Saturday, June 20, 2020

ಇತ್ತಡ ಮುಲ್ಪ ಸಯತಡ ಅಲ್ಪ: ಬೆರ್ಮೆರೆಡಪ್ಪ’ (ಇದ್ದರೆ ಇಲ್ಲಿ. ಸತ್ತರೆ ಅಲ್ಲಿ ಬೆರ್ಮರೆ ಬಳಿ’)

‘ಇತ್ತಡ ಮುಲ್ಪ ಸಯತಡ ಅಲ್ಪ: ಬೆರ್ಮೆರೆಡಪ್ಪ’
(ಇದ್ದರೆ ಇಲ್ಲಿ. ಸತ್ತರೆ ಅಲ್ಲಿ ಬೆರ್ಮರೆ ಬಳಿ’)

ಇದ್ದರೆ ಇಲ್ಲಿ. ಸತ್ತರೆ ಅಲ್ಲಿ ಬೆರ್ಮರೆ ಬಳಿ ಇದು ತುಳುವ ನಂಬಿಕೆ. ಕ್ಷೇತ್ರಕಾರ್ಯ ಸಂದರ್ಭದಲ್ಲಿ ನನಗೆ ಅನೇಕರಿಂದ ದೊರಕಿದ ಮಾಹಿತಿ.

ನನ್ನ ಬಂಟರು ಒಂದು ಸಮಾಜೋ ಸಾಂಸ್ಕøತಿಕ ಅಧ್ಯಯನದಲ್ಲಿ ನನ್ನ ಬಾಲ್ಯದಲ್ಲಿ ನನ್ನ ಮನೆ ಎಳತ್ತೂರು ಗುತ್ತಿನಲ್ಲಿ ಒಂದು ವರ್ಷದಲ್ಲಿ 9 ಸಾವಾದ ವಿವರ ನೀಡಿದ್ದೇನೆ.

ಆ ಸಾವು ಗಮನಿಸಿದ ನನ್ನ ಬಾಲ ಮನಸ್ಸು ಸೃಷ್ಠಿಯನ್ನು ಪ್ರಶ್ನಿಸಿತ್ತು. “ನೀನೇ ಜೀವ ನೀಡಿದೆ, ನೀನೇ ಜೀವ ತೆಗೆದೆ. ಇದೆಂತಹ ಆಟ’ ಎಂದು. ತುಳುವರ ನಂಬಿಕೆಯಂತೆ ಹುಟ್ಟು ಸಾವುಗಳ ಕತೃ ಬೆರ್ಮೆರ್. ನಾಗ ಬೆರ್ಮೆರ್. ಅರ್ಥಾತ್ ನಾಗ! ಅಂದರೆ ಸೃಷ್ಟಿಯೇ.

ಈ ಬಾರಿ 15 ದಿನದ ಅಂತರದಲ್ಲಿ ನಾಲ್ಕು ಸಾವಾಯಿತು. ಮೊದಲನೇ ಸಾವು ಸುಮಾರು 60ರ ಮೇಲಿನ ವಯಸ್ಸಿನವನದು ಅನಾರೋಗ್ಯ ಇತ್ತು. 2ನೆಯ ಸಾವು ಸುಮಾರು 77ರ ವಯಸ್ಸಿನವನದು. ಆನರೋಗ್ಯದಿಂದ ಒಂದೆರಡು ವರ್ಷ ಹಾಸಿಗೆ ಹಿಡಿದಿದ್ದರಂತೆ. ಇವರು ಇಬ್ಬರೂ ಮುಂಬಯಿಯಲ್ಲಿ ನೆಲೆಯಾದವರು. ಮತ್ತೊಬ್ಬರು ವೃದ್ಧೆ. ಕಟೀಲಿನಲ್ಲಿ ವಾಸ.
ಊರಿನಲ್ಲಿ ನಿರೀಕ್ಷಿತ ಸಾವು.

ಕೊನೆಯದ್ದು 3 ದಿನದ ಹಿಂದೆ ನಡೆದ ಸಾವು ಅನಿರೀಕ್ಷಿತ. 23ರ ತರುಣ. ಪುಣೆಯಿಂದ ಮುಂಬಯಿಯಲ್ಲಿ ನೆಲಸಿರುವ ತಾಯಿಯನ್ನು ಭೇಟಿಯಾಗಲು ಬೈಕ್ ನಲ್ಲಿ ಪಯಣಿಸುತ್ತಿದ್ದಾಗ ಥಾನೆಯಲ್ಲಿ ಎದುರಿಸಿದ ಅಪಘಾತ. ಸ್ಥಳದಲ್ಲಿಯೇ ಮೃತ್ಯುವಶ.

ಈಗ ಈ ನಾಲ್ಕು ಸಾವಿಗೆ ಬೊಜ್ಜ ಒಟ್ಟಗೇ ಮಾಡ ಬೇಕು ಎನ್ನುವುದು ಪದ್ಧತಿ. ಆ ಪದ್ಧತಿಯನ್ನೂ ಈಗಲೂ ಇಲ್ಲಿ ನಮ್ಮ ಮನೆಯಲ್ಲಿ ಮುಂದುವರಿಸುತ್ತಿದ್ದಾರಂತೆ.
ಹೀಗಾಗಿ ಸರದಿ ಸಾಲಲ್ಲಿ ಸತ್ತ ಯಾರಿಗೂ ಬೊಜ್ಜ ಆಗಿಲ್ಲ

ಕೊರೋನಾದಿಂದಾಗಿ ಅವರವರ ಮನೆಯಲ್ಲಿಯೇ ಬೊಜ್ಜ ಮಾಡಿದರೂ ಸತ್ತವರ ಗಾಳಿಯನ್ನು ಮನೆಯ ಒಳಗೆ ಕರೆಯುವ ವಿಧಿಯನ್ನು ನಾಲ್ವರಿಗೂ ಒಟ್ಟಿಗೇ ಗುತ್ತಿನಾರರ ಯಜಮಾನಿಕೆಯಲ್ಲಿ ಗುತ್ತು ಮನೆಯಲ್ಲಿ ಮಾಡಲಿದ್ದಾರೆ ಎಂಬ ಸುದ್ದಿ ಬಂದಿದೆ. ಈಗಾಗಲೇ ಸತ್ತು ಸಾವಿನ ಮನೆಯಲ್ಲಿ ಇರುವ ಹಿರಿಯರ ಜೊತೆ ಹೊಸಬರನ್ನು ಸೇರಿಸುವ ವಿಧಿ ಇದು. ‘ಉಲಯಿ ಲೆಪ್ಪುನು’ (ಒಳಗೆ ಕರೆಯುವುದು) ತುಳುವರಿಗೆ ‘ಸಾವಿನ ಮನೆ ಎಂದರೆ ನಾಗಬೆರ್ಮರ ಚಿತ್ತೇರಿ! ನಾಗಬ್ರಹ್ಮ ಸ್ಥಾನ, ಬೆರ್ಮೆರ ನೆಲೆ!’
ಇತ್ತಡ ಮುಲ್ಪ ಸಯಿತಡ ಅಲ್ಪ: ಬೆರ್ಮೆರೆಡಪ್ಪ’
(ಇದ್ದರೆ ಇಲ್ಲಿ. ಸತ್ತರೆ ಅಲ್ಲಿ ಬೆರ್ಮರೆ ಬಳಿ’)

ಮಾತೃ ವಂಶಿಯತೆ ಎಂದರೆ ಇದೇ….

No comments:

Post a Comment