Saturday, November 15, 2014

ತುಳುನಾಡಿನ ಮಾತೃ ಸಂಸ್ಕೃತಿ

ಹಲೋ ನಮಸ್ಕಾರ ಬಂಧುಗಳೇ. 

ತುಳುನಾಡಿನ ತಾಯಿ ಮೂಲದ ಸಾಂಪ್ರದಾಯಿಕ, ಮಾತೃ ಪ್ರಧಾನ ಸಮಾಜದ ಬಗ್ಗೆ ನನ್ನ ಅರಿವನ್ನು ಹಂಚಿಕೊಳ್ಳಲು ನನ್ನನ್ನು ಇಲ್ಲಿಗೆ ಆಂಮತ್ರಿಸಿದ್ದೀರಿ. ನನಗೊಂದು ಸಂದೇಹ ಇದೆ. ನಾನು ಹೇಳುವ ಮಾತೃ ಸಂಸ್ಕøತಿಯ ಬಗ್ಗೆ ನೀವೆಷ್ಟು ಅರ್ಥಮಾಡಿಕೊಳ್ಳು ಸಾಧ್ಯ ಎನ್ನುವುದು. ಅಥವಾ ನಾಣು ನಿಮಗೆ ಎಷ್ಟು ಮನವರಿಕೆ ಮಾಡಲು ಶಕ್ತಳು  ಎಂದು. ಕಾರಣ ಇಷ್ಟೆ. ಕರ್ನಾಟಕ ಇತಿಹಾಸ ಅಕಾಡೆಮಿಯಿಂದ ತುಳುನಾಡಿನ ಐತಿಹಾಸಿಕ ಸಾಂಸ್ಕøತಿಕ ವಿಷಯಗಳ ಬಗ್ಗೆ ಪ್ರಬಂಧ ಮಂಡಿಸಿದರೆ ಅಲ್ಲಿ ನೆರೆದ ವಿದ್ವಾಂಸರಿಗೆ ತಿಳಿಯುವಂತೆ ಮಾಡುವಲ್ಲಿ ನಾವು ಶಕ್ತರಾಗುವುದು ಇಲ್ಲ. ಈ ಹಿಂದುಳಿವಿಕೆಗೆ ಕಾರಣ ಅವರು ಬೆಳೆದ ಪಿತೃ ಸಂಸ್ಕøತಿ. ಆದ್ದರಿಂದ   ಆ ಭಾಗದ ಸಂಸ್ಕøತಿ ಸಂಪ್ರದಾಯಗಳ ಬಗ್ಗೆ ಓದುವಾಗ ಮತ್ತು ಕೇಳುವಾಗ ಮಾತೃ ಸಂಸ್ಕøತಿ ಅವರಿಗೆ ಗೋಜಲು ಗೋಜಲಾಗಿ ಕಾಣುತ್ತದೆ. 

ಮಾನವ ಶಾಸ್ತ್ರಜ್ಷರ ಪ್ರಕಾರ  ಪ್ರತಿಯೊಂದು ಸಂಸ್ಕøತಿಗೆ ಕೂಡಾ ಅದರದ್ದೇ ಆದ ರಾಜಕೀಯ ಆರ್ಥಿಕ, ಸಾಂಸ್ಕøತಿಕ ಮತ್ತು ಸಾಮಾಜಿಕ ಬದುಕಿನ ಕಲ್ಪನೆಗಳಿವೆ. ಅದನ್ನು ಅರ್ಥಮಾಡಿಕೊಳ್ಳಬೇಕಾದರೆ ಅದೇ ಪರಿಸರದಲ್ಲಿ ಬದುಕ ಬೇಕೆನ್ನುವುದು ಅವುಗಳಲ್ಲಿ ಪ್ರಮುಖ ಅಂಶ. ಇದನ್ನು ನಾನು ಅರ್ಥಮಾಡಿಕೊಂಡದ್ದು ನನ್ನ ಕ್ಷೇತ್ರಕಾರ್ಯದ ಮೂಲಕ ನಾನು ಗಳಿಸಿದ ಅನುಭಗಳಿಂದ.
.
ಮಾತೃ ಸಂಸ್ಕøತಿಯ ದಟ್ಟ ಪ್ರಭಾವ ಇದ್ದ ಗುತ್ತು ಮನೆ ನನ್ನ ಜನ್ಮ ಸ್ಥಳ.  ತುಳುನಾಡಿನ ಸಂಸ್ಕøತಿ ಸಂಪ್ರದಾಯಗಳ ಮಧ್ಯೆ ನಾನು ನನ್ನ ಜೀವನದ ಮೊದಲ  20 ವರ್ಷಗಳನ್ನು ಕಳೆದಿದ್ದೇನೆ. ಈಗಲೂ  ಅಲ್ಲಿನ ಬೇರು ಕಡಿದುಕೊಂಡಿಲ್ಲ.  
ಆದರೂ ನಾನು ನನ್ನ ಎರಡು ಕೃತಿಗಳಿಗಾಗಿ ಮಾಡಿದ ಕ್ಷೇತ್ರಕಾರ್ಯ ಮಾತೃ ಸಂಸ್ಕøತಿಯ ಬಗ್ಗೆ ನನ್ನ ಅರಿವನ್ನು ವಿಸ್ತರಿಸಿತು. 

ವಿಶ್ವದಲ್ಲಿ ಪ್ರಧಾನವಾಗಿ ಕಾಣುವುದು ಪಿತೃ ಸಂಸ್ಕøತಿ. 
ಆದರೂ ವಿಶ್ವದ ಕೆಲವು ಭಾಗಗಳಲ್ಲಿ ಮಾತೃ ಸಂಸ್ಕøತಿಯೂ ಮುಂದುವರಿದಿದೆ. ಎರಡು ತಿಂಗಳ ಹಿಂದೆ ಆಸ್ಟ್ರೇಲಿಯಾ ದೇಶದ ಮಾತೃ ಸಂಸ್ಕøತಿಯ ಬುಡಗಟ್ಟು ಸಮುದಾಯಗಳ ಬಗ್ಗೆ ಅರಿಯಲು ಪ್ರಯತ್ನಿಸಿದ್ದೆ. ಈಶಾನ್ಯ ಭಾರತದಲ್ಲಿ 8 ರಾಜ್ಯಗಳಲ್ಲಿ ದಟ್ಟವಾಗಿ ಇರುವ ಮಾತೃ ಸಂಸ್ಕøತಿಯನ್ನು ಕಂಡು ಬಂದಿದ್ದೇನೆ.  ನಮ್ಮ ನೆರೆ ರಾಜ್ಯ ಕೇರಳದಲ್ಲೂ ಮಾತೃ ಸಂಸ್ಕøತಿ ಇದೆ.

ಈ ಎರಡರ ಸಂಸ್ಕøತಿಗಳು ಅಲ್ಲದೆ ಮೂರನೆಯ ಸಂಸ್ಕøತಿಯೂ ಇದೆ. ಮೂರನೆಯ ಸಂಸ್ಕøತಿಗೆ ನೆಹರೂ ಕುಟುಂಬ ಉದಾಹರಣೆ. 

ತುಳುನಾಡು ಸೇರಿ ಮಾತೃ ಸಂಸ್ಕøತಿ ಉಳಿದು ಬಂದಿರುವ ಸಮುದಾಯಗಳು ಬುಡಗಟ್ಟು ಸಂಪ್ರದಾಯಗಳನ್ನು ಕಳಚಿಕೊಂಡಿಲ್ಲ. 
 ಬುಡಗಟ್ಟು ಸಂಪ್ರದಾಯಗಳು ವೇದಗಳಿಗಿಂತೂ  ಅಥವಾ ಅದಕಿಂತಲೂ ಪುರಾತನವಾದುದು. (Pಡಿimiಣive soieಛಿiಣಥಿ ) ಇಂತಹ ಸಂಪ್ರದಾಯಗಳು  ಪರಿವರ್ತನೆ ಆಗಿದ್ದರೂ ಕೆಲವೊಂದು ಕಡೆ ಮೂಲ ಸಂಸ್ಕøತಿಯ ಕೆಲವೊಂದು ಪದ್ಧತಿಗಳು ಆಚರಣೆಗಳು ಉಳಿದು ಬಂದಿವೆ. ಈ ಹೇಳಿಕೆಗೆ ಪೂರಕ ಅಂಶಗಳನ್ನು ತುಳುಸಂಸ್ಕøತಿಯಲ್ಲೂ  ಕಾಣಬಹುದು. ತುಳುನಾಡಿನ ಜೀವಂತ ಪರಂಪರೆಯಾದ ಮಾತೃವಂಶೀಯತೆ, ಮಾತೃ ಪ್ರಧಾನತೆ ಅಥವಾ ಮಾತೃಮೂಲೀಯತೆಯನ್ನು ಪೋಷಿಸಿಕೊಳಡು ಬಂದುದು ಬುಡಗಟ್ಟು ಸಂಸ್ಕøತಿಯ  ಮೂಲಸ್ಥಾನ ಕ್ಷೇತ್ರದ  ಶಕ್ತ್ಯಾರಾಧನೆ. ಅರ್ಥಾತ್ ನಾಗಾರಾಧನೆ ಅರ್ಥಾತ್ ಭೂತಾರಾಧನೆಯಲ್ಲಿ ನಡೆಯುವ ಕೆಲವೊಂದು ಆಚರಣೆಗಳು. ಸ್ಥಳೀಯ ಬುಡಗಟ್ಟು ಆಚರಂಣೆಗಳು ವೈದಿಕ ಧರ್ಮದ ಪ್ರಭಾವಕ್ಕೆ ಒಳಗಾದದಂತೆ ವೈದಿಕರು ಸ್ಥಳೀಯ ಸಂಪ್ರದಾಯದ ಪ್ರಭಾವಕ್ಕೆ ಒಳಗಾಘಿದ್ದಾರೆ.  

ತುಳುನಾಡಿನ ಮಾತೃ ಸಂಸ್ಕøತಿಯ ಜನಾಂಗೀಯ ವ್ಯಾಪ್ತಿ: 
ವೇದಾಧರಿತ ಸಮಾಜ ಪದ್ಧತಿಯನ್ನು ಅನುಸರಿಸದ ತುಳುವರಲ್ಲಿ ಮಾತೃ ಸಂಸ್ಕøತಿ ಮುಂದುವರಿದಿದೆ. 
ಜನಿವಾರ ಹಾಕುವ ಪದ್ಧತಿ ಇಲ್ಲದ ತುಳುವರ ಸಮಾಜ ರಚನೆ ಮಾತೃ ಸಂಸ್ಕøತಿಯಲ್ಲಿ ಇದೆ. 
.ದೇವಾಂಗದ, ಪದ್ಮಶಾಲಿ, ಬ್ರಾಹ್ಮಣ ಇತ್ಯಾದಿ... ತುಳುನಾಡಿಗೆ ವಲಸೆ ಬಂದವರು ಎಂದು ನಂಬಲಾದ ಜಾತಿಗಳಲ್ಲಿ ಪಿತೃ ಸಂಸ್ಕøತಿ ಪಿತೃಪ್ರಧಾನೆತೆ, ಮಕ್ಕಳ ಕಟ್ಟು  ಇದೆ. 

ತುಳುವರು ವೇಧಾದರಿತ ಸಮಾಜದ ಅನುಯಾಯಿಗಳಲ್ಲ. ವೇಧಾಧರಿತ ಸಮಾಜದ ಪ್ರಭಾವ ಇದ್ದರೂ ‘ಪೂರ್ವ ಸಂಪ್ರದಾಯ ಕಟ್ಟು ಕಟ್ಟಲೆಗಳು’ ಎಂಬ ನುಡಿಗಟ್ಟಿನ ಮೂಲಕ ಈ ಬುಡಗಟ್ಟು ಸಂಪ್ರದಾಯಗಳು ಮುಂದುವರಿದುಕೊಂಡು ಬಂದಿವೆ. ವೇದಾಧರಿತ ಸಮಾಜದ ಪ್ರಭಾವ, ಜಾಗತೀಕರಣ, ನಗರೀಕರಣ, ಮತ್ತು ಕಾನೂನುಗಳು ಒಡ್ಡುವ ಸವಾಲುಗಳ ಹೊರತಾಗಿಯೂ ಮಾತೃ ಸಂಸ್ಕøತಿಯ ಸಂಸ್ಕಾರ, ಆಚರಣೆ, ಪದ್ಧತಿಗಳು ಅಳಿದಿಲ್ಲ. ಮುಂದುವರಿಯುತ್ತಿವೆ. ಐಶ್ಚರ್ಯ ರೈ ಮಕ್ಕಳು ತುಳು ಸಂಸ್ಕøತಿಯಂತೆ ತಾಯಿಯ ಕುಟುಂಬಕ್ಕೆ ಸೇರುತ್ತಾರೆ. 

ತುಳು ಜನರನ್ನು ಮದುವೆಯಾಗಿ,  ತುಳು ಸಂಸ್ಕøತಿಯ  ಜೊತೆ ಬೆರೆತ ಬ್ಯಾರಿಗಳಲ್ಲಿ ಹಿಂದೆ”ಮರಿ ಮಕ್ಕತ್ತಾಯನ ಕಟ್ಟು” ಎಂಬುದು ಇತ್ತು.  ಈಗ ಇಲ್ಲ.  

ಜೈನರು ತುಳುನಾಡಿನಲ್ಲಿ ಅಲ್ಪಸಂಖ್ಯಾತರು. ಇತ್ತೀಚಿನ ವರ್ಷಗಳಲ್ಲಿ ಕನ್ನಡ ಪ್ರದೇಶದ ಪಿತೃ ಸಂಸ್ಕøತಿಯ ಕುಟುಂಬUಳೊಂದಿಗೆ ಮಾತೃ ಸಂಸ್ಕøತಿಯ ಜೈನರು ವೈವಾಹಿಕ ಸಂಬಂಧಗಳನ್ನು ಬೆಸೆದುದರ ಪರಿಣಾಮ ಜೈನರ ಮಾತೃ ಸಂಸ್ಕøತಿಯ ಮೇಲಾಗುತ್ತಿದೆ. ಆದರೂ ತುಳು ಜೈನ ಸಮಾಜ ಮಾತೃಸಂಸ್ಕøತಿಯ ಆಚರಣೆಗಳನ್ನು ಮುಂದುವರಿಸುತ್ತಿದೆ. 

ಐತಿಹಾಸಿಕತೆ:  
ಅಳಿಯಸಂತಾನ ಪದ್ಧತಿಯ ಬಗ್ಗೆ ಶಾಸನಾಂಕಿತ ದಾಖಲೆ ಸಿಗುವುದು ತಡವಾಗಿ. ಕ್ರಿ.ಶ. ಹತ್ತನೆಯ ಶತಮಾನದ ತಳಂಗರೆಯ ಜಯಸಿಂಹನ ಶಾಸನದಲ್ಲಿ ಆ ಆಸ್ತಿಯ ಉತ್ತರಾಧಿಕಾರವು ಹೆಣ್ಣುಮಕ್ಕಳಿಗಲ್ಲದೆ ಗಂಡುಮಕ್ಕಳಿಗೆ ಹೋಗ ಸಲ್ಲದು ಎಂದು ಜೋಗವ್ವೆಯು ಶಾಸನೀಕರಿಸಿದ್ದಾಳೆ. ಕ್ರಿ.ಶ. 1204ರ ವೀರ ಕುಲಶೇಖರನ ಮಂಗಳೂರು ಶಾಸನವು ಮಂಗಲಾಪುರದ ಭುವನಾಶ್ರಯದ ಮೊಗಸಾಲೆಯಲ್ಲಿ ನಡೆದ ರಾಜ ಶಭೆಯಲ್ಲಿ ಅಳಿಯ ವೀರ ಬಂಕಿದೇವನಿಗೆ ಮುಗುರುನಾಡಿನ ರಾಜಭಾರವನ್ನು ಬಿಟ್ಟುಕೊಟ್ಟ ಬಗ್ಗೆ ಉಲ್ಲೇಖ ನೀಡುತ್ತದೆ. 

ಪೂರ್ವ ಪರಂಪರೆಯ ಪದ್ಧತಿಯಾಗಿ ಮಾತೃ ಸಂಸ್ಕøತಿಯು .ಪೂರ್ವ ಕಟ್ಟಲೆಗನುಗುಣವಾಗಿ ಮುಂದುವರಿಯುತ್ತಿದೆ. ದೈವ ನುಡಿಯಂತೆ. “ ಸೂರ್ಯ ಚಂದ್ರರು ಹುಟ್ಟಿದ ಕಾಲದಿಂದ ಆರಂಭ ಗೊಂಡ ಮಾತೃ ಸಂಸ್ಕøತಿ ಸೂರ್ಯಚಂದ್ರರು ಇರುವವರೆಗೆ ಮುಂದುವರಿಯುತ್ತವೆ...

ಅಳಿಯ ಸಂತಾನ ಪದ್ಧತಿ 

ಮಾತೃ ಸಂಸ್ಕøತಿಯಲ್ಲಿ ಗುರುತಿಸುವ ಸಮಾಜವನ್ನು ‘ಅಳಿಯ ಸಂತಾನ ಪದ್ಧತಿ’ ಅಥವಾ ‘ಅಳಿಯ ಕಟ್ಟು’ ಎನ್ನುವುದು ರೂಢಿ. ಮಾತೃ ಸಂಸ್ಕತಿ, ಮಾತೃ ಪ್ರಧಾನತೆ  ಈ ಪದಪುಂಜಗಳು ಒಂದೇ ಆಶಯವನ್ನು ಹೊಂದಿದೆ. ಆದರೆ ಅಳಿಯ ಸಂತಾನ ಪದ್ಧತಿ ಎನ್ನುವುದು ಇಲ್ಲೂ ಪುರುಷ ಪ್ರಧಾನ ಸಮಾಜ ಎನ್ನುವುದನ್ನು ಸೂಚ್ಯವಾಗಿ ಸೂಚಿಸುತ್ತದೆ. 

 ಮಾತೃ ಸಂಸ್ಕøತಿ ಎಂದರೆ ಮಹಿಳಾ ಸಂಸ್ಕøತಿ ಅಲ್ಲ.   ಮಾತೃ ಸಂಸ್ಕøತಿಯ ಸಮಾಜ ಮಾತ್ರ ಪುರುಷ ಪ್ರಧಾನವಾಗಿದೆ.  ಮಾತೃ ಪ್ರಧಾನತೆ ಅಂದರೆ ಮಹಿಳಾ ಪ್ರಧಾನತೆ ಅಲ್ಲ. ತುಳುನಾಡಿನಲ್ಲಿ ಮಹಿಳಾ ಪ್ರಧಾನ ಸಮಾಜ ಇಲ್ಲ.  ಅಲ್ಲಿರುವುದು ಪುರುಷ ಪ್ರಧಾನ ಸಮಾಜ. 

ತಾಯಿ ಮತ್ತು ತಂದೆ ಇವರಿಬ್ಬರಲ್ಲಿ ತಾಯಿ ಪ್ರಧಾನಳು ಎಂಬರ್ಥದಿಂದ ಮಾತೃ ಪ್ರಧಾನ ಎನ್ನಲಾಗುತ್ತದೆಯೇ ಮಹಿಳೆ ಪ್ರಧಾನಳೆಂದಲ್ಲ. . ಮಾತೃ ದೇವೋಭವ ಎನ್ನುವುದು  ಸನಾತನ ಧರ್ಮದಲ್ಲಿ ಬರೇ  ಘೋಷಣೆಯಾದರೆ ತುಳು ಜನಪದದಲ್ಲಿ, ಮಾತೃ ಮೂಲೀಯ ಬುಡಗಟ್ಟುಗಳಲ್ಲಿ  ‘ಮಾತೃದೇವೋಭವ’ ಎನ್ನುವುದು  ಜೀವನ ಪದ್ಧತಿ. ತಾಯಿಗೆ ಮೊದಲ ಸ್ಥಾನ ತಾಯಿಯ ಕುಟುಂಬ ಮುಖ್ಯ ವಿನಃ ತಂದೆಯ ಕುಟುಂಬ ಅಲ್ಲ. 

ಕುಲ /ವಂಶ: ಮಾತೃ ವಂಶದಲ್ಲಿ ಸ್ತ್ರೀಯೊಬ್ಬಳ  ಸಮಸ್ಥ ಸಂತಾನವೂ ಆಕೆಯ ವಂಶಕ್ಕೆ/ಕುಲಕ್ಕೆ  ಸೇರುತ್ತದೆ.  ಉದಾಹರಣೆಗೆ ನಾನು ಸಾಳ್ವ (ತುಳು ಸಾಲನ್ನಾಯ)ಕುಲಕ್ಕೆ ಸೇರಿದರೆ ನನ್ನ ಪತಿ ಎಸ್ ಆರ್. ಹೆಗ್ಗಡೆಯವರು ನಲ್ಲಿ ಬಳಿ(ತುಳು ನಾಲನ್ನಾಯ) ಬಳಿಗೆ ಸೇರಿದವರು. ಹಿಂದಿನ ತಲೆಮಾರು ಮುಂದಿನ ತಲಮಾರು ಕುಲ/ ಬಳಿಯ ಹೆಸರಿನಿಂದ ಬಂಧುತ್ವವನ್ನು ಗುರುತಿಸುತ್ತಾರೆ.

ನಾನು ನನ್ನ ತಾಯಿಯ ಬಳಿ ಸಾಳ್ವ ವಂಶದವಳು. ನನ್ನ ಮಕ್ಕಳು ನನ್ನ ಬಳಿ ಸಾಳ್ವವಂಶ...ನನ್ನಮ್ಮ ಅವರಮ್ಮ...ಹೀಗೆ ಹೆಣ್ಣಿನ ಹಿಂದಿನ ತಲೆಮಾರು ಮುಂದಿನ ತಲೆಮಾರು.....ಆ ತಲೆಮರಿನ ಹೆಣ್ಣುಗಳ ಶಾಖೆಗಳು......ನಾನುು ನನ್ನ ಅಪ್ಪನ ವಂಶಕ್ಕೆ ಸೇರಿಲ್ಲ. ನನ್ನ ಮಗ ಅವರಪ್ಪನ ವಂಶಕ್ಕೆ ಸೇರುವುದಿಲ್ಲ....ಇದನ್ನು  ಕಾನೂನು ಬದಲಾಯಿಸಲಾಗುವದಿಲ

ಬಳಿ ಎನ್ನುವುದು ಅಸ್ಮಿತೆ.  ಮಹಿಳೆ ಮತ್ತು  ಪುರುಷ ಜನನದಿಂದ  ಮರಣದವರೆಗೆ ತನ್ನ ತಾಯಿಯ ಬಳಿಗೆ/ ವಂಶಕ್ಕೆ /ಕುಟುಂಬಕ್ಕೆÀ ಸೇರಿದವನಾಗುತ್ತಾನೆ.  ಜನ್ಮದಿಂದ ಬಂದ ಬಳಿಯನ್ನು ಬದಲಾಯಿಸಲಾಗುವುದಿಲ್ಲ. 

ಸೋದÀರಳಿಯಂದಿರು ಒಬ್ಬ ಪುರುಷನ ಉತ್ತರಾಧಿಕಾರಿಗಳು ಮತ್ತು ವಂಶವಾಹಿಗಳು.
 ಮಕ್ಕಳು ಆತನ ವಂಶದ ಉತ್ತರಾಧಿಕಾರಿಗಳು ಆಗುವುದಿಲ್ಲ. 
ಮಾತೃ ಸಂಸ್ಕøತಿಯಲ್ಲಿ ತಂದೆಯ ವಂಶಕ್ಕೆ, ಕುಟುಂಬಕ್ಕೆ, ಆತನ ಮಕ್ಕಳು ‘ಹೊರಗಿನವರು’ ಆಗಿರುತ್ತಾರೆ. 
ಮನೆಯ ಗಂಡು ಮಗನ ಮಕ್ಕಳು ಕುಟುಂಬ ಮಾತೃ ಕುಟುಂಬದ ಸದಸ್ಯರಾಗುವುದಿಲ್ಲ. ಮನೆಗೆ ಬಂದ ಸೊಸೆ ಮತ್ತು ಆಕೆಯ ಮಕ್ಕಳು ಅವಳ ತಾಯಿಯ ವಂಶಕ್ಕೆ ಕುಟುಂಬಕ್ಕೆ ಸೇರಿದವರು. 

ಮಾತೃ ಸಂಸ್ಕøತಿಯಲ್ಲಿ ತಾಯಿಯ ವಂಶಕ್ಕೆ ಕುಟುಂಬಕ್ಕೆ ಮತ್ತು ವಿಧಿ ನಿಷೇಧಗಳಿಗೆ ಆಕೆಯ ಮಕ್ಕಳು ಬದ್ಧರಾಗುತ್ತಾರೆ. ಹೆಣ್ಣು ಮತ್ತು ಗಂಡು ಮಕ್ಕಳು ತಾಯಿಯ ಮನೆತನದ ಉಪಾಸನಾ ಆಚರಣೆಗಳಿಗೆ ಬದ್ಧರು. ತಾಯಿಯ ಮನೆತನದ ಪಾವಿತ್ರ್ಯ  ಗೌರವ, ಮಾನ ಮರ್ಯಾದೆಗಳ ರಕ್ಷಕರು. 
ಸೂತಕಾಚರಣೆ : 
ತಾಯಿಯ ಕುಟುಂಬದ ಸದಸ್ಯರೊಳಗೆ ಸೂತಕಾಚರಣೆ ಇದೆ.  ಮಕ್ಕಳಿಗೆ ತಂದೆಯ ಅಥವಾ ತಂದೆಯ ಕುಟುಂಬದ ಸೂತಕಾಚರಣೆ ಇಲ್ಲ. ಶವ ಹೊರಲು ಸೋದರಳಿಯನೂ ಬೇಕು. ಪಿಂಡ ಪ್ರಧಾನ ಪದ್ಧತಿ ತುಳು ಜನಪದ ಪದ್ಧತಿ ಅಲ್ಲ. 
ಮೃತನಿಗೆ ಕ್ರಿಯೆ ಹಿಡಿಯುವುದು....ಮಗ ಆದರೂ ಸೋದರ ಸೊಸೆಯೂ ಕ್ರಿಯೆಯ ವ್ರತ ಹಿಡಿಯಬೇಕು.

ಎಡೆ ಇಡುವ ಪದ್ಧತಿ ಇದೆ. ಮೃತ ಮಹಿಳೆಗೂ ಪುರುಷನ ಸಮಾನಗಿ ಎಡೆ ಇಟ್ಟು ಪ್ರಾರ್ಥಿಸಲಾಗುತ್ತದೆ.  ಮೃತ ಪತಿ ಪತ್ನಿಯರನ್ನು ಒಂದು ಮನೆಯಲ್ಲಿ ಪ್ರಾರ್ಥಿಸಲಾಗುವುದಿಲ್ಲ. ಪತಿಯನ್ನು /ಪುರುಷನನ್ನು  ಆತನ ತಾಯಿಯ, ಮನೆಯಲ್ಲಿ ಅವನ ಸೋದg ಸೋದರಿಯರು, ಸೋದರಿಯರ ಮಕ್ಕಳು ಪ್ರಾರ್ಥಿಸಿ ಎಡೆ ಇಡುತ್ತಾರೆ. 

ಪಿಂಡ: ಉತ್ತರಕ್ರಿಯೆಯ  ದಿವಸ ಮೃತನ ಸ್ತೂಪಕ್ಕೆ ಅರ್ಪಿಸುವ ಪಿಂಡವನ್ನು ಸೋದರಿ ಅಥವಾ ಸೋದರ ಸೊಸೆ ತಯಾರಿಸಿ ಕೊಡುತ್ತಾಳೆ. ಅದನ್ನು ಮೃತನ ಮಗ ಸ್ಥೂಪದ ಬಳಿ ಕೊಂಡೊಯ್ಯುತ್ತಾನೆ. ಮಡದಿ ಬದುಕಿದ್ದರೆ ಆಕೆ ಕೊನೆಯ ಕ್ಷಣದ ಕೆಲಸ ಮಾಡುತ್ತಾಳೆ. 

ಕುಟುಂಬ : ಕುಟುಂಬ ಎಂಬ ಸಂಸ್ಥೆಯ ಮೂಲಕ ಮಾತೃಮೂಲದ ಬಂಧುತ್ವ ವ್ಯವಸ್ಥೆಯನ್ನು ನಿರ್ದೇಶಿಸಲಾಗುತ್ತದೆ. 
ಕುಟುಂಬವು ಗಟ್ಟಿಯಾದ  ಬಂದುತ್ವ ವ್ಯವಸ್ಥೆಯನ್ನು ಹೊಂದಿದೆ. ಕುಟುಂಬದ ವ್ಯಾಪ್ತಿ ಹಿರಿದು. ಅದು ಒಂದೇ ಕುಲದ/ವಂಶದ ಬಂಧುಗಳ ಸಂಸ್ಥೆ. ಮಾತೃವಂಶದ ಸಮಸ್ತ ಸದಸ್ಯರು ಒಬ್ಬ ಮಹಿಳೆಯ ವಂಶಜರು. ಈ ಬಂಧುಗಳೆಲ್ಲ ಸೋದರ ಸೋದರಿಯರು. ಆದ್ದರಿಂದ ಇವರೊಳಗೆ ವಿವಾಹ ನಿಷೇಧ. 
ಕುಟುಂಬದ ಹಿರಿಯ ಪುರುಷ ಮತ್ತು ಹಿರಿಯ ಮಹಿಳೆ ಕುಟುಂಬದ ಯಜಮಾನಿ.  ಪುರುಷ ಹೊರ ಆಡಳಿತಕ್ಕಾಗಿ, ಮಹಿಳೆ ಒಳಾಡಳಿತಕ್ಕಾಗಿ. ಅರಸನ ಅಥವ ಆಇತರ ಅಧಿಕಾರದ ಪಟ್ಟ ಆಗುವುದು ಕುಟುಂಬದಲ್ಲಿ ಹಿರಿಯ ಪುರುಷನಿಗೆ. ಒಂದು ಕುಟುಂಬದಲ್ಲಿ ಸಾವಿರ ಜನಸಂಖ್ಯೆ ಇದ್ದರೂ ಆ ಕುಟುಂಬದ ಹಿರಿಯ ದಕ್ಷ ಪುರುಷನಿಗೆ ಪಟ್ಟಾಭಿಷೇಕ ಆಗುವುದು ಪದ್ಧತಿ. ಹಿರಿಯ ಮಹಿಳೆ ಪಟ್ಟದಬ್ಬೆ ಆಗುತ್ತಾಳೆ.  ಆ ಹಿರಿಯ ಮಹಿಳೆ ಪಟ್ಟಾಭಿಷಕ್ತ ಅರಸನ ತಾಯಿಯ ಅಕ್ಕ ಆಗಿಬಹುದು, ಆತನ ಅಜ್ಜು ಆಗಿರಬಹುದು ಅವನ ತಾಯಿ ಮಹಿಳೆಯರಲ್ಲಿ ಹಿರಿಯವಳಾದರೆ ಆಕೆಯೂ ಆಗಿರಬಹುದು.  
 ಕುಟುಂಬದ ಸದಸ್ಯರು  ಅನೇಕ ಶಾಖೋಪ ಶಾಖೆÉಗಳಾಗಿ ಒಡೆಯಬಹುದು. ಹಾಗೆ ಬೇರೆಯಾದ ಶಾಖೆಗಳು ಕಾಲಾನಂತರ ಬಳಿ/ಕುಲದ ಹೆಸರಿನಲ್ಲಿ ಮೂಲ ಕುಟುಂಬವನ್ನು/ ಮನೆಯನ್ನು ಗುರುತಿಸುತ್ತಾರೆ. ಇವರು ಸಿಡಿದು ಬೇರೆಯಾದರೂ ಮೂಲತಃ ಸೋದರ ಸೋದರಿಯರು. ಹೀಗಾಗಿ ಒಂದು ಬಳಿಯ ಒಳಗೆ ವಿವಾಹ ನಿóಷೇಧಿಸಲಾಗಿದೆ. 
ಸಾವು ಪಾಲಿನ ಮನೆ 
ಕುಟುಂಬದ ಮೂಲ ಮನೆ ಸಾವು ಪಾಲಿನ ಮನೆ.  ಪದ್ಧತಿ ಪ್ರಕಾರ ಹೆಣ್ಣಾಗಲೀ ಗಂಡಾಗಲೀ, ಅವರ ಮರಣಾನಂತರ ಅವರ  ದಹನ, ಕುಟುಂಬದ ಮೂಲಮನೆಯ ಸುಡಲದ ಗದ್ದೆಯಲ್ಲಿ ನಡೆಯಬೇಕು. ಉತ್ತರಕ್ರಿಯೆಯ ಆಚರಣಾ ವಿಧಿಗಳು ಸಾವುಪಾಲಿನ ಮನೆಯಲ್ಲಿ ನಡೆದು ಕುಟುಂಬದ ಎಲ್ಲಾ ಸದಸ್ಯರು ಭಾಗಿಗಳಾಗಿ ಸೂತಕಕಳೆಯಬೇಕು.. 
ಪುತ್ರಿ ಸಂತಾನದ ಸುತ್ತ ಕೇಂದ್ರೀಕೃತ ಕುಟುಂಬ:
ಕುಟುಂಬವು ಪುತ್ರಿ ಸಂತಾನದ ಸುತ್ತ ಕೇಂದ್ರೀಕೃತವಾಗಿದೆ. ಆಕೆ ಜನನಿ. ಆಕೆ  ವಂಶ/ಕುಟುಂಬವನ್ನು ಬೆಳೆಸುವವಳು. ಒಂದು ಕಣ್ಣು ಕಣ್ಣಲ್ಲ...... ಹೆಣ್ಣು ಹೆಣ್ಣಲ್ಲ. ಎನ್ನುವ ಗಾದೆ ಮಾತು ತುಳು ಸಮಾಜದಲ್ಲಿ ಹೆಣ್ಣು ಮಗುವಿಗೆ ಇರುವ ಮಹತ್ವವನ್ನು ಸಾರುತ್ತದೆ. .ಪಾಡ್ದನದ .ಸಿರಿ ಮಗನನ್ನು ಮಾಯಮಾಡುವಾಗ ಈ ಲೋಕಕ್ಕೆ ಒಂದು ಹೆಣ್ಣು ಮಗುವನ್ನು ಹೆತ್ತು ನೀಡಿ ಬರುತ್ತೇನೆ ಎನ್ನುತ್ತಾಳೆ.....ಅದಕ್ಕಾಗಿ ತಾನು ಎರಡನೆಯ ವಿವಾಹ ಆಗಲಿದ್ದೇನೆ ಎಂಬ ಸೂಚನೆಯನ್ನು 40 ದಿನದ ಕಂದನಿಗೆ ನೀಡುತ್ತಾಳೆ.  
ಒಬ್ಬತಾಯಿ  “ನನ್ನ ಮಗಳ ಬಸಿರಲ್ಲಿ ಹೆಣ್ಣು ಕುಡಿಯೊಡೆಸಲು ಶಕ್ತನಾದ  ಗಂಡು ನನ್ನ ಮಗಳಿಗೆ ಗಂಡನಾಗಬೇಕು, ನನ್ನ ಅಳಿಯನಾಗಬೇಕು......, ಸ್ಥಿತಿವಂತ ಗಂಡ ಬೇಕಿಲ್ಲ’  ಎಂದಿದ್ಳಂತೆ ಒಬ್ಬ ತಾಯಿ. ಆ ತಾಯಿಯ ಆಶಯ ನೆರವೇರಿದೆ. 
ಇನ್ನೊಂದು ಪ್ರಸಂಗ ಹೀಗಿದೆ. : ತಾಯಿಯೊಬ್ಬಳು ಹೆಣ್ಣು ಮಗು ಹೆರಲಿಲ್ಲ ಎಂಬ ಕಾರಣಕ್ಕಾಗಿ ಆಕೆಯ ಸೋದರವರ್ಗ ಅದೇ ತಮೆರಿ ಆಕಯನ್ನು ಗಂಡನ ಮನೆಗೆ ಕಳುಹಿಸದೆ ಆಕಗೆ ಮರುವಿವಾಹ ಮಾಡಲಾಗಿದೆ.  ಆ ಮಹಿಳೆ 2004ರ ನಂತ ನಿಧನರಾದರು.
ಹೀಗೆ ಹಣ್ಣು ಸಂತಾನಕ್ಕೆ ತುಳು ಸಂಸ್ಕøತಿಯಲ್ಲಿ ಪ್ರಥಮ ಆದ್ಯತೆ. 
ಹೆಣ್ಣು ಸಂತಾನ ಹಿರಿಯರಿಗೆ (ಕುಟುಂಬದ ಸತ್ತ ಸ್ತ್ರೀ ಪುರುಷ) ಬಾಯಿಗೆ ನೀರು (ಎಡೆ) ಇಡುವವಳು.
ಮಾತೃ ಸಂಸ್ಕøತಿಯ ಲಕ್ಷಣವಾಗಿ ಕುಲ ದೈವಗಳ  ಅರ್ಥಾತ್ ನೇಮ -ಕೋಲಗಳ ದೈವ  ಪಾತ್ರಿ  ಮಾಯೆಯ ಲೋಕದಿಂದ ಜೋಗಕ್ಕೆ ಬರಲು ದೈವದ  ಚಾವಡಿ ಕುಟುಂಬದ ಹೆಣ್ಣು ನೀಡುವ ಹಾಲು ಸ್ವೀಕರಿಸುವುದು ಪದ್ಧತಿ. ಮನೆಗೆ ಬಂದ ಸೊಸೆಯಿಂದ ಸ್ವೀಕರಿಸುವ ಪದ್ಧತಿ ಇಲ್ಲ.  2009ರಲ್ಲಿ ಸೊಸೆ ನೀಡಿದ ಹಾಲನ್ನು ದೈವ ನಿರಾಕರಿಸದ್ದನ್ನು ನಾನು ನೋಡಿದ್ದೇನೆ. “ ನನ್ನ ಇಷ್ಟು ದೊಡ್ಡ ಕುಟುಂಬದಲ್ಲಿ ನನಗೆ ಹಾಲು ನೀಡಲು ಹೆಣ್ಣು ಸಂತಾನ ಇಲ್ಲವೆ?” ಎಂದಿತ್ತು ದೈವ.  
ಕುಟುಂಬದ ಅರಸನ ಆಯ್ಕೆಯಲ್ಲಿ, ಯಜಮಾನನ ಆಯ್ಕೆಯಲ್ಲಿ ಕುಟುಂಬದ ಹೆಣ್ಣು ಮಕ್ಕಳ ಸಮ್ಮತಿಯನ್ನು ದೈವ ಮಾಧ್ಯಮ ಕೇಳುತ್ತಾನೆ. 
ಇಂತಹ ಸಂಸ್ಕøತಿಯಲ್ಲಿ ಸತಿಸಹಗಮನದ ಪದ್ಧತಿ ಇರಲು ಸಾಧ್ಯವೇ ಇಲ್ಲ. ತುಳುನಾಡಿನಲ್ಲಿ ಲಭ್ಯ ಇರುವ ಭಾಗದ ಸತೀ ಕಲ್ಲುಗಳು ವಲಸೆ ಬಂದ ಸೈನಿಕರ, ರಾಜ ಪರಿವಾರದವರ ಸತೀ ಕಲ್ಲುಗಳು ಎಂಬುದಾಗಿ ಈ ಬಗ್ಗೆ ಅಧ್ಯಯನ ಮಾಡಿದ ರೋಹಿಣಿಯವರು ಹೇಳುತ್ತಾರೆ.
. ಕುಟುಂಬ ಒಡೆಯುವಿಕೆ/ಕುಟುಂಬ ವಿಘಟನೆ: ಬಹಿಷ್ಕಾರ....ಒಂದಾಗುವಿಕೆ.
 ಮಾತೃ ಮೂಲೀಯ ಬಂಧುತ್ವ ವ್ಯವಸ್ಥೆಯನ್ನು ಕುಟುಂಬ ಎಂಬ ಸಂಸ್ಥೆಯ ಮೂಲಕ ನಿರ್ದೇಶಿಸಲಾಗುತ್ತದೆ ಎಂಬ ವಿಚಾರವನ್ನು ಹಿಂದೆ ಪ್ರಸ್ತಾಪಿಸಲಾಗಿದೆ. ಇಂತಹ ಕುಟುಂಬ ವಿಘಟನೆಯಾಗುತ್ತದೆ; ಒಡೆಯುತ್ತದೆ. ಸಾಮಾನ್ಯವಾಗಿ ಕುಟುಂಬ ಒಡೆಯುವಿಕೆಗೆ ಎರಡು ಕಾರಣಗಳು ಇರುತ್ತವೆ.
1 ಆಸ್ತಿ ಕಲಹ.
ಆಸ್ತಿ ಕಲಹದಲ್ಲಿ ಮೂಲ ಕುಟುಂಬದ ಬಳಿಯೇ ಬಹಿಷ್ಕøತ ಕುಟುಂಬ ಇರುವುದರಿಂದ ಬೇಗನೇ ಮತ್ತೆ ಒಂದಾಗುವಿಕೆ ಆಚರಣೆ ನಡೆಯುತ್ತದೆ. 
2 ಹೆಣ್ಣಿನ ಪಾವಿತ್ರ್ಯಕ್ಕೆ ಧಕ್ಕೆ ಬಂದಾಗ. 
ಹೊರಹಾಕುವಿಕೆ ಹೆಣ್ಣಿಗೆ ಮಾತ್ರ ಅನ್ವ್ಯಯವಾಗುತ್ತದೆ.  ಸಾಮಾನ್ಯವಾಗಿ ಅನ್ಯಜಾತಿಯ ಪುರುಷನೊಂದಿಗೆ ಆಕೆ ಓಡಿಹೋದಾಗ.... ಕುಟುಂಬದಿಂದ ಆಕೆಯನ್ನು ಬಹಿಷ್ಕರಿಸುತ್ತಾರೆ. ಅವಳ ಮಕ್ಕಳು ಮುಂದೆ ತಲೆಮಾರುಗಳ ಅನಂತರ ಮೂಲ ಮನೆ ಹುಡುಕಿ ಬರುತ್ತಾರೆ. ( ಮರ್ಯಾದ ಹತ್ಯೆ...ಆ ಕಾಲದಲ್ಲಿ ಇತ್ತು..._) 
ಎರಡೂ ಸಂದರ್ಭದಲ್ಲಿ ಚಾವಡಿ ದೈವ/ಕುಲದೈವಗಳ ಮುಂದೆ  ‘ಒಂದಾಗುವಿಕೆ’ ನಡೆಯುತ್ತದೆ.  ಕುಟುಂಬದಿಂದ ಹೊರಹೋದವರಿಗೆ ತಪ್ಪು ದಂಡ ಹಾಕಿಸುತ್ತಾರೆ. 
ತುಳುವರಲ್ಲಿ ಕನ್ಯಾದಾನ ಇಲ್ಲ. ತುಳುವರು ಹೆಣ್ಣನ್ನು ದಾನ ನೀಡುವುದಿಲ್ಲ.
ತುಳುವ ಹೆಣ್ಣು ತವರು ಮನೆಯಲ್ಲಿ  ಪರರ ಒಡವೆ ಅಲ್ಲ, ಗಂಡನ ಮನೆಯಲ್ಲಿ ಆಕೆ ಪರರ ಒಡವೆ. ಗಂಡನ ಮನೆಗೆ,  ಗಂಡನ ಕುಟುಂಬಕ್ಕೆ, ಗಂಡನ ವಂಶಕ್ಕೆ ಯಾವುತ್ತೂ ಅವಳು ಸೇರುವುದಿಲ್ಲ. ಅವಳಿಗೆ ಅಲ್ಲಿ ಯಾವ ಅಧಿಕಾರವೂ ಇರುವುದಿಲ್ಲ.
 ತುಳುವರಲ್ಲಿ ವಿವಾಹ ಜನ್ನ ಜನ್ನಾಂತರದ ಅನುಬಂಧ ಅಲ್ಲ. ಅದು ಬದುಕಿನ ಒಪ್ಪಂದ. 
..........ಉತ್ತಮ ಸಂತಾನಕ್ಕಾಗಿ, ನಿಜ ಸಾಂಗತ್ಯಕ್ಕಾಗಿ ಎರಡು ಕುಟುಂಬಗಳೊಳಗೆ ನಡೆಯುವ ಒಪ್ಪಂದ. 
ಆಕೆಯ ಪತಿ ಅವಳನ್ನು ಸರಿಯಾಗಿ ನಡೆಸುವವರೆಗೆ ಮಾತ್ರ ಇರುವ ಒಪ್ಪಂದ. ಈ ಒಪ್ಪಂದ ಮುರಿದು ಬೀಳಬಹುದು.......
ಆಗ ಅವಳು ಮರಳಿ ತವರು ಸೇರುತ್ತಾಳೆ. ತವರಿನ ಬಾಗಿಲು ಅವಳ ಪಾಲಿಗೆ ಯಾವತ್ತೂ ಮುಚ್ಚುವುದಿಲ್ಲ. ಆಕೆ ತವರಿನ ಯಜಮಾನಿ. 
ತುಳು ಪದ್ಧತಿಯಲ್ಲಿ ಜನ್ಮಾಂತರದ ಕಲ್ಪನೆ ಇಲ್ಲ. ಇರುವುದು ಒಂದೇ ಜನ್ಮ. 
ದುಷ್ಟರಿಗೆ ಶಿಕ್ಷೆ ಶಿಷ್ಟ ರಿಗೆ ರಕ್ಷೆ ಈ ಜನ್ಮದಲ್ಲಿಯೇ ನೀಡುತ್ತವೆ ಇಲ್ಲಿಯ ಮೂಲಸ್ಥಾನ ಕುಲಶಕ್ತಿಗಳು. ಆ ಭಯ ಜನರಲ್ಲಿ ಇದೆ.  
ಆಕೆ ಗಂಡನ ಮನೆಯಲ್ಲಿ ‘ಅಡುದುಣ್ಣಲು’ ಬಂದವಳು. (ತಾತ್ಕಾಳಿಕ ಬದುಕು)ಹೀಗಾಗಿ ಗಂಡನ ಮನೆಯ ಯಾವುದೇ ಕಲಾಪಗಳಲ್ಲಿ ಆಕೆ ಭಾಗವಹಿಸಬಾರದು. ಅದೇ ರೀಓತಿ ಹೆಂಡತಿ ಮನೆಯ ಕಲಾಪಗಳಲ್ಲಿ ಪುರುಷ ಭಾಗವಹಸಬಾರದು. 
ಹೆಂಡತಿಯ ಗಂಡನ ಮನೆಯ ಬದುಕು ಗೇರುಮರದ ಆಯುಷ್ಯದಂತೆ...ಮರ ಬಿತ್ತು ಹಕ್ಕಿ ಹಾರಿತು...ಅಂದರೆ ಗಂಡ ಸತ್ತರೆ ಮರದ ಮೇಲೆ ಕುಳಿತ ಹಕ್ಕಿ ತನ್ನ ಮರಿಗಳೊಂದಿಗೆ ಹಾರಿ ತವರು ಸೇರುತ್ತದೆ. ಆಕೆ ಮರಕ್ಕೆ ಹಬ್ಬಿದ ಬಳ್ಳಿ ಅಲ್ಲ. ಮರದ ಮೇಲೆ ಕುಳಿತ ಹಕ್ಕಿ.........ಅವಳೇ ತವರಿನ ಯಜಮಾನಿ....
ಮಕ್ಕಳಿಗೂ ಅಪ್ಪ ಇರುವವರೆಗೆ ಮಾತ್ರ ಅಪ್ಪನ ಮನೆ:
“ ಮಳೆ ನಿಂತ ಮೇಲೆ ಮರದಡಿ ನಿಲ್ಲಬಾರದು....ತಂದೆ ಸತ್ತ ಮೇಲೆ ತಂದೆಯ ಮನಯಲ್ಲಿ ಇರಬಾರದು” ಇದು ತುಳು ಗಾದೆ. 
ಗಂಡು ಮಕ್ಕಳ ಅನಂತರ ಅವರ ಮಕ್ಕಳಿಗೆ ಅಪ್ಪನ ಕುಟುಂಬ ಸಂಬಂಧ, ಸಂಪರ್ಕ ಉಳಿಯುವುದಿಲ್ಲ......ತಾಯಿಯ ಮನೆಯಲ್ಲಿ ಅವರು ಅಧಿಕಾರ ಚಲಾಯಿಸುತ್ತಾರೆ. 

ವಿಚ್ಛೇಧನ / ಮತ್ತು ಮರು ವಿವಾಹ: (ವಿವಾಹ ಒಪ್ಪಂದ ಮುರಿದು ಬೀಳುವುದು) : 
ಉಳ್ಳಾಲದ ಚೌಟರ ರಾಣಿ ಅಬ್ಬಕ್ಕ ಬಂಗಾಡಿಯ ಬಂಗ ರಾಜನ ಮಡದಿ. ಬಂಗಾಡಿಯ ಅರಸ ಪೋರ್ಚುಗೀಸರೊಡನೆ ಶರಣಾಗಲು ಮಡದಿಯೂ ಉಳ್ಳಾಲದ ರಾಣಿಯೂ ಆದ ಅಬ್ಬಕ್ಕಳಿಗೆ ಒತ್ತಡ ಹೇರುತ್ತಾನೆ. ಆಕೆ ಒಪ್ಪುವುದಿಲ್ಲ. ಗಂಡನ ಕುತಂತ್ರಗಳಿಂದ ತನ್ನನ್ನು ತಾನು ರಕ್ಷಿಸಿಕೊಂಡ ಅಬ್ಬಕ್ಕ  ಗಂಡನಿಂದ ಬೇರೆಯಾಗಿ ಪೂರ್ಚುಗೀಸರ ವಿರುದ್ಧ ಹೋರಾಡುತ್ತಾಳೆ. 

ಅಬ್ಬಕ್ಕಳ ಗಂಡ ಬಂಗರಸ ಅಬ್ಬಕ್ಕಳಿಂದ ಬೇರೆಯಾದ ಮೇಲೆ ಬೈಲಂಗಡಿಯ ಮೂಲರ ರಾಣಿ ಸೋಮಲಾದೇವಿಯನ್ನು ವರಿಸುತ್ತಾನೆ.  ಬಂಗರಸ ನಡೆಸಿದ ನೋಂಪಿ ಸಮಾರಂಭಂದÀಲ್ಲಿ  ಎಲ್ಲಾ ರಾಜರಿಗೆ ಅವರವರ ರಾಜ್ಯದ ಗೌರವ ಸಲ್ಲುತ್ತದೆ. ಬೈಲಂಗಡಿಯ ಮೂಲರ ರಾಣಿಗೆ ರಾಣಿಯ ಗೌರವ ನೀಡುವುದಿಲ್ಲ. ಅವಳನ್ನು ಮಾಮೂಲಿ ಮಡದಿಯಂತೆ ಕಾಣುತ್ತಾನೆ. 
ಇರಿಂದ ಬೈಲಂಗಡಿಗೆ ಅವಮಾನವಾಯಿತು ಎಂದು ನೋಂಪಿಯ ಕ್ಷೇತ್ರÀದಿದ ಇಳಿದು ಆಕೆ ತನ್ನ ರಾಜ ಪರಿವಾರದೊಂದಿಗೆ ಬೈಲಂಗಡಿಗೆ ಮರಳುತ್ತಾಳೆ. ಮುಂದೆ ಬಂಗರಸ ಅವಳನ್ನು ಅನುಸರಿಸಿ ಬಂದಾಗ ತಪ್ಪು ಅಭಿಪ್ರಾಐದಿಂದ ಅವನನ್ನು ಸೈನಿಕರು ಬೈಲಂಗಡಿ ಅರಮನೆಯ ಮೆಟ್ಟಲ ಬಳಿ ತಡೆÀಯುತ್ತಾರೆ....ಬಂಗರಾಜ ಹತನಾಗುತ್ತಾನೆ. 

ಮಂಗಳ ಸೂತ್ರ ಇಲ್ಲ : 
ತುಳುವರಲ್ಲಿ ಕರಿಮಣಿ ಇದೆ. ಅದನ್ನೂ ವಿವಾಹ ಸಂದರ್ಭದಲ್ಲಿ ಕಟ್ಟುತ್ತಿರಲಿಲ್ಲ. 1965ರವರೆಗೆ....ವರ ಕರಿಮಣಿ ಕಟ್ಟುವ ಪದ್ಧತಿ ಇದ್ದಿರಲಿಲ್ಲ.  -ಪ್ರೌಢತೆಯ ಸಂಕೇತವಾಗಿ ಮಾತ್ರ. ಆ ಕಾಲದಲ್ಲಿ ಕರಿಮಣಿ ಇತ್ತು.  ಹೆಣ್ಣು ಮೈನೆರೆವ ಶಾಸ್ತ್ರದಲ್ಲಿ ಮನೆಯ ಹಿರಿಯ ಯಜಮಾನಿ ಹುಡುಗಿಯ ಕೊರಳಿಗೆ ಹಾಕುತ್ತಿದ್ದಳು. 

ವಿಧವೆ: 
ವಿಧವೆ ಅಥವಾ ವಿಚ್ಚೇಧಿತ ಹೆಣ್ಣಿಗೆ  ಮರುವಿವಾಹ ಮಾಡಲಾಗುತ್ತದೆ. ಮರುವಿವಾಹ ಆದ ಮೇಲೆ ಆಕೆ ಮಂಗಳ ಕಾರ್ಯಗಳಲ್ಲಿ ಭಾಗವಹಿಸಲು ಅವಕಾಶ ಇದೆ. 
ವರದಕ್ಷಿಣೆ : 
 ತೂಳುವರಲ್ಲಿ ಅವರವರ ಯೋಗ್ಯತಾನುಸಾರ ವರದಕ್ಷಿಣೆ ಇದೆ. (ಇತ್ತೀಚೆಗೆ ಕಡಿಮೆ ಆಗಿದೆ) ಆದರೆ ಆ ವಿವಾಹ ಅಸಿಂಧು ಆದರೆ ಆತ ಪಡೆದ ವರದಕ್ಷಿಣೆಯನ್ನು ವಿಚ್ಛೇಧಿತೆಗೆ  ಮರಳಿಸುವುದು ಪದ್ಧತಿ. ಆಕೆಗೆ ಮರುವಿವಾಹಕ್ಕೆ ಆ ಹಣ ಬೇಕಾಗುತ್ತದೆ.

ಮರುವಿವಾಹ ಆದ ವಿಧವೆ ಶುಭಕಾರ್ಯಗಳಲ್ಲಿ ಭಾಗವಹಿಸಬಹುದು. ವಿವಾಹ ಮಂಟಪದಲ್ಲಿ ಧಾರೆ ಎರೆಯುವ ಅರ್ಹತೆಯೂ ಅವರಿಗಿರುತ್ತದೆ. 
ವಿಧವೆ ಅಥವಾ ವಿಚ್ಚೇಧಿತ ಸೋದರಿಗೆ ವಿವಾಹ ಮಾಡುವ ಕರ್ತವ್ಯ ಅವಳ ಸೋದರ ಬಳಗದ್ದು.  
ಹೆಣ್ಣಿನ ಪ್ರಕೃತಿಸಹಜ ಕಾಮನೆಗಳನ್ನು ಗೌರವಿಸಿ ಅಥವಾ ಮಕ್ಕಳಾಗಲೆಂದು  ಅವಳಿಗೆ ಮರುವಿವಾಹ ನಡೆಸಬೇಕು...

ಮಾತೃ ಪ್ರಧಾನತೆಯಲ್ಲಿ ವಿಧವೆ ತಾಯಿ ಮುತ್ತೈದೆ ತಾಯಿ ಎಂಬ ಭೇದ ಇಲ್ಲ. ತಾಯಿ ಎಂಬುದು ಮುಖ್ಯ. 

ಪುರುಷ ಪ್ರಧಾನ ಸಮಾಜದ ಪುರುಷ ನಿಯಂತ್ರಕ ತಮೆರಿ:
 ಕೆಲವೊಂದು ಸಂದರ್ಭದಲ್ಲಿ ತನ್ನ ಸ್ವಾರ್ಥ ಸಾಧನೆಗಾಗಿ ಸೋದರಿಗೆ/ಸೋದರ ಸೊಸೆಯನ್ನು ಗಂಡನಿಂದ ಬೇರೆಯಾಗಿಸುತ್ತಾನೆ. ಸತ್ಯ ಘಟನೆಯ ಈ ವಿಷಯವನ್ನು ವಸ್ತುವಾಗಿಸಿ ನಾನು ಬರೆದ ಜೀಟಿಗೆ ಕಥೆ ತರಂಗ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಹೆಚ್ಚಿನ ಸಂದರ್ಭದಲ್ಲಿ ಸೋದರ ಪುರುಷನ ಅಹಂಗೆ ಸೋದರಿ ಬಲಿಯಾಗುತ್ತಿದ್ದಳು. 
 ಈ ವಿಷಯವನ್ನು ಎತ್ತಿಕೊಂಡು ನಾನು ಬರೆದ ಕಥೆ “ ಜೀಟಿಗೆ “  ತರಂಗ ವಾರ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. .
 
ಮಾತೃ ಸಂಸ್ಕøತಿ ಮತ್ತು ತಮೆರಿ: 
ಅಂದರೆ ಹೆಣ್ಣಿನ ಪೋಷಕ, ರಕ್ಷಕ, ಹೊಣೆಗಾರ. ತನ್ನ ಅಥವಾ ತನ್ನ ತಾಯಿಯ ಒಡಹುಟ್ಟಿದವ. ಕುಟುಂಬದ ರಕ್ತ ಸಂಬಂಧಿ ಪುರುಷ. 
ಮಾತೃ ಸಂಸ್ಕøತಿಯಲ್ಲಿ ಹೆಣ್ಣಿಗೊಂದು ತಮೆರಿ ಇರಬೇಕು. 
ತಮೆರಿ ಇಲ್ಲದ ಹೆಣ್ಣು ದೂಷಣೆಗೆ ಒಳಗಾಗುತ್ತಾಳೆ......
 ಹೆಣ್ಣಿಗೆ ಪತಿಯ ಮನೆಯಲ್ಲಿ ಎದುರಾಗುವ ಸಂಕಟಗಳಿಗೆ ತಮೆರಿ ಎದಗೊಟ್ಟು ನಿಲ್ಲಬೇಕಾದವನು. “ಪೆಣ್ಬುಯ್ಯಲೋಳ್......” ಎದ್ದು ಹೋಗಿ ರಕ್ಷಿಸುವವನು... ತಮೆರಿ ಇಲ್ಲದ ಸಿರಿ ಪುರುಷ ಪ್ರಧಾನ ಸಮಾಜವನ್ನು ಎದುರಿಸಲು ಸೋಲುತ್ತಾಳೆ......ಆದರೆ ಧೃತಿಗೆಡುವುದಿಲ್ಲ..

ಮಾತೃ ಸಂಸ್ಕøತಿ ಇದ್ದರೂ ಸಮಾಜ ಪುರುಷ ಪ್ರಧಾನ. 
ಸೋದರಿಯ ಜೀವನದ ನಿರ್ಣಯಗಳು ಸೋದರನ ಕೈಯಲ್ಲಿ. ತಮೆರಿಯ ಕೈಯಲ್ಲಿ.  
ತಮೆರಿ ಮೀರಿ ಪೊಣ್ಣತ್ತ್ ಸಂಬರ ಮೀರಿ ಕಜಿಪು ಅತ್ತ್.....ತಡ್ಯ ಕಡತಿ ಪೊಣ್ಣು ಪಡ್ಯಡಿತ್ತಿ ಮಡೆ. ಈತ ಕುಟುಂಬದ ಯಜಮಾನ. ಅಥವಾ ಆಯಾ ಶಾಖೆಯ ಯಜಮಾನ.

ಮಾತೃ ಸಂಸ್ಕøತಿಯಲ್ಲಿ ಸೂದರಳಿಯನ ಮೇಲೆ, ಸೋದರ ಸೊಸೆಯ ಮೇಲೆ ಸೋದರಮಾವನಿಗಿರುವ ಜವಾಬ್ದಾರಿ, ಅಧಿಕಾರ ತಂದೆಗೆ ಇರುವುದಿಲ್ಲ. ಸೋದರ ಸೊಸೆಗೆ ಸೂಕ್ತ ಗಂಡು ಹುಡುಕಿ ವಿವಾಹ ಮಾಡಿಕೊಡುವ ಹೊಣೆಗಾರಿಕೆ ಸೋದರಮಾವನದ್ದು...... ಈ ವಿಷಯದಲ್ಲಿ ಮಾತ್ರ ಬದಲಾವಣೆ ಬಂದಿದೆ. 
ಮುಖ್ಯವಾಗಿ ಗಮನಿಸಬೇಕಾದುದು ಇಲ್ಲಿ ಸೋದರ ಮಾವ ಸೋದರ ಸೊಸೆಯನ್ನು ವಿವಾಹ ಆಗುವಂತಿಲ್ಲ. ಅಂತಹ ಪದ್ಧತಿ ಇರುವುದರ ಕಲ್ಪನೆಯೂ ಅಲ್ಲಿ ಇಲ್ಲ.  
ಮಾತೃ ಸಂಸ್ಕøತಿಯ ವಿವಾಹಗಳÀಲ್ಲಿ ಹೊರಬಾಂಧವ್ಯವನ್ನು ಅನುಸರಿಸಲಾಗುತ್ತದೆ. 
ಸೋದರ ಮಾವನ ಮಗಳನ್ನು ವರಿಸಬಹುದು. ಗಂಡು ಮಗನ ಮಕ್ಕಳು ಬೇರೆ ಕುಟುಂಬವಾಗುತ್ತಾರೆ. ಆದರೂ ಚಿಕ್ಕಪ್ಪ ದೊಡ್ಡಪ್ಪನ ಮಕ್ಕಳಲ್ಲಿ ವಿವಾಹ ನಿಷೇಧ ಇದೆ. 
 ಅಳಿಯ ಕಟ್ಟು ಅಥವಾ ಅಳಿಯ ಸಂತಾನ ಪದ್ಧತಿ:
ಅರಸನ ಮರಣಾನಂತರ ಆತನ ಸೋದರಳಿಯ ಅಥವಾ ಸೋದರ ಪಟ್ಟದ ಉತ್ತರಾಧಿಕಾರಿ ಆಗುತ್ತಾನೆ. ಹೀಗಾಗಿ ಈ ಪದ್ಧತಿಯನ್ನು ಅಳಿಯ ಕಟ್ಟು ಅಥವಾ ಅಳಿಯ ಸಂತಾನ ಪದ್ಧತಿ ಎಂದು ಕರೆಯಲಾಗಿದೆ.
ಅರಸನ ಮರಣಾನಂತರ ಸೋದರನಿಗೆ ಅಥವಾ ಸೋದರಳಿಯನಿಗೆ ಪಟ್ಟಾಬಿಷೇಕ ಆಗುತ್ತಿತ್ತು. ಈಗಲೂ ಪಟ್ಟಭಿಷೇಕದ ಪರಂಪರೆ  ಉಪಾಸನಾ ಆರಣೆಗಳ ಅಧಿಕಾರಕ್ಕಗಿ ಮತ್ತು ಪರಂಪರೆಯ ದ್ಯೋತಕವಾಗಿ ಹಲವೆಡೆ ಮುಂದುವರಿದಿವೆ. 
 ಸೋದರ ಮಾವನ ವಂಶದಲ್ಲಿ ಸೋದರಳಿಯ ಸೋದರ ಮಾವನ (ತಾಯಿಯ) ವಂಶಕ್ಕೆ ಗುರುತಿಸಿಕೊಳ್ಳುವುದರಿಂದ ಅಳಿಯ ಸಂತಾಣ ಪದ್ಧತಿ ಎಂತು ಕರೆಸಿಕೊಂಡಿದೆ. 

 ಮಹಿಳೆಗೆ ಪಟ್ಟಾಭಿಷೇಕ ಆಗುವ ಪೂರ್ವ ಸಂಪ್ರದಾಯ ಇಲ್ಲ. ಯಾವುದೇ ಸಾರ್ವಜನಿಕ ವೇದಿಕೆಯಲ್ಲಿ ಅವಳು ಪಾಲ್ಗೊಳ್ಳುವಂತಿಲ್ಲ. ಅವಳ ಮನೆತನದಲ್ಲಿ ತಮೆರಿ-ಪೋಷಕ ಸದಸ್ಯ ಇಲ್ಲದಿದ್ದøರೂ ಆಕೆ ಸಭೆಯ ಕಲಾಪದಲ್ಲಿ ಭಾಗÀವಹಿಸಬಾgದೆಂಬ ಪದ್ಧತಿ ಇದೆ.

ಹಿರಿಯ ತಾಯಿಯ ಸಲಹೆಯನ್ನು ಕುಟುಂಬದ ಯಜಮಾನ/ಕೇಳುತ್ತಾನೆ. ಆಕೆ ತಾಯಿ ಇರಬಹುದು, ಅಥವಾ ಚಿಕ್ಕಮ್ಮ ದೊಡ್ಡಮ್ಮ ಯಾರಾದರೂ ಸರಿ. ಆಕೆ ಮಹಿಳೆಯರಲ್ಲಿ ಹಿರಿಯ ಸದಸ್ಯೆ. ಆಗಬೇಕು......ಸಮಸ್ತ ಕುಟುಂಬದ ಹಿರಿಯಬ್ಬೆ . ಶಾಸನಗಲ್ಲಿ ಈಕೆಯನ್ನು ಪಿರಿಯರಸಿ. ಎನ್ನಲಾಗಿದೆ. ಅತವಾ ಈಕೆ ಪಟ್ಟದಬ್ಬೆ. ಅಥವಾ ಭಗಿನಿ. ಎಂದು ಕರೆಯಲಾಗಿದೆ. ಆಕೆಯ ಅಭಿಪ್ರಾಯಗಳಿಗೆ ಬೆಲೆ ಇದೆ. ಸೋದರ ಬಳಗದ ಪುರುಷ ಆಡಳಿತ ನಡೆಸುವುದು ಸೋದರಿಯ ಮತ್ತು ಅವಳ ಮಕ್ಕಳ ಪರವಾಗಿ. ಆದರೆ  ಪಟ್ಟಾಭಿಷೇಕ ನಡೆಯುವುದು ಪುರುಷ ಸದಸ್ಯನಿಗೆ ಮಾತ್ರ. 
 ಒಂದು ತಲೆಮಾರಿನ ಪುರುಷನ ಅನಂತರ ಆತನ ಸೋದರ ಅಥವಾ ಸೋದರಳಿಯ ಉತ್ತರಾಧಿಕಾರಿ.....ಆಡಳಿತಕ್ಕೆ ಮತ್ತು ಆಸ್ತಿಯ ಅನುಭೋಗಕ್ಕೆ ಆತನೇ ಯಜಮಾ.

ಉದಾಹರಣೆಗೆ ಸಿರಿಯ ಅಜ್ಜ ಸತ್ತಾಗ ಸತ್ಯನಾಪುರಕ್ಕೆ ಗಂಡು ಉತ್ತರಾಧಿಕಾರಿ ಇರುವುದಿಲ್ಲ. 
ಆಗ ಸಿರಿ ತಾನೇ ಪಟ್ಟ ಆಳುವೆ ಎಂದು ನೆರೆದ ಗ್ರಾಮಾಡಳಿತದ  ‘ಪತ್ತೇರಿ ಕೂಟ’ ಎನ್ನುವ ಸಂಸ್ಥೆಯ ಊರ ಸಮಸ್ತರಲ್ಲಿ ಹೇಳುತ್ತಾಳೆ.  ಪಾಡ್ದನ “ಹೆಣ್ಣಾಳ್ವಿಕೆಯೇ” ಎಂಬ ಪ್ರಶ್ನೆಯನ್ನು ಸಿರಿಗೆ ಕೇಳುತ್ತದೆ. ಪತ್ತೇರಿ ಕೂಟದಲ್ಲಿ ನಿರ್ಣಾಯಕಳಾಗಿ ಮಹಿಳೆ ಹೋಗುವ ಪದ್ಧತಿ ಇಲ್ಲ. ಆ ಕೂಟಕ್ಕೆ  ಮಹಿಳೆಗೆ ಪ್ರವೇಶ ಇಲ್ಲ. ತಮೆರಿ ಇಲ್ಲದ ಅಪರಾಧಿ ಮಹಿಳೆಗೆ ಪ್ರವೆಶ ಇದೆ.“ನೀನು ಒಳಾಡಳಿತ ನೋಡಿಕೊಂಡಿರು...’ ಹೇಳುತ್ತಾರೆ.  
.
12ನೆಯ ಶತಮಾನದಲ್ಲಿ ಆಳುಪರ ರಾಣಿ  ಬಲ್ಲಮಹಾದೇವಿ ಒಡ್ಡೋಲಗಗೊಟ್ಟರುವ  ಉಲ್ಲೇಖಗಳು ಶಾಸನಾಂಕಿತವಾಗಿದೆ ಆದರೆ ಆಕೆಗೆ ಪಟ್ಟಾಭಿಷೇಕವಾಗಿರಲಾರದು...
ಕೆಲವು ಕಡೆ ಚಾವಡಿಗೂ ಮಹಳೆಯರಿಗೆ ಪ್ರವೇಶ ಇರಲಿಲ್ಲ. ಮಹಿಳೆ ಚಾವಡಿಯಲ್ಲಿ ಪುರುಷರ ಸಮಾನಾಗಿ ಕುಳಿತುಕೊಳ್ಳುವಂತಿರಲಿಲ್ಲ.....

ಉಪಾಸನೆ ಮತ್ತು ಮಹಿಳೆ: 
1 ಮಹಿಳೆಯರು ದೈವಮಾಧ್ಯಮರಾಗುವಂತಿಲ್ಲ. ಪುರುಷ ದೈವ ಇರಲಿ, ಸ್ತ್ರೀ ದೈವ ಇರಲಿ ಮಾನೆಚ್ಚಿಯ ಮಾಧ್ಯಮ ಪುರುಷನೇ ಆಗಬೇಕು. 
2 ಯಾವುದೇ ದೈವಗಳಿಗೂ ಮಹಿಳೆಯರು ಪೂನೀರ್ ಇಡುವ, ಸುತ್ಯ ಇಡುವ, ಹೋಮ ಪಂಚಕಜ್ಜಾಯ ಮಾಡುವ ಪರಂಪರೆ ಇಲ್ಲ. ಆ ಸೇವೆಗೆ ಪೂರಕ ಸಾಮಾಗ್ರಿಗಳನ್ನು ಒದಗಿಸುವವರಲ್ಲಿಯೂ (ಶ್ರಮಿಕಳಾಗಿ) ಇರಬಾರದು.  

3  ಕಂಬುಲ:  ಬೀಡುಗಳ ಪಾಳೆಯಗಾರಿಕೆಯ ಹಿನ್ನೆಲೆಯುಳ್ಳ ಕೃಷಿ ಸಂಸ್ಕøತಿಗೆ ಸಂಬಂಧಪಟ್ಟ ಒಂದು ಗ್ರಾಮದ, ಒಂದು ಸೀಮೆಯ ಸಾಮೂಹಿಕ ಉಪಾಸನಾ ಆಚರಣೆ ಕಂಬುಲ. ಮಣ್ಣಿನ ಉಪಾಸನೆ. ‘ನಾಗಬಿರ್ಮೆರ್’ಆರಾಧನೆ. ಇದು ಫಲವಂತಿಕೆಗೆ ಸಂಬಂಧ ಪಟ್ಟಿದೆ. ಮಣ್ಣಿಗೆ ಮದುವೆ ಎಂದೂ ಹೇಳುತ್ತಾರೆ. ಈ ಆಚರಣೆಯಲ್ಲಿಯೂ ಮಹಿಳೆಯರು ಭಾಗವಹಿಸುವಂತಿಲ್ಲ. ಪ್ರೇಕ್ಷಕರಾಗಿಯೂ ಭಾಗವಹಿಸುವ ಸಂಪ್ರದಾಯ ಇರಲಿಲ್ಲ. (ಇದರಲ್ಲಿ ಇತ್ತೀಚಿಗೆ ಬದಲಾವಣೆÉ ಬರುತ್ತಿದೆ)  ಬಂಟ್ವಾಳ, ಪುತ್ತೂರು, ಬೆಳ್ತಂಗಡಿ ಕಡೆ ಕಂಬುಲ ಗದ್ದೆಯ  ಬಳಿ ಇರುವ ನಾಗಬಿರ್ಮೆರೆ ಬನಗಳಿಗೆ ಮಹಿಳೆಯರು ಹೋಗಬಾರದು. ನಾಟಿ ಮಾಡಲೂ (ಕೆಲವೆಡೆ)ಕಂಬುಲ ಗದ್ದೆಗೆ ಮತ್ತು ಬಾಕಿಮಾರು ಗದ್ದೆಗೆ ಮಹಿಳೆಯರು ಇಳಿಯಬಾರದು. ಈ ಗದೆಗಳಲ್ಲಿ  ಬಿತ್ತನೆ ಮಾಡುತ್ತಾರೆ. 

4 ಒಂದು ಊರಿನ ನೇಮ ಕೋಲಗಳಿಗೆ ಮತ್ತೊಂದು ಊರಿನ ಗುತ್ತು ಬೀಡುಗಳ ಮಹಿಳೆ ಹೋದರೆ ಅವಳ ಮನೆಗೆ ದೈವಮಾಧ್ಯಮ ನೀಡಬೇಕಾದ ಗೌರವ -ಒಸಯದ ಗಂಧ/ಕೊಡಿ ಇರೆ ಪ್ರಸಾದ ಅವಳ ಮೂಲಕ ನೀಡುವುದಿಲ್ಲ. ಅವಳನ್ನು ಸಭಗೆ ಅಹ್ವಾನಿಸುವುದೂ ಇಲ್ಲ. 

ಲಿಂಗ ಭೇದ ಪೂರ್ವ ಸಂಪ್ರದಾಯ ಅಲ್ಲ :ಮಹಿಳೆಯರ ನಿಷೇಧದ ಅನುಭವ: 
ನನ್ನ  ಕ್ಷೇತ್ರ ಕಾರ್ಯ ಸಂದರ್ಭದಲ್ಲಿ  ದೈವದ ಚಾವಡಿಯ ಬಾಗಿಲಲ್ಲಿ ನಿಂತು ಕೇಳಿದೆ  “ಮಹಿಳೆಯರಿಗೆ ಪ್ರವೇಶ ಇದೆಯೆ?” 
 “ ಇಲ್ಲ ಇಲ್ಲ “ ಎಂದು ಹಲವು ಕಂಠಗಳು ಉಲಿದುವು. ಮಹಿಳೆಯರೇ ಅಧಿಕ ಒತ್ತಡದಿಂದ ನುಡಿದಿದ್ದರು. 
 “ ಆದರೆ ನೀವು ಒಳಗೆ ಬರಬಹುದು.” ಎನ್ನುವ ಸಮಜಾಯಿಷಿ ಪುರುಷನಿಂದ. (ಋತು ನಿಂತ ಮಹಿಳೆಯರಿಗೆ ಪ್ರವೇಶ ಇದೆ)
ಇಂತಹ ಕೆಲವು ಅನುಭವಗಳಿವೆ. ಸಮಂiÀiವಕಾ±ವಿದ್ದಿದ್ದರೆ ನಿರ್ದಶನ ಸಮೇತ ವಿವರಿಸಬಹುದಿತ್ತು..... 

ಉಪಾಸನಾ ಕ್ಷೇತ್ರಗಳಿಗೆ ಮಹಿಳೆಯರ ಪ್ರವೇಶವನ್ನು ಅಥವಾ ಭಾಗವಹಿಸುವಿಕೆಯನ್ನು ನಿಷೇಧಿಸಿದರೆ  ಆ ಕ್ಷೇತ್ರದ ಪಾವಿತ್ರ್ಯಕ್ಕೆ ಮಹತ್ವ ಬರುತ್ತದೆ ಎಂಬ ಭಾವನೆಯನ್ನು ಬೆಳೆಸಲಾಗುತ್ತದೆ.   

ಅನೇಕ ಚಾವಡಿಗಳಲ್ಲಿ ದೈವಗಳ ಉಯ್ಯಾಲೆ ಈಗಲೂ ಮನೆ ಮಂದಿ ಓಡಾಡುವ ಜಾಗದಲ್ಲಿ ಇವೆ. ಚಾವಡಿಯ ದಕ್ಷಿಣದಿಕ್ಕಿನಲ್ಲಿ ದೈವಗಳ ಉಯ್ಯಾಲೆ ಇರುತ್ತದೆ. ಇಡಿಯ ಚಾವಡಿ ತುಂಬಾ ಮಹಿಳೆಯರು ಮಕ್ಕಳು ಓಡಾಡಿಕೊಂಡು ಇರುತ್ತಿದ್ದರು.....ಮೈಲಿಗೆಯ ನೆಪದಲ್ಲಿ ಇಂತಹ ಉಯ್ಯಾಲೆಗಳನ್ನು ಚಾವಡಿಯಿಂದ ಪ್ರತ್ಯೇಕಿಸಲಾಗುತ್ತದೆ. ಮುಂದೆ ಇಲ್ಲಿಗೆ ಮಹಿಳೆಯರಿಗೆ ನಿಷೇಧ ಹೇರಲಾಗುತ್ತದೆ. 

ಸ್ತ್ರೀ ಲಿಂಗಿ ದೈವಗಳು ದೈವಗಳ ಹೆಸರು ಪುರುಷೀಕರಣಗೊಂಡಿದ್ದು.
 ಉದಾ ಕೊಡಮಣಿತ್ತಾಯ. ಧೂಮಾವತಿ...ಪುರುಷ ಸಂಬೋಧನೆ......ಮಲರಾಯ/ಯಿ, ಮದ್ದಡ್ಕತ್ತಾಯ/ಯಿ, ನಾಲ್ಕಾತ್ತಾಯ/ಯಿ, ಮೂಜುಲ್ನಾಯ/ಯಿ
ಕುಲದೈವ 
   ಎಲ್ಲಾ ತುಳುವರು ಒಂದೇ ಕುಲದೇವತೆಯನ್ನು ಹೊಂದಿದ್ದಾರೆ. ಬೇರೆ ಬೇರೆ ಕುಲಗಳಿಗೆ ಕುಲದೇವತೆಯ ಕ್ಷೇತ್ರ  ಬೇರೆ ಬೇರೆ ಇದ್ದರೂ ಎಲ್ಲಾ ತುಳುವರಿಗೂ ಮೂಲಸ್ಥಾನದ ನಾಗಬಿರ್ಮೆರ್ ಮತ್ತು ಆದರ ಪರಿವಾರ ದೈವಗಳು ಕುಲದೈವಗಳಾಗಿವೆ. ತುಳುವರು ನಾಗಮೂಲದವರು ಎನ್ನುವುದು ನಂಬಿಕೆ. ಮೂಲಸ್ಥಾನದ ನಾಗ ಬ್ರಹ್ಮ (ತುಳು:ಬೆರ್ಮೆರ್ )ತುಳುವರ ಕುಲದೈವ ತುಳುವರ ಮೂಲ ಕ್ಷೇತ್ರ.  ಕುಲದೈವಗಳು ತಮ್ಮ ಕುಲವನ್ನು ರಕ್ಷಿಸುತ್ತವೆ. ಒಂದು ಕುಟುಂಬದವರು ವರ್ಷಕ್ಕೆ ಒಮ್ಮೆ ಒಂದೇ ಮೂಲಸ್ಥಾನಕ್ಕೆ ಹೋಗಿ ಎಡೆ ಇಡುವ ಪದ್ಧತಿ ಇಂದಿಗೂ ವಾರ್ಷಿಕ ಜಾತ್ರೆಯಂತೆ ನಡೆಯುತ್ತದೆ. ಕುಲದ ಬೇರು ಕಡಿದರೆ ದೋಷ ತಟ್ಟುತ್ತದೆ ಎಂಬ ಭಯ ಇರುತ್ತದೆ. 
ಕಾಡಿನಲ್ಲಿ  ಕುಲದೈವಗಳ ಪವಿತ್ರ ಸಂಕೀರ್ಣ ಇರುತ್ತದೆ. ಪವಿತ್ರ ಶಕ್ತಿ-ಶಕ್ತಿ ದೈವಗಳು/ಭೂತಗಳು. ಪವಿತ್ರ ಭೌಗೋಳಿಕ ವಲಯ ದೇವರ ಕಾಡು, ನಾಗ ಬನ. ಅದನ್ನು ಕಡಿಯಲು ನಿಷೇಧ ಇದೆ. ಪರಿಸರ ಪೋಷಕ ಆಚರಣೆ.....ಪವಿತ್ರ ಆಚರಣೆ. ನಾಗಶಕ್ತಿಗಳಿಗೆ ಸಂಬಂಧ ಪಟ್ಟ ಆಚರಣೆಗಳು.
ವೈದಿಕ ಪದ್ಧತಿಯ ಪರಿಚಯ ತುಳುವರಿಗಿಲ್ಲ. ಸನಾತನ ಧರ್ಮ, ವೇದ ಉಪನಿಷತ್ತುಗಳ ಹೆಸರು ಕೇಳಿರುವುದಿಲ್ಲ.

ಉಪಸಂಹಾರ:
 ಮಾತೃ ಸಂಸ್ಕøತಿಯಲ್ಲಿ ಮಹಿಳೆಗೆ ಅಸ್ಮಿತೆ ಇದೆ. ಆರ್ಥಿಕವಾಗಿ ಆಕೆ ಸ್ವತಂತ್ರಳು. ಆಕೆ ಪರಾಧೀನೆ ಆಗುವುದಿಲ್ಲ. ಅವಳ ಹೆಸರಿನಲ್ಲಿ ಮಾತೃ ಮೂಲದ ಆಸ್ತಿ ಇದೆ. ಅಂತಹ ಆಸ್ತಿ ತಲೆ ತಲಾಂತರದಿಂದ ಹೆಣ್ಣು ಸಂತಾನದ ಮೂಲಕ ಹರಿದು ಬಂದಿರುತ್ತದೆ. 

ನಾನು ಹಿಂದೆ ಪ್ರಸ್ತಾಪಿಸಿರುವ ರಾಣಿ ಅಬ್ಬಕ್ಕ. ಮತ್ತು ರಾಣಿ ಸೋಮಲಾದೇವಿ.......ಮಾತೃ ಪ್ರಧಾನತೆಯಲ್ಲಿ ಮಾತೆಗೆ ಪರಮಾಧಿಕಾರ. ಅದನ್ನೂ ಪುರುಷ ತಮೆರಿ..ದುರುಪಯೋಗಪಡಿಸಿದ ಉದಾಹರಣೆ ಇದೆ....

ತಮೆರಿ  ದುರಾಡಳಿತ ಮಾಡಿದಾಗ (ವಿಟೋ) ಅಧಿಕಾರವನ್ನು ಚಲಾಯಿಸಲು ಅವಕಾಶ  ಮಹಿಳೆಗೆ ಇರುತ್ತದೆ. ಇದೆ. ...ಈ ಸಂದರ್ಭದಲ್ಲಿ ಸಮಾಜ ಹೆಣ್ಣಿನ ಪರವಾಗಿ ಕೆಲಸಮಾಡುತ್ತದೆ. 
ಸ್ಥಿರಾಸ್ತಿ  ಇಲ್ಲದ ಶ್ರಮಿಕ ವರ್ಗದಲ್ಲಿ ಹೆಣ್ಣಿನ ದುಡಿಮೆ ಹೆಣ್ಣಿಗೆ...ಗಂಡನ ಸಹಾಯ ಇಲ್ಲದೆ ಹೋದಾಗ ತನ್ನ ಮಕ್ಕಳನ್ನು ತನು ರಕ್ಷಿಸುತ್ತಾಳೆ. 

******

ಡಾ. ಇಂದಿರಾ ಹೆಗ್ಗಡೆ. 

24-02-2013ರ ಭಾನುವಾರ ಸಂಜೆ 5.30ಕ್ಕೆ  ಬನಶಂಕರಿಯ ಸುಚಿತ್ರ ಸಭಾಂಗಣದಲ್ಲಿ ಮಂಡಿಸಿದ ಉಪನ್ಯಾಸ 

No comments:

Post a Comment