Monday, June 20, 2016

ಮಾನವೀಯತೆ ಇರುವ ಮಾನವರಾಗುವುದು ಇಂದಿನ ತುರ್ತು ಅಗತ್ಯ

     

ನಾನು ಅರುಣಾಚಲಕ್ಕೆ ಹೋದ ಸಂದರ್ಭ. ಅರುಣಾಚಲ ಪ್ರದೇಶದ ಥವಾಂಗ್ ಹೆದ್ದಾರಿಯಲ್ಲಿ ಇರುವ ದಿರಾಂಗ್‍ನಲ್ಲಿ ರಾತ್ರಿ ಉಳಕೊಂಡಾಗ ಸ್ಥಳೀಯರನ್ನು ಮಾತನಾಡಿಸಿದೆ. `ಈ ಭಾಗದಲ್ಲಿ ಬೌದ್ಧ ಧರ್ಮಿಯರು ಮತ್ತು ಗುಡ್ಡಗಾಡು ಜನರು ಅಲ್ಲದೆ ಬೇರೆ ಧರ್ಮಿಯರು ಇಲ್ಲ.’ ಎಂದನೊಬ್ಬ.  ಆತ ಕಣಿವೆಭಾಗದಲ್ಲಿ ಹೊಸದಾಗಿ ಕಟ್ಟುತ್ತಿದ್ದ ಚರ್ಚನ್ನು ದೂರದಿಂದ ತೋರಿಸಿದ.  ಆ ಚರ್ಚ್ ಯಾರಿಗಾಗಿ ಎಂದೆ. ಕ್ರೈಸ್ತರು ಈಗಿಲ್ಲ. ಆದರೆ ಮತಾಂತರ ಮಾಡಲು ಒಂದು ಕೇಂದ್ರ ಬೇಕಲ್ಲ ಆದಕ್ಕಾಗಿ ಮೊದಲು ಚರ್ಚ್ ಕಟ್ಟುತ್ತಾರೆ ಎಂದ. ಯಾರೋ ಒಬ್ಬ ಮಿಲಿಟರಿಯ ಕ್ರೈಸ್ತ ಈ ಜಾಗ ಕ್ರೈಸ್ರ ಪಾದ್ರಿಗೆ ನೀಡಿದನಂತೆ. ಬೌದ್ಧರು ಮತಾಂತರ ಆಗುತ್ತಾರೆಯೆ? ಎಂದಾಗ `ಇಲ್ಲ ಎಂದ ಆತ ಬುಡಗಟ್ಟು ಜನರನ್ನು ಮತಾಂತರ ಮಾಡಲು ಅವರು ಬಂದಿದ್ದಾರೆ’ ಎಂದ. `ಬುಡಗಟ್ಟು ಜನರು ಪ್ರಕೃತಿಯ ಆರಾಧಕರು ಅವರಿಗೆ ಧರ್ಮ ಇಲ್ಲ.’ ಎನ್ನಲು ಆತ ಮರೆಯಲಿಲ್ಲ. ಅವರು ಹಿಂದೂಗಳು ಅಲ್ಲವೆ?  ಎಂದಾಗ ಬುಡಗಟ್ಟು ಜನರು ಶ್ರೀ ರಾಮ ಶ್ರೀ ಕೃಷ್ಣ ಮುಂತಾದ  ಹಿಂದೂ ದೇವರನ್ನು ಪೂಜಿಸುವುದಿಲ್ಲ ಹೀಗಾಗಿ ಅವರು ಹಿಂದೂಗಳು ಅಲ್ಲ ಎಂದು ಖಚಿತ ಮಾತುಗಳಲ್ಲಿ ನುಡಿದ. ನನಗೆ ಅಚ್ಚರಿ. ಹಿಂದೂ ಆಗಲು ಬೇರೆ ಇನ್ನಾವ ಪ್ರಕ್ರಿಯೆ ಇದೆ. ಜನಿವಾರಧಾರಣೆ ಆಗಲೀ ಲಿಂಗಧಾರಣೆ ಆಗಲೀ, ಅಸಂಖ್ಯಾತ ಹಿಂದೂಗಳಿಗೆ ಇಲ್ಲ. ದ್ವಿಜರು ಅಥವಾ ಜನಿವಾರಧಾರಿಗಳು ವೀರ ಶೈವರು ಧರ್ಮದ ಪ್ರಕ್ರಿಯೆಗೆ ಒಳಗಾಗುತ್ತಾರೆ ನಿಜ.
ಪ್ರಕೃತಿ ಪೂಜಕರಾದ ಬುಡಗಟ್ಟು ಸಮುದಾಯದವರು ಹಿಂದೂಗಳು ಅಲ್ಲವಾದರೆ ಬುಡಗಟ್ಟು ಮೂಲದ ಉಪಾಸನಾ ಪದ್ಧತಿಯಾದ ಭೂತಾರಾಧಾನಾ ಪಂಥದವಳಾದ ನಾನು ಯಾರು ಎಂಬ ಪ್ರಶ್ನೆ ನನ್ನನ್ನು ಕಾಡಿತು.
ತುಳುವರು ವೇಧಾಧರಿತ ಸಮಾಜದವರು ಅಲ್ಲ.
ತುಳು ನೆಲದ ಮಕ್ಕಳಲ್ಲಿ ಪಿತೃ ಪ್ರಧಾನ ಸಂಸ್ಕøತಿಯಿಲ್ಲ. ಇಂದಿಗೂ ಕನ್ಯಾದಾನ ಇಲ್ಲ. ವಿವಾಹ ಒಂದು ಒಪ್ಪಂದ. ಉತ್ತಮ ಸಂತಾನಕ್ಕಾಗಿ ಮತ್ತು ಸುಖ ಬಾಳುವೆಗಾಗಿ. ಈ ಎರಡರಲ್ಲೂ ತೊಡಕಾದರೆ ಮದುವೆಯನ್ನು ಹಿರಿಯರೇ ನಿಂತು ಮುರಿಯುತ್ತಾರೆ.  ವೇಧಾಧರಿತ ಸಮಾಜದಂತೆ ವಿವಾಹ ಎನ್ನುವುದು ಜನ್ಮ ಜನ್ಮದ ಅನುಬಂಧ ಅಲ್ಲ. ನೆಲದ ಮಕ್ಕಳ ಪ್ರಕಾರ ಇಲ್ಲಿ ಇರುವುದೊಂದೇ ಜನ್ಮ. ಸಮಾಜ ಕಂಟಕರನ್ನು ಭೂತಗಳು ಇರುವ ಜನ್ಮದಲ್ಲಿಯೇ ಶಿಕ್ಷಸುತ್ತವೆ ಎನ್ನುವ ನಂಬಿಕೆ ಇದೆ. ದುಷ್ಟನಾದವನು ಈ ಇರುವ ಜನ್ಮದಲ್ಲಿಯೇ ದುಷ್ಕøತ್ಯದ ಫಲ ಅನುಭವಿಸುತ್ತಾನೆ. ಅದೇ ನರಕ. ಒಳ್ಳೆಯವ ಈ ಜನ್ಮದಲ್ಲಿಯೇ ಅದರ ಫಲ ಅನುಭವಿಸುತ್ತನೆ ಅದೇ ಸ್ವರ್ಗ. ತುಳು ಜನಪದರಲ್ಲಿ ಬೇರೆ ಸ್ವರ್ಗ ನರಕದ  ಕಲ್ಪನೆ ಇಲ್ಲ.
ಕಾಡಿನ ಮೂಲದ ಹುಟ್ಟಿನ ಚಿತ್ತೇರಿ -ಮೂಲಸ್ಥಾನ ಎನ್ನುವುದು ತುಳುವರ ಹುಟ್ಟು ಮತ್ತು ಸಾವಿನ ಕೇಂದ್ರ.. ಫಲವಂತಿಕೆಯನ್ನು ಪಡೆಯುವುದೂ ಇಲ್ಲಿ. ಸತ್ತ ನಂತರ ಸೇರುವುದೂ ಇಲ್ಲ. `ಇದ್ದರೆ ಇಲ್ಲಿ ಈ ಭೂಮಿಯಲ್ಲಿ  ಸತ್ತರೆ ಅಲ್ಲಿ ನಾಗಬೆರ್ಮೆರ ಬಳಿ’ ಇದು ಜನಪದರ ನಂಬಿಕೆ. ತಾವು ನಾಗ ಬ್ರಹ್ರನ ಮೂಲಸ್ಥಾನದ ಕಾಡಿನಿಂದ ಬಂದವರು, ಮೂಲಸ್ಥಾನದ  ಕಾಡಿಗೇ ಸೇರುವವರು ಎನ್ನುವುದು ನಂಬಿಕೆ. ಮಣ್ಣಿನಿಂದ ಬಂದವರು ಮಣ್ಣಿಗೇ ಸೇರುವವರು.  ಪ್ರಕೃತಿಯ ಮಕ್ಕಳು ಪ್ರಕೃತಿಗೆ ಸೇರುವವರು. ಸೈವರಿಗೆ ಕೈಲಾಸ, ವೈಷ್ಣವರಿಗೆ ವೈಕುಂಠ ಎಂಬ ನಂನಬಿಕೆಯಂತೆ ತುಳು ನೆಲದ ಸಂಸ್ಕøತಿಯಲ್ಲಿ ತುಳುವರಿಗೆ  ನಾಗ ಬ್ರಹ್ಮಸ್ಥಾನ.
ಮಾತೃ ವಂಶೀಯ ತುಳು ಸಂಸ್ಕøತಿಯಲ್ಲಿ ವಿವಾಹಾನಂತರ ತುಳುವರ ಹೆಣ್ಣು ತನ್ನ ಅಸ್ಮಿತೆಯನ್ನು ಕಳೆದುಕೊಳ್ಳುವುದಿಲ್ಲ. ವೈದಿಕ ಸಂಪ್ರದಾಯ  ಪುರುಷ ಪ್ರಧಾನವಾಗಿದ್ದರೆ ಸ್ಥಳೀಯ ಸಂಸ್ಕøತಿಯಲ್ಲಿ ಸ್ತ್ರೀ ಪ್ರಧಾನ (ಪ್ರಕೃತಿ ಪ್ರಧಾನ) ಪ್ರಕೃತಿ ಮತ್ತು ಸ್ತ್ರೀ ಎರಡೂ ಫಲ ಶಕ್ತಿದಾಯಿಗಳು. ತುಳುವರ ಮೂಲಸ್ಥಾನ ಕ್ಷೇತ್ರಗಳಲ್ಲಿ ಪ್ರಕೃತಿ ಮತ್ತು ಸ್ತ್ರೀಯನ್ನು ಪೂಜಿಸಲಾಗುತ್ತಿದೆ.
“ಒಂದು ಬುಡಕಟ್ಟು ಹಿಂದೂಕರಣ ಗೊಂಡಾಗ ಅದರ ಸ್ಥಾನಮಾನ ವೃದ್ಧಿಸುತ್ತದೆ.” ಎನ್ನುತ್ತಾರೆÉ ಮ್ಯಾಕ್ಸ್ ವೆಬರ್. ಒಂದು ಬುಡಗಟ್ಟು ನಾಗರಿಕ ಜಗತ್ತ್ತಿನೊಂದಿಗೆ ಬೆರೆತಾಗ  ಅದರ ಸ್ಥಾನಮಾನ ಹೆಚ್ಚುತ್ತದೆಯೇ ವಿನಃ ಅದು ಹಿಂದೂಕರಣಗೊಂಡಾಗ ಅದರ ಸ್ಥಾನ ಮಾನ ವೃದ್ಧಿಸುವುದು ಹೇಗೆ? ವಾಸ್ತವವಾಗಿ ಹಿಂದೂಕರಣ ಎಂದರೇನು? ಪರಂಪರೆಯಿಂದ ಬಂದಂತಹ ಬುಡಗಟ್ಟು ಸಂಪ್ರದಾಯದ ಆಚರಣೆಗಳನ್ನು ಉಪಾಸನ ಪದ್ಧತಿಗಳನ್ನು ನಿರಾಕರಿಸಿ ಶ್ರೀ ರಾಮ, ಶ್ರೀ ಕೃಷ್ಣನನ್ನು ಪೂಜಿಸಿದ ಮಾತ್ರಕ್ಕೆ ಹಿಂದೂಕರಣವೆ? ಶಿವನನ್ನು ಪೂಜಿಸಿದರೆ ಲಿಂಗಾಯಿತೀಕರಣವೇ? ಈಗಿನ ಪರಿಭಾಷೆಯ ಹಿಂದೂಗಳಲ್ಲಿ ಅನೇಕ ಅಬ್ರಾಹ್ಮಣರು ಚರ್ಚ್‍ಗೂ ಹೋಗುತ್ತಾರೆ, ದರ್ಗಾಕ್ಕೂ ನಂಬಿ ನಡೆಯುತ್ತಾರೆ. ಮುಸ್ಲಿಂ ಜನಾಂಗದಲ್ಲೂ ಅನೇಕರು ಸ್ಥಳೀಯ ದೇವತಾರಾಧನೆಯನ್ನು ಒಪ್ಪಿ ನಡೆಯುತ್ತಾರೆ. ತುಳುನಾಡಿನ ಭೂತಾರಾಧನೆಯಲ್ಲಿ ಮುಸ್ಲಿಂ ಸಮುದಾಯದ ಅನೇಕರು ಭಾಗವಹಿಸಿ ಹರಕೆ ಒಪ್ಪಿಸುತ್ತಾರೆ. ಇವೆಲ್ಲ Riligion  -ಮತವನ್ನು ಮೀರಿನಿಂತಿದೆ ಮಾನವ ಧರ್ಮ.  ಪ್ರಕೃತಿಯ ಆರಾಧನೆಯ ಭಾಗವಾದ ಭೂತಾರಾಧನೆ ಮಾನವ ಧರ್ಮವನ್ನು ರಕ್ಷಿಸುವ  ಹೊಣೆಗಾರಿಕೆಯಿಂದ ಕೂಡಿದೆ.  ಮಾನವೀಯತೆ ಇರುವ ಮಾನವರಾಗುವುದು ಇಂದಿನ ತುರ್ತು ಅಗತ್ಯ

ಡಾ. ಇಂದಿರಾ ಹೆಗ್ಗಡೆ

No comments:

Post a Comment