ವ್ಯಕ್ತಿಯ ಬದುಕು ಸುವ್ಯವಸ್ಥಿತಿಯಾಗಿ ರೂಪುಗೊಳಿಸಲು ಕೆಲವೊಂದು ನಿಯಮಗಳನ್ನು ಸಂಪ್ರದಾಯ ಪದ್ಧತಿಗಳನ್ನು ಅನುಸರಿಸಿಕೊಂಡು ಹೋಗುತ್ತಿದ್ದೇವೆ. ಅನಾದಿ ಕಾಲದಲ್ಲಿ ಆರಂಭವಾದ ಸಂಪ್ರದಾಯಗಳು ಕಾಲಕಾಲಕ್ಕೆ ಬದಲಾಗಿವೆ. ಸಂಸ್ಕøತಿ ಸಂಪ್ರದಾಯಗಳು ಎಂದೂ ನಿಂತ ನೀರಾಗಿರುವುದಿಲ್ಲ. ಅದು ಹೊಸ ನೀರನ್ನು ತನ್ನೊಳಗೆ ಸಮ್ಮಿಳಿತಗೊಳಿಸಿಕೊಂಡು ಹರಿಯುವ ತೊರೆಯಂತೆ ಪರಿಶುದ್ಧವಾಗಿ ಮುಂದುವರಿಯುತ್ತದೆ. ಸೇರ್ಪಡೆಯಾದ ಕೆಸರು ನೀರನ್ನು ತಿಳಿಯಾಗಿಸಿ ಹರಿಯುವ ಶಕ್ತಿ ಆ ಹರಿಯುವ ತೊರೆಗೆ ಇದೆ. ಕೆಲವೊಮ್ಮೆ ನೆರೆಬಂದರೂ ಅದು ಶಾಶ್ವತವಲ್ಲ. ನೆರೆ ಇಳಿದೇ ಇಳಿಯುತ್ತದೆ. ಮತ್ತೆ ಶಾಂತವಾಗುತ್ತದೆ ಹರಿವ ತೊರೆ.
ಈ ಸಮಾಜವೂ ಹಾಗೆಯೇ ಹರಿವ ತೊರೆಯಂತೆ. ಯಾವುದೋ ಒಂದು ಕಾಲದಲ್ಲಿ ಸಮಾಜದ ಒಳಿತಿಗೆ ರಚಿಸಲಾದ ಕಟ್ಟುಪಾಡುಗಳು ಆಯಾ ಕಾಲಕ್ಕೆ ಸೂಕ್ತವಾಗಿಯೇ ಇತ್ತು. ಆದರೆ ಮಾನವ ಬುಡಗಟ್ಟು ಜೀವನ ಪದ್ಧತಿಯಿಂದ ನಾಗರಿಕ ಜಗತ್ತಿಗೆ ತೆರೆದುಕೊಂಡಾಗ ಕೆಲವೊಂದು ಹಳೆಯ ಪದ್ಧತಿಗಳನ್ನು ಮುಂದುವರಿಸುವುದು ಅಸಾಧ್ಯವಾಯಿತು. ಬದಲಾವಣೆಗೆ ಅನಿವಾರ್ಯವಾಗಿ ಒಳಗಾಗಬೇಕಾಯಿತು. ಹೀಗೆ ಮೂಲದ ಕೆಲವು ನಿಯಮಗಳು ಸಡಿಲವಾಗತೊಡಗಿತು. ಹಳ್ಳಿಯ ಜನ ನಗರಗಳÀಲ್ಲಿ ಬದುಕು ಕಟ್ಟಿಕೊಂಡಾಗ ಹಳ್ಳಿಯ ಸಾಮಾಜಿಕ ಕಟ್ಟುಪಾಡುಗಳನ್ನು ಸ್ವಲ್ಪ ಸ್ವಲ್ಪವಾಗಿ ಕೊಡವಿಕೊಂಡರು. ಹೀಗಾಗಿ ನಗರಗಳ ಸಾಮಾಜಿಕ ಕಟ್ಟುಪಾಡುಗಳು ಸಡಿ¯ವಾಯಿತು.
ಹಾಗೆಯೇ ಮಧ್ಯಮ ವರ್ಗದವರ ಸಾಮಾಜಿಕ ಕಟ್ಟುಪಾಡುಗಳಿಗಿಂತ ಶ್ರೀಮಂತರ ಮತ್ತು ಬಡವರ ಸಾಮಾಜಿಕ ಕಟ್ಟುಪಾಡುಗಳು ಸಡಿಲವಾಗಿವೆ. ಹೀಗೆ ಸಾಮಾಜಿಕ ನಿಯಮಗಳು ಬಡವ ಬಲ್ಲಿದನಿಗೆ, ಹಳ್ಳಿ ನಗರಗಳಿಗೆ ಏಕಸಮನಾಗಿ ಇಲ್ಲ. ನಮ್ಮ ಸುತ್ತಲಿನ ಸಮಾಜವನ್ನು ನಾವು ವಿಶ್ಲೇಷಿಸಿದರೆ ಇದು ಗೊತ್ತಾಗುತ್ತದೆ. ಉದಾಹರಣೆಗೆ ಅಂತರ್ಜಾತಿ ವಿವಾಹ ತೆಗೆದುಕೊಳ್ಳಿ. ನಗರಗಳಲ್ಲಿ, ಶ್ರೀಮಂತರಲ್ಲಿ ಮತ್ತು ಬಡವರಲ್ಲಿ ಅಂತರ್ಜಾತಿ ವಿವಾಹಗಳು, ಅಂತಧರ್ಮೀಯ ವಿವಾಹಗಳು ಸುಲಭವಾಗುತ್ತದೆ ಆದರೆ ಹಳ್ಳಿಗಳಲ್ಲಿ ಒಂದು ಜಾತಿ, ಒಂದು ಧರ್ಮದ ಹೆಣ್ಣು ಮತ್ತೊಂದು ಜಾತಿಯ ಅಥವಾ ಧರ್ಮದ ಗಂಡಿನೊಡನೆ ವಿವಾಹವಾಗಲಿಚ್ಚಿಸಿದರೆ ಕ್ಷೋಭೆ ಉಂಟಾಗುತ್ತದೆ. ಹೆಣ್ಣುಗಂಡುಗಳ ಹತ್ಯೆ ಹೆತ್ತವರಿಂದಲೇ ನಡೆಯುತ್ತದೆ.
ನಮ್ಮ ಪರಂಪರೆಯಲ್ಲಿ ಇಂತಹ ರಾಕ್ಷಸತ್ವ ಇರಲಿಲ್ಲ.
ಗಾಂಧರ್ವ ವಿವಾಹ...ರಾಕ್ಷಸ ವಿವಾಹ ಮುಂತಾದ ಎಂಟು ಪ್ರಾಕಾರದ ವಿವಾಹಗಳು ವೈದಿಕ ಶಾಸ್ತ್ರದಲ್ಲಿ ಇತ್ತು. ದುಶ್ಯಂತ ಶಕುಂತಳೆಯರ ವಿವಾಹ ಗಾಂಧರ್ವ ವಿವಾಹ. ಅಂದರೆ ಪರಸ್ಪರ ಪ್ರೇಮಿಸಿ ವಿವಾºವಾಗುವುದು. ಪ್ರೀತಿಗೆ ಜಾತಿ ಕುಲ ಇರುವುದಿಲ್ಲ.
ರಾಕ್ಷಸ ವಿವಾಹ ಅಂದರೆ ಹುಡುಗಿಯನ್ನು ಬಲವಂತವಾಗಿ ಮನೆಯವರ ಇಚ್ಛೆಗೆ ವಿರುದ್ಧವಾಗಿ ಅಪಹರಿಸಿ ಕೊಂಡು ಹೋಗಿ ಮದುವೆಯಾಗುವುದು. ಶ್ರೀಕೃಷ್ಣ ರುಕ್ಮಿಣಿಯನ್ನು ರಾಕ್ಷಸ ವಿವಾಹ ಆಗಿದ್ದ.
ಡಿವಿಜಿಯವರು ಮಂಕುತಿಮ್ಮನ ಕಗ್ಗದಲ್ಲಿ ಹೇಳುವ ಮಾತು ಕೇಳಿ
ಅನ್ನದಾತುರಕ್ಕಿಂತ ಚಿನ್ನದಾತುರ ತೀಕ್ಷ್ಣ
ಚಿನ್ನದಾತುರಕ್ಕಿಂತ ಹೆಣ್ಣುಗಂಡೊಲವು
ಹೆಣ್ಣುಗಂಡೊಲವು ಆಸ್ತಿ ಅಂತಸ್ತನ್ನು, ಹೊಟ್ಟೆಯ ಹಸಿವನ್ನು ಮೀರಿದುದು. ಇದು ಎಲ್ಲಾ ಕಾಲಕ್ಕೂ ಸತ್ಯ. ಶ್ರೀಕೃಷ್ಣನ ಕಾಲಕ್ಕೂ ssಸತ್ಯ ದುಶ್ಯಂತನ ಕಾಲಕ್ಕೂ ಸತ್ಯ ಇಂದಿಗೂ ಸತ್ಯ. ಅರಸೊತ್ತಿಗೆಯ ಕಾಲದಲ್ಲಿ ಹೆಣ್ಣು ಗಂಡು ವಿವಾಹವಾಗಲು ಈಗಿನಷ್ಟು ಜಾತಿಯ ಕಟ್ಟುಪಾಡುಗಳು ಇರಲಿಲ್ಲ. ಯಾಕೆಂದರೆ ರಾಜರು ತಾವು ಗೆದ್ದ ಪ್ರದೇಶದ ಹೆಣ್ಣು ಮಕ್ಕಳ ಮೇಲೆ ಮೊದಲು ಎರಗುತ್ತಿದ್ದರು. ಅಂತಃಪುರದ ಪರಿವಾರದವರನ್ನೂ ಬಿಡುತ್ತಿರಲಿಲ್ಲ.
ಅರಸ ತನ್ನ ಕಣ್ಣಿಗೆ ಬಿದ್ದ ಸುಂದರ ತರುಣಿಯ ಜಾತಿ, ಕುಲ ನೋಡದೆ ವಿವಾಹ ಆಗುತ್ತಿದ್ದ. 12ನೆಯ ಶತಮಾನದಲ್ಲಿ ಉಡುತಡಿಯ ಅಕ್ಕಮಹಾದೇವಿಯನ್ನು ನೋಡಿ ರಾಜ ಮೋಹಗೊಂಡು ಬಲವಂತವಾಗಿ ಮದುವೆಯಾದ.
ನಮ್ಮ ಮೈಸೂರು ರಾಜರನ್ನೇ ರೋಲ್ ಮಾಡಲ್ ಆಗಿ ತೆಗೆದೊಕೊಳ್ಳಿ. ಮೈಸೂರು ರಾಜ ಪರಂಪರೆಯಲ್ಲಿ ರಾಜಸ್ಥಾನದ ಕುಲೀನ ಕ್ಷತ್ರಿಯರ ಜೊತೆ ವಿವಾಹ ನಡೆಯುತ್ತಿದೆ.
ಅರಸರ ಕಾಲದಲ್ಲಿ ಅರಸು ಪರಿವಾರದವರು ಜನಸಾಮನ್ಯರಿಗೆ ತಮ್ಮ ರಾಜಕುಮಾರಿಯರನ್ನು ವಿವಾಹ ಮಾಡಿಕೊಡುತ್ತಿರಲಿಲ್ಲ ಅರಸು ಪರಿವಾರದವರಿಗೆ ಅರಸು ಪರಿವಾರದವರೇ ಬೇಕಿತ್ತು. ತುಳುವಿನಲ್ಲಿ ಒಂದು ಗಾದೆ ಇದೆ “ ಮುಂಡಾಸ್ ದಾಯೆ ಬರ್ಪುಜೆ ಮುಟ್ಟಾಲೆದಾಯೆ ಬೊಡ್ಚಿ” ಎಂದು. ಕಿರೀಟದವನು ಬರುವುದಿಲ್ಲ ಮುಟ್ಟಾಳೆ ಇಟ್ಟವ (ಶ್ರಮಿಕ) ಬೇಡ ಎಂದು. ಅರಸುಗಳ ಜಾತಿ ನೋಡುವ ಪದ್ಧತಿ ಇರಲಿಲ್ಲ. ಆತ ತಮ್ಮ ಸಮಾನ ಅಂತಸ್ತಿನವನಾಗಬೇಕು ಅಷ್ಟೆ.
ಹೀಗೆ ಆ ಕಾಲದಲ್ಲಿ ಜಾತಿಯ ಕಟ್ಟುಪಾಡುಗಳು ಈಗಿನಷ್ಟು ಬಿಗಿಯಾಗಿರುತ್ತಿರಲಿಲ್ಲ. ಬ್ರಾಹ್ಮಣರು ಕೆಳಜಾತಿ (ನಾಯೆರ್)ಮಹಿಳೆಯರನ್ನು ವಿವಾಹ ಆಗುತ್ತಿದ್ದರು ಕೇರಳದಲ್ಲಿ ಈಗಲೂ ಈ ಪದ್ಧತಿ ಮುಂದುವರಿದಿದೆ.
ಆದರೆ ನಮ್ಮ ಸ್ವತಂತ್ರ ಭಾರತದ ರಾಜಕಾರಣದಲ್ಲಿ ಜಾತಿ ಬಹಳ ಮೇಲುಗೈ ಸಾಧಿಸುತ್ತಿದೆ. ಹೆಣ್ಣು ಗಂಡು ಪರಸ್ಪರ ಮೆಚ್ಚಿ ಪ್ರೀತಿಸಿ ವಿವಾಹವಾಗಲು ಹಲವು ಅಡ್ಡಿಗಳು! ಅದರಲ್ಲಿ ಮುಖ್ಯವಾಗಿ ಕಾಣುವುದು ಸಾಮಾಜಿಕ ಭಯ, ಆತಂಕ! ನಮ್ಮ ಬಂಧುಗಳು ಏನೆನೆನ್ನುತ್ತಾರೆ, ಸಮಾಜ ಏನೆನ್ನುತ್ತದೆ, ನಾವು ಹೇಗೆ ಮುಖ ತೋರಿಸಿ ನೆರೆಕರೆಯವರ ಮಧ್ಯೆ ತಿರುಗುವುದು -ಇತ್ಯಾದಿ ಆತಂಕಗಳಿಗೆ ಹೆತ್ತವರು ಒಳಗಾಗುತ್ತಾರೆ. ವಿವೇಕ ಉಳ್ಳ ವಿಚಾರವಂಥ ಹೆತ್ತವರು “ತಮ್ಮ ಮಕ್ಕಳ ಭವಿಷ್ಯ ಸುಖವಾಗಿರಲಿ” ಎಂದು ಅಂತರ್ಜಾತಿ, ಅಂರ್ತಧರ್ಮೀಯ ವಿವಾಹಕ್ಕೆ ಸಮ್ಮತಿಸುತ್ತಾರೆ.
ಇತ್ತೀಚೆಗೆ ಮಂಡ್ಯದಲ್ಲಿ ಹಿಂದು ಮುಸ್ಲಿಮ್ ಕುಟುಂಬಗಳ ಒಪ್ಪಿಗೆಯೊಂದಿಗೆ ಅವರ ಮಕ್ಕಳ ಮದುವೆ ನಡೆದಾಗ ಕರ್ನಾಟಕ ಹೆಮ್ಮೆಯಿಂದ ಬೀಗಿತ್ತು. ಆ ಎರಡೂ ಕುಟುಂಬದ ಹಿರಿಯರು ಮಾನಸಿಕವಾಗಿ ದುರ್ಬಲರಾಗಿದ್ದರೆ ಈ ವಿವಾಹ ನಡೆಯುತ್ತಿರಲಿಲ್ಲ. ಅನೇಕ ಅಡೆತಡೆಗಳನ್ನು ಎದುರಿಸಿದರೂ, “ನಮ್ಮ ಮಕ್ಕಳ ಭವಿಷ್ಯದ ಚಿಂತೆ ನಮಗಿರಲಿ” ಎಂದು ಎರಡೂ ಕುಟುಂಬಗಳು ಮುಂದುವರಿದರು.
ಸಮಾಜದಲ್ಲಿ ಆದ ಈ ಹೊಸ ವಿದ್ಯಾಮಾನ ನೋಡಿಯಾದರು ಸಮಾಜ ಬದಲಾಗಬೇಕಿತ್ತು. ಆದರೆ ಹಾಗಾಗುತ್ತಿಲ್ಲ.
ಈಗಲೂ ತಮ್ಮದೇ ಕರುಳ ಕುಡಿಗಳನ್ನು ಕೈಯಾರೆ ಕೊಂದು ತಾವು ಜೈಲು ಸೇರುತ್ತಿದ್ದಾರೆ. ಮಕ್ಕಳನ್ನು ಕೊಂದು ಜೈಲು ಸೇರಿದಾಗ ಮಾನ ಹರಾಜಾಗುತ್ತದೆ ಎಂಬ ವಿವೇಕವನ್ನು ಸಿಟ್ಟಿನ ಭರದಲ್ಲಿ ಕಳಕೊಳ್ಳುತ್ತಾರೆ.
ನಾನು ಆಸ್ಟ್ರೇಲಿಯಾದಲ್ಲಿ ಈ ವಿಷಯದಲ್ಲಿ ಅವಮಾನಕ್ಕೆ ಒಳಗಾಗಬೇಕಾಯಿತು. “ಓ ಭಾರತ.,,,,, ನಿಮ್ಮಲ್ಲಿ ಬೇರೆಜಾತಿಯವರನ್ನು ಮದುವೆಯಾದರೆ ಮರ್ಯಾದಾ ಹತ್ಯೆ ಮಾಡುತ್ತಾರೆ” ಎಂದು ವಿಲಕ್ಷಣವಾಗಿ
ನಕ್ಕು ಬಿಟ್ಟರು. ಅವರಿಗೆ ನಾನು ಹೇಳಿದೆ, “ಬನ್ನಿ ನನ್ನ ಸೊಸೆಯನ್ನು ನಿಮಗೆ ಪರಿಚಯಿಸುತ್ತೀನಿ. ಆಕೆ ಆಸ್ಟ್ರೇಲಿಯಾ ಮೂಲದವಳು. ವಿವಾಹ ನಡೆಸಿದ್ದು ನಮ್ಮೂರ ಹಳ್ಳಿಯ ಈಶ್ವರ ದೇವಸ್ಥಾನದಲ್ಲಿ ಎಲ್ಲಾ ಬಂಧು ಬಳಗದ ಉಪಸ್ಥಿತಿಯಲ್ಲ್ಲಿ” ಎಂದಾಗ ಅವರಿಗೆ ಅಚ್ಚರಿ.
ತಮ್ಮ ಮಕ್ಕಳು ಸಮಾಜದ ಕಟ್ಟು ಪಾಡುಗಳನ್ನು ಮೀರಿ ಅಂತರ್ಜಾತೀಯ ವಿವಾಹ ಆಗಬೇಕಾದ ಸಂದರ್ಭ ಎದುರಾಗುವಾಗ ವಿಚಲಿತಗೊಳ್ಳುತ್ತೇವೆ. ಆದರೆ ಆಗ ವಿವೇಚನೆಯನ್ನು ಕಳೆದುಕೊಳ್ಳದೆ ತಾಳ್ಮೆಯಿಂದ ಇದ್ದರೆ ಬದುಕು ಬದಲಿಸಬಹುದು. ಕಾಲ ಸರಿಯುತ್ತದೆ. ಅದು ಎಂತಹ ನೋವನ್ನೂ ಘಾಸಿ ಮಾಡಿಬಿಡುತ್ತದೆ.
ಸಮಾಜ ಹಾಗೆಯೇ ಹರಿಯುವ ನೀರಿನಂತೆ. ಹರಿಯುವ ನೀರಿಗೆ ಎಲ್ಲವನ್ನೂ ತಿಳಿಯಾಗಿಸುವ ಸಾಮಥ್ರ್ಯ ಇದೆ.
No comments:
Post a Comment