Sunday, July 3, 2016

ನಾಗಬೆರ್ಮೆರ್ ಎನ್ನುವುದು ದೈವ/ಭೂತ

ದೇಲ (ದೇವರಗೂಡು)ಗೂಡು. ಸ್ತೂಪದ ಮೂಲ ರೂಪ

“ನಾಗಂ ಪ್ರಧಾನ ಭೂತಂ”  ನಾಗ ಅಂದರೆ ಕ್ರೂರಿ, ದುಷ್ಟ. ಎಂಬರ್ಥವೂ ಕನ್ನಡ ನಿಘಂಟಿನಲ್ಲಿದೆ. ತುಳುನಾಡಿನಲ್ಲಿ ಎಲ್ಲಾ ಭೂತ ಶಕ್ತಿಗಳ ಅರಸು ದೈವ 1001 ಹೆಡೆಗಳ ನಾಗಬಿರ್ಮೆರ್/ ‘ಉಲ್ಲಾಯ’. ನಾಗ (ಶಾಸ್ತಾವು)ನನ್ನು ‘ಭೂತ’ ಎಂದು ಕರೆಯುವುದಕ್ಕೆ ಶಿಲಪ್ಪದಿಕಾರಂ ಎಂಬ ತಮಿಳು ಕಾವ್ಯದಲ್ಲಿಯೇ ಆಧಾರ ಸಿಗುತ್ತದೆ. ಮಾತ್ರವಲ್ಲ ತುಳುನಾಡಿನಲ್ಲಿ ಈಗಲೂ ಇರುವಂತೆ ಕೋಲವನ್ನು ಅರ್ಪಿಸುವ ವಿವರವೂ ಅಲ್ಲಿ ಇದೆ. (ಅಲ್ಲಿ ಪಾತ್ರಿಯಾಗಿ, ಪೂಜಾರಿಣಿಯಾಗಿ ಸ್ತ್ರೀಯೇ ಇರುತ್ತಾಳೆ) ಇಂತಹ ಭೂತಗಳ ಉಪಾಸನೆಯ ‘ಗಡಿ’  ಹಿಡಿದ (ಈತ ದೈವದ ಪ್ರಾತಿನಿಧಿಕ ರೂಪ ಎಂದು ಭಾವಿಸಲಾಗುತ್ತದೆ.) ಉಪಾಸನೆ ಮಾಡುವ ಯಾವುದೇ ವ್ಯಕ್ತಿ ರಜಸ್ವಲೆಯಾದ ಸ್ತ್ರೀಯೊಡನೆ ದೃಷ್ಟಿ ತಾಗಿಸಬಾರದು, ಮಾತನಾಡಬಾರದು, ಆಕೆಯ ನೆರಳು ಬೀಳಬಾರದು. ಆಕೆ ಇದ್ದ ಮನೆಯೊಳಗೆ ವಾಸ ಮಾಡಬಾರದು, ಆಕೆ ಮುಟ್ಟಿದ ವಸ್ತುಗಳನ್ನು ಮುಟ್ಟಬಾರದು - ಎಂಬಿವೇ ಅನೇಕ ನಿಷೇಧಗಳಿವೆ. ಸರ್ಪನಿಗೂ ಮುಟ್ಟಾದ ಮಹಿಳೆಯ ನೆರಳು ಬೀಳಬಾರದು. ಅವಳ ರಜೋದ್ರವ್ಯದ ಬಟ್ಟೆಯ ಮೇಲೆ ಅದು ಹರಿದು ಹೋಗಬಾರದು, ಅವಳು ಸ್ನಾನ ಮಾಡಿದ ನೀರಿನ ಮೇಲೆ ಸರ್ಪ ಹರಿದುಹೋಗಬಾರದು -ಮುಂತಾದ ನಂಬಿಕೆಗಳಿವೆ.
ಸ್ತ್ರೀಯರ ರಜೋದ್ರವ್ಯ ಮತ್ತು ನಾಗಸಂಬಂಧದ ಬಗ್ಗೆ ಢೇರೆಯವರು ಹೀಗೆ ಬರೆಯುತ್ತಾರೆ:“ಸ್ತ್ರೀಯು ರಜಸ್ವಲಾವಸ್ಥೆಯಲ್ಲಿ ಇರುವಾಗ ಇಲ್ಲವೆ ಅವಳು ಗರ್ಭಿಣಿಯಾಗಿರುವಾಗ ಅವಳೊಡನೆ ಪುರುಷ ಸಂಬಂಧ ನಿಷಿದ್ಧತೆಯು ಮಾನ್ಯ. ಸ್ತ್ರೀ ಮತ್ತು ನಾಗ ಇವರಲ್ಲಿ ಕೇವಲ ದೃಷ್ಟಾದೃಷ್ಟಿಯಾದರೂ ಸಾಕು, ಈ ನಿಷೇಧ ಭಂಗದ ಅಪರಾಧಕ್ಕಾಗಿ ನಾಗನ ದೃಷ್ಟಿಯೇ ಇಲ್ಲವಾಗುತ್ತದೆ. ಅದರಿಂದ ನಾಗನಿಗೆ ಮುಕ್ತಿ ಬರುವುದು, ಆ ಸ್ತ್ರೀ ಪ್ರಸೂತಳಾದ ಮೇಲೆ ಅವಳ ಸ್ನಾನದ ನೀರನ್ನು ಸ್ಪರ್ಶಿಸಿದ ಮೇಲೆಯೇ. ಈ ಕಲ್ಪನೆ ಭಾರತದಾದ್ಯಂತ ಇರುವಂತದ್ದಾಗಿದೆ. ನಾಗ-ಸರ್ಪ ಮತ್ತು ಪುರುಷ ಹಾಗೂ ಪೃಥ್ವಿ ಮತ್ತು ಸ್ತ್ರೀಯರಲ್ಲಿ ಸಾಧಿತವಾಗಿರುವ ಏಕರೂಪತೆಯನ್ನು ಗಮನಿಸಿದರೆ ಸ್ತ್ರೀ ರೂಪಿ ಪೃಥ್ವಿಯ ರಜೋದ್ರವ್ಯದಲ್ಲಿಯೇ ಪುರುಷ ರೂಪಿ ನಾಗ ಅಥವಾ ಸರ್ಪದ ಸಂಪರ್ಕವನ್ನು ಕಳೆಯುವಂತಹ ಸಾಮಥ್ರ್ಯವಿದೆ.”33
“ತುಳು ಪಾಡ್ದನಗಳು ನಾಗಬೆರ್ಮೆರನ್ನು ಭೂತವೆಂದು ಪರಿಗಣಿಸುತ್ತವೆ. ಆಲಡೆ ಬೆರ್ಮೆರ ಪರಿವಾರ ದೈವ ರೆಕ್ಕೆಸಿರಿ “... ನಾಗ ಜಿಡೆ ಪಾಡಿಯಲ್ಲಿ, ಬೆರ್ಮೆರ ಗುಂಡ ಗದ್ದಿಗೆಯ ಬಳಿ ಬಲಿನೇಮ ಪಡೆÀಯುವ ದೈವಗಳು ನಾವು” ಎನ್ನುತ್ತವೆ. ಬಿರ್ಮೆರೆ ಒಸಯದ ಸಂಧಿಯಲ್ಲಿ ಕರಿಯ ನಲ್ಕೆ ‘ಬಿರ್ಮೆರ್ ಮತ್ತು ಪರಿವಾರ’ವನ್ನು ‘ಸಾಪೊಂದ ಬೂತೊಲು’ ಎನ್ನುತ್ತಾನೆ. ಇಲ್ಲಿ ಸಾಪ ಅಂದರೆ ವರ. ‘ಕಾಯಿ ಕರ್ಕು, ಉರ್ವೆ ಬಜೈ (ಅಡಿಕೆಯ ಎಳೆ ಕಾಯಿ), ಒಂದು ಕುಡ್ತೆ ಹಾಲು, ಒಂದು ಬೊಂಡ, ಒಂದು ಅಡಿಕೆ - ಇದಕ್ಕೆ ನಂಬಿದ ಸತ್ಯೊಲು (ಶಕ್ತಿಗಳು) ನಾವು. ನಂಬಿದವರಿಗೆ ಇಂಬು ಮುನಿದವನಿಗೆ ಮೂರು ದಿನದ ಬಾಳುವೆ, ನೆನೆದವಗೆ ಮುನ್ನೂರು ದಿನದ ಬಾಳುವೆ.’ ಎಂದೂ ಪಾರಿ ಹೇಳುತ್ತಾನೆ. (ಕರಿಯ ನಲ್ಕೆ ಪೊಸೊಳಿಕೆ ಧರ್ಮಸ್ಥಳ) ‘ನೆರಿ ಸೀರೆ, ಪಾಂಬೊಡಿ ಅಣಿ, ಬಿಲ್ಲು ಬಾಣ ಹೊಂದಿ ಏಳು ಕೋಲ ಕೈಗೊಳ್ಳುವ ಬಿರ್ಮೆರ್’.34 ತುಳುವರ ಪಾಲಿಗೂ ಭೂತಗಳ ಅರಸ ಉಲ್ಲಾಯ!
“ಭೂತ ಹುಟ್ಟಿದ ರಾಜ್ಯ ಎಂದರೆ “ಘಟ್ಟದ ಮೇಲೆ ಈಜಾ(ವಿಜಯ) ನಗರದಲ್ಲಿ, ಕರ್ಮಿನ ಶಾಲೆಯಲ್ಲಿ, ಭತ್ತದ (ಬುಲೆರಿ) ಬೆಳೆಯಲ್ಲಿ, ಬೇಲೂರ ಪದವಿನಲ್ಲಿ, ಅಣಿಕಲ್ಲ ಸಂದಿಯಲ್ಲಿ, ಹರಿಯುವ ನೀರಿನಲ್ಲಿ, ನೆಕ್ಕರೆಯ ಪೊದೆಯಲ್ಲಿ ಸರೊಳಿ (ತಂಪಿನ ಮರ) ಸಂಪಿನಲ್ಲಿ.” ಇದು ಪಾಡ್ದನ ಭಾಗ. ಭೂತಗಳೂ ನೀರಿನಲ್ಲಿ ತಂಪು ತಾಣದಲ್ಲಿ ನಾಗ ಪರಿವಾರಗಳಾಗಿ ಹುಟ್ಟಿವೆ. ಕಂಡಿಗೆಯ ಉಲ್ಲಾಯ ಏಳು ಗಂಗೆಯಿಂದ ಬಂದು ‘ಮುಲ್ಪ ತಂಪು ತಾನ ಎಲ್ಲಿ?’ ಎಂದು ಕೇಳುತ್ತದೆ. ಅದಕ್ಕೆ ಉತ್ತರವಾಗಿ ಕಂಡಿಗೆ ಬೀಡಿನ ನದಿತಟದ ಕಾಡು ಮತ್ತು ಸಿಹಿನೀರಿನ ಕ್ಷೇತ್ರವನ್ನು ತೋರಿಸುತ್ತಾರೆ. ಕೆಮ್ಮೆಲೆಯ ಬಿರ್ಮೆರ್ ಹುಟ್ಟಿದ್ದು ನೀರಿನಲ್ಲಿ. ಪಂಜುರ್ಲಿ ಪಾಡ್ದನದ ‘ಭೂತ’ ಹುಟ್ಟಿದ್ದು ನೀರಿನಲ್ಲಿ.
“ಕೆಲವೊಂದು ತುಳುನಾಡಿನ ಶಾಸನಗಳು ಬೆರ್ಮರನ್ನು ದೇವರೆಂದು ಉಲ್ಲೇಖಿಸಿದ್ದು, ಆದರೆ ಬಹಳ ವಿಚಿತ್ರವೆನ್ನುವಂತೆ ಅವನ್ನು ಭೂತಗಳ ಸಾಲಿಗೆ ಸೇರಿಸಿವೆ. ನಾಗನನ್ನು ಬ್ರಹ್ಮನೊಂದಿಗೆ ಅವಿಭಾಜ್ಯವಾಗಿ ಸಂಗಡಿಸಲಾಗಿದೆ ಹಾಗೂ ಬ್ರಹ್ಮನಿಗೆ ಹಾಲು ನೈವೇದ್ಯ ಮಾಡಿದ ಪ್ರಸಂಗದ ವಿವರಣೆ ಶಾಸನವೊಂದರಲ್ಲಿ ಸಿಗುತ್ತದೆ.” 35
ನಾಗನಿಗೂ ಬಿರ್ಮೆರಿಗೂ ಕೋಲ ನಡೆಯುತ್ತದೆ. ಬೆರ್ಮೆರಿಗೆ ಕೋಲ ನಡೆಯುವುದಿಲ್ಲ ಎನ್ನುತಾರೆ ಬೆರ್ನಲ್ ಅವರು. “ಇಲ್ಲಿ ಬ್ರಹ್ಮೆರ್, ಬಿರ್ಮೆ, ಬ್ರಹ್ಮರಾಕ್ಷಸ ಎಂಬ ಇನ್ನೊಂದು ಭೂತ ಇದೆ. ಕಾಡಿನ ನಡುವೆ ಅಥವಾ ಮರಗಿಡಗಳಿಂದಾವೃತವಾದ ಜಾಗದಲ್ಲಿ ಬ್ರಹ್ಮಸ್ಥಾನವನ್ನು ಕಟ್ಟಲಾಗಿದೆ. ಈ ಭೂತಕ್ಕೂ ಉಳಿದ ಭೂತಗಳಿಗೂ ಇರುವ ವ್ಯತ್ಯಾಸವೆಂದರೆ ಈ ಬಿರ್ಮೆರ್ ಭೂತಕ್ಕೆ ಪೂಜೆ ಮಾಡುವವ ಬ್ರಾಹ್ಮಣ. ಉಳಿದ ಭೂತಗಳಿಗೆ ಬಿಲ್ಲವ ಮಾಡುತ್ತಾನೆ. ಬಿರ್ಮೆರ್ಗೆ ಉಳಿದ ಭೂತಗಳಂತೆ ನೇಮ ಅಥವಾ ಕೋಲ ಇಲ್ಲ.”
ಬರ್ನೆಲ್ ಅವರ ಅಭಿಪ್ರಾಯ ತಪ್ಪು. ಅವರಿಗೆ ತಪ್ಪು ಮಾಹಿತಿ ಹೋಗಿದೆ. ಉಳಿದ ಭೂತಗಳಂತೆ ನಾಗಬೆರ್ಮರಿಗೆ ಕೋಲ ನಡೆಯುವ ಬಗ್ಗೆ ವಿವರಗಳು ಮುಂದಿನ ಭಾಗದಲ್ಲಿ ಇವೆ. ಆಶ್ಚರ್ಯವೆಂದರೆ ಕರಾವಳಿ ಭಾಗದ ಕೋಲ ನೇಮಗಳ ನರ್ತನ ಸಮುದಾಯದವರಿಗೂ ಈ ಬಗ್ಗೆ ಅರಿವು ಇಲ್ಲದಿರುವುದು.
“ದತ್ತಾತ್ರೇಯ ಪಟಿಲದಲ್ಲಿ ‘ರಾಕ್ಷಸಾ ಭೂತ ವೇತಲಾ ದೇವ ದಾನವಾ ಪನ್ನಗಾಃ’ ಎಂದೂ ಮಂತ್ರ ಮಹಾರ್ಣದಲ್ಲಿ “ಸರ್ಪಾ ಯಕ್ಷ ಪಿಶಾಚಕಾಃ” ಎಂದೋ ಭೂತ ಡಾಮರ ತಂತ್ರದಲ್ಲಿ ‘ಸರ್ಪ ಯಕ್ಷ ಗಣಾಃ ಕ್ರೂರಾ ಯೇ ಚಾನ್ಯೆ ವಿಘ್ನಃ ಕಾರಿಣ’ ಎಂದೋ ಬರುವಾಗ ಇದನ್ನು ಗಮನಿಸಬಹುದು. ಉರಗ, ನಾಗ, ಸರ್ಪ ಎಂದೆಲ್ಲ ಹೆಸರುಗಳಿರುವ ದೈವ ಗಣ ಅದೇ ಗೋತ್ರದ ಇತರ ಗಣಗಳಂತೆ ಆತಂಕಕಾರಿಗಳು”37
ಹೀಗೆ ವೇದಗಳ ಕಾಲದಲ್ಲೂ ನಾಗನನ್ನು ಭೂತದ ಹೆಸರಿನಲ್ಲಿ ಉಪಾಸನೆ ಮಾಡಲಾಗಿದೆ. ಈಜಿಪ್ಟ್‍ನಲ್ಲಿ ಅಪಲೋ ದೇವತೆಯನ್ನು ಸರ್ಪನ ರೂಪದಲ್ಲಿ ಆರಾಧಿಸಲಾಗಿತ್ತು. ((....to conclude that "the god Apollo was first worshipped at Delphi, under the symbol of a serpent.) ಈಜಿಪ್ಟನಲ್ಲಿ ಆ ಕಾಲದಲ್ಲಿ ಇದ್ದಂತೆ ದೈವಗಳು ಮುಕ್ಕಳಿಗೆಯಲ್ಲಿ ಕುಳಿತು ಮದಿಪು ಹೇಳುವ ಪದ್ಧತಿ ತುಳುನಾಡಿನಲ್ಲಿ ಈಗಲೂ ಉಳಿದು ಬಂದಿದೆ. ಇಂತಹ ಆಚರಣೆ, ಸಂಪ್ರದಾಯಗಳು ಕ್ರೈಸ್ತ ಧರ್ಮ ಹುಟ್ಟಿ ಬೆಳೆದ ಸು.14ನೆಯ ಶತಮಾನಗಳವÀರೆಗೆ ಕೆಲವು ಕಡೆ ಈಜಿಪ್ಟ್‍ನಲ್ಲಿಯೂ ಉಳಿದಿತ್ತು.
ಮಾರ್ನಿಕಟ್ಟೆ ಬ್ರಹ್ಮಲಿಂಗೇಶ್ವರ ಎನ್ನುವುದು ಕೋರೆದಾಡೆ ಉಳ್ಳ ಮರದ ಉರು. ಕವತಾರು ಮೂಲತಾನದವರು ಕೆಲವು ತುಳುವರಿಗೆ ಮಾರ್ನಿಕಟ್ಟೆಗೆ ಹೋಗಲು ನಿಷೇಧ ಇದೆ. ಇಂತಹ ನಿಷೇಧ ಅನೇಕ ವಂಶದವರಿಗೆ ಇದೆ. ಕುಂದಾಪುರ ತಾಲೂಕಿನಲ್ಲಿ  ಕೋರೆದಾಡೆ ಇರುವ ಬ್ರಹ್ಮಲಿಂಗೇಶ್ವರನ ಮರದ ಉರು, ಇತರೆ ಬ್ರಹ್ಮಲಿಂಗೇಶ್ವರ ಕ್ಷೇತ್ರಗಳಲ್ಲಿ  ಇದೆ ಎಂಬುದಾಗಿ ತಿಳಿದು ಬಂದಿದೆ.( ತುಳುವರ ಮೂಲತಾನ  ಆದಿ ಆಲಡೆ ಪರಂಪರೆ ಮತ್ತು ಪರಿವರ್ತನೆ ಪು 58. ನವಕರ್ನಾಟಕ ಪ್ರಕಾಶನ ಮೊದಲ ಮುದ್ರಣ 2012.  ಮರು ಮುದ್ರಣ 2016)

No comments:

Post a Comment