Friday, December 19, 2014

ಚೀನೀಯರನ್ನು ಏಕಾಂಗಿಯಾಗಿ ಎದುರಿಸಿದ ಭಾರತೀಯ ಸೈನಿಕ ರೈಫಲ್ ಮ್ಯಾನ್ ಜಸ್ವಂತ್ ಸಿಂಗ್




God and solider all men adore at the time of war, not before When war is over Everthig is righted god is forgoten soldir is neglected




ಆದರೆ ಸೈನಿಕರು ಅಂತಹ ವೀರರಿಗೆ ಗುಡಿ ಕಟ್ಟುತ್ತಾರೆ,  ಅವರನ್ನು ದೇವರಂತೆ ಪೂಜಿಸುತ್ತಾರೆ. ಅಂತಹ ಯುದ್ಧ ಸ್ಮಾರಕಗಳು ಭಾರತ ಪಾಕಿಸ್ಥಾನ, ಭಾರತ ಚೀನಾ ಗಡಿ ಭಾಗಗಳಲ್ಲಿ ಅನೇಕ ಇವೆ.
1962 ಭಾರತ ಚೀನಾ ಯುದ್ಧದಲ್ಲಿ ಭಾರತ ದಯನೀಯ ಸೋಲು ಅನುಭವಿಸಿತು. ಅಸ್ಸಾಂನ ಮಿಸಮಾರಿಯಿಂದ ಭಾರತದ ಹಿಮಾಲಯ ಶ್ರೇಣಿಗಳ ತುತ್ತ ತುದಿಯ 10,000ಅಡಿ ಎತ್ತರದ ತವಾಂಗ್ ಚೀನಾ ಸರಹದ್ದಿನ ಬಳಿ ಭಾರತೀಯ ಸೈನಿಕ ನೆಲೆ ಇತ್ತು. ಆದರೆ ಅದು ಸುಸಜ್ಜಿತ ಸೈನ್ಯ ಆಗಿರಲಿಲ್ಲ. ಯೋಧರ ಸಂಖ್ಯೆಯೂ ಕಡಿಮೆ ಇತ್ತು. ಹಿಮ ಶಿಖರಗಳ ಮೇಲೆ ತೊಡಲು ಬೆಚ್ಚನೆಯ ಉಡುಪೂ ನಮ್ಮ ಸೈನಿಕರಿಗಿರಲಿಲ್ಲ. ಆಗಿನ ಪ್ರಧಾನ ಮಂತ್ರಿ ನೆಹರೂರವರಿಗೆ ಚೀನಾ ಭಾರತದೊಂದಿಗೆ ಯುದ್ಧಮಾಡಬಲ್ಲದು ಎಂಬ ಕಲ್ಪನೆಯೇ ಇರಲಿಲ್ಲ. ಅವರ ದೃಷ್ಟಿಯಲ್ಲಿ ಚೀನಾ ಬಡ ಕಮ್ಯನಿಸ್ಟ್ ರಾಷ್ಟ್ರ. ಆದರೆ ಚೀನಾ ಭಾರತದ ಗಡಿಯವರೆಗ ರಸ್ತೆ ನಿರ್ಮಾಣ ಮಾಡಿ ಯುದ್ಧ ಸಿದ್ಧತೆ ಮಾಡಿತ್ತು.  ಭಾರತದ ಭಾಗದಲ್ಲಿ ರಸ್ತೆಗಳಿಲ್ಲ. ಕಾಲ್ನಡಿಗೆಯಲ್ಲಿ ಅಸ್ಸಾಂನ ಮಿಸಮಾರಿಯಿಂದ 300 ಕಿಲೋಮೀಟರ್‍ಗಳ ದೂgದ ತವಾಂಗ್ ತಲುಪಲು ಸೈನಿಕರಿಗೂ ಇಪ್ಪತ್ತೊಂದು ದಿನಗಳು ಬೇಕಿತ್ತು. ಸುಮಾರು 14000ಅಡಿ ಎತ್ತರದ ಸೆಲಾ ಪಾಸ್ ಹತ್ತಿ ಇಳಿದು ಮತ್ತೆ ಕೊರಕಲು ಏರಿ ತವಾಂಗ್ ನಗರ ದಾಟಿ ಸುಮಾರು 50 ಕಿಲೋಮೀಟರ್ ದೂರದ ಬೆಟ್ಟ ದಾಟಿ ಚೀನಾ ಸರಹದ್ದು ತಲುಪಬೇಕಿತ್ತು. ಸರಂಜಾಮುಗಳನ್ನು ಬೆನ್ನಿನ ಮೇಲೆ ಹೇರಿ ಕಡಿದಾದ ಭಯಂಕರವಾದ ಪ್ರಪಾತಗಳ ನಡುವೆ ಹೆಜ್ಜೆ ಊರುತ್ತಾ ಸೈನಿಕರು ಯುದ್ಧಭೂಮಿಗೆ ತೆರಳಬೇಕಿತ್ತು.
ಭಾರತದ ಗಡಿಯುದ್ಧಕ್ಕೂ ಆ ಹಿಮ ಶಿಖರಗಳಲ್ಲಿ ಮೈತುಂಬಾ ಬೆಚ್ಚನೆಯ ಉಣ್ಣೆ ಬಟ್ಟೆ ತೊಟ್ಟು, ಹಿಮ ನೆಲದಲ್ಲಿ ಓಡಾಡಲಾಗುವ ಬೂಟುಗಳನ್ನು ಧರಿಸಿರುವ ಚೀನಾದ ಸರ್ವಸುಸಜ್ಜಿತ ಸೈನ್ಯ, ಯುದ್ಧ ಆರಂಭಿಸಲು ಆದೇಶದ ನಿರೀಕ್ಷಣೆಯಲ್ಲಿ ಇತ್ತು. ಇವರ ಮುಂದೆ ಯಾವೊಂದೂ ಪೂರ್ವ ತಯಾರಿ ಇಲ್ಲದೆ, ಹಿಮಾಲಯದ ಅಗಾಧ ಹಿಮ ಶಿಖರಗಳ ಬಗ್ಗೆ ಯಾವ ತಿಳುವಳಿಕೆಯೂ ಇಲ್ಲದೆ, ಅಗತ್ಯ ಶಸ್ತ್ರವೂ ಇಲ್ಲದೆ ಯುದ್ಧ ನಿರೀಕ್ಷೆಯಲ್ಲಿ ಇರುವ ಭಾರತೀಯ ಸೈನ್ಯಕ್ಕೆ ಧೈರ್ಯ ಒಂದೇ ಅಸ್ತ್ರ-ಶಸ್ತ್ರ ಆಗಿತ್ತು.
ಚೀನಾ ಪೂರ್ಣ ಪ್ರಮಾಣದ ಯುದ್ಧದಲ್ಲಿ ತೊಡಗಿದೆ ಎಂದು ನೆಹರೂ ಸರಕಾರಕ್ಕೆ ತಿಳಿದಾಗ ಚೀನೀ ಸೈನ್ಯ ಭಾರತದ ಒಳಗೆ ಬಹಳ ದೂರ ಬಂದಿತ್ತು. ಮದ್ದುಗುಂಡುಗಳು ಇರಲಿ, ಕಾಡುತೂಸುಗಳೂ ಇಲ್ಲದೆ, ಆತ್ಮಾರ್ಪಣೆಯ ರೀತಿಯಲ್ಲಿ ಚೀನೀ ಸೈನಿಕರ ಆತ್ಯಾಧುನಿಕ ಶಸ್ತ್ರಗಳಿಗೆ ನಮ್ಮ ಸೈನಿಕರು ಬಲಿಯಾದರು. ಸೇನೆಯ ವೈದ್ಯರೂ ಬಂದೂಕು ಹಿಡಿದು ಹೋರಾಡುವ ದಯನೀಯ ಸ್ಥಿತಿ ಭಾರತೀಯ ಸೈನಿಕರದ್ದು. ಆ ದಿನಗಳನ್ನು ತವಾಂಗ್ ಇಂದೂ ನೆನಪಿಸಿಕೊಳ್ಳುತ್ತದೆ. ಬಹುóಷಃ ಸುಭಾಸ್ ಚಂದ್ರ ಬೋಸರ ಆಶಯದಂತೆ ಬ್ರಿಟಿಷರ ಜೊತೆ ಯುದ್ಧಮಾಡಿ ಗೆದ್ದು ಸ್ವಾಂತತ್ರ್ಯವನ್ನು ಪಡೆದಿದ್ದೇ ಆಗಿದ್ದರೆ ಭಾರತ ಎಚ್ಚರಿಕೆಯಿಂದ ಇರುತ್ತಿತ್ತು. ಚೀನಾದ ಕೈಯಲ್ಲಿ ದಯನೀಯ ಸೋಲು ಅನುಭವಿಸುತ್ತಿರಲಿಲ್ಲ. ಆದರೆ ಚೀನಾದೊಂದಿಗಿನ ಸೋಲು ಮುಂದಿನ ಎರಡು ಯುದ್ಧಗಳ ವಿಜಯಕ್ಕೆ ಮೆಟ್ಟಲಾಯಿತು.
ಸಮುದ್ರ ಮಟ್ಟಕ್ಕಿಂತ 14,000 ಅಡಿ ಎತ್ತರದ ಹಿಮಾಲಯದ ಹಿಮಚ್ಚಾದಾದಿತ ಪರ್ವತ ಶ್ರೇಣಿಗಳಲ್ಲಿ ನಡೆದ ಯುದ್ಧÀ ಇದು. ಚೀನಾದ ಆಕ್ರಮಣವನ್ನು ಎದುರಿಸಲು 3225 ಕಿಲೋಮೀಟರ್ ಗಡಿಯ ಉದ್ದಕ್ಕೂ ಇದ್ದುದು ಭಾರತದ ಸೈನ್ಯದ 9 ವಿಭಾಗಗಳು ಮಾತ್ರ. ಹೀಗಾಗಿ ಅಧಿಕಾರಿಗಳನ್ನೂ ಸೇರಿಸಿ ಸುಮಾರು 3000 ಭಾರತೀಯ ಸೈನಿಕರ ಮಾರಣ ಹೋಮ ಆ ಯುದ್ಧದಲ್ಲಿ ಆಯಿತು. ಚೀನೀ ಸೈನಿಕರು ಭಾರತವನ್ನು ಆಕ್ರಮಿಸುತ್ತಾ ತವಾಂಗ್ ಮೂಲಕ 300 ಕಿಲೋಮೀಟರ್ ದೂರದ ಅಸ್ಸಾಂನ ತೇಜಪುರದವರೆಗೂ ಬಂದಿದ್ದರು. ಮಿಸಮಾರಿಯ ವಿಮಾನ ನೆಲೆಯನ್ನು ಬಾಂಬ್‍ನಿಂದ ಉಡಾಯಿಸಿದ್ದರು. ಕೊನೆಗೆ ಅಮೆರಿಕದ ದೊರೆ ಜಾನ್ ಎಫ್. ಕೆನಡಿಯವರನ್ನು ಸಹಾಯಕ್ಕಾಗಿ ನೆಹರೂರವರು ಅಂಗಾಲಾಚಬೇಕಾಯಿತು.  ಅಮೆರಿಕದಿಂದ ಯುದ್ಧಭೂಮಿಯ ಬಳಿ ಬಂದವರು ಹೇಳಿದ್ದೂ ಅಷ್ಟೇ “ಭಾರತೀಯ ಸೈನಿಕರಲ್ಲಿ ಇರುವುದು ಕೆಚ್ಚೆದೆ ಒಂದೆ. ಉಳಿದುದೆಲ್ಲವನ್ನೂ ನಾವು ಪೂರೈಸಬೇಕಾಗುತ್ತದೆ.”
ತವಾಂಗ್‍ನಲ್ಲಿ 1962ರ ಚೀನಾ ಯುದ್ಧವನ್ನು ಸ್ಮರಿಸುವವರಿದ್ದಾರೆ. ನಾವು ಕಂಡಂತೆ ತವಾಂಗ್ ನಗರದ ಬಳಿ ಒಂದು ಮತ್ತು ಅಲ್ಲಿಂದ ಸೆಲಾ ಪಾಸ್ ದಾರಿಯ ನುರಾನಂಗ್ ಎಂಬಲ್ಲಿ ಇನ್ನೊಂದು- ಹೀಗೆ ಎರಡು ಯುದ್ಧ ಸ್ಮಾರಕಗಳು ಇವೆ. ಈ ಸ್ಮಾರಕಗಳಲ್ಲಿ ಯುದ್ಧದಲ್ಲಿ ಮಡಿದವರ ಹೆಸರು ರ್ಯಾಂಕ್ ಮತ್ತು ವಯಸ್ಸು ನಮೂದಾಗಿದೆ. ಜೊತೆಗೆ ಈ ಯುದ್ಧದಲ್ಲಿ ಸತ್ತ ತವಾಂಗ್ ನಾಗರಿಕರನ್ನು ನೆನಯಲಾಗಿದೆ. ದೇಶಕ್ಕಾಗಿ ಬಲಿದಾನ ಮಾಡಿದವರಲ್ಲಿ 20-25ವಯಸ್ಸಿನ ತರುಣರೇ ಹೆಚ್ಚು.
ತವಾಂಗ್ ನಗರದ ಬಳಿಯ ಇಳಿಜಾರಿನಲ್ಲಿ ಇರುವ ಯುದ್ಧ ವೀರರ ಸ್ಮಾರಕ ಸ್ಥಳೀಯ ಬೌದ್ಧ ಧರ್ಮದ ಪದ್ಧತಿಯಂತೆ ಸ್ಥೂಪದ ಮಾದರಿಯಲ್ಲಿದೆ. ಪೂಜೆಯೂ ನಡೆಯುತ್ತಿದೆ. ಈಗಲೂ ಇಲ್ಲಿ ಸೈನ್ಯದ ನೆಲೆ ಇದೆ. ಹಲವಾರು ಸೈನಿಕರು ಈ ಸ್ಮಾರಕದ ಉಸ್ತುವಾರಿಯನ್ನು ಮಾಡುತ್ತಿದ್ದಾರೆ. ಈ ಸೈನಿಕ ನೆಲೆಯಿಂದ ಕೆಳಮುಖ ಕೊರಕಳಿಗೆ ಇಳಿದು ಮತ್ತೆÉ ಶಿಖರ ಹತ್ತುವಾಗ ಎದುರಾಗುವುದು ನುರಾ ನಂಗ್. ಇಲ್ಲಿ ಇದೆ ‘ಜಸ್ವಂತ್ ಘರ್’ ಯುದ್ಧ ಸ್ಮಾರಕ. ಮರಣೋತ್ತರ ಪರಮವೀರ ಚಕ್ರ ಪಡೆದ ರೈಫಲ್‍ಮ್ಯಾನ್ ಜಸ್ವಂತ್ ಸಿಂಗ್‍ನ ಹೆಸರಿನಲ್ಲಿ ನಿರ್ಮಿಸಲಾಗುವ ಯುದ್ಧ ಸ್ಮಾರಕ ಮತ್ತು ಜಸ್ವಂತ್‍ಗುಡಿ.

ಜಸ್ವಂತ್ ಸಿಂಗ್ ರಾವತ್‍ನ ಸಾಹಸ:
ಚೈನಾದ ಸೈನಿಕರು ಅಂತರ್ರಾಷ್ಟ್ರೀಯ ರೇಖೆಯಿಂದ 40ಕಿಲೋಮೀಟರ್ ದೂರದ ತವಾಂಗ್ ನಗರವನ್ನು ಆಕ್ರಮಿಸಿ  ಮುಂದೊತ್ತಿ ಬರುತ್ತಿದ್ದಾಗ ಚೀನೀಯರನ್ನು ಬೆಚ್ಚಿ ಬೀಳಿಸಿದ್ದು ತವಾಂಗ್ ಕಣಿವೆಯ ಮುಂಭಾಗದ ಶಿಖರದ ಕೊರಕಲಿನಿಂದ ರೈಫಲ್‍ಗಳಿಂದ ಹೊರಬರುತ್ತಿದ್ದ ಗುಂಡುಗಳು. ಭಾರತೀಯ ಸೈನ್ಯದ ಗರ್‍ವಾಲ್ ರೈಫಲ್ ವಿಂಗ್‍ನ 4ನೇ ಬೆಟಾಲಿಯನ್ ಈಗಿನ ಜಸ್ವಂತ್‍ಗರ್‍ನಲ್ಲಿ ಇದ್ದ ಜಾಗದಲ್ಲಿ ಯುದ್ಧವನ್ನು ಎದುರಿಸುತ್ತಿತ್ತು. ಮುಂಭಾಗದ ತವಾಂಗ್ ಶಿಖರದಿಂದ ಕಣಿವೆಗೆ ಇಳಿವ ಚೀನೀ ಸೈನಿಕರಿಗೆ ಈ ಜಾಗ ಮರೆಯಾಗಿತ್ತು. ಹೀಗಾಗಿ ಅನೇಕ ಚೀನೀ ಸೈನಿಕರು ಭಾರತೀಯ ಸೈನಿಕರ ಬಂದೂಕಿನಿಂದ ಸಿಡಿದÀ ಗುಂಡಿಗೆ ಬಲಿಯಾಗಿದ್ದರು. ಭಾರತೀಯ ಪಡೆ ನಾಶವಾಗಿದೆ ಎಂದು ಮುಂದೊತ್ತಿ ಚೀನೀ ಸೈನಿಕರನ್ನು ತಡೆದದು ಬಂದೂಕುಗಳಿಂದ ಹೊರತೂರುತ್ತಿದ್ದ  ಗುಂಡುಗಳು. ಚೀನೀಯರಿಗೆ ಗೊಂದಲ, ಇಲ್ಲೊಂದು ತುಕಡಿ ಈಗಲೂ ಇದೆ ಎಂಬ ಅನುಮಾನ! ಎಡಬಿಡದೆ ನಿರಂತರವಾಗಿ ಅನೇಕ ಬಂಕರ್‍ಗಳಿಂದ ಗುಂಡುಗಳು ಸಿಡಿಯುತ್ತಾ ಇತ್ತು. ಭಾರತೀಯ ತುಕಡಿಯಲ್ಲಿ ಎಷ್ಟು ಮಂದಿ ಸೈನಿಕರು ಇದ್ದಾರೆ ಎಂಬ ಮಾಹಿತಿಗಾಗಿ ಸ್ಥಳೀಯರ ಮೇಲೆ ನಿಗಾ ಇಟ್ಟರು. ಆಗ ಅವರ ಕಣ್ಣಿಗೆ ಬಿದ್ದವ ಮೊನಪಾ ಬುಡಗಟ್ಟಿನ ವೃದ್ಧ. ಆತನನ್ನು ಹಿಡಿದು ಅವನಿಗೆ ಚಿತ್ರ ಹಿಂಸೆ ನೀಡಿ ಅವನಿಂದ ಮಾಹಿತಿ ಕಕ್ಕಿಸಿದರು. ಆತ ಅಲ್ಲಿ ಇರುವುದು ಗರವಾಲ್ ರೈಫಲ್ ರೆಜಿಮೆಂಟಿನ ನಾಲ್ಕನೇ ಬೆಟಾಲಿಯನ್‍ನ ಒಬ್ಬನೇ ಒಬ್ಬ ಸೈನಿಕ ಎಂದಾಗ ಚೀನೀಯರು ಬೆಕ್ಕಸ ಬೆರಗಾಗಿದ್ದರು.

ಜಸ್ವಂತ್ ಬಂದೂಕು ಹಾರಿಸುತ್ತಿದ್ದ ಬಂಕರ್ ಗಳು 

  ಈ ಏಕಾಂಗಿ ವೀರ ಜಸ್ವಂತ್‍ಸಿಂಗ್ ರಾವತ್ ಈತ ಆಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಚೀನಿಯರ ಸೈನ್ಯ ಮುಂದೊತ್ತದಂತೆ 72 ಗಂಟೆಗಳ ತಡೆದಿದ್ದ. ಆಗ ಕೊರಕಲನ್ನು ಹತ್ತಿ ಇಳಿದು ಆತನಿಗೆ ಆಹಾರ ಒದಗಿಸುತ್ತಿದ್ದವರು ಈ ವೃದ್ಧನ ಇಬ್ಬರು ಹೆಣ್ಣು ಮಕ್ಕಳು ಸೆÉಲಾ ಮತ್ತು ನುರಾ. ಕೂಡಲೇ ವೃದ್ಧನನ್ನು ಕೊಂದು ಸೈನ್ಯದ ನೆಲೆಯತ್ತ ಧಾವಿಸಿದ ಚೀನಾ ಸೈನಿಕರ ಗುಂಡಿಗೆ ಜಸ್ವಂತ್ ಸಿಂಗ್ ರಾವತ್ ಮತ್ತು ನುರಾ ಬಲಿಯಾಗುತ್ತಾರೆ. ಸೆಲಾಳನ್ನು ತಮ್ಮ ವಶಕ್ಕೆ ಪಡೆದ ಚೀನಾದ ಬ್ರಿಗೇಡಿಯರ್ ಗರವಾಲ್ ರೈಫಲ್ ರೆಜಿಮೆಂಟಿನ ಶಸ್ತ್ರಾಗಾರ ನೆಲೆಯನ್ನು ತೋರಿಸಲು ಒತ್ತಡ ಹಾಕುತ್ತಾನೆ. ಆಕೆಯೊಂದಿಗೆ ಬ್ರಿಗೆಡಿಯರ್ ಸ್ವತಃ ತಾನೇ ನಡೆಯುತ್ತಾರೆ. ಶಿಖರದ ತುದಿಯ ಕೊರಕಲು ದಾರಿಯಲ್ಲಿ ನಡೆಯುತ್ತಿದ್ದಾಗ ಸೆಲಾ, ಬ್ರಿಗೇಡಿಯರ್ ಮೇಲೆ ದೊಪ್ಪಂತೆ ಬಿದ್ದು ಆತನನ್ನು ತಳ್ಳುತ್ತಾ ಕೊರಕಲಿಗೆ ಹಾರುತ್ತಾಳೆ! ಇಬ್ಬರೂ ಕಣಿವೆಗೆ ಬಿದ್ದು ಸಾವನ್ನಪ್ಪುತ್ತಾರೆ.



ಒಬ್ಬ ಸೈನಿಕ ಒಂದು ತುಕಡಿ ಹೋರಾಡಿದಂತೆ ಹೇಗೆ ಹೋರಾಡಿದ? ಜಸ್ವಂತ್‍ಘರ್‍ನ ಕಾವಲು ಪಡೆಯ ಪ್ರಕಾರ ಒಬ್ಬನೇ ಎಲ್ಲಾ ಬಂಕರಿಗಳಿಗೆ ತೆವಳಿಕೊಂಡು ಹೋಗಿ ಗುಂಡು ಹಾರಿಸುತ್ತಿದ್ದ. ಭಾರತೀಯ ಸೈನ್ಯದಲ್ಲಿ ಆರಂಭದಿಂದಲೂ ಶಸ್ತ್ರಾಸ್ರಗಳ ಕೊರತೆ ಇತ್ತು. ಜಸ್ವಂತ್ ಸಿಂಗ್ ಸತ್ತ ಸೈನಿಕರ ಶವಗಳ ಕೈಗಳಲ್ಲಿಂದ ಬಂದೂಕನ್ನು ತಂದು ಎಲ್ಲಾ ಬ್ಯಾರೆಕ್‍ನಲ್ಲಿ ಚೀನೀ ಸೈನಿಕರತ್ತ ಗುರಿ ಇಟ್ಟಿದ್ದ!  ಚೀನೀಯರ ಶವಗಳಿಂದಲೂ ಬಂದೂಕಗಳÀನ್ನು ತೆಗದು ತನ್ನ ಬ್ಯಾರೆಕ್‍ನಲ್ಲಿ ಅಳವಡಿಸಿ ಚೀನೀಯರ ಮಾರ್ಗದತ್ತ ಗುರಿಯಾಗಿಸಿದ. ಒಂದು ಬ್ಯಾರೆಕ್‍ನಿಂದ ಮತ್ತೊಂದು ಬ್ಯಾರೆಕ್‍ಗೆ ತೆವಲುತ್ತಾ ಸಾಗಿ ಎಲ್ಲಾ ಬ್ಯಾರೆಕ್‍ನಿಂದ ಅವರ ಸೈನ್ಯದತ್ತ ಧಾಳಿಮಾಡಿ ಅವರನ್ನು ತಡೆದ.


ಜಸ್ವಂತ್‍ಸಿಂಗ್‍ನ ಸಾಹಸವನ್ನು ಭಾರತೀಯ ಸೈನಿಕರಿಗೆ ವಿವರಿಸಿದವರು ಚೀನೀ ಸೈನಿಕರೇ!
ಸುಮಾರು 200 ಚೀನೀ ಸೈನಿಕರ ಶವಸಂಸ್ಕಾರವನ್ನು ಜಸ್ವಂತ್‍ಘರ್‍ನಲ್ಲಿ ಮಾಡಲಾಗಿದೆ.



ನುರಾನಂಗ್‍ಲ್ಲಿ ಇರುವ ಜಸ್ವಂತ್‍ಗರ್ ಎಂಬ ಯುದ್ಧ ಸ್ಮಾರಕ ದೇವಾಲಯವಾಗಿದೆ. ಇಲ್ಲಿ ಜಸ್ವಂತ್‍ಸಿಂಗ್ ರಾವತ್‍ನ ಸಮವಸ್ತ್ರ, ಬೂಟು ಹಾಗೂ ಕಿಟ್ ಇವೆ. ಆತನ ನೀಟಾದ ಬಿಡಿಸಿಟ್ಟ ಹಾಸಿಗೆಯ ಮೇಲೆ ಆತನ ಪೋಟೋ ಇದೆ. ಇಲ್ಲಿ ಹೋರಾಡಿದ ಇತರ ಅಧಿಕಾರಿ ಮತ್ತು ಸೈನಿಕರ ಫೊಟೋ ಮತ್ತು ಫಲಕಗಳು ಇವೆ.



ಜಸ್ವಂತ್ ಗುಡಿ

ಜಸ್ವಂತ್ ಸಿಂಗ್‍ನ ಶವಸಂಸ್ಕಾರ ಮಾಡಿದ ಸ್ಥಳದಲ್ಲಿ ಪ್ರತ್ಯೇಕವಾಗಿ ಜಸ್ವಂತ್‍ನ ಪುಟ್ಟ ಗುಡಿ ನಿರ್ಮಾಣ ಆಗಿದೆ.

 ಇಲ್ಲಿ ಸೈನಿಕರಿಂದ ನಿತ್ಯ ಪೂಜೆ ಆಗುತ್ತಿದೆ, ಇಲ್ಲಿಯೂ ಜಸ್ವಂತನ ಫೋಟೋ ಇದೆ. ಬಳಿಯಲ್ಲಿ ಆತ ಬಳಸಿದ ಕೆಲವು ಬಂಕರ್‍ಗಳಿವೆ.
ಭಾರತ ಸರಕಾರ ಮರಣಾನಂತರ ರೈಫಲ್‍ಮ್ಯಾನ್ ಲ್ಯಾನ್ಸ್‍ನಾಯಕ್ ಜಸ್ವಂತ್ ಸಿಂಗ್‍ಗೆ ‘ಪರಮ ವೀರಚಕ್ರ’ ಕೊಟ್ಟ್ಟು ಗೌರವಿಸಿತು ಮರಣಾನಂತರ ಮೇಜರ್ ಜನರಲ್ ಪದವಿಗೆ ನೀಡಿದರು. ಈತ ಮೇಜರ್ ಜನರಲ್ ಹುದ್ದೆ ಪಡೆದ ಏಕೈಕ ಭಾರತೀಯ ಸೈನಿಕ. ಆದರೆ ದೇಶಕ್ಕಾಗಿ ಹೋರಾಡಿದ ಇಬ್ಬರು ತರುಣಿಯರನ್ನು ಭಾರತ ಸರಕಾರ ಗುರುತಿಸಿ ಗೌರವಿಸದಿರುವುದು ದುರಂತ. ಇದಕ್ಕೆ ಕಾರಣ ಅವರು ಹೆಣ್ಣಾಗಿರುವುದು. ಈ ಬಗ್ಗೆ ಜಸ್ವಂತ್ ಘರ್‍ನ ಸೈನಿಕರಲ್ಲಿ ಬೇಸರ ವ್ಯಕ್ತ ಪಡಿಸಿದರೆ “ ಏನು ಮಾಡುವುದು ಮೇಡಮ್. ಅವರು ಮಹಿಳೆಯರಲ್ಲವೆ? ” ಎಂದ. ಸೈನಿಕನ ಮಡದಿಯಾಗಿ ಸೈನ್ಯವನ್ನು ಹತ್ತಿರದಿಂದ ಬಲ್ಲ ನನಗೆ ಅವರ ಅಸಹಾಯಕತೆ ಬೇಗನೆ ಅರ್ಥವಾಯಿತು.
ಇಲ್ಲಿ ತವಾಂಗ್‍ಗೆ ಹೋಗುವ ಸರತೆಯಲ್ಲಿ ಜಸ್ವಂತ್ ಹೆಸರಿನಲ್ಲಿ ಸೈನಿಕರು ನಡೆಸುವ ಟೀ ಸ್ಟಾಲ್ ಆ ಚಳಿಯಲ್ಲಿ ತವಾಂಗ್ ಹೋಗುವ ಪ್ರಯಾಣಿಕರಿಗೆ ಮತ್ತು ಪ್ರವಾಸಿಗರಿಗೆ ಬೆಚ್ಚನೆಯ ಆತಿಥ್ಯ. ಜಸ್ವಂತ್‍ಘರ್‍ನ್ನು ಪಂಜಾಬ್ ರೆಜಿಮೆಂಟಿನ 14 ಮಂದಿ ಸೈನಿಕರ ಸುಪರ್ದಿಯಲ್ಲಿ ಇದೆ. ಇದೇ ಭಾಗದಲ್ಲಿ ಸೈನ್ಯದ ಜಸ್ವಂತ್ ಇನ್ಸ್‍ಟೀಟ್ಯೂಟ್ ಇವೆ.




ಸಮುದ್ರ ಮಟ್ಟದಿಂದ ಸುಮಾರು 14,000 ಅಡಿ ಎತ್ತರದಲ್ಲಿರುವ ಪ್ರವಾಸಿ ಸ್ಥಳ `ಸೆಲಾ ಪಾಸ್’ ಹೆಸರು ಸೆಲಾಳ ನೆನಪಿನಲ್ಲಿ ಅಲ್ಲ ಎನ್ನುತ್ತಾರೆ. ಈ ಬಗ್ಗೆ ಖಚಿತ ಮಾಹಿತಿ ಇಲ್ಲ.  ಇಲ್ಲಿಯ ರಸ್ತೆಯ ಮೇಲೆ ‘ನುರಾ ರಸ್ತೆ’  ಎನ್ನುವ ಫಲಕ ಇದೆ. ಜಸ್ವಂತ್ ಘರ್ ಎಂಬ ಈಗಿನ ಯುದ್ಧ ಸ್ಮಾರಕ ಇದ್ದ ಸ್ಥಳದ ಹೆಸರು ನುರಾನಂಗ್. ಹೀಗಾಗಿ ಈ ಇಬ್ಬರು ಸೋದರಿಯರು, ಮತ್ತು ಅವರ ತಂದೆ ದೇಶಕ್ಕಾಗಿ ಪ್ರಾಣ ತೆತ್ತರೂ ದೇಶ ಅವರನ್ನು ಸ್ಮರಿಸಲಿಲ್ಲ. ಆದರೆ ತವಾಂಗ್‍ನ ಜನತೆ ಈ ಹೆಣ್ಮಕ್ಕಳನ್ನು  ಮರೆಯಲಾರರು. ಅದರಲ್ಲೂ ರೈಫಲ್ ಮ್ಯಾನ್ ಜಸ್ವಂಗ್ ಸಿಂಗ್ ರಾವತ್ ಆ ಇಬ್ಬರು ಸೋದರಿಯರಿಗೆ ಋಣಿಯಾಗಿರಬಹುದು!

(ಸೈನಿಕರ ಪ್ರಕಾರ ಸೈನ್ಯದಲ್ಲಿ ಆಗಿನ ಕಾಲದಲ್ಲಿ ಮಹಿಳೆಯರು ಸೈನ್ಯದ ಯಾವುದೇ ಚಟುವಟಿಕೆಗಳಲ್ಲಿ ಬಾಗವಹಿಸುವಂತಿರಲಿಲ್ಲ.  ಹೀಗಾಗಿ ಹಣ್ಮಕ್ಕಳ ಬಲಿದಾನವನ್ನು ಸ್ಮರಿಸಿದ್ರೂ ತಪ್ಪು ಬಾವನೆಗೆ ಎಡೆಯಾಗುತ್ತಿತ್ತು. ಹೀಗಾಗಿ ಆ ಹುಡುಗಿಯರು ತ್ಯಾಗ ಈ ವಲಯದಲ್ಲಿ ಮಾತ್ರ  ಉಳಿಯಿತು
2013 -ಸುಧಾದಲ್ಲಿ ಪ್ರಕಟ ಆದ ಬರಹ

ಡಾ. ಇಂದಿರಾ ಹೆಗ್ಗಡೆ .
9845577553

No comments:

Post a Comment