Thursday, April 14, 2016

2013 April 14 udayavani ಹೊಸ ಉಸಿರು

Tulunadu Bisu. atkarmbisana jeppu 


  ಸರ್ವರಿಗೆ ಹೊಸ ವರ್ಷ ಹೊಸ ಹರ್ಷ ತರುವ ಬಿಸು/ ಯುಗಾದಿ

ಪುರಾಣದ ಪ್ರಕಾರ ಜಳಪ್ರಳಯದ ನಂತರ ಬ್ರಹ್ಮನು ಪುನರಪಿ ಸೃಷ್ಟಿ ಕಾರ್ಯಕ್ಕೆ ಇಳಿಯುತ್ತಾನೆ. ನೀರಿನಿಂದ ಮುಳುಗೆದ್ದ ಭೂಮಿಯ ಮೇಲೆ ಸೂರ್ಯನ ಮೊದಲ ಕಿರಣ ಬಿದ್ದ ದಿನವೇ ಹೊಸ ಯುಗದ ಆರಂಭ. ಅದುವೇ ಮಹಾರಾಷ್ಟ್ರ,ಗೋವಾ, ಆಂದ್ರ, ಮತ್ತು ಕರ್ನಾಟಕದ ಯುಗಾದಿ; ತಮಿಳುನಾಡಿನ ಪಿರಪ್ಪು ವೆಳಕ್ಕು; ಕೇರಳದ ವಿಷು; ತುಳುನಾಡಿನ ಬಿಸು; ಬಿಹಾರದ ವೈಶಾಖ; ಅಸ್ಸಾಮಿನ ಬಿಹು; ಪಂಜಾಬ್, ಬಂಗಾಳ, ಬಾಂಗ್ಲಾ, ಅಸ್ಸಾಮ್, ತ್ರಿಪುರ -ಈ ಭಾಗದ ಬೈಶಾಖಿ,
ಬಾಂಗ್ಲಾ ದೇಶ ಕೂಡಾ ಬಂಗಾಲಿ ಪಂಚಾಂಗ ಪ್ರಕಾರ ಪೋಲಿಯಾ ಬೈಶಾಖಿಯನ್ನು ‘ನಬೊ ಬರ್ಸಾ (ಹೊಸ ವರ್ಷ)’ ಎಂದು ಆಚರಿಸುತ್ತಾರೆ. ‘ನಬೊ ಬರ್ಸೊ’ಗೆ ರಾಷ್ಟ್ರೀಯ ರಜೆ ಘೋಷಿಸಲಾಗುತ್ತದೆ. ಎಲ್ಲ ಪತ್ರಿಕಾ ಕಛೇರಿಗಳು ಕೂಡಾ ರಜೆ ಘೋಷಿಸುತ್ತವೆ.

ಪುರಾಣದ ನಂಬಿಕೆಯ ಪ್ರಭಾವವೋ ಅಥವಾ ಜನರ ಆಚರಣೆಗೆ ಪುರಾಣ ಸಾಹಿತ್ಯ ಧಾರ್ಮಿಕ ಮುದ್ರೆ ಒತ್ತಿ ಬಿಟ್ಟಿತ್ತೋ ಎಂಬುದು ಬೇರೆ ವಿಚಾರ. ಒಟ್ಟಿನಲ್ಲಿ ಇಡಿಯ ಭಾರತದಲ್ಲಿ ಸೌರಮಾನ ಮತ್ತು ಚಾಂದ್ರ ಮಾನ ಎಂದು ಎರಡು ಪದ್ಧತಿಯ ಗಣನೆಯಲ್ಲಿ ಹೊಸ ವರುಷವನ್ನು ಆಚರಿಲಾಗುತ್ತದೆ. ಎರಡೂ ಪದ್ಧತಿಗಳಲ್ಲಿ ಯುಗದ/ವರ್ಷದ ಮೊದಲ ಬೆಳಗನ್ನು ಸ್ವಾಗತಿಸುವ ಮೊದಲ ಹಬ್ಬ ಯುಗಾದಿ/ಬಿಸು.

ವಾಸ್ತವ ಜಗತ್ತಿನಲ್ಲಿ ಹಳೆಯ ವರ್ಷದ ಕೊನೆಯ ದಿನ ರಾತ್ರಿ ಹಗಲು ಮತ್ತು ರಾತ್ರಿ ಒಂದೇ ಸಮನಾಗಿರುತ್ತದೆ. ಸೌರಮಾನದ ಸೂರ್ಯ ಚಲನೆಯ ಪ್ರಕಾರ ಸೂರ್ಯ ದಿನರಾತ್ರಿಗಳನ್ನು ಸಮತೋಲನದಲ್ಲಿರಿಸಿ ಮತ್ತೆ ಮೇಷ ರಾಶಿಗೆ ಪ್ರವೇಶಿಸುವ ಮೊದಲ ಬೆಳಗು ಬಿಸು ಅಥವಾ ವೈಸಾಖಿ. ಈಶಾನ್ಯ ಭಾರತದಲ್ಲಿ ಕೆಲವಡೆ ಬಿಸು/ಬೈಶಾಖಿಯಂದು ಸೂರ್ಯನ ಉಪಾಸನೆ ಮತ್ತು ಸೂರ್ಯ ನಮಸ್ಕಾರ ಮಾಡುತ್ತಾರೆ.
ಸೂರ್ಯನ ಪಥವನ್ನು ಲೆಕ್ಕ ಹಾಕಿ ಸೌರಮಾನ ಪಂಚಾಂಗ ಇದ್ದರೆ ಚಂದ್ರನ ಚಲನೆಯನ್ನು ಅನುಸರಿಸಿ ಚಾಂದ್ರಮಾನ ಪಂಚಾಗ ಇದೆ. ಚಾಂದ್ರಮಾನದ ಯುಗಾದಿ ಮತ್ತು ಸೌರಮಾನದ ಬಿಸು ವಸಂತ ಮಾಸದ ಹೊಸ ಚಿಗುರನ್ನು ಹೊಸ ಫಲಗಳನ್ನು ಜೊತೆಗೆ ತರುತ್ತದೆ.

ಬಿಸು/ಯುಗಾದಿ ಅಂದರೆ ಚೈತ್ರಾಗಮನ! ವಸಂತಾಗಮನ! ಮರ ಮರಗಳು ಅರಳಿ ಹೂ ಬಿಟ್ಟು ಕಾಯಿಯಾಗುವ ಕಾಲ. ಎಲ್ಲಲ್ಲೂ ನವೊನವೋಲ್ಲಾಸ. ಪ್ರಕೃತಿ ಫಲವಂತಿಕೆಗೆ ಸಿದ್ಧಳಾಗಿ ಮಳೆರಾಯನ ನಿರೀಕ್ಷೆಯಲ್ಲಿ ವಿರಹದಿಂದ ಕಾತರಳಾಗಿರುವ ದಿನಗಳು ಇವು. ಮಳೆ ಬಿದ್ದರೆ ಭೂಮಿಯಲ್ಲಿ ನೀರು ನಿಲ್ಲುತ್ತದೆ. (ಗರ್ಭ ಕಟ್ಟುತ್ತದೆ) ಭೂಮಿಯ ಬಸಿರು ಕುಡಿಯೊಡೆಯುತ್ತದೆ, ಹಸಿರಾಗುತ್ತದೆ. ಮುಂಬರುವ ಮಳೆಗಾಲದ ಕೃಷಿ ಚಟುವಟಿಕೆಗಳಿಗೆ ಸಿದ್ಧತೆ ಕೂಡಾ ಈ ದಿನದಿಂದ ಆರಂಭವಾಗುತ್ತದೆ. ಭಾರತದ ಕೆಲವು ಭಾಗಗಳಲ್ಲಿ ಈ ದಿನ ವರುಣನನ್ನು  ಮಳೆಗಾಗಿ ಪ್ರಾರ್ಥಿಸುತ್ತಾರೆ.
ಅಖಿಲ ಬಾರತ ವ್ಯಾಪ್ತಿಯ ಬಿಸು/ಯುಗಾದಿ:
ಚಾಂದ್ರಮಾನ ಪಂಚಾಂಗ ಯುಗಾದಿ ನೂತನ ಸಂವತ್ಸರÀ ಚೈತ್ರ ಮಾಸದ ಶುಕ್ಲ ಪಕ್ಷದ ಪಾಡ್ಯದ ತಿಥಿಯಂದು ಆರಂಭವಾಗುತ್ತದೆ. ಆಚರಿಸುವ ಗೋವಾ, ಮಹಾರಾಷ್ಟ್ರ, ಆಂದ್ರ ಕನ್ನಡಿಗರಿಗೆ ಚೈತ್ರ ತರುವ ಹಬ್ಬ.  ಉತ್ತರ ಕರ್ನಾಟಕದಲ್ಲಿ ಯುಗಾದಿಯನ್ನು ಹಿರಿಯರ ಹಬ್ಬವನ್ನಾಗಿ ಆಚರಿಸುತ್ತಾರೆ. ಸತ್ತ ಹಿರಿಯರಿಗೆ ಪೂಜೆ ಸಲ್ಲಿಸಿ, ಬದುಕಿರುವ ಹಿರಿಯರಿಂದ ಆಶೀರ್ವಾದ ಪಡೆಯುತ್ತಾರೆ. ಪುರುಷರಿಗೆ ಮಹಿಳೆಯರು ಆರತಿ ಮಾಡಿದರೆ ಮಹಿಳೆಯರು ಪುರುಷರಿಗೆ ಬಹುಮಾನ ನೀಡುತ್ತಾರೆ.
ಮಹಾರಾಷ್ಟ್ರದಲ್ಲಿ ಗುಡಿ ಪಾಡ್ಯವಾಗಿ ಯುಗಾದಿಯನ್ನು ಆಚರಿಸುತ್ತರೆ. ಒಂದು ಕೋಲಿಗೆ ಹೂವಿನಿಂಲಂಕರಿಸಿ ಹೊಸ ಬಟ್ಟೆಯನ್ನು ಪತಾಕೆಯಂತೆ ಕಟ್ಟುತ್ತಾರೆ. ಮರಾಠಿಗರ ಮನೆ ಮುಂದೆ ಯುಗಾದಿಯಂದು ಇಂತಹ ‘ಗುಡಿ’ ಕಟ್ಟಿ ಹೊಸ ಬೆಳಗನ್ನು ಸ್ವಾಗತಿಸುವುದನ್ನು ಕಾಣಬಹುದು. ‘ಗುಡಿ ಪಾವಡ’ವನ್ನು ಬ್ರಹ್ಮ ಧ್ವಜ, ಇಂದ್ರ ಧ್ವಜ ಎಂದೂ ಕರೆಯುತ್ತಾರೆ.  ಯುಗಾದಿ ಹೆಸರಿನಲ್ಲಿ ಮಾಡುವ ವಿಶಿಷ್ಟ ಖಾದ್ಯ ತೆಂಗಿನ ಕಾಯಿಯ ಒಬ್ಬಟ್ಟು. ಇದನ್ನು ‘ಪೂರಣ ಪೋಳಿ’ ಎಂದು ಕರೆಯುತ್ತಾರೆ.  ಹೊಸ  ಫಲದ ಮಾವಿನಕಾಯಿಯ ಉಪ್ಪಿನ ಕಾಯಿಯೂ ಜೊತೆಗಿರುತ್ತದೆ.  
ಆಂದ್ರದಲ್ಲಿ ಹುಣಸೆ, ಬೆಲ,್ಲ ಮಾವಿನ ಕಾಯಿ, ಉಪ್ಪು ,ಬೇವು, ಬೆಲ್ಲ ಸೇರಿಸಿ ಮಾಡುವ ತಿಂಡಿಯ ಹೆಸರು ಯುಗಾದಿ ಪಚ್ಚಡಿ ಎಂದು
ಗೋವಾದ ಕೊಂಕಣಿಗರು ಯುಗಾದಿಗೆ ಮಾಡುವ ‘ಕನಾಗಂಚಿ ಖೀರ್’ ಅಂದರೆ ಸಿಹಿ ಗೆಣಸು, ಹಾಳು ಬೆಲ್ಲ, ತೆಂಗಿನ ಕಾಯಿ ಅಕ್ಕಿ ಹಿಟ್ಟು ಸೇರಿಸಿ ತಯಾರಿಸಿದ ಪಾಯಸ.
ಪಂಜಾಬಿನಲ್ಲಿ ಹೊಸ ಫಸಲು ತರುವ ಬೈಸಾಖಿ. ಸಿಖ್ಖರಿಗೆ ವಿಶೇಷÀ ಹಬ್ಬ ಆದಿನ ಗುರುದ್ವಾರದಲ್ಲಿ ಸಂಬ್ರಮಾಚರಣೆಗಳನ್ನು ಮಾಡುತ್ತಾರೆ.
ಅಸ್ಸಾಮನಲ್ಲಿ ವರ್ಷಕ್ಕೆ ಮೂರು ಬಿಹುಗಳು ಇವೆ. ಯಾದರೂ ಇದು ತುಳುನಾಡಿನ ಬಿಸು ವಿನಂತೆ ಎಪ್ರಿಲ್ ತಿಂಗಳ 13ರಂದು -14ಆಚರಿಸುತ್ತಾರೆ. ಈ ಭಾಗದಲ್ಲೀ ಕೂಡಾ ಬಿಸು ಅಥವಾ ವೈಸಾಖಿ ಕೃಷಿ ಹಬ್ಬ. ಇದು ಕೃಷಿಗೆ ಸಿದ್ಧತೆಗೊಳ್ಳುವ ವರ್ಷ. ಹೊಸ ವರ್ಷ. ಹೊಸ ಬಟ್ಟೆ ಧರಿಸಿ ಕುಣಿತ, ಮನರಂಜನೆಗ:ಳ ಮೂಲಕ ಹೊಸ ವರ್ಷವನ್ನು ಸ್ವಾಗತಿಸುತ್ತಾರೆ.
ಬಂಗಾಳಿಗಳು  ಬೈಸಾಖಿಯನ್ನು ಪೋಲಾ ಹಬ್ಬ ಎಂದು ಕೂಡಾ ಕರೆಯುತ್ತಾರೆ. ಬಂಗಾಳದಲ್ಲಿ ಇದು ವ್ಯಾಪಾರಿಗಳಿಗೂ ಸಂಭ್ರಮದ ಹಬ್ಬ. ಆ ದಿನ ವ್ಯಾಪಾರೀ ಸಮುದಾಯದವರು ಹಳೆಯ ಲೆಕ್ಕ ಪತ್ರ ಪುಸ್ತಕ ಮುಗಿಸಿ ಹೊಸ ಪುಸ್ತಕ ತೆರೆಯುತ್ತಾರೆ. ಹರಿ ಕಥೆ ನಡೆಸುತ್ತಾರೆ.
ಬಿಹಾರದ ಸೂರಜ್ ಪುರ್ (ಸೂರ್ಯ ನಗರಿ)ನ  ಬಾರಗಾಂವ್ ಎಂಬ ಹಳ್ಳಿಯಲ್ಲಿ ಈ ದಿನ ಸೂರ್ಯ ಪೂಜೆಯನ್ನು ಮಾಡುತ್ತಾರೆ. ಪ್ರಾಚೀನ ಪದ್ಧತಿಯಂತೆ ಸೂರ್ಯ ದೇವಾ¯ಯದ ಸೂರ್ಯ ಕುಂಡದಲ್ಲಿ ಮಿಂದು ಗಂಗಾ ನದಿಯ ನೀರಿನಿಂದ ಮತ್ತು ಪುಷ್ಪಗಳಿಂದ ಸೂರ್ಯ ಪೂಜೆ ಮಾಡುತ್ತಾರೆ. ಇದನ್ನು ‘ಛಟ್ ಪೂಜಾ’ ಎಂದು ಕರೆಯುತ್ತಾರೆ.
ತಮಿಳರು ವಿಷುವನ್ನು ‘ಪಿರಪ್ಪು’ (ಹೊಸ ವರುಷದ ಜನನ) ಎಂದು ಕರೆಯುತ್ತಾರೆ.  ಈ ದಿನ ಬ್ರಹ್ಮ ಸೃಷ್ಟಿಯ ದಿನ ಎಂಬ ನಂಬಿಕೆಯೂ ಇವÀರಲ್ಲಿದೆ. ಕತ್ತಲೆಯನ್ನು ಓಡಿಸುತ್ತದೆ ಎನ್ನುವ ನಂಬಿಕೆಯಿಂದ ‘ಕುತ್ತಿವೆಳಕ್ಕು” ದೀಪ ಹೊತ್ತಿಸಿ ಹೊಸ ವರುಷದ ಮೊದಲ ಬೆಳಗÀನ್ನು ಸ್ವಾಗತಿಸುತ್ತಾರೆ. ದೇವಸ್ಥಾನಗಳಿಗೆ ಹೋಗಿ ಸಂಭ್ರಮಾಚಾರಣೆ ಮಾಡುತ್ತಾರೆ.

ಕನ್ನಡಿಗರ ಯುಗಾದಿ ಬೇವು ಬೆಲ್ಲ:
ಯುಗಾದಿಯಂದು ಬೇವು ಬೆಲ್ಲವನ್ನು ನಗರಗಳಲ್ಲಿ ನೆರೆ ಮನೆಯವರಿಗೆಲ್ಲ ಹಂಚುತ್ತಾರೆ.
“ಶತಾಯ ವಜ್ರ ದೇಹಾಯ ಸರ್ವಸಂಪತ್ಕರಾಯಚ:
ಸರ್ವಾರಿಷ್ಟ ವಿನಾಶಾಯ ನಿಂಬಕಂದಳ ಭಕ್ಷಣಂ
( “ನೂರು ವರ್ಷಗಳ ಆಯುಷ್ಯ ಸಧೃಢ ಆರೋಗ್ಯ, ಸಕಲ ಸಂಪತ್ತು ಪ್ರಾಪ್ತಿಗಾಗಿ ಸಕಲ ಅನಿಷ್ಟ ನಿವಾರಣೆಗಾಗಿ ಬೇವು ಬೆಲ್ಲ ಸೇವನೆ ಮಾಡುತ್ತೇನೆ.”) ಹೀಗೆ ಪಠಿಸುತ್ತಾ ಮಾನವ ತನ್ನ ಬದುಕುನಲ್ಲಿ ಸುಖ ಕಷ್ಟಗಳನ್ನು ಸಮಾನವಾಗಿ ಎದುರಿಸಬೇಕು ಎಂಬ ಆಶಯದಿಂದ ಸಿಹಿಕಹಿಗಳನ್ನು ಮನಸ್ಸು ಮತ್ತು ದೇಹ ಅರಗಿಸಿಕೊಳ್ಳಲು ಮಕ್ಕಳಾದಿಯಾಗಿ ಎಲ್ಲರಿಗೂ ಬೇವು ಬೆಲ್ಲವನ್ನು ಖಡ್ಡಾಯವಾಗಿ ತಿನ್ನಿಸುತ್ತಾರೆ.
ಆದರೆ ಇದಕ್ಕಿಂತ ಹೆಚ್ಚಾಗಿ ಬೇವಿನಲ್ಲಿ ಔಷಧೀಯ ಗುಣಗಳಿವೆ. ಬೇಸಗೆಯ ದಿನಗಳಲ್ಲಿ, ದಡಾರ, ಸಿಡುಬು ಮುಂತಾದ ಮಾರಿ ಬೇನೆಗಳು ಬರುವುದು ಹೆಚ್ಚು. ಬೇವಿನ ಎಲೆಗಳಿಗೆ ಮಾರಿ ಕಾಯಿಲೆಯನ್ನು ನಿವಾರಿಸವ ಔಷಧೀಯ ಗುಣ ಇದೆ. ನಿತ್ಯ ಬೇವಿನೆಲೆ ತಿಂದರೆ ಹಾವು ಕಚ್ಚಿದರೂ ವಿಷವೇರುವುದಿಲ್ಲ ಎನ್ನುತ್ತಾರೆ. ಅದಕ್ಕಾಗಿ ಬೇವು ತಿನ್ನಿಸುವುದಲ್ಲದೆ ಮನೆ ಬಾಗಿಲಿಗೆ ಮಾವು ಬೇವಿನ ತೋರಣ ಕಟ್ಟುತ್ತಾರ. ಬಿಸಿ ನೀರಿನ ಹಂಡೆಗೆ ಬೇವಿನ ಎಲೆ ಹಾಕಿ ಬೇಯಿಸಿ ಸ್ನಾನಕ್ಕೆ ನೀರನ್ನು ಒದಗಿಸುತ್ತಾರೆ.
ಬೆಂಗಳೂರು ಮಾರುಕಟ್ಟೆಗಳಲ್ಲಿ ಯುಗಾದಿಗೆ ಬೇವಿನ ಸೊಪ್ಪು ರಾಶಿ ಬೀಳುತ್ತದೆ.
ಮುಂಜಾನೆ ಎದ್ದು ಅಭ್ಯಂಜನ ಮುಗಿಸಿ ಪಣ್ಯಾಹ ಮಂತ್ರ ಪಠಿಸಿ ಮಾವಿನ ಎಳೆಗಳಿಂದ ನೀರು ಪ್ರೋಕ್ಷಿಸಿ  ಮನೆಯನ್ನು ಪವಿತ್ರಗೊಳಿಸುತ್ತಾರೆ. ಹೊಸ ಬಟ್ಟೆ ತೊಟ್ಟು ಮನೆಗಳಲ್ಲಿ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸುತ್ತಾರೆ. ಬಂಧುಗಳು ಒಟ್ಟಾಗಿ ಒಂದೇ ಮನೆಯಲ್ಲಿ ಸೇರಿ ಹಬ್ಬ ಆಚರಿಸುತ್ತಾರೆ. ಹಿರಿಯರ ಆಶೀರ್ವಾದ ಪಡೆಯುತ್ತಾರೆ.
ಬೆಳಿಗ್ಗೆ ಹೊಸ ಪಂಚಾಂಗಕ್ಕೆ ಪೂಜೆ ಮಾಡಿ ಸಂಜೆ ದೇವಸ್ಥಾನದಲ್ಲಿ ಪಂಚಾಂಗ ಶ್ರವÀಣ ಮಾಡುತ್ತಾರೆ. ಹೊಸ ವರ್ಷದ ಶುಭಾಶುಭ ಫಲಗಳನ್ನು ಪಂಚಾಂಗ ಶ್ರವಣದ ಮೂಲಕ ತಿಳಿದುಕೊಳ್ಳುತ್ತಾರೆ.
ಬೇವು ಬೆಲ್ಲದ ಜೊತೆ ಒಬ್ಬಟ್ಟಿನ ಹಬ್ಬದೂಟ ಇರುತ್ತದೆ. ರೈತರು ಆ ದಿನ ಬಿತ್ತನೆ ಮಾಡುತ್ತಾರೆ.
ಅಬ್ರಾಹ್ಮಣರಿಗೆ ಯುಗಾದಿಯ ಮರುದಿನದ ಹೊಸ ತೊಡಕು ಬಹಳ ವಿಶಿಷ್ಟ. ಹೊಸ ತೊಡಕಿಗೆ ಮಾಂಸಾಹಾರ ಬೇಕು. ಕೋಳಿ ಕುರಿ ಕಡಿಯಾಲಾಗುತ್ತದೆ.
ಭಾರತದ ಇತರೆ ರಾಜ್ಯಗಳಲ್ಲಿ ಅವರವರ ರಾಜ್ಯದ ಸಾಂಪ್ರದಾಯಿಕ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಅಯೋಜಿಸಿ ಬೈಶಾಖಿ, ಬಿಸು/ಯುಗಾದಿ ಆಚರಿಸಿದರೆ ಕನ್ನಡಿಗರಲ್ಲಿ ಇಸ್ಪೀಟ್ ಆಟದ ಮೋಜು. ಆಧುನಿಕ ದಿನಗಳಲ್ಲಿ ಶಾಮಿಯಾನ ಚಪ್ಪರ ಹಾಕಿ ಇಸ್ಪೀಟ್ ಆಡಲಾಗುತ್ತದೆ. ಬೆಂಗಳೂರಿನ ಜನರು ಅವರವರ ಹಳ್ಳಿಗೆ ಹೋಗಿ ಯುಗಾದಿ ಆಚರಿಸಲ ವಿಸೇಷ ಬಸ್ ವ್ಯವಸ್ಥೆಯನ್ನು ಸರಕಾರ ಕಲ್ಪಿಸುತ್ತದೆ.

ತುಳುನಾಡಿನ ನೆಲದ ಪರಂಪರೆಯ ಬಿಸು:
ಕರ್ನಾಟಕ ಕನ್ನಡಿಗರು ಚಾಂದ್ರಮಾನ ಯುಗಾದಿ ಆಚರಿಸಿದರೆ ಕರ್ಣಾಟಕದ ಭಾಗವಾಗಿರುವ ತುಳುನಾಡಿನ ತುಳುವರು ಸೌರಮಾನ ಪದ್ಧತಿಯ ಬಿಸು ಆಚರಿಸುತ್ತಾರೆ. ಅನೇಕ ಸಮಾನ ಆಶಯಗಳು ತುಳುನಾಡಿಗೂ ಭಾರತದ ಇತರ ಭಾಗಗಳಿಗೂ ಇದೆ. ಆದರೂ ತುಳುನಾಡು ಒಂದು ವೈಶಿಷ್ಯಪೂರ್ಣ ಪರಂಪರೆಯನ್ನು ಉಳಿಸಿಕೊಂಡಿರುವ ಕಡಲತಡಿ.  ಸಾಮ್ಯತೆಯಲ್ಲೂ ಎದ್ದು ಕಾಣುವ ಭಿನ್ನತೆ ಇಲ್ಲಿಯದು.
ತುಳು ಪದ್ಧತಿಯಲ್ಲಿ ಮೇಷ ಸಂಕ್ರಮಣದ ಮರುದಿನ,  ಪಗ್ಗು ತಿಂಗಳ ಪ್ರಥಮ ದಿನ ಬಿಸು, ಹೊಸ ವರುಷ. ಅಂದು ಜಮೀನ್ದಾರ ಮನೆಗಳಲ್ಲಿ ಪಂಚಾಂಗ ಶ್ರವಣವನ್ನು ಊರವರನ್ನು ಸೇರಿಸಿ ಮಾಡುತ್ತಿದ್ದರು. ಮುಂದಿನ ವರ್ಷದ ಮಳೆ ಹೇಗೆ ಬೆಳೆ ಹೇಗೆ? ಬಿಳಿ ಬಟ್ಟೆ ತೊಟ್ಟು ಬಿಳಿ ಕುದುರೆ ಮೇಲೆ ಕುಳಿತ ‘ಕಲಿ ಪುರುಷ’ ಯಾವ ದಿಕ್ಕಿಗೆ ಪ್ರಯಾಣಿಸುತ್ತಿದ್ದಾನೆ, ಅವನ ಕುದುರೆ ಯಾವ ಕಡೆ ಮುಖ ಮಾಡಿದೆ? ಇದರ ಮೇಲೆ ಮಳೆ ಬೆಳೆಯನ್ನು ನಿರ್ಧರಿಸಲಾಗುತ್ತಿತ್ತು.
ಕೃಷಿಕರಿಗೆ ಇಂದು ಪ್ರಮುಖ ದಿನ. ಅಶ್ವಿನಿ ನಕ್ಷತ್ರದ ಮೊದಲ ಮಳೆ ಬರಬೇಕಾದ ದಿನ. ಮಳೆ ಬರಲಿ ಬಾರದಿರಲಿ ಅಂದು ಬಿತ್ತನೆ ಆಗಲೇ ಬೇಕು.
ಬಿಸುವಿನಂದು ಕೋಣಗಳನ್ನು ಗದ್ದೆಗೆ ಇಳಿಸಿ ಉತ್ತು ಬಿತ್ತನೆ ಮಾಡುತ್ತಾರೆ. ನೀರಿನ ಅನುಕೂಲ ಇದ್ದವರು ‘ಅಡಿನೀರ’ ನೇಜಿ ಹಾಕುವುದು ಬಿಸುವಿನಂದು. ನೀರಿನ ಅನುಕೂಲ ಇಲ್ಲದವರು ಗದ್ದೆಯ ಒಂದು ಮೂಲೆಯಲ್ಲಿ ನೆಲವನ್ನು ಅಗಯುತ್ತಾರೆ. ಬಿತ್ತನೆಯ ಭತ್ತದ ಮುಡಿಯಿಂದ ಭತ್ತವನ್ನು ತೆಗೆದು ತಲೆಗೆ ಮುಂಡಾಸು ಕಟ್ಟಿ ಮಕ್ಕಳೊಂದಿಗೆ ಗದ್ದೆಗೆ ಹೋಗಿ ಬಿತ್ತನೆ ಮಾಡಿ ಬಿತ್ತಿದ ಭಾಗವನ್ನು  ‘ತಾರೊಳಿ’ (ಇuಠಿhoಡಿbiಚಿಛಿeಚಿe) ಮರದ ರೆಂಬೆಗಳಿಂದ ಮುಚ್ಚಿ ಬಿಸಿಲು ಬೀಳದಂತೆ ತಡೆ ಮಾಡುತ್ತಾರೆ. ಮಳೆ ಬಿದ್ದ ಮೇಲೆ ಉಳಿದ ಭಾಗಕ್ಕೆ ಬಿತ್ತನೆ ಮಾಡಿ ನೇಜಿ ತೆಗೆಯುವಾಗ ಬಿಸುವಿನ ಬಿತ್ತನೆಯ ಸಸಿಗಳನ್ನು ಉಳಿದ ಸಸಿಗಳೊಂದಿಗೆ ಬೆರಸಿ ನಾಟಿಮಾಡುತ್ತಾರೆ. ಈ ಬೆರಕೆ ಬಿಸುವಿನಂದು ಬಿತ್ತನೆ ಮಾಡಬೇಕಾದ ಮಹತ್ವವನ್ನು ಸಂಕೇತಿಸುತ್ತದೆ.
ತುಳು ಪದ್ಧತಿಯಲ್ಲಿ ‘ಕನ್ನಡಿ ಕಣಿ’ ಇಡುವುದು:
ಬಿಸು ಕಾಸರಗೋಡಿನಲ್ಲಿ ಬಹಳ ಸಂಭ್ರಮದ ಹಬ್ಬ. ಆ ದಿನ ಆಯಾ ಮನೆತನಗಳ ದೈವಗಳು ಮಾಧ್ಯಮನ ಮೂಲಕ ತರವಾಡು ಮನೆಗೆ ಬಂದು ಕಣಿಯ ಮುಂದೆ  ನಿಂತು ಮದಿಪು (ಆಶಯ ನುಡಿ) ನೀಡುತ್ತವೆ. ಮನೆತನಕ್ಕೆ ಸಕಲ ಸಮೃದ್ಧಿ, ಆಯುರಾರೋಗ್ಯವನ್ನು ನೀಡುವುದಾಗಿ ಭರವಸೆ ಕೊಡುತ್ತವೆ.
ಮೇಷ ಸಂಕ್ರಾಂತಿಯ ದಿನ ರಾತ್ರ್ರಿ ಎಲ್ಲರೂ ಮಲಗಿದ ಮೇಲೆ ಮನೆಯ ಹಿರಿಯ ಹೆಂಗುಸರು ಮನೆಯ ಮೊಗಸಾಲೆಯಲ್ಲಿ ಅಥವಾ ಚಾವಡಿಯಲ್ಲಿರುವ ದೈವಗಳ ಉಯ್ಯಾಲೆಯ ಬಳಿ ಕಣಿ ಇಡುತ್ತಾರೆ. ಯಜಮಾನ ಉಯ್ಯಾಲೆಯ ಮೇಲೆ ಅಕ್ಕಿ ಮತ್ತು ತೆಂಗಿನ ಕಾಯಿ ಇಡುತ್ತಾರೆ. ನೆಲಕ್ಕೆ ಸೆಗಣಿ ಶುದ್ಧ ಮಡಿ ಮಂಡಲ ಬರೆಯುತ್ತಾರೆÉ. ಮಂಡಲಕ್ಕೆ ಎದುರಾಗಿ ಒಂದು ನಿಲುವುಗನ್ನಡಿಯನ್ನು ಒರಗಿಸಿಟ್ಟು ಅದರ ಮುಂದೆ ಹೊಸ ವರುಷದ ಹೊಸ ವಸ್ತುಗಳನ್ನು ಇಡುತ್ತಾರೆ. ಸಾಲೆಕಾರ ನೀಡುವ ಕೈಮಗ್ಗದ ಹೊಸ ಬಟ್ಟೆ, ಗಾಣಿಗ ನೀಡುವ ಹೊಸ ಗಾಣದೆಣ್ಣೆ, ಕಬ್ಬಿಣದ ಆಚಾರಿ ನೀಡುವ ಹೊಸಕತ್ತಿ ಇತ್ಯಾದಿ ಪರಿಕರಗಳು, ಮರದ ಆಚಾರಿ ನೀಡುವ ಹೊಸ ನೇಗಿಲು, ನೊಗ ಇತ್ಯಾದಿ,  ಕುಂಬಾರ ನೀಡುವ ಮಡಕೆ-ಹೀಗೆ ಹಳ್ಳಿಯ ಕೃಷಿ ಪೋಷಿತ ಕುಲ ಕಸುಬಿನವರು ಜಮೀನ್ದಾರ ಮನೆಗೆ ತಮ್ಮ ಕುಲ ಕಸುಬಿನ ಪರಿಕರಗಳನ್ನು ತಂದು ಸಂಕ್ರಮಣದ ರಾತ್ರಿಯ ಒಳಗೆÉ ನೀಡುತ್ತಾರೆ. ಕ್ರೈಸ್ತ ಮತ್ತು ಬ್ಯಾರಿ ಜನಾಂಗದವರು ಹೆಚ್ಚಾಗಿ ಹಣ್ಣು ಹಂಪಲು, ಗೇರು ಬೀಜ ನೀಡುತ್ತಾರೆ. ನಲ್ಕೆ ಜನಾಂಗದವರು ಹೊಸ ಚಾಪೆ ತಂದು ಕೊಡುತ್ತಾರೆ. ಬಾಕುಡರು ಎಲೆ ಅಡಿಕೆ ತಂದು ಚಾವಡಿಗೆ ಉಯ್ಯಾಲೆಗೆ ಕೈ ಮುಗಿಯುತ್ತಾರೆ. ಒಕ್ಕಲು ಮಂದಿ ತಾವು ಬೆಳೆದ ಹೊಸ ಬೆಳೆಯ “ಕಲಿ ಬೆಲ್ಲ” (ಓಲೆ ಬೆಲ್ಲ)  ಕಾಯಿ ಪಲ್ಯ ಹಲಸು ಮಾವು ಇತ್ಯಾದಿಯನ್ನು ತಂದು ಉಯ್ಯಾಲೆಯಲ್ಲಿ ಇಡುತ್ತಾರೆ. ಅಥವಾ ಮನೆಯವರು ಎಲ್ಲಾ ವಸ್ತುಗಳನ್ನು ಕನ್ನಡಿಯ ಮುಂದೆ ಇಟ್ಟು ಮಲಗುತ್ತಾರೆ.
ಮುಂಜಾವದಲ್ಲಿ ಮಕ್ಕಳನ್ನು ಎಬ್ಬಿಸಿ ಕಣ್ಣು ಮುಚ್ಚಿಕೊಂಡೇ ಕಣಿಯ ಬಳಿ ಕರೆದೊಯ್ದು ಕಣ್ಣು ಬಿಡಲು ಹೇಳುತ್ತಾರೆ. ಹೊಸ ವರುಷದ ಪ್ರಕೃತಿಯ ಕೊಡುಗೆಗಳ ಪ್ರತಿಫಲನವನ್ನು ಕನ್ನಡಿಯಲ್ಲಿ ನೋಡುವುದರೊಂದಿಗೆ ತನನ್ನೂ ನೋಡುತ್ತಾನೆ  ಅನಂತರ ಎಲ್ಲರೂ ಸ್ನಾನ ಮಾಡಿ ಹೊಸ ಬಟ್ಟೆ ತೊಟ್ಟು ಚಾವಡಿಯ ದೈವದ ಉಯ್ಯಾಲೆಗೆ ಕೈ ಮುಗಿದು ಹಿರಿಯರ ಆಶೀರ್ವಾದ ಬೇಡುತ್ತಾರೆ. ಪೂರ್ವಜರ ದೂಪೆ (ಸ್ತೂಪ)ಗಳ ಬಳಿ ಹೋಗಿ ಅಕ್ಷತೆ (ಅಕ್ಕಿ)ಹಾಕಿ ಕೈಮುಗಿಯುತ್ತಾರೆ.
ಮಧ್ಯಾಹ್ನದ ಸಸ್ಯಹಾರದ ಸುಗ್ರಾಸ ಭೋಜನದಲ್ಲಿ ಎಳೆಯ(ಲತ್ತ್) ಗೇರು ಬೀಜ ಹಾಕಿದ ಹೆಸರು ಬೇಳೆ ಪಾಯಸ ಬಿಸುವಿನ ವಿಶೇಷ. ಮಕ್ಕಳನ್ನು ಪುಸಲಾಯಿಸಿ “ಲತ್À್ತ ಬೀಜ” ತರಲು ಗುಡ್ಡಕ್ಕೆ ಕಳುಹಿಸುತ್ತಿದ್ದರು. ಮರ ಯಾರದಾದರೇನು? ಬೀಜ ನಮ್ಮದಾದÀರೆ ಸಾಕು? ಬೆಂದ ‘ಲತ್ತ್ ಬೀಜ’ದ ರುಚಿಯೇ ಬೇರೆ.
ಮಧ್ಯಾಹ್ನ ಒಕ್ಕಲು ಮಕ್ಕಳು ಮೂಲದವರು -ಹೀಗೆ ಎಲ್ಲರಿಗೂ ಜಮೀನ್ದಾರರ ಮನೆಯಲ್ಲಿ ಸಾಮೂಹಿಕ ಭೂರಿ ಬೋಜನ ಇರುತ್ತದೆ. ಅನಂತರ ಹೊಸ ತಾಂಬೂಲ ಮೆಲ್ಲಲುಂಟು.
ಕಾಸರಗೋಡಿನ ಐಲ ಉಲ್ಲಾಲ್ತಿ, ಸಜಿಪ ಅರಸು ದೈವಂಗಳ ಮಾಡ(ಆಲಯ)ದಲ್ಲಿ,  ಜೆಪ್ಪು ಗುಡ್ಡೆಗುತ್ತು ವೈದ್ಯನಾಥನ ಕಂರ್ಬಿ ಸಾನ ಕ್ಷೇತ್ರದಲ್ಲಿ -ಇತ್ಯಾದಿ ಮಾಗಣೆಯ ಮಾಗಣೆ-ಅರಸು ದೈವಗಳ ಕ್ಷೇತ್ರಗಳಲ್ಲಿ ಕೊಡಿಮರದ ‘ಕನ್ನಡಿ ಕಣಿ’ ಇಡಲಾಗುತ್ತದೆ. ಐಲದಲ್ಲಿ  ಉಲ್ಲಾಲ್ತಿ ಮತ್ತು ಕಿಞಣ್ಣೆ , ನೇಲ್ಯನ್ನೆ ದೈವಗಳ ಭೇಟಿ, ಇದ್ದರೆ ಸಜಿಪ ಅರಸು ದೈವಂಗಳ ಬಳಿಗೆ ‘ನಾಲ್ಕಾಯಿತಾಯಿ’ ಬರುತ್ತಾಳೆ.
ಹೊಸ ವರುಷದ ಬಿಸುವಿನ ಸಂಭ್ರಮವನ್ನು ಆ ಮಾಗಣೆಗೆ ಸಂಬಂಧಿಸಿದ ಜನರೆಲ್ಲ ಸೇರಿ ಅರಸು ದೈವಗಳ ಮಾಡದಲ್ಲಿ ಆಚರಿಸುತ್ತಾರೆ. ಧ್ವಜಾರೋಹಣ ನೇಮೋತ್ಸವಗಳು ಕ್ಷೇತ್ರದಲ್ಲಿ ನಡೆಯುತ್ತದೆ. ಕೊಡಿಮರದ ಕಣಿಯ ಮುಂದೆ ನಿಂತು ಈ ಅರಸು ದೈವಗಳು ಮದಿಪು ನೀಡುತ್ತವೆ.
ಜಮೀನ್ದಾರ ಮನೆಯ ಗದ್ದೆಗಳಿಗೆ ಮೂಲದಾಳುಗಳು ಹೋಗಿ ಎತ್ತುಗಳ ಮೂಲಕ ಶಾಸ್ತ್ರಕ್ಕಾದರೂ ಗದ್ದೆ ಉತ್ತು  ಬಿತ್ತನೆ ಮಾಡುವುದು ಇದೆ. ಈ ಬಿತ್ತನೆಯನ್ನು ‘ಹೊಸ ಬೀಜ’ ಬಿತ್ತನೆ ಎನ್ನಲಾಗುತ್ತಿದೆ.
ಇಂತಹ ಸ್ಥಳಗಳಲ್ಲಿ ಕ್ಷೇತ್ರ ಉಪಾಸನೆಯ ಸಾಂಕೇತಿಕವಾಗಿ ಕೋಳಿ ಅಂಕ ನಡೆಯುತ್ತದೆ. ಬಿಸುವಿನ ಉತ್ಸವದ ಅಂಗವಾಗಿ ನಡೆಯುವ ಕೋಳಿ ಅಂಕಕ್ಕೆ ಸರಕಾರದ ಅನುಮೋದನೆ ಇದೆ.
ಇಡಿಯ ಭಾರತದ ಸಂಭ್ರಮಾಚರಣೆಯ ಒಟ್ಟು ಆಶÀಯ ಕೃಷಿ ಪೋಷಣೆ ಮತ್ತು ಉತ್ತಮ ಫಲ ನಿರೀಕ್ಷೆಯೇ ಆಗಿದೆ. ಆದರೆ ಸರಕಾರ ಕೃಷಿಯನ್ನು ಸಂಪೂರ್ಣ ನಿರ್ಲಕ್ಷಿಸಿದೆ. ಜನರಿಗೂ ಕೃóಷಿಯಲ್ಲಿ ಬೆವರು ಹರಿಸುವುದು ಬೇಕಿಲ್ಲ. ಹೀಗಾಗಿ ಹೊಸ ವóರ್ಷದಲ್ಲಿ ಸಮೃದ್ಧ ಬೆಳೆಯೂ ಬೇಕಿಲ್ಲ. ಆಹಾರ ಧಾನ್ಯಗಳನ್ನು ಆಮದು ಮಾಡಿಕೊಳ್ಳಬಹುದು. ಆದರೆ ಮಳೆಯನ್ನು ಆಮದು ಮಾಡಿಕೊಳ್ಳಲು ರಫ್ತು ಮಾಡುವವರೇ ಇಲ್ಲವಲ್ಲ. ಮಳೆ ಇಲ್ಲದೆ ಬದುಕಲು ಸಾಧ್ಯ ಇಲ್ಲವೆಂದ ಮೇಲೆ ವಿಜಯನಾಮ ಸಂವತ್ಸರದ ಪಂಚಾಂಗ ಫಲದಲ್ಲಿ ಮಳೆಯನ್ನು ನಿರೀಕ್ಷಿಸಲೇ ಬೇಕು.
ರೈತರು ಕುಸಿದ ಮೇಲೆ ಯುಗಾದಿಯು ಮಾರುಕಟ್ಟೆಗೆ ಬರುವ ತರಕಾರಿ ಆಹಾರ ವಸ್ತುಗಳ ಬೆಳೆ ಏರಿದೆ.
ಬೆಲ್ಬೋರ್ನ್ ಕನ್ನಡಿಗರ ಕೂಟ ಈ ಬಾರಿಯ ಯುಗಾದಿ ಆಚರಣೆಯ ವಿವರ ನೀಡುತ್ತಾ ” ಬೇವು ಇಲ್ಲದೆ ಬೆಲ್ಲ ಮಾತ್ರ ಇರುವ ಯುಗಾದಿ” ಎಂದು ಪ್ರಕಟಿಸಿದೆ. ಪರ ದೇಶದಲ್ಲಿ ಇರುವವರಿಗೆ ಅವರು ಬಿಟ್ಟು ಹೋದ ಹಳೆಯ ಸಂಸ್ಕøತಿಯ ಹೆಸರಲ್ಲಿ ಬೇವು ಇಲ್ಲದಿದ್ದರೂ ಬೆಲ್ಲದೊಂದಿಗೆ ಯುಗಾದಿ ಆಚರಿಸುವ ಉತ್ಸಾಹ!
ಬಿಸುವಿನ ಮರುದಿನ ಹೊಸ ಪಂಚಾಂಗ ತಂದು ಫಲ ಬಾಲ್ಯದಲ್ಲಿ ನಾವು ಮಕ್ಕಳು ಓದುವುದಿತ್ತು. ನನಗೆ  ಬಿಳಿ ಕುದುರೆ ಏರಿ ಹೋಗುವ ಕಲಿ ಪುರುಷನ ಬಗ್ಗೆಯೇ ಕುತೂಹಲ!
ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರಬಹುದು, ಹಳ್ಳಿಗಳಲ್ಲಿ ಮರಗಿಡಗಳು ತೇರಿನಂತೆ ಸಿಂಗರಿಸಿಕೊಂಡು ಯುಗಾದಿಯನ್ನು ಮರಳಿ ಸ್ವಾಗತಿಸಬಹುದು. ಆದರೆ ನಮ್ಮ ಬಾಲ್ಯದ “ಲತ್ತ್ ಬೀಜದ” ಬಿಸು ಆಗಲೀ, ಬಂಧುಗಳು, ಊರವರು ಸೇರಿ ಪಂಚಾಂಗ ಫಲ ಓದಿ ಮಳೆ ಬೆಳೆ ನಿರೀಕ್ಷಿಸುವ ಕುತೂಹಲ ಆಗಲಿ ಮರಳಿ ಬರುವುದೆ?
  ಮುಂಬರುವ ವಿಜಯನಾಮ ಸಂವತ್ಸರ ಉತ್ತಮ ಫಲವನ್ನು, ಮಳೆ ಬೆಳೆಯನ್ನು ನೀಡಲಿ ಸಮೃದ್ಧತೆಯನ್ನು ತರಲಿ ಎಂದು ಆಶಿಸೋಣ.


***







No comments:

Post a Comment