Monday, December 21, 2015

ವರುಷ ಉರುಳಿತು ಗೆಳೆಯಾ



ನೀನಗಲಿ ವರುಷ ಉರುಳಿದರೇನು?
ಉರುಳುರುಳಿ ಬರುತ್ತಿದೆ ಗೆಳೆಯಾ
ನಿನ್ನ ನೆನಪು
ನೋವಿನ ಅಲೆಗಳು ಅಪ್ಪಳಿಸಿ ಬರುತ್ತಿದೆ
ಎದೆಯಾಳದಿಂದ
ಬಡಬಾಗ್ನಿ ಎದ್ದಂತೆ ಕಡಲಿನಿಂದ
ನಿನ್ನಗಲಿಕೆ
ತಂದಿಹುದು ಅಸಮಾನ್ಯ  ನೋವು
ಆರದ, ತೀರದ ನೋವು


ಕಡಲು ಶಾಂತವಾಗುತ್ತದೆ ಸುಮಾನಿಯ ಬಳಿಕ
ನನ್ನದೆಯ ಕಡಲು ಬೋರ್ಗರೆಯುತ್ತಿದೆ \ವರುಷ ಉರುಳಿದರೂ
ನಿನಗಾಗಿ ನಿನ್ನ ಸನಿಹಕ್ಕಾಗಿ ನಿನ್ನ ಕೊಡೆಯಡಿಯ ಆ ಸುಖಕ್ಕಾಗಿ
ಮಿಡಿಯುತ್ತಿದೆ ಮನಸ್ಸು

ಇಂದಲ್ಲವೆ ನೀನು ನನಗೆ ಬೆನ್ನುಹಾಕಿ ತೆರಳಿದ್ದು
ನಿನಗೋ ಆ ಹುಡುಗರಿಗೆ ಅಮವಾಸೆಯ ಕಡಲು ಮೀಯಿಸುವ ಆನಂದ
ನನಗೋ ನಾನಿಲ್ಲದೆ ಕಡಲ ಬಳಿ ನೀನು ಹೋದ ಆತಂಕ
ಕ್ಷಣವೊಂದು ಯುಗವಾಗಿ ಕಾದರೂ
ನೀನು ಬರಲೇ ಇಲ್ಲ ಮರಳಿ

ಕೊನೆಗೂ ಕಡಲು ಕಕ್ಕಿತು ನಿನ್ನ ದೇಹವನ್ನು
ನಿನ್ನ ಗಾಳಿಯನ್ನು ಹೀರಿ ಅನಂತತೆಗೆ ಬೀಸಿತು
ಉತ್ತರಾಯಣ ಪುಣ್ಯ ಕಾಲದಿ
ಭೀಷ್ಮ ಕಾದಿದ್ದ  ಆ ದಿನಕ್ಕಾಗಿ
ಶರಶಯ್ಯೆಯ ಮೇಲೆ
ನಿನಗಾಗಿ ಕಾದಿತ್ತು ಆ ದಿನ!

ಕಡಲ ಮಡಿಲ ಅಲೆಗಳ ನೀರಾಟದಲ್ಲಿ ನೀ ಪಡೆದ ಸುಖ
ನಿನ್ನ ಉಸಿರಿಲ್ಲದ ಮೊಗದಲ್ಲೂ ಉಳಿದಿತ್ತು

ನಗು ನಗುತ್ತಾ, ಬಾಳಿದೆ, ನಕ್ಕು ನಲಿಸಿ ಬಾಳಿದೆ
ಮರಣದಲ್ಲೂ ನಕ್ಕು ನಲಿದೆ, ನಲಿಸಿದೆ

ಶರಣರ ಗುಣವನ್ನು ಮರಣದಲ್ಲಿ ಕಂಡೆ ನಿನ್ನ ಮೂಲಕ
ಅನಾಯೇಸೇನ ಮರಣಂ ವಿನಾ ದೈನೇನ ಜೀವನಂ
ಮಧ್ವರ ಈ ನುಡಿ ನಿನಗಾಗಿ ಎನಿಸುತ್ತಿದೆ
ನಿನ್ನ ಜೀವನ ಪೂರ್ಣವಾಯಿತು

ಈಗ ಶಾಂತಿ ಬೇಕಾಗಿದೆ ಬದುಕಿರುವವರಿಗೆ



ಡಾ. ಇಂದಿರಾ ಹೆಗ್ಗಡೆ

No comments:

Post a Comment