ಹಸು ಸಾಕುವುದು ಹಳ್ಳಿಗಳಲ್ಲಿ ಅಗತ್ಯವಾಗಿತ್ತು. ಹಾಲು ಮತ್ತು ಮೊಸರಿಗಾಗಿ ಹಸು ಮತ್ತು ಎಮ್ಮೆಗಳನ್ನು ಸಾಕುತ್ತಿದ್ದೆವು. ಚಾ, ಕಾಫಿ ಕುಡಿಯುವುದು ಅಭ್ಯಾಸವಾದ ಮೇಲಂತೂ ಚಾ, ಕಾಫಿಗಾಗಿ ಹಾಲಿನ ಅಗತ್ಯ ಇರುತ್ತಿತ್ತು. ಆಗಿನ್ನೂ ಡೈರಿ ಹಾಲು ಇದ್ದಿರಲಿಲ್ಲ. ಈಗಲೂ ನಮ್ಮ ಹಳ್ಳಿಯಿಂದ ಡೇರಿಗೆ ಹಾಲು ಪೂರೈಸುತ್ತಾದರೂ ನಮ್ಮೂರಲ್ಲಿ ಡೇರಿ ಹಾಲು ದೊರಕುವುದಿಲ್ಲ. ಹಾಲು ನೀಡುವ ಹಸುಗಳು ಆಕಸ್ಮಿಕವಾಗಿ ಸಾಯುವುದಿತ್ತು. ಕಾಯಿಲೆಯಿಂದಲೂ ಸಾಯುವುದು ಇತ್ತು. ಅಂತಹ ಸಂದರ್ಭದಲ್ಲಿ ನಾವು ಕೊರಗರಿಗೆ ಸುದ್ದಿ ಮುಟ್ಟಿಸಿತ್ತಿದ್ದೆವು. ಅವರು ನಮ್ಮ ಹಟ್ಟಿಗೆ ಬಂದು ಸತ್ತ ದನವನ್ನು ಹೊರಗೆ ಎಳೆದು ಸ್ವಲ್ಪ ದೂರಕೊಂಡು ಹೋಗಿ ಅಲ್ಲಿಯೇ ಮಾಂಸ ಬಿಡಿಸಿ ಶೇಖರಿಸುತ್ತಿದ್ದರು. ಅವರ ಈ ಕೆಲಸಕ್ಕೆ ಸಹಾಯಕ್ಕಾಗಿ ಮತ್ತು ಹಂಚಿ ತಿನ್ನಲು ನೆರೆಯ ಊರಿನ ಕೊರಗರನ್ನು ಕರೆಯುತ್ತಿದ್ದರು.
ಒಮ್ಮೆ ನನ್ನ ಮನೆಯ ಹಾಲು ಕೊಡುವ ಹಸು ಸತ್ತು ಹೋಯಿತು. ಆಗಿನ್ನೂ ಪ್ರಾರ್ಥಮಿಕ ಶಾಲೆಯಲ್ಲಿ ಓದುತ್ತಿದ್ದ ನನ್ನನ್ನು ಕೊರಗರಿಗೆ ಸುದ್ದಿ ಮುಟ್ಟಿಸಲು ಕಳುಹಿಸಿದರು. ಕೊರಗರು ನಮ್ಮ ಮನೆಗೆ ಬಂದು ಹಸುವನ್ನು ಸ್ವಲ್ಪ ದೂರ, ಮರೆಗೆ ಸಾಗಿಸಿ ತಮ್ಮ ಕೆಲಸವನ್ನು ಮುಂದುವರಿಸಿದರು. ನಮ್ಮ ಮನೆಗೂ ನಮ್ಮೂರ ಮಹಾಲಿಂಗೇಶ್ವರ ದೇವಸ್ಥಾನಕ್ಕೂ ನಡುವೆ ಸುಮಾರು 200 ಮೀಟರ್‍ಗಳ ಅಂತರ ಇದೆ. ದೇವಸ್ಥಾನಕ್ಕೂ ನಮ್ಮ ಗುತ್ತು ಮನೆಗೂ ನಡುವೆ ಮನೆಗೆ ಹತ್ತಿರದಲ್ಲಿ ಹಸುವಿನ ಮಾಂಸವನ್ನು ಬಿಡಿಸುತ್ತಿದ್ದರು. ಆ ದಿನಗಳಲ್ಲಿ ಮಹಾಲಿಂಗೇಶ್ಶವರ ದೇವಸ್ಥಾನದಲ್ಲಿ 'ದಿಡುಂಬೋರಿ' ಸಾಕುತ್ತಿದ್ದರು. ಇದಾದ ಒಂದೆರಡು ದಿನಗಳಲ್ಲಿ ಹಸುವಿನ ಮಾಂಸ ಬಿಡಿಸದ ಸ್ಥಳಕ್ಕೆ ಬಂದ ‘ದಿಡುಂಬೋರಿ’ (ಬಸವ-ತುಳುನಾಡಿನ ದೇವಸ್ಥಾನಗಳಲ್ಲಿ ದೈವಸ್ಥಾನಗಳಲ್ಲಿ ದೈವ ದೇವರ ಹೆಸರಲ್ಲಿ ಸಾಕುವ ಗೂಳಿಗಳನ್ನು ‘ದಿಡಂಬೋರಿ’ ಎಂದು ಕರೆಯುತ್ತಿದ್ದರು.) ನೆಲವನ್ನು ತನ್ನ ಕಾಲುಗಳಿಂದ ಕೆರೆದು ಗುಟುರು ಹಾಕತೊಡಗಿತು. ಮೊದಲೇ ಹಸುವಿನ ಮಾಂಸವನ್ನು ಮನೆಯ ಸಮೀಪವೇ ಬಿಡಿಸಿದರು ಎಂದು ಅಸಮಧಾನಗೊಂಡಿದ್ದ ನಮ್ಮ ಮನೆಯ ಹಿರಿಯರು ದಿಡುಂಬೋರಿಯ ಗುಟುರು ಕೇಳಿ ಕೊರಗರನ್ನು ಗದರಿದರು.
ಹಸು ಸತ್ತಾಗ ಯಾರೂ ತಪ್ಪಿಯೂ ಅದನ್ನು ಹೂಳಬೆಕೆಂದು ಹೇಳಲಿಲ್ಲ ಸತ್ತ ಹಸುವನ್ನು ಕೊಂಡೊಯ್ಯಲು ಕೊರಗರಿಗೆ ಹೇಳುವುದು ಮಾಮೂಲಿಯಾಗಿತ್ತು. ‘ಬಡತನ ಅಲ್ಲವೆ? ಹಸಿವು ಮರೆಯಲು ತಿನ್ನಲಿ’ ಎಂಬ ಭಾವನೆಯನ್ನು ನಮ್ಮೂರ ಜನರು ವ್ಯಕ್ತ ಪಡಿಸಿದ್ದನ್ನು ನಾನು ಗಮನಿಸಿದ್ದೆ. ಅಷ್ಟೊಂದು ಮಾಂಸವನ್ನು ಏನುಮಾಡುತ್ತಾರೆಂದು ನಾನೇ ಕೇಳಿದ್ದ ಪ್ರಶ್ನೆಗೆ ಸ್ವಲ್ಪ ಭಾಗ ಉಪ್ಪು ಹಾಕಿ ಒಣಗಿಸುತ್ತಾರೆ ಸ್ವಲ್ಪ ಭಾಗ ತಮ್ಮ ನೆರೆ ಊರವರಿಗೆ, ಬಂಧುಗಳಿಗೆ ಹಂಚಿ ತಿನ್ನುತ್ತಾರೆ ಎಂಬ ಉತ್ತರ ಬಂದಿತ್ತು. ಆದರೆ ಕಾಯಿಲೆಯಿಂದ ಸತ್ತ ದನವನ್ನು ಕೊರಗರು ತಿನ್ನುವುದು ನಮ್ಮ ಮನೆಯವರಿಗೆ ಸಮಾಧಾನ ಇರಲಿಲ್ಲ.
ಸತ್ತ ಹಸುವನ್ನು ಬ್ರಾಹ್ಮಣರಿಂದ ತೊಡಗಿ ಎಲ್ಲಾ ಜಾತಿಯವರು ಕೊರಗರಿಗೆ ಮಾಂಸಕ್ಕಾಗಿಯೇ ನೀಡುತ್ತಿದ್ದರು. ಈಗಲೂ ಇದೇ ಪದ್ಧತಿ ರೂಢಿಯಲ್ಲಿದೆ. ಮಾತ್ರವಲ್ಲ ಕರುಹಾಕುವ ವಯಸ್ಸು ದಾಟಿದ ಹಸುಗಳನ್ನು ಬ್ಯಾರಿಗಳಿಗೆ ಮಾರಿ ಹಣಗಳಿಸುತ್ತಾರೆ.
ಹಸುಗಳು ಗಂಡು ಕರು ಹಾಕಿದರೆ ಉಪಯೋಗ ಇಲ್ಲ. ನಮ್ಮೂರಲ್ಲಿ ಎತ್ತುಗಳನ್ನು ಹೊಲ ಉಳಲೂ ಉಪಯೋಗಿಸುತ್ತಿರಲಿಲ್ಲ. ಹೀಗಾಗಿ ಗಂಡುಕರುಗಳನ್ನು ವ್ಯಾಪಾರಿ ಬ್ಯಾರಿಗಳಿಗೆ ಮಾರುತ್ತಿದ್ದರು.
ದೇವಸ್ಥಾನಗಳಿಗೆ, ದೈವಸ್ಥಾನಗಳಿಗೆ ಹರಕೆಯ ಕರುಗಳು ಬರುತ್ತಿದ್ದುವು. ಇವುಗಳಲ್ಲಿ ಹೆಚ್ಚಾಗಿ ಗಂಡು ಕರುಗಳು ಇರುತ್ತಿದ್ದವು. ಗಂಡುಕರುಗಳನ್ನು ಖರೀದಿಸಲು ಯಾರೂ ಮುಂದೆ ಬರುತ್ತಿರಲಿಲ್ಲ. ಇವುಗಳನ್ನೂ ಬ್ಯಾರಿಗೆ ಮಾರುತ್ತಿದ್ದರು. ಬ್ಯಾರಿಗಳು ಮಾಂಸಕ್ಕಾಗಿ ಖರೀದಿಸುತ್ತಾರೆ ಎಂಬ ವಿಷಯ ಮಾರುವ ಹಿಂದೂಗಳಿಗೆ ತಿಳಿದಿತ್ತು.
ಗೋವು ಪೂಜೆ/ ಪ್ರಾಣಿ ಪೂಜೆ: ದೀಪಾವಳಿಯ ಹಬ್ಬದ ಸಂದರ್ಭದಲ್ಲಿ ಮನೆಯಲ್ಲಿ ಎಲ್ಲಾ ಪ್ರಾಣಿಗಳನ್ನು ಮೀಯಿಸಿ ಅವುಗಳಿಗೂ ಹಬ್ಬದೂಟ ನೀಡುವುದು ಪದ್ಧತಿಯಾಗಿತ್ತು. ಗದ್ದೆಗಳಲ್ಲಿ ಹಾಗೂ ತುಳಸಿ ಕಟ್ಟೆಯಲ್ಲಿ ಹಚ್ಚುವಂತೆ ಹಸು, ಎಮ್ಮೆ ಕೋಣಗಳ ಹಟ್ಟಿಗಳಲ್ಲಿ ಕೂಡಾ ಸೊಡರ್ ಬೆಳಕು ಹಚ್ಚುತ್ತಿದ್ದರು. ಗೋವುಗಳಿಗೆ ಹೂವಿನ ಹಾರಹಾಕಿ ಗೆರದಲ್ಲಿ ಭತ್ತವನ್ನು ಹೆಚ್ಚಿಗೆ ನೀಡುತ್ತಿದ್ದರು. ಗೋಪೂಜೆ ಅಂದರೆ ಇಷ್ಟೇ. ಈಗಲೂ ಇಷ್ಟೇ. ಕ್ಯಾಲೆಂಡರ್‍ನಲ್ಲಿ ದೀಪಾವಳಿಯ ಗೋಪೂಜೆಗೆ ದಿನಾಂಕ ಇದೆ. ಕ್ಯಾಲಂಡರ್ ಪ್ರಭಾವದಿಂದ ಗೋವಿಗೆ ವಿಶೇಷ ಆತಿಥ್ಯವೋ -ಈ ಬಗ್ಗೆ ನನಗೆ ಸ್ಪಷ್ಟತೆ ಇಲ್ಲ.
ಹೊಸ ಮನೆ ಗೃಹಪ್ರವೇಶ ಆಗುವ ಸಂದರ್ಭದಲ್ಲಿ ಹಾಲು ಕುಡಿಯುವ ಕರುವಿನೊಂದಿಗೆ ಹಸುವನ್ನು ಮನೆಯೊಳಗೆ ಕರೆದೊಯ್ಯುತ್ತಿದ್ದರು. ಆ ಹಸು ಮನೆಯೊಳಗೆ ಗಂಜಲ ಹಾಕಬೇಂಬ ನಂಬಿಕೆ. ಮನೆಯ ಗೃಹಪ್ರವೆಶದಲ್ಲಿ ಬ್ರಾಹ್ಮಣ ಪುರೋಹಿತರಿರುವುದರಿಂದ ಅವರ ಸಲಹೆಯಂತೆ ನಡೆಯುತ್ತಿದ್ದರು.
ಆಧುನಿಕ ದಿನಗಳಲ್ಲಿ ತುಳುನಾಡಿನಲ್ಲಿ ಗೋವಿನ ವಿಷಯದಲ್ಲಿ “ಗೋಮಾತೆ” ಎಂಬ ಬಾವನೆ ಬಲವಾಗಿದೆ. ಆದರೂ ಹಳ್ಳಿಗಳಲ್ಲಿ ಅನುಪಯುಕ್ತ ಹಸುಗಳನ್ನು, ಗಂಡು ಕರುಗಳನ್ನು ಬ್ಯಾರಿಗೆ ಮಾರುವುದು ನಿಂತಿಲ್ಲ. ಇದನ್ನು ಹಳ್ಳಿಯ ಮೂಲದ ಗೋರಕ್ಷಣಾ ದಳದ ಯುವಕರೂ ಬಲ್ಲರು. ನಮ್ಮ ಹಳ್ಳಿಯಲ್ಲಿ ಒಂದೆರಡು ವರ್ಷದ ಹಿಂದೆ ಒಬ್ಬ ರೈತಾಪಿ ಮಹಿಳೆ ಗಂಡು ಕರುವನ್ನು ಬ್ಯಾರಿಗೆ ಮಾರಿ ಹಣ ಎಣಿಸಿದಾಗ ನಾನು ಗಮನಿಸಿದೆ. ಆಗ ನಾನು ಕೇಳಿದ ಪ್ರಶ್ನೆ, “ ಬ್ಯಾರಿ ಖರೀದಿಸುವುದು ಮಾಂಸಕ್ಕಾಗಿ ಅಲ್ಲವೆ? ನೀವೇ ಸಾಕಿದ ಕರು”
ರೈತ ಮಹಿಳೆ ನೀಡಿದ ಉತ್ತರ, “ ಹೌದು ಬ್ಯಾರಿ ಖರೀದಿಸುವುದು ಮಾಂಸಕ್ಕಾಗಿ. ಉಪಯೋಗ ಇಲ್ಲದ ಕರುವನ್ನು ನಾನು ಮನೆಯಲ್ಲಿಟ್ಟು ಏನು ಮಾಡಲಿ? ನಾನು ಕೋಳಿಯನ್ನೂ ಸಾಕುತ್ತೇನೆ. ಕೋಳಿಯನ್ನು ನಾನು ತಿನ್ನುತ್ತೇನೆ. ಇತರೆ ಮಾಂಸ ನಾನು ತಿನ್ನುವುದಿಲ್ಲ. ತಿನ್ನುವವರಿಗೆ ಮಾರುತ್ತೇನೆ. ಯಾರೂ ಬ್ಯಾರಿಗಳಿಗೆ ಹಸುಗಳನ್ನು ಮಾರುವುದು ಬೇಡ ಎನ್ನುತ್ತಾರೋ ಅವರು ಬಂದು ನಮ್ಮಿಂದ ಖರೀದಿಸಲಿ. ಹಣ ಕೊಡುವವರು ಯಾರಾದರೇನು?”
ಈಗ ನನ್ನನ್ನು ಕಾಡುವ ಪ್ರಶ್ನೆ: ಈ ರೀತಿ ಖರೀದಿಸಿದ ಹಸುಗಳನ್ನು ಬ್ಯಾರಿಗಳು ಹೇಗೆ ಸಾಗಾಟ ಮಾಡುತ್ತಾರೆ? ಹಸು ಸಾಗಾಟಕ್ಕೆ ಲೈಸನ್ಸ್ ನೀಡುವ ವ್ಯವಸ್ಥೆ ಏನಾದರೂ ಇದೆಯೆ?
ಡಾ. ಇಂದಿರಾ ಹೆಗ್ಗಡೆ
ಬೆಂಗಳೂರು 40
No comments:
Post a Comment