Monday, November 2, 2015

ನಾಗಾಲ್ಯಾಂಡ್ ಮತ್ತು ಮಿಜೋರಾಂ: ನಾಯಿ ಮಾಂಸ ದುಬಾರಿ

ಮಿಜೋರಂ ವಿಮಾನ ನಿಲ್ದಾಣದಲ್ಲಿ ಡ್ರೈವರ್ ಜೊತೆ ಎಸ್. ಆರ್ ಹೆಗ್ಡೆ



ಮಿಜೋರಾಂ ನಗರ ಮತ್ತು ಕಾಡು



ನಾವು ನಾಗಾಲ್ಯಾಂಡ್ ಪ್ರವಾಸ ಮುಗಿಸಿ ಮಿಜೋರಾಂ ರಾಜ್ಯಕ್ಕೆ ಹೋದೆವು. ನಮಗೆ ಅಲ್ಲಿ ಕಂಡಿದ್ದು ನಿಬಿಡವಾಗಿಹ ಸಾಮಾನ್ಯ ಎತ್ತರದ ಮರಗಳ ಕಾಡು ಪ್ರದೇಶ. ಕಾಡು ಬಾಳೆಯ ಹಸಿರು ಗಿಡಗಳು ಹೆಚ್ಚಾಗಿ ನಳನಳಿಸುತ್ತಿದ್ದುವು. ಮನಸ್ಸಿಗೆ ಮುದನೀಡುವ ಬೆಟ್ಟಗಳ ಕಣಿವೆಗಳ ಸೊಂಪಾದ ಹಸಿರು ಸಿರಿ ಇವೆ. 21,087 ಚದರ ಕಿಲೋಮೀಟರ ವಿಸ್ತೀರ್ಣದ ಮಿಜೋರಾಂನ 91%ಭೂಮಿಯನ್ನು ಇಂತಹ ಕಾಡು ಉಳಿಸಿಕೊಂಡಿದೆ. ಇಷ್ಟು ಸೊಗಸಾದ ಹಸಿರು ಕಾಡು ಕಂಡು ಪುಳಕಿತಳಾಗಿ,“ಇಲ್ಲಿ ಕಾಡುಪ್ರಾಣಿಗಳಿರಬಹುದಲ್ಲ?” ಕೇಳಿದೆ ನಮ್ಮ ಡ್ರೈವರ್ ಬಳಿ.
“ಯಾವ ಕಾಡು ಪ್ರಾಣಿಗಳೂ ಉಳಿದಿಲ್ಲ. ನಮ್ಮ ಹಿರಿಯರು ಎಲ್ಲಾ ಪ್ರಾಣಿಗಳನ್ನು ತಾವೇ ತಿಂದು ಮುಗಿಸಿದ್ದಾರೆ. ಮುಂದಿನ ಪೀಳಿಗೆಗೆ ಇರಬೇಕು ಎಂಬ ಜ್ಞಾನವೂ ಅವರಲ್ಲಿ ಇರಲಿಲ್ಲ.”  ತಟಕ್ಕನೆ ಉತ್ತರಿಸಿದ ತರುಣ ಮಿತ್ರನ ಮಾತಿನ ಹಾಸ್ಯದಲ್ಲಿ ವಾಸ್ತವತೆಯೂ ಇತ್ತು. ಪ್ರಕೃತಿ ಎನ್ನುವು ಮನುಷ್ಯರಿಗೆ ಮಾತ್ರವಲ್ಲ, ಭೂಮಿಯ ಮೇಲಿನ ಎಲ್ಲಾ ಪ್ರಾಣಿಗಳಿಗೆ, ಹಾರುವ ಹಕ್ಕಿಗೆ, ಹರಿದಾಡುವ ಉರಗ ಸಮೂಹಕ್ಕೆ, ಹರಿಯುವ ನೀರಿಗೆ -ಎಲ್ಲಕ್ಕೂ ಪ್ರಕೃತಿ ಬೇಕು. ಅದನ್ನು ತಲೆತಲಾಂತರದವರೆಗೆ  ಉಳಿಸು ಹೊಣೆ ಮಾನವನದ್ದು. ಈ ಸತ್ಯದ ದರ್ಶನ ಅವನಿಗಿತ್ತು. ಅವನ ಪ್ರಕಾರ ಮಿಜೋರಾಂನ ಈ ಕಾಡಿನಲ್ಲಿ ಈಗ ಕಾಡು ಪ್ರಾಣಿಗಳು ಇಲ್ಲವೇ ಇಲ್ಲ.

ನಮ್ಮ ದಾರಿಯ ರಸ್ತೆ ಬದಿ ಕುಳಿತು ಹರಟುವವರ ಬಳಿ ದಷ್ಟಪುಷ್ಟ ನಾಯಿ ಮಲಗಿತ್ತು. “ನಾಯಿ ಚೆನ್ನಾಗಿದೆ” ಎಂದೆ ನಾನು. “ಹೌದು. ಇಲ್ಲಿ ನಾಯಿಯನ್ನು ಚೆನ್ನಾಗಿ ಸಾಕುತ್ತಾರೆ ಮಾಂಸಕ್ಕಾಗಿ” ತಕ್ಷಣ ನುಡಿದ ಡ್ರೈವರ್. ಅದುವರೆಗೂ ನಮಗೆ ತಿಳಿದ್ದಿದ್ದುದು ಬರಗಾಲದಲ್ಲಿ ವಿಶ್ವಾಮಿತ್ರ ನಾಯಿ ಮಾಂಸ ತಿಂದಿದ್ದು ಅನಿವಾರ್ಯವಾಗಿ ಎಂದು. ನಾಯಿ ಮಾಂಸವೂ ಕೆಲವರ ಆಹಾರ ಎಂದು ಗೊತ್ತಾಗಲು ಈ ಭಾಗಕ್ಕೆ ಬರಬೇಕಾಯಿತು.
ನಾವು ಆಶ್ಚರ್ಯದಿಂದ ಮಂತ್ರಮುಗ್ಧರಾಗಿದ್ದೆವು. ನಮ್ಮ ಮುಖಭಾವ ಓದಿದ ಆತ ನಗುತ್ತಾ ನುಡಿದ: ”ನೀವು ಇಲ್ಲಿಗೆ ಬರುವ ಮೊದಲು ನಾಗಾಲ್ಯಾಂಡ್‍ಗೆ ಹೋಗಿ ಬಂದವರಲ್ಲವೆ? ಅಲ್ಲಿ ನಾಯಿ ತಿನ್ನುವುದನ್ನು ನೋಡಿಲ್ಲವೆ?”
 “ಅಲ್ಲಿ ಬಾನಿನಲ್ಲಿ ಹಾರುವ ವಿಮಾನ, ನೀರಿನಲ್ಲಿ ತೇಲುವ ಹಡುಗು, ಭೂಮಿಯಲ್ಲಿ ಓಡಾಡುವ ವಾಹನಗಳನ್ನು ಉಳಿದು ಜೀವ ಇರುವ ಎಲ್ಲದರ ಮಾಂಸ ತಿನ್ನುವುದು ತಿಳಿದಿತ್ತು.” ಎಂದ ಹೆಗ್ಡೆಯವರು ‘ನಾಯಿ ಬಗ್ಗೆ ತಲೆಗೆ ಹೋಗಲಿಲ್ಲ’ ಎಂದರು. ‘ನಾಯಿಯೇ ಯಾಕೆ? ಮಾನವನನ್ನೂ ತಿನ್ನುತ್ತಾರೆ” ಎಂದ. “ಹಿಂದೆ ಮಾನವರನ್ನು ಬೇಟೆಯಾಡಿ ತಿನ್ನುತ್ತಿದ್ದುದು ತಿಳಿದಿದೆ. ಈಗಲೂ ತಿನ್ನುವುದು ಗೊತ್ತಿಲ್ಲ.” ಎಂದೆ ನಾನು.
“ ನಾಗಲ್ಯಾಂಡ್‍ನ ಒಂದು ಜಿಲ್ಲೆಯಲ್ಲಿ ಈಗಲೂ ಮಾನವ ಮಾಂಸವನ್ನು ತಿನ್ನುತ್ತಾರೆ” ಎಂದನಾತ.
 ನಮ್ಮವರು ಈಗ ಮಾತು ಮರೆತರು.  ಸ್ವಲ್ಪ ಹೊತ್ತಲ್ಲಿ, “ಇಲ್ಲಿ ಹೋಟೇಲಿನಲ್ಲಿ ನಾಯಿ ಮಾಂಸ ಬೆರಕೆ ಮಾಡಿ ಬಡಿಸಬಹುದು” ಎಂದು ನಮ್ಮೊಂದಿಗಿದ್ದ ಮಂಜೇಗೌಡರು ಗಾಬರಿಯಿಂದಲೇ ಕೇಳಿದರು.
“ಅಷ್ಟು ಅಗ್ಗ ಇಲ್ಲ ಸಾರ್ ನಾಯಿ ಮಾಂಸ. ಹೋಟೇಲಿನಲ್ಲಿ ಮಾರಲು. ನಾಯಿ ಮಾಂಸ ದುಬಾರಿ. ನಾಯಿ ಮಾಂಸಕ್ಕೆ ಕಿಲೋಗೆ 250 ರೂ. (2011ರಲ್ಲಿ) ಇತರ ಎಲ್ಲಾ ಮಾಂಸದ ಬೆಲೆ ಕಿಲೋಗೆ 100-120ರ ಆಸುಪಾಸಿನಲ್ಲಿ”ಎಂದ. ಮುಂದುವರಿಸುತ್ತಾ “ನಾಯಿ ಮಾಂಸ ಮನೆಯವರಿಗೆ ಮಾತ್ರ, ಹಬ್ಬದೂಟಕ್ಕೆ” ಎಂದ. ನಾಯಿಗೂ ಎಂತಹ ಡಿಮ್ಯಾಂಡ್ ಇಲ್ಲಿ. ಕೊಳಿ ಕುರಿ ಹಸು ಮಾಂಸ ನಾಯಿ ಮಾಂಸದ ಮುಂದೆ ಯಕ್ಶ್ಚಿತ್!
 “ ಆದರೂ ನಾಯಿಯನ್ನು ಕಟ್ಟಿ ಹಾಕದೆ ಹಾಗೆಯೇ ಬಿಟ್ಟಿದ್ದಾರೆ ಯಾಕೆ?” ಎಂದು ಕೇಳಿದೆ ನಾನು. ಆತ ಮುಂದುವರಿಸಿದ “ನಾಯಿ ಕದಿಯುವ ಕಳ್ಳರ ಭಯ ಇಲ್ಲಿ ಇಲ್ಲ. ನಾಯಿಯನ್ನು ಕದಿಯುವುದು ಮಿಜೋರಾಂನಲ್ಲಿ ಬಹು ದೊಡ್ಡ ಅಪರಾಧ. ನಾಯಿ ಕದ್ದವರಿಗೆ ಜೈಲು ಶಿಕ್ಷೆಯಾಗುತ್ತದೆ. ಚಿನ್ನ ಕದಿಯುವರು ಇರುತ್ತಾರೆ. ಆದರೆ ನಾಯಿ ಕಳ್ಳರು ಇಲ್ಲ. ಯಾರೂ ನಾಯಿಯ ತಂಟೆಗೆ ಬರುವುದಿಲ. ನಾಯಿ ವಿಷಯದಲ್ಲಿ ಕಾನೂನು ಬಿಗಿಯಾಗಿದೆ.”

ನಮ್ಮ ಡ್ರೈವರ್ ಸೈನ್ಯಕ್ಕೆ ಸೇರಿ 6 ತಿಂಗಳು ಸೈನ್ಯದಲ್ಲಿ ಇದ್ದು ಮರಳಿದವ. ಆತ ಸೈನಿಕ ತರಬೇತಿ ಮುಗಿಸಿ ಕಾಶ್ಮೀರಕ್ಕೆ ಹೋದಾಗ ನಡೆದ ನಾಯಿ ಮಾಂಸದ ಕಥೆಯನ್ನು ವಿವರಿಸಿದ.
 ‘ಮಿಜೋರಾಂ ರೆಜಿಮೆಂಟ್’ ಸೈನಿಕ ತರಬೇತಿ ಮುಗಿಸಿ ಯುವಕರನ್ನು ಕಾಶ್ಮೀರಕ್ಕೆ ಕಳುಹಿಸಿತ್ತು. ಈ ರೆಜಿಮೆಂಟ್‍ನ ಇವರ ತಂಡ ಅಲ್ಲಿಗೆ ಹೋದಾಗ ಕಾಶ್ಮೀರದಲ್ಲಿ ಬೀದಿ ನಾಯಿಯ ಹಾವಳಿ ಇತ್ತು. ಇವರು ಹೋಗಿ ತಿಂಗಳೊಳಗೆ ಬೀದಿನಾಯಿಗಳು ನಿರ್ನಾಮ ಆದುವು. ಆಗ ಸ್ಥಳೀಯರು ತೆಗೆದ ಉದ್ಗಾರ “ನೋಡಲು ಮುಗ್ಧಹುಡುಗರಂತೆ ಕಾಣುವ ಈ ಸುಂದರ ತರುಣರು ಒಂದೂ ನಾಯಿಯನ್ನು ಬಿಟ್ಟಿಲ್ಲವಲ್ಲ?” ಈತ ನಗುತ್ತಾ ವಿವರಿಸಿ. ನಮ್ಮ ಮೊಗದಲ್ಲೂ ನಗು ಲಾಸ್ಯವಾಡಿತು.
‘ನಮಗಂತೂ ಬಹಳ ಮಜಾ ಆಗಿತ್ತು. ದಿನಾ ಹಬ್ಬದೂಟ!’ ಎಂದ ಡ್ರೈವರ್.  ಅವನೂ ಆಡುವಾಗ ಅಂದಿನ ಊಟ ಗಮತ್ತು ನೆನೆದೇ ಆತ ಬಾಯಿ ಚಪ್ಪರಿಸುತ್ತಾನೆ ಎಂದೆನಿಸುತ್ತು.
ಅವರವರು ಬಾಲ್ಯದಿಂದ ಯಾವ ಆಹಾರ ಪದ್ಧತಿಯನ್ನು ರೂಢಿಸುತ್ತಾರೋ ಆ ಆಹಾರವೇ ಅವರವರಿಗೆ ತಿನ್ನಲು ಖಷಿಯಾಗುತ್ತದೆ, ಹಿತವಾಗುತ್ತದೆ.

 ನಮ್ಮ ಡ್ರೈವರ್ ಮುಂದುವರಿಸಿದ. “ಗೋಮಾಂಸ ನಿಷೇಧ ಹೇರಬೇಕೆಂದು ಭಾರತಲ್ಲಿ ಹೇಳಲಾಗುತ್ತಿದೆ. (ಈಶಾನ್ಯ ಭಾರತೀಯರು ಮಾತನಾಡುವಾಗ ಭಾರತವನ್ನು ಬೇರೆ ಎಂಬಂತೆ ಮಾತನಾಡುತ್ತಾರೆ. ಅದಕ್ಕೆ ಹಿಂದೂಗಳು ಕೊಡುವ ಕಾರಣ ಗೋವು ಹಿಂದುಗಳಿಗೆ ಪೂಜನೀಯ ಎಂದು. ಹಿಂದೂಗಳಿಗೆ ನಾಯಿಯೂ ಪೂಜನೀಯ. ಯಾಕೆಂದರೆ ಅದು ಕಾಳಭೈರವನ ವಾಹನ. ಮೀನು ಪೂಜನೀಯ. ವಿಷ್ಣು ಮತ್ಸ್ಯಾವತಾರಿ. ನಾಥ ಪಂಥದ ಆದಿ ಗುರು ಮತ್ಸೇಂದ್ರನಾಥನ, ಮೀನಿನ ರೂಪದಲ್ಲಿ ಬಂದವ. ಇಲಿ ಗಣೇಶನ ವಾಹನ. ಹಂದಿಯ ರೂಪದಲ್ಲಿ ವಿಷ್ಣು ಮೈದೋರಿದ್ದಾನೆ.  ಹುಲಿ, ಚಂಡಿ, ದುರ್ಗೆಯ ವಾಹನ. -ಹೀಗೆ ಹೇಳುತ್ತಾ ಹೋಗಬಹುದು. ಈ ಎಲ್ಲವನ್ನೂ ನಾವು ತಿನ್ನುತ್ತೇವೆ.”
ಅವನ ವಾದ ಸರಿಯಾಗಿತ್ತು.
ಬೆಂಗಳೂರಿಗೆ ಮರಳಿ ಜಾಲತಾಣ ಜಾಲಾಡಿದೆ.
ವಿಶ್ವದಲ್ಲಿ ಒಟ್ಟು ಹನ್ನೊಂದು ದೇಶಗಳಲ್ಲಿ ನಾಯಿ ಮಾಂಸವನ್ನು ಆಹಾರ ರೂಪದಲ್ಲಿ ಸೇವಿಸುತ್ತಾರೆ. ಚೈನಾ, ಇಂಡೋನೇಷಿಯಾ, ಕೊರಿಯಾ, ಮೇಕ್ಸಿಕೋ, ಫಿಲೆಪೈನ್‍ಸ್, ಥೈವಾನ್, ವಿಯೇಟ್ನಾಮ್, ಆರ್ಟಿಕಾ, ಮತ್ತು ಅಂಟಾರ್ಕಟಿಕಾ ಹಾಗೂ ಸ್ವಿಸರ್‍ಲ್ಯಾಂಡ್‍ನ ಎರಡು ಪ್ರದೇಶಗಳಲ್ಲಿ. ಈ ದೇಶಗಳಲ್ಲಿ  ನಾಯಿ ಮಾಂಸ ತಿನ್ನುವುದು ಬಹಳ ಪುರಾತನ ಪರಂಪರೆ. ನಾಯಿ ಮಾಂಸ ತಿನ್ನುವ ರಾಷ್ಟ್ರಗಳು ನಾಯಿಯ ಮಾಂಸದಿಂದ ವಿಶೇಷ ಖಾದ್ಯಗಳನ್ನು ಸಿದ್ಧಪಡಿಸುತ್ತವೆ.

ಡಾ. ಇಂದಿರಾ ಹೆಗ್ಗಡೆ

No comments:

Post a Comment