Sunday, November 8, 2015

ವಿವಾಹ ಪೂರ್ವ ಸಹಜೀವನ( Living together)ದ ಸಾಧಕ ಬಾಧಕಗಳು



ವಿವಾಹ ಪೂರ್ವ ಸಹಜೀವನ  ಎನ್ನುವುದು ಈಶಾನ್ಯ ಭಾರತೀಯರಲ್ಲಿ ಪುರಾತನ ಸಾಂಪ್ರದಾಯ. ಅಸ್ಸಾಂನ ಕೆಲವು ಬುಡಗಟ್ಟುಗಳಲ್ಲಿ, ಸಿಕ್ಕಿಂ, ಅರುಣಾಚಲ, ಮೇಘಾಲಯ, ನಾಗಾಲ್ಯಾಂಡ್ , ಮಣಿಪುರ, ತ್ರಿಪುರ ಮುಂತಾದ ಬುಡಗಟ್ಟು ಸಮುದಾಯಗಳ ರಾಜ್ಯಗಳ ಹೆಚ್ಚಿನ ಬುಡಗಟ್ಟು ಸಮಾಜದಲ್ಲಿ ವಿವಾಹ ಪೂರ್ವ ಸಹಜೀವನ ಮುಂದುವರಿದಿದೆ. ಪಿತೃಪ್ರಧಾನ ಬುಡಗಟ್ಟುಗಳ ನಾಗರಿಕ ಸಮಾಜದಲ್ಲಿ  ಕೂಡಾ ವಿವಾಹಪೂರ್ವ ಸಹಜೀವನ ಉತ್ತೇಜಿಸುವ ಪುರಾತನ ಪದ್ಧತಿ, ಸಂಪ್ರದಾಯ ಮುಂದುವರಿದಿದೆ. 
ವಿವಾಹ ಪೂರ್ವದಲ್ಲಿ ಹೆಣ್ಣು ಗಂಡುಗಳು ಪರಸ್ಪರ ಅರಿತುಕೊಳ್ಳಲು ಗಂಡಿನ ಪರುಷತ್ವ ಪರೀಕ್ಷೆ ಮಾಡಲು ಮತ್ತು ಗಂಡು ತನ್ನ ಮಡದಿಯನ್ನು ಸಾಕುವ ಸಾಮರ್ಥ್ಯ ಅರಿತುಕೊಳ್ಳಲು ಈ ಸಂಪ್ರದಾಯ ಸಹಕಾರಿಯಾಗಿದೆ. ಅದರ ಉದ್ದೇಶವೂ ಅದೆ, ಹೀಗಾಗಿ ಆ ಭಾಗದಲ್ಲಿ ಅತ್ಯಾಚಾರವೂ ಕಡಿಮೆ. ಹುಡುಗ ಹುಡುಗಿಯರು ತಮಗೆ ಸಂಗಾತಿ ಬೇಕಿನಿಸಿದಾದ ಸಂಗಾತಿಯನ್ನು ಆಯ್ದುಕೊಂಡು ಸಹಜೀವನ ನಡೆಸಬಹುದು. ಇಂತಹ ಸಹಜೀವನವನ್ನು ಆ ಸಮಾಜ ಸ್ವಾಗತಿಸುತ್ತದೆ.
  ಸಹಜೀವನ ಹೆಣ್ಣಿನ ಮನೆಯಲ್ಲಿ. ಕೆಲವು ಬುಡಕಟ್ಟುಗಳಲ್ಲಿ ಒಂದು ವರ್ಷದ ಅವಧಿಯ ಸಹಜೀವನ. ಹೆಣ್ಣು ಗಂಡುಗಳ ಆಯ್ಕೆ ಅವರವರಿಗೇ ಬಿಟ್ಟಿದ್ದು. ಹೆತ್ತವರು ಅದು ತಮ್ಮ ಜವಾಬ್ದಾರಿ ಅಲ್ಲ ಎನ್ನುತ್ತಾರೆ. ಒಂದು ವರ್ಷದ ಪ್ರೊಬೆಷನರಿ ಅವಧಿಯಲ್ಲಿ ಗಂಡಿನ ಪರೀಕ್ಷೆ ನಡೆಯುತ್ತದೆ. ಆತ ಹೆಣ್ಣಿಗೆ ಒಪ್ಪಿಗೆಯಾಗದಿದ್ದಲ್ಲಿ ಅವನನ್ನು ಮನೆಯಿಂದ ಹೊರಗೆ ಕಳುಹಿಸುತ್ತಾರೆ. ಆಕೆ ಒಪ್ಪಿದರೂ ಆತ ಸೋಮಾರಿಯಾದಲ್ಲಿ ಆಗ ಮನೆಯವರು ಆ ಮದುವೆಯನ್ನು ಮಾಡುವುದಿಲ್ಲ. ಈ ಒಂದು ವರ್ಷದ ಸಹ ಜೀವನದಲ್ಲಿ ಹುಡುಗಿ ಮಗುವಿನ ತಾಯಿಯಾದಲ್ಲಿ ಏನೂ ಬಾಧಕಬಾರದು. ಮಗುವನ್ನು ಸಾಕುವ ಹಕ್ಕು ಮತ್ತು ಹೊಣೆಗಾರಿಕೆ ತಾಯಿಯದ್ದು, ತಾಯಿಯ ಮನೆಯವರದ್ದು. (ಡಾ. ಇಂದಿರಾ ಹೆಗ್ಗಡೆ :ವಿವಾಹ ಪೂರ್ವ ಸಹಜೀವನ ತರಂಗ ಸಪ್ಟಂಬರ್ 2012)
ವಿದೇಶಗಳಲ್ಲಿ ವಿವಾಹ ಪೂರ್ವ ಸಹಜೀವನ ಸಾಮಾನ್ಯ.  ಅಲ್ಲಿಯವರ ಆಶಯವೂ ಮೇಲೆ ತಿಳಿಸಿದಂತೆ ಹೆಣ್ಣು ಗಂಡುಗಳು ಪರಸ್ಪರ ಅರಿಯಲು ಅನುಗೊಳ್ಳುವುದು. 10ವರ್ಷಗಳ ಕಾಲ ಹೆಣ್ಣು ಗಂಡುಗಳು ಯಶಸ್ವೀ ಸಹಜೀವನ ನಡೆಸಿದಲ್ಲಿ ಆ ಜೋಡಿಯನ್ನು ದಂಪತಿಗಳೆಂದು ಕಾನೂನು ಮಾನ್ಯ ಮಾಡುತ್ತದೆ. 10ವರ್ಷದ ಅನಂತರ ಅವರು ಬೇರ್ಪಡುವುದಿದ್ದರೆ ನ್ಯಾಯಾಂಗದ ಮೂಲಕ ಮಾತ್ರ ಬೇರೆಯಾಗಲು  ಸಾಧ್ಯ. 10 ವರ್ಷದ ಸಹಜೀವನವಕ್ಕೆ ಮದುವೆಯ ಮಾನ್ಯತೆಗೆ ಕಾನೂನು ಅವಕಾಶ ಕಲ್ಪಿಸಿದೆ.(ಆಸ್ಟ್ರೇಲಿಯಾ) 10 ವರ್ಷಗಳ ಒಳಗೆ ಸಹಜೀವನದಿಂದ ಬೇರೆಯಾಗಲು ಅವರಿಗೆ ಮುಕ್ತ ಸ್ವಾತಂತ್ರ್ಯ ಇದೆ.  ಅವರು ಹೆತ್ತ ಮಕ್ಕಳನ್ನು ಸಾಕಲು ಯಾರು ಸಮರ್ಥರೋ ಅವರಿಗೆ ಆ ಮಕ್ಕಳನ್ನು ನ್ಯಾಯಾಂಗ ಒಪ್ಪಿಸುತ್ತದೆ. ಇಂತಹ ಸಂರ್ಭದಲ್ಲಿ ಮಕ್ಕಳು ಸಾಮಾನ್ಯವಾಗಿ  ತಾಯಿಯ ಬಳಿ ಇರುತ್ತವೆ.
ಭಾರತೀಯ ಸಂವಿಧಾನ ವೈದಿಕ ಸಮಾಜ ಪದ್ಧತಿಯ ಪಿತೃಪ್ರಧಾನ ವ್ಯವಸ್ಥೆಯಡಿ ರಚನೆಗೊಂಡಿದೆ. ಕೆಲವು ಬುಡಗಟ್ಟುಗಳಿಗೆ ಕೆಲವೊಂದು ವಿಷಯದಲ್ಲಿ ರಿಯಾಯಿತಿ ಇದ್ದರೂ ಸಾಮಾನ್ಯಾಗಿ ನ್ಯಾಯಾಂಗ ಪಿತೃಪ್ರಧಾನ ಮೌಲ್ಯಗಳನ್ನು ಎತ್ತಿ ಹಿಡಿಯತ್ತದೆ.  ಮಾತೃಪ್ರಧಾನ ಸಮಾಜದ ಮೌಲ್ಯಗಳನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ.
 ಇಂತಹ ಸಂದರ್ಭದಲ್ಲಿ ಭಾರತೀಯ ನಗರ ಸಮುದಾಯವು ವಿವಾಹ ಪೂರ್ವ ಸಹಜೀವನವನ್ನು ಪಾಶ್ಚತ್ಯರಿಂದ ಸ್ವೀಕರಿಸಿ ಜೀವನ ನಡೆಸಲು ಆರಂಬಿಸಿದೆ. ಪಾಶ್ಚಾತ್ಯರನ್ನು ಅನುಕರಣೆ ಮಾಡುವಾಗ ನಮ್ಮ ಯುವ ಪೀಳಿಗೆಗೆ ಅದರಿಂದ ಬಂದೊದಗಬಹುದಾದ ಸಾದಕ ಬಾಧಕಗಳ ಬಗ್ಗೆ ನೆನಪಾಗುವುದಿಲ್ಲ
ಸಹಜೀವನ ನಡೆಸುವವರು  ಅಥವಾ ಪರಸ್ಪರ ಒಪ್ಪಿಗೆಯಿಂದ ದೈಹಿಕ ಸಂಪರ್ಕ ಪಡೆಯುವುದು ಇತ್ತೀಚೆಗೆ ನಗರದಲ್ಲಿ ಸಾಮಾನ್ಯವಾಗಿದೆ.
 ಸಹಜೀವನದಿಂದ ಬೇರೆಯಾಗಲು ಪುರುಷನಿಗೆ ಅವಕಾಶ ಇಲ್ಲದ ಸ್ಥಿತಿ ಭಾರತೀಯ ಸಮಾಜದಲ್ಲಿ ಉದ್ಭವವಾಗಿದೆ. ಸಹಜೀವನ ನಡೆಸಿದ ಹೆಣ್ಣು ಗಂಡನ್ನು ತೊರೆದು ಹೋದರೆ ಆಗ ಗಂಡಿಗೆ  ನಿರಾಶೆ, ನೋವು ಆದರೂ ಪೋಲೀಸ್ ಕಂಪ್ಲೇಟ್ ಕೊಡಲು ನಮ್ಮ ಸಮಾಜ ಪದ್ಧತಿಯಲ್ಲಿಯೇ ಅವಕಾಶ ಇಲ್ಲ. ಗಂಡಿಗೆ ಹೆಣ್ಣಿನ ನಡತೆಯಿಂದ ತೊಂದರೆಯಾದರೂ  ಆ ಹೆಣ್ಣಿನಿಂದ ಆತ ದೂರ ಸರಿಯುವಂತಿಲ್ಲ. ಉದಾ: ಅನಿವಾರ್ಯ ಕಾರಣಗಳಿಂದ ಆತ  ಆಕೆಯಿಂದ ಬೇರೆಯಾಗಬೇಕಾದ ಪರಿಸ್ಥಿತಿ ಬಂದೊದಗಿದರೂ (ಒಂದು ವೇಳೆ ಪುರುಷನ ತಂದೆ ತಾಯಿಯರಿಂದ ಆತ ದೂರ ಇರಬೇಕು ಅಥವಾ ತಮ್ಮ ಅಪ್ಪನ  ಆರ್ಥಿಕ ಸಂಕಷ್ಟವನ್ನು ಹೊರಬೇಕು-ಇತ್ಯಾದಿ ಬೇಡಿಕೆಗಳು ಅವಳಿಂದ ಬಂದರೂ) ಆಕೆಯ ಮರ್ಜಿಯಂತೆ ನಡೆಯಬೇಕಾದ ಅನಿವಾರ್ಯತೆ ಎದುರಾಗಿದೆ. ಆಶ್ಚರ್ಯ ಎಂದರೆ ವಿವಾಹ ಆದ ಪುರುಷ ಹೆಂಡತಿಯಿಂದ ವಿಚ್ಛೇಧನ ಪಡೆಯಲು ಕಾನೂನಿನಲ್ಲಿ ಅವಕಾಶ  ಇದೆ. ಆದರೆ ವಿವಾಹ ಆಗದೆ ದಂಪತಿಯಂತೆ ಸಹಜೀವನ ನಡೆಸಿದವರು ಬೇರೆಯಾಗಲು ಪುರುಷನಿಗೆ ಭಾರತೀಯ ಕಾನೂನಿನಲ್ಲಿ ಅವಕಾಶ  ಇಲ್ಲ, ಆತ ಹಾಗೆ ಮಾಡಿದಲ್ಲಿ ಅತ್ಯಾಚಾರದ ಆರೋಪಕ್ಕೆ ಒಳಗಾಗುವ ಅಪಾಯ ಇದೆ.
ಹೆಣ್ಣಿನ ಆಶಯದಂತೆ ಅಥವಾ ಗಂಡಿನ ಆಶಯದಂತೆ ಓಡಿಹೋಗಿ ಮದುವೆಯಾದವರು ಹುಡುಗಿ ಅಪ್ರಾಪ್ತಳಾಗಿದ್ದಲ್ಲಿ ಕಾನೂನಿನಡಿ ಅಪರಾಧಿಗಳಾಗುತ್ತಾರೆ. ಆಗ ಹುಡುಗಿಗೆ ಶಿಕ್ಷೆ ಇರುವುದಿಲ್ಲ. ಆತ ಮದುವೆಯಾಗುವುದಾಗಿ ನಂಬಿಸಿ ಮೋಸಮಾಡಿದ್ದಾನೆ ಎಂದು ಎರಡೂ ಸಂದರ್ಭಗಳಲ್ಲಿಯೂ  ಹೆಣ್ಣು ಹೆತ್ತವ ಅಥುವಾ ಹೆಣ್ಣು ದೂರುಕೊಡುತ್ತಾಳೆ. ಹುಡುಗನ ಮೇಲೆ ಅತ್ಯಾಚಾರದಂತಹ ಗಂಭೀರ ಆರೋಪವನ್ನು ಮಾಡಲಾಗುತ್ತದೆ. ಗಂಡು ಜೈಲು ಪಾಲಾಗುತ್ತಾನೆ
ಹೆಣ್ಣನ್ನು ರಕ್ಷಿಸಲು ಮಾಡಿದ ಐಪಿಸಿ 376 ನೇ ವಿಧಿಯ ದುರ್ಬಲಕೆಯನ್ನು ಮಹಿಳೆಯರೇ ಮಾಡುವುದು ದುರ್ದೈವದ ಸಂಗತಿ.
ಕಾನೂನಿನಿಂದ ಮುಗ್ಧ ಗಂಡು ಹುಡುಗರು ಬಲಿಯಾಗುತ್ತಿರುವುದು ಮೇಲ್ನೋಟಕ್ಕೆ ಕಾಣುವ ಅಂಶ.
ವಿದೇಶದಲ್ಲಿ ಮತ್ತು ಈಶಾನ್ಯ ಭಾರತದ ಕೆಲವು ರಾಜ್ಯಗಳಲ್ಲಿ ಹೆಣ್ಣುಗಂಡುಗಳು ಮೈಥುನದಂತಹ ವಿಷಯದಲ್ಲಿ ಸಹಕರಿಸಲು ಸಾಮಾಜಿಕ ಹಾಗೂ ಕಾನೂನಿನ ಬೆಂಬಲ ಇದೆ. ಮೈಥುನವನ್ನು ಹಸಿವು ನಿದ್ದೆಯಷ್ಟೇ ಅಗತ್ಯ ಎಂದು ತಿಳಿದ ಸಮಾಜ ಅದು. ನಮ್ಮ ಸಮಾಜದಲ್ಲಿ ಈ ಕೆಲಸವನ್ನು ಪುರುಷನು ಕದ್ದು ಮುಚ್ಚಿ ಮಾಡುತ್ತಾನೆ. ಅವಕಾಶ ಸಿಕ್ಕಾಗ  ಅತ್ಯಾಚಾರ ಮಾಡಿ ಹಸಿವು ಇಂಗಿಸಿ ಕೊಳ್ಳುತ್ತಾನೆ. ಆ ಸಂದರ್ಭದಲ್ಲಿ ಆತನಿಗೆ ಕಠಿಣ ಕಾನೂನುಗಳಾಗಲೀ, ತಮ್ಮ ಮನೆಯ ಮಾನವಾಗಲೀ ನೆನಪಿಗೆ ಬರುವುದಿಲ್ಲ. ಈ ವಿಷಯದಲ್ಲಿ ಹುಡುಗಿಯರಲ್ಲಿ ಸ್ವಲ್ಪ ಮಟ್ಟಿನ ನಿಗ್ರಹ ಇದ್ದರೂ ಓಡಿ ಹೋಗಿ ಮದುವೆಯಾಗುವ ಅಪ್ರಾಪ್ತ ವಯಸ್ಸಿನ ಹೆಣ್ಣು ಮಕ್ಕಳಲ್ಲಿ ಆ ತಾಳ್ಮೆ,ನಿಗ್ರಹ ಇಲ್ಲ ಎಂದು ನಾವು ಭಾವಿಸಬಹುದು.
ಆದುದರಿಂದ ಪಾಶ್ಚಾತ್ಯ ಪದ್ಧತಿಯನ್ನು ಸ್ವೀಕರಿಸಿ ಸಹಜೀವನ ನಡೆಸುವ ಜೋಡಿಗಳು  ವಿರಸಗೊಂಡು ಬೇರೆಯಾಗುವಾಗ  ಹುಡುಗನ ಮೇಲೆ ಮಾಡುವ ಆರೋಪವನ್ನು ಸ್ವೀಕರಿಸುವಾಗ ಸ್ವಲ್ಪ ಎಚ್ಚರಿಕೆ ಪೋಲೀಸರಿಗೂ ಬೇಕಾಗುತ್ತದೆ. ಇವೆಲ್ಲ ಸೂಕ್ಷ್ಮ ವಿಷಯಗಳು. ಆರೋಪ ಪಟ್ಟಿ ದಾಖಲಿಸಿದಾಕ್ಷಣ ಅದನ್ನು ಸುದ್ದೀ ಸಂಸ್ಥೆಗಳಿಗೆ ಬಿಡುಗಡೆ ಮಾಡುವುದು, ಹುಡುಗನನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ ಎರೆಸ್ಟ್ ಮಾಡುವುದು ಎಷ್ಟು ಸಾಧುವಾದುದು?
ಶ್ರೀಮಂತ ಹುಡುಗರನ್ನು ಬಲೆಗೆ ಬೀಳಿಸಿ ಪ್ರೀತಿಯ ನಾಟಕವಾಡಿ ಅವರಿಂದ ಗಳಿಸಬೇಕಾದಷ್ಟು ಗಳಿಸಿ ಅನಂತರ ಹುಡುಗರನ್ನು ತೊರೆದು ಹೋಗುವ ತರುಣಿಯರ ಸಂಖ್ಯೆಯೂ ಕಡಿಮೆ ಇಲ್ಲ. ಆಗ ಹುಡುಗರು ನಿರಾಶರಾಗಿ ಮಾನಸಿಕ ನೆಮ್ಮದಿ ಕಳೆದುಕೊಂಡರೂ  ಪೋಲೀಸ್ ಕಂಪ್ಲೇಂಟ್ ಕೊಟ್ಟ ಉದಾಹರಣೆ ನಮ್ಮಲ್ಲಿ ಇಲ್ಲ. 
ಹೀಗಾಗಿ ಸಹಜೀವನದ ಸಾಧಕ ಬಾಧಕಗಳ ಬಗ್ಗೆ ನಾವಿಂದು ಚಿಂತನೆ ನಡೆಸಬೇಕಾಗಿದೆ.
ಐಪಿಸಿ 376ನೆಯ ವಿಧಿಯಡಿ ಅತ್ಯಾಚಾರದ  ಆರೋಪ ಮಾಡಿರುವ ಮಹಿಳೆಯನ್ನು ಮತ್ತು ಅವಳ ಕುಟುಂಬವನ್ನು ದೃಶ್ಯಮಾಧ್ಯಮದ ಮುಂದೆ ತಂದು ನಿಲ್ಲಿಸಿ ಕಣ್ಣೀರು ಹಾಕಿಸುವುವ ದೃಶ್ಯ ಮಾಧ್ಯಮದವರ ಕೆಲಸಕ್ಕೂ ತಡೆ ತರಬೇಕಾಗಿದೆ. ಆರೋಪಕ್ಕೆ ಒಳಗಾದವರನ್ನು  ಆರೋಪ ಮಾಡಿದವರನ್ನು ವಿಚಾರಿಸಲು ಪೋಲೀಸರು ಇದ್ದಾರೆ. ನ್ಯಾಯಾಂಗ ವ್ಯವಸ್ಥೆ ಇದೆ.



ಡಾ.ಇಂದಿರಾ ಹೆಗ್ಗಡೆ
09845577553


No comments:

Post a Comment