Monday, July 4, 2016

ದಿನಾಂಕ 14-ಜೂನ್ 2016 ಬೆಂಗಳೂರು ಆಕಾಶವಾಣಿಯಿಂದ ಪ್ರಸಾರವಾದ ಚಿಂತನ 2

ಮೂಢ ನಂಬಿಕೆ ಮತ್ತು ನಾವು

ಉಸಿರಾಟ ನಿಂತರೆ ಮನುಷ್ಯ ಸಾವನ್ನಪ್ಪಿದ್ದಾನೆ ಎಂದು ತಿಳಿಯುತ್ತೇವೆ. ಅರ್ಥಾತ್  ವ್ಯಕ್ತಿ ಸತ್ತಾಗ ಅವನ ಉಸಿರಾಟ ನಿಲ್ಲುತ್ತದೆ. ಗಾಳಿ ಆತನ ದೇಹದೊಳಕ್ಕೂ ಹೊರಕ್ಕೂ ಸಂಚರಿಸದೆ ಇದ್ದರೆ/ ಗಾಳಿ ಸೇವನೆ ಆಗದಿದ್ದರೆ, ಮನುಷ್ಯ ಸತ್ತು ಹೋಗುತ್ತಾನೆ. ಇದು ಎಲ್ಲರಿಗೂ ಗೊತ್ತಿರುವ ಸತ್ಯ. ಆಧುನಿಕ ತಂತ್ರಜ್ಞಾನದಲ್ಲಿ ಕೃತಕ ಉಸಿರಾಟದಿಂದ ಮನುಷ್ಯನನ್ನು ಕೆಲವು ಗಂಟೆ, ಅಥವಾ ದಿನಗಳ ಕಾಲ ಬದುಕಿಸುವ ಪ್ರಯತ್ನವನ್ನು ಮಾಡಲಾಗುತ್ತದೆ.

ಹಾಗಾದರೆ ಮನುಷ್ಯನನ್ನು ಬದುಕಿಸುವುದು ಗಾಳಿ ಎಂದಾಯಿತು. ಆಹಾರ ಇಲ್ಲದೆ ನೀರು ಕುಡಿದು ಆತ ಕೆಲವು ದಿನಗಳು ಅಥವಾ ತಿಂಗಳು ಬದುಕಬಲ್ಲ. ಆದರೆ ಗಾಳಿ ಇಲ್ಲವಾದರೆ ಕೆಲವೇ ಕ್ಷಣದಲ್ಲಿ ಆತ ಅಸುನೀಗುತ್ತಾನೆ. ಅಂದರೆ ಮನುಷ್ಯನ ದೇಹದೊಳಗೆ ಗಾಳಿ ಓಡಾಡುತ್ತಿದ್ದರೆ ಆತ ಜೀವಿಸಬಲ್ಲ. ದೇಹ ಬಿಟ್ಟು ಹೊರಗೆ ಬಂದ ಗಾಳಿ ಮತ್ತೆ ದೇಹದೊಳಗೆ ಮರಳಿ ಹೋಗಿಲ್ಲವಾದರೆ ಆತ ಅಸುನೀಗುತ್ತಾನೆ. ಅರ್ಥಾತ್ ಸಾಯುತ್ತಾನೆ. ಹಾಗಿದ್ದಲ್ಲಿ ಮನುಷ್ಯ ಜೀವಂತವಾಗಿರಲು ಶುದ್ಧಗಾಳಿ ಇರಬೇಕು ಎಂದಾಯಿತು. ಯಾಕೆಂದರೆ ಗಾಳಿಯೊಂದಿಗೆ ವಿಷಾನಿಲ ಬೆರೆತರೂ ಆತ ಸಾವನ್ನಪ್ಪುತ್ತಾನೆ.

ತುಳುನಾಡಿನ ಹಳ್ಳಿಗಳಲ್ಲಿ ಮನುಷ್ಯ ಸಾಯುವ ಹೊತ್ತು ಸನಿಹವಾಗಿದೆ ಎಂದು  ಮನೆಯ ಹಿರಿಯರಿಗೆ ಅರಿವಾದಾಕ್ಷಣ ಅವರು ತುರ್ತಾಗಿ ಒಂದು ಕೆಲಸ ಮಾಡುತ್ತಿದ್ದರು. ಗುಡಿಸಲಲ್ಲಿ ಸಾವು ಬರುವುದಿದ್ದರೆ ಮನೆಯ ಮಾಡಿನ ಹುಲ್ಲನ್ನು ಸರಿಸಿ ತೂತು ಮಾಡುತ್ತಿದ್ದರು. ಸಾಯಲಿರುವ ಮುನುಷ್ಯನ ಗಾಳಿ ನೇರವಾಗಿ ಮೇಲೆ ಹೋಗಿ ಆಕಾಶದ ಗಾಳಿಯಲ್ಲಿ ಲೀನವಾಗಲು ಅವಕಾಶ ಕಲ್ಪಿಸುವ ತಂತ್ರ ಇದು. ಹೆಂಚಿನ ಮನೆಯ ಹೆಂಚು ತೆಗೆದು ಇದೇ ರೀತಿ ಮಾಡುತ್ತಿದ್ದರು.

ಮಹಡಿ ಇರುವ ದೊಡ್ಡ ಬಂಗಲೆಗಳಲ್ಲಿ ಅಂದರೆ ಗುತ್ತು ಬೀಡುಗಳಲ್ಲಿ ಮನೆಯ ವಿಶಾಲ ಚಾವಡಿಯ ಮುಂದೆ  ಗೋಡೆಗಳು ಇರುತ್ತಿರಲಿಲ್ಲ. ಈಗಲೂ ಇಲ್ಲ. ಇಂತಹ ಮನೆಗಳಲ್ಲಿ ಸಾಯುವ ಸ್ಥಿತಿಯಲ್ಲಿ ಇರುವ ವ್ಯಕ್ತಿಯನ್ನು ಚಾವಡಿಯ ನೆಲದ ಮೇಲೆ ಮಲಗಿಸುತ್ತಿದ್ದರು. ಮನೆಯ ಮೆಟ್ಟಲ ಮುಂದೆ ಯಾರೂ ನಿಲ್ಲದಂತೆ ನೋಡುತ್ತಿದ್ದರು.

ಒಟ್ಟಿನಲ್ಲಿ ಮನುಷ್ಯನ ದೇಹದ ಗಾಳಿ ಖಾಲಿಯಾದರೆ ಆತ ಸಾಯುತ್ತಾನೆ. ಮನುಷ್ಯನ ದೇಹದೊಳಗೆ ಗಾಳಿ ಓಡಾಡುತ್ತಿದ್ದರೆ ಆತ ಜೀವಿಸುತ್ತಾನೆ.

ಜನಪದರ ಈ ಗಾಳಿಯನ್ನೇ ವೈದಿಕರು ಆತ್ಮ ಎಂದು ಕರೆದರು. ಇಂಗ್ಲಿಷ್‍ನಲ್ಲಿ Soul ಎಂದರು.

ಗಾಳಿ ಮಾನವನ ದೇಹದೊಳಗೆ ಇರುವಷ್ಟು ಕಾಲ ಮನುಷ್ಯ ಬದುಕಿದ್ದಾನೆ ಎಂದು ತಿಳಿಯುತ್ತೇವೆ. ಒಮ್ಮೆ ಮನುಷ್ಯನನ್ನು ತೊರೆದು ಗಾಳಿ ಹೊರ ಹೊರಟರೆ ಮತ್ತೆ ಅಲ್ಲಿಗೆ ಮುಗಿಯಿತು. ಆತ ಮತ್ತೆಂದೂ ಜೀವಿಸಲಾರ. ಮರಳಿ ಬರಲಾರ. ಯಾವುದೇ ರೂಪದಲ್ಲೂ ಆತ ಮರಳಿ ಬರಲು ಸಾಧ್ಯ ಇಲ್ಲ.


ಮಾನವನ ದೇಹದಿಂದ ಹೊರ ಹೊರಟ ಗಾಳಿ, ಸತ್ತವ ಮಣ್ಣಾದ ಜಾಗದಲ್ಲಿ ಸುತ್ತಾಡುತ್ತದೆ ಎಂಬ ನಂಬಿಕೆ ಕೆಲವರಲ್ಲಿ ಇದೆ.  ಸತ್ತವನ ದೇಹ ತೊರೆದ ಗಾಳಿ ಹೊರ ಗಾಳಿಯಲ್ಲಿ ಲೀನವಾಗಿ ಇರುತ್ತದೆ ಎಂಬ ಲೆಕ್ಕ. ಆದರೆ ಆ ಗಾಳಿ ಮತ್ತೊಂದು ದೇಹವನ್ನು ಸೇರುವುದಿಲ್ಲ. ಮತ್ತೊಂದು ಜನ್ಮದ ನಂಬಿಕೆ ತುಳು ಜನಪದರಲ್ಲಿ ಇಲ್ಲ.

ತುಳುವರಲ್ಲಿ ಸತ್ತವರು ತನ್ನ ಹಿರಿಯರು ಮಣ್ಣಾದ ಕಾಡಿನ ಮೂಲಸ್ಥಾನವಾದ “ನಾಗಬೆರ್ಮರ್” ಬಳಿ ಸೇರುತ್ತಾರೆ ಎನ್ನುವುದು ನಂಬಿಕೆ.  ನಾಗ ಬೆರ್ಮೆರ್ ಇರುವ ಸ್ಥಳ ಕಾಡು.  ಕಾಡುಮಾನವ, ಆದಿ ಮಾನವ ಮೊತ್ತ ಮೊದಲು ಪೂಜಿಸಿದ್ದು ಪ್ರಕೃತಿಯನ್ನು. ಅಂದೆ ಗಾಳಿ, ನೀರು, ಮತ್ತು ಕಾಡಿನಲ್ಲಿ ಇರುವ ಮರಗಳನ್ನು. ಹೀಗಾಗಿ ತುಳು ಜನಪದದಲ್ಲಿ  “ಇದ್ದರೆ ಇಲ್ಲಿ, ಸತ್ತರೆ ಅಲ್ಲಿ ನಾಗಬೆರ್ಮರ ಬಳಿ” ಎನ್ನುತ್ತಾರೆ. ಅಂದರೆ ಪ್ರಕೃತಿಯಿಂದ ಬಂದ ನಾವು ಅಂತಹ ಪ್ರಕೃತಿಗೇ ಮರಳಿ ಸೇರುತ್ತೇವೆ ಎಂದು ಅರ್ಥ.

ಮಾನವ ದೇಹವನ್ನು ತ್ಯಜಿಸಿ ಹೊರಟ ಗಾಳಿ ದೆವ್ವವಾಗುತ್ತದೆ ಎನ್ನುವುದು ಮನುಷ್ಯನ ಕಲ್ಪನೆ. ಜನರನ್ನು ಹೆದರಿಸಲು ಮಾಡಿರುವ ತಂತ್ರ. ಮನುಷ್ಯನ ದೇಹ ನಾಶವಾದ ಮೇಲೆ ಅವನ ದೇಹದಿಂದ ಹೊರ ಹೋದ ಗಾಳಿ ಯಾವ ರೂಪವನ್ನೂ ಧರಿಸಲು ಸಾಧ್ಯ ಇಲ್ಲ. ಆ ಗಾಳಿ ದೆವ್ವವಾಗಲೂ ಸಾಧ‍್ಯ ಇಲ್ಲ. ಪಿಶಾಚಿಯಾಗಲೂ  ಸಾಧ್ಯ ಇಲ್ಲ. ಅವೆಲ್ಲವೂ ಮಾನವನ ಕಲ್ಪನೆಗಳು. ಕೆಲವು ಸಿನಿಮಾದ ಕಲ್ಪನೆ, ಕೆಲವು ಸಾಮಾನ್ಯ ಜನರ ಕಲ್ಪನೆ.

ಮಾನವನ ಮನಸ್ಸು ದುರ್ಬಲ ಆದಾಗ ಆತನ ಮನಸ್ಸಿನಲ್ಲಿ ಭಯ ಉಂಟಾಗುತ್ತದೆ. ಆತಂಕ ಉಂಟಾಗುತ್ತದೆ.  ಆಗ ಆತ ದೆವ್ವ ಪಿಶಾಚಿ -ಎನ್ನುವ ಆತಂಕಗಳಿಗೆ ಒಳಗಾಗುತ್ತಾನೆ. ಜ್ಯೋತಿಷಿಗಳ ಬಳಿ ಹೋದರೆ ಅವನ ಆತಂಕವನ್ನು ಅವರು ಪೋಷಿಸುತ್ತಾರೆ. ಅವರ ಬಳಿ ಹೋಗುವುದು ತೊಂದರೆ ಇದ್ದಾಗ ಎಂದು ಅವರಿಗೆ ತಿಳಿದಿದೆ. ಆಗ ನಮ್ಮ ದುರ್ಬಲ ಮನಸ್ಸನ್ನು ಅವರಿಗೆ ಮಾರಿಕೊಂಡಂತೆ. ಅವರು ಹೇಳಿದಂತೆ ಕೇಳುವುದು ಅನಿವಾರ್ಯವಾಗುತ್ತದೆ.

ಕಷ್ಟ ಎಲ್ಲರಿಗೂ ಬರುತ್ತದೆ. ಪ್ರಾಣಿಗಳಿಗೂ ಬರುತ್ತದೆ. ಆದರೆ ಪ್ರಾಣಿಗಳಿಗೆ ದೆವ್ವ ಪಿಶಾಚಿಗಳ ಭಯ ಇಲ್ಲ. ಯಾಕಂದರೆ ಅವರಲ್ಲಿ ಅಂತಹ ಚಿಂತನಾ ಶಕ್ತಿ ಇಲ್ಲ. ಚಿಂತನಾ ಶಕ್ತಿ ಉಳ್ಳ ಮಾನವ ಅಗತ್ಯಕ್ಕಿಂತ ಹೆಚ್ಚು ಚಿಂತನೆಮಾಡಿ, ಕಲ್ಪನೆ ಮಾಡಿ ತೊಂದರೆಗೆ ಒಳಗಾತ್ತಿದ್ದಾನೆ. ಇಂತಹ ಕೆಲವು ನಂಬಿಕೆಗಳನ್ನು  ಮೂಢ ನಂಬಿಕೆ ಎಂದು ಕರೆಯುತ್ತಾರೆ.

ನಮ್ಮ ಮನಸ್ಸು ಇಂತಹ ಆತಂಕಗಳಿಗೆ ಬಲಿಯಾಗದಿದ್ದರೆ ಯಾವ ತೊಂದರೆಯೂ ಬಾರದು.

No comments:

Post a Comment