![]() |
ಕಂಬುಲದ ಪೂಕರೆ ಕಂಬ-ಕುಂಬ್ಡಾಜೆ ಬೀಡು ಕಾಸರಗೋಡು |
![]() |
ಕಂಬುಲ ದೇವರನ್ನು ಹೊತ್ತ ಕೊರಗತಿ-ಸಿದ್ಧಾಪುರ ಕಂಬುಲ ಕುಂದಾಪುರ |
![]() |
ಕಂಬುಲದಲ್ಲಿ ಪಟ್ಟದ ಕೊರಗ -ಚೇರ್ಕಾಡಿ ಉಡುಪಿ ಜಿಲ್ಲೆ |
![]() |
ಜೋಡು ಪೂಕರೆ -ಬಂಡಿ ಪೂಕರೆ -ಕಡಂದಲೆ ಪರಾಡಿ ಕಾರ್ಕಳ ತಾಲೂಕು |
ಆಧುನಿಕ ಜಗತ್ತಿಗೆ ತನ್ನನ್ನು ಮುಕ್ತವಾಗಿ ತೆರೆದುಕೊಳ್ಳುತ್ತಿದ್ದರೂ ಪೂರ್ವ ಪದ್ಧತಿ, ಪೂರ್ವ ಕಟ್ಟು ಕಟ್ಟಲೆಗಳನ್ನು ಮುಂದುವರಿಸಿಕೊಂಡು ಬಂದಿರುವುದು ತುಳುನಾಡಿನ ಅನನ್ಯತೆ. ಹೀಗಾಗಿ ವಿಶ್ವದ ಮಾನವಶಾಸ್ತ್ರಜ್ಞರಿಗೆ ಇದು ಸಮೃದ್ಧ ಫಸಲು ನೀಡುವ ಕ್ಷೇತ್ರ.
ಅನ್ಯ ಭಾಷೆ ಮತ್ತು ಸಂಸ್ಕøತಿಯ ಅರಸರ ಅಧೀನ ರಾಜ್ಯವಾಗಿ ತುಳುನಾಡು ಐತಿಹಾಸಿಕ ಕಾಲದಿಂದಲೂ ಇತ್ತು. ಹೀಗಾಗಿ ತುಳುನಾಡಿನ ವಿಶಿಷ್ಟ ಪರಂಪರೆಯನ್ನು ಜಗತ್ತಿಗೆ ತೆರೆದಿಡುವ ಕೆಲಸವನ್ನು ಅದನ್ನು ತನ್ನ ರಾಜ್ಯದೊಳಗೆ ಸೇರಿಸಿಕೊಂಡ ಸರಕಾರ ಮಾಡಲಿಲ್ಲ. ಈಗಲೂ ಮಾತೃಮೂಲಿಯ ಪದ್ಧತಿ ಪರಂಪರೆಗಳನ್ನು ಮುಂದುವರಿಯುವುತ್ತಿರುವ ತುಳುನಾಡಿನಲ್ಲಿ ಕಂಬುಲವು ಬಹಳ ಪುರಾತನವಾದ ಒಂದು ಉಪಾಸನಾ ಆಚರಣೆ.
ಕಂಬುಲದ ಆರಂಭ ಕಾಲ:
ಜಾತಿ ಮತ ಧರ್ಮ ಹುಟ್ಟುವ ಮೊದಲಿನ ಆದಿಮಾನವನಿಂದ ಕಂಬುಲ ಆರಂಭವಾಯಿತು ಎನ್ನುವುದಕ್ಕೆ ಇಂದಿಗೂ ಹಲವು ದೃಷ್ಠಾಂತಗಳು ಪರಂಪರೆಯ ಕಂಬುಲಗಳಲ್ಲಿ ಉಳಿದು ಬಂದಿದೆ. ಒಂದು ಪಾಳಯ ಪಟ್ಟಿನ ಆಶ್ರಯದಲ್ಲಿ ಬರುವ ಕ್ರೈಸ್ತರು, ಬ್ಯಾರಿಗಳಾದಿಯಾಗಿ ತಮ್ಮ ಕೋಣಗಳನ್ನು ಕಂಬುಲ ಗದ್ದೆಗಳಿಗೆ ಇಳಿಸಿ ಓಡಿಸುತ್ತಾರೆ.
ರೈತನಿಗೆ ಜಾತಿ ಧರ್ಮ ಇಲ್ಲ. ಇದು ಆಯಾ ಪಾಳೆಯಪಟ್ಟಿನ ಜನರ ಸಹಬಾಳ್ವೆಯ ಸಮಷ್ಟಿ ಆಚರಣೆ.
ಕಂಬುಲ ಎಂದರೆ ಭೂಮಿಗೆ ಮದುವೆ:
ಸುಗ್ಗಿಯ ಕಂಬುಲ ಗದ್ದೆಯಲ್ಲಿ ಬಿತ್ತಿದ ಅತಿಕಾರೆ ಭತ್ತದ ಸಸಿ ಮೇಲೆ ಬಂದ ಮೇಲೆ ನಡೆಯುವ ಕಂಬುಲವನ್ನು ಕಂಬುಲದ ಕೋರಿ ಎಂದು ಕರೆಯುತ್ತಾರೆ. ಕಂಬುಲ ಗದ್ದೆಯ ಬಿತ್ತನೆ ಮಾಡುವಾಗ ಸ್ವಲ್ಪ ಜಾಗವನ್ನು ಉಳುಮೆ ಮಾಡದೆ ಬಿಡುತ್ತಾರೆ. ಕಂಬುಲದ ದಿನ ರಕ್ತೇಶ್ವರಿ ಕೋಲ ನಡೆಯುತ್ತದೆ. ಪಟ್ಟದ ಕೋಣಗಳ ಮೂಲಕ ಉಳುಮೆ ಮಾಡಿಸಿ ಆ ಜಾಗಕ್ಕೆ ಬಿತ್ತನೆ ಮಾಡುತ್ತಾರೆ. ಆ ಮೇಲೆ ಪೂಕರೆ ಕಂಬವನ್ನು ಗದ್ದೆಯ ಮಧ್ಯ ಭಾಗದಲ್ಲಿ ಊರವರು ಸೇರಿ ನೆಡುತ್ತಾರೆ. ಈ ಸಂದರ್ಭದಲ್ಲಿ ರಕ್ತೇಶ್ವರಿ, ಕಾಡು ಕೋಣ ಮತ್ತು ಜೋಗಿ ಪುರುಷರ ಕೋಲ ನಡೆಯುತ್ತದೆ. ಕಂಬುಲದ ಯಜಮಾನ ದೈವವಾಗಿ ರಕ್ತೇಶ್ವರಿ ದೈವ ಕಂಬುಲವನ್ನು ನಡೆಸಿಕೊಡುತ್ತದೆ.
ಹೀಗೆ ಈಗಲೂ ಪರಂಪರೆಯ ಕಂಬುಲಗಳು ಆಯಾ ಪಾಳೆಯ ಪಟ್ಟಿನ ದೈವದ ಹೆಸರಿನಲ್ಲಿ ನಡೆಯುತ್ತದೆ. ಕೆಲವು ಪರಂಪರೆಯ ಕಂಬುಲಗಳಿಗೆ ಇರುವ ಹೆಸರು ಈ ಕೆಳಗಿನಂತಿವೆ.
1 ಉಲ್ಲಾಳ್ತಿ ಕಂಬುಲ ಮಲರಾಯಿ ಕಂಬುಲ ಅನಂತಾಡಿ 4 ಕಂಬುಲ
2 ದೆಯ್ಯೊಲೆ ಕಂಬುಲ ಆದಿ ಉಡುಪಿ ಕಂಬುಲಗುತ್ತು
3 ದೆಯ್ಯೊಲೆ ಕಂಬುಲ ಐಕಳ ಬಾವ
4 ಬಿರ್ಮೆರೆ ಕಂಬುಲ ಪಳ್ಳಿ ಪೆಜಕೊಡಂಗೆ
5 ಜನ್ನದ ಕಂಬುಲ ಚೇರ್ಕಾಡಿ
6 ಜನ್ನದ ಕಂಬುಲ ಹೇರಿಂಜೆ ಉಡುಪಿ ತಾಲೂಕು
7 ನಂದಿಗೋಣ/ನಂದಿಕೇಶ್ವರ ಕಂಬುಲ ಯೆಡ್ತಾಡಿ.
8 ಕೊಡಮಣಿತ್ತಾಯಿ ಮತ್ತು ಕುಕ್ಕಿನಂತ್ತಾಯಿ ಕಂಬುಲ ನಿಂಜೂರು
9 ದೇವರ ಕಂಬುಲ, ಕದ್ರಿ ಮಂಗಳೂರು
10 ಲೆಕ್ಕಿಸಿರಿ ಕಂಬುಲ ಮಾಲಾಡಿ ಬೀಡು ಜೋಡು (2) ಕಂಬುಲ
11 ಉಳ್ಳಾಕುಲ ಕಂಬುಲ ಸುಳ್ಯ
12 ಪಿಲಿಚಂಡಿ ಕಂಬುಲ ಕುಂಬ್ಡಾಜೆ ಕಾಸರಗೋಡು.
13 ಪಿಲಿಚಂಡಿ ಕಂಬುಲ ಜೋಡು ಪೂಕರೆ ಬಂಡಿ ಪೂಕರೆ ಮತ್ತು ಕೋಲು ಪೂಕರೆ, ಬಾರಾಡಿ ಬೀಡು
14 ಮಂಜಲ್ ಜಮಾದಿ ಕಂಬುಲ ಕಡಂದಲೆ ಪರಾಡಿ (ದೇವರೆ ಕಂಬುಲ ಜೋಡಿ ಪೂಕರೆ)
15 ನಾಗ ಬಿರ್ಮೆರ ಕಂಬುಲ ಕುಳೂರು.
16 ಬಿರ್ಮೆರೆ/ಉಲ್ಲಾಯ ಕಂಬುಲ, ಕೊಡಮಣಿತ್ತಾಯ ಕಂಬುಲ, ಕೋಟಿ ಚೆನ್ನಯ ಕಂಬುಲ-ಒಟ್ಟು ಮೂರು-ಮುಟ್ಲುಪಾಡಿ ಕಾರ್ಕಳ (ಬೆರ್ಮೆರ ಕಂಬುಲಕ್ಕೆ ಪೂಕರೆ, ಕೊಡಮಣಿತ್ತಾಯ ಕಂಬುಲಕ್ಕೆ ಜೋಡಿ ಪೂಕರೆ, ಕೋಟಿ ಚೆನ್ನಯರ ಕಂಬುಲಕ್ಕೆ ಏನೂ ಇಲ್ಲ.)
17 ಬೆರ್ಮೆರೊಟ್ಟು ಕೊಡಮಣಿತ್ತಾಯಿ ಕಂಬುಲ ‘ಬಂಡಿ ಪೂಕರೆ.’ ‘ನಾಗ ಬಿರ್ಮೆರ್ ಬಂಟ’ ದೈವ ಮಾಧ್ಯಮ ಪೂಕರೆ ಕಂಬ ಎಳೆಯಬೇಕು.
18 ಮಾಲಾಡಿ ಬೀಡು ರಕ್ತೇಶ್ವರಿ ಕಂಬುಲ, ಮೈಸಂದಾಯ ಕಂಬುಲ (ಎರಡು) (ಜೋಡು ಪೂಕರೆ.) ಕಾರ್ಕಳ (ಜೋಡು ಪೂಕರೆ)
19 ‘ಹನುಮಂತ ದೇವರ ಕಂಬುಲ’ ಇಳಂತಾಜೆ. ಹೀಗಾಗಿ ನಾಗಬ್ರಹ್ಮ ಸಿರಿ ಪರಿವಾರಗಳ ಉಪಾಸನಾ ಆಚರಣೆಯೇ ಕಂಬುಲ.
ಇದು ಫಲವಂತಿಕೆಯ ಆಚರಣೆ. ಸುಗ್ಗಿಯ ಬೆಳೆಯನ್ನು ಮದುಮಗಳಿಗೆ ಹೋಲಿಸುತ್ತಾರೆ. ಹೀಗಾಗಿ ಕಂಬುಲವನ್ನು ಭೂಮಿಗೆ ಮದುವೆ ಎಂದು ಕರೆಯುತ್ತಾರೆ. ಕಂಬುಲ ನಡೆಸಿ ಗದ್ದೆಯ ಮಧ್ಯೆ “ಪೂಕರೆ” ಕಂಬ ಹಾಕಿ ಭೂಮಿಗೆ ಮದುವೆ ಮಾಡುವುದೇ ಕಂಬುಲ. ತುಳುವರ ಉಪಾಸನಾ ಮೂಲಸ್ಥಾನದ ಬಳಿಯೇ ಕಂಬುಲ ಗದ್ದೆಗಳು ಇವೆ. ಮೂಲಸ್ಥಾನದಲ್ಲಿ ಇರುವ ಮೂಲದ ಕೋಣ ಮತ್ತು ‘ನಾಗಬೆÀರ್ಮರ್’ ಉಪಾಸನೆಯ ಭಾಗವಾಗಿ ಇಂದಿಗೂ ಪರಂಪರೆಯ ಕಂಬುಲ ಉಪಾಸನೆ ಪಡೆಯುತ್ತಿವೆ. ಮೇಲೆ ಕಾಣಿಸಿದ ಪಟ್ಟಿಯಲ್ಲಿ ಇರುವ ದೈವಗಳು ಆಯಾ ಕಂಬುಲವನ್ನು ನಡೆಸಿಕೊಡುತ್ತವೆ.
ಯಾವುದೇ ಒಂದು ಆಚರಣೆಗಳು ತಮ್ಮ ಮೂಲಸ್ವರೂಪದಲ್ಲಿ ಬದಲಾವಣೆಗಳನ್ನು ಹೊಂದುತ್ತವೆ. ಕಂಬುಲವೂ ಮೂಲತಃ ಕೋಣಗಳ ಓಟದ ಸ್ಪರ್ಧೆಯಾಗಿರಲಿಲ್ಲ. ಸಾಮೂಹಿಕ ಶ್ರಮಸಂಸ್ಕøತಿಯ ಮೂಲಕ ಭತ್ತದ ವ್ಯವಸಾಯವನ್ನು ಪ್ರೋತ್ಸಾಹಿಸುವುದಾಗಿತ್ತು.
ತುಳುನಾಡಿಗೆ ಬಂದ ಆದಿಕಾಲದ ಮಾನವ ಸಮೃದ್ಧ ಕೆಸರು ನೆಲವನ್ನು ಕಂಡು ಅದನ್ನು ಭತ್ತ ಬೆಳೆಯುವ ವಿಶಾಲ ಗದ್ದೆಗಳನ್ನು ರಚಿಸಿದ; ಘಟ್ಟದ ಮೇಲಿನಿಂದ “ಅತಿಕಾರೆ” ಹೆಸರಿನ ಬೀಜದ ಭತ್ತವನ್ನು ಹಾಗೂ ಬೀಜದ ಜೊತೆಗೆ ಕಾಡಿನ ಕೋಣಗಳನ್ನು ತುಳುನಾಡಿಗೆ ತರಿಸಿಕೊಂಡ. ಸುಮಾರು ಹತ್ತು ಎಕ್ರೆಗಳಿಂತಲೂ ವಿಶಾಲ ಕೆಸರು ಗದ್ದೆಗಳನ್ನು ನಿರ್ಮಿಸಿ ಸಾಮೂಹಿಕ ಶ್ರಮದ ಮೂಲಕ ಭತ್ತದ ನಾಟಿಮಾಟಿದ. ಭತ್ತದ ಬೇಸಾಯದ ಮೂಲವನ್ನು ನಾವು ಇಲ್ಲಿಯ ಪರಂಪರೆಯ ಕಂಬುಲಗಳಲ್ಲಿ ಶೋಧಿಸಬಹುದು. ಪರಂಪರೆಯ ಕಂಬುಲದಲ್ಲಿ ಯಜಮಾನ ಮತ್ತು ಆತನ ಪಟ್ಟದ (ಕಂಬುಲದ) ಕೋಣಗಳಿಗೆ ಸಮಾನ ಗೌರವ ಇದೆ. ಇಬ್ಬರಿಗೂ ಉಪವಾಸ ವ್ರತಾಚರಣೆ ಇದೆ. ಮಡಿ ಮೈಲಿಗೆ ಇದೆ. ಪಟ್ಟದ ಕೋಣಗಳಿಗೆ ಆವೇಶ ಉಂಟಾಗುತ್ತದೆ. ಕಂಬುಲ ಕೋಣಗಳನ್ನು ಬಹಳ ಪ್ರೀತಿಯಿಂದ ಭಕ್ತಿಯಿಂದ ಸಾಕುತ್ತಾರೆ. ಕಂಬುಲದ ಗದ್ದೆ ಉಳುವ ಪಟ್ಟದ ಕೋಣಗಳನ್ನು ಇತರೆ ಗದ್ದೆಗೆ ಉಳಲು ಹೂಡುವಂತಿಲ್ಲ.
ಕಂಬುಲ ಗದ್ದೆಯ ಉಳುಮೆಯಂದು ಮತ್ತು ಕಂಬುಲ ಗದ್ದೆಯ ಭತ್ತದ ಕೊಯ್ಲು ಆಗುವಾಗ “ದೆಯ್ಯೊಲೆ ನಲಿಕೆ” ಎನ್ನುವ ಉಪಾಸನೆ ಇದೆ. ಈ ಉಪಾಸನೆಯಲ್ಲಿ ಸಿರಿಗಳಿಗೆ 1001 ಭೂತಗಳು 101 ಗಂಡಗಣಗಳು ಕೋಲ ಇದೆ. ಪುತ್ತಿಗೆಯ ಅರಮನೆಯ ಕಂಬುಲದಲ್ಲಿ, ಐಕಳ ಕಂಬುಲದಲ್ಲಿ, ಉಡುಪಿಯ ಕಂಗೊಟ್ಟು ಕಂಬುಲದಲ್ಲಿ -ಹೀಗೆ ಸುಮಾರು ಕಡೆ ಕಂಬುಲ ಗದ್ದೆಯ ಉಳುಮೆ ಆಗುವಾಗ ಅಥವಾ ಕೊಯ್ಲು ನಡೆಯುವಾಗ ಸುಮಾರು 1ರಿಂದ 11 ದಿನಗಳ ಕಾಲ ನಿರಂತರವಾಗಿ ದೆಯ್ಯಲೆ ನಲಿಕೆ ನಡೆಯುತ್ತಿತ್ತು.
ತುಳುನಾಡಿನ ಕಂಬುಲಕ್ಕೆ 733 ವರ್ಷಗಳ ಇತಿಹಾಸ ಇದೆ. ಬಾರ್ಕೂರಿನಿಂದ ಆಳುತ್ತಿದ್ದ ಆಳುಪ ರಾಣಿ ಬಲ್ಲಮಹಾದೇವಿಯ ಕ್ರಿ. ಶ 1282ರ ಶಾಸನದಲ್ಲಿ ಕಂಬುಲಕ್ಕೆ ಎತ್ತುಗಳನ್ನು ಪೂರೈಸಿದ ಉಲ್ಲೇಖ ಇದೆ. ಬಹುಷಃ ಎಡ್ತಾಡಿ ಕಂಬುಲವೇ ಶಾಸನಾಂಕಿತ ಐತಿಹಾಸಿಕ ಮಹತ್ವದ ಪ್ರಾಚೀನ ಕಂಬುಲ. ಮೂಲತಃ ಬಿಲ್ಲವರ ಪಾಳೆಯ ಪಟ್ಟು ಆಗಿತ್ತು ಎಂದು ನಂಬಲಾಗಿರುª ಯೆಡ್ತಾಡಿ ಕಂಬುಲದ ದಿನ (ಬಂಟ)ಹೆಗ್ಗಡೆಗಳ ಪಟ್ಟಾಭಿಷೇಕದ ವಿಧಿ ವಿಧಾನಗಳು ನಡೆಯುತ್ತವೆ.
ಚೇರ್ಕಾಡಿ ಕಂಬುಲದಲ್ಲಿ ಕೊರಗನ ಮುಖಂಡನಿಗೆ ಪಟ್ಟಾಭಿಷೇಕ ನಡೆಯುತ್ತದೆ. ಹೆಗ್ಗಡೆ ಮತ್ತು ಕೊರಗ ಮುಖಂಡ ಮುಖಾಮುಖಿಯಾಗುವುದು ಕಂಬುಲ ಗದ್ದೆಯಲ್ಲಿ.
ಸಿದ್ದಾಪುರ ಕಂಬುಲದಲ್ಲಿ ಕೊರಗರಗಿಗೆ ಮೊದಲ ಮನ್ನಣೆ. ಕೊರಗತಿ “ಕಂಬುಲ ದೇವರು” ಹೊತ್ತುಕೊಂಡು ಕಂಬುಲ ಗದ್ದೆಗೆ ಇಳಿಯುತ್ತಾಳೆ. ಪಾಳೆಯಗಾರಿಕೆ ಮನೆಯವರೂ ಕಂಬುಲ ಗದ್ದೆಗೆ ಇಳಿಯಬಾರದು.
ವಂಡಾರು ಕಂಬುಲ ಗದ್ದೆಯಲ್ಲಿ ನೂರಾರು ಜೊತೆ ಎತ್ತು ಕೋಣಗಳಲ್ಲದೆ ಹಸು ಎಮ್ಮೆಗಳು ಕೂಡಾ ಓಡುತ್ತವೆ. ಹೀಗಾಗಿ ಅಖಂಡ ತುಳುನಾಡಿಗೆ ಇದು ಪ್ರಸಿದ್ಧ ಕಂಬುಲ.
ಅನಂತಾಡಿ ಕಂಬುಲ ಮೂಲತಃ ಮನ್ಸ ಎಂಬ ಪರಿಶಿಷ್ಟ ವರ್ಗದ ಕ್ಷೇತ್ರ.
ನಾಗಬೆರ್ಮರ ಹಾಗೂ ಪರಿವಾಋ ಶಕ್ತಿಗಳ ಉಪಾಸನಾ ಆಚರಣೆಯ ಭಾಗವಾಗಿ ನಡೆಯುತ್ತಿರುವ ಪರಂಪರೆಯ ಕಂಬುಲಗಳಲ್ಲಿ ಕೋಣಗಳ ಓಟದ ಸ್ಪರ್ಧೆ ಇಲ್ಲ. ಸಾಮೂಹಿಕ ಉಳುಮೆ ಮಾತ್ರ.
ಇತ್ತೀಚಿನ ದಶಕಗಳಲ್ಲಿ ಪರಂಪರೆಯ ಕಂಬುಲಗಳನ್ನು ನಡೆಸುವುದು ಸುಲಭ ಅಲ್ಲ. ಕಂಬುಲ ನಡೆಸಿದ ಗದ್ದೆಯಲ್ಲಿ ಬೇಳೆ ತೆಗೆಯಲು ನೀರಿನ ಕೊರತೆ ಉಂಟಾಗಿದೆ. ಹೀಗಾಗಿ ಯೆಡ್ತಾಡಿ ಯಂತಹ ಕೆಲವು ಉಪಾಸನಾ ಕಂಬುಲಗಳಲ್ಲಿ ಗದ್ದೆ ಹದಕ್ಕೆ ಬಂದರೂ ಬಿತ್ತನೆ ಮಾಡುವುದಿಲ್ಲ. ನಂದಿಕೇಶ್ವರ ದೈವದ ಉಪಾಸನೆಯನ್ನಾಗಿ ಕಂಬುಲವನ್ನು ಮುನ್ನೆಡೆಸುತ್ತಿದ್ದಾರೆ. ಯಾರ ಆರ್ಥಿಕ ನೆರವನ್ನೂ ಬಯಸದೆ “ ನಮ್ಮ ಸೀಮೆ ದೈವದ ಉಪಾಸನೆ ನಮ್ಮ ಭಕ್ತಿ” ಎಂದು ಕಂಬುಲವನ್ನು ಮುನ್ನಡೆಸುತ್ತಿದ್ದಾರೆ.
ನಾನು ಆರಂಭದಲ್ಲಿಯೇ ಹೇಳಿದಂತೆ ತುಳುನಾಡನ್ನು ಗರ್ಭಿಕರಿಸಿಕೊಂಡ ಕರ್ನಾಟಕ್ಕೆ ತುಳುನಾಡಿನ ಸಂಸ್ಕøತಿ ಪರಂಪರೆಯತ್ತ ಕಾಳಜಿ ಇಲ್ಲ. ಸುಪ್ರೀಂ ಕೋರ್ಟಿಗೆ ಕಂಬುಲದ ವಾಸ್ತವ ಚಿತ್ರಣ ನೀಡಲಿಲ್ಲ.
ಇತ್ತೀಚಿನ ದಶಕಗಳಲ್ಲಿ ಶ್ರೀಮಂತರ ಶೋಕಿಯಾಗಿ ಇರುವ ಕೋಣಗಳ ಓಟದ ಸ್ಪರ್ಧೆಯೇ ಕಂಬುಲ ಎಂಬ ತಪ್ಪು ಕಲ್ಪನೆ ಜನರಲ್ಲಿದೆ. ಅದನ್ನೇ ಸುಪ್ರೀಂ ಕೋರ್ಟು ಪರಿಶೀಲಿಸಿದೆ.
ಕರ್ನಾಟಕ ಸರಕಾರ ಸುಪ್ರೀಂ ಕೋರ್ಟುಗೆ ವಾತ್ಸವ ಚಿತ್ರಣ ನೀಡಬೇಕು
ಪರಂಪರೆಯ ಕಂಬುಲಗಳನ್ನು ಪ್ರೋತ್ಸಾಹಿಸಬೇಕು.
ಸರಕಾರ ಎಲ್ಲಾ ಪರಂಪರೆಯ ಕಂಬುಲಗಳಿಗೆ ಧನಸಹಾಯ ಒದಗಿಸಬೇಕು.
ಕಂಬುಲ ಗದ್ದೆಗಳಿಗೆ ಇದ್ದ ಸಣ್ಣ ನೀರಾವರಿ ವ್ಯವಸ್ಥೆಯನ್ನು ಮರುಜೀವಗೊಳಿಸಬೇಕು.
ಕಂಬುಲ ಗದ್ದೆಗಳು ಸುಮಾರು 10 ಎಕ್ರೆಗಳ ವರೆಗೆ ಇರುವುದರಿಂದ ಈ ವಿಶಾಲ ಗದ್ದೆಯಲ್ಲಿ ಸುಗ್ಗಿಯ ಪವಿತ್ರ ಬೆಳೆಯನ್ನು ಬೆಳೆಯಲು ಅಗತ್ಯ ಸಹಾಯ ಸರಕಾರದಿಂದ ದೊರಕಬೇಕು.
...........ಕಂಬುಲದ ಬಗ್ಗೆ ಹೆಚ್ಚಿನ ವಿವರಗಳಿಗೆ ನೋಡಿ: ಡಾ. ಇಂದಿರಾ ಹೆಗ್ಗಡೆ ತುಳುವರ ಮೂಲತಾನ ಆದಿ ಆಲಡೆ ಪರಂಪರೆ ಮತ್ತು ಪರಿವರ್ತನೆ.
No comments:
Post a Comment