Friday, February 12, 2016

ಸಿರಿ ಉಪಾಸನೆಯ ಪ್ರಾಚೀನ ಐತಿಹಾಸಿಕ ಕ್ಷೇತ್ರ: ಶಂಭು ಕಲ್ಲು ಉದ್ಯಾವರ



ಉಡುಪಿ ಜಿಲ್ಲೆಯ ಉದ್ಯಾವರ ಆಳುಪರಸರಸ ಆರಂಭಕಾಲದ ರಾಜಧಾನಿ. ಇವರ ಅದಿದೈವ ಶಂಭುಕಲ್ಲು (ತುಳು ಚೆಂಬುಕಲ್ಲ್) ಬೆಟ್ಟದ ಮೇಲೆ ಇರುವ ಶಂಭು ಲಿಂಗ ದೇವಸ್ಥಾನ.


 ಹಲವು ಕಾಲ ಪಾಳು ಬಿದ್ದಿರುವ ಈ ಕ್ಷೇತ್ರದಲ್ಲಿ ದೊರೆತ 7ನೆಯ ಶತಮಾನದ ಕೊನೆಯ ಕಾಲದ ಶಾಸನದಲ್ಲಿ ಗಜಪುಷ್ಟಾಕಾರದ ಗರ್ಭಗುಡಿಯ ದೇವಸ್ಥಾನದ ಉಲ್ಲೇಖ ಇದೆ. ಇಡಿಯ ತುಳುನಾಡಿಗೆ ಇದು ಅತ್ಯಂತ ಪ್ರಾಚೀನ ದೇವಸ್ಥಾನ ಎನ್ನುತ್ತಾರೆ ಶಾಸನ ತಜ್ಞ ಮತ್ತು ಇತಿಹಾಸಕಾರ ಡಾ. ಪಿ. ಎನ್. ನರಸಿಂಹ ಮೂರ್ತಿಯವರು. ಪಾದೆ ಕಲ್ಲಿನ ಬೆಟ್ಟದ ಮೇಲೆ ಶಂಭು ಲಿಂಗ ಗುಡಿ ಇದ್ದ ಕಾರಣ “ಶಂಬು ಕಲ್ಲು” ಗುಡ್ಡ ಎಂದು ಹೆಸರಾಗಿರಬಹದು. ಈ ಹಳ್ಳಿಯ ಹೆಸರು ಶಿವಳ್ಳಿ.
ಆರಂಭ ಕಾಲದ ಆಳುಪರಸರಿಗೆ ಸಂಬಂಧಿಸಿದ ಈ ಕ್ಷೇತ್ರದಲ್ಲಿ ತುಳು ಜನಪದರ ಕೃಷಿ ಪೋಷಕ ದೈವಗಳಾದ ‘ಅವಳಿ ಸಿರಿ’ ಗುಡಿ ಮತ್ತು ಪರಿವಾರ ದೈವಗಳು ಇವೆ. ಹೀಗಾಗಿ ತುಳು ನೆಲಮೂಲದ ಉಪಾಸನ ಶಕ್ತಿಗಳಾದ ಅವಳಿ ಸಿರಿಗಳ ಉಪಾಸನೆಯು ಸುಮಾರು ಏಳನೆಯ ಶತಮಾನಕ್ಕೂ ಪೂರ್ವ ಕಾಲದಲ್ಲೂ ಇತ್ತು ಎನ್ನುವುದಕ್ಕೆ ಈ ಗುಡಿಯು ಆಧಾರವಾಗುತ್ತದೆ.


ಈ ಕ್ಷೇತ್ರ ಅನೇಕ ವರ್ಷಗಳಕಾಲ ಪಾಳು ಬಿದ್ದಿದ್ದರೂ ಶಿವನ ಗುಡಿಯ ಬಲಕ್ಕೆ ಸಿರಿಗುಡಿ ಹಾಗೂ ಪರಿವಾರ ದೈವಗಳು ಉಳಿದು ಬಂದಿವೆ. ಆದರೆ ಅದು ಮರೆಯಲ್ಲಿದೆ. ಸಾರ್ವಜನಿಕರಿಗೆ ಸಿರಿ ಗುಡಿ ಇರುವುದು ಗೊತ್ತಿಲ್ಲ. ವರ್ಷಕ್ಕೆ ಒಮ್ಮೆ ಪಗ್ಗು (ಎಪ್ರಿಲ್) ಹುಣ್ಣಿಮೆಯಂದು ಉದ್ಯಾವರ ಪಟೇಲರ ಮನೆಯವರು ಈ ಸಿರಿಗುಡಿಯಲ್ಲಿ  ಸಮರಾಧನೆ ನಡೆಸುತ್ತಾರೆ.


 ಸಿರಿಗುಡಿಗೂ ಶಂಭುಕಲ್ಲು ಮಹಾದೇವರ ಗರ್ಭಗುಡಿಗೂ ನಡುವೆ ಇನ್ನೊಂದು ದೇವಸ್ಥಾನ ಇದೆ. ಅದರ ಹೆಸರು ಶ್ರೀಶಂಭು ಶೈಲೇಶ್ವರ. ಶಂಭುಶಿವನ ಗಜಪೃಷ್ಟಾಕಾರದ ಗುಡಿಯ 20 ಅಡಿ ಎಡಕ್ಕೆ ಇರುವ ಶಂಭು ಶೈಲೇಶ್ವರ ದೇವಸ್ಥಾನ ಅನಂತರ ಕಾಲದ್ದು ಎನ್ನುವುದು ಸಂಶೋಧಕರ ಅಭಿಪ್ರಾಯ.
 ಹಿಂದೆ ಶಂಭು ಶೈಲೇಶ್ವರ ದೇವಸ್ಥಾನಕ್ಕೆ ಸುತ್ತ ಪೌಳಿ ಇರಲಿಲ್ಲ.
“ಶಂಭು ಶೈಲೇಶ್ವರ ಗುಡಿಯ ಬಲ ಭಾಗದ ಮೂಲೆಯಲ್ಲಿ ಹೆಂಚಿನ ಪುಟ್ಟ ಗುಡಿ ಇತ್ತು. ಅದರೊಳಗೆ ಎರಡು ಲೋಹದ ಸಿರಿ ಶಿಲ್ಪಗಳು ಇದ್ದುವು. ಒಂದು ಮರದ ಕೋಳಿಯ ಶಿಲ್ಪ ಇತ್ತು. ಮೂಲತಃ ಎರಡು ಪುಟ್ಟ ಸಿರಿ ಶಿಲ್ಪಗಳು ಮರದ್ದೇ ಇತ್ತು.  ಮುಂದಿನ ಕಾಲಘಟ್ಟದಲ್ಲಿ ಮರದ ಶಿಲ್ಪದ ಅಳತೆಯಷ್ಟೇ ಪುಟ್ಟ ಲೋಹ ಶಿಲ್ಪಗಳ ರಚನೆ ಮಾಡಲಾಯಿತು. ಹಾಳಾಗಿರುವ ಮರದ ಕೋಳಿಯ ಶಿಲ್ಪ ಮೂಲದ್ದೇ ಎನ್ನುತ್ತಾರೆ.” (ಕೋಳಿಯು ಕುಮಾರನನ್ನು ಪ್ರತಿನಿಧಿಸುತ್ತದೆ.)

ಕೆಲವರ್ಷಗಳ ಹಿಂದೆ ಶೈಲೇಶ್ವರ ದೇವಾಲಯಕ್ಕೆ ಪೌಳಿ ನಿರ್ಮಿಸಿದ್ದಾರೆ. ಆಗ  ಸಿರಿಗಳ ಗುಡಿಯನ್ನು ಪೌಳಿಯ ಹೊರಗೆ ಸ್ಥಳಾಂತರಿಸಲಾಗಿದೆ. ಅಂದರೆ ಹಳೆಯ ಸಿರಿಗುಡಿಯನ್ನು ಕೆಡವಿ ಬಲ ಮೂಲೆಯಲ್ಲಿಯೇ ಹಳೆಯ ಮಾದರಿಯ ಹೊಸ ಗುಡಿಯನ್ನು ಪೌಳಿಯ ಹೊರಗೆ ಕಟ್ಟಲಾಗಿದೆ. ಅರ್ಚಕ ಗಣಪತಿ ಆಚಾರ್ ಅವರ ಪ್ರಕಾರ ಶಿಲ್ಪUಳನ್ನು ಆಗಲೂ ಬದಲಾಯಿಸಲಿಲ್ಲ.

ಸಿರಿಯ ಗುಡಿಯ ಶಿಲಾ ಶಿಖರದ ಮುಂಭಾಗದ (ಪೂರ್ವಕ್ಕೆ) ತಳಬಾಗದಲ್ಲಿ ಕಾಡು ಇದೆ. ಇದು ನಾಗ ಬ್ರಹ್ಮ ಕ್ಷೇತ್ರ. ಇಲ್ಲಿ ನಿಲುವು ಗಲ್ಲು ಇದೆ. ಆ ನಿಲುವುಗಲ್ಲನ್ನು ತೋರಿಸಿ ತುಳುವರ ‘ಬ್ರಹ್ಮ’ ಅರ್ಚಕರು ಪರಿಚಯಿಸುತ್ತಾರೆ. (ಅನೇಕ ನಾಗ ಬ್ರಹ್ಮ ಕ್ಷೇತ್ರÀಗಲ್ಲಿ ಹೆಚ್ಚಾಗಿ ಸ್ಥೂಪ ಅಥವಾ ಮುಡಿಂಜ, ನಿಲುವುಗಲ್ಲುಗಳು ನಾಗಬ್ರಹ್ಮನನ್ನು ಪ್ರತಿನಿಧಿಸುತ್ತದೆ) ನಾಗಬನ ಜೀರ್ಣೋದ್ಧಾರ ಆದಾಗ (ಕಾಡು ಕಡಿಯದೆ) ಆ ಮೂಲ ನಿಲುವುಗಲ್ಲನ್ನು ಇದ್ದಲ್ಲಿಯೇ ಉಳಿಸಿ ನಾಗಬ್ರಹ್ಮನ ಸಂಕೇತವಾಗಿ ಪಾಣಪೀಠದ ಲಿಂಗವನ್ನು ನಾಗÀ ಶಿಲ್ಪಗಳ ಬಳಿ ಪ್ರತ್ಯೇಕ `ಗುಂಡ’ ಕಟ್ಟಿ ಸ್ಥಾಪಿಸಲಾಗಿದೆ. ಬ್ರಹ್ಮ ಕ್ಷೇತ್ರದಲ್ಲಿ ಇರುವ ಹಳೆಯ ಕೆರೆ ಬತ್ತಿದರೂ ಸತ್ತಿಲ್ಲ. ನಾಗ ಬನದ ಬಳಿ ಇದ್ದ ಕಂಬುಲ ಗದ್ದೆ ಈಗ ಪರಧರ್ಮಿಯರ ಪಾಲಾಗಿದೆ.
ಈ ಬ್ರಹ್ಮ ಕ್ಷೇತ್ರ ಸ್ಥಳೀಯರ ಮೂಲಸ್ಥಾನ ಕ್ಷೇತ್ರ. ಈ ಕ್ಷ್ಷೇತ್ರದಲ್ಲಿ ನಾಗಬ್ರಹ್ಮನ ಉಪಾಸನೆ ಅಬ್ರಾಹ್ಮಣ ವರ್ಗದವರಿಂದ ಈಗಲೂ ನಡೆಯುತ್ತದೆ.  ಸಿರಿಕ್ಷೇತ್ರ ಇದ್ದಲ್ಲಿ ನಾಗಬ್ರಹ್ಮ ಕ್ಷೇತ್ರ ಇರುತ್ತದೆ.

ಸಿರಿಗಳಲ್ಲಿ ವೈವಿಧ್ಯತೆ:
 ನನ್ನ ಕ್ಷೇತ್ರ ಕಾರ್ಯದಲ್ಲಿ ಪ್ರಧಾನವಾಗಿ ಎರಡು ಬಗೆಯಲ್ಲಿ ಉಪಾಸನೆಗೊಳ್ಳುವ ಭಿನ್ನ ಜೋಡಿ ಸಿರಿಗಳು ಕಂಡು ಬಂದಿದೆ.
1 ತುಳುನಾಡ ಸಿರಿಪಾಡ್ದನದಲ್ಲಿ ಬರುವ ಸಿರಿಬಳಗ ಇದು ಪರೋಕ್ಷವಾಗಿ ಕೃಷಿ ಸಂಸ್ಕøತಿಗೆ ಸಂಬಂಧಿಸಿದೆ. ಈ ‘ಅವಳಿ ಸಿರಿ’ಗಳಿಗೆ ಮಾನವರಂತೆ ಕುಟುಂಬ ಇದೆ. ಇವರಿಗ ಒಬ್ಬ ತಮೆರಿ (ತವರ ರಕ್ಷಕ) ಇದ್ದಾನೆ. ಉಲ್ಲಾಯ (ನಾಗಬೆರ್ಮ)ಇದ್ದಾನೆ. ಈ ಸಿರಿ ಉಪಾಸನೆಯು ವೈದಿಕ ಪದ್ಧತಿಗೆ ವಾಲುತ್ತಾ ಸಾಗುತ್ತಿದೆ. ಆದರೂ ಇಲ್ಲಿಯೂ ಕುಮಾರನನ್ನು ಉಂಡು ಮಾಡುವ ಸಂದÀರ್ಭದಲ್ಲಿ ಕುಂಭದ ಒಳಗೆ ಭತ್ತ ಅಥವಾ ಅಕ್ಕಿ ಹಾಕಿ ನುರು ಸುರುವುತ್ತಾರೆ. ಇಲ್ಲಿಯ ಕಥಾನಾಯಕಿಯ ಜನನದಲ್ಲೂ ಜೊತೆಗೆ ನೂರಾರು ದೈವಗಳು ಹುಟ್ಟುತ್ತವೆ.
ಇಲ್ಲಿ ಗರ್ಭಗುಡಿಯ ಒಳಗೆ ಹಾಗೂ ಕೆಲವೊಂದು ಕಡೆ ಶಿವನ ಜೊತೆಗೆ ಪಾಡ್ದನ ಸಿರಿ ಕುಟುಂಬದ ಸಿರಿಯ ಮೊಮ್ಮಕ್ಕಳಾದ ಅವಳಿಗಳು ಪೂಜೆ ಪಡೆಯುವುದು ಗಮನಿಸ ಬೇಕಾದ ಅಂಶ.
2 ನೇರವಾಗಿ ಕೃಷಿಗೆ ಸಂಬಂಧಿಸಿದ ಜೋಡಿ ಸಿರಿಗಳು. ಇವುಗಳಿಗೆ ಮಾನವರಂತೆ ಕುಟುಂಬ ಇಲ್ಲ. ತಮೆರಿ (ತವರಿನ ಪುರುಷ ಯಜಮಾನ) ಇಲ್ಲ. ಅಥವಾ ಯಜಮಾನ ದೈವ (ಉಲ್ಲಾಯ ಅಥವಾ ನಾಗ ಬೆರ್ಮ) ಇಲ್ಲ.
ನಂಬಿಕೆಯ ಪ್ರಕಾರ ಕೃಷಿ ಸಂಸ್ಕøತಿಯ ಸಿರಿಪರಿವಾರ ಅತಿಕಾರ ಹೆಸರಿನ ಭತ್ತದ ತಳಿಯ ಜೊತೆಗೆ ತುಳುನಾಡಿಗೆ ಬಂದಿದೆ. ಅವುಗಳ ಜೊತೆ ಸಾವಿರಾರು ಭೂತಗಳು ನೂರೊಂದು ಗಂಡಗಣಗಳು ಬಂದಿವೆ.  ಈ ನಂಬಿಕೆಯನ್ನು ಪುಷ್ಟೀಕರಿಸುವ ಆಚರಣೆ, ಉಪಾಸನೆ ಈಗಲೂ ಮುಂದುವರಿದಿದೆ. ಇದು ಗಮನಿಸಬೇಕಾದ ಅಂಶ.
ಜೋಡಿ ಸಿರಿಗಳ ಉಪಾಸನೆ ಅಂದರೆ ಸಿರಿಗಳಿಗೂ ಕೋಲ ಆಗಬೇಕು. ಜೊತೆಗೆ ಈ ಭೂಮಿಯಲ್ಲಿಯ ಎಲ್ಲಾ ದೈವಗಳಿಗೆ ಕೋಲ ಆಗುತ್ತದೆ. ದೇವರುಗಳಿಗೂ ಉಪಾಸನೆ ಆಗಬೇಕು. ಆದರೆ ಎಲ್ಲ ಆಚರಣೆಗಳು  ನಲಿಕೆ ಜನಾಂಗದವರಿಂದ ಮಾತ್ರ ಆಗುವಂತಹುದು. ಆದರೆ ಎಲ್ಲಾ ದೈವಗಳಿಗೆ ಮೇಲಿನ ಸ್ತರದಲ್ಲಿ ಜೋಡಿ ಸಿರಿಗಳು ಇರುತ್ತಾರೆ.
ಉಪಾನೆಯ ಸಂದರ್ಭದಲ್ಲಿ ಅತಿಕಾರೆ ಎಂಬ ಪವಿತ್ರ ಬೆಳೆಯ ಭತ್ತದ ಬೀಜವನ್ನು ಎರಡು ಹೆಡಿಗೆಗಳಲ್ಲಿ ತುಂಬಿಸಿ ಅದಕ್ಕೆ ಕಾಯಿ ಒಡೆದು ಪಿಂಗಾರ ಊರಿ ಅರಮನೆ ಅಥವಾ ಬೀಡಿನ ಚಾವಡಿಯಲ್ಲಿ ಇಟ್ಟು ಪೂಜಿಸುತ್ತಾರೆ. ಎಲ್ಲಾ ದೈವ ಪಾತ್ರಿಗಳು ಅರಮನೆಯ ಮುಂದೆ ಬಂದು ಚಾವಡಿಯಲ್ಲಿಯ “ಅವಳಿ ಹೆಡಿಗೆ”ಗಳನ್ನು ಪೂಜಿಸಿ ಮರಳುತ್ತವೆ. ಇವು ಜೋಡಿ ಸಿರಿಗಳನ್ನು ಪ್ರತಿನಿಧಿಸುತ್ತವೆ.
ಗುಡಿಯ ಒಳಗೆ ಎರಡು ಕುಂಭಗಳಿವೆ.

ಸಿರಿ ಉಪಾಸನೆಯ ಪ್ರಾದೇಶಿಕ ವ್ಯಾಪ್ತಿ:
ಉಡುಪಿತಾಲೂಕಿನ ದಕ್ಷಿಣ ಭಾಗಗಳು, ಕಾರ್ಕಳ ತಾಲೂಕು ಜೋಡಿಸಿರಿಗಳ ಉಪಾಸನೆ ನಡೆಯುತ್ತಿತ್ತು.
ಮೇಲೆ ತಿಳಿಸಿದ ಪ್ರದೇಶಗಳಲ್ಲದೆ, ಮಂಗಳೂರು ತಾಲೂಕಿನ ಕಡೆ ಸುರತ್ಕಲ್ ಬಳಿ ನಾಲ್ಕು ಕ್ಷೇತ್ರದಲ್ಲಿ ಸಿರಿಕುಟುಂಬ ಬಳಗದ ಉಪಾಸನೆ ಇದೆ.  ಬೆಳ್ತಂಗಡಿ ತಾಲೂಕಿನಲ್ಲಿ ಒಂದೆರಡು ಕಡೆ `ಕುಟುಂಬ ಸಿರಿ’ ಉಪಾಸನೆ ನಡೆಯುತ್ತಿದೆ. ಬೆಳ್ತಂಗಡಿ ತಾಲೂಕಿನಲ್ಲಿ 19ನೆಯ ಶತಮಾನದಲ್ಲಿ ಸಿರಿ ಉಪಾಸನೆ ಪ್ರಾರಂಭವಾಯಿತು ಎಂಬ ಮಾಹಿತಿ ಬಂದಿದೆ. (ನೋಡಿ ಇಂದಿರಾ ಹೆಗ್ಗಡೆ: ತುಳುವರ ಮೂಲತಾನ ಆದಿ ಆಲಡೆ ಪರಂಪರೆ ಮತ್ತು ಪರಿವರ್ತನೆ 2012)

ನಿರಾವರಿ ಆಧಾರಿತ ಭೂಮಿ ಇರುವ ಪ್ರದೇಶಗಳಲ್ಲಿ ಮಾತ್ರ ಸಿರಿ ಉಪಾಸನೆ ಕಂಡು ಬರುತ್ತಿದೆ. ಭತ್ತ ಬೆಳೆಯುವ ಫಲವತ್ತಾದ ಕಂಬುಲ ಗದ್ದೆ ಇರುವ ಪಾಳೆಯಗಾರರ ಭೂಮಿಯಲ್ಲಿ ಸಿರಿ ಉಪಾಸನೆ ಕಂಡು ಬಂದಿದೆ.

ಕೃಷಿ ಸಂಸ್ಕøತಿಯ ಸಿರಿ ಬಳಗದ ಉಪಾಸನೆ ‘ಕಂಬುಲದ ಬೆಳೆಯ ಕೊಯ್ಲಿ’ನ ಸಂದರ್ಭದಲ್ಲಿ  (ಅಥವಾ ಬಾಕಿಮಾರು) ಆಗಬೇಕು. ಬಾಕಿಮಾರು ಅಥವಾ ಕಂಬುಲ ಗದ್ದೆಯ ಕೊಯ್ಲಿನ ಸಂದರ್ಭದಲ್ಲಿ ಅವಳಿ ಸಿರಿಗಳ ಉಪಾಸನೆಯ ಅಂಗವಾಗಿ ದೆಯ್ಯೊಲೆ ನಲಿಕೆ ನಲಿಯುತ್ತಿತ್ತು.

 ಕಂಬುಲ ಗದ್ದೆಯ ಉಳುಮೆ ಆಗುವಾಗ ದೆಯ್ಯೊಲೆ ನಲಿಕೆ ನಡೆಯುತ್ತಿತ್ತು. ಈ ದೆಯ್ಯೊಲೆ ನಲಿಕೆ ‘ಕುಟುಂಬ ಸಿರಿ ಬಳಗ’ದಿಂದ ಆಗುತ್ತದೆ. ಇಲ್ಲಿ ಪಾತ್ರಿಗಳು ನಾಗ ಬ್ರಹ್ಮ ಸಿರಿ ಆಲಡೆಯ ಕ್ಷೇತ್ರದ ಸಿರಿ ಪಾತ್ರಿಗಳಂತೆ ದರ್ಶನ ನಿಲ್ಲುತ್ತಾರೆ.

ತುಳುನಾಡ ಸಿರಿ ಪಾಡ್ದನದ ಸಿರಿ ಬಳಗದ ಉಪಾಸನೆಯು ಹೆಚ್ಚಿನ ಕಡೆ ಜನಪದ ಪದ್ಧತಿಯಿಂದ ವೈದಿಕ ಪದ್ಧತಿಗೆ ಪರಿವರ್ತನೆ ಆದರೂ ಹೆಚ್ಚಿನ ಮೂಲ ಆಚರಣೆಗಳನ್ನು ಉಳಿಸಿಕೊಂಡು ಪ್ರಸಿದ್ಧಿ ಹೊಂದಿವೆ. ಭತ್ತದ ವ್ಯವಸಾಯ ಉಪೇಕ್ಷೆಗೆ ಒಳಗಾದ ಮೇಲೆ ಅತಿಕಾರೆ ಭತ್ತದ ಜೊತೆ ಬಂದ ಸಿರಿಪರಿವಾರದ ದೆಯ್ಯೊಲೆ ನಲಿಕೆ ಬಹಳ ಅಪರೂಪವಾಗಿದೆ.

ಶಾಸನಗಳಲ್ಲಿ ಸಿರಿ ಉಪಾಸನೆಯ ಉಲ್ಲೇಖ :
ಪುತ್ತಿಗೆಯ ವರದಯ್ಯ ಚೌಟರು ಕ್ರಿ.ಶ. 1180ರಲ್ಲಿ ದೈವಂತಿ ಗುಡಿ ಕಟ್ಟಿಸಿದ್ದ ಬಗ್ಗೆ, ಅಲ್ಲಿ 3ದಿನದ ದೆಯ್ಯೊಲೆ ನಲಿಕೆ ಆಗುತ್ತಿದ್ದ ಬಗ್ಗೆ ಉಲ್ಲೇಖ ಇದೆ.  (ಶ್ರೀ ಕ್ಷೇತ್ರ ಪುತ್ತಿಗೆ) ದೆಯ್ಯಂತಿ ಎನ್ನುವುದು ಕೃಷಿ ಉಪಾನೆಯ ಸಿರಿಗಳು. ಪುತ್ತಿಗೆಯ ಚವಟರ ದೈಯಂತಿ ಗುಡ್ಡದ ಬಳಿ ಕ್ಷೇತ್ರ ಕಾರ್ಯ ಮಾಡಿದ್ದೇನೆ. ದೆಯ್ಯಂತಿ ಶಿಲ್ಪವನ್ನೂ ನೋಡಿದ್ದೇನೆ. ಇವು ಕೃಷಿಪೋಷಕ ಆಚರಣೆಯ ಸಿರಿಗಳು.
ಕ್ರಿ.ಶ.1443ರ ಕಾರ್ಕಳ ತಾಲೂಕಿನ ಉದ್ಯಾವರ ಶಾಸನದ “ವೀರ ಭದ್ರ ವಿನಾಯಕ ದೇವರಿಗೂ ನಿಂಚಿತಾ ಬಲಿ ಪೂಜೆಯ ಕೊಂಬ ನಂದಳಿಕೆಯ ದೈವಗಳಿಗೂ”  (SII. ಗೌII. ನಂ.295) ಎಂಬ ಮಾಹಿತಿ ನಂದಳಿಕೆಯ ಸಿರಿ ಆಲಡೆ ದೈವಗಳನ್ನು ಕುರಿತಾಗಿದೆ. ಆಗಿನ್ನೂ ನಂದಳಿಕೆಯಲ್ಲಿ ಮಹಾಲಿಂಗೇಶ್ವರ ಲಿಂಗ ಸ್ಥಾಪನೆ ಆಗಿರಲಿಲ್ಲ. (ಇಂದಿರಾ ಹೆಗ್ಗಡೆ : ತುಳುವರ ಮೂಲತಾನ ಆದಿ ಆಲಡೆ ಪರಂಪರೆ ಮತ್ತು ಪರಿವರ್ತನೆ. ಪು 129 ನವಕರ್ನಾಟಕ 2012)ನಂದಳಿಕೆಯ ದೈವಂಗಳು “ನಾಗಬ್ರಹ್ಮ ಮತ್ತು ಸಿರಿ ಪರಿವಾರಗಳು”.

ಕ್ರಿ.ಶ.1499ರ ಉಡುಪಿ ತಾಲೂಕಿನ ಕಾಪು ಶಾಸನ-ನಂದಳಿಕೆಯ ದೈವಂಗಳ (SII. VII. ನಂ..273) ಶಾಪಾಶಯ ಹೊಂದಿದೆ. ನಂದಳಿಕೆಯ ಮೂಲ ಗರ್ಭಗುಡಿಯಲ್ಲಿ ಅಬ್ಬಗ-ದಾರಗರ ಅವಳಿ ಶಿಲ್ಪಗಳು ದೈವಗಳು ಉಪಾಸನೆಗೊಳ್ಳುತ್ತಿವೆ.
ನಂದಳಿಕೆ ಹೆಗ್ಗಡೆಯವರಿಗೂ ಚೌಟರಿಗೂ ಆದ ಕರಾರಿನಲ್ಲಿ ( 1450) ನಂದಳಿಕೆಯ ದೈವಗಳ ಪ್ರಸ್ತಾಪ ಮಾತ್ರ ಬರುತ್ತದೆ.

ಶಾಸನ 2
ಪಿ.ಎನ್. ನರಸಿಂಹಮೂರ್ತಿಯವರು 2003ರಲ್ಲಿ ಸುರತ್ಕಲ್ ಬಳಿಯ ತೋಕೂರಿನಲ್ಲಿ ಪತ್ತೆ ಶಾಸನ. ಇದು ಸುಮಾರು 7ನೆಯ ಶತಮಾನಕ್ಕೆ ಸೇರಿರಬಹುದಾದ ಶಾಸನ ಎಂದು ಅಂದಾಜಿಸಲಾಗಿದೆ. ಈ ಶಾಸನದಲ್ಲಿ ‘ಅಯ್ದು (5) ಒಕ್ಕಲ ‘ಕೆಯಿ’’ಯನ್ನು ನಾಯ್ಗ ಎಳ ಅರಸ ಶ್ರೀಕಾಯತ್ತೂರ (ಈಗಿನ ತೋಕೂರ) ದೇಗುಲದಲ್ಲಿ ಬೇಸಗೆಯ ಹುಣ್ಣಿಮೆಗೆ (ನಡೆಯುವ ಸಮಾರಾಧನೆಗೆ) ಉಣ್ಣುವ ವ್ಯವಸ್ಥೆಗೆ ಎರಡು ಖಂಡುಗ ‘ಕೆಯ್’ (ತುಳು ಕೆಯಿ) ನೀಡುವ ಉಲ್ಲೇಖ ಇದೆ. ಇಲ್ಲಿಯ ‘ನಾಯ್ಗ(ನಾಯಕ)ಎಳೆ ಅರಸ ‘ಕೊಳ್ಮೆತರಾ, ಕವಡರಾ, ತಣ್ವಯಲಣರುಂ ತೋಕರಣ್ವರಂ’ ಎಂಬ ಐದು ಒಕ್ಕಲ ಕೆಯ್ಯ(ಭತ್ತದ) ಧನದಲ್ಲಿ ಎರಡು ಖಂಡುಗ ಭತ್ತವನ್ನು ಬೇಸಗೆಯ ಹುಣ್ಣಿಮೆಯಲ್ಲಿ ಉಣ್ಣುವ ವ್ಯವಸ್ಥೆಗೆ ಮೀಸಲಿಡಬೇಕೆಂದು ಆದೇಶ ಮಾಡಿದ ಶಾಸನ.
ಈ ಶಾಸನ ದೊರೆತುದು ಜಾರಂದಾಯ ಗುಡಿಯ ಮರುನಿರ್ಮಾಣ ಕಾಲದಲ್ಲಿ ಧ್ವಜ ಸ್ಥಂಭದ ಅಡಿ ಶಾಸನ ಕಲ್ಲು ದೊರೆತಿದೆ.  ಶಾಸನದ ಜೊತೆಗೆ ಹೆಡೆಯ ಸರ್ಪಚಿತ್ರ ಇದ್ದು ಹೆಡೆಯ ಬಳಿ ಸೂರ್ಯ ಚಂದ್ರರ ಚಿತ್ರ ಇದೆ. ತೋಕೂರಿನಲ್ಲಾಗಲೀ, ಈ ಶಾಸನದ ದೊರೆತ ಸ್ಥಳದ ಸಮೀಪವಾಗಲೀ ಯಾವುದೇ ವೈದಿಕ ಸಂಪ್ರದಾಯದ ದೇವಸ್ಥಾನ ಇಲ್ಲ. ಜಾರಂದಾಯ, ಜುಮಾದಿ ಮತ್ತು ಉಲ್ಲಾಯ ಶಕ್ತಿಗಳಿವೆ. ಈ ಭಾಗದಲ್ಲಿ ಕ್ಷೇತ್ರಕಾರ್ಯ ಮಾಡಿದಾಗ ಈ ಶಾಸನ ದೊರಕಿದ ಸ್ಥಳದ ಸಮೀಪದ ಗುಡ್ಡವನ್ನು ‘ಅರಂತಗುಡ್ಡೆ’ ಎಂದು ಕರೆಯುವ ಮಾಹಿತಿ ದೊರಕಿತು. ತುಳುಭಾಷೆಯಲ್ಲಿ ‘ಅರಂತ ಗುಡ್ಡೆ’ ಅಂದರೆ ಅರಮನೆಯ ಗುಡ್ಡ ಎಂಬ ಅರ್ಥ. ಅರಂತ ಗುಡ್ಡೆ ಮತ್ತು ಜಾರಂದಾಯ ಗುಡ್ಡೆಗಳ ನಡುವೆ ‘ಪಂಚ ದೈವಗಳ’ ಕ್ಷೇತ್ರ ಇತ್ತು. ಈ ಕ್ಷೇತ್ರದಲ್ಲಿ ಅವಳಿ ಸಿರಿಗಳ ಎರಡು ಶಿಲಾ ಸಂಕೇತಗಳು ಇದ್ದವು. ಇದರ ಅರ್ಚಕ `ಮುಕ್ಕಾಲ್ದಿ’ (ಬಂಟ ಅರ್ಚಕ). ಈ ಗುಡ್ಡದ ಶಿಖರದಲ್ಲಿ ಎರಡು ಸಿರಿಗಳ ಉಪಾಸನೆ ಬಂಟ ಅರ್ಚಕರಿಂದ ನಡೆಯುತ್ತಿತ್ತು. ಇಲ್ಲಿಯ ನೇಮದ ಸಂದರ್ಭದಲ್ಲಿ ಈ ಸಿರಿಗಳ ಕಲ್ಲುಗಳ ಮುಂದೆ ನೈವೇದ್ಯ ಬಡಿಸುತ್ತಿದ್ದರು. ಎಮ್.ಆರ್.ಪಿ.ಎಲ್ ಈ ಸ್ಥಳವನ್ನು ಆಕ್ರಮಿಸಿ ಗುಡ್ಡವನ್ನು ನೆಲಸಮ ಮಾಡಲಾಗಿದೆ. ಆದರೆ ಈ ಮೊದಲೇ ಈ ಗುಡ್ಡದಲ್ಲಿ ಸಿರಿಗಳ ಉಪಾಸನೆ ನಿಂತಿತ್ತು. ಕುಟುಂಬದ ಬಂಟ ಅರ್ಚಕರು (ಮುಕ್ಕಾಲ್ದಿ) ನಿಧನರಾದ ಮೇಲೆ ಸಿರಿಗಳ ಅರ್ಚನೆಯ, ಉಪಾಸನೆಯ ಹೊಣೆ ಹೊತ್ತುಕೊಳ್ಳಲು ಯಾರೂ ಸಿದ್ಧರಾಗಿರಲಿಲ್ಲ ಎನ್ನುವುದು ಶಿಲೆಯಲ್ಲಿ ನಂಬಿದ ಸಿರಿ ಶಕ್ತಿಗಳ ಅವಸಾನದ ಬಗ್ಗೆ ದೊರೆತ ಮಾಹಿತಿ. ಶಾಸನಗಳಲ್ಲಿ ಐದು ಖಂಡುಗ ಭತ್ತವನ್ನು ಬೇಸಗೆಯ ಹುಣ್ಣಿಮೆಯ ಉಪಾಸನೆಗೆ ಮೀಸಲಿಟ್ಟಿದ್ದು.
ತೋಕೂರು ಮಾಗಣೆಯ ಪಾಳೆಯಗಾರಿಕೆಯಲ್ಲಿ ಪಟ್ಟ ಆದ ವ್ಯಕ್ತಿಯನ್ನು ‘ಆಳುವ’ ಎಂಬ ಆ ಮನೆತನದ ಪರಂಪರೆಯ ಹೆಸರಿನಲ್ಲಿ ಕರೆಯುವ ರೂಢಿ ಈಗಲೂ ಮುಂದುವರೆದಿದೆ.
3 ಉಡುಪಿಯ ತಾಲೂಕಿನ ಎರ್ಮಾರ್ ಪಾದೆ ಬೆಟ್ಟು ಸಿರಿ ಆಲಡೆಯ ಬಳಿ (ಉಪಾಸನಾ ಕ್ಷೇತ್ರ) ಮಣ್ಣಿನಡಿ ನನಗೆ ದೊರೆತ ಸಿರಿ ಶಿಲ್ಪವು ಸುಮಾರು 15 ಶತಮಾನಕ್ಕೆ ಸೇರಿದೆ ಎಂದು ಖ್ಯಾತ ಪುರಾತತ್ವ ತಜ್ಷ ಅ. ಸುಂದರ ಅªರು ಅಭಿಪ್ರಾಯ ಪಟ್ಟಿದ್ದಾರೆ.
ಶಂಭುಕಲ್ಲು ಗುಡ್ಡದ ಮಹತ್ವ: ಈ ಶಿಖರ ಕ್ಷೇತ್ರದ ಸಿರಿಗಳ ಗುಡಿಯು ಐತಿಹಾಸಿಕ ಮಹತ್ವದ್ದು.  ಏಳನೆಯ ಶತಮಾನಕ್ಕೂ ಪೂರ್ವದಿಂದಲೂ ಇಲ್ಲಿ ಸಿರಿ ಉಪಾಸನೆ ನಡೆಯುತ್ತಿತ್ತು ಎನ್ನುವುದಕ್ಕೆ ಈ ಗುಡಿ ಹಾಗೂ ಇಲ್ಲಿರುವ ಸಿರಿ ಶಿಲ್ಪ ಹಾಗೂ ಕೋಳಿಯ ಶಿಲ್ಪಗಳು ದೃಷ್ಟಾಂತವಾಗುತ್ತವೆ. ಸಿರಿಗಳಿಗೆ ಐತಿಹಾಸಿಕ ಮಹತ್ವ ಇರುವುದರಿಂದಲೇ ಪಾಳು ಬಿದ್ದ ಕ್ಷೇತ್ರವನ್ನು ಜೀರ್ಣೋದ್ಧಾರ ಮಾಡುವಾಗ ಸಿರಿಗುಡಿಯನ್ನು ಇದ್ದಂತೆ ಇರಗೊಟ್ಟಿದ್ದಾರೆ. ಹೀಗಾಗಿ ಉಪಾಸನಾ ಆಚರಣೆ ಇಲ್ಲದಿದ್ದರೂ ಸಿರಿಗಳ ಗುಡಿ, ಸಿರಿಗಳ ಶಿಲ್ಪ ಉಳಿದು ಬಂದಿವೆ. ಸಂಪೂರ್ಣ ವೈದಿಕಮಯವಾಗಿರುವ ಈ ಕ್ಷೇತ್ರದಲ್ಲಿ ಜನಪದರ ಶೂದ್ರ ಸಿರಿ ಶಿಲ್ಪಗಳನ್ನು, ಭೂತ/ದೈವಗಳನ್ನು ಪ್ರತಿಷ್ಠಾಪಿಸುವ ಸಂಭವ ಇಲ್ಲ. ಅವುಗಳ ಅಗತ್ಯವೂ ವೈದಿಕ ಉಪಾಸನೆಗೆ ಅಗತ್ಯ ಇಲ್ಲ. ಯಾವುದೇ ವೈದಿಕ ಕ್ಷೇತ್ರಕ್ಕೆ ಜನಪದ ದೈವಗಳು ಅನಂತರ ಸೇರ್ಪಡೆಯಾಗುವ ಸಾಧ್ಯತೆ ತೀರಾ ಕಡಿಮೆ.  ಆದರೆ ಜನಪದ ಕ್ಷೇತ್ರಕ್ಕೆ ವೈದಿಕ/ಶಿಷ್ಟ ದೇವರ ಪ್ರವೇಶ ಆಗುತ್ತಲೇ ಇದೆ.
ಉಪಸಂಹಾರ :
ಹೀಗೆ ಉದ್ಯಾವರ ಮತ್ತು ತೋಕೂರು ಕ್ಷೇತ್ರಗಳು ಸಿರಿ ಉಪಾಸನೆಯ ಕ್ಷೇತ್ರವಾಗಿ 7ನೆಯ ಶತಮಾನಕ್ಕೂ ಪೂರ್ವದಿಂದಲೇ ಪ್ರಸಿದ್ಧಿ ಹೊಂದಿರುವ ಕ್ಷೇತ್ರ. ಸಿರಿ ಉಪಾಸನೆಯ ಪ್ರಾಚೀನತೆಯನ್ನು ಐತಿಹಾಸಿಕವಾಗಿ ನಾವು 7/8 ಶತಮಾನಗಳಾಚೆ ಆಚೆ ಕೊಂಡುಹೋಗಬಹುದು.
2014ರ ಸಪ್ಟೆಂಬರ್ನಲ್ಲಿ ಶಿರ್ವ ಸುಂದ್ರರಾಮ ಶೆಟ್ಟಿ ಕಾಲೇಜಿನಲ್ಲಿ ನಡೆದ ಇತಿಹಾಸ ಸಮ್ಮೇಳನದಲ್ಲಿ ಮಂಡಿಸಿದ ಪ್ರಬಂಧ. 2015ರ  ಇತಿಹಾಸ ದರ್ಶನದಲ್ಲಿ ಪ್ರಕಟವಾಗಿದೆ.

 ಪ್ರತಿಕ್ರಿಯೆಯನ್ನು ನಿರೀಕ್ಷಿಸುತ್ತೇನೆ.



.

No comments:

Post a Comment