ಕ್ಷೇತ್ರ ಕಾರ್ಯದಲ್ಲಿ ನಡೆದ ದಾರಿ
ನಿಕುಲು ಎಂಕ್ಲೆನ್ ಕಿರ್ಸಂದಕುಲು ಮಲ್ಪರೆ ಬಯಿದಿನಿಂದ್ ..
(ನೀವು ನಮ್ಮನ್ನು ಕ್ರೈಸ್ತರನ್ನಾಗಿಸಲು ಬಂದವರೆಂದು..)
1995ರಿಂದ 2002ರವರೆಗೆ ನಾನು ಬಂಟರು ಒಂದು ಸಮಾಜೋ ಸಾಂಸ್ಕøತಿಕ ಕೃತಿ ರಚನೆಗಾಗಿ ಕ್ಷೇತ್ರಕಾರ್ಯದಲ್ಲಿ ತೊಡಗಿದ್ದೆ. ಸುಮಾರು 1997-98ರಲ್ಲಿ ಇರಬಹುದು. ಆ ದಿನಗಳಲ್ಲಿ ಕ್ರೈಸ್ತ ಧರ್ಮಕ್ಕೆ ಮತಾಂತರ ಆಗಲು ಅನೇಕ ಕ್ರೈಸ್ತ ಕಾರ್ಯಕರ್ತರು ಆರ್ಥಿಕವಾಗಿ ಹಿಂದುಳಿದವರನ್ನು, ಅನಾರೋಗ್ಯ ಪೀಡಿತರನ್ನು ಹುಡುಕಿ ಹೋಗುತ್ತಾರೆ ಎಂಬ ಗುಲ್ಲು ಇತ್ತಾದರೂ ಅದುವರೆಗೆ ನನಗೆ ಈ ವಿಷಯ ಗೊತ್ತಿರಲಿಲ್ಲ. ನಾನು ಬೆಳ್ತಂಗಡಿ ತಾಲೂಕಿನ ನಿಡಿಗಲ್ಲು ಗ್ರಾಮಕ್ಕೆ ಬೇಟಿ ನೀಡಲು ಹೋಗಿದ್ದೆ. ನನ್ನ ಜೊತೆ ಹೆಗ್ಡೆಯವರ ಅಣ್ಣನ ಮಗ ಸಂಪತ್ ಕುಮಾರ್ ಇದ್ದ. ಬೆಂಗಳೂರಿನಿಂದ ಬೈರಪ್ಪನವರ ಸಾರಥ್ಯದಲ್ಲಿ ಸುಳ್ಯ ಪುತ್ತೂರು ಮುಗಿಸಿ ಬೆಳ್ತಂಗಡಿಗೆ ಹೋಗಿದ್ದೆವು.
ದಾರಿಯಲ್ಲಿ ಶಾಲಾ ಬಾಲಕಿಯನ್ನು ಕಂಡು ಮಾತನಾಡಿಸಿದೆ. ಅವಳನ್ನು ನನ್ನ ಕಾರಿನಲ್ಲಿ ಕೂರಿಸಿ ಅವಳ ಮನೆಯ ಕಡೆಗೆ ಹೋದೆವು. ಸ್ವಲ್ಪ ದೂರ ಹೋದಾಗ ಅವಳ ಅಪ್ಪ ಎದುರಾದರು. ಅವರನ್ನು ಕಾರಲ್ಲಿ ಕೂರಲು ವಿನಂತಿಸಿದೆ. ‘ನೀವು ಮುಂದೆ ಹೋಗಿ ನಾನು ಬರುತ್ತೇನೆ’ ಎಂದರವರು. ಅಂತಯೇ ನಾವು ಮುಂದೆ ಹೋದೆವು. ಅವರ ಮನೆಯವರೆಗೆ ಕಾರು ಹೋಗುತ್ತಿರಲಿಲ್ಲ. ಹೀಗಾಗಿ ಮುಂದಿನ ನಡಿಗೆಗೆ ನಮ್ಮ ದೇಹದ ಭಾಗವಾದ ನಮ್ಮದೆ ಕಾರನ್ನು (ಕಾಲು) ಊರಿ ಊರಿ ನಡೆದೆವು. ಬಾಲಕಿಯ ಮನೆ ಸಮೀಪಿಸುತ್ತಿದ್ದಂತೆ ಸಾಲಾಗಿ ನಿಂತ ಯುವಕರನ್ನು ಕಂಡೆ. ಅವರ ಎರಡೂ ಕೈಗಳು ಹಿಂದೆ ಇದ್ದವು. ನನಗೆ ಕಾಣುತ್ತಿರಲಿಲ್ಲ. ಮಾರ್ಚ್ ಫಾಸ್ಟ್‍ಗೆ ನಿಂತವರಂತೆ ನಿಂತಿದ್ದರು! ನಾನು ನಗುಮುಖತೋರಿಸಿದರೂ ಅವರ ಪ್ರತಿಕ್ರಿಯಿಸಲಿಲ್ಲ. ಇದೇನಪ್ಪಾ ಹೀಗೆ? ಎಂದುಕೊಂಡೆವು. ಇನ್ನೂ ನಾಲಕ್ಕು ಹೆಜ್ಜೆ ಮುಂದೆ ನಡೆದೆವು ಸಾಲು ಚದುರಿತು! ಮನೆಯ ಒಳಗೆ ಇದ್ದ ಮಹಿಳಾ ಸದಸ್ಯರು ಹೊರಬಂದರು. ಕಿರುನಗೆ ಬೀರುವ ಮೂಲಕ ನಮ್ಮನ್ನು ಸ್ವಾಗತಿಸಿದರು.
ನಮ್ಮ ಪರಿಚಯ ನೀಡಿದೆ. ಮಾತು ಮುಂದುವರಿಸಿದಾಗ ಅವರು ಹೇಳಿದ ವಿಷಯ ಇದು:
“ನಾವು ನಿಮಗೆ ಕಲ್ಲು ಹೊಡೆಯಲು ಕೈಯಲ್ಲಿ ಕಲ್ಲು ಹಿಡಿದು ನಿಂತಿದ್ದೆವು.”
ನಾನು ಅವಕ್ಕಾಗಿ ಕೇಳಿದೆ: ಮನೆಗೆ ಬರುವ ಅತಿಥಿಗಳಿಗೆ ಕಲ್ಲು ಹೊಡೆಯುವುದು ಈ ಭಾಗದ ಸಂಸ್ಕøತಿನಾ?
ಮನೆಯವರು : ಸಂಸ್ಕøತಿ ಅಲ್ಲ. ಅನಿವಾರ್ಯತೆ.
ನಾನು : ಯಾಕೆ ? ಅಂತಹ ಅನಿವಾರ್ಯತೆ ಏನು?
ಮನೆಯವರು: ಈ ಭಾಗÀದಲ್ಲಿ ಮನೆಗಳು ಹೆಚ್ಚಾಗಿಲ್ಲ. ಕಾಡು ಪರಿಸರ! ಇರುವ ಮನೆಗಳು ಬಡವರ ಮನೆಗಳು. ಎಲ್ಲಾ ಮನೆಗಳಲ್ಲಿ ಒಂದಲ್ಲ ಒಂದು ರೀತಿಯ ಕಷ್ಟ ಇದೆ. ಕೆಲವು ಮನೆಗಳಲ್ಲಿ ಹೆಚ್ಚಿನ ಕಷ್ಟ ಇರುತ್ತದೆ. ಅಂತಹ ಮನೆಗಳನ್ನು ಹುಡುಕಿಕೊಂಡು ಕೈಸ್ತ ಮತಕ್ಕೆ ಮತಾಂತರ ಮಾಡುವವರು ಬರುತ್ತಾರೆ. “ನಿಮ್ಮ ಕಾಯಿಲೆಯನ್ನು ಯೇಸು ಗುಣಪಡಿಸುತ್ತಾನೆ. ನಿಮ್ಮ ಹಣದ ತೊಂದರೆಯನ್ನು ಯೇಸು ಸರಿಪಡಿಸುತ್ತಾನೆ” ಎಂದೆಲ್ಲ ಹೇಳಿ ಮತಾಂತರಕ್ಕೆ ಪ್ರಚೋದನೆ ಮಾಡುತ್ತಾರೆ. ಕಷ್ಟದಲ್ಲಿರುವಾಗ “ಇವರು ಹಣ ಕೊಡುತ್ತಾರೆ. ಒಮ್ಮೆ ಈ ಕಷ್ಟದಿಂದ ಪಾರಾಗೋಣ” ಎಂದು ಕೆಲವರಿಗೆ ಅನಿಸುತ್ತದೆ. ಕಾಯಿಲೆಯಿಂದ ನರಳುವವರು “ಯೇಸು ದೇವರು ಬಹಳ ಕಾರ್ಣಿಕವಂತೆ. ನಮ್ಮ ಕಾಯಿಲೆ ಗುಣವಾಗುವುದಾದರೆ, ನಮ್ಮ ಕಷ್ಟ ಪರಿಹಾರ ಆಗುವುದಾದರೆ ನಾವೇಕೆ ಅವರ ಮಾತು ಕೇಳಬಾರದು? ದೇವರು ಯಾರದಾದರೇನು?” ಎಂದು ಕೆಲವರಿಗೆ ಅನಿಸುತ್ತದೆ. ಆಗ ಮನೆಯ ಶಾಂತಿ ಕದಡುತ್ತದೆ. ಹೀಗೆ ಕೆಲವು ಮನೆಗಳ ಶಾಂತಿ ಹೋಗಿದೆ!
ನಾನು : ಯಾರಾದರೂ ಮತಾಂತರ ಆಗಿದ್ದಾರಾ? ಮತಾಂತರ ಆದ ಮೇಲೆ ಮತಾಂತರಕಾರರು ಹೇಳಿದಂತೆ ನಡೆದಿದೆಯೆ?
ಮನೆಯವರು : ಮತಾಂತರ ಆದವರಿಗೆ ಆರ್ಥಿಕವಾಗಿ ಲಾಭ ಆಗಿರಬಹುದು. ಅಂತವರಿಗೆ ಹಣ ದೊರಕುತ್ತದೆ. ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಹಣ ನೀಡುತ್ತಾರೆ, ಕೆಲವು ಸಂದರ್ಭದಲ್ಲಿ ಕೆಲಸ ನೀಡುತ್ತಾರೆ. ಆದರೆ ಕಾಯಿಲೆ ಇದ್ದವರನ್ನು ಗುಣಪಡಿಸಲು ಸಾಧ್ಯ ಆಗಲಿಲ್ಲ. ಉದಾಹರಣೆಗೆ ಇಲ್ಲೇ ಒಬ್ಬಳು ಅಜ್ಜಿ ಇದ್ದಾಳೆ. ಅವಳಿಗೆ ವಿಪರೀತ ಬೆನ್ನು ನೋವು. ಮತಾಂತರಿಗಳು ಬಂದು “ನೀನು ಮತಾಂತರ ಆಗು ನಿನ್ನ ಬೆನ್ನು ನೋವು ಗುಣ ಆಗುತ್ತದೆ” ಎಂದರು. “ಬೆನ್ನು ನೋವಿನಿಂದ ಮುಕ್ತಿ ಸಿಗುವುದಿದ್ದರೆ ಯಾವ ಮತ ಆದರೇನು? ಯಾವ ಧರ್ಮ ಆದರೇನು?” ಎಂದು ಆಕೆ ಮತಾಂತರಕ್ಕೆ ಸಮ್ಮತಿಸಿದಳು. ವಿಧಿ ಪ್ರಕಾರ ಆಕೆಯನ್ನು ಮತಾಂತರ ಮಾಡಲಾಯಿತು. ಹಾಗೂ ಆಕೆಯನ್ನು ಚಿಕಿತ್ಸೆಗಾಗಿ ಕೇರಳದ ಕೊಟ್ಯಾಯಂಗೆ ಕರೆದೊಯ್ಯಲಾಯಿತು. ಕೆಲವೇ ತಿಂಗಳಲ್ಲಿ ಆಕೆ ಮರಳಿ ಬಂದಳು. “ಬೆನ್ನುನೋವು ಗುಣ ಆಯಿತಾ?” ಎಂದು ಕೇಳಿದವರಿಗೆ, “ ನನ್ನ ಬೆನ್ನು ನೋವು ಗುಣ ಆಗುವುದು ಒಂದೇ ದಿನ. ನನ್ನ ಉಸಿರು ನಿಂತ ದಿನ” ಎನ್ನ ತೊಡಗಿದಳು. ಆಕೆ ಮೊದಲಿನಂತೆ ನೆಲಮೂಲದ ಮತಧರ್ಮದಂತೆ ಜೀವನ ಸಾಗಿಸತೊಡಗಿದಳು. ಯೇಸು, ಚರ್ಚ್ ಸುದ್ದಿಯನ್ನು ಬಿಟ್ಟಳು. ಅವಳ ಬಳಿ “ನೀನೀಗ ಕ್ರೈಸ್ತಳಾ” ಎಂದು ಕೇಳಿದರೆ “ನಾನು ಹುಟ್ಟುವಾಗ ಇದ್ದವಳೇ. ‘ಕಿರ್ಸಂದಾಲ್’ ಅಲ್ಲ, ಬ್ಯಾರಿಯೂ ಅಲ್ಲ. ತಾಯಿ ಹೊಟ್ಟೆಯಿಂದ ಬಂದ ಹಾಗೆ ಇದ್ದೀನಿ. ಅವರ ದೇವರು ನನ್ನ ಕಾಯಿಲೆ ಗುಣ ಪಡಿಸುತ್ತಾನೆ ಅಂದಿದ್ದಕ್ಕೆ, ಇರಲಿ ಒಂದು ಕೈ ನೋಡೋಣ ಎಂದು ಅವರ ದೇವರ ಹಿಂದೆ ನಡೆದೆ. ಆ ದೇವರೂ ನನ್ನ ಕಾಯಿಲೆ ಗುಣಪಡಿಸಲಿಲ್ಲ. ಅದಕ್ಕೆ ಮರಳಿ ಬಂದೆ. ಈಗ ಮೊದಲಿನಂತೆಯೇ ಇದ್ದೇನೆ.” ಎಂದು ಮಾತು ಮುಗಿಸಿದರು.
ನಾನು : ನೀವು ನನಗೆ ಕಲ್ಲು ಹೊಡೆಯದೆ ಹಾಗೆ ಸುಮ್ಮನಾದಿರಿ ಯಾಕೆ?
ಮನಯವರು: ನಿಮ್ಮ ಹಿಂದೆಯೇ ನಮ್ಮ ತಂದೆಯವರು ನಡೆದು ಬರುತ್ತಿದ್ದರು. ಅವರನ್ನು ನೋಡಿ ‘ನೀವು ಮತಾಂತರ ಮಾಡುವವರಲ್ಲ’ ಎಂದು ಧೈರ್ಯ ಬಂತು. ನೀವು ಹತ್ತಿರ ಬಂದಾಗ ‘ನೀವು ಕ್ರೈಸ್ತರಲ್ಲ’ ಎಂದು ಗೊತ್ತಾಯಿತು.
ನಾನು: ಆ ಅಜ್ಜಿ ಹೇಗಿದ್ದಾರೆ?
ಮನೆಯವರು: ಈಗ ಆಕೆ ಮೊದಲಿನಂತೆಯೆ ಇದ್ದಾಳೆ. ಬೆನ್ನುನೋವಿನಿಂದ ಬಳಲುತ್ತಿದ್ದಾಳೆ. ಈಗ ಸ್ಥಳೀಯ ಜಾತ್ರೆ ಕೋಲ ನೇಮಗಳಲ್ಲಿ ಭಾಗವಹಿಸುತ್ತಾಳೆ. ಕ್ರೈಸ್ತ ಧರ್ಮದ ಯಾವೊಂದು ಆಚರಣೆಗಳೂ ಅವಳಲ್ಲಿ ಇಲ್ಲ.
ಈ ಅಜ್ಜಿ ಯಾವ ಶುದ್ಧೀಕ್ಕರಣಕ್ಕೂ ಒಳಗಾಗದೆ ಪೂರ್ವಾಶ್ರಮಕ್ಕೆ ಮರಳಿದ್ದಾಳೆ. ನೆಲಮೂಲ ಹಿಂದೂ ಧರ್ಮದಲ್ಲಿ ಶುದ್ಧೀಕರಣ ಪದ್ಧತಿ ಇಲ್ಲ ಮನೆ ದೇವರಿಗೆ ಕುಲದೇವರಿಗೆ ತಪ್ಪು ದಂಡ ಹಾಕಿದರಾಯಿತು. ಯಾವುದೇ ತಪ್ಪು ಮಾಡಿ ಮನೆಯಿಂದ ಹೊರ ನಡೆದರೂ ಅಥÀವಾ ಮನೆಯಿಂದ ಹೊರ ದಬ್ಬಿಸಿಕೊಂಡರೂ ಆಕೆ ಮರಳಿ ಕುಟುಂಬ ಸೇರಲು ಅವಳ ಕುಲದೈವಗಳು ಅವಕಾಶ ನೀಡುತ್ತವೆ. ಕುಲದೈವಗಳಿಗೆ ಪರಿಹಾರ ನೀಡುವ ಪದ್ಧತಿ ಇದೆ. : ಮಾಡಿದ ತಪ್ಪಿಗೆ ದಂಡ ರೂಪವಾಗಿ ಕೋಲ ನೀಡುವುದು, ಚಾವಡಿ ದೈವಕ್ಕೆ ‘ಚವಲದ ಪಣವು’ ಹಾಕುವುದು, ನಾಗನಿಗೆ ತನು ತಂಬಿಲ-----ಇತ್ಯಾದಿ.
No comments:
Post a Comment