಾಜನ ಅಳಿಯ ತನ್ನನ್ನು ಕರೆದುಕೊಳ್ಳುತ್ತಾನೆ. (ಕೆ.ವಿ.ರಮೆಶ ಮತ್ತು ಎಂ ಜೆ. ಶರ್ಮ ತುಳುನಾಡಿನ ಶಾಸನಗಳು ಸಂ. 88 ) ಅನೇಕ ಶಾಸನಗಳು ತಾಯಿಯ ಮೂಲಕವೇ ಅರಸನನ್ನು ಹೆಸರಿಸುತ್ತವೆ.

ಪಿತೃವಂಶೀಯ ವ್ಯವಸ್ಥೆಯಲ್ಲಿ ತಂದೆಯ ಅನಂತರ ಮಗನ ಆಳ್ವಿಕೆಯಲ್ಲಿಯೇ ಆ ರಾಜ್ಯ ಉಳಿದು ಬರುತ್ತದೆಯೆಂದು ಹೇಳಲಾಗದು. ಅಂತಯೇ ಮಾತೃವಂಶೀಯ ವ್ಯವಸ್ಥೆಯಲ್ಲಿ  ಸೋದರಮಾವನ ಅನಂತರ ಸೋದರಳಿಯನಲ್ಲಿ  ಮಾತ್ರವೇ ಉಳಿಯುವುದು ಎಲ್ಲಾ ಸಮದಭ್ದಲ್ಲೂ ಸಂಭವವಲ್ಲ. ರಾಜ್ಯಕ್ಕಾಗಿಯೇ ಯುದ್ಧನಡೆಯುತ್ತಿರುವಾಗ ಇಂತಹ ನಿರೀಕ್ಷೆಗಳೇ ತಪ್ಪಾಗುತ್ತವೆ. ಎಂಟನೆಯ ಶತಮಾನದಲ್ಲಿ ಉದ್ಯಾವರದ ಆಳುಪ ಸಿಂಹಾಸನಕ್ಕಾಗಿ ರಣಸಾಗರ, ಚಿತ್ರವಾಹನ, ಶ್ವೇತವಾಹನ ಇವರೊಳಗೆ ನಡೆದ ಯುದ್ಧವನ್ನೂ ಗಮನಿಸಬಹುದು. ಹಿಂದಿನ ಅರಸರ ಉತ್ತರಾಧಿಕಾರಿಯಾಗಿ ಬಂದವರು ಮಗನೇ ಎಂದು ತುಳುನಾಡಿನ ಯಾವ ಶಾಸನಗಳಲ್ಲೂ ಸ್ಪಷ್ಟ ಮಾಹಿತಿ ಇಲ್ಲ. ಹೀಗಿರುವಾಗ ನಾನು ಮೇಲೆ ತೋರಿಸಿದ ಮಾತೃಪ್ರಧಾನ ಪದ್ಧತಿಯನ್ನು ಆಧಾರಕ್ಕೆ ತೆಗೆದುಕೊಳ್ಳಬೇಕಾಗುತ್ತದೆ. ಸಿಂಹಾಸನದ ಉಪನಾಮ ಪಟ್ಟಾಭಿಷೇಕ ಆದವರಿಗೆ ಅಧಿಕೃತವಾಗಿ ನೀಡುವ ಪಟ್ಟದ ಹೆಸರು. ಅಲ್ಲಿ ಮಗ ಕೂತರೂ ಅಳಿಯ ಕೂತರೂ ಅಥವಾ ಇವರಿಬ್ಬರಿಗೂ ಸಂಬಂಧ ಪಡದ ಮೂರನೆಯ ವ್ಯಕ್ತಿ ಕೂತರೂ ಆತ ಸಿಂಹಾಸನದ ಪೂರ್ವ ಪರಂಪರೆಯ ಹೆಸರನ್ನು  ಪಡೆಯುತ್ತಾನೆ.

ಪಿತೃಪ್ರಧಾನ, ಪಿತೃವಂಶೀಯ ವ್ಯವಸ್ಥೆಯು ಮಾತೃಪ್ರಧಾನ, ಮಾತೃವಂಶೀಯ ವ್ಯವಸ್ಥೆಯಾಗಿ ಪಲ್ಲಟಗೊಂಡ ಉದಾಹರಣೆ ಇಡಿಯ ವಿಶ್ವದಲ್ಲಿ ಎಲ್ಲೂ ಕಾಣದು ಎನ್ನುತ್ತಾರೆ ಮಾನವ ಶಾಸ್ತ್ರಜ್ಷರು.  ಮಾತೃಪ್ರಧಾನ, ಮಾತೃವಂಶೀಯ ವ್ಯವಸ್ಥೆಯೇ ವಿಶ್ವದ ಮೊದಲ ಸಮಾಜ ವ್ಯವಸ್ಥೆಯಾಗಿದ್ದು ಅದು ಪಿತೃಪ್ರಧಾನತೆಗೆ ಪರಿವರ್ತನೆಗೊಂಡುದೇ ಹೆಚ್ಚು ಅಥವಾ ಇವೆರಡರ ಮಧ್ಯೆ ಇತ್ತು ಎನ್ನುವುದು ಅವರ ಅಭಿಪ್ರಾಯ.


ಧರ್ಮಸ್ಥಳದಲ್ಲಿ ನಡೆದ 2008ರ ವಾರ್ಷಿಕ ಸಮ್ಮೆಳನದಲ್ಲಿ ಮಂಡಿಸಿದ ಪ್ರಬಂಧ.

ಇದು ಇತಿಹಾಸ  ದ‍ರ್ಶನ  ಸಂಪುಟ 24-2009ರಲ್ಲಿ ಪ್ರಕಟ ಆಗಿದೆ

ಪ್ರಬಂಧ ಪ್ರಕಟ ಆದ ಅನಂತರ ದೊರೆತ ಮಾಹಿತಿ :


ತುಳುನಾಡಿನ ಅಳಿಯಸಂತಾನ ಅಥವಾ ಮಾತೃವಂಶೀಯ ಪದ್ಧತಿಯಲ್ಲಿ ಪುರುಷ ಮತ್ತು ಅವನ ಒಡಹುಟ್ಟಿದವರು, ಅವನ ತಾಯಿ ಹಾಗೂ ಆಕೆಯ ಒಡಹುಟ್ಟಿದವರು ಒಂದು ವಂಶಕ್ಕೆ/ಕುಟುಂಬಕ್ಕೆ, ಒಂದು ಗೋತ್ರಕ್ಕೆ ಸೇರುತ್ತಾರೆ. ಈ ಕುಟುಂಬದ ಸಿಂಹಾಸನದ ಹಕ್ಕು, ಆಸ್ತಿಯ ಉತ್ತರಾಧಿರಕತ್ವದ ಹಕ್ಕು ಆತನ ಕುಟುಂಬದ ಸದಸ್ಯರಿಗೆ ಸೇರುತ್ತದೆ. ಒಬ್ಬ ಪುರುಷನ ಮಡದಿ ಮತ್ತ ಆಕೆಯ ಹೆಣ್ಣು ಮತ್ತು ಗಂಡು ಮಕ್ಕಳು, ಆ ಹೆಣ್ಣು ಮಕ್ಕಳ ಹೆಣ್ಣು ಮತ್ತು ಗಂಡು ಮಕ್ಕಳು-ಹೀಗೆ ಇವರು ಮತ್ತೊಂದು ವಂಶಕ್ಕೆ ಸೇರುತ್ತಾರೆ. ಈ ಬಗ್ಗೆ ಸ್ಪಷ್ಟ ಮಾಹಿತಿಯನ್ನು ಪಿ.ಎನ್ ನರಸಿಂಹ ಮೂರ್ತಿಯವರು ಸಂಪಾದಿಸಿರುವ  (ಕುಂದನಾಡಿನ ಶಾಸನಗಳು ಶಾ.ಸ. 30 -2007) ಕ್ರಿ.ಶ. 1162ರ ಕೂರ್ಸಿಯ ಶಾಸನವು ನೀಡುತ್ತದೆ.

“ಸಮಸ್ತ ಭುವನ ವಿಖ್ಯಾತ ಸೋಮಕುಳತಿಳಕ ಪಾಣ್ಡ್ಯ ಮಹಾರಾಜಾಧಿರಾಜ ಪರಮೇಸ್ವರ ಪರಮ ಭಟ್ಟಾರಕ” ಎಂಬ ಬಿರುದಾಂಕಿತ  ಶ್ರೀ ಮತ್ಪಾಂಡ್ಯಚಕ್ರವರ್ತಿಕುಲಶೇಖರಾಳ್ಪೇಂದ್ರ ದೇವರು ರಾಜಧಾನಿ ಬಾರಕನ್ಯಾಪುರದರಮನೆಯಲ್ಲು  ಸ್ಥಿರ ಸಿಂಹಾಸನದೊಳಿರಲು ಅವರಳಿಯ ಶ್ರೀ ಮತ್ಪಾಂಡ್ಯಪಟ್ಟಿಗದೇವರುಂ (ನೋಡಿ: ಸೋದರಮಾವನೂ ಪಾಂಡ್ಯ ವಂಶ, ಸೋದರಳಿಯನೂ ಪಾಂಡ್ಯ ವಂಶ) ಬಲ್ಲಹದೇವರು ಕುಲಶೇಖರ ದೇವರುಂ ಕೀರ್ತಿದೇವರುಂ ಪಟ್ಟಮಹಾದೇವಿಯರುಂ ಬಮ್ಮಲದೇವಿಯರುಂ ಅವರ ಬಸುರಲಿ ಬಂದ ಕುಮಾರ ಬಂಕಿದೇವನುಂ ಸಾಂತರದೇವನುಂ ಅವರ ಕೂಡೆ ಹುಟ್ಟಿದ ಗಂಡು ಹೆಣ್ಣುಂಗಳು ಸಗೋತ್ರಾ ಸಹಿತ ಕೂಡಿ ಏಕಮಾತ್ಯರಾಗಿ ಬರೆÀದು ನಿಲ್ಲಿಸಿದ ಶಾಸನ.”  ಇವರೆಲ್ಲ ಸಗೋತ್ರಿಗಳು. ಒಂದು ವಂಶದವರು. ಈ ಶಾಸನದ ಆರಂಭದಲ್ಲಿ ಕೂಡಾ ಬಲ್ಲ ಮಹಾದೇವಿಯರನ್ನು ಪಟ್ಟಮಹಾದೇವಿ ಎನ್ನುತ್ತದೆ. ಆದರೆ ಈಕೆ ಕೊಲಸೇಖರನ ಮಡದಿಯಲ್ಲ. ಸೋದರಿ. ಕೊಲಸೇಖರನ ಸೋದರಿಯಾಗಿದ್ದರೂ ಅವನಳಿಯ ಪಾಂಡ್ಯ ಪಟ್ಟಿಗದೇವರು ಬಲ್ಲಹದೇವರು ಕುಲಶೇಖರ ದೇವರುಂ ಕೀರ್ತಿದೇವರುಂ -ಇವರ ತಾಯಿಯಲ್ಲ.

 “ಪಟ್ಟಮಹಾ ದೇವಿಯರುಂ ಬಮ್ಮಲದೇವಿಯರುಂ ಅವರ ಬಸುರಲ್ಲಿ ಬಂದ ಕುಮಾರ ಬಂಕಿದೇವನುಂ ಸಾಂತರದೇವನುಂ ಅವರಕೂಡೆ ಹುಟ್ಟಿದ ಗಂಡು ಹೆಣ್ಣುಂಗಳು ......” ( ಅರ್ಥಾತ್ ಇವರ ಸೋದರ ಸೋದರಿಯರು - ಇವರೆಲ್ಲ ಸಗೋತ್ರ ಅಂದರೆ ಒಂದು ಕುಟುಂಬ ಒಂದು ವಂಶ/ಬಳಿಯವರು.) ಬಮ್ಮಲದೇವಿಯ ಬಸಿರಿನಿಂದ ಬಂದ ಮಕ್ಕಳು ಕುಮಾರ ಬಂಕಿದೇವನುಂ ಸಾಂತರದೇವನುಂ ಅವರಕೂಡೆ ಹುಟ್ಟಿದ ಗಂಡು ಹೆಣ್ಣುಂಗಳು ಮಾತ್ರ.   

ಈ ಶಾಸನದ ಪ್ರಕಾರ ಆತನಿಗೆ ಇಬ್ಬರು ಸೋದರಿಯರು ಇದ್ದರು. ಹಿರಿಯ ಸೋದರಿಯ ಮಕ್ಕಳು ‘ಶ್ರೀ ಮತ್ಪಾಂಡ್ಯಪಟ್ಟಿಗದೇವರುಂ ಬಲ್ಲಹದೇವರು ಕುಲಶೇಖರ ದೇವರುಂ ಕೀರ್ತಿದೇವರುಂ’. ಇವರೆಲ್ಲ ಪ್ರಾಯ ಪ್ರಬುದ್ಧರಾಗಿದ್ದು ಶಾಸನ ಭಾಷೆ ಇವರಿಗೆ ಬಹುವಚನವನ್ನು ಪ್ರಯೋಗಿಸಿದೆ. ಆದರೆ ಪಟ್ಟ ಮಹಾದೇವಿ ಬಮ್ಮಲದೇವಿಯ ಮಕ್ಕಳನ್ನು ಏಕವಚನದಿಂದ ಲಿಖಿಸಿದೆ.  ಇಲ್ಲಿ ಒಂದೋ ಶ್ರೀ ಮತ್ಪಾಂಡ್ಯಪಟ್ಟಿಗದೇವರುಂ ಬಲ್ಲಹದೇವರು ಕುಲಶೇಖರ ದೇವರುಂ ಕೀರ್ತಿದೇವರುಂ’-ಇವರ ತಾಯಿ ತೀರಿಹೋಗಿರಬೇಕು. ಇಲ್ಲವೇ ಹಿರಿಯಾಕೆಗಿಂತ ಮೊದಲು ಕಿರಿಯಾಕೆ ಮಕ್ಕಳನ್ನು ಹೆತ್ತಿರಬಹುದು. ಇಲ್ಲಿ ಪಾಂಡ್ಯ ಪಟ್ಟಿಗದೇವನು ಕೊಲಸೇಖರನ ಉತ್ತರಾಧಿಕಾರಿ ಎಂಬ ಸೂಚನೆ ಸಿಗುತ್ತದೆ. ತುಳು ಸಾಮಾಜಿಕ ವ್ಯವಸ್ಥೆಯ ಪ್ರಕಾರ ಪಟ್ಟ ಮಹಾದೇವಿ ಆಳುವ ಅರಸನ ಅರ್ಥಾತ್ ಕುಲಶೇಖರಾಳುಪೇಂದ್ರನ ತಾಯಿಯೇ ಆಗಬೇಕಾಗಿಲ್ಲ. ಮುದಿನ ಭಾಗದಲ್ಲಿ ಬಗ್ಗೆ ಶಾಸನದಾಖಲೆಯನ್ನೂ ನೀಡಲಾಗದೆ. ಆತನ ಹಿರಿತಾಯಿ, ಅಥವಾ ತಾಯಿಯ ಹಿರಿಯಕ್ಕ- ಹೀಗೆ ಕುಟುಂಬದ ಹಿರಿಯ ಹೆಣ್ಣು ಆಗಲೂ ಬಹುದು. ವಯಸ್ಸಿನಲ್ಲಿ ಹಿರಿಯಾಕೆಗೆ ಪಟ್ಟ. ಆಕೆಯನ್ನು ‘ಪೆರಿಯಪ್ಯ(ಬ್ಯ), ಪಟ್ಟಾದಾರ್ತಿ’ ಎಂದು ಕರೆಯುವ ರೂಢಿ ಈಗಲೂ ಇದೆ. 

ಕುಲಶೇಖರದೇವಾಳುಪೇಂದ್ರ ಅರಸನಾದರೂ ಉತ್ತರಾಧಿಕಾರ ಮತ್ತು ಆಸ್ತಿಯ ಹಕ್ಕು ಆತನ ಮಾತೃಕುಟುಂಬದ ಎಲ್ಲಾ ಸದಸ್ಯರಿಗೂ ಸೇರಿತ್ತು ಎನ್ನುವುದನ್ನು ಈ ಶಾಸನ ಸ್ಪಷ್ಟಪಡಿಸುತ್ತದೆ. ಈಗಲೂ ತುಳುನಾಡಿನ ನೆಲದ ಸಂಸ್ಕøತಿಯಲ್ಲಿ ಈ ಪದ್ಧತಿ ಜಾರಿಯಲ್ಲಿದೆ. 

ಈ ಶಾಸನದಲ್ಲಿ ಇರುವ ಇನ್ನೊಂದು ಕುಟುಂಬ ವೀರ ಕುಲಶೇಖರನ ಅಷ್ಟಾಂಗ ಲಕ್ಷ್ಮಿಯರು -ಚಂದಲದೇವಿ ಮತ್ತು ಪದುಮಲದೇವಿ ಅವರ ಬಸಿರಲ್ಲಿ ಹುಟ್ಟಿದ ಕುಮಾರಿ ಅರಸಿಲ ದೇವಿ, ಸುಗ್ಗಲ ದೇವಿ ಚಂದಲದೇವಿ ಮತ್ತು ಅಕ್ಕಾ  ದೇವಿ ಹಾಗೂ ಅವರ ಗಂಡು ಹೆಂಣುಗಳು ಒಂದು ಗೋತ್ರ ಒಂದು ಕುಟುಂಬ-ಅವನ ಅಷ್ಟಾಂಗ ಲಕ್ಷ್ಮಿಯರ ಕುಟುಂಬ. (ಈತ ಅಕ್ಕ ತಂಗಿಯರನ್ನು ಮದುವೆಯಾಗಿದ್ದರೆ ಅವರು ಒಂದೇ ಕುಟುಂಬ ಆಗುತ್ತಾರೆ. ಇಲ್ಲವಾದಲ್ಲಿ ಅವರು ಎರಡು ಕುಟುಂಬ ಆಗುತ್ತಾರೆ. ಮಾತೃವಂಶೀಯ ಪದ್ಧತಿಯ ಪ್ರಕಾರ ಕುಲಸೇಖರನ ಮಡದಿಯರು ಮತ್ತು ಅವರ ಮಕ್ಕಳು ಕುಲಶೇಖರನ ವಂಶಕ್ಕೆ ಸೇರುವುದಿಲ್ಲ. ಮಡದಿಯ ವಂಶಕ್ಕೆ ಸೇರುತ್ತಾರೆ.) ಆಳುಪ ಕುಲಶೇಖರನ ಕುಟುಂಬದ ಎಲ್ಲ ಸದಸ್ಯರೂ ಸೇರಿ ಮಾತೃಕುಟುಂಬದ ಆಸ್ತಿಯಾಗಿರುವ ಕೂರ್ಸಿಯನ್ನು ಮೇಲೆ ತಿಳಿಸಿದ ಕುಲಶೇಖರನ ಅಷ್ಟಾಂಗಲಕ್ಷ್ಮಿಯರಾದ ಚಂದಲ ದೇವಿ ಮತ್ತು ಸುಗ್ಗಲದೇವಿ ಹಾಗೂ ಅವರ ನಾಲ್ಕು ಹೆಣ್ಣು ಮಕ್ಕಳಿಗೆ ಹಾಗೂ ನಾಲ್ಕು ಹೆಣ್ಣು ಮಕ್ಕಳು ಹೆತ್ತ ಹೆಣ್ಣು ಗಂಡು ಮಕ್ಕಳಿಗೆ ವಂಶಪಾರಂಪರ್ಯವಾಗಿ ಅನುಭೋಗಿಸಲು  ಕನ್ಯಾದಾನವಾಗಿ ಕೊಡುತ್ತಾರೆ. ಇದು ಮದುವೆಯ ಸಂದರ್ಭದಲ್ಲಿ ನೀಡುವ ಕನ್ಯಾದಾನ ಅಲ್ಲ. ಭೂಮಿದಾನದಲ್ಲಿ ಬರುವ ರೂಢಿ ಪದ. ಇತರ ಒಂದೆರಡು ಶಾಸನಗಳಲ್ಲಿ ಕನ್ಯಾದಾನದ ಬಗ್ಗೆ ಇದೆ. 

ಇಲ್ಲಿ ಅಳಿಯ ಸಂತಾನ ಕುಟುಂಬ ಪದ್ಧತಿಯನ್ನು ನಾವು ಸ್ಪಷ್ಟವಾಗಿ ಗುರುತಿಸಬಹುದು. ಕೊಲಸೇಖರ ತಾನು ಅರಸನಾದರೂ ತನ್ನ ಮಾತೃ ಕುಟುಂಬದ ಆಸ್ತಿಯ ಒಂದು ಭಾಗನ್ನು ಮಡದಿ ಮಕ್ಕಳಿಗೆ ನೀಡಲು ತನ್ನ ತಾಯಿಯ ಕುಟುಂಬದ ಸದಸ್ಯರ ಅನುಮತಿ ಪಡೆಯುತ್ತಾನೆ. ಕ್ರಿ.ಶ. 1542ರ ಶಾಸನದಲ್ಲಿ ಮುಲ್ಕಿಯ ಕನ್ನಿಕಾ ಸಾವಂತರ ಅಳಿಯ ದುಗ್ಗಣ ಸಾವಂತನು ದಾನ ನೀಡುವಾಗ ತನ್ನ ಅಕ್ಕ ಚೆನ್ನಮ್ಮದೇವಿಯ ಅನುಮತಿಯನ್ನು ಪಡೆಯುತ್ತಾನೆ. (ಕೆ.ವಿರಮೆಶ ಮತ್ತು ಎಮ.ಜೆ ಶರ್ಮ ತುಳುನಾಡಿನ ಶಾಸನಗಳು ಸಂ. 85) ತುಳುನಾಡಿನಲ್ಲಿ ಅನೇಕ ಶಾಸನಗಳು ಮಾತೃಕುಟುಂಬದ ಸದಸ್ಯರ ಅನುಮತಿ ಪಡೆದು ಭೂಮಿದಾನ ಪಡೆಯುವ ಬಗ್ಗೆ ಮಾಹಿತಿ ನೀಡುತ್ತದೆ. ಕ್ರಿ.ಶ. 1162ರ ಹೊತ್ತಿಗೆ ಅಳಿಯ ಸಂತಾನ ಪದ್ಧತಿ ಇಷ್ಟು ಗಟ್ಟಿಯಾಗಿ ರೂಢಿಯಲ್ಲಿ ಇರಬೇಕಾದರೆ ಈ ಪದ್ಧತಿ ಬಹು ಹಿಂದಿನಿಂದಲೇ ಜಾರಿಯಿಂದ ಬಂದಿರಬೇಕು. 
 ಈ ಬರಹ ಓದುವವರು ಇದೇ  ಬ್ಲಾಗ್ ನಲ್ಲಿ ಇರುವ ಅಳಿಯ ಸಂತಾನ ಮತ್ತು ಬಾರ್ಕೂರಿನ ಕುಂಡೋದರ..ಲೆಖನವನ್ನು ಓದಬೇಕೆಂದು ಮನವಿ ..





No comments:

Post a Comment