Saturday, October 17, 2015

ತುಳುನಾಡಿಗರ ಗಂಜಿಯ ಕರಕ್ಕೆ ಕಲ್ಲು ಬೀಳುತ್ತಿದೆ

 ಬಹುಭಾಷಿಕ ಕರ್ನಾಟದ ರಾಜಕೀಯ ಭಾಷೆ, ಸರಕಾರದ ಭಾಷೆ ತುಳು ಬ್ಯಾರಿ, ಕೊಡವ ಮುಂತಾದ ಭಾಷೆಗಳೂ ಕರ್ನಾಟಕದ ಭಾಷೆಗಳು. ಕರ್ನಾಟಕದ ಮಣ್ಣಿನ ಭಾಷೆಗಳು.

ಆದರೆ ವಾಸ್ತವವಾಗಿ ಏನಾಗಿದೆ ? ತುಳು ಕೊಂಕಣಿ,ಕೊಡವ ಭಾಷೆಗಳು ಕನ್ನಡದ ಬೆಳವಣಿಗೆಗೆ ಅಡ್ಡಿಯಾಗುತ್ತಿವೆ ಎಂಬ ಹೇಳಿಕೆಯನ್ನು ನಮ್ಮ ಕೆಲವು ಬುದ್ಧಿಜೀವಿಗಳೇ ಕೊಡುತ್ತಾರೆ. ಅದಕ್ಕೆ ನಾವು ಹೀಗೆ ಉತ್ತರ ಕೊಡಬಹುದು. ಅಂದರೆ ಅವರ ನಿರೀಕ್ಷೆ ಕೊಡಗು ಮತ್ತು  ತುಳುನಾಡು ಕರ್ನಾಟಕದಿಂದ ಬೇರೆ ಯಾಗಿ ಪ್ರತ್ಯೇಕ ರಾಜ್ಯ ಆದರೆ ಕನ್ನಡದ ಬೆಳವಣಿಗೆ ಲಾಭವಾಗುತ್ತದೆ ಎಂದೆ?

ತುಳುಭಾಷೆಯನ್ನು 8ನೇ ಪರಿಚ್ಛೇಧದಲ್ಲಿ ಸೇರಿಸುವಲ್ಲಿ ಕನ್ನಡಿಗರು ಆಸಕ್ತಿ ತಳೆಯುತ್ತಿಲ್ಲ. ಅದಕ್ಕಿಂತ ಹೆಚ್ಚಾಗಿ ತುಳುಭಾಷಾ ಪ್ರದೇಶ ಕಾಸರಗೋಡು ಕರ್ನಾಟಕದ ಕೈ ಬಿಟ್ಟಾಗಲೂ ಕರ್ನಾಟಕದ ಜನತೆ ಅದನ್ನು ಪ್ರತಿಭಟಿಸಿ ಮರಳಿ ಕರ್ನಾಟಕದಲ್ಲಿ ಉಳಿಸುವ ಪ್ರಯತ್ನ ಮಾಡಲಿಲ್ಲ. ಕನ್ನಡಿಗರ ಈ ನಿರಾಸಕ್ತಿಗೆ ಕಾಸರಗೋಡು ತುಳುಭಾಷಾ ಪ್ರದೇಶವಾಗಿದ್ದು ಕಾರಣವಾಗಿದೆ ಎನ್ನುವುದು ಈ ಭಾಗದ ಕನ್ನಡ ಏಕೀಕರಣ ಹೋರಾಟಗಾರರ ನೋವು. ಬೆಳಗಾವಿ,ಸೊಲ್ಲಾಪುರ, ಕೊಲ್ಲಾಪುರ ಬಗ್ಗೆ ಇದ್ದ ಆಸಕ್ತಿ ಕಾಸರಗೋಡಿಗೆ ಇಲ್ಲವಾಗಲು “ಅವರು ತುಳುವರು” ಎನ್ನುವುದು ಕಾರಣ ಇದು ನನ್ನ ಮಾತಲ್ಲ. ಕಯ್ಯಾರ ಕಿಞ್ಞಣ್ಣ ರೈ ಅವರ ನೋವಿನ ನುಡಿ.


ಐತಿಹಾಸಿಕ ಕಾಲದಿಂದಲೂ ರಾಜಾಶ್ರಯ ಇಲ್ಲದೆ ಉಳಿದು ಬಂದ ಭಾಷೆ ಮತ್ತು ಸಂಸ್ಖತಿ ತುಳು. ಚಲಾವಣೆಯಲ್ಲಿ ಇದ್ದ ತುಳು ಲಿಪಿ ಯಾಕೆ ಬಳಕೆ ತಪ್ಪಿತು ಎನ್ನುವುದಕ್ಕೆ ಹಲವು ಕಾರಣಗಳು ಇದ್ದರೂ ಮುಖ್ಯವಾದ ಕಾರಣ ಅದಕ್ಕೆ ರಾಜಾಶ್ರಯ ಇಲ್ಲದೆ ಇರುವುದು. ರಾಜಾಶ್ರಯ ಇಲ್ಲದೆ ತುಳುನಾಡಿನ ಪ್ರಾದೇಶಿಕ ಭಾಷೆ ಜನಸಾಮಾನ್ಯರ ಭಾಷೆಯಾಗಿ ಉಳಿದಿದೆ ಹೆಚ್ಚುಗಾರಿಕೆ. ಇದಕ್ಕೆ ಕಾರಣ ಇಲ್ಲಿನ ಉಪಾಸನಾ ಸಂಸ್ಕøತಿ. ತುಳುನಾಡಿನ ಉಪಾಸನೆಯ ಶ್ರೀಮಂತ ನುಡಿಗಟ್ಟುಗಳು ಪಾಡ್ದನಗಳು ತುಳುಭಾಷೆಯಲ್ಲಿ ಇರುವುದರಿಂದ ತುಳುಭಾಷೆ ಇನ್ನಿತರ ಭಾಷೆಗಳಿಂದ ಶ್ರೀಮಂತಗೊಂಡಿದೆ ಎಂದರೆ ತಪ್ಪಾಗಲಾರದು.

ತುಳುನಾಡಿನ ಎಲ್ಲಾ ಭಾಷಿಕರು ಮಾತ್ರವಲ್ಲ ಮತಧರ್ಮೀಯರೂ  ತುಳುಭಾಷೆಯ ಮೂಲಕ ವ್ಯವಹಾರ ಮತ್ತು ಸಾಹಿತ್ಯ ರಚನೆಯಲ್ಲಿ ತೊಡಗಿದ್ದಾರೆ. ಇದರಿಂದಾಗಿ ತುಳುನಾಡಿನ ತುಳುಭಾಷೆ ಎಲ್ಲಾ ಭಾಷಿಕರ ಸೌರ್ಹಾದೆಯನ್ನು ಕಾಪಾಡಿಕೊಂಡು ಬಂದಿದೆ.

ಶಾಸ್ತೀಯ ಸ್ಥಾನ ಮಾನಕ್ಕೆ ತುಳುಭಾಷೆ ಅರ್ಹತೆಯನ್ನು ಪಡೆದುಕೊಂಡಿದೆ. ಮೌರ್ಯಮತ್ತು ಸಂಘಂ ಸಾಹಿತ್ಯ ತುಳು ಭಾಷೆಯ ಪ್ರಾಚೀನತೆಯ ಸುಳಿವು ಕೊಡುತ್ತದೆ. ಆದರೂ ತುಳು ಭಾಷೆ ಕರ್ನಾಟಕ ಸರಕಾರದ ಅವಗಣನೆಗೆ ಒಳಗಾಗಿದೆ.


"ಅಂಚಿ ತೆಲುಗೆರ್ ಇಂಚಿ ಕನಡೆರ್
ಎಂಚ ತಮಿಳೆರ್ ಮೆರೆಪೆರ್
ಕಣ್ಣೆದುರು ಕೇರಳ ಮೆರೆಪುಂಡು
ಎನ್ನ ತುಳುನಾಡ್ ಬುಲಿಪುಂಡು"

“ಆಚೆ ತೆಲುಗರು, ಈಚೆ ಕನಡರು
 ಹೇಗೆ ತಮಿಳರು ಮೆರೆವರು
ಕಣ್ಣೆದುರು ಕೇರಳ ಕೆನೆಯುತ್ತಿದೆ
ಎನ್ನ ತುಳುನಾಡು ಅಳುತ್ತಿದೆ. “

ಕರ್ನಾಟಕ ಏಕೀಕರಣ ಚಳುವಳಿಯ ಪ್ರಮುಖ ಹೋರಾಟಗಾರ ಕವಿ ಕಯ್ಯಾರ ಕಿಞ್ಞಣ್ಣ ರೈ ಅವರ ಹತಾಶ ನುಡಿಗಳಿವು.
ಈಗ ಅಂತಹ ಹತಾಶೆ ತುಳುನಾಡಿನ ಜನಸಾಮಾನ್ಯರಿಗಾಗಿದೆ. ಎತ್ತಿನ ಹೊಳೆ ಮೂಲಕ ತುಳುನಾಡನ್ನು ಅವಮಾನ ಮಾಡುತ್ತಿದೆ  ಸರಕಾರ. ಫಲವತ್ತಾದ ಮಣ್ಣಿನ ಕೃಷಿ ಭೂಮಿಯಾಗಿದ್ದ ತುಳುನಾಡಿನಲ್ಲಿ ವಿಷವನ್ನು ಫೂತ್ಕರಿಸುವ ಕಾರ್ಖಾನೆಗಳನ್ನು ತಂದು ಹಾಕಿ ತುಳುನಾಡಿನ ಮಣ್ಣಿಗೆ ಮತ್ತು ಮಣ್ಣಿನ ಸಂಸ್ಕøತಿಗೆ ಗದಾ ಪ್ರಹಾರ ಮಾಡಿದೆ.ಮತ್ತೂ ಮಾಡಲು ಹೊರಟಿದೆ. ಬಹುಷ: 1995 ಇರಬೇಕು. ಡಾ. ಶಿವರಾಮ ಕಾರಂತರು ಬೆಂಗಳೂರಿನಿಂದ ಮಂಗಳೂರಿಗೆ ವಿಮಾನ ಮೂಲಕ ಹೋಗುವವರಿದ್ದರು. ಆಗ ಅಲ್ಲಿಂದ ಬಂದ ಸುದ್ದಿ : ‘ಮೀನುಗಾರ ಮಹಿಳೆಯರು ಎಮ್ ಆರ್ .ಪಿ. ಎಲ್ ವಿರುದ್ಧ ಮುಷ್ಕರ ಹೂಡಿದ್ದಾರೆ. ರಸ್ತೆ ತಡೆ ನಡೆಸುತ್ತಿದ್ದಾರೆ. ಬಜಿಪೆಯಿಂದ ಕುಂದಾಪುರ ತಲುಪಲು ಕಷ್ಟವಾಗಬಹುದು’ ಎಂದು. ಶಿವರಾಮ ಕಾರಂತರು ಬಳಿ ಇದ್ದ ನನಗೆ ವಿವರಿಸಿದ್ದು ಹೀಗೆ : ಪಾಪ ಅವರ ಗಂಜಿಯ ಕರಕ್ಕೆ (ಅನ್ನದ ಮಡಕೆ) ಕಲ್ಲು ಹಾಕಿದೆ ಎಮ್ ಆರ್ ಪಿ. ಎಲ್. ಅವರು ಬೀದಿಗಿಳಿದು ಹೋರಾಡುವುದು ಅನಿವಾರ್ಯ.

ಈಗ ಇಡೀ ತುಳುನಾಡು ಬೀದಿಗಿಳಿದು ಹೋರಾಡಬೇಕಾಗಿದೆ. ತುಳುನಾಡಿಗರ ಗಂಜಿಯ ಕರಕ್ಕೆ ಕಲ್ಲು ಬೀಳುತ್ತಿದೆ. ಅನ್ನದ 'ಕರ ಒಟ್ಟೆ' (ತೂತು) ಆಗಿ ನೀರು ಸೋರಿ ಒಲೆ ಆರುತ್ತಿದೆ.....ಎದ್ದೇಳಿ....

ಡಾ. ಇಂದಿರಾ ಹೆಗ್ಗಡೆ


No comments:

Post a Comment