Friday, February 5, 2016

“ When you go home, Tell them of us and say, for your tomorrow, we gave our today”

ಈಶಾನ್ಯ ಭಾರತದಲ್ಲಿ 2ನೆಯ ಮಹಾಯುದ್ಧದಲ್ಲಿ ಮಡಿದವರ ಸ್ಮಾರಕಗಳು

ಎರಡು ಮಹಾಯುದ್ಧಗಳು ವಿಶ್ವಕ್ಕೆ ಮರೆಯಲಾಗದ ಪಾಠ ಕಲಿಸಿದೆ. ಆದರೆ ಭಾರತೀಯರಿಗೆ ಇದರ ಅರಿವು ಕಡಿಮೆ. ಈ ಮಾತಿಗೆ ಅಪವಾದವಾಗಿ ಭಾರತದ ಈಶಾನ್ಯ ಮೂಲೆಯ ನಾಗಾಲ್ಯಾಂಡ್ ಮತ್ತು ಮಣಿಪುರದ ಜನತೆ ಮಹಾಯುದ್ಧದಲ್ಲಿ ನೇರವಾಗಿ ಭಾಗವಹಿಸಿದ್ದಾರೆ.
ಎರಡನೆಯ ಮಹಾ ಯುದ್ಧದಲ್ಲಿ ಈ ಭಾಗದ ಜನರ ಪಾತ್ರ ದೊಡ್ಡದು. ಸುಭಾಸ್ ಚಂದ್ರ ಬೋಸರ ಆದೇಶದ ಮೇರೆಗೆ ಜಪಾನ್ ಸೈನಿಕರ ಜೊತೆ ಸೇರಿ ಬ್ರಿಟಿಷ್ ಭಾರತದೊಂದಿಗೆ ಹೋರಾಡಿದ ಜಪಾನಿಯರ ಮತ್ತು ಬ್ರಿಟಿಷರ, ಮತ್ತು ಭಾರತೀಯ ಸೈನಿಕರ ಸ್ಮಾರಕಗಳು ಈ ಭಾಗಗಳಲ್ಲಿ ಇವೆ.
ಸುಭಾಸ್ ಚಂದ್ರ ಬೋಸರು ಬ್ರಿಟಿಷರ ವಿರುದ್ಧ ಸೈನ್ಯ ಕಟ್ಟಿ ಹೋರಾಡಲು ನಾಂದಿ ಹಾಕಿದ್ದು ಈ ಭಾಗದಲ್ಲಿ. ಜಪಾನೀ ಇಂಪೀರಿಯಲ್ ಸೈನ್ಯ  ಫೆಬ್ರವರಿ 15- 1942ರಲ್ಲಿ ಸಿಂಗಾಪುರವನ್ನು  ಹಿಸುಕಿ ಬಿಟ್ಟಿತ್ತು. ಬ್ರಿಟಿಷರನ್ನು  ಭಾರತದಿಂದ ಓಡಿಸಲು ಜಪಾನ್ ಸಹಕಾರ ನೀಡುತ್ತದೆ ಎಂಬ ಆಶಯದಿಂದ ಸುಮಾರು 20 ಸಾವಿರ ಸೈನಿಕರು ಸುಭಾಸ್ ಚಂದ್ರ ಬೋಸರ ಇಂಡಿಯನ್ ನೇಷನಲ್ ಆರ್ಮಿಯನ್ನು ಸೇರಿದರು. ಆದರೆ ಜಪಾನ್ ಮಣಿಪುರವನ್ನು ಆಕ್ರಮಿಸಲು ಬರುತ್ತಿದೆ ಎಂಬ ಬ್ರಿಟಿಷರು ಹರಡಿದ ಸುಳ್ಳು ಸುದ್ದಿಯಿಂದಾಗಿ ಸುಭಾಸ್‍ಚಂದ್ರ ಬೋಸರಿಗೆ ನಿರೀಕ್ಷಿತ ಸ್ವಾಗತ ಸಿಗಲಿಲ್ಲ. ಜನರಲ್ಲಿ ಗೊಂದಲ ಉಂಟಾಗಿತ್ತು.. ಆದರೂ ಅಜಾದ್ ಹಿಂದ್ ಫೌಜ್‍ನ ಭಾರತೀಯ ಸೈನಿಕರು ಜಪಾನೀಯರ ಜೊತೆ ಸೇರಿ ಬ್ರಿಟಿಷರೊಂದಿಗೆ ಹೋರಾಡಿದರು.
ಆ ಯುದ್ಧದಲ್ಲಿ ಭಾಗಿಯಾಗಿ ಮಡಿದವರ ಸ್ಮಾರಕಗಳು ಇಲ್ಲಿ ಮೊರೈಂಗ್‍ನ ಹೊರವಲಯದಲ್ಲಿದೆ. .

ಈ ಈಶಾನ್ಯ ಭಾಗದಲ್ಲಿ ನಾಲ್ಕು ವಾರ್ ಸಿಮೆಂಟರಿಗಳಿವೆ. ನಾಗಾಲ್ಮಾಂಡ್‍ನಲ್ಲಿ ಒಂದು ಮತ್ತು ಮಣಿಪುರಗಳಲ್ಲಿ ಮೂರು -ಹೀಗೆ  ಮೂರು ಸ್ಮಾರಕಗಳು ಬ್ರಿಟಿಷರ ಪರವಾಗಿ ಹೋರಾಡಿದ ಬ್ರಿಟಿಷ್ ಮತ್ತು ಭಾರತೀಯ ಸೈನಿಕರಿಗಾಗಿ ಕಾಮನ್‍ವೆಲ್ತ್ ರಚಿಸಿದೆ. ಇಲ್ಲಿ ಜಪಾನಿಯರ ಮತ್ತು ಭಾರತೀಯರ ವಾರ್ ಸಿಮೆಂಟರಿಯನ್ನು ಜಪಾನ್ ರಚಿಸಿದೆ. ಇವೆಲ್ಲ ಎರಡನೆಯ ಮಹಾಯುದ್ಧದಲ್ಲಿ ಹೋರಾಡಿದ ವೀರರ ಸ್ಮಾರಕಗಳಿವು.

ವಾರ್ ಸಿಮೆಂಟರಿ : Moriang  ಮೊರೈಂಗ್ ಮಣಿಪುರ  :

ಲ್ಯಾಕ್ ಸರೋವರಕ್ಕೆ ಹೋಗುವ ಮಾರ್ಗದಲ್ಲಿ ಇಂಪಾಲದಿಂದ ಹೊರಗೆ ಜಪಾನ್ ವೀರರ ಸ್ಮರಣಾರ್ಥ ರಚಿಸಲಾದ ಯುದ್ಧ ಸ್ಮಾರಕ ಇದು. ಜಪಾನ್ ಸೈನಿಕರ ಜೊತೆ ಸೇರಿ ಬರ್ಮಾ ಮತ್ತು ಭಾರತೀಯ ಸೈನಿಕರೊಂದಿಗೆ ಇಲ್ಲಿ ಯುದ್ಧ ನಡೆಯುತ್ತದೆ. ನಮ್ಮ ಮಾಹಿತಿದಾರನ ಪ್ರಕಾರ ಈ ಸ್ಮಾರಕಕ್ಕೆ ತಾಗಿ ಕೊಂಡಿರುವ ಪರ್ವತ ಶಿಖರದ ಮೇಲೆ ಬ್ರಿಟಿಷರ ಪಡೆ ಇತ್ತು. ಕೆಳಭಾಗದಲ್ಲಿ ಬರ್ಮೀಯರು, ಜಪಾನಿಯರು ಮತ್ತು ಸುಭಾಸ್‍ಚಂದ್ರ ಬೋಸರ I.N.A . ಸೈನಿಕರು.  ಬರ್ಮಾದಿಂದ ಬರುವ ದಾರಿ ಇದೇ ಆಗಿತ್ತು. ಹೀಗಾಗಿ ಆಯ ಕಟ್ಟಿನ ಸ್ಥಳದ ಪರ್ವತ ಶಿಖರದ ಮೇಲೆ ಕುಳಿತು ಬ್ರಿಟಿಷ್ ಸೈನಿಕರು ಜಪಾನ್ ಮತ್ತವರ ಮಿತ್ರ ಪಕ್ಷಗಳ  ಮೇಲೆ ಗುಂಡಿನ ಮಳೆಗರೆದಿದ್ದರು.


ಇಲ್ಲಿ ನಡೆದ ಯುದ್ಧದಲ್ಲಿ ಭಾರತೀಯರು ಮತ್ತು ಜಪಾನಿಯರು ಹತರಾಗಿದ್ದರು. ಭಾರತದ ಮತ್ತು ಜಪಾನಿ ಸೈನಿಕರ  ಅಂತ್ಯಕ್ರಿಯೆ ಇಲ್ಲಿ ನಡೆಸಲಾಗಿತ್ತು.  “ಇಂಡಿಯಾ ಪೀಸ್ ಮೆಮೋರಿಯಲ್” ಎಂಬ ಬರಹ ಜಪಾನೀ ಪೀಸ್ ಮೆಮೋರಿಯಲ್  ಸಿಮೆಂಟ್ ಗೋಡೆ ಮೇಲೆ ಇಂಗ್ಲಿಷಿನಲ್ಲಿದೆ.  ಅದೇ ಮಾದರಿಯಲ್ಲಿ ಜಪಾನೀ ಲಿಪಿ/ಭಾಷೆಯ ಬರಹವೂ ಇದೇ ವಿಷಯವನ್ನು ಬರೆದಿರಬಹುದು. ಅಲ್ಲದೆ “ THE MONUMENT SHALL STAND AS A PRAYER FOR PEACE  AND A SYMBOL OF FRIENDSHIP BETWEEN THE PEOPLE OF JAPAN AND INDIAN NATIONAL ARMY OF ALL THOSE WHO LOST THEIR LIVES IN INDIA DURING THE LAST WORLD WAR” ಎಂದು ಬರೆಯಲಾಗಿದೆ.

 ಕೋನಾಕಾರದ  ಇನ್ನೊಂದು ಗೋಡೆಯಲ್ಲಿ ಜಪಾನೀ ಬರಹ ಇದೆ. ಈ ಸ್ಮಾರಕ ಕಟ್ಟಿದ ವಾಸ್ತು ಶಿಲ್ಪಿ, ಪ್ಲೇಟ್ ಡಿಸೈನರ್ ಮತ್ತು ಕಟ್ಟಿದ ಇಂಜಿನಿಯರ್ ಹೆಸರನ್ನೂ ಕೆತ್ತಲಾಗಿದೆ. ಕೆಂಪು ಶಿಲೆಯ ಬೃಹತ್ ಶಿಲಾ ಸಮಾಧಿಗಳೂ ಇವೆ.
ಪುರಾತತ್ವ ಇಲಾಖೆಯು ಇದನ್ನು ರಾಷ್ಟ್ರೀಯ ಸಂಪತ್ತು ಎಂದು ಘೋಷಿಸಿದೆ.

ಇಂಪಾಲ ವಾರ್ ಮೆಮೋರಿಯಲ್ :
ಇಂಪಾಲ ನಗರದಿಂದ ಒಂದು ಕಿಲೋಮೀಟರ್ ಒಳಗೆ ಎರಡು ಸ್ಮಶಾನಗಳಿವೆ. ಒಂದು ಸ್ಮಶಾನ ಬ್ರಿಟಿಷ್ ಸೈನಿಕರದ್ದು. ಇಲ್ಲಿ ಭಾರತೀಯ ಸೈನಿಕರೂ ಹತರಾಗಿದ್ದರು. ಅಸ್ಸಾಮ್ ರೆಜಿಮೆಂಟ್‍ನ ಸೈನಿಕರೂ ಸಮಾಧಿಗಳೂ ಬ್ರಿಟಿಷ ಸೈನಿಕರ ಸಮಾಧಿಯ ಬಳಿಯಲ್ಲಿಯೇ ಇವೆ. ಬಹುಷ ಎಲ್ಲರೂ ಕ್ರೈಸ್ತರೇ ಆಗಿರಬಹುದು. ಆದರೆ ಬೆರಳೆಣಿಕೆಯಷ್ಟು ಸಮಾಧಿಗಳಲ್ಲಿ ಕ್ರಾಸ್/ ಶಿಲುಬೆ ಇರಲಿಲ್ಲ.  ಒಂದು ಸಮಾಧಿಯಲ್ಲಿ ಶಿಲುಬೆ ಇದೆ. ಆದರೆ ಅದರ ಮೇಲೆ ರಾವ್ ಎಂದು ಬರೆಯಲಾಗಿದೆ.


ಇನ್ನೊಂದು ಭಾರತೀಯರಾದ ಹಿಂದು ಮತ್ತು ಮುಸ್ಲಿಮರದ್ದು. ಒಂದೇ ಕಡೆಯ ಮಣ್ಣಿನಲ್ಲಿ ಉತ್ತರಕ್ಕೆ ತಲೆ ಇಟ್ಟು ಸಮಾಧಿ ಮಡಲಾಗಿದೆ ಎಂದ ಕಾವಲುಗಾರ. ಸಮಾಧಿ ಆದ ರುಂಡದ ಭಾಗದಲ್ಲಿ ಒಂದು ಅವರ ಹೆಸರು ಅವರು ಕೆಲಸ ಮಾಡುತ್ತಿದ್ದ ರೆಜಿಮೆಂಟ್ ಹಾಗೂ ಅವರ ವಯಸ್ಸನ್ನು ಒಂದು ಸಿಮೆಂಟ್ ಪ್ಲೇಟ್‍ನಲ್ಲಿ ನಮೂದಿಸಲಾಗಿದೆ.



 ಈ ಸಮಾಧಿ ಸ್ಥಳದ ಕೆಳಭಾಗದಲ್ಲಿ ಹಿಂದುಗಳನ್ನು ದಹನ ಮಾಡಿದ ರುದ್ರ ಭೂಮಿ ಇದೆ. ಸುಮಾರು  ಆಯತಾಕಾರದ ದಹನ ಕ್ಷೇತ್ರದಲ್ಲಿ ಈ ಭೂಮಿಯ ಸ್ವಲ್ಪ ಮಾತ್ರ ಹೂಗಿಡಗಳನ್ನು ನೆಟ್ಟಿದ್ದಾರೆ. ಅಮೃತ ಶಿಲೆಯ ಎರಡು ಗೋಡೆ ರೂಪದ ಸಿಮೆಂಟರಿಗಳನ್ನು ಸಮಾನಾಂತರ ನೆಲೆಯಲ್ಲಿ ರಚಿಸಿ ಅದರ ಮೇಲೆ ಅಲ್ಲಿ ದಹನ ಆದ ಹಿಂದೂ ಸೈನಿಕರ ಹೆಸರು, ವಯಸ್ಸು, ಅವರ ರೆಜಿಮೆಂಟ್ ಹೆಸರನ್ನು ಕೆತ್ತಲಾಗಿದೆ. ಒಟ್ಟು ಅಲ್ಲಿ ದಫನ ಗೊಂಡ ಮುಸ್ಲಿಮರು 828 ಮತ್ತು ದಹನ ಗೊಂಡ ಹಿಂದು ಸೈನಿಕರು 888. ಆದರೆ ಹಿಂದೂಗಳ ಸಾಮೂಹಿಕ ಸಂಸ್ಕಾರ ಆಗಿರಬಹುದು ಎಂದು ಊಹೆ ಮಾಡಲು ಅವಕಾಶ ಇದೆ.

 ಇಲ್ಲಿಯ ಕಾವಲುಗಾರನ ಹೆಸರು ‘ಮುಷ್ ಕುಮಾರ್’ 10 ವರ್ಷದಿಂದ ಇಲ್ಲಿಯ ಕಾವಲುಗಾರನಾಗಿದ್ದಾನೆ. ಆತ ನೇಪಾಲಿ. ಅವನು ಹೇಳುವ ಪ್ರಕಾರ ಇಲ್ಲಿ ಬರುವ ಪ್ರವಾಸಿಗರು ವಿದೇಶಿಗಳು ಮಾತ್ರ. ಭಾರತೀಯರು ಬಹಳ ಕಡಿಮೆ ಸಂಖ್ಯೆಯಲ್ಲಿ ಬರುತ್ತಾರೆ.

ಎರಡನೇ ಮಹಾಯುದ್ಧದಲ್ಲಿ ಸತ್ತ ಸೈನಿಕರ ಸ್ಮಾರಕ ಸಮಾಧಿ ಸ್ಥಳಗಳು ಈಗಲೂ ಕಾಮನ್‍ವೆಲ್ತ್ ಸುಪರ್ದಿಯಲ್ಲಿದೆ. ಸಮಾಧಿ ಸ್ಥಳಗಳ ನಿರ್ವಹಣೆಯನ್ನು ಮಾತ್ರವಲ್ಲದೆ. ಕಾವಲುಗಾರರ ಸಂಬಳವನ್ನು ಕಾಮನ್‍ವೆಲ್ತ್ ನೀಡುತ್ತಿದೆ. ಬಹಳ ಸುಂದರವಾಗಿ ಉದ್ಯಾನವನದಂತೆ ಈ ಸಮಾಧಿ ಸ್ಥಳಗಳನ್ನು ರಕ್ಷಿಸಿಟ್ಟಿರುವುದನ್ನು ಕಾಣುವಾಗ ಭಾರತೀಯರು ಈ ಹಂತವನ್ನು ಯಾವಾಗ ತಲುಪುತ್ತಾರೆ ಎಂಬ ಯೋಚನೆ ಕಾಡುತ್ತದೆ.


ಸುಭಾಸ್ ಚಂದ್ರರ ಪ್ರತಿಮೆ:
ಈ ಭಾಗದಲ್ಲಿ ಸುಭಾಸ್ ಚಂದ್ರಬೋಸರಿಗೆ ಗಾಂಧೀಜಿಗಿಂತ ಹೆಚ್ಚಿನ ಗೌರವ ಇದೆ. ಅವರ ಪ್ರತಿಮೆಗಳನ್ನು ಅನೇಕ ಕಡೆ ನೋಡಬಹುದು. ಮೊರೈಂಗ್‍ನ ನಗರದೊಳಗೆ ಸುಭಾಸ್ ಚಂದ್ರರ ನಿಂತ ಭಂಗಿಯ ಸುಂದರ ಪ್ರತಿಮೆ ಇದೆ. ಇದನ್ನು 21-10-1993ರಲ್ಲಿ ಮಣಿಪುರದ ನಿವೃತ್ತ ರಾಜ್ಯಪಾಲರಾದ ಲೆಪ್ಟ್‍ನೆಂಟ್ ಜನರ್‍ಲ್ ವಿ.ಕೆ ನಾಯರ್ ಉದ್ಘಾಟಿಸಿದ್ದರು.



‘KOHIMA WAR CEMENTRY’: ಜಪಾನೀಯರು ನಾಗಾಲ್ಯಾಂಡ್ ಪ್ರವೇಶಿಸಿದ್ದು ಬರ್ಮಾದ ಜೊತೆಗೂಡಿ ಗ್ಯಾರಿಸನ್ ಪರ್ವತದ ಮೂಲಕ. ಇಲ್ಲಿಯ ದಟ್ಟ ಕಾಡಿನಲ್ಲಿ ಸ್ಥಳೀಯ ನಾಗಾಗಳ ಬೆಂಬಲ ಪಡೆದು ಸಣ್ಣ ಕಾಮನ್‍ವೆಲ್ತ್ ಪಡೆಯನ್ನು ಎದುರಿಸಿದ್ದರು. ಇಡೀ ಬರ್ಮಾದ ಬೆಂಬಲ ಅವರಿಗಿತ್ತು. ಯುದ್ಧ ಆರಂಭವಾದ ಸ್ಥಳ ನಾಗಾಲ್ಯಾಂಡ್‍ನ ಡೆಪ್ಯುಟಿ ಕಮಿಷನರ ಬಂಗಲೆಯ ಬಳಿಯ ಟೆನ್ನಿಸ್ ಕೋರ್ಟನಲ್ಲಿ. ಬಹುಷ್ ಇಲ್ಲಿಗೆ ಬಾಂಬ್ ಬಿದ್ದಿರಬೇಕು. ಆದರೆ ಮುಂದೆ ಅಲ್ಲಿರುವ ಪಡೆಯನ್ನು ಕಾಮನ್‍ವೆಲ್ತ್ ಪಡೆ ಸೇರಿಕೊಂಡು ಭೀಕರ ಯುದ್ಧ ನqಯಿತು. ಈ ಯುದ್ಧ, ಸಾವು ನಡೆದುದು ಗ್ಯಾರಿಸನ್ ಹಿಲ್‍ನಲ್ಲಿ. ಇಲ್ಲಿ  ‘‘KOHIMA WAR CEMENTRY’:  ನಿರ್ಮಿಸಲಾಗಿದೆ. ಯುದ್ಧ ಆರಂಭವಾದ ಬಂಗಲೆ ಕುರುಹು ಈಗಿಲ್ಲ ಎನ್ನುತ್ತಾರೆ. ಈಗ ಇಲ್ಲಿ ಒಟ್ಟು 1420 ಸಮಾಧಿಗಳಿವೆ. 917 ಹಿಂದು ಮತ್ತು ಸಿಖ್ ಸೈನಿಕರ ಸಮಾಧಿಗಳಿವೆ. ಇಲ್ಲಿ ಹೀಗೆ ಬರೆಯಲಾಗಿದೆ-
 " When you go home, Tell them of us and say, for your tomorrow, we gave our today”


No comments:

Post a Comment