Wednesday, December 30, 2015

ಮೇರು ಪರ್ವತದ ಮೇಲೆ ಜೈನ ಮಂದಿರಜೈಸಲ್ಮೇರ್ ಕೋಟೆ ಇರುವುದು ಮೇರು ಪರ್ವತದ ಮೇಲೆ. ಈ ಕೋಟೆಯ ಒಳಗೆ ಇರುವ ಸುಂದರ ಜೈನ ಮಂದಿರ ಮುಚ್ಚುವ ವೇಳೆಯಾಯಿತು ಎಂದು ಅಮರ್ ಸಾಗರ್ ಅರಮನೆ ನೋಡದೆ ನಾವು ಇಲ್ಲಿಗೆ ಧಾವಿಸಿದ್ದೆವು. ಜೈಸಲಮೇರ್ ಕೋಟೆಯಿರುವು ಮೇರು ಪರ್ವತದ ಮೇಲೆ! ಕೊನೆಗೂ ಜೈನ ಮಂದಿರದ ಒಳಹೋದಾಗ ಬಹಳ ಸಮಾಧಾನ ಆಯಿತು.  ಮಹಡಿ ಮೆಟ್ಟಲು ಹತ್ತಿ ಗರ್ಭ ಗುಡಿಗೆ ಹೋಗಬೇಕು. ಮಧ್ಯದ ಗರ್ಭ ಗುಡಿಯಲ್ಲಿ ನಾಲ್ಕು ದಿಕ್ಕಿಗೂ ಮುಖಮಾಡಿ ಕುಳಿತ ಮಹಾವೀರನ ಸೌಮ್ಯ ಮೂರ್ತಿ ಇದೆ. ಗರ್ಭಗುಡಿಯ ಸುತ್ತಲೂ ತೀರ್ಥಂಕರರ ಪ್ರತಿಮೆಗಳಿವೆ. ಹಳದಿ ಶಿಲೆಗಳಲ್ಲಿ ನಿರ್ಮಿಸಿದ ಈ ಪ್ರತಿಮೆಗಳು ಬಂಗಾರದ ಮೆರಗಿನಿಂದ ಶೋಭಿಸುತ್ತಿವೆ. ಒಟ್ಟು 6000ಕ್ಕಿಂತಲೂ ಅಧಿಕ ಪ್ರತಿಮೆಗಳಿವೆ ಎಂದ ಗೈಡ್.


ಗೋಡೆಗಳ ಮೇಲೆ ಇರುವ ಭಿತ್ತಿ ಚಿತ್ರಗಳು ಅಬುಪರ್ವತದ ದಿಲ್‍ವಾರಾ ಮಂದಿರವನ್ನು ನೆನಪಿಸುತ್ತದೆ. ಈ ಮಂದಿರದೊಳಗೆ ಕೃಷ್ಣಾ, ಗಣಪತಿ ಎಲ್ಲರೂ ಇದ್ದಾರೆ. ವೈವಿಧ್ಯಮಯ ನೃತ್ಯಭಂಗಿಯ ವಿಗ್ರಹಗಳು ಕಂಬಗಳಲ್ಲಿ ಇವೆ. ಕೆಂಪು ಶಿಲೆಯ ಈ ಜೈನ ಮಂದಿರದ ಕಲೆಯ ಬಲೆಯು ಸುಂದರ ಚಿತ್ರದಂತೆ ಮೂಡಿದೆ. ಗುಡಿಯು ಎತ್ತರದ ಜಗತಿಯನ್ನು ಹೊಂದಿದೆ. ಇವೆಲ್ಲ 14, 15ನೆಯ ಶತಮಾನದವುಗಳು ಎನ್ನುತ್ತದೆ ಇಲ್ಲಿಯ ಮಾಹಿತಿ. ಇಲ್ಲಿಯ ಕ್ಷೇತ್ರಪಾಲನನ್ನು  ಸ್ಥಳೀಯವಾಗಿ ಭೈರೂಜಿ ಎನ್ನುತ್ತಾರೆ.
ಜೈನ ಮಂದಿರದ ಬಳಿ ಚಾಮುಂಡಾ ಮಂದಿರ ಇದೆ. ಇದು ಮಹಳ ಪುರಾತನ ಮಂದಿರ. ಇದರ ಅಧಿಷ್ಟಾನವೂ ಎರಡಾಳು ಎತ್ತರ ಇದೆ. ಇದರ ಮುಂದೆ ಸಿಮೆಂಟಿನಿಂದ ನಿರ್ಮಿಸಲಾದÀ ಸಿಂಹಾಸನ ಇದೆ. ಚಾಮುಂಡಾಗೆ ಬಲಿ ನೀಡುತ್ತಿದ್ದಾಗ ಅರಸ ಸಿಂಹಾಸನದಲ್ಲಿ ಆಸೀನನಾಗಿರುತ್ತಿದ್ದನಂತೆ. ಈಗಲೂ  ನಿತ್ಯ ಬಲಿ ಇದೆ. ಹಿಂದೆ ಕೋಣಗಳ ಬಲಿ  ನೀಡುತ್ತಿದ್ದರು. ಇತ್ತೀಚಿನ ವರ್ಷಗಳಲ್ಲಿ ಟಗರು ಬಲಿ ನೀಡುತ್ತಿದ್ದಾರೆ.
ಅರಮನೆ ಮತ್ತು ಚಾಮುಂಡಾ ಮಂದಿರದ  ಮುಂದಿನ ಜಾಗದಲ್ಲಿ ‘ಗರ್ಬೋಲ್ ಮಾತಾ’ಕಾ ಹಬ್ಬ ನಡೆಯುತ್ತಿತ್ತು.

ಹವೇಲಿ : ಶ್ರೀಮಂತ ವ್ಯಾಪಾರಿಗಳ ಅನೇಕ ಹವೇಲಿಗಳು ಈ ಕೋಟೆಯ ಒಳಗೆ ಇವೆ. ‘ವ್ಯಾಸ ಹವೇಲಿ’ಯನ್ನು 15 ಶತಮಾನದಲ್ಲಿ ಕಟ್ಟಿದ್ದರೂ ಈಗಲೂ ಅಂದಿನ ಕುಟುಂಬದ ವಂಶಜರೇ ವಾಸಿಸುತ್ತಿದ್ದಾರೆ ಎನ್ನುತ್ತಾರೆ. ಇಲ್ಲಿಯ ಅರಮನೆಯನ್ನು ‘ಶ್ರೀನಾಥ್ ಪ್ಯಾಲೆಸ್’ ಎಂದು ಕರೆಯುತ್ತಾರೆ ಎಂದ ಗೈಡ್. ಆದರೆ ರಾಜಸ್ಥಾನ ಮಾಹಿತಿಯ ಪ್ರಕಾರ ‘ಪಾಟವಾನ್ ಕಿ  ಹವೇಲಿ’ ವಿಶಾಲವಾದ ಹವೇಲಿ.  ಈ ಹವೇಲಿಯಲ್ಲಿ ಐದು ಅಂತಸ್ತುಗಳಿವೆ. ಇದು ಕೋಟೆಯ ಮಧ್ಯದಲ್ಲಿದ್ದು ಸುರಕ್ಷಿತವಾಗಿದೆ. ಹವಾಪೋಲ್, (ಗಾಳಿದ್ವಾರ) ಗಣೇಶ್ ಪೋಲ್, ಸೂರಜ್ ಪೋಲ್ ಇವೆಲ್ಲ ದ್ವಾರಗಳ ಹೆಸರುಗಳು. ಸೂರಜ್ ಪೋಲ್  (ಪೂರ್ವ ದ್ವಾರ)ದ ಮೂಲಕ ಕೋಟೆ ಮಧ್ಯ ಭಾಗಕ್ಕೆ ಪ್ರವೇಶ ಕಲ್ಪಿಸಲಾಗಿದೆ.  ಕೋಟೆಯ ನೆಲ ಅಂತಸ್ತಿನಲ್ಲಿ ಮಹಡಿಗಳುಳ್ಳ ಹವೇಲಿ ಇದೆ.
 ಅರಮನೆ ಮಾತ್ರ ಅರಸು ಪರಿವಾರದವರ ಸುಪರ್ದಿಯಲ್ಲಿದೆ.  ಉಳಿದ ಭಾಗದ ಕೋಟೆಯನ್ನು ಅರಮನೆಯ ಪರಿವಾರದವರಿಗೆ ದಾನ ನೀಡಿದ್ದಾರೆ ಅಂದಿನ ಅರಸರು. ಅಂದು ದಾನ ಪಡೆದವರ ಪೀಳಿಗೆಯವರು ತಲೆ ತಲಾಂತರದಿಂದ ಇಲ್ಲಿ ವ್ಯಾಪಾರ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಹೀಗಾಗಿ ಇಲ್ಲಿ ಜನಸಂಖ್ಯೆ ಹೆಚ್ಚಾಗಿ ಸ್ವಚ್ಛತೆಗೆ ಗಮನ ನೀಡಿಲ್ಲ. ಜನರಿಂದ ಕಿಕ್ಕಿರಿದ ಕೋಟೆ ಇದು. ಇಲ್ಲಿ 4000 ಕುಟುಂಬಗಳು ಇವೆ ಎನ್ನಲಾಗುತ್ತಿದೆ.

ಜೈಸಲ್ಮೇರ್ ವ್ಯಾಪಾರಿ ಮಾರ್ಗವಾಗಿತ್ತು. ಮಧ್ಯಯುಗದಲ್ಲಿ ಪರ್ಷಿಯಾ, ಅರೇಬಿಯಾ, ಈಜಿಪ್ಟ್, ಮತ್ತು ಆಫ್ರಿಕಾ ದೇಶದೊಂದಿಗೆ ಇದ್ದ ಭಾರತದ ವ್ಯಾಪಾರ ವಹಿವಾಟಿನ ಮಾರ್ಗ ಜೈಸಲ್ಮೇರ್ ಆಗಿತ್ತು. ಹೀಗಾಗಿ ಇಲ್ಲಿ ವ್ಯಾಪಾರಿಗಳು ಭಾರಿ ಶ್ರೀಮಂತರೇ. ನಮ್ಮ ಗೈಡ್ ನಮ್ಮನ್ನು ಬಜಾರಿಗೆ ಎಳಕೊಂಡು ಹೋದ. ಸ್ಯಾಂಡ್ ಸ್ಟೋನ್‍ನಿಂದ ತಯಾರಿಲಾದ ವಸ್ತುಗಳನ್ನು ಖರೀದಿಸಲು ಒತ್ತಡ ಹಾಕಲಾಯಿತು.  ಇದು ಹಳದಿ ಬಣ್ಣದ ಕಲ್ಲು. ರಾತ್ರಿ ಹಾಲಿನ ಒಳಗೆ ಈ ಕಲ್ಲು ಹಾಕಿದರೆ ಅದು ಬೆಳಗಾಗುವಾಗ ಮೊಸರು ಆಗುತ್ತದೆ. ಅಥವಾ ಅವರ ಬೋಗುಣಿ ಯಾಕರದ ಹಳದಿ ಕಲ್ಲಿನ ಪಾತ್ರೆ ಖರೀದಿಸಿ ಸ್ಟ್ಯಾಂಡ್ ಸ್ಟೋನ್ ನಿಂದ ಆಗುವ ಆರೋಗ್ಯ ಲಾಭವನ್ನು ಪಡೆಯಬೇಕೆಂಬ ಒತ್ತಡ. (ನಾನು ಮಾತ್ರ ಮನೆಗೆ ತಂದು ಅದರಲ್ಲಿ ಉಪ್ಪು ಹಾಕಿಟ್ಟಿದ್ದೇನೆ.)

ಮರುದಿನ ನಮ್ಮ ಪ್ರಯಾಣ ಜೈಸಲಮೇರ್ ಹೊರಗೆ ಇರುವ ವುಡ್ ಫೋಸಿಲ್ ಪಾರ್ಕ್ ಕಡೆಗೆ.

ಪುಡ್ ಫಾಸಿಲ್ ಪಾಕ್ ್(ಮರಗಳ ಪಳೆಯುಳಿಕೆಯ ತೋಟ ):
ಪಳೆಯುಳಿಕೆಗಳು ಲಕ್ಷಾಂತರ ವರುಷಗಳ ಹಿಂದಿನ ಜನಜೀವನ ಮಾತ್ರವಲ್ಲ ಪ್ರಾಕೃತಿಕ ಸ್ವರೂಪಗಳ ಬಗ್ಗೆಯೂ ಮಾಹಿತಿ ನೀಡುತ್ತವೆ.
ಜೈಸಲ್ಮೇರ್ ನಗರದಿಂದ 17 ಕಿಲೋಮೀಟರ್ ಹೊರಗೆ  ಫಾಸಿಲ್ ಪಾರ್ಕ್ ಇದೆ. ವಿಜ್ಞಾನಿಗಳ ಪ್ರಕಾರ ಇದು ಜುರಾಸಿಕ್ ಯುಗಕ್ಕೆ ಸೇರುತ್ತದೆ.  ಹಿಂದೆ ಸರಿದ ಸಮುದ್ರದ  ಭಾಗ ಈ ಭೂಮಿ ಎನ್ನುತ್ತಾರೆ. ವಿಜ್ಞಾನಿಗಳ ಪ್ರಕಾರ 180 ಮಿಲಿಯ ವರ್ಷಗಳ ಹಿಂದೆ ಇಲ್ಲಿ ಕಾಡು ಇತ್ತು. ಮುಂದೆ ಇಲ್ಲಿಯ ಭೂಮಿ ಸಮುದ್ರದೊಳಗೆ ಸೇರಿತ್ತು.  ಮತ್ತೆ ಸಮುದ್ರ ಭೂಮಿಯನ್ನು ಬಿಟ್ಟುಕೊಟ್ಟಾಗ ಕಾಡಿನ ಮರಗಳು ಫಾಸಿಲ್ ಆಗಿ ಮಾರ್ಪಟ್ಟಿವೆ. ವಿಶಾಲ  ಪಾರ್ಕ್‍ನಲ್ಲೆಲ್ಲ ಫಾಸೆಲ್ಸ್ ಹರಡಿಕೊಂಡಿದೆ ಎನ್ನುತ್ತಾರೆ ವಿಜ್ಞಾನಿಗಳು. ಮರದ ದಿಮ್ಮಿಗಳನ್ನು ಹೋಲು ಫಾಸಿಲ್‍ಗಳು ಉದ್ದ 1.5 ಮೀಟರ್ ನಿಂದ 13 ಮೀಟರ್ ವರಗೂ ಇದೆ.ಇವುಗಳನ್ನು ಕನ್ನಡಿಯ ಗೂಡು ಮಾಡಿ ಕನ್ನಡಿಯ ಒಳಗೆ ಇರುವ ಗಂಟಿನಂತೆ ರಕ್ಷಿಸಿಟ್ಟಿದ್ದಾರೆ. ನೊಳಗೆ ಮರದ ಪ್ರತಿಯೊಂದು ಕನ್ನಡಿಯ ಗೂಡಿಗೆ ಸಂಖ್ಯೆಯನ್ನು ನೀಡಿದ್ದಾರೆ.

ಈಗ ಕಾಡಿನೊಳಗೆ ಅಂತಹ ಭಾರಿ ಗಾತ್ರದ ಮರಗಳೇನೂ ಇಲ್ಲ. ಮರಳುಗಾಡಿನ ಕಾಡು ಇದು. ಆದರೂ ಈ ಭಾಗದ ಮಣ್ಣು ಮಾತ್ರ ಗಟ್ಟಿಯಾಗಿದೆ. ಸಣ್ಣ ಪುಟ್ಟ ಕಲ್ಲುಬಂಡೆಗಳೂ ಇವೆ.


ಜೈಸಲ್ಮೇರ್ ಬಿಡುವ ಮೊದಲು ಒಂದು ಮಾತು. ಈ ಭಾಗದಲ್ಲಿ ಪ್ರತಿಶತ 30 ಮಾತ್ರ ಹಿಂದುಗಳು. ಹೆಚ್ಚಿನವರು ಮುಸಲ್ಮಾನರು ಎನ್ನುವುದು ನಮ್ಮ ಡ್ರೈವರ್ ಹರೀಷ್ ನೀಡುವ ಮಾಹಿತಿ. ಇಲ್ಲಿ ಹಿಂದೂಗಳು ಅಲ್ಪ ಸಂಖ್ಯಾತರು.  ಆದರೆ ಎರಡೂ ಕೋಮಿನವರು ಅನ್ಯೋನ್ಯರಾಗಿದ್ದಾರೆ. ಅವನ ಈ ಮಾತನ್ನು ಮರುಭೂಮಿಯಲ್ಲಿ ನಡೆದ ಸಾಂಸ್ಕøತಿಕ ಪ್ರದರ್ಶನ ಖಚಿತ ಪಡಿಸುತ್ತದೆ.

ಡಾ. ಇಂದಿರಾ ಹೆಗ್ಗಡೆ