Saturday, June 20, 2020

“ಬಂಟರು ಒಂದು ಸಮಾಜೋ ಸಾಂಸ್ಕøತಿಕ ಅಧ್ಯಯನ – ಕ್ಷೇತ್ರಕಾರ್ಯ -ಬಂದಡ್ಕ

“ಬಂಟರು ಒಂದು ಸಮಾಜೋ ಸಾಂಸ್ಕøತಿಕ ಅಧ್ಯಯನ – ಕ್ಷೇತ್ರಕಾರ್ಯ -ಬಂದಡ್ಕ

ಕೇರಳದಲ್ಲಿರುವ ಕೊನೆಯ ಬಂಟರ ಮನೆಗೆ ಹೋಗಿ ಸಂಸ್ಕøತಿ ಸಂಪ್ರದಾಯಗಳ ಬಗ್ಗೆ ತಿಳಿದುಕೊಳ್ಳಲು ಕಯ್ಯಾರ ಶಂಕರ ರೈ ಅವರು ಸಲಹೆ ನೀಡಿದರು. ಆ ಮನೆಯ ಹೆಸರು ಬಂದಡ್ಕ. ಅದು ಹೊಸದುರ್ಗ ತಾಲೂಕಿನಲ್ಲಿದೆ. ಕಾಸರಗೋಡಿನಿಂದ 40 ಕಿಲೋಮೀಟರ್ ದೂರ ಇದೆ. ಕಾಸರಗೋಡಿನ ಜಿಲ್ಲೆಯಲ್ಲಿ ಇರುವ ಕೊನೆಯ ಬಂಟರ ಗುತ್ತು. ಹೀಗಾಗಿ ಅಲ್ಲಿಗೆ ಹೋಗಲೇ ಬೇಕು ಎನ್ನುವುದು ಕಯ್ಯಾರ ಕಿಞ್ಣ್ಣರೈ ಅವರ ಸೋದರ ನಿವೃತ್ತ ಅಧ್ಯಾಪಕರಾದ ಶಂಕರ ರೈ ಅವರ ಸಲಹೆ.
“ಅಲ್ಲಿಗೆ ಹೋಗುವ ದಾರಿ?”
“ನೀವು ಕಾಸರಗೋಡು ಪೇಟೆ ದಾಟಿ, ಮುಂದೆ ಹೋಗಿ. ಹಾಗೇ ಚಂದ್ರಗಿರಿ ಹೊಳೆಯನ್ನು ದಾಟಿ ಹೋಗಿ”
“ಚಂದ್ರಗಿರಿ ತೀರದ ಈಚೆ ಮಾತ್ರ ಬಂಟರು ಅರ್ಥಾತ್ ತುಳುವರ ಸ್ವಾಮ್ಯತೆ ಎನ್ನುತ್ತಾರಲ್ಲ”
“ಹಾಗೇನಿಲ್ಲ. ಚಂದ್ರಗಿರಿ ನದಿ ದಾಟಿ ಈಚೆ ಬಂದರೆ ಮಲೆಯಾಳಿ ಮಹಿಳೆಯರ ಜಾತಿ ಹೋಗುತ್ತದೆ ಎಂದು ಹೇಳುತ್ತಾರೆಯೇ ವಿನಃ ನಮ್ಮ ಸ್ವಾಮ್ಯತೆ ಚಂದ್ರಗಿರಿ ಹೊಳೆ ದಾಟಿದ ಮೇಲೆ ಇಲ್ಲ ಎಂದಲ್ಲ.”
“ಸರಿ. ಚಂದ್ರ ಗಿರಿ ದಾಟಿ... ಮುಂದೆ”
“ ಚಂದ್ರಗಿರಿ ನದಿ ದಾಟಿ ಇನ್ನೂ ಮುಂದೆ ಹೋಗಿ. ಸ್ವಲ್ಪ ದೂರ ಹೋದಾಗ ಪೊಯಿನಾಚಿ ಹೋಗುವ ಬೋರ್ಡು ಕಾಣುತ್ತದೆ. ನೀವು ಅಲ್ಲಿ ಮೂಡು ದಿಕ್ಕಿನ ರಸ್ತೆಗೆ ಚಲಿಸಿ ಪ್ರಯಾಣಿಸಿದರೆ ಪೊಯಿನಾಚಿ ಸಣ್ಣ ಪೇಟೆ ಸಿಗುತ್ತದೆ. ಅಲ್ಲಿಂದ ಇನ್ನೂ ಪ್ರಯಾಣ ಬೆಳಸಿ ಮೂಡುದಿಕ್ಕಿಗೆ. ಆಗ ಅಲ್ಲಿ ಬಂದಡ್ಕ ಪೇಟೆ ಸಿಗುತ್ತದೆ. ಬಂದಡ್ಕ ಪೇಟೆಯಲ್ಲಿ ಯಾರಿಗಾದರೂ ಕೇಳಿ “ಬಂದಡ್ಕ ಗುತ್ತು ಎಲ್ಲಿ?” ಎಂದು. ಯಾರು ಬೇಕಾದರೂ ಹೇಳುತ್ತಾರೆ. ಅದು ಬಂಟರ ಕೊನೆಯ ಗುತ್ತು ಮನೆ.”

ನನ್ನ ಓರಗೆಯ ನನ್ನ ನಾದಿನಿ ಕಸ್ತೂರಿಯೊಂದಿಗೆ ಬಂದಡ್ಕ ಹುಡುಕಲು ಸಿದ್ಧತೆ ನಡೆಸಿದೆ. ಕಾರ್ ಮಂಗಳೂರಿನಿಂದ ಹೊರಟ ನಮ್ಮ ಗಾಡಿಯ ಸಾರಥ್ಯವನ್ನು ಕಸ್ತೂರಿಯ ಮಗ ನಿಸ್ಚಿತ್ ವಹಿಸಿದ.
ಮಂಗಳೂರಿನಿಂದ ಕಾಸರಗೋಡಿಗೆ 53.4 ಕಿಲೋಮೀಟರ್
ಮಂಗಳೂರಿನಿಂದ ಪೊಯಿನಾಚಿಗೆ 65 ಕಿಲೋಮೀಟರ್ ಇತ್ತು

ಕಾರು ಪೊಯಿನಾಚಿ ದಾಟಿದ ಮೇಲೆ ಹಸಿರು ಸಿರಿ ದಟ್ಟವಾಗಿತ್ತು.

ಮಾರ್ಗದರ್ಶಿಯವರು ನೀಡಿದ ಸಲಹೆಯಂತೆ ಪೊಯಿನಾಚಿಯಿಂದ ಬಂದಡ್ಕ ಪೇಟೆ ತಲುಪಿದೆವು. ಅಲಲಿ ವಿಚಾರಿಸಿದಾಗ ಪೇಟೆಯ ಹುಡುಗ ಮಗ್ಗುಲಲ್ಲಿ ಇದ್ದ ಬಂದಡ್ಕ ಗುತ್ತು ತೋರಿಸಲು ತನೇ ಹೊತೆಗೆ ನಡೆದ. ಹೀಗೆ ಸುಲಭದಲ್ಲಿ ಗುತ್ತು ದೊರಕಿತು.
ಆ ಮನೆಯ ಯಜಮಾನ ದಂಪತಿಗಳು ನಮ್ಮನ್ನು ಕಂಡು ಬಹಳ ಆನಂದ ಪಟ್ಟರು. ಅಪರಿಚಿತರೆಂಬ ಸಂಕೋಚವನ್ನು ತೋರಲಿಲ್ಲ. ಮನೆಗೆ ಮದುವೆ ಮಾತನಾಡಲು ಬಂಧ ಬಂಧುವಿನಂತೆ ಸಂಭ್ರಮ ಪಟ್ಟರು. “ಸಾಮಾನ್ಯವಾಗಿ ಕಾಸರಗೋಡಿನವರೆಗೆ ಕರ್ನಾಟಕ, ಕನ್ನಡಿಗರು ಎಂದು ಪರಗಣಿಸುತ್ತಾರೆ. ನಮ್ಮನ್ನು ಕನ್ನಡಿಗರೆಂದು ಯಾರೂ ಪರಿಗಣಿಸುತ್ತಿಲ್ಲ. ಹೆಚ್ಚೇಕೆ ತುಳುವರೆಂದೂ ತುಳುವರಾಗಲೀ, ಬಂಟರು ಎಂದೂ ಬಂಟರಾಗಲೀ ಪರಿಗಣಿಸುವುದಿಲ್ಲ.’ ಎಂದು ನೋವಿನಿಂದ ಆಡಿದ ಮಾತು ನಮಗೆ ತಟ್ಟಿತು.
“ ಕರ್ನಾಟಕ ಏಕೀಕರಣ ಸಂದರ್ಭದಲ್ಲೂ ಕಾಸರಗೋಡುವರೆಗೆ ಮಾತ್ರ ಹೋರಾಟದ ಕಿಚ್ಚು ಇತ್ತು, ಹೊಸದುರ್ಗ ಬಂದಡ್ಕ ಕನ್ನಡ ನಾಡು ಎಂಬುದು ಯಾರೂ ನೆನಪಲ್ಲಿ ಇಟ್ಟಿಲ್ಲ. ನೀವು ಹೆಂಗುಸರು ನಮ್ಮನ್ನು ಹುಡುಕಿ ಬಂದಿರಿ. ನಮ್ಮನ್ನು ಬಂಟರು ಎಂದು ಪರಿಗಣಿಸಿದಿರಿ. ನಮಗೆ ಬಹಳ ಆನಂದವಾಯಿತು” ಎಂದರು ು ಆಪ್ತತೆಯಿಂದ.
“ಇಲ್ಲ. ಬರೇ ಹೆಂಗುಸರಲ್ಲ ನಾವು. ನಮ್ಮ ಜೊತೆ ಗಂಡು ಮರಿ ಇದೆ” ಎಂದೆ ನಾನು ಅವರ ಮನಸ್ಸು ಅರಳಿಸಲು.
ಅವರ ಮಡದಿ ನಮಗೆ ಊಟದ ವ್ಯವಸ್ಥೆಯನ್ನು ಮಾಡಲು ಮುಂದಾದರು. ನಾವು ಬೇಡ ಎನ್ನಲಿಲ್ಲ.
ಈ ಮಧ್ಯೆ ನಾವು ದೇವಸ್ಥಾನಕ್ಕೆ ಹೋಗೋಣ ಅಂದರು ಆಳ್ವ ಅವರು.
ಅದು ಸುಬ್ರಹ್ಮಣ್ಯ ದೇವಸ್ಥಾನ. ಬಂದಡ್ಕ ಗುತ್ತು ಮನೆಯ ಕುಟುಂಬದ ದೇವಸ್ಥಾನ. ನಾವು ಎಲ್ಲರೂ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ನಡೆದೆವು. ಬಂದಡ್ಕ ಗುತ್ತಿನ ಬಳಿಯೇ ಇತ್ತು ಸುಬ್ರಹ್ಮಣ್ಯ ದೇವಸ್ಥಾನ.
ನಾನು ದೇವಸ್ಥಾನದ ಒಳಗೆ ಹೋಗಲು ಕೊಡಿಮರದ ಮುಂದಿನ ಮರದ ಗೇಟಿನ ಬಾಗಿಲು ತಳ್ಳಿದೆ.
‘ಬೇಡ...ಬೇಡ ನಾವು ಒಳಗೆ ಹೋಗುವ ಹಾಗಿಲ್ಲ’ ಎಂದರು ಆಳ್ವರು.
ನನಗೆ ಅಚ್ಚರಿ. “ನೀವು?” ಅಂದೆ ನಾನು.
‘ನಾನು ಕೂಡಾ. ಇಲ್ಲೇ ನಿಲ್ಲುವುದು ಇದಕ್ಕಿಂತ ಮುಂದೆ ಹೋಗುವುದಿಲ್ಲ.” ಎಂದರು.
ನಾವೆಲ್ಲಾ ಹೊರಗಡೆ ಕೊಡಿಮರದ ಕ್ಷೇತ್ರದಲ್ಲಿ ನಿಂತೆವು. ನನಗೋ ಆಶ್ಚರ್ಯ. ಮಂಗಳೂರು ಕಡೆ ನಾವು (ಬಂಟರು)ಗರ್ಭಗುಡಿಯ ಬಾಗಿಲ ಬಳಿ ಹೊಸಿಲು ಮುಂದೆ ನಿಲ್ಲಬಹುದಿತ್ತು. ಈ ಮಾತನ್ನು ಆಳ್ವರವರ ಬಳಿ ನಾನು ಹೇಳಿದೆ. “ನೀವು ಈ ದೇವಸ್ಥಾನದ ಆಡಳಿ ತಮೋಕ್ತೇಸರ ಮಾತ್ರವಲ್ಲ. ಈ ದೇವಸ್ಥಾನ ನಿಮ್ಮ ಕುಟುಂಬದ ದೇವಸ್ಥಾನ ಅಂದಿರಿ. ನಿಮಗೇ ಒಳಾಂಗಣಕ್ಕೆ ಪ್ರವೇಶ ಇಲ್ಲ. ಯಾಕೆ ಹೀಗೆ?” ಎಂದೆ.

ಇಲ್ಲಿ ಹಾಗೆಯೇ. ಕೇರಳದ ಬ್ರಾಹ್ಮಣರು ನಮ್ಮೂರಿನ ಬ್ರಾಹ್ಮಣರಿಗಿಂತ ಸ್ವಲ್ಪ ಮಡಿ ಜಾಸ್ತಿ” ಎಂದರು.
ನಾನು ಹೇಗೆ ಪ್ರತಿಕ್ರಿಯಿಸಲಿ. ನನಗೆ ಸ್ವಾಮಿ ವಿವೇಕಾಂದರ ನೆನಪಾಯಿತು. ಅವರ ಕೇರಳದ ಅನುಭವಗಳನ್ನು ದಾಖಲಿಸಿ ಭಾರತೀಯರ ಮಡಿಯ ಬಗ್ಗೆ ನೋವನ್ನು ಹೊರಹಾಕಿದ್ದರಲ್ಲ.

ನನಗೆ ಗೊತ್ತಿದ್ದಂತೆ ನಂಬೂದಿರಿಗಳು ನಾಯರ್ ಹೆಣ್ಣುಗಳೊಂದಿಗೆ ಸಂಸಾರ ಹೂಡುತ್ತಾರೆ. ಅವರಿಗೆ ಹುಟ್ಟಿದ ಮಕ್ಕಳ ಹೊಣೆಗಾರಿಕೆ ಹೊರುತ್ತಾರೆ. ಆದರೂ ಮಡಿಯ ಹೆಸರಲ್ಲಿ ಈ ಸಾಮಾಜಿಕ ತಾರತಮ್ಯ? ನನ್ನ ಮನಸ್ಸಲ್ಲಿ ಮೂಡಿದ ತಾಕಲಾಟವನ್ನು ಅಲ್ಲೇ ಅದುಮಿದೆ.
ಅಲ್ಲಿರಲಾಗಲಿಲ್ಲ. ಆದರೂ ದೇವಸ್ಥಾನದ ಪರಿಸರ ನೋಡಲೇಬೇಕು. ಹಳ್ಳಿಯ ನಡುವೆ ಇರುವ ದೇವಸ್ಥಾನ, ಹಸಿರು ಸಿರಿಯ ನಡುವೆ ಇರುವ ದೇವಸ್ಥಾನ ಇದು.
ಮನೆಗೆ ಬಂದಾಗ ಅಡುಗೆ ಸಿದ್ಧವಾಗಿತ್ತು, ಸಸ್ಯಹಾರಿ ಭೂರಿ ಬೋಜನ. ನನಗಾಗಿ.
ಊಟ ಮುಗಿಸಿ ಸುಬ್ರಹ್ಮಣ್ಯ ದೇವಸ್ಥಾನದ ದಾಖಲೆ ತೆಗೆದರು. ಕೇರಳ ಸರಕಾರದ ಜೊತೆಗೆ ನಡೆದ ಪತ್ರ ವ್ಯವಹಾರದ ಪ್ರತಿಗಳನ್ನು ತೋರಿಸಿದರು. ಕೇರಳದ ಹೈಕೋರ್ಟಲ್ಲಿ ಈ ಸುಬ್ರಹ್ಮಣ್ಯ ದೇವಸ್ಥಾನ ಬಂದಡ್ಕ ಕುಟುಂಬದ ಖಾಸಗಿ ದೇವಸ್ಥಾನ ಎಂದು ಇವರ ಪರವಾಗಿ ತೀರ್ಪು ನೀಡಿತ್ತು. ಹೀಗಾಗಿ ದೇವಸ್ಥಾನದ ಹಕ್ಕುಗಳು ಈ ಕುಟುಂಬಕ್ಕೆ ಉಳಿಯಿತು.
ಇದೇ ದಿನಗಳಲ್ಲಿ ಧರ್ಮಸ್ಥÀಳದಲ್ಲಿ ಮಂಜುನಾಥ ಸ್ವಾಮಿಯ ದೇವಸ್ಥಾನವನ್ನು ಮುಜರಾಯಿ ಇಲಾಖೆ ವಶಪಡಿಸಿಕೊಳ್ಳುವ ಪ್ರಕ್ರಿಯೆ ಮುಂದುವರಿಸಿತ್ತು. ಆಗಿನ ಧರ್ಮಸ್ಥಳದ ಧರ್ಮಾಧಿಕಾರಿಯವರು ಆಳ್ವರಿಗೆ ಪತ್ರ ಬರೆದು “ಸುಬ್ರಹ್ಮಣ್ಯ ದೇವಸ್ಥಾನ ಬಂದಡ್ಕ ಕುಟುಂಬದ ದೇವಸ್ಥಾನ” ಎಂಬ ಕೇರಳ ಉಚ್ಚನ್ಯಾಯಾಲಯದ ತೀರ್ಪಿನ ಪ್ರತಿ ಕೇಳಿ ಮತ್ತು ವಿವರ ಕೇಳಿ ಪತ್ರ ಬರೆದಿದ್ದರು. ಆ ಪತ್ರ ಇವರ ಸಂಗ್ರಹದಲ್ಲಿ ಇತ್ತು. ಅದನ್ನು ನನಗೆ ಆಳ್ವರು ತೋರಿಸಿದರು.

ನಾವು ಕುಳಿತು ಮಾತನಾಡುತ್ತಿದ್ದಾಗ ಅಲ್ಲಿಗೆ ತುಳು ಗೌಡರೊಬ್ಬರು ಬಂದವರು ನಮ್ಮ ಜೊತೆ ಮಾತಿಗೆ ಅವರೂ ಜೊತೆಯಾದರು. ಆ ಭಾಗದಲ್ಲಿ ಇರುವ ಕನ್ನಡ ತುಳು ಜನರು, ಮಲೆಯಾಳಿಗಳು, ಬಂದಡ್ಕ ಗುತ್ತು ಮನೆಯವರ ಜಮೀನ್ದಾರಿಕೆ ಮತ್ತು ಗ್ರಾಮ ವ್ಯವಸ್ಥೆ, ಕಾಸರಗೋಡು ಕೇರಳಕ್ಕೆ ಸೇರಿದಮೇಲೆ ಸರಕಾರಿ ದಾಖಲೆಗಳಲ್ಲಿ ಮರಯಾಗುತ್ತಿರುವ ಕನ್ನಡ -ಮುಂತಾದ ವಿವರ ನೀಡಿದರು.

ಆಳ್ವರ ಕುಟುಂಬದ ತಾಯಿ ಮಗಳಿಬ್ಬರು ಬಹಳ ಹಿಂದೆ ಈ ಭಾಗಕ್ಕೆ ಬಂದಿದ್ದರು. ಅವರು ತಮ್ಮ ಮಗಳನ್ನು ಬ್ರಾಹ್ಮಣನಿಗೆ ಮದುವೆ ಮಾಡಿ ಕೊಟ್ಟಿದ್ದ ವಿವರವೂ ಇಲ್ಲಿ ದೊರಕಿತು.
ಬಂದಡ್ಕದ ಬಹು ದೊಡ್ಡ ಜಮೀಬ್ದಾರಿ ಕುಟುಂಬ. ಅಳಿದುಳಿದ ಭೂಮಿಯಲ್ಲಿ ಈ ಕುಟುಂಬದ ಹಲವು ಕವಲುಗಳು ಇದೇ ಪರಿಸರದಲ್ಲಿ ನೆಲೆಸಿರುತ್ತಾರೆ.

ಈ ಮನೆಗೆ ಊರ ಪಟೇಲಗಿರಿ ಇತ್ತು. ದಾಖಲೆ ಪತ್ರ ಮತ್ತು ಇನ್ನಿತರ ವ್ಯವಹಾರಗಳು ಕನ್ನಡದಲ್ಲಿ ಮಾತ್ರ ನಡೆಯುತ್ತಿತ್ತು ಎಂದು ವಿವರಿಸಿದರು. ಈಗಿನವರು ಕಾಸರಗೋಡಿನವರೆಗೆ ಮಾತ್ರ ಕನ್ನಡನಾಡು ಆಗಬೇಕೆಂದು ಹೋರಾಡುತ್ತಾರೆ ನಮ್ಮ ಸಂಕಟವನ್ನು ಯಾರೂ ಕೇಳುವುದಿಲ್ಲ ಎನ್ನುತ್ತಾರೆ ಆಳ್ವರವರು.

ಇವರ ಸಂಬಂಧಿಕರ ಇನ್ನೆರಡು ಮನೆತನಗಳು ಶ್ರೀಮಂತ ಮಲೆಯಾಳಿ ನಾಯರ್ ಮನೆತನವಾಗಿ ಪ್ರಸಿದ್ಧಿ ಪಡೆದಿದೆಯಂತೆ..ಹೀಗೆ ವಿವರಿಸುತ್ತಾ ಹೋದರು.

ನಾವು ಅಲ್ಲಿಂದ ಮರಳುವಾಗ ಬಂಧುವೊಬ್ಬರು ಅವರನ್ನಗಲಿ ದೂರ ಹೋಗುವಂತೆ ವಿಷಾದಿಸಿದರು.

No comments:

Post a Comment