Sunday, October 25, 2015

ಸಾಂಸ್ಕತಿಕ ನೆಲೆಯಲ್ಲಿ ಕರಾವಳಿ




 ಸಂಸ್ಕøತಿ ಎನ್ನುವುದು ವಿಶಾಲವ್ಯಾಪ್ತಿ ಉಳ್ಳ ವಿಷಯ. ಸಂಸ್ಕøತಿಯೊಳಗೆ ನಾಗರೀಕತೆಯೂ ಸೇರುತ್ತದೆ. ನಾವು ಬದುಕುವ ರೀತಿ, ಉಣ್ಣುವ ಆಹಾರ, ನಮ್ಮ ಸಾಮಾಜಿಕ ಪದ್ಧತಿ, ಉಪಾಸನೆ, ಮನರಂಜನೆ, ಹಬ್ಬ, ಮದುವೆ, ಪಾಡ್ದನ, ಮಾದಿರ ಗಾದೆ, ಅಂಕ, ಅಯನ, ಕೋಲ, ನೇಮ, ಮಾರಿ ಓಡಿಸುªದು, ಕೊರಗರ ಡೋಲು, ಆಟಿ ಕಳಂಜ, ಕರಂಗೋಲು. ಆಟಿ ಪಿದಯಿ ಪಾಡುನು, ಆಟಿದಗೆಲ್, ಕಾವೇರಿ ಸಂಕ್ರಾಂತಿ,ಯಕ್ಷಗಾನ, ಭೂತಾರಾಧನೆ -ಇವೆಲ್ಲವೂ ಇಲ್ಲಿಯ ಸಂಸ್ಕøತಿ.
ಆದರೂ ನಮಗೊಂದು ಸಮಯದ ಮಿತಿ ಇದೆ. ಹೀಗಾಗಿ ನಾನಿಲ್ಲಿ ಭೂತಾರಾಧನೆ ಮತ್ತು ಯಕ್ಷಗಾನ -ಈ ಎರಡು ಕ್ಷೇತ್ರಗಳ ಬಗ್ಗೆ ಮಾತ್ರ ಉಪನ್ಯಾಸ ನೀಡಲಿದ್ದೇನೆ.

ಸಾಂಸ್ಕøತಿಕ ನೆಲೆಯಲ್ಲಿ ಕರಾವಳಿ ಎನ್ನುವಾಗ ಅದರ ಪ್ರಾದೇಶಿಕ ವ್ಯಾಪ್ತಿ ಅಖಂಡ ತುಳುನಾಡನ್ನು ಒಳಗೊಳ್ಳಬೇಕಾಗುತ್ತದೆ. ತುಳು ಆಳುವ ಕನ್ನಡದ ಅಧೀನ ಭಾಷೆ; ಸಾಮಂತ ಭಾಷೆ. ಆದರೆ ತುಳು ಸಂಸ್ಕøತಿ ಕನ್ನಡದ ಅಧೀನ ಇಲ್ಲ. ಈತಿಹಾಸಿಕ ಕಾಲದಿಂದಲೂ ತುಳು ಮಾತನಾಡುವ ಪ್ರದೇಶದ ಸಂಸ್ಕøತಿ ಕನ್ನಡ ಪ್ರದೇಶದ ಸಂಸ್ಕøತಿಗಿಂತ ಭಿನ್ನವಾಗಿ ಕಂಡು ಬರುತ್ತಿದೆ. ಕರ್ನಾಟಕ ಕರಾವಳಿಯ ತುಳು ಸಂಸ್ಕøತಿ, ಸಂಗಂ ಕಾಲದಲ್ಲಿ ದಕ್ಷಿಣಕ್ಕೆ ಕೊಚ್ಚಿ ಉತ್ತರಕ್ಕೆ ಮಹರಾಷ್ಟ್ರದವರೆಗೆ ಇತ್ತು. ತುಳು ಸಂಸ್ಕøತಿ ಭಾಷಿಕವಾಗಿ ಕುಗ್ಗಿದಂತೆ ಪಾದೇಶಿಕವಾಗಿ ಕೂಡಾ ಕುಗ್ಗಿದೆ. ಒಂದು ಭಾಷೆ ನಾಶವಾದರೆ ಸಂಸ್ಕøತಿ ನಾಶವಾಗುತ್ತದೆ ಎನ್ನುವುದಕ್ಕೆ ಇದು ಕುಡಾ ಒಂದು ಉದಾಹರಣೆ. ಕನ್ನಡ ಸಂಸ್ಕøತಿಗಿಂತ ಭಿನ್ನವಾಗಿ ತನ್ನದೇ ನೆಲಮೂಲದ ತುಳು ಸಂಸ್ಕøತಿಯನ್ನು ಕರ್ನಾಟಕದ ಕರಾವಳಿ ಭಾಗ ಹೊಂದಿದೆ. ಕುಂದಾಪುರದ ಭಾಗ ತುಳು ಮಿಶ್ರಿತ ಕನ್ನಡ ಭಾಷೆಯನ್ನು ಆಡುನುಡಿಯನ್ನಾಗಿ ರೂಢಿಸಿಕೊಂಡರೂ ಸಂಸ್ಕøತಿಯಲ್ಲಿ ಮಹತ್ತರ ಪರಿವರ್ತನೆ ಆಗಲಿಲ್ಲ. ಅಲ್ಲಿಯ ಭೂತಗಳು ಮತ್ತು ಮೂಲನಿವಾಸಿಗಳಾದ ಕೊರಗರು ಕುಂದ ಕನ್ನಡದ ನಡುವೆಯೂ ತುಳುಭಾಷೆಯಲ್ಲಿ ವ್ಯವಹರಿಸುತ್ತಿರುವುದು ಈ ಭಾಗದಲ್ಲಿ ಇದ್ದ ತುಳು ಸಂಸ್ಕøತಿಯ ಪ್ರಭಾವದಿಂದ. ಭೂತಗಳ ಭಾಷೆ ತುಳು.

ಸಂಸ್ಕøತಿ ಚಲನ ಶೀಲ, ಹರಿವ ನೀರಿನಂತೆ. ಕನ್ನಡದ ಪ್ರಬಾವದಿಂದ ವರಮಹಾಲಕ್ಷ್ಮಿಯು ಗಟ್ಟದ ಕೆಳಗಿನ ತುಳು ಜನರನ್ನು ಸೆಳೆಯುತ್ತಿದೆ. ಹಿಂದೆ ಸತ್ತವರ ಆಟಿ ತಿಂಗಳು ಆಗಿದ್ದುದು ಈಗ ಬದುಕಿರುವವರು ಆಟಿ ತಿಂಗಳು ಆಗಿದೆ. ಆಟಿಡೊಂಜಿ ದಿನ ಆಟಿದ ಕೂಟ ಹಬ್ಬವನ್ನಾಗಿ ಆಚರಿಸಲಾಗುತ್ತಿದೆ. ಪರಂಪರೆಯ ನಂಬಿಕೆಯ ಪ್ರಕಾರ  ಸತ್ತವರೆಲ್ಲ ಭೂಮಿಗಿಳಿದು ಬರುವುದು ಆಟಿಯಲ್ಲಿ, ಆಟಿಯ ಅಗೆಲ್ ಉಣ್ಣಲು. ಆಟಿ ತಿಂಗಳು ಅವರಿಗೆ ಮೀಸಲು. ಸತ್ತವರಿಗೆ ವರ್ಷದಲ್ಲಿ ಒಂದೇ ಒಂದು ತಿಂಗಳ ಒಂದು ದಿನ ಮೀಸಲಾಗಿತ್ತು. ಆ ದಿನ ಸತ್ತ ಹಿರಿಯರನ್ನು ಸಾಮೂಹಿಕವಾಗಿ ತಮ್ಮ ಹಿರಿಯರ ಮೂಲ ಮನೆಗೆ ಬರಲು ಪ್ರಾರ್ಥಿಸಿ ಅಗೆಲ್ ಬಡಿಸುವ ಸಂಸ್ಕøತಿ ಇತ್ತು. ಅವರಿಗೆಲ್ಲ ಈಗ ಗೊಂದಲ, ‘ಕನಫ್ಯೂಷನ್’. ಹೀಗೆ ಸಂಸ್ಕøತಿಯ ಪರಿವರ್ತನೆ ಇತ್ತೀಚೆಗೆ ಬಹಳ ವೇಗವಾಗಿ ಆಗುತ್ತಿದೆ.
 ತುಳುನಾಡು ಒಂದು  ಸಾಂಸ್ಕøತಿಕ ಪಾಠಶಾಲೆ. ‘ದಕ’ದವರು ಬುದ್ಧಿವಂತರು ಎಂದು ಬಿರುದು ಪಡೆದುದು ತುಳುನಾಡಿನ ಸಾಂಸ್ಕøತಿಕ ನೆಲೆಗಳಿಂದ. ಭೂತಾರಾಧನೆಯಂತಹ ಉಪಾಸನೆಗಳು ಬಾಲ್ಯದಲ್ಲಿಯೇ ನ್ಯಾಯಪರತೆ, ದುಷ್ಟ ಶಿಕ್ಷಣ ಶಿಷ್ಟ ರಕ್ಷಣೆಯ ಪಾಠಕಲಿಸುತ್ತಿದೆ. ಯಕ್ಷಗಾನವು ಪುರಾಣ, ಮಹಾಭಾರತ, ರಾಮಾಯಣಗಳ ಪಾಠ ಮಾಡುತ್ತಿವೆ. ತುಳು ನೆಲಮೂಲದ ನಂಬಿಕೆಯ ಪ್ರಕಾರ ಧರ್ಮ ಎಂದರೆ ರಿಲಿಜನ್/ಮತ ಅಲ್ಲ. ಮತಧರ್ಮದ ಹೊರತಾಗಿ ಮಾನವರು ಜೀವಿಸಲು ಅನುಕೂಲಕರವಾದ ವಾತಾವರಣವನ್ನು ನಿರ್ಮಿಸಿಕೊಡುವ ಕೆಲಸವನ್ನು ತುಳುನಾಡಿನ ಭೂತಾರಾಧನಾ ಸಂಸ್ಕøತಿ ಮಾಡುತ್ತದೆ. ಇಲ್ಲಿ ನೆಮ್ಮದಿಯಿಂದ ಜೀವನ ಮಾಡಲು ಇತರರಿಗೆ ನೆಮ್ಮದಿಯ ಬದುಕು ಮಾಡಲು ಅವಕಾಶ ಕಲ್ಪಿಸುವ ಪಾಠ ಇದೆ. “ಭೂತ ಕೆಟ್ಟವರನ್ನು ಶಿಕ್ಷಿಸುತ್ತದೆ. ಒಳ್ಳೆಯವರನ್ನು ಕಾಪಾಡುತ್ತದೆ” ಎಂಬ ಪಾಠ ಎಳೆಯರಿಗೆ ಹಿರಿಯರಿಂದ ಆಗುತ್ತಿತ್ತು.  “ಪೊಣ್ಣ ನೆರಿ ಆನ್ ತರೆ” ಕಾಪಾಡುವ ಮೂಲಕ ಭೂತಗಳು ಕುಟುಂಬದ, ಗ್ರಾಮದ, ಮಾಗಣೆಯ ಸೀಮೆಯ ಸೌಖ್ಯವನ್ನು ಕಾಪಾಡುವ ಹೊಣೆಗಾರಿಕೆಯನ್ನು ಹೊತ್ತಿವೆ. ಗ್ರಾಮಗಳ ಕುಟುಂಬಗಳ ಆಂತರಿಕ ಹೋರಾಟದಿಂದ ಜನರನ್ನು ಈ ಭೂತಗಳು ರಕ್ಷಿಸುತ್ತವೆ ಎಂಬ ನಂಬಿಕೆ ಭೂತಾರಾಧನೆಯಲ್ಲಿದೆ. ಮಹಾಭಾರತ, ರಾಮಾಯಣ, ಪುರಾಣದ ಪಾತ್ರಗಳನ್ನು ಸಾಮನ್ಯ ಜನರಿಗೆ ತಿಳಿಸಿಕೊಡುವ ಕೆಲಸವನ್ನು ಯಕ್ಷಗಾನ ಬಯಲಾಟ ಮಾಡುತ್ತದೆ.

ಬಾಗಿಲಿಲ್ಲದ ಮನೆಗಳು:
 ದುಷ್ಟರನ್ನು ಶಿಕ್ಷಿಸುವ ಭೂತ ಭಯದಿಂದಾಗಿ ಅಂದಿನ ತುಳುನಾಡಿನಲ್ಲಿ ಕಳ್ಳಕಾಕರ ಭಯ ಇರಲಿಲ್ಲ. ಹೀಗಾಗಿ ವಿದೇಶಿ ಪ್ರವಾಸಿಗರೂ ತುಳುನಾಡಿನ ಉದ್ದಗಳಕ್ಕೂ ಒಂಟಿಯಾಗಿ ಕಾಲ್ನಡಿಗೆಯಲ್ಲಿ ಸಂಚರಿಸಲು ಸಾಧ್ಯವಾಗಿದೆ. ಜಾತಿ ಜಾತಿ ಧರ್ಮ ಧರ್ಮಗಳ ನಡುವೆ ಕಲಹ ಇರಲಿಲ್ಲ. ಚಾವಡಿ ದೈವದ ಹೆಸರಲ್ಲಿ ಬೀಡುಗಳ ಗುತ್ತುಗಳ ಯಜಮಾನರು ಮತಧರ್ಮಗಳ ಸೌಹಾರ್ದತೆಗೆ ಭಂಗ ಉಂಟಾಗದಂತೆ ನೋಡುತ್ತಿದ್ದರು. ಜಾತಿ ಜತಿಗಳೊಳಗಿನ ಕಲಹಗಳನ್ನು ನಿವಾರಿಸುತ್ತಿದ್ದರು. ಅಂದಿನ ಮನೆಗಳಿಗೆ ಮುಂದಿನಿಂದ ಗೋಡೆ ಬಾಗಿಲುಗಳು ಇದ್ದಿರಲಿಲ್ಲ. “ತೆರೆದ ಚಾವಡಿ”ಯ ಕಲೆಂಬಿಯಲ್ಲಿ ಇದ್ದ ದೈವಗಳ ಆಭರಣ ಭಂಡಾರಕ್ಕೆ ಕಳ್ಳರು ಕನ್ನ ಹಾಕದೆ ಇದ್ದಿದ್ದುದು ಭೂತ ಭಯದಿಂದ. ಈಗ ಅಂತಹ ಮನೆಗಳು ಬಹಳ ಅಪರೂಪವೆಂಬಂತೆ ಅಲ್ಲೊಂದು ಇಲ್ಲೊಂದು ಉಳಿದಿವೆ.

 ಭೂತಾರಾಧನೆಯ ವಿವಿಧ ಆಯಾಮಗಳನ್ನು ನಾನು ಸುಮಾರು 20ವರ್ಷಗಳಿಂದ ಕ್ಷೇತ್ರಗಳ ಸಂದರ್ಶನ ಅಧ್ಯಯನ ಮಾಡುತ್ತಿದ್ದೇನೆ. ಭೂತಾರಾಧನೆಯ ಮೂಲ ಸಂಸ್ಕøತಿಯ ಬಗ್ಗೆ ದಾಖಲಾತಿ ಮಾಡಿ ಕೃತಿಗಳನ್ನು ರಚಿಸಿದ್ದೇನೆ. ಹೀಗಾಗಿ ನಾನು ಇಲ್ಲಿ ಭೂತಾರಾಧನೆ ಹೆಚ್ಚು  ಒತ್ತು ಕೊಡುತ್ತೇನೆ. ಯಕ್ಷಗಾನದ ಬಗ್ಗೆ ನನಗಿಂತ ಹೆಚ್ಚು ಅರಿತ ದಿಗ್ಗಜರುಗಳು ಈ ಸಭೆಯಲ್ಲಿ ಇದ್ದಾರೆ. ಆದರೂ ನನ್ನ ವಿಚಾರಗಳನ್ನು ಸಮಯದ ಮಿತಿಯಲ್ಲಿ ಹೇಳಲಿದ್ದೇನೆ.

ಭೂತಾರಾಧನೆ : ಸಂಗ ಕಾಲ
ಸುಮಾರು 2ನೆಯ ಶತಮಾನದ ಸಂಗಂ ತಮಿಳು ಸಾಹಿತ್ಯ.
 “ಸಂಗ ಕಾಲದಲ್ಲೇ ಭೂತ ಎನ್ನುವ ದೈವಾರಾದನೆ ಇದ್ದುದನ್ನು ತಿಳಿಯುತ್ತೇವೆ. ‘ಪದಿಲ್ಪತ್ತು ಶಿಲಪ್ಪಗಾರಂ’ ಮೊದಲಾದ ಸಂಗ ಸಾಹಿತ್ಯದಲ್ಲಿ ಭೂತಾರಾಧನೆಯ ಕುರಿತು ಹೇಳಲಾಗಿದೆ. Pಆ ಭೂತಗಳು ಶ್ರೀ ವಿಷ್ಣು ಶಿವ ಮೊದಲಾದ ಶ್ರೇಷ್ಠದೇವತೆಗಳಂತವರ ಸ್ಥಾನದಲ್ಲಿ ಇಲ್ಲದೆ ಹೋದರೂ ಇಂದ್ರ ಮುರುಗ(ಷóಣ್ಮುಖ) ಮೊದಲಾದ ಸ್ಥಾನದಲ್ಲಿರಿಸಿ ಆರಾಧಿಸಲ್ಪಟ್ಟಿವೆ. ಅನಂತರ ಕಾಲದಲ್ಲಿ ಭೂತ ಎನ್ನುವುದಕ್ಕೆ ಕ್ರೂರ, ದುರ್ದೇವತೆ, ಸಣ್ಣ ದೇವತೆ ಎನ್ನುವ ಅರ್ಥವನ್ನು ಕಲ್ಪಿಸಿದಂತೆ ಸಂಗಂ ಕಾಲದಲ್ಲಿ ಭೂತ ಎನ್ನುವ ದೈವವನ್ನು ಕೀಳ್ಮಟ್ಟದ ಸ್ಥಾನದಲ್ಲಿಟ್ಟು ಪರಿಗಣಿಸರಿಲಿಲ್ಲ. ಭೂತ ಎನ್ನುವ ದೈವವನ್ನು ಆ ಕಾಲದಲ್ಲಿ ಉನ್ನತ ಸ್ಥಾನದಲ್ಲಿರಿಸಿ ಪರಿಗಣಿಸಿದ ಕಾರಣದಿಂದಲೇ ಆ ಕಾಲದಲ್ಲಿ ಜನರೂ ಆ ಹೆಸರನ್ನು ತಮ್ಮ ಹೆಸರಾಗಿ ಇಟ್ಟುಕೊಳ್ಳುತ್ತಿದ್ದರು: ಉದಾ ಬೂತಪಾಂಡಿಯಾನ್, ಭೂತನಾರ್, ಸೇತ್ತ ಭೂತನಾರ್ ಹೀಗೆ ಅನೇಕ ಹೆಸರುಗಳನ್ನು ಇಲ್ಲಿ ಹೆಸರಿಸಲಾಗಿದೆ. ಆ ಕಾಲದಲ್ಲಿ ಪೂದತ್ತಾ¾õÁ್ವರ್ ಎನ್ನುವ ವೈಷ್ಣವ ಆಳ್ವಾರ್ ಇದ್ದುದನ್ನು ತಿಳಿಯುತ್ತೇವೆ. ಆದರೆ ಅನಂತರದ ದಿನಗಳಲ್ಲಿ ಭೂತ ಎನ್ನುವ ಪದವನ್ನು ಕೀಳಾದ ಅರ್ಥದಲ್ಲಿ ಅರ್ಥೈಸಿ ಕೆಲವು ದೈವಗಳನ್ನು ದುಷ್ಟ ದೈವಗಳೆಂದು ಪರಿಗಣಿಸಲಾಯಿತು. (ತುಳುನಾಡ ಇತಿಹಾಸ ತಮಿಳು ಮೂಲ ಮಯಿಲೈ ಶೀನಿ ವೆಂಕಟಸಾಮಿ 2015 ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ)
ತುಳುನಾಡಿನ ಕ್ರಿ.ಶ.1784ರ ಚೊಕ್ಕಾಡಿಯ ಶಾಸನದಲ್ಲೂ ‘ಭೂತಪಾಂಡ್ಯನ’ ಹೆಸರಿನ ಉಲ್ಲೇಖ ಇದೆ. ಹೀಗಾಗಿ ಭೂತಾರಾಧನೆ ಈಗಿನಕ್ಕಿಂತ ಹೆಚ್ಚಿನ ಗೌರವದ ಸ್ಥಾನವನ್ನು ಪಡೆದಿತ್ತು ಎನ್ನಬಹುದು. ಈಗಿನ ಕಾಲದಲ್ಲಿ ಯಾರಾದರೂ ತಮ್ಮ ಮಕ್ಕಳಿಗೆ “ಭೂತ” ಎಂದು ಹೆಸರಿಡಲು ಸಾಧ್ಯವೆ? ಈಗ ಭೂತ ಎನ್ನುವುದು ಬೈನುಡಿ. ಇದಕ್ಕೆ ಹೇಳುವುದು  ಸಂಸ್ಕøತಿಯ ಚಲನೆ ಎಂದು.

ಸಂಸ್ಕøತಿ ಚಲನೆ ವೇಗವನ್ನು ಪಡೆದುದು.
ಭೂತಸ್ಥಾನಗಳು ದೇವಸ್ಥಾನಗಳಾದುದು:
ಸಂಸ್ಕøತಿ ಚಲನೆ ನಿರಂತರವಾದುದು ಆದರೂ ಅದು ಕೆಲವೊಮ್ಮೆ ಮಂದಗತಿಯಲ್ಲಿ ಕೆಲವೊಮ್ಮೆ ತೀವ್ರಗತಿಯಲ್ಲಿ ನಡೆಯುತ್ತದೆ. ಆರಂಭದಲ್ಲಿ ನಾಥ ಪಂಥವು ಕರಾವಳಿಯ ತುಳು ನೆಲದ ಸಂಸ್ಕøತಿಯೊಂದಿಗೆ ರಾಜಿಮಾಡಿಕೊಂಡಿತ್ತು. ನಾವಿಂದು ಉಪಾಸನೆ ಮಾಡುವ ಜುಮಾದಿ, ಪಂಜುರ್ಲಿ, ಕಾಳಿ, ಕಾಳ ಬೈರವ, ಕಾಳರ್ಕಾಯಿ, ಚಂಡಿ, ಚಾಮುಂಡಿ ಕನ್ಯಾಕುಮಾರಿ ಮುಂತಾದ ಅನೇಕ ಭೂತ/ದೈವಗಳು ನಾಥ ಪಂಥದ ಶಕ್ತಿಗಳ. ಉತ್ತರ ಭಾರತದ ಕೆಲವು ಕಡೆ, ಬಂಗಾಳ. ಮಣಿಪುರ, ತ್ರಿಪುರ ಅಸ್ಸಾಮ್‍ನ ಕಾಮಾಖ್ಯದಲ್ಲಿ ಇವುಗಳು ಈಗಲೂ ರಕ್ತಬಲಿ ಪಡೆದು ಉಪಾಸನೆಗೊಳ್ಳುತ್ತಿವೆ. ಅಲ್ಲಿಯ ಬ್ರಾಹ್ಮಣರು ಈ ಶಕ್ತಿಗಳ ಪೂಜೆ ಮಾಡುತ್ತಾರೆ. ಯಾವುದೋ ಕಾಲದಲ್ಲಿ ನಾಥ ಪಂಥದ ಪ್ರಭಾವ ತುಳು ಸಂಸ್ಕøತಿಯಲ್ಲಿ ಸಮ್ಮಿಲನಗೊಂಡಿರಬೇಕು. ಬೌದ್ಧ ಧರ್ಮದ ಮಹಾಯಾನದ ಶಾಖೆಯ ಪ್ರಭಾವವೂ ಆಗಿರಬಹುದು. ಆದರೆ ತುಳುನಾಡಿನಲ್ಲಿ ಹೆಚ್ಚ್ಚಾಗಿ ಈಗ ಇರುವವರು ವೈಷ್ಣವ ಬ್ರಾಹ್ಮಣರು. ಶೂದ್ರ ದೈವಗಳನ್ನು ಉಪಾಸನೆ ಮಾಡುವುದು ಅವರಿಗೆ ಪ್ರತಿಷ್ಟೆಯ ಕೆಲಸ ಅಲ್ಲ. ಬೀಡು ಗುತ್ತುಗಳ ಪಟ್ಟದ ದೈವಕ್ಕೆ ಗಡಿ/ಪಟ್ಟಾಭಿಷಕ್ತ ಹಿರಿಯನೇ ಅರ್ಚಣೆ ಮಾಡಬೇಕೆನ್ನುವ ಪರಂಪಾನುತಗತ ಪದ್ಧತಿ ಇತ್ತು. ಅರ್ಚಕ ವೃತ್ತಿ ಮೇಲ್ಜಾತಿಗಳಾದ ಬಂಟ ಜೈನರಿಗೂ ಪ್ರತಿಷ್ಟೆಯ ಕೆಲಸ ಆಗಿರಲಿಲ್ಲ. ಅರ್ಚಕ ವೃತ್ತಿಯಿಂದ ಬಿಡುಗಡೆ ಹೊಂದಲು ಗುತ್ತು ಬೀಡುಗಳಲ್ಲಿ ಆರಂಭದಲ್ಲಿ ಬ್ರಾಹ್ಮಣ ಅರ್ಚಕರನ್ನು ಕರೆಸಿಕೊಂಡರು. ಅರಸು ದೈವಗಳ. ಚಾವಡಿ ದೈವಗಳ ಪೂನೀರ್ ಇಡುವ ಇನ್ನಿತರ ಕೆಲಸಗಳನ್ನು ಅವರಿಗೆ ಒಪ್ಪಿಸಿ ತಾವು ಭೂತದ ಉಪಾಸನಾ ಕೆಲಸಗಳಿಂದ ಬಿಡುಗಡೆ ಪಡೆದರು. ಈ ಭೂತಗಳ ಉಪಾಸನಾ ಕೈಂಕರ್ಯಕ್ಕೆ ಬ್ರಾಹ್ಣಣರಿಗೆ ಉಂಬಳಿಯನ್ನು ನೀಡಿದರು.  ಶೂದ್ರ ದೈವಗಳಿಗೆ ಬ್ರಾಹ್ಮಣರು ಅರ್ಚಕರಾಗಲು ನಿಷೇಧ ಇದ್ದರೂ ಅನ್ನದ ಪ್ರಶ್ನೆ, ಬದುಕಿನ ಪ್ರಶ್ನೆ ಇಲ್ಲಿ ಇರುವುದರಿಂದ ತಮಗೆ ಅನುಕೂಲಕರವಾದ ಪರಿವರ್ತನೆಗಳನ್ನು ಆರಂಭದಲ್ಲಿ ಮಾಡಿಸಿ ಬ್ರಾಹ್ಮಣರು ಶೂದ್ರರ ಭೂತಸ್ಥಾನಗಳಲ್ಲಿ ಅರ್ಚಕರಾಗಿ ನಿಯುಕ್ತಿಗೊಂಡರು. ಇದರ ಪರಿಣಾಮವಾಗಿ ಮುಂದೆ ಅನೇಕ ಭೂತ/ದೈವಸಸ್ಥಾನಗಳು, ದೇವಸ್ಥಾನಗಳಾಗಿ ಪರಿವರ್ತಿತವಾದುವು. ಉದಾ ಧರ್ಮಸ್ಥಳ, ನಂದಳಿಕೆ, ಕವತ್ತಾರು, ದೇಂದೊಟ್ಟು ಇನ್ನೂ ಅನೇಕಾನೇಕ ದೈವಸ್ಥಾನಗಳು ದೇವಸ್ಥಾನಗಳಾದುವು. ಇಂತಹ ಪರಿವರ್ತನೆ ಈಗಲೂ ಆಗುತ್ತಿವೆ. ಶಿವಲಿಂಗ ಸ್ಥಾಪನೆಯಾದ ಅಥವಾ ಶ್ರೀ ಚಕ್ರ ಪ್ರತಿಷ್ಟಾಪನೆ ಆದ ಆಲಡೆ ದೈವಸ್ಥಾನಗಳಲ್ಲಿ  ಉಲ್ಲಾಯನನ್ನು, ಧರ್ಮ ದೈವಗಳನ್ನು ಎರಡನೇ ದರ್ಜೆಗೆ ಇಳಿಸಲಾಯಿತು.  ಇಂತಹ ಪರಿವರ್ತನೆಯ ಮೂಲಕ  ಬ್ರಾಹಣತ್ವಕ್ಕೆ ಕುಂದುಂಟಾಗದಂತೆ ಎಚ್ಚರಿಕೆ ವಹಿಸಲಾಯಿತು. ಅಂತಹ ಕೆಲವೆಡೆ ಆಲಡೆ ಕ್ಷೇತ್ರಗಳಲ್ಲಿ ಉಲ್ಲಾಯನ (ನಾಗಬೆರ್ಮೆರ್)ಮುಂದಿದ್ದ ಕೊಡಿಮರವನ್ನು ಕಿತ್ತು ಶಿವನ ಗರ್ಭಗುಡಿಯ ಮುಂದೆ ಪ್ರತಿಷ್ಠಾಪಿಸಲಾಯಿತು. ಈ ಪರಿವರ್ತನೆಯನ್ನು ಆರಂಭದಲ್ಲಿ ಎಲ್ಲರೂ ಪುರಸ್ಕರಿಸಲಿಲ್ಲ. ಘರ್ಷಣೆ ಆದುದೂ ಇದೆ. ಹೀಗೆ ಆಗಮ ಸಂಪ್ರದಾಯದ ಪೂಜೆಗೆ ನೆಲಮೂಲದ ದೈವಗಳು ಒಗ್ಗಿಕೊಂಡವು.

ಇನ್ನೊಂದು ಹಂತದಲ್ಲಿ ತುಳುನಾಡಿನ ‘ನಾಗಬೆರ್ಮರ್’ ಎಂಬ ಕೂಡು ನುಡಿಯಿಂದ ನಾಗನನ್ನು ಪ್ರತ್ಯೇಕಿಸಿ ದೇವರ ಸಾಲಲ್ಲಿ ನಿಲ್ಲಿಸಲಾಯಿತು. ಬೆರ್ಮರನ್ನು ಭೂತಗಳ ಸಾಲಲ್ಲಿ ನಿಲ್ಲಿಸಲಾಯಿತು. ಕೆಲವೆಡೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ “ತುಳು ಬೆರ್ಮ”ನನ್ನು ವೈದಿಕ ಧರ್ಮಕ್ಕೆ ಪರಿವರ್ತಿಸಿ ಬ್ರಹ್ಮಲಿಂಗೇಶ್ವರ ಮಾಡಲಾಯಿತು. ಈ ಬದಲಾವಣೆಗೆ ಕಾರಣ ಭೂತಾರಾಧನೆಯಲ್ಲಿ  ಆಗಮ ಸಂಪ್ರದಾಯದ ಪ್ರವೇಶ.  “ಭೂತ” ಪದದ ಬಗ್ಗೆ ಇದ್ದ ತಪ್ಪು ಕಲ್ಪನೆ. ಆದರೆ ವೇದಗಳು “ನಾಗಂ ಪ್ರಧಾನ ಭೂತಂ” ಎನ್ನುತ್ತವೆ. ಆದರೂ ಈಗಲೂ ಶೂದ್ರವರ್ಗದÀ ಪೂಜಾರಿಗಳು, ದಲಿತರು ನಾಗಬೆರ್ಮರ ತನು ತಂಬಿಲ ಸೇವೆ, ಪ್ರತಿಷ್ಠಾಪನೆ ಮಾಡುವ ಸಂಸ್ಕøತಿ ಅಪರೂಪಕ್ಕೆ ಎಂಬಂತೆ ಈಗಲೂ ಉಳಿದು ಬಂದಿದೆ. ಉಲ್ಲಾಲ್ತಿಯ ದರ್ಶನ ಪಾತ್ರಿಗಳಾಗಿ, ಢಕ್ಕೆ ಬಲಿ, ಮಂಡಲ ಪೂಜೆಯ ನಾಗ/ಸ್ವಾಮಿ ಪಾತ್ರಗಳಾಗಿ ಬಂಟರೂ ಇದ್ದಾರೆ. ಕಟೀಲು ಬಪ್ಪನಾಡು ದುರ್ಗಾ ದೇವಿ ಸ್ಥಳೀಯರಿಗೆ ಈಗಲೂ ಉಲ್ಲಾಲ್ತಿ. ಇಷ್ಟಾದರೂ ಇನ್ನೂ ಅನೇಕ ಕಡೆ ಉಲ್ಲಾಲ್ತಿ , ದುರ್ಗಾಪರಮೇಶ್ವರಿಯಾಗದೆ ತುಳು ನೆಲಮೂಲದ ದೈವವಾಗಿ/ಭೂತವಾಗಿ ಮೆಚ್ಚಿ/ಕೋಲ ಪಡೆದು ಸಂಪ್ರೀತಳಾಗುತ್ತಿದ್ದಾಳೆ. ಉಲ್ಲಾಲ್ತಿ ನಾಗಶಕ್ತಿಯಾಗಿ ಉಪಾಸನೆ ಗೊಳ್ಳುವ ದಲಿತರ ನಾಗಕ್ಷೇತ್ರಗಳು ಇವೆ. ನಾಗ ಸ್ತ್ರೀ ಪುರುಷ ಶಕ್ತಿಯನ್ನು ಒಳಗೊಂಡಿರುವ ದೈವ ಶಕ್ತಿ. ಹೀಗಾಗಿ ತುಳುನಾಡಿನ ದೈವಗಳು ಸ್ತ್ರೀ ಮತ್ತು ಪುರುಷ ಶಕ್ತಿಗಳನ್ನು ಒಳಗೊಂಡಿವೆ ಎಂದು ನಂಬಲಾಗಿದೆ.
ತುಳುನಾಡಿನಲ್ಲಿ ಉಲ್ಲಾಲ್ತಿ -ಉಲ್ಲಾಯ ರೂಪದಲ್ಲಿಯೇ ನಾಗಶಕ್ತಿಗಳು ಸೇವೆ ಪಡೆಯುತ್ತವೆ. ಐತಿಹ್ಯದ ಪ್ರಕಾರ ಕಟೀಲು ಉಲ್ಲಾಲ್ತಿಯು ಮೊದಲು ಮೈದೋರಿದ್ದು ‘ಕಟೀಲ’ ಎಂಬ ಕೊರಗ ತರಣನ ತಾಯಿಗೆ.
ಕಂಬುಲ -ಸಿರಿ
ಭತ್ತದ ಬೆಳೆಗೆ ಸಮೃದ್ಧವಾದ ಭೂಮಿಯ ನಾಡಿದು. ತುಳುನಾಡಿನ ಹಬ್ಬಗಳೂ ಕೃಷಿ ಆಚರಣೆಯ ಭಾಗ. ದೀಪಾವಳಿ ಮುಂತಾದ ಹಬ್ಬಗಳು ಮಾತ್ರವಲ್ಲ ಚೌತಿಯೂ ಬೇಸಾಯ ಮೂಲದ ಹಬ್ಬವಾಗಿದೆ. ತುಳು ಸಂಸ್ಕøತಿಯ ಚೌತಿಯ ಗಣಪನ ಪೂಜೆ ಅಂದರೆ ಕಬ್ಬು ಮತ್ತು ದ್ವಿದಳ ಧಾನ್ಯಗಳನ್ನು ಪೂಜಿಸುವುದಾಗಿದೆÀ. ಪರ್ಬ ಎಂದು ಕರೆಸಿಕೊಳ್ಳುವ ದೀಪಾವಳಿ ಮನೆಗೆ ಪೊಲಿ/ಸಿರಿಯನ್ನು ತುಂಬುವ ಸಂಭ್ರಮವನ್ನು ಆಚರಿಸುವುದಾಗಿದೆ.  ಭೂತಾರಾಧನೆ ಕಂಬುಲ, ಆಟಿ ಕಳಂಜ, ಸೋಣದ ಮದಿಮಾಳ್, ಕರಂಗೋಲು ಕುಣಿತ, ನಾಗಾರಾಧನೆ ಭತ್ತದ ಬೇಸಾಯದೊಂದಿಗೆ ನಂಟನ್ನು ಹೊಂದಿವೆ. ಆದ್ದರಿಂದಲೇ ತುಳುನಾಡಿನ ಬೇಸಾಯದಿಂದ, ಇಲ್ಲಿಯ ಸಂಸ್ಕøತಿಯನ್ನು ಬೇರ್ಪಡಿಸಲಾಗುವುದಿಲ್ಲ. ನಾಗ ಕೃಷಿ ಪೋಷಕ ದೈವ.
ಕಂಬುಲವು ಕೃಷಿ ದೈವವಾದ ನಾಗಬೆರ್ಮ ಮತ್ತು ಪರಿವಾರ ದೈವಗಳ ಉಪಾಸನೆ: ಕಂಬುಲ ಎಂದರೆ ಗದ್ದೆಗೆ ಮದುವೆ. ಕಂಬುಲ ಆರಂಭ ಆಗುವುದು ನಾಗ ಕ್ಷೇತ್ರಗಳಿಂದ. ನಾಗ ಬನಗಳಿಂದ. ಎಲ್ಲಾ ಪರಂಪರೆಯ ಕಂಬುಲಗಳು ಆಯಾ ಮನೆತನದ ದೈವಗಳ ಹೆಸರಲ್ಲಿ ನಡೆಯುತ್ತದೆ. ಈ ಸಂದರ್ಭದಲ್ಲಿ ಆಯಾ ದೈವಗಳಿಗೆ ಕೋಲ ನಡೆಯುತ್ತದೆ. ದೈವಗಳು ಆಯಾ ಮನೆತನಕ್ಕೆ ಸಮೃದ್ಧಿಯನ್ನು ತಂದು ಕೊಡುವ ಭರವಸೆಯನ್ನು ನೀಡುತ್ತವೆ. ಆಯಾ ಮನೆತನದ ಕಂಬುಲದ ಕೋಣಗಳನ್ನು ‘ಪಟ್ಟದ ಕೋಣಗಳು’ ಎಂದು ಗೌರವದಿಂದ ಕಾಣುತ್ತಾರೆ. ಕಂಬುಲದ ದಿನ ಪಟ್ಟದ ಕೋಣಗಳು ಉಪವಾಸ ಇರುತ್ತವೆ. ಮನೆಯ ಯಜಮಾನ ಕೂಡಾ ಉಪವಾಸ ಇರುತ್ತಾನೆ. ಪಟ್ಟದ ಕೋಣಗಳಿಗೆ ದಶರ್Àನ ಬಂದು ನಡುಗುತ್ತವೆ. ಇಂತಹ ಕಂಬುಲಕ್ಕೆ 733 ವರ್ಷಗಳ ಇತಿಹಾಸ ಇದೆ. ಬಾರ್ಕೂರಿನಿಂದ ಆಳುತ್ತಿದ್ದ ಬಲ್ಲಮಹಾದೇವಿಯ ಕ್ರಿ. ಶ 1282ರ ಶಾಸನದಲ್ಲಿ ಕಂಬುಲಕ್ಕೆ ಎತ್ತುಗಳನ್ನು ಪೂರೈಸಿದ ಉಲ್ಲೇಖ ಇದೆ.

 ಸಿರಿ ಆರಾಧನೆ ಮತ್ತು ಕಂಬುಲಗಳು ಕೃಷಿ ಪೋಷಕ ಸಾಮೂಹಿಕ ಆಚರಣೆ; ಉಪಾಸನೆ. ತುಳು ನೆಲದ ಪಾಳೆಯಗಾರಿಕೆ ಸಂಸ್ಕøತಿಯ ಮೂಲದ ನಾಗ ಶಕ್ತಿಗಳ, ನಾಗ ಬೆರ್ಮರ ಉಪಾಸನಾ ಆಚರಣೆ. ಕಾಲಾಂತರದಲ್ಲಿ ಅವು ತನ್ನ ಮೂಲ ಸ್ವರೂಪವನ್ನು ಬದಲಾಯಿಸಿಕೊಂಡರೂ ಈಗಲೂ ಹಲವೆಡೆ ಅಂದಿನ ಪಾಳೆಯಗಾರಿಕೆಯ ಉಪಾಸನಾ ಸಂಸ್ಕøತಿಯಾಗಿ ಉಳಿದುಕೊಂಡು ಬಂದಿದೆ. ‘ಸಿರಿಗಳು’ ಈ ನಾಡಿಗೆ ಬಂದುದು ಅತಿಕಾರೆ ಎಂಬ ಭತ್ತದ ಬೀಜದ ಜೊತೆಗೆ. ಸಿರಿ ಅಂದರೆ ಫಲವಂತಿಕೆ. ಎರಡು ಕುಂಭಗಳು ಸಿರಿಗಳನ್ನು ಪ್ರತಿನಧಿಸುತ್ತವೆ. ಎರಡು ಹೆಡಿಗೆ ಅತಿಕಾರೆ ಭತ್ತ ಅವಳಿ ಸಿರಿಗಳನ್ನು ಪ್ರತಿನಿಧಿಸುತ್ತದೆ.್ಲ ಸಿರಿಗಳ ನಲಿಕೆ ಅಂದರೆ ದಯ್ಯೊಲೆ ನಲಿಕೆಯಲ್ಲಿ ಪ್ರಧಾನವಾಗಿ ಪೂಜಿಸುವುದು ಎರಡು ಪುಡಾಯಿ (ಹೆಡಿಗೆ) ಅತಿಕಾರ ಭತ್ತವನ್ನು. ಕೊಯ್ಲಿನ ಸಂದರ್ಭದಲಿ ಸಿರಿಗಳ/ದೆಯ್ಯೊಲೆ ನಲಿಕೆ ಎಂಬ ಉಪಾಸನಾ ಆಚರಣೆ ನಡೆಯುತ್ತದೆ. ಕಂಬುಲ ಸಂಸ್ಕøತಿಯ ಭಾಗವಾಗಿದೆ. ಕಂಬುಲದ ದಿನವೂ ಸಿರಿ ದಶರ್Àನ (ದೆಯ್ಯೊಲೆ ನಲಿಕೆ) ಹಿಂದೆ ನಡೆಯುತ್ತಿತ್ತು. ಕಂಬುಲ ಗದ್ದೆಯ ಕೊಯ್ಲಿನ ದಿನವೂ ದೆಯ್ಯೊಲೆ ನಲಿಕೆ ನಡೆಯುವ ಕಡ್ಡಾಯ ಪದ್ಧತಿ ಇತ್ತು.

ಅರಸು ದೈವಗಳ, ಮತ್ತು ನಾಗ ಶಕ್ತಿಗಳ ಕ್ಷೇತ್ರಗಳಲ್ಲಿ ಬಿಷು ಸಂಕ್ರಾಂತಿಯಂದು ನಡೆಯುವ ಉತ್ಸವ ಕೃಷಿಪೋಷಕವಾದುದು. ತುಳುನಾಡಿಗರಿಗೆ ಮೇಷ ಮಾಸದ ಅಂದರೆ ಪಗ್ಗುತಿಂಗಳ ಸಂಕ್ರಾಂತಿಯ ಮರುದಿವಸ ಹೊಸ ವರುಷ. ಹೊಸ ವರುಷವÀನ್ನು ತನ್ನ ಸೀಮೆ, ಗ್ರಾಮ ವ್ಯಾಪ್ತಿಯ ಜನರೊಂದಿಗೆ ಅರಸು ದೈವಗಳು ಸ್ವಾಗತಿಸುತ್ತವೆ. ಈ ಪದ್ಧತಿ ಇಂದಿಗೂ ಮಂಗಳೂರು, ಬಂಟ್ವಾಳ, ಕಾಸರಗೋಡು, ಸುಳ್ಯ ಮುಂತಾದ ಕಡೆ ನಡೆಯುತ್ತಿದೆ.  ಹೊಸ ವರ್ಷದ ಹೊಸ ಫಲಗಳನ್ನು ದೈವದ ಕೊಡಿಮರದಲ್ಲಿ ಅರ್ಪಿಸಿ ನಿಲುವುಗನ್ನಡಿ ಇಟ್ಟು ಆ ಮೂಲಕ ಹೊಸ ವರ್ಷಕ್ಕೆ ನಾಡಿನ ಸಮಸ್ಥರಿಗೆ ಸಮೃದ್ಧಿಯನ್ನು ಬಯಸುತ್ತವೆ ಈ ದೈವಗಳು.

ಭೂತಸ್ಥಾನಗಳಲ್ಲಿ ಬ್ರಹ್ಮ ಕಲಶ:
ಈ ಶತಮಾನದ ಮಧ್ಯ ಭಾಗದಲ್ಲಿ  ಭೂತಸ್ಥಾನಗಳನ್ನು ನವೀಕರಿಸುವಾಗ ಭೂತಗಳ ಪ್ರತಿಷ್ಠ್ಟಾಪನೆ ಬ್ರಹ್ಮ ಕಲಶ ಮುಂತಾದುವು ಇರಲಿಲ್ಲ. “ಪೊಸ ಪುಡಾಯಿಯಲ್ಲಿ ದೈವದ ಭಂಡಾರ ಇಟ್ಟು ಕೂಚಿಯ ಪವಿತ್ರ ನೀರು ಪ್ರೋಕ್ಷಿಸಿ  ಅದನ್ನು ಒಂದೆಡೆ ಇಟ್ಟು ದಿನಾ ಅದಕ್ಕೆ ಕೇಪುಲ ಪೂ ಅರ್ಚಿಸಿ “ಪೂ ನೀರು” ಇಡಲಾಗುತ್ತಿತ್ತು. ಭೂತ ಸ್ಥಾನ ಒಕ್ಕಲಾಗುವಾಗ ಆ ಪೊಸ ಪುಡಾಯಿಗೆ (ಮತ್ತೆ ಕೇಪುಲ ಅರ್ಚಿಸಿ ಕೂಚಿಯ ಪವಿತ್ರ ನೀರು ಪ್ರೋಕ್ಷಿಸಿ ಚಾವಡಿಯ ಅಥÀವಾ ಬೂತೊಟ್ಯದ ಒಳಗೆ ಉಜ್ಜಾಲಿನಲ್ಲಿ ಇಡಲಾಗುತ್ತಿತ್ತು. ಈಗಿನಂತೆ ಖರ್ಚು ವೆಚ್ಚವೂ ಇರಲಿಲ್ಲ. ಈಗ ದಲಿತರ ದೈವಸ್ಥಾನಗಳಲ್ಲೂ ಬ್ರಾಹ್ಮ,ಣ ಪುರೋಹಿತರ ಮೂಲಕ ಬ್ರಹ್ಮ ಕಲಶ ನಡೆಯುತ್ತಿದೆ. ಬ್ರಾಹ್ಮಣ ಅರ್ಚಕರನ್ನು ಕರೆಯುವುದರಲ್ಲಿ ಶೂದ್ರ ಜನಾಂಗಕ್ಕೆ  ಉಂಟಾಗುವ ಮೇಲರಿಮೆ ಇಂತಹ ಪರಿವರ್ತನೆಗೆ ಕಾರಣ. ಇದರಿಂದ ಶೂದ್ರರ ಪಾರಂಪರಿಕ ಹಕ್ಕುಗಳು ಕಳಚಿಕೊಂಡ ಅರ್ಚನೆಯ ಸಂಸದರ್ಭದಲ್ಲಿ ಅವರು ಅಸ್ಪಶೃರಂತೆ ದೂರ ನಿಲ್ಲಬೇಕಾದ ಸ್ಥಿತಿ ಒದಗಿದರೂ  ಬ್ರಾಹ್ಮಣ ಅರ್ಚಕರು ಜನಪದರ ಜೊತೆಗೆ ಬೆರೆಯುವಂತಾದುದು ಸ್ವಾಗತಿಸಬೇಕಾದ ಬೆಳವಣಿಗೆ.

ಪಾಡ್ದನಗಳು ಚಿತ್ರಿಸುವ ಭೂತಗಳು ಕ್ರೂರ :
ಭೂತಗಳನ್ನು, ಕ್ರೂರವಾಗಿ ಪಾಡ್ದನಗಳು ಚಿತ್ರಿಸಿದರೂ ತುಳುನಾಡಿನ ಜನರು ಭೂತಾರಾಧನೆಯಿಂದ ವಿಮುಖರಾಗಲಿಲ್ಲ.
ನಾನು ಎಳೆಯ ಮಗುವಾಗಿರುವಾಗಲೇ ಭೂತದ ತಂಬಡದ ಸದ್ದನ್ನು ಕೇಳಿ ಬೆಳೆದವಳು. ನಮ್ಮ ಎಳತ್ತೂರು ಚಾವಡಿಯಲ್ಲಿ ತಂಬಡ ಸದ್ದಿಗೆ ಅಂದು ನಡುಗಿದ ನನ್ನದೆಯ ಸದ್ದು ಇಂದೂ ಅನುಭವವಾಗುತ್ತದೆ. ಜುಮಾದಿ ಬೂತ ಮಾನೆಚ್ಚಿಯಲ್ಲಿ  ‘ಅರಬಾಯಿ’ ಇಟ್ಟರೆ ಎಳೆಯ ಮಕ್ಕಳು ನಿಂತಲ್ಲೇ ಉಚ್ಚೆ ಹುಯ್ಯುತಿದ್ದುದನ್ನು ನಾನು ಕಂಡಿದ್ದೇನೆ. ಭೂತ, ಪಾತ್ರಿಯ ಮೈದುಂಬುವಾಗ (ಹಾಗೆ ನಂಬಬೇಕು) ಅಂದರೆ ದಶರ್Àನ ಬಂದಾಗ ಪಾತ್ರಿಯÀ ಎದುರಾಗಿ ಮಹಿಳೆಯರು ಮಾತ್ರವಲ್ಲ ಪುರುಷರೂ ಹೋಗುವಂತಿರಲ್ಲಿ. ಈಗ ಮಹಿಳೆ ಕ್ಯಾಮರಾ ಹಿಡಿದು ನಿಂತರೂ ಭೂತಗಳು ಮುಂದೆ ಬಂದು ‘ಫೋಸ್’ ಕೊಡುತ್ತವೆ. ನಮ್ಮ ಹಿರಿಯರ ಕಾಲದ ಗಾಂಭೀರ್ಯವನ್ನು ಭೂತಾರಾಧನೆ ಕಳೆದುಕೊಂಡಿದೆ. ಅಂದಿನ ಭೂತ ಭಯ ನೆನದರೆ ಕಂಪಿಸುತ್ತದೆ ಮನಸ್ಸು.

ಭೂತಗಳು ದಂಡು ಸಾಧಿಸಿದ್ದು:
ಪಾಳೆಯಗಾರಿಕೆಯ ಕಾಲದ ಯುದ್ಧಕ್ಕೂ ಭೂತಾರಾಧನೆಗೂ ನೇರವಾದ ಸಂಬಂಧ ಇದೆ. ಪಾಡ್ದನಗಳ ಪ್ರಕಾರ ತುಳುನಾಡಿನಲ್ಲಿ ದಂಡು ಸಾಧಿಸಿದ್ದು ಅರಸರಲ್ಲ ಭೂತÀಗಳು. ಅನೇಕ ಪಾಡ್ದನಗಳು ಈ ಬಗ್ಗೆ ಮಾಹಿತಿ ನೀಡುತ್ತವೆ. ಈ ಬಗ್ಗೆ ಐತಿಹ್ಯಗಳೂ ಇವೆ.

ಈಗಲೂ ಅಂದಿನ ಕಾಲದ ಯುದ್ಧ/ಹೋರಾಟದ ಸಂಕೇತವಾಗಿ ಅಂಬೊಡಿ ಆಚರಣೆ ಕೆಲವೊಂದು ಆಲಡೆ ಮೂಲಸ್ಥಾನಗಳಲ್ಲಿ ನಡೆಯುತ್ತಿದೆ. ಈ ಕ್ಷೇತ್ರಗಳ ಶಕ್ತಿ ಕಲ್ಲು ಎತ್ತುವ ಸ್ಪರ್ಧೆಗಳು ಯುದ್ಧ ವೀರರಿಗೆ ಸಂಬಂಧಿಸಿದ್ದು.  ‘ಕಂಬೆರ್ಲು ಕಲ ಮಿತಾವುನು’ ಯುದ್ಧವನ್ನು ಸಂಕೇತಿಸುತ್ತದೆ.

ಪಾಡ್ದನಗಳಲ್ಲಿ ಜನಸಾಮಾನ್ಯರು:
ಇತಿಹಾಸ, ಚರಿತ್ರೆಯಲ್ಲಿ ಜನಸಾಮಾನ್ಯರ ಬಗ್ಗೆ ದಾಖಲಾಗಿಲ್ಲ; ನಿರ್ಲಕ್ಷ್ಯಕ್ಕೆ ಒಳಗಾದ ಜನಪದರ ಪಾತ್ರಗಳ ಸೊಲ್ಲಿಲ್ಲ ಅಲ್ಲಿ. ಅರಸರ ಬಗ್ಗೆ ಮಾತ್ರ ಚರಿತ್ರೆ ಬರೆಯಲಾಗಿದೆ. ಭೂತಾರಾಧನೆಯಲ್ಲಿ ಅರಸು ಆರಾಧನಾ ಪದ್ಧತಿಯೇ ಪ್ರಮುಖವಾದರೂ, ಪರಿವಾರ ದೈವಗಳು, ಬಂಟ ದೈವಗಳು, ಚಾಕ್ರಿಯ (ಸೇವಕ) ದೈವಗಳೂ ಉಪಾಸನೆಗೊಳ್ಳುವುದು ಗಮನಿಸ ಬೇಕಾದ ಅಂಶ. ಅರಸು ಆರಾಧನೆಯ ಸಂದರ್ಭದಲ್ಲಿಯೂ ಅಂಗಳ ಗುಡಿಸುವ ಜಾಲ ಕೊರತಿಗೂ ಮಾನ್ಯತೆ ಇದೆ, ಮೂಲದಾಳುಗಳಿಗೂ ಪ್ರಾಧಾನ್ಯತೆ ಇದೆ. ಪಾಡ್ದನಗಳು ಜನಪದ ಸಂಸ್ಕøತಿಯನ್ನು ಕಟ್ಟಿಕೊಡುತ್ತದೆ. ನಿರ್ಲಕ್ಷಿತ ಜನಸಮುದಾಯದವರೇ ಕಟ್ಟಿ, ಮೌಖಿPವಾಗಿ ಪ್ರಸಾರ ಆದ ತುಳು ಭೂತಾರಾಧನಾ ಸಂಸ್ಕøತಿ ಎಲ್ಲಾ ವರ್ಗದ ಜನರ ಬಗ್ಗೆ ದಾಖಲಾತಿಯನ್ನು ಮೌಖಿಕ ನೆಲೆಯಲ್ಲಿ ಮಾಡಿದೆ. ಇಲ್ಲಿಯ ಪಾಡ್ದನ ಕಬಿತೆಗಳು ಅಲಕ್ಷಿತ ಸಮುದಾಯವನ್ನು ಚಿತ್ರಿಸುವುದು ಗಮನಿಸಬೇಕಾದ ವಿಷಯ.

ಧರ್ಮ ಸಾಮರಸ್ಯ:
ಭೂತಗಳು ಜಾತಿ ಮತಧರ್ಮ ರಹಿತ ಸಮಾಜದ ಶಕ್ತಿಗಳು. ಜಾತಿ ಹುಟ್ಟುವ ಮೊದಲೇ ಭೂತಗಳು ಹುಟ್ಟಿರಬೇಕು. ಹಿಗಾಗಿ ಅವು ಎಲ್ಲಾ ಜಾತಿ ಮತ ಧರ್ಮದವರನ್ನು ತನ್ನ ಮಕ್ಕಳಾಗಿ ಕಾಣುತ್ತಿದೆ. ‘ಪತ್ತಪ್ಪ್ಯ ಜೋಕುಲೆನ್ ಒಂಜಿ ಮಟ್ಟೆಲ್ಡ್ ಪಾಡುನ ಶಕ್ತಿಗಳು’ ಅವು. ಮಾತೃಶಕ್ತಿಗಳು. ಭೂತಗಳ ತೆಕ್ಕೆಯಲ್ಲಿ ಬ್ರಾಹ್ಮಣ, ಜೈನ, ಮಾತ್ರವಲ್ಲ ಬ್ಯಾರಿಗಳೂ ಸೇರಿದ್ದಾರೆ. ಜೈನರು ಮತ್ತು ಬ್ಯಾರಿಗಳು ಈ ನೆಲದ ಭೂತ ಶಕ್ತಿಗಳನ್ನು ನಂಬುವ ಸಂಸ್ಕøತಿ ಕನ್ನಡ ಕರಾವಳಿ ತುಳುನಾಡಿನದ್ದು. ತುಳುವರ ಉಪಾಸನೆಯು ಮತಧರ್ಮ ಪ್ರೇರಿತವಾದುದಲ್ಲ. ಸನಾತನ ಧರ್ಮದ ಭಾಗವಲ್ಲ. ಅದು ನೆಲದ ಸಂಸ್ಕøತಿ, ಜೀವನ ಪದ್ಧತಿ. ಭೂತಗಳು ಎಂದರೆ ಮಣ್ಣು! ಮಣ್ಣು ಎಂದರೆ ನಾಗ! ಅರ್ಥಾತ್  ಕೃಷಿ ಪೋಷಕ ಉಪಾಸನೆ!

ಆಧುನಿಕ ಮಧ್ಯಸ್ಥರು:
ಭೂತಾರಾಧನೆಯಲ್ಲಿ ಈಗಲೂ ಬದಲಾವಣೆಗಳು ಆಗುತ್ತಿವೆ. ಇತ್ತೀಚೆಗೆ ಆಗುತ್ತಿರುವ ಬದಲಾವಣೆ ‘ಮದಿಪು’ ನೀಡುವುದು. “ಮದಿಪು ನೀಡುವ ಕಲೆ ಕರಗತ ಮಾಡಿಕೊಂಡ ಪುರುಷರು ಅನ್ಯರ ಕುಟುಂಬದ ದೈವಕ್ಕೂ” ಮಧ್ಯಸ್ಥರಾಗಿ ಮದಿಪು ನೀಡತೊಡಗಿದ್ದಾರೆ. ನುಡಿಗಟ್ಟಿನ ಬಗ್ಗೆ ಪುಸ್ತಕ ಪ್ರಕಟವಾಗತೊಡಗಿದ ಮೇಲೆ ಯುವ ಪೀಳಿಗೆಯವರು ಇಂತಹ ಪುಸ್ತಗಳಿಗೆ ಬೇಡಿಕೆ ಇಡುತ್ತಿದ್ದಾರೆ ಎಂದು ಪುಸ್ತಕ ಮಾರಾಟಗಾರರೇ ನನ್ನಲ್ಲಿ ಹೇಳಿದರು. 2010ರಿಂದೀಚೆಗೆ ಈ ಬೆಳವಣಿಗೆ. ಹಿಂದೆ ಒಂದು ಮನೆತನದ ದೈವ, ಮಾಧ್ಯಮನಲ್ಲಿ ಆಕರ್ಷಣೆಯಾಗಬೇಕಾದರೆ ಆಯಾ ಕುಟುಂಬದ ಗಡಿಪ್ರದಾನ ಆದ ಹಿರಿಯ, ಅಥವಾ ಆ ಕುಟುಂಬದ ಗಂಡು ಹುಡಗನೂ ದೈವ ಪಾತ್ರಿಯ ಮುಂದೆ ಕೈ ಜೋಡಿಸಿ ಕೇಪುಲ ಪೂ ಎಸೆದು ಜೋಗದ ಜಗತ್ತಿಗೆ ಬರಲು ಅಪ್ಪಣೆ ನೀಡಿದರೆ ದೈವ ಪಾತ್ರಿಯಲ್ಲಿ ದೈವ ಮೈದುಂಬಿ ಬರುತ್ತಿತ್ತು. ಅದು ಪದ್ಧತಿ. ಆತನಿಗೆ ಮದಿಪು ಹೇಳಲು ಬರಲೇ ಬೇಕೆಂದಿರಲಿಲ್ಲ. ಆದರೆ ಈಗ ಮದಿಪು ಹೇಳುವುದು ವ್ಯಾಪಾರೀಕರಣವಾಗಿದೆ. ದೈವ ಕುಟುಂಬಸ್ಥನಾಗಿರದವನೂ ಮದಿಪು ಹೇಳಿ ದೈವವನ್ನು ಮಾಯಾ ಜಗತ್ತಿನಿಂದ ಜೋಗದ ಜಗತ್ತಿಗೆ ಬರಿಸುತ್ತಾನೆ. ನನ್ನಲ್ಲಿ ಒಬ್ಬ ತರುಣ ಈ ರೀತಿ ನುಡಿದ “ಅಕ್ಕಾ ನಾನು ನನ್ನದೇ ಆಸಕ್ತಿಗಾಗಿ ಮದಿಪು ಹೇಳುವ ಕಲೆಯನ್ನು ಕರಗತಮಾಡಿಕೊಂಡೆ. ಆದರೆ ಈಗ ನನ್ನನ್ನು ಮದಿಪು ಹೇಳಲು ಅನೇಕರು ಆಹ್ವಾನಿಸುತ್ತಿದ್ದಾರೆ. ತಪ್ಪಿಸಿಕೊಳ್ಳಲಾಗುತ್ತಿಲ್ಲ. ನನಗೆ ಗೊತ್ತಿದೆ ಬೇರೆಯವರ ದೈವಕ್ಕೆ ನಾನು ಮದಿಪು ಹೇಳುವುದು ತಪ್ಪು ಎಂದು.”

ಕೆಲವು ವರ್ಷಗಳ ಹಿಂದೆ ಸುರತ್ಕಲ್ ಬಳಿಯ ಉಲ್ಲಾಯನ ಕಾಡಿನ ಕ್ಷೇತ್ರದಲ್ಲಿ ಮದಿಪು ಹೆಳಿ ಉಲ್ಲಾಯನನ್ನು ಪಂಬದನ ಮಾಧ್ಯಮನಲ್ಲಿ ಮೈದುಂಬಲು ಕರೆಯಬೇಕಾಗಿದ್ದ ಗಡಿಯ ಗುತ್ತಿನಾರು ಕ್ಷೇತ್ರ ತಲುಪುವುದು ಸ್ವಲ್ಪ ತಡವಾಯಿತು. ಗುತ್ತಿನ ಯಜಮಾನ ಹೋಗುವ ಮೊದಲೇ ಅವಸರವಾದಿಗಳು ಉಲ್ಲಾಯನನ್ನು ಮಾಯದ ಜಗತ್ತಿನಿಂದ ಜೋಗದ ಜಗತ್ತಿಗೆ ಬರಿಸಿದರು. ಮತ್ತೆ ಉಲ್ಲಾಯ ಪಂಬದ ಮಾದ್ಯಮನಿಂದ ಮಾಯಾ ಜಗತ್ತಿಗೆ ಸರಿಯಬೇಕು. ಆಗ ಮದಿಪು ಹೇಳಬೇಕಾದ ಗುತ್ತಿನ ಯಜಮಾನರು ಉಲ್ಲಾಯನ ಬಳಿ ಹೋಗಲಿಲ್ಲ. ಜನರ ಒತ್ತಾಯಕ್ಕೆ ಅವರು ಪ್ರತಿಕ್ರಿಯಿಸಿದ್ದು ಹೀಗೆ: “ ಈ ಏರ್ ಲೆತ್ತಿನೆಕ್ಕ್ ಬತ್ತಿನಿ. ಮೂಜಿನಾಯೆ ಲೆತ್ತಡಲಾ ಈ ಬಯಿದಿನಾಯೆ ಈ. ಮೂಜಿನಾಯೆನೇ ನಿನನ್ ಕಡಪುಡುದು ಕೊರಡ. ಗುತ್ತುದ ಗುತ್ತಿನಾರ್ ನಿಕ್ಕ್ ಬೊಡ್ಚಿ.” (ನೀನು ಯಾರ ಕರೆಗೆ ಓ ಗೊಟ್ಟು ಬಂದೆ? ಮೂರನೆಯವ ನಿನನ್ನು ಕರೆದಾಗ ಬಂದವ ನೀನು. ಮೂರನೆಯ ವ್ಯಕ್ತಿಯೇ ನಿನನ್ನು ಕಳುಹಿಸಿಕೊಡಲಿ)

ಭೂತಾರಾಧನೆಯಲ್ಲಿ ಇನ್ನೊಂದು ಪದ್ಧತಿ/ಸಂಸ್ಕøತಿ ಸದ್ದಿಲ್ಲದೆ ಬದಿಗೆ ಸರಿಯುತ್ತಿದೆ. ಪಂಬದ ಭೂತದ ಅರದಳ ಹಾಕುವಾಗ ನಾಂದಿ ಪದ್ಯ-ಪಾಡ್ದನವನ್ನು ಮಹಿಳೆ ಹಾಡಬೇಕಾಗುತ್ತದೆ. ತೆಂಬೆರೆ ಬಡಿದು ಹಾಡುವ ಆಕೆ ಪಾತ್ರಿಯ  ಮಡದಿಯೋ ತಾಯಿಯೋ ಸೋದರಿಯೋ ಆಗಿರುತ್ತಿದ್ದಳು. ಇತ್ತ್ತೀಚೆಗೆ ಮಹಿಳೆಯರ ಭಾಗವಹಿಸುವಿಕೆ ಕಡಿಮೆಯಾಗುತ್ತಿದೆ. ಆದರೆ ಧರ್ಮಸ್ಥಳದಲ್ಲಿ ಅದು ಉಳಿದು ಬಂದಿದೆ

ಹೀಗೆ ಭೂತಾರಾಧನೆಯ ಉಪಾಸನಾ ಸಂಸ್ಕøತಿಯಲ್ಲಿ ಅನೇಕ ಬದಲಾವಣೆಗಳಾಗುತ್ತಿವೆ. ಆದರೂ ಭೂತಾರಾಧನೆಯನ್ನು ಪ್ರದರ್ಶನ ಕಲೆಯನ್ನಾಗಿಸುವುದನ್ನು ತುಳುನಾಡು ಬೆಂಬಲಿಸÀಲಿಲ್ಲ. ತುಳು ನೆಲಮೂಲದ ಸಾವಿರಾರು ವರ್ಷಗಳ ಉಪಾಸನಾ ಸಂಸ್ಕøತಿಯ ಗಾಂಭೀರ್ಯವನ್ನು ಉಳಿಸಕೊಳ್ಳಬೇಕೆಂಬ ಒಲವು ಜನರಲ್ಲಿ ಹೆಚ್ಚಾಗಿ ಇರುವುದರಿಂದ ಭೂತಾರಾಧನೆಯನ್ನು ಪ್ರದರ್ಶನ ಕಲೆಯನ್ನಾಗಿಸುವ ಪ್ರಯತ್ನ ಸಫಲವಾಗಲಿಲ್ಲ.  ಆದರೂ ಭೂತಾರಾಧನೆಯ ಘನತೆಗೆ ಧಕ್ಕೆ ಬಂದಿದೆ ಗಾಂಭೀರ್ಯಕಳೆದು ಕೊಂಡಿದೆ.



ಕರಾವಳಿ ಕರ್ನಾಟಕದ ಮತ್ತೊಂದು ಸಾಂಸ್ಕøತಿಕ ಪ್ರತಿಷ್ಟೆ ಯಕ್ಷಗಾನ:

ಸಾವಿರಾರು ವರುಷಗಳ ಇತಿಹಾಸ ಇರುವ ಭೂತಾರಾಧನೆ ನೆಲಮೂಲದ ಸಂಸ್ಕøತಿ ಪರಂಪರೆಗಳನ್ನು ಪಸರಿಸಿ ಹರಿಯುತ್ತಿದ್ದರೆ, ಸುಮಾರು 18ನೆಯ ಶತಮಾನದಿಂದ ಬೆಳಕಿಗೆ ಬಂದು ಬೆಳವಣಿಗೆಯಾದ ಯಕ್ಷಗಾನ ವೈದಿಕ ಸಂಸ್ಕøತಿ ಪರಂಪರೆಗಳನ್ನು ತುಳುನಾಡಿಗೆ ಪರಿಚಯಿಸಿದೆ. ಸುಮಾರು 16ನೆಯ ಶತಮಾನದ ಶಾಸನವೊಂದು ಕುಡುಗೋಡು ಲಕ್ಷ್ಮಿ ನಾರಯಣ ದೇವಸ್ಥಾನದಲ್ಲಿ ಪತ್ತೆಯಾಗಿದ್ದು ಅದರಲ್ಲಿ ಯಕ್ಷಗಾನ ಪ್ರದರ್ಶನದ ಉಲ್ಲೇಖ ಇದೆ ಎನ್ನಲಾಗುತ್ತದೆ. (ಈ ದಾಖಲೆ ಮದ್ರಾಸ್ ವಿಶ್ವ ವಿದ್ಯಾಲಯದಲ್ಲಿದೆ ಎನ್ನಲಾಗಿದೆ) ಇನ್ನೊಂದು 17ನೆಯ ಶತಮಾನದ ಆರಂಭ ಕಾಲದ ತಾಳೆಗರಿಯಲ್ಲಿ ಬರೆದ ಅಜಪುರ ವಿóಷ್ಣು (Ajapura Vishnu,) ವಿರಾಟ ಪರ್ವದಲ್ಲಿ ಸಭಾ ಲಕ್ಷಣಗಳನ್ನು ವಿವರಿಸಲಾಗಿದೆ ಎನ್ನಲಾಗಿದೆ.
ಎದಸ
ಭೂತಾರಾಧನೆ ನೆಲಮೂಲಜನರ, ಅಕ್ಷರ ಜ್ಞಾನ ಇಲ್ಲದ ಕಾಲದಿಂದ ಬೆಳೆದು ಬಂದರೆ ಸಂಸ್ಕøತಿಯಾದರೆ ಯಕ್ಷಗಾನ, ಅಕ್ಷರ ಜ್ಞಾನ ಉಳ್ಳವರ, ಶಿಷ್ಟ ಕಲೆಯಾಗಿದೆ. ಆದರೆ ತುಳುಜನರ ಸಂಸ್ಕøತಿಯ ಮೇಲೆ ಯಕ್ಷಗಾನ ದಟ್ಟ ಪ್ರಭಾವ ಬೀರಿದೆ. ಅಕ್ಷರಜ್ಞಾನ ಇಲ್ಲದ ತುಳು ಜನರಿಗೆ ವೈದಿಕ ಪುರಾಣಗಳನ್ನು, ದೇವಿ ಭಾಗÀವತ, ಭಾಗವತ, ರಾಮಾಯಣ ಮಹಾಭಾರತ ಮುಂತಾದ ಗ್ರಂಥಗಳನ್ನು ಪರಿಚಯಿಸಿದ್ದು ಯಕ್ಷಗಾನ ಪ್ರದಶರ್ನಗಳು.
20ನೆಯ ಶತಮಾನದ ಕೊನೆಯ ಕಾಲಘಟ್ಟದ ವರೆಗೆ ಯಕ್ಷಗಾನವನ್ನು ದೇವತಾರಾಧನೆ ಎಂದು ಭಾವಿಸಿದ್ದರು. ಇದಕ್ಕೆ ಕಾರಣ ಯಕ್ಷಗಾನ ಪ್ರಸಂಗಗಳು ಪುರಾಣವನ್ನು ಆಧರಿಸಿದ್ದು ಒಂದಾದರೆ ಯಕ್ಷಗಾನ ಮೇಳಗಳನ್ನು ದೇವಸ್ಥಾನಗಳ ವತಿಯಿಂತ ನಡೆಯುತ್ತಿದ್ದುದು ಇನ್ನೊಂದು. ಪ್ರೇಕ್ಷಕರಲ್ಲಿ ಕಲಾರಾಧನೆ ಕಡಿಮೆ ಇದ್ದು, ಭಕ್ತಿಯೇ ಪ್ರಧಾನವಾಗಿತ್ತು. ತಾನು ‘ವರ್ಷಕ್ಕೆ ಇಂತಿಷ್ಟು ಕಟೀಲು ಮೇಳದ ಆಟವನ್ನು ನೋಡುತ್ತೇನೆ’  ಎಂದು  ಹರಕೆಯನ್ನೂ ಹೊತ್ತವರೂ ಇದ್ದರು ಆ ಕಾಲದಲ್ಲಿ.  ಇಂತಹ ಹರಕೆಯಿಂದ ತಾವು ಬೇಡಿದ್ದು ಕೈಗೂಡುತ್ತದೆ ಎಂಬ ನಂಬಿಕೆಯನ್ನು  ಅವರು ಹೊಂದಿದ್ದರು.

ಯಕ್ಷಗಾನ ಒಂದು ಜನಪ್ರಿಯ ಪ್ರದರ್ಶನ ಕಲೆ. ಪುರಾಣ ಕಥೆಗಳನ್ನು ಜನಪದರಿಗೆ ತಲುಪಿಸುವ ಪ್ರಬಲ ಮಾಧ್ಯಮ ಕೂಡಾ. ಅದರಲ್ಲೂ ತುಳು ನಾಡಿನಲ್ಲಿ ಯಕ್ಷಗಾನ ಕಲೆ ನಿಂತ ನೀರಾಗದೆ ಹೊಸ ಹೊಸ ಪ್ರಯೋಗಗಳಿಗೆ ಒಡ್ಡಿಕೊಂಡು ಸಮೃದ್ಧಗೊಂಡು ಮುಂದೆ ಹರಿಯುತ್ತಿದೆ. ಮಾತ್ರÀವಲ್ಲ ಅದು ಉದ್ದಿಮೆಯಾಗಿ ಕೂಡಾ ಬೆಳೆಯುತ್ತಿದೆ.

ಸುಮಾರು 60 ವರ್ಷದ ಹಿಂದೆ ಹೆಣ್ಮಕ್ಕಳಿಗೆ ಅದರಲ್ಲೂ ಯುವತಿಯರಿಗೆ ಆಟ ನೋಡಲು ಹೋಗಲು ಬಹಳ ಕಡಿಮೆ ಅವಕಾಶ ಇರುತ್ತಿತ್ತು. ಅವರವರ ಮನೆಯಲ್ಲಿ ಆಡಿಸುವ ಆಟ ನೋಡಬಹುದಿತ್ತೇ ವಿನಃ ಇತರ ಕಡೆ ಮಹಿಳೆಯರು ಯುವತಿಯವರು, ಹೆಣ್ಮಕ್ಕಳು ಕೂಡಾ ಯಕ್ಷಗಾನ ನೋಡಲು ಹೋಗುವ ವಾತಾವರಣ ಇರಲಿಲ್ಲ.

ನಿನನ್ ತೂವರೆ ಬರ್ಪಿನಿ ಕುಕ್ಕುದು ಮರತ ಅಡಿಕಾ ?
1920 ರ ದಶಕದಲ್ಲಿ ಮನೆಯಂಗಳದಲ್ಲಿ ಹಣ್ಣಾಗಿ ಉದುರಿದ್ದ ಮಾವಿನ ಹಣ್ಣನ್ನು ಆರಿಸಲು ಹೋದ ಹುಡುಗಿಯ ಕಾಲಿನಗಂಟಿಗೆ ದಂಟೆಯಿಂದ ಬಡಿದು ಅವಳ ತಾಯಿ ಕೇಳಿದಗ್ದಿರಂತೆ “ನಿನನ್ ತೂವರೆ ಬರ್ಪಿನಿ ಕುಕ್ಕುದು ಮರತ ಅಡಿಕಾ ?” ಇಂತಹ ಕಾಲ ಸ್ಥಿತಿಯಲ್ಲಿ ಮಹಿಳೆ ಬಿಡಿ ಹೆಣ್ಣು ಮಕ್ಕಳು ಯಕ್ಷಗಾನ ನೋಡಲು ಸಾಧ್ಯ ವಿತ್ತಾ? 1960-80ರ ದಶಕಗಳಲ್ಲೂ ಇದೇ ಸ್ಥಿತಿ ಇತ್ತು. ಇದು ಮಾತೃಪ್ರಧಾನ ಸಮಾಜದ ಸಂಸ್ಕøತಿ! ನನ್ನ ಬಾಲ್ಯದಲ್ಲಿ ನಮ್ಮೂರು ಎಳತ್ತೂರಿನಲ್ಲಿ ವರ್ಷಕ್ಕೆ ಒಂದೂ ಯಕ್ಷಗಾನ ಪ್ರದಶರ್Àನ ಆಗುತ್ತಿರಲಿಲ್ಲ. ಪಕ್ಕದೂರಿನ ಆಟಕ್ಕೆ ಹೋಗಗೊಡುತ್ತಿರಲಿಲ್ಲ. ಹೀಗಾಗಿ ಯಕ್ಷಗಾನದ ಅಭಿರುಚಿ ನನ್ನೊಳಗೆ ಬೆಳೆಯಲೇ ಇಲ್ಲ. ಈಗ ವರ್ಷಕ್ಕೆ ಮೂರುನಾಲ್ಕು ಆಟ ನಮ್ಮ ಹಳ್ಳಿಯಲ್ಲಿ ನಡೆಯುತ್ತಿದೆ.

ಇಂತಹ ಪುರುಷ ಪ್ರಧಾನ ವಾತಾವರಣದಲ್ಲಿ ಯಕ್ಷಗಾನದ ಪ್ರೇಕ್ಷಕರು ಕೂಡಾ ಹೆಚ್ಚಾಗಿ ಪುರುಷರೇ ಆಗಿದ್ದರು. ಆದುದರಿಂದಲೋ ಏನೋ ಯಕ್ಷಗಾನ ಪುರುಷರ ಪ್ರದರ್ಶನ ಕಲೆಯಾಗಿ ಪ್ರವರ್ಧಮಾನಕ್ಕೆ ಬಂತು. ಮೇಳದ ಸಂಘಟಕರಾಗಿ, ಕಲಾವಿದರಾಗಿ, ಪ್ರೇಕ್ಷಕರಾಗಿ ಪುರುಷರೇ ಇದ್ದರು. ಮಹಿಳೆಯರು ಪ್ರೇಕ್ಷಕರಾಗುತ್ತಿದ್ದುದು ಬಹಳ ಅಪರೂಪ.

ಯಕ್ಷಗಾನವನ್ನು ಗಂಡು ಕಲೆ ಎಂದು ಕರೆಯುತ್ತಾರೆ. ಕೆಲವರ ಪ್ರಕಾರ ಗಂಡುಸರೇ ಪ್ರದರ್ಶಿಸುವ ಕಲೆ ಅದಕ್ಕೆ ಅದು ಗಂಡು ಕಲೆ. ಇಲ್ಲಿ ಒಂದು ಮಾತು. ಉತ್ತರ ಕರ್ನಾಟಕವನ್ನು ‘ಗಂಡು ಮೆಟ್ಟಿನ ನೆಲ’ ಎನ್ನುತ್ತಾರೆ. ಹಾಗಾದರೆ ಅಲ್ಲಿ ಮಹಿಳೆಯರು ವಾಸಿಸುವುದಿಲ್ಲ ಎಂಬರ್ಥವೆ? ದಕ್ಷಿಣ ಕರ್ನಾಟಕದಲ್ಲಿ ಗಂಡುಗಳು ಇಲ್ಲವೆಂದೆ? ಯಕ್ಷಗಾನದ ಪ್ರಬುಧ್ಧ ಸಾಹಿತ್ಯ ಭಾಷೆ, ನಟನೆಗಾಗಿ ಅದು ಗಂಡು ಕಲೆಯಾಗಿರಬಹುದು ಎಂಬುದು ನನ್ನ ಅಭಿಪ್ರಾಯ.

ನನ್ನ ಬಾಲ್ಯ ಕಾಲದಲ್ಲಿ (60ರ ದಶಕ) ಯಕ್ಷಗಾನಕ್ಕೆ ಈಗಿನಷ್ಟು ಗೌರವವೂ ಇದ್ದಿರಲಿಲ್ಲ.  ಇತ್ತೀಚನ ವರ್ಷಗಳಲ್ಲಿ ಯಕ್ಷಗಾನವು ವಿಜೃಂಭಿಸುತ್ತಾ ಇದೆ. ಯಕ್ಷಗಾನ ನಗರ ಪ್ರವೇಶಿಸಿದ ಮೇಲೆ ಕಲಾರಾಧನೆ ಬೆಳೆಯುತ್ತಿದೆ. ಆದರೆ ಹಳ್ಳಿಗಳಲ್ಲಿ ಪ್ರೇಕ್ಷಕರ ಕೊರತೆ ಕಾಡುತ್ತಿದೆ. ಇತ್ತೀಚಿನ ದಶಕಗಳಲ್ಲಿ ಸಾಮೂಹಿಕ ಭೋಜನ ನೀಡಿ ಸಭಿಕರನ್ನು ಆಕರ್ಷಿಸುವ ಪ್ರಯತ್ನ ನಡೆಯಿತು ಆದರೆ ಸಹಭೋಜನ ಮುಗಿಸಿ ಮನೆಗೆ ಹೋಗಿ ನಿದ್ದೆಮಾಡುವವರೇ ಹೆಚ್ಚು. ಆದ್ದರಿಂದ ಯಕ್ಷಗಾನಕ್ಕೂ ಕಾಲಮಿತಿ ಹಾಕುವ ನಿರ್ಣಯವನ್ನು ಧರ್ಮಸ್ಥಳ ಮೇಳದ ಆಡಳಿತ ಮಂಡಳಿ ಕಳೆದ ವಾರ ಕೈಗೊಂಡಿದೆ. ರಾತ್ರಿ 12ಕ್ಕೆ ಯಕ್ಷಗಾನ ಮುಗಿಯ ಬೇಕೆನ್ನುವ ಕಾಲ ಮಿತಿ. ಈಗ ವಾಹನ ಸಂಪರ್ಕಗಳ ಕೊರತೆ ಇಲ್ಲದೆ ಇರುವುದರಿಂದ ರಾತ್ರಿ 12 ಗಂಟೆಯಾದರೂ ಹಳ್ಳಿಗಳಿಂದಲೂ ಅವರವರ ಮನೆಗೆ ಮರಳಬಹುದು. ಇನ್ನೂ ಅನೇಕ ಬದಲಾವಣೆಗಳನ್ನು ತರಲು ಯಕ್ಷಗಾನ ವಿದ್ವಾಂಸರು, ಮೇಳಗಳ ಸಂಘಟಕರು ಚರ್ಚಿಸುತ್ತಿದ್ದಾರೆ.

ಮಹಿಳಾ ಯಕ್ಷಗಾನ ಕಲಾವಿದರು: ಮಹಿಳೆಯರು ಆಟ ನೋಡಲು ಹೋಗಲು ಮುಕ್ತವಾದ ವಾತಾವರಣ ಬಂದುದು ಕೆಲವು ದಶಕಗಳಿಂದೀಚೆಗೆ, ಮಹಿಳೆಯರೂ ಹೆಚ್ಚು ಹೆಚ್ಚಾಗಿ ಯಕ್ಷಗಾನ ನೋಡಲು ಆರಂಭವಾದ ಮೇಲೆ ಮಹಿಳೆಯರಲ್ಲೂ ಯಕ್ಷಗಾನದ ಬಗ್ಗೆ ಅಭಿರುಚಿ ಬೆಳೆಯಿತು. ಯಕ್ಷಗಾನ ರಂಗಕ್ಕೆ ಮಹಿಳೆಯರ ಪ್ರವೇಶ ಆಯಿತು. ಮಹಿಳೆಯರು ಯಕ್ಷಗಾನ ರಂಗದಲ್ಲಿ ಮಿಂಚತೊಡಗಿದರು.

ಪುರುಷರ ಸಮಾನಾರಾಗಿ ದಿಗಣ ತೆಗೆದು ಕುಣಿಯುವ ಪ್ರತಿಭೆಯನ್ನು ಮಹಿಳೆಯರೂ ಬೆಳೆಸಿಕೊಂಡರು. ನನ್ನ ಬಾಲ್ಯದಲ್ಲಿ ಮಹಿಳೆಯರು ದಿಗಣ ತೆಗೆಯುವುನದನ್ನು ಯಾರೂ ಕಲ್ಪಿಸಲೂ ಇಲ್ಲ. ಈಗ ಅನೇಕ ಮಹಿಳಾ ಯಕ್ಷಗಾನ ಸಂಘಟಣೆಗಳು ಇವೆ. ತಾಳ ಮದ್ದಲೆಗಳನ್ನು ನಡೆಸುವ ಸಂಘಟಣೆಗಳು ಇವೆ. ಮಹಿಳಾ ಕಲಾವಿದರನ್ನು ಕರೆದು ಗೌರವಿಸುವುದು ಒಂದು ಒಳ್ಳೆಯ ಬೆಳವಣಿಗೆ. ಲೀಲಾವತಿ ಬೈಪಡಿತ್ತಾಯರಂತ ಮಹಿಳಾ ಭಾಗÀವತರು ವಿದೇಶದಲ್ಲಿ ಪ್ರದರ್ಶನ ನೀಡಿ ಯಕ್ಷಗಾನದ ಶ್ರೀಮಂತಿಕೆಯನ್ನು ವಿದೇಶದಲ್ಲಿ ಮೆರೆದರು. ಹೀಗೆ ಯಕ್ಷಗಾನ ರಂಗ ಮಹಿಳೆಯರನ್ನು ಒಪ್ಪಿಕೊಂಡು ಅಪ್ಪಿಕೊಂಡು ಇನ್ನೂ ಬೆಳೆಯುತ್ತಿದೆ. ಆದರೂ ದೇವಸ್ಥಾನಗಳ ಮೇಳಗಳಲ್ಲಿ ಮಹಿಳಾ ಯಕ್ಷಗಾನ ತಂಡಗಳ ಸ್ಥಾನ ಪಡೆಯಲು ಇನ್ನೆಷ್ಟು ಕಾಲ ಬೇಕಾಗಬಹುದೊ? ಅಥವಾ ಅಂತಹ ಸಂಭವ ಕಡಿಮೆ.

ಬಾಲ ಕಲಾವಿದರು :
ಯಕ್ಷಗಾನದಲ್ಲಿ ಇನ್ನೊಂದು ಮಹತ್ವದ ಪರಿವರ್ತನೆ ಎಂದರೆ ಅದು ಎಳೆಯ ಮಕ್ಕಳನ್ನು ಆಕರ್ಷಿಸಿ ಅವರನ್ನು ತನ್ನತ್ತ ಸೆಳೆದು ಕೊಂಡಿದ್ದು. ಆಂಗ್ಲ ಮಾಧ್ಯಮದಲ್ಲಿ ಓದುವ ತುಳು ಮಾತೃ ಭಾಷೆಯ ಎಳೆಯ ಮಕ್ಕಳು ಪ್ರೌಢ ಕನ್ನಡದಲ್ಲಿ ಸಂಭಾಷಿಸುತ್ತಾ ರಾಮಾಯಣ ಮಹಾಭಾರತದ ಪಾತ್ರಗಳನ್ನು ಪ್ರತಿನಿಧಿಸಿ ಅಭಿನಯಿಸುವಾಗ ಬೆರಗು ಉಂಟಾಗುತ್ತದೆ. ಯಕ್ಷಗಾನದ ಪಾತ್ರಗಳ ಭಾಷೆ  ಗ್ರಂಥಸ್ಥ ಶ್ರೀಮಂತ ಕನ್ನಡ ಭಾಷೆ. ಸಮೃದ್ಧ ಕನ್ನಡ. ತುಳು ಮಾತೃ ಭಾಷಿಕರು ಆಡುವ ಯಕ್ಷಗಾನದ ಕನ್ನಡದ ಸಂಭಾಷಣೆಯನ್ನು ಬಹುಷ ಕನ್ನಡ ಮಾತೃಬಾಷಿಕನಿಗೂ ಆಡಲು ಸಾಧ್ಯವಾಗದು.

 ಹಿಂದೆ ಯಕ್ಷಗಾನಕ್ಕೂ ರಜಾ ಕಾಲ ಇತ್ತು “ಪತ್ತನಾಜೆಗೆ ಪತ್ತ್ ಪನಿ ಬರ್ಸಉಂಡುಗೆ ಕೇಂಡನ ....ಪೂಜೆ ಬಲಿ ಪಿದಯಿಡ್ದ್ ಉಲಯಿ ಪೋಪುಂಡು ಮಾದಿರ.” ಎನ್ನುತ್ತದೆ ಮಾದಿರ ಗಾದೆ. ಬೇಷ ತಿಂಗಳ ಹತ್ತು ಸಲುವಂದು ಹತ್ತು ಹನಿಯಾದರೂ ಮಳೆ ಇರುತ್ತದೆ. ಅದುವರೆಗೆ ತಿರುಗಾಟದಲ್ಲಿ ನಿರತರಾಗಿದ್ದ ಮೆಳಗಳು, ಪೂಜೆ ಬಲಿ ಇಂತಹುದೆಲ್ಲ ದೇವಸ್ಥಾನದ ಒಳಗೆ ಹೋಗುತ್ತದೆ ಎನ್ನುತ್ತದೆ ಮಾದಿರ ಗಾದೆ.

ಬೇಷ ತಿಂಗಳಲ್ಲಿ ಮಳೆ ಆರಂಭವಾದರೆ ಮುಂದೆ ಭತ್ತದ ಬೇಸಾಯದ ಉರ್ಬುನ ಕಾಲ. ಅಲ್ಲಿಂದ ಮಹಾನವಮಿವರೆಗೆ ಯಕ್ಷಗಾನಕ್ಕೆ ರಜಾ ಕಾಲ. ಹೀಗಾಗಿ ಕಲಾವಿದರಿಗೂ ರಜೆ. ಮಳೆಗಾಲದಲ್ಲಿ ಮನರಂಜನೆಗಾಗಿ ಹಳ್ಳಿಯ ಗುತ್ತುಬೀಡು ಅಥವಾ ದೇವಸ್ಥಾನಗಳಲ್ಲಿ ತಾಳ ಮದ್ದಲೆ ನಡೆಯುತ್ತಿತ್ತು. ಮುಂದೆ ಮುಂಬಯಿ ಬೆಂಗಳೂರು ಪ್ರಯಾಣ ದಾರಿ ಸುಗಮವಾದ ಮೆಲೆ ಅಪರೂಪಕ್ಕೆ ಬೆಂಗಳೂರು ಮುಂಬಯಿಯಂತಹ ಮಹಾನಗರಗಲ್ಲಿ ಕೆಲವು ಹವ್ಯಾಸಿ ಕಲಾವಿದರ ಸಂಘ ಸಂಸ್ಥೆಗಳು ಯಕ್ಷಗಾನದ ಹವ್ಯಾಸಿ ಕಲಾವಿದರನ್ನು ಕರೆಸಿ ಯಕ್ಷಗಾನ ಪ್ರದರ್ಶನವನ್ನು ಪ್ರೋತ್ಸಾಹಿಸುತ್ತಿದ್ದರು. ಇತ್ತೀಚಿನ ದಶಕಗಳಲ್ಲಿ ಯಕ್ಷಗಾನ ಹಳ್ಳಿ ದಿಲ್ಲಿ ಮಾತ್ರವಲ್ಲ ವಿದೇಶದಲ್ಲೂ ತನ್ನ ಛಾಪು ಊರಿದೆ. ಪ್ರವಾಸೀ ಮೇಳಗಳು ತಮ್ಮ ಯಕ್ಷಗಾನÀ ಭಂಡಾರದೊಂದಿಗೆ ದೇಶದ ಉದ್ದಗಳ ಸುತ್ತುತ್ತವೆ.  ವರ್ಷಪೂರ್ತಿ ಯಕ್ಷಗಾನ ಸಂಭ್ರಮ!

ತಾಳ ಮದ್ದಲೆ ಯಕ್ಷಗಾನದ ಇನ್ನೊಂದು ಪ್ರಕಾರ.  ವೇಷ ಭೂಷಣಗಳಲ್ಲಿದೆ ತನ್ನ ನಿಜವೇಷದಲ್ಲಿ ಕುಳಿತು ಕಲಾವಿದರು ವಾಕ್ ಚಾತುರ್ಯದ ಮೂಲಕ ಯಕ್ಷಗಾನ ಪ್ರಸಂಗದ ಪಾತ್ರಗಳನ್ನು ಪ್ರತಿನಿಧಿಸುತ್ತಾರೆ. ಮಹಿಳೆಯರು ಇಲ್ಲೂ ಪುರುಷರ ಸಮನಾಗಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವುದು ಹೆಮ್ಮೆಯ ವಿಷಯ. ಮಳೆಗಾಲಕ್ಕೆ ಮಾತ್ರ ಸೀಮಿತವಾಗಿದ್ದ ತಾಳಮದ್ದಲೆ ಕೂಡಾ ವರ್ಷಪೂರ್ತಿ ನಡೆಯುತ್ತಿದೆ. ಯಕ್ಷಗಾನ ರಂಗ ಪ್ರದರ್ಶನ ಮತ್ತು ತಾಳ ಮದ್ದಲೆಗಳೆರಡೂ ಭಾಷೆ, ದೇಶ, ಕಾಲವನ್ನು ಮೀರಿ ಬೆಳೆಯುತ್ತಿದೆ.

ಹವ್ಯಾಸಿ ಯಕ್ಷಗಾನ ಕಲಾವಿದರು, ಯಕ್ಷಗಾನ ಮಿತ್ರ ಮಂಡಲಿ, ಯಕ್ಷಲಹರಿ, ಯಕ್ಷಗಾನ ಮಿತ್ರ ಮಂಡಳಿ -ಮುಂತಾದ ಹೆಸರುಗಳ ಮೂಲಕ ಯಕ್ಷ ಕಲಾಪ್ರೇಮಿಗಳ ಕೂಟಗಳು ಗಮನ ಸೆಳೆಯುವ ಕೆಲಸ ಮಾಡುತ್ತಿದೆ. ಇವರು ಯಕ್ಷಗಾನ ತಾಳಮದ್ದಲೆ ಮಾತ್ರವಲ್ಲದೆ ಅರ್ಹಕಲಾವಿದರನ್ನು ಗುರುತಿಸಿ ಗೌರವಿಸುವ ಕೆಲಸ ಮಾಡುತ್ತಿದ್ದಾರೆ. ಕಲಾವಿದರಿಗೆÀ ವೃದ್ದ್ಯಾಪದಲ್ಲಿ ಅನುಕೂಲವಾಗಲು ನಿಧಿಯನ್ನು ಸಮರ್ಪಿಸುತ್ತಿದ್ದಾರೆ. ಇದೆಲ್ಲ ಬಹಳ ಒಳ್ಳೆಯ ಬೆಳವಣಿಗೆ.

ಸನಾತನ ಧರ್ಮವನ್ನು ವೈಭವೀಕರಿಸುತ್ತವೆ:
ಬೇಡ ಬೇಡವೆಂದರೂ ನನ್ನ ಗಮನ ಸೆಳೆದ ಮುಖ್ಯ ವಿಷಯವನ್ನು ನಾನು ಇಲ್ಲಿ ಪ್ರಸ್ತಾಪಿಸಲೇ ಬೇಕಾಗಿದೆ.

 ಸಾಮಾನ್ಯವಾಗಿ ಯಕ್ಷಗಾನ ಮೇಳಗಳು ವೈದಿಕ ಹಿನ್ನೆಲೆಯಿಂದ ಬಂದವುಗಳು. ಹೀಗಾಗಿ  ಸನಾತನ ಧರ್ಮವನ್ನು ವೈಭವೀಕರಿಸುವ ಪ್ರಕ್ರಿಯೆ ಯಕ್ಷಗಾನದ ಮೂಲಕ ನಿರಂತರವಾಗಿ ನಡೆಯುತ್ತಿದೆ. ಮೇಲು ಕೀಲು ಶೂದ್ರ ಬ್ರಾಹ್ಮಣ ಎಂಬ ಭೇದ ಯಕ್ಷಗಾನ ರಂಗದಿಂದ ಅಳಿದು ಹೋಗಿಲ್ಲ. ಬದಲಾಗಿ ಯಕ್ಷಗಾನ ಪಾತ್ರಗಳು ಅದನ್ನು ಪೋಷಿಸುತ್ತದೆ ಎನ್ನಬಹುದು. ವೈದಿಕ ಮೂಲದ ದೇವರುಗಳೇ ಯಕ್ಷಗಾನದ ಮೂಲ ವಸ್ತುಗಳಾಗಿವೆ. ತುಳು ನೆಲಮೂಲದ ದೈವ ದೇವರುಗಳು ಯಕ್ಷಗಾನದಲ್ಲಿ ಮಹತ್ವ ಪಡೆಯಲಿಲ್ಲ. 18 , 19ನೆಯ ಶತಮಾನದಲ್ಲಿ ಬ್ರಾಹ್ಮಣ ಕವಿಗಳಿಂದ ರಚನೆಗೊಂಡ ಯಕ್ಷಗಾನ ಪ್ರಸಂಗದಲ್ಲಿ ನೆಲಮೂಲದ ಸಂಸ್ಕøತಿಯ ಯಕ್ಷಗಾನ ಪ್ರಸಂಗಗಳನ್ನು ನಿರೀಕ್ಷಿಸುವುದು ತಪ್ಪಾಗುತ್ತದೆ. ಆದರೂ ಇಂತಹ ವೈದಿಕ ಮೂಲದ ಕಥೆಗಳು ನೆಲದ ಸಂಸ್ಕøತಿಯಲ್ಲಿ ಜಾತೀಯತೆಯನ್ನು ಪೋಷಿಸಿದ್ದು  ಸುಳ್ಳಲ್ಲ.

ನೆಲಮೂಲದ ಸಾಂಸ್ಕøತಿಕ ಆಯಾಮಗಳನ್ನು ಯಕ್ಷಗಾನ ನಿರ್ಲಕ್ಷಿಸಲು ತುಳು ಸಾಹಿತ್ಯದ ಕೊರತೆಯೂ ಕಾರಣವಾಗಿರಬಹುದು. ನೆಲಮೂಲದ ಸಂಸ್ಕøತಿಯ ಒಳಹೊರಗನ್ನು ಬಲ್ಲ ಶೂದ್ರರಿಗೆ ವಿದ್ಯೆಯ ಕೊರತೆ ಇತ್ತು.. ಹೀಗಾಗಿ ತುಳುನಾಡಿನ ಜನಪ್ರಿಯ ಯಕ್ಷಗಾನ ಕಲೆಯಲ್ಲಿ ತುಳು ನೆಲ ಮೂಲದ ಸಂಸ್ಕøತಿಗೆ, ಪಾಡ್ದನ ಸಾಹಿತ್ಯಕ್ಕೆ, ಸಿಗಬೇಕಾದ ಸ್ಥಾನ ಸಿಗಲಿಲ್ಲ. ಆದರೆ ಈಗ್ಗೆ ಎರಡು ಮೂರು ದಶಕಗಳಿಂದೀಚೆಗೆ ತುಳು ಪಾಡ್ದನ ಕಥೆಗಳನ್ನು ಯಕ್ಷರಂಗಕ್ಕೆ ತರಲಾಗುತ್ತಿದೆ.
ಕೋಡ್ದಬ್ಬು ಬಾರಗ, ದೇವು ಪೂಂಜ, ವೀರ ಕಲ್ಪುಡ, ಅಬ್ಬರದ ಬೊಬ್ಬರ್ಯೆ, ತುಳುನಾಡ ಸಿರಿ, ಕೋಟಿ ಚೆನ್ನಯ, ನಾಗ ದೈವ ಮುಂತಾದ ಅನೇಕ ಪ್ರಸಂಗಗಳು ರಚನೆಯಾಗಿ ಪ್ರದರ್ಶನ ಕಂಡಿವೆ. ಆದರೂ ತುಳು ಪ್ರಸಂಗಗಳು ವೈದಿಕ ಪುರಾಣಸಾಹಿತ್ಯದಿಂದ ರಚಿತವಾದ ಯಕ್ಷಗಾನದಷ್ಟು ಜನಪ್ರಿಯ ಆಗಲಿಲ್ಲ. ಇದಕ್ಕೆ ಹಲವಾರು ಕಾರಣಗಳಿವೆ. ತುಳು ಪಾಡ್ದನ ಸಾಹಿತ್ಯ ಭಾಷಿಕವಾಗಿ ಸಮೃದ್ಧವಾಗಿದೆ. ಹೀಗಾಗಿ ಮುಂದೆ ಯಕ್ಷಗಾನ ಪ್ರದರ್ಶನದಲ್ಲಿ ತುಳು ಸಂಸ್ಕøತಿಯ ಪಾಡ್ದನ ಸಾಹಿತ್ಯ ಒಳ್ಳೆಯ ಸ್ಥಾನ ಪಡೆಯಬಹುದು ಎಂದು ಆಶಿಸಬಹುದು.

ನಾನು ಹಿಂದೆಯೇ ಹೇಳಿದಂತೆ ಭೂತಾರಾಧನೆಯ ನೆಲಮೂಲ ಉಪಾಸನಾ ಸಂಸ್ಕøತಿಗೆ ಜಾತಿ ಮತ ಪಂಥಗಳ ಹಂಗಿಲ್ಲ. ಅಂದೂ ಇರಲಿಲ್ಲ. ಇಂದಿಗೂ ಇಲ್ಲ. ಆದರೆ ವೈದಿಕ ಪುರಾಣ ಪ್ರಸಂಗಗಳಿಂದ ರಚಿತವಾದ ಯಕ್ಷಗಾನ ಪ್ರದರ್ಶನದಲ್ಲಿ ಜಾತಿ ಮತವನ್ನು ಎತ್ತಿ ತೋರಿಸಲಾಗುತ್ತದೆ. ಇದರ ಪ್ರಭಾವ ತುಳು ಜನ ಜೀವನದ ಮೇಲಾಗಿದೆ  ಎನ್ನದೆ ವಿಧಿಯಿಲ್ಲ.

ಕೊನೆಯದಾಗಿ ನನ್ನ ನೆರೆ ಊರಿನ ಕಟೀಲಿನಲ್ಲಿ ನಡೆದ ಜಿಲ್ಲಾ ಸಾಹಿತ್ಯ ಸಮ್ಮೆಳನದಲ್ಲಿ ನನ್ನ ಅಧ್ಯಯನವನ್ನು ಗುರುತಿಸಿ ಅವಕಾಶ ನೀಡಿದ ದಕಿಷಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತಿಗೆ ವಂದನೆಗಳು.
***********************************************************************
ಜುಲಾಯಿ 28, 2015ರಲ್ಲಿ ಕಟೀಲಿನಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಮಾಡಿದ ಉಪನ್ಯಾಸಸ ಪೂರ್ಣ ಪಾಠ.




No comments:

Post a Comment