Sunday, July 19, 2015

ಕಾಶ್ಮೀರ , ಸಿಮ್ಲಾ, ಕುಲುವಿನಿಂದ ಮನಾಲಿಯತ್ತ ....



ಮನುವಿನಿಂದಾಗಿ ಊರಿಗೆ ಮನಾಲಿ ಎಂಬ ಹೆಸರು ಬಂತು ಎನ್ನುತ್ತಾರೆ. ಸಮುದ್ರ ಉಕ್ಕಿ ಪ್ರಳಯವಾದಾಗ ಒಂದು ಕಾಲದಲ್ಲಿ ಏಳನೆಯ ಮನುವಿನಿಂದ ಉಪಕೃತವಾದ ಮೀನು (ವಿಷ್ಣುವಿನ ಮತ್ಸ್ಯಾವತಾರ), ಸಪ್ತರ್ಷಿಗಳನ್ನು ಮತ್ತು ಏಳನೆಯ ಮನುವನ್ನು ತನ್ನ ಬೆನ್ನ ಮೇಲೆ ಕುಳ್ಳಿರಿಸಿ, ಪರ್ವತ ತಪ್ಪಲ್ಲಲಿ ತಂದು ಇಳಿಸಿತಂತೆ. ಆದ್ದರಿಂದ ಪರ್ವತ ತಪ್ಪಲು ಪ್ರದೇಶಕ್ಕೆ ಮನುವಿನ ನಾಮಕರಣವಾಯಿತು ಎನ್ನುವುದು ಪೌರಾಣಿಕ ನಂಬಿಕೆ. ಮನುವಿನ ದೇವಸ್ಥಾನವು ಇಲ್ಲಿ ಇದೆ. ಆತ ಇಲ್ಲಿ ಕುಳಿತು ಮನುಸ್ಮತಿ ಬರೆದನಂತೆ.
ಪ್ರಳಯ ಇಳಿದು ಮನಾಲಿ ಪ್ರಾಕೃತಿಕ ಸಂಪತ್ತನ್ನು ಮರಳಿ ಪಡೆಯುತ್ತದೆ. ಇಂತಹ ದಂತ ಕಥೆಯ ಮನಾಲಿಯು ಮೈ ತುಂಬಾ ಸೃಷ್ಟಿ ಸೌಂದರ್ಯವನ್ನು ಹೊದ್ದು ಪ್ರಶಾಂತವಾಗಿ ಮಲಗಿದೆ. ಶಿಲಾ ಬಂಡೆಗಳಿಂದ ಕೂಡಿ ಗಟ್ಟಿಗೊಂಡ ಮುಗಿಲು ಮುಟ್ಟುವ ಶಿಲಾಪರ್ವತ ಶಿಖರಗಳು, ಅದರ ಮೇಲೆ ವರ್ಷವಿಡೀ ಹಾಸಿರುವ ಹಿಮ ಪದರ, ಶಿಖರಗಳ ಕೆಳಭಾಗದಲ್ಲಿ ಬೇಸಗೆಯ ದಿನಗಳಲ್ಲಿ ಹಿಮದುಡುಗೆ ಕಳಚಿ ಸಹಜ ಸೌಂದರ್ಯ ತೋರುವ ಪರ್ವತಗಳು! “ ಹಿಮ ಪರ್ವತದ ಶಿಲೆಗಳೆಲ್ಲವೂ ಕಸ್ತೂರಿ ಮೃಗಗಳ ಸಂಪರ್ಕದಿಂದ ಘಮ ಘಮಿಸುತ್ತವೆ.” ಎನ್ನುತ್ತಾನೆ ಕಾಳಿದಾಸ ಮೇಘದೂತನಿಗೆ.  (ಕತ್ತರಿಯ ಮಿಗ ಮದದ ಗಂಧದಿಂ ಮಘಮಘಿಪ ಶಿಲೆಗಳಿಹ ಕಂಪಿನೆಡೆಯು) ನಮ್ಮನ್ನು ಆಟವಾಡಿಸುವಂತೆ ಪರ್ವತ ಕಂದರಗಳನ್ನು ಸುತ್ತು ಬಳಸಿ ಹರಿಯುವ ಸ್ಪಟಿಕ ಸಲಿಲದ ಬಿಯಾಸ್ ನದಿ! ಆಹಾ  ಪ್ರಕೃತಿಯ ಲೀಲೆಯೇ! ನಿನಗಾರು  ಸಾಟಿ ಸೃಷ್ಟಿ!


ರೋತಾಂಗ್ ಪಾಸ್:
 ಮನಾಲಿಯ ಹೊಟೇಲೊಂದರಲ್ಲಿ ತಂಗಿದ್ದ ನಾವು ಬೆಳಗೆದ್ದು ಹೊರಟಿದ್ದು ರೋತಾಂಗ್ ಪಾಸ್ಗೆ. ಮಾರ್ಗದಲ್ಲಿ ಹಿಮ ಉಡುಗೆಯನ್ನು ಬಾಡಿಗೆಗೆ ಇಟ್ಟ ಅನೇಕ ಅಂಗಡಿಗಳು ಇವೆ. ಅಂಗಡಿ ಸಂಖ್ಯೆಗಳು ಅವುಗಳಿಗೆ ನೀಡಿದ ಲೈಸನ್ಸ್ ಸಂಖ್ಯೆಗಳು ಒಂದೇ. ನಮ್ಮ ಟ್ಯಾಕ್ಸಿಯವರು ತಮ್ಮ್ಮೊಂದಿಗೆ ಗುರುತಿಸಿಕೊಂಡ ಅಂಗಡಿಗಳ ಮುಂದೆ ನಮ್ಮನ್ನು ಕರೆದುಕೊಂಡು ಹೋಗುತ್ತಾರೆ. “ಬೆಲೆಯ ಬಗ್ಗೆ ನಮಗೆ ಗೊತ್ತಿಲ್ಲ. ನೀವೇ ಮಾತನಾಡಿಎನ್ನುತ್ತಾರೆ. ನಿತ್ಯ ಪ್ರಯಾಣಿಕರನ್ನು ಕರೆದು ಕೊಂಡು ಹೋಗುವ ಇವರಿಗೆ ಯಾವ ಅಂಗಡಿಯ ಬೆಲೆ ಎಷ್ಟು ಎಂದು ಮೊದಲೆ ತಿಳಿದಿರುತ್ತದೆ ಎಂಬುದು ಸಾಮಾನ್ಯ ಜ್ಷಾನ. ಅವರು ನೀಡುವ ಉಡುಗೆ ಬೇಡವೆಂದರೆ ಉಡುಗೆ ತೊಡುವುದು ಅನಿವಾರ್ಯ. ಇಲ್ಲವಾದಲ್ಲಿ ಅಲ್ಲಿ ಹಿಮದಿಂದ ಹೆಪ್ಪುಗಟ್ಟುವಿರಿಎನ್ನುತ್ತಾರೆ. “ಮೇಲೆ ಚಳಿಯಿಂದ ಸತ್ತೇ ಹೋಗುತ್ತೀರಿ. ಮತ್ತೆ ಕೆಳಗೆ ಬರಲೂ ಆಗದುಎಂದರು ನಮಗೆ. ಮೇಲೆ ಹೋದಮೇಲೆ ಅಲ್ಲಿ ಚಳಿ ಇದ್ದರೆ ಧರಿಸ್ತೀವಿ, ಎಂದರೆ ಟ್ಯಾಕ್ಸಿಯವ ಕೂಡಾ ನಮ್ಮನ್ನು ಹೆದರಿಸುತ್ತಾನೆ. ನಮಗೆ ಕಾಶ್ಮೀರದಲ್ಲಿ ಅನುಭವ ಆಗಿದೆ. ಅಲ್ಲಿ ಎನೂ ಧರಿಸದೆ ಬಂದಿದ್ದೆವು. ಆದರೆ ಇಲ್ಲಿ ನಮ್ಮ ಹೆಗ್ಗಡೆಯವರು ಸರದಾರ್ಜಿಯ ಮಾತಿಗೆ ಸಮ್ಮೋಹನಗೊಂಡಿದ್ದರು. ಗಮ್ ಬೂಟು, ತಲೆಯ ಮುಸುಕು, ಕೈಯ ಗ್ಲೌಸು ಹಾಗೂ ಇಜಾರ ಜೊತೆಗಿನ ಉದ್ದ ಅಂಗಿಯನ್ನು ಧರಿಸಿ ನಾವೆಲ್ಲ ಡ್ರಮ್ಗಳಂತೆ ಕಂಡೆವು. “ಯಾರ್ಯಾರೋ ಧರಿಸಿರುವ ಏನೆಲ್ಲ ಗಲೀಜ್ ಮಾಡಿದ ಉಡುಗೆಗಳನ್ನು ಮುಟ್ಟಿದರೆ ಕೈತೊಳೆಯಬೇಕುಎಂದು ನಾವು ಮಾತನಾಡಿಕೊಂಡೆವು.
ಮನಾಲಿಯಿಂದ 51 ಕಿಲೋಮೀಟರ್ ಉತ್ತರಕ್ಕೆ ಮನಾಲಿ-ಕಿಲ್ಲಬೋಂಗ್ -ಲೇ ಹೆದ್ದಾರಿಯಲ್ಲಿ ರೋತಾಂಗ್ ಪಾಸ್ ಇದೆ. ಹಾವಿನಂತೆ ತಿರುವು ಮುರುವು ಆಗಿ ಸರಿಯುತ್ತಾ, ಪರ್ವತ ಶಿಖರಗಳನ್ನು ಏರಿ ಏರಿ, ಶಿಖgದಿಂದ ಅದೇ ರೀತಿ ಇಳಿದು ಬಿಯಾಸ್ ನದಿದಾಟಿ ಮತ್ತೆ ಹಾವಿನಂತೆ ತಿರುವು ಮುರುವು ಸರಿಯುತ್ತಾ ಪರ್ವತಶಿಖರ ಏರುತ್ತಾ ಹೋದರೆ ಸಮುದ್ರ ಮಟ್ಟದಿಂದ ಸುಮಾರು 13,500 ಅಡಿ ಎತ್ತರದರೋತಾಂಗ್ ಪಾಸ್ತಲುಪುತ್ತೇವೆ.

 ರೋತಾಂಗ್ ಹತ್ತುವ ದಾರಿಯಲ್ಲಿ ಬ್ರೇಕ್ ಫಾಸ್ಟ್ ತಿನ್ನಲು ಎಲ್ಲರೂ ಗಾಡಿ ನಿಲ್ಲಿಸುತ್ತಾರೆ. ಇಲ್ಲಿ ವಿಪರೀತ ಗಾಳಿ. ಇಲ್ಲಿಂದಲೇ ನಮ್ಮನ್ನು ಕೆಳಗೆ ಎತ್ತಿ ಒಗೆಯಲು ಕಾತರಿಸುತ್ತಿದೆ ಗಾಳಿ! ಇನ್ನು 13,500 ಅಡಿ ಎತ್ತರದಲ್ಲಿ ಈ ಗಾಳಿಯ ಶಕ್ತಿ ಎಷ್ಟಿರಬಹುದು?  ಎಂದು ಪ್ರತಿಕೂಲ ಹವಾಮಾನ ಎದುರಿಸಲು  ಮಾನಸಿಕವಾಗಿ ಸನ್ನದ್ಧರಾದೆವು. ಹಿಮಾಚಲ ಪ್ರದೇಶದ ಎಲ್ಲಾ ಭಾಗದ ರಸ್ತೆಗಳು ಚೆನ್ನಾಗಿ ಇವೆ. ಸವಾರರೂ ಒಬ್ಬರಿಗೊಬ್ಬರು ಸಹಕರಿಸಿ ಗಾಡಿಗಳನ್ನು ಚಲಾಯಿಸುತ್ತ್ತಾರೆ. ಹಾಗೆ ಮಾಡದೆ ನಿರ್ವಾಹ ಇಲ್ಲ. ಗಿರಿಕಂದರಗಳ ಕೊರಕಲಿನಲ್ಲಿ ಹರಿಯುವ ರಸ್ತೆಯನ್ನು ಅಗಲ ಮಾಡಲು ಸಾಧ್ಯವೂ ಇಲ್ಲ. ರೋತಾಂಗ್ ಪಾಸ್ ತಲುಪುವ ಪ್ರಯಾಣ ಆತಂಕ ತರುತ್ತದೆ. ಅದರಲ್ಲೂ ಮುಂದುಗಡೆಯಿಂದ ಬರುವ ಬಸ್ಸಿಗೆ ದಾರಿ ಬಿಟ್ಟು ಸರಿಯುವಾಗ ಇನ್ನೂ ಆತಂಕ.  ಕೆಳಗೆ ನೋಡಲೂ ಭಯ, ಬಸ್ಸು ಸರಿದುಹೋಗುವ ವರೆಗೆ ಬಸ್ಸಿನ ಚಕ್ರಗಳನ್ನು ನೋಡುತ್ತಾ ಇದ್ದರೂ ಎದೆ ಡವ, ಡವ ಎಂದು ಹೊಡೆದುಕೊಳ್ಳುತ್ತದೆ. ನಾವು ಮೇಲೆ ಹತ್ತುವಾಗ ಎಡಕ್ಕೆ ಪರ್ವತಭಾಗದಲ್ಲಿ ಇರುತ್ತೇವೆ. ಆದರೆ ಇಳಿಯುವಾಗ ಬಲಕ್ಕೆ ಇರುತ್ತೇವೆ. ನಮ್ಮ ಆತಂಕ ಕಂಡು ಡ್ರೈವರ್ ಪಪ್ಪುಕೋಯೀ ಚಿಂತಾ ನಹೀ. ಏನೂ ಆಗುವುದಿಲ್ಲ ನಮಗೆ ಇದೆಲ್ಲ ಮಾಮೂಲಿಎಂದ. (ಆದರೆ ನಾವು ಅಲ್ಲಿಂದ ಮರಳಿ ಬೆಂಗಳೂರಿಗೆ ಬಂದ ಒಂದೆರಡು ದಿನದೊಳಗೆ ಬಂದ ಪತ್ರಿಕೆಯಲ್ಲಿ ಅದೇ ಪರ್ವತ ರಸ್ತೆಯಲ್ಲಿ ಬಸ್ಸೊಂದು ಕಂದಕಕ್ಕೆ ಉರುಳಿದ ಸುದ್ದಿ ಇತ್ತು.) ದಾರಿಯಲ್ಲಿ ಅಲ್ಲಲ್ಲಿ BRO official ರಸ್ತೆ ರಿಪೇರಿಯಲ್ಲಿ ನಿರತರಾಗಿದ್ದರು. ಅವರ ಆದೇಶವನ್ನು ಮೀರಿ ಯಾರೂ ರಸ್ತೆಯಲ್ಲಿ ಸಂಚರಿಸುವಂತಿಲ್ಲ.

ನಮ್ಮ ಡ್ರೈವರ್ ನಮ್ಮನ್ನು ಒಂದೆಡೆ ಗಾಡಿ ನಿಲ್ಲಿಸಿ ಇಳಿಯಿರಿ. ಇದೇ ಸಮುದ್ರ ಮಟ್ಟಕ್ಕಿಂತ 13980 ಅಡಿ ( ಎತ್ತರ ನಿಖರವಾಗಿಲ್ಲ) ಎತ್ತರ ಇರುವ ರೋತಾಂಗ್ ಪಾಸ್ಎಂದ. ಇಳಿದು ನೋಡುತ್ತೇವೆ, ಬಯಲು ಜಾಗದಲ್ಲಿ ನಾವೆಲ್ಲ ಸೇರಿದ್ದೇವೆ. ನೆಲ ಹಿಮದ ಹಾಸಿಗೆಯಲ್ಲ. ಕಲ್ಲು ಗುಂಡುಗಳು ಹರಡಿದ ನೆಲ. ಏರು ತಗ್ಗುಗಳಿಂದ ಇದ್ದರೂ ಗಾಡಿಗಳು ಓಡಾಡುವಷ್ಟು ಕೆಲವು ಭಾಗದಲ್ಲಾದರೂ ಸಮತಟ್ಟು ಭೂಮಿ ಇತ್ತು. ಪ್ರವಾಸಿಗರ ನಿಲುಗಡೆ ಸ್ಥಳ ಪರ್ವತ ಶಿಖರದ ಮೇಲೆ ಇರುವ ವಿಶಾಲ ಸಮತಟ್ಟು ಭೂಮಿ. ನಮ್ಮ ಒಂದು ಭಾಗದಲ್ಲಿ ಆಳ ಪಾತಾಳ ಇದ್ದರೆ ಮತ್ತೊಂದು ಭಾಗದಲ್ಲಿ ಪರ್ವತಗಳು ಇನ್ನೂ ಮೇಲೇರಿ ನಿಂತಿದ್ದುವು. ಪರ್ವತ ಶಿಖರಗಳ ಅಧ್ಬುತ ಪ್ರಕೃತಿ! ಗೆಪಾನ್ ಗೋಹ್ ಮತ್ತು ಸೋನಾ ಪಾನೀ ಎನ್ನುವ ಎರಡು ಶಿಖರಗಳಾಚೆ ಗ್ಲೇಶಿಯರ್ (ನಿಧಾನವಾಗಿ ಚಲಿಸುವ ಹಿಮರಾಶಿ)ಇದೆಯೆನ್ನುತ್ತಾರೆ. ಚಂದ್ರಾ ನದಿ ಇಲ್ಲಿಂದ ಕಾಣಬಹುದು ಎನ್ನುತ್ತಾರೆ. ಆದರೆ ನಾನು ಕಂಡಂತೆ ಬಿಯಾಸ್ ನದಿ ಇಲ್ಲಿ ಹುಟ್ಟುತ್ತದೆ.  ರೋತಾಂಗ್ಪಾಸ್ ಮೂಲಕ ಲಾಹುಲ್ಲ, ಸ್ಪಿಟಿ, ಪಂಗಿ, ಮತ್ತು  ಝನ್ಸ್ಕಾರ್ ಹೋಗಬಹುದು. ಲೇ ಲಡಾಕ್ಗೂ ಇಲ್ಲಿಂದ ಜನ ಬಸ್ಸು ಮೂಲಕ ಪ್ರಯಾಣಿಸುತ್ತಾರೆ. ಸೈನಿಕರ ನಿಯಂತ್ರಣದಲ್ಲಿ ಮಾರ್ಗ ಜೂನ್ನಿಂದ ಅಕ್ಟೋಬರ್ವರೆಗೆ ಮಾತ್ರ ತೆರೆಯುತ್ತದೆ. ಅಕ್ಟೋಬರ್ ತಿಂಗಳಿಂದ ಜೂನ್ ತಿಂಗಳವರೆಗೆ ಊರುಗಳಿಗೆ ರಸ್ತೆ ಸಂಪರ್ಕ ಇರುವುದಿಲ್ಲ. ಹಿಮಪಾತವಾಗಿ ದಾರಿ ಮುಚ್ಚುತ್ತದೆ. ಯುದ್ಧ ಸನ್ನಿವೇಶಗಳಲ್ಲಿ ರಸ್ತೆಗಳನ್ನು ಮುಚ್ಚಲಾಗುತ್ತದೆ. ರಸ್ತೆ ನಿರ್ಮಾಣ ಮಾತ್ರವಲ್ಲ ರಸ್ತೆಯ ಎಲ್ಲ ಉಸ್ತುವಾರಿ ಕೂಡಾ ಮಿಲಿಟರಿಯವರಲ್ಲಿ ಇದೆ. (BRO official) ಮಾರ್ಚಿ ಎಪ್ರಿಲ್ ತಿಂಗಳಲ್ಲಿ Beas Nallah  ಸ್ಕಿ ಸ್ಲೋಪ್ ನಡೆಯುತ್ತದೆ.
ಇಲ್ಲಿಂದ ಒಂದು ಪರ್ವತಕ್ಕೆ ಹತ್ತಲು ಕುದುರೆ ಬಳಸಿ ಹೋಗಬಹುದು ಎಂದ ಡ್ರೈವರ್. ಕುದುರೆ ಸವಾರರು ನಮ್ಮ ಹಿಂದೆ ಬಿದ್ದರು. ಹೆಗ್ಗಡೆಯವರುನಾನು ಲಡಕ್ ನಲ್ಲಿ 2 ವರ್ಷ ಹಿಮ ನೆಲದಲ್ಲಿ ವಾಸಿಸಿ ಬಂದವ. ನನಗೆ ಕುದುರೆ ಮೇಲೆ ಹೋಗಿ ಹಿಮ ಪರ್ವತ ನೋಡುವ ಆಶೆ, ಕುತೂಹಲ ಇಲ್ಲಎಂದರು. ಸುಯೋಜನನ್ನ ಕಾಲು ನೋವು. ನಾನು ಕುದುರೆ ಹತ್ತಿ ಬರಲಾರೆಎಂದರು. ಕೊನೆಗೆ ನಾನು ಮತ್ತು ಜೀವನ್ ಶೆಟ್ಟಿಯವರು ಎರಡು ಕುದುರೆಗಳಲ್ಲಿ ಹೊರಟೆವು. ಕುದುರೆ ನಡೆಯುವ ನೆಲ ಗುಂಡುಕಲ್ಲುಗಳಿಂದ ಕೂಡಿತ್ತು. ಸ್ವಲ್ಪ ದೂರ ಹೋದೆವು. ದೂರದ ಪರ್ವತ ಶಿಖರದಲ್ಲಿ ನಮ್ಮತ್ತ ಕೈಬೀಸುತ್ತಿರುವ ವ್ಯಕ್ತಿಯನ್ನು ಕಂಡು ಜೀವನ್ ಶೆಟ್ಟಿಯವರು ಅದ್ಯಾರು ಹೆಗ್ಗಡೆಯವರಲ್ಲವಾ? ಎಂದರು. ಅವರನ್ನು ಮುಚ್ಚಿರುವ ಉಡುಗೆಯಿಂದಾಗಿ ನನಗೆ ಬೇಗನೇ ಗುರುತು ಹತ್ತಲಿಲ್ಲ. “ಹೆಗ್ಗಡೆಯವರು ಇರಲಾರರು. ಅವರು ಬರುವುದಿಲ್ಲ ಎಂದಿದ್ದರಲ್ಲವಾ? ಅಷ್ಟು ಬೇಗ  ಹೇಗೆ ಬರಲಾಗುತ್ತದೆಎಂದೆ. “ಇಲ್ಲ ಅವರೇ. ಅಸಾಮಿ ನಾವು ಬನ್ನಿ ಎಂದರೆ ಬಾರದೆ ಈಗ ಬೆಟ್ಟ ಹತ್ತಿ ಕೈಬೀಸುತ್ತಿದ್ದಾರೆಎಂದರು ಕೋಪದಿಂದ.
 ನಾವು ನೋಡಲೆಂದು ಹೊರಟ ಹಿಮ ಶಿಖರವನ್ನು ಹೆಗ್ಗಡೆಯವರು ತಾವು ನಿಂತ ಶಿಖರದಿಂದಲೇ ನೋಡಿ ಮರಳಿದರು. ಜೀವನ್ ಶೆಟ್ಟಿಯವರಿಗೆ ಆತಂಕಮಡದಿಯನ್ನು’’ ಕಾಣದ ಊರಲ್ಲಿ ಒಂಟಿಯಾಗಿ ಹೆಗ್ಡೆಯವರನ್ನು ನಂಬಿ ಬಿಟ್ಟು ಬಂದರೆ, ಪುಣ್ಯಾತ್ಮ ಎಲ್ಲೆಲ್ಲೋ ಬೆಟ್ಟ ಸುತ್ತುತ್ತಾ ಇದ್ದಾನಲ್ಲಎಂದು. ನಮ್ಮ ಕುದುರೆ, ತನ್ನ ಸವಾರನ ಹಿಂದೆ ಹೋಗಿ ಒಂದು ಸಣ್ಣ ಬೆಟ್ಟದ ಬಳಿ ನಿಂತಿತು. ಹಿಮಬೆಟ್ಟಕ್ಕೆ ಕೆಲವರು ನಡೆದೂ ಹೋಗುತ್ತಿದ್ದರು. ಕುದುರೆಯ ಅಗತ್ಯ ಇಲ್ಲ. ಆದರೆ ನಮ್ಮ ಟ್ಯಾಕ್ಸಿ ನಿಲುಗಡೆ ಮಾಡಿದ ಜಾಗಕ್ಕೆ ಬೆಟ್ಟ ಕಾಣಿಸದು. ಇಲ್ಲಿ ಕಾಣುವ ಹಿಮ ಬೆಟ್ಟವನ್ನು Lahaul  ಎನ್ನುತ್ತಾರೆ. ಕುದುರೆ ಇಳಿದು ನಾವು ಹಿಮಶಿಖರ ಏರಿದೆವು

ಇಲ್ಲಿ ಇರುವ ಗುಂಡು ಕಲ್ಲುಗಳ ಮಧ್ಯೆ ಹೆಜ್ಜೇ ಊರುವುದು ಅಪಾಯ. ನಾನು ಗಮ್ ಬೂಟು ಬಿಟ್ಟ ಕೈಯಲ್ಲಿ ಹಿಡಿದು ನಡದೆ. ಇಬ್ಬರೂ ಹಿಮದ ಹೃದಯದ ಆಕೃತಿಯ ಮುಂದೆ ನಿಂತು ಪೋಟೋ ತೆಗೆಸಿದೆವು.  

ಅಲ್ಲಿಂದ ಮರಳಿದ ಮೇಲೆ ನಾವು ತರುಣರಿಗೆಲ್ಲನೀವು ನಡೆದೇ ಹೋಗಿ, ಕುದುರೆ ಹತ್ತುವ ಶಿಕ್ಷೆಬೇಡಎಂದೆವು.


ಮರಳುವಾಗ ಬಿಯಾಸ್ ನದಿ ಕುಂಡದ ಬಳಿ ನಾವೂ ಕುದುರೆಯಿಂದ ಇಳಿದೆವು. ಬಿಯಾಸ್ ನದಿಯ ಮೂಲವನ್ನು ಇಲ್ಲಿ ಕಾಣಬಹುದು. ಇಟ್ಟಿಗೆಗಳಿಂದ ಕಟ್ಟಿರುವ ಗುಮ್ಮಟಾಕಾರದ ಅರ್ದ ಚಂದ್ರಾಕೃತಿಯ ಗುಡಿಯ ಒಳಗೆ ಒಂದು ಪುಟ್ಟ ಕುಂಡ ಇದೆ. ಕುಂಡಕ್ಕೆ ಸಣ್ಣ ಪ್ರಮಾಣದಲ್ಲಿ ನೀರು ಬೀಳುತ್ತದೆ. ಕುಂಡದಿಂದ ನೀರು ಭೂಗತವಾಗಿ ಹರಿದು ಗುಡಿಯ ಹೊರಗೆ ಭೂಮಿಯ ಮೇಲೆ ಕಾಣಿಸಿಕೊಳ್ಳುತ್ತದೆ. ಅಲ್ಲಿ ಹೊಳೆಯಾಗಿ ಮುಂದೆ ಅದರೊಂದಿಗೆ ಲೀನವಾಗುವ ಝರಿಗಳಿಂದ ನದಿಯ ಆಕಾರವನ್ನು ಪಡೆಯುತ್ತಾ ಹರಿಯುತ್ತದೆ. ಒಳಗಿರುವ ನೀರಿನ ಝರಿಯ ಒಂದಡಿ ಮೇಲೆ ಒಂದು ಗೂಡು ಇದೆ. ಗೂಡಿನಲ್ಲಿ ಬಿಯಾಸ್ ದೇವಿ ಮುಖವಾಡ ಇದೆ. ಯಾರು ಬೇಕಾದರೂ ಪೂಜೆ ಇಲ್ಲಿ ಮಾಡಿ ಹೋಗಬಹುದು. ವ್ಯಾಸ ಮಹರ್ಷಿಗಳು ಇಲ್ಲಿ ತಪೋನಿರತರಾಗಿದ್ದರಂತೆ.

ನಾವು ಮರಳಿ ಬಂದಾಗ ಹೆಗ್ಗಡೆಯವರು ಮತ್ತು ಸುಯೋಜ ಇಲ್ಲಿಗೆಂದೇ ಬಾಡಿಗೆಗೆ ತಂದ ಉಡುಪುಗಳನ್ನು ಕಳಚಿ ಕೊಂಡಿದ್ದರು. ಮೂತ್ರ ವಿಸರ್ಜಿಸಲೆಂದು ಹೋದವರೊಬ್ಬರು ಮರಳಿಇಂತಹ ಉಡುಗೆ ತೊಟ್ಟು ಮೂತ್ರ ವಿಸರ್ಜಿಸುವುದು ಹೇಗೆ? ಬಟ್ಟೆಯ ಮೇಲೆಯೇ ಬಿತ್ತು. ಅದೆಷ್ಟು ಮಂದಿಯ ಉಚ್ಚೆಯಿಂದ ಪವಿತ್ರವಾದ ಉಡುಗೆಯಿರಬಹುದು ಇದುಎಂದರು.  ನಮಗೂ ಉಡುಗೆ ಕಳಚಿದ ಮೇಲೆ ನೆಮ್ಮದಿಯಾಯಿತು. ಇಲ್ಲಿ ಕೊಳಕು ಉಡುಗೆಯ ಅಗತ್ಯ ಇರಲಿಲ್ಲ. ಆದರೆ ಬಾಡಿಗೆಗೆ ಉಡುಗೆ ನೀಡಲೆಂದು ಕುಳಿತವರಿಗೆ ಹೊಟ್ಟೆ ತುಂಬ ಬೇಕಲ್ಲ?
ಮರಳುವಾಗ ನಮ್ಮ ಟ್ಯಾಕ್ಸಿ ಡ್ರೈವರ್ಸತ್ತವರೆಲ್ಲರ ಅತ್ಮಗಳು ರೋತಾಂಗ್ ಪಾಸ್ ಸೇರುತ್ತವೆಯಂತೆ. ರೋತ್ ಎಂದರೆ ಇಲ್ಲಿಯ ಭಾಷೆಯಲ್ಲಿ ಆತ್ಮ ಎಂದು ಕೇಳಿದ್ದು ನೆನಪುಎಂದ. ಆತನ ಮಾಹಿತಿಯ ಜಾಡು ಹಿಡಿದು ಶೋಧಿಸಿದಾಗ ತಿಳಿದ ಮಾಹಿತಿ ಕುತೂಹಲದಾಯಕವಾಗಿದೆ. ‘ರೋತಾಂಗ್ಎಂಬ ಪದ ಪರ್ಷಿಯನ್ ಪದ. ರೋತಾಂಗ್ ಅಂದರೆ ಶವಗಳ ರಾಶಿ. ಇದುಪೀರ್ ಪಂಜಾಳನಡುವಿನ ಪುರಾತನ ವಾಣಿಜ್ಯ ಮಾರ್ಗ. ದಿನಗಳಲ್ಲಿ ಅಪಘಾತದಿಂದ ಸತ್ತವರ ಶವಗಳು ಇಲ್ಲಿಯ ಹಿಮದಲ್ಲಿ ಕೊಳೆಯದೆ ರಾಶಿ ಬಿದ್ದು ಜನರ ಕಣ್ಣಿಗೆ ಬಿದ್ದಿರಬಹುದುಎಂಬುದು ಕೆಲವು ಭಾಷಾ ವಿಜ್ಞಾನಿಗಳ ಅಭಿಪ್ರಾಯ. (ಇದು ಪರ್ಷಿಯನ್ ವ್ಯಾಪಾರಿಗಳ ಸಿಲ್ಕ್ ರೂಟ್ ರೇಷ್ಮೆ ಮಾರ್ಗ. ಚೀನದಿಂದ ರೋಮ್ವರೆಗೆ ಮಾರ್ಗದಿಂದ ವ್ಯಾಪರ ನಡೆಯುತ್ತಿತ್ತು.) ಪರ್ಷಿಯನರು ಮಾರ್ಗದಿಂದ ಸಂಚಾರ ಮಾಡುತ್ತಿದ್ದುದರಿಂದ ರೋತಾಂಗ್ ಎಂಬ ಪರ್ಷಿಯನ್ ಪದವನ್ನು ಸ್ಥಳೀಯರು ಉಳಿಸಿಕೊಂಡು ಬಂದಿರಬಹುದು.

ನಾವು ರೊತಾಂಗ್ನಿಂದ ಇಳಿದು ಬರುವಾಗ ಬೋಜ್ ಪತ್ರದ ಅನೇಕ ಮರಗಳನ್ನು ಕಂಡೆವು. ಆದರೆ ಅವು ಯಾವುದೂ  ಸಿಮ್ಲಾದಲ್ಲಿ ಕಂಡ ಮರದಷ್ಟು ದಪ್ಪವಾಗಿರಲಿಲ್ಲ. ಪಪ್ಪುವಿಗೆ ಗಾಡಿ ನಿಲ್ಲಿಸಲು ಸೂಚಿಸಿದ. ಗಾಡಿ ನಿಂತ ಕೂಡಲೇ ಮೇಲ್ಭಾಗದಲ್ಲಿ ಇದ್ದ ಮರದ ಬಳಿ ಹೋಗಲು ನಾನು ಉತ್ಸುಕಳಾದೆ. “ನಿಲ್ಲು. ನೀನೇನು ಚಿಕ್ಕ ಹುಡುಗಿಯಾ? ಹಾಗೆ ಜಿಗಿದು ಶಿಖರ ಹತ್ತಲು. ಎಲ್ಲಾದರೂ ಜಾರಿ ಬಿದ್ದರೆ?” ಎಂದರು ಹೆಗ್ಗಡೆಯವರು. “ಅಯ್ಯಾ ಹೆಗ್ಗಡೆಯವರೇ. ನಾನು ನಿಮ್ಮನ್ನು ನೊಡುವ ಮೊದಲೂ ನಮ್ಮೂರ ಬೆಟ್ಟಗಳನ್ನು ಹತ್ತುತ್ತಿದ್ದೆ.” ಎಂದೆ ನಾನು. ಆಗ ಜೀವನ್ ಶೆಟ್ಟಿಯವರೂ ಹೆಗ್ಗಡೆಯವರ ಬೆಂಬಲಕ್ಕೆ ನಿಂತರು. ಅಷ್ಟರಲ್ಲಿ ನಮ್ಮ ಡ್ರೈವರ್ ಪಪ್ಪು ತಾನೇ ಹೋಗಿ ತೊಗಟೆಗಳನ್ನು ತರುವುದಾಗಿ ಹೇಳಿ ಹೊರಟವನು ತಂದು ಕೊಟ್ಟ.

ನಮ್ಮ ಪ್ರಯಾಣ ಪರ್ವತ ಶಿಖರಗಳ ಇಳಿಜಾರಿನಲ್ಲಿ ಕೆಳಮುಖವಾಗಿ ಹಾವಿನಂತೆ ಹರಿಯತೊಡಗಿತು. ಬಿಯಾಸ್ ನದಿ ಹಾಗೂ ಅದಕ್ಕೆ ಸೇರಿದ ಅನೇಕ ಝರಿಗಳನ್ನು, ಸೇತುವೆಗಳನ್ನು ದಾಟಿ ಮತ್ತೆ ಮೇಲ್ಮುಖವಾಗಿ ಶಿಖರ ಹತ್ತಿತು ನಮ್ಮ ರಥ! ಮುಂದೆ ಒಂದು ಉದ್ಯಾನವನ ಮತ್ತು ಪುಟ್ಟ ಮಾರುಕಟ್ಟೆ ಇರುವ ಸ್ಥಳಕ್ಕೆ ಬಂದೆವು. “ಪ್ಯಾರಾಚೂಟ್ ಗ್ಲೈಡರ್ ಬಳಿ ಹೋಗೋಣವೇ. ಅದು ಸಿನಿಮಾ ಚಿತ್ರೀಕರಣ ಆಗುವ ಸ್ಥಳಎಂದ ಡ್ರೈವರ್. ಪ್ರವಾಸಿಗರಿಗೆ ಚಲನಚಿತ್ರ ಚಿತ್ರೀಕರಣವಾಗುವ ಸ್ಥಳವನ್ನು ತೋರಿಸುವುದರಲ್ಲಿ ನಮ್ಮ ಭಾರತೀಯರಿಗೆ ಆಸಕ್ತಿ ಹೆಚ್ಚು. ಕುದುರೆ ಮೇಲೆ ಕುಳಿತು ಶಿಖರದ ತುದಿಗೆ ಪ್ಯಾರಾಚೂಟ್ನಿಂದ ಹಾರುವ ಸ್ಥಳಕ್ಕೆ ಹೋಗುವ ವ್ಯವಸ್ಥೆ ಇತ್ತಾದರೂ ನಾವು ಹೋಗಲಿಲ್ಲ. ಪ್ಯಾರಾಚೂಟ್ ಕೆಳಗಿಳಿಯುವ ಭಾಗದ ಉದ್ಯಾನವನದಲ್ಲಿ ಸ್ವಲ್ಪ ಸುತ್ತಾಡಿ ಮರಳಿದೆವು. ಕೆಲವರು ಪ್ಯಾರಚೂಟ್ನಿಂದ ಹಾರಿ ನಮ್ಮ ಮುಂದಿದ್ದ ಉದ್ಯಾನವನದಲ್ಲಿ ಇಳಿದರು.


ಮರಳುವಾಗ ಬಿಯಾಸ್ ನದಿಗೆ ಸೇರುವ ಉಪನದಿ ಹರಿಯುವಲ್ಲಿ ಒಂದು ನಾಗ ದೇವಾಲಯವನ್ನು ಕಂಡೆವು. ತನ್ನ ದೇಹವನ್ನು ಸುರುಳಿ ಸುತ್ತಿ ಪೀಠ ಮಾಡಿ, ಸುರುಳಿಯ ನಡುವೆ ನುಸುಳಿದ ಬಾಲವನ್ನು ಮುಂಭಾಗದಲ್ಲಿ ತೂರಿಸಲಾಗಿದೆ. ಹಾವೇ ನೆಟ್ಟಗೆ ಹೆಡೆಯೆತ್ತಿ ನಿಂತ ಹಾಗೆ ಲಿಂಗ ಹಾವಿನ ದೇಹದ ಮಾದರಿಯಲ್ಲಿ ಇದೆ. ಲಿಂಗದ ತಲೆಯಂತೆ ತುದಿಯಲ್ಲಿ ಹೆಡೆ ಇದೆ. ಸರ್ಪಲಿಂಗದ ತ್ರಿಶೂಲಾಕಾರದ ಮಧ್ಯದ ಗೆರೆ ಸರ್ಪದ ದೇಹ ಚಿಹ್ನೆಯಂತೆ ಇದೆ. `ಆಕಾರ ಲಿಂಗಕ್ಕೆ ಹೊದಿಸಿದ ಸ್ವರ್ಣ ರೇಖೆಯಂತೆ ಇದೆ. ಶಿಲ್ಪ ಸುಂದರವಾಗಿತ್ತು. ಒಂದೇ ಕೋಣೆಯ ಗುಡಿ. ಮಾಡನ್ನು ಸ್ಥಳೀಯ ಶಿಲಾ ಹಾಳೆಗಳಿಂದ ಹೊದಿಸಲಾಗಿದೆ. ಮುಂಭಾಗದಲ್ಲಿ ಪ್ರವೇಶ ದ್ವಾರ ಇದ್ದು ಎರಡೂ ಕಡೆಗೂ ಮಾಡು ಇಳಿಜಾರಾಗಿದೆ. ಇದರ ಮೇಲೆ ಬಿದ್ದ ಹಿಮ ಹರಿದು ಹೋಗಲು ಅನುಕೂಲವಾಗುವಂತೆ ಇದರ ಮಾಡನ್ನು ರಚಿಸಲಾಗಿದೆ. ಸ್ಥಳವೇ ಶಿಖರದ ಸಮತಟ್ಟು ಭಾಗ. ಆದರೆ ಬಾನು ನೋಡಿದಾಗ ನಮ್ಮ ನೆತ್ತಿಯ ಮೇಲೆ ನಿಂತಂತೆ ಕಾಣುವ ಪರ್ವತ ಶಿಖರ ಹಾಗೂ ಶಿಖರದ ಮೇಲೆ ಬೆಳೆದು ನಿಂತ ಬೃಹತ್ ದೇವದಾರು ವೃಕ್ಷ ಕಂಡು ಮೂಕ ವಿಸ್ಮಿತರಾದೆವು!


ದಾರಿಯಲ್ಲಿ  ಮ್ಮ ಡ್ರೈವರ್ನೆಹರೂ ಕುಂಡ ತೋರಿಸ್ತೀನಿಎಂದ. ಲೇ ರಾಷ್ಟ್ರೀಯ ಹೆದ್ದಾರಿಯಿಂದ ಐದು ಕಿಲೋಮೀಟರ್ ಒಳ ಭಾಗಕ್ಕೆ ಬಂದರೆ ನೆಹರೂ ಕುಂಡವನ್ನು ಕಾಣಬಹುದು. ಇಲ್ಲಿಂದ ಮನಾಲಿ ನಗರಕ್ಕೆ 6 ಕಿಲೋ ಮೀಟರ್ ದೂರ. ವಾಸ್ತವವಾಗಿ ಇದು 4240 ಮೀಟರ್ ಎತ್ತರದ ಪರ್ವತ ಪ್ರದೇಶದಲ್ಲಿ (ರೋತಾಂಗ್ ಪಾಸ್ ಪೂರ್ವ ಪ್ರದೇಶ)ಹುಟ್ಟಿ ಮುಂದೆ ಹರಿಯುವ ಭೃಗು ಸರೋವರದಿಂದ ಒಸರುವ ಝರಿಯಂತೆ. ಇಂತಹ ಅನೇಕ ಝರಿಗಳನ್ನು ನಾವು ರೋತಾಂಗ್ ಪಾಸ್ ಹತ್ತುವಾಗ ಕಂಡಿದ್ದೆವು. ಇಲ್ಲಿಯ ವಿಶೇಷ ಎಂದರೆ ನೆಹರೂ ನೀರನ್ನು ಕುಡಿದು ತನ್ನ ಕಾಯಿಲೆ ಗುಣಪಡಸಿಕೊಂಡರೆನ್ನುವುದು. ಆತ ಪ್ರತಿಬಾರಿ ಮನಾಲಿಗೆ ಬಂದಾಗಲೂ ಇದೇ ಝರಿಯ ನೀರು ಕುಡಿಯುತ್ತಿದ್ದರಂತೆ. ಇಲ್ಲಿ ನೆಹರೂ ಹೆಸರಲ್ಲಿ ಕುಂಡ ನಿರ್ಮಿಸಿ ಇಲ್ಲಿಯ ನೀರು ಕುಂಡಕ್ಕೆ ಹರಿದು ಶೇಖರವಾಗುವಂತೆ ಮಾಡಿದ್ದರು. ಆದರೆ ಈಗ ಯಾವುದೂ ಸುಸಿತ್ಥಿಯಲ್ಲಿ ಇಲ್ಲ. ಇಳಿಜಾರಿನ ಗುಡ್ಡಕ್ಕೆ ಅಳವಡಿಸಿದ ಕೊಳಾಯಿಯೂ ತುಕ್ಕು ಹಿಡಿದಿದೆ. ನೀರು ಹಿಡಿಯುವ ಸ್ಥಳ ಕೊಳಕಾಗಿದೆ. “ನಮ್ಮೂರಿನ ಗುಡ್ಡದಲ್ಲಿ ಒಸರುವ ನೀರು ಇದಕ್ಕಿಂತ ಶುದ್ಧವಾಗಿ ಇದೆಎಂದರು ಹೆಗ್ಗಡೆಯವರು. ಹಾಗಂದರೂ ಒಂದು ಬಾಟಲ್ ನೀರು ಹಿಡಿದು ತಂದು ಎಲ್ಲರಿಗೂ ಕುಡಿಯಲು ನೀಡಿದರು. “ ನೀರಿನಲ್ಲಿ ಕಾಯಿಲೆ ಗುಣ ಪಡಿಸುವ ಶಕ್ತಿ ಇದ್ದರೆ ನಾವೂ ಅದರ ಲಾಭ ಪಡೆಯೋಣಎಂದೆ ನಾನು. “ಒಂದು ದಿನ ಕುಡಿದರೆ ಲಾಭ ಎಲ್ಲಿ? ಕೆಲವು ದಿನಗಳಾದರೂ ಕುಡಿಯಬೇಕುಎಂದರು ಜೀವನ್ ಶೆಟ್ಟಿಯವರು.

ಝರಿಯ ಬಳಿ ಒಂದು ಕೋಣೆಯ ಪುಟ್ಟ ಮನೆಯಲ್ಲಿ ವಾಸ ಇರುವ ಸ್ವಾಮಿಯನ್ನು ಕಂಡೆವು. ನಮ್ಮನ್ನು ಕಂಡು ಆತ ಕೋಣೆಯಿಂದ ಹೊರಬಂದು ನಮ್ಮನ್ನು ಮಾತನಾಡಿಸಿದರು. ಮೇಲೆ ಕಲ್ಲು ಸಕ್ಕರೆ ನೀಡಿದರು. ನಾವು ದಕ್ಷಿಣೆ ಎಂದು ಹಣ ನೀಡಲು ಹೋದಾಗ ಆತ ಸ್ವೀಕರಿಸಲು ಒಪ್ಪಲಿಲ್ಲ. ಆತ ಕುಂಡವನ್ನು ಮರಳಿ ಹಿಂದಿನ ಸ್ಥಿತಿಗೆ ತರಲು ರಾಜಕಾರಿಣಿಗಳ ಮನೆ ಬಾಗಿಲನ್ನು ಛಲ ಬಿಡದ ತ್ರಿವಿಕ್ರಮನಂತೆ ಅಲೆಯುವ ವಿಚಾರ ತಿಳಿಸಿದರು. ಸಂನ್ಯಾಸಿಯ ಬಗ್ಗೆ ಗೌರವ ಹುಟ್ಟಿತು.   ದಿನದ ಪ್ರಯಾಣ ಮುಗಿಸಿ ಹೊಟೇಲ್ ಕೋಣೆ ಸೇರಿದೆವು.
ಮರುದಿನ ಬೆಳಿಗ್ಗೆ ಬೇಗನೆ ಎದ್ದು ನಾನು ಕೋಣೆಯಿಂದ ಹೊರಬಂದೆ. ಇಬ್ಬರು ಶ್ರಮಿಕರು ಮನೆಕಟ್ಟುವ ಕೆಲಸದಲ್ಲಿ ತಲ್ಲೀನರಾಗಿದ್ದರು. ಮರಳಿನ ರಾಶಿಯ ಮೇಲೆ ಉದ್ದವಾದ ಬುಟ್ಟಿಯನ್ನು ಇಟ್ಟು ಅದರಲ್ಲಿ ಮರಳನ್ನು ತುಂಬಿಸುತ್ತಿದ್ದರು. ಮರಳು ತುಂಬಿರುವ ಬುಟ್ಟಿಗೆ ಬೆನ್ನು ಕೊಟ್ಟು ಅದರ ಹಗ್ಗವನ್ನು ನೆತ್ತಿಯ ಮೆಲೆ ಆಧರಿಸಿ ಬುಟ್ಟಿಯನ್ನು ಬೆನ್ನಿನ ಮೇಲೆ ಹೊತ್ತು ಬೆಟ್ಟ ಹತ್ತುತ್ತಿದ್ದರು. ಒಬ್ಬ ಹತ್ತುತ್ತಿದ್ದ ಮತ್ತೊಬ್ಬ ಇಳಿಯುತ್ತಿದ್ದ. ಇಲ್ಲಿಯ ಕೂಲಿಗಳು ಸಂಜೆಯೂ ಕತ್ತಲಾಗುವವರೆಗೆ ಕೆಲಸಮಾಡುತ್ತಾರೆ.
 ಮರುದಿನ ಬೆಳಿಗ್ಗಿನ ಉಪಹಾರವನ್ನು ಹೊಟೇಲಿನಲ್ಲಿಯೇ ಮುಗಿಸಿ ಮನಾಲಿಯವಶಿಷ್ಠ ಕುಂಡನೋಡಲು ಹೊರಟೆವು.
ಮನಾಲಿ ವಶಿಷ್ಠ ಕುಂಡ
ಮನಾಲಿಯ ನಗರದಿಂದ 3 ಕಿಲೋಮೀಟರ್ ಪರ್ವತ ಏರಿದರೆ ಬಿಸಿನೀರಿನ ಬುಗ್ಗೆ ಇರುವ ಕ್ಷೇತ್ರ ಸಿಗುತ್ತದೆ. ಇದು ಕೊರಕಲು ಬಾಗ. ಇಲ್ಲಿ ವಶಿಷ್ಠನ ದೇವಸ್ಥಾನ ಇರುವುದರಿಂದ ಇದನ್ನು ವಶಿಷ್ಟ ಕುಂಡ ಎನ್ನುತ್ತಾರೆ. ಇದು ಬಿಯಾಸ್ ನದಿಯ ಎಡ ದಂಡೆಯ ಮೆಲೆ ಇರುವ ಪುಟ್ಟ ಹಳ್ಳಿ. ಬಿಸಿನೀರಿನ ಬುಗ್ಗೆಯಿಂದಾಗಿ ಸ್ಥಳ ಪ್ರವಾಸಿ ಕ್ಷೇತ್ರವಾಗಿದೆ. ಹೀಗಾಗಿ ಇದು ಶಾಪಿಂಗ್ ಸೆಂಟರೂ ಆಗಿದೆ. ವಶಿಷ್ಠ ಗುಡಿ ಪಿರಾಮಿಡ್ ಆಕಾರದ ಶಿಲಾ ಮಾಡಿನ ರಚನೆ. ಪುಟ್ಟ ಗುಡಿ ಹಾಗೂ ವಿಶಾಲ ಅಂಗಣ ಚಾವಡಿ ಇದೆ. ತನ್ನ ಕುಲಗುರುವಾದ ವಶಿಷ್ಠನ ಸ್ನಾನಕ್ಕಾಗಿ ಲಕ್ಷ್ಮಣನು ಬಿಸಿನೀರಿನ ಬುಗ್ಗೆಯನ್ನು ಬಾಣದ ಮೂಲಕ ಚಿಮ್ಮಿಸಿದ ಎನ್ನುವುದು ದಂತ ಕಥೆ.
ದಂತ ಕಥೆಯ ಪ್ರಕಾರ ವಿಶ್ವಾಮಿತ್ರನಿಂದ ತನ್ನ ಮಕ್ಕಳೆಲ್ಲ ಹತರಾದರು ಎಂದು ಕೇಳಿದ ವಶಿಷ್ಠ ದುಃಖವನ್ನು ತಡೆಯಲಾಗದೆ ವಿಪಾಶ ನದಿಗೆ ಹಾರುತ್ತಾನೆ. ವಿಪಾಶ ನದಿ ಆತನನ್ನು ಬದುಕಿಸಿಕೊಡುತ್ತದೆ. ವಿಪಾಶ ಅಂದರೆ ಪಾಶ ಇಲ್ಲ ಎಂದು.  ನದಿ ಬಿಯಸ್ ಜತೆ ಲೀನವಾಗುತ್ತದೆ. ಕೆಲವರ ಪ್ರಕಾರ ಬಿಪಾಶವೇ ಭೃಗು ಸರೋವರದಿಂದ ಹರಿಯುವ ನದಿ.
ವಶಿಷ್ಠನ ದೇವಸ್ಥಾನದಿಂದಾಗಿ ಊರಿಗೆ ವಶಿಷ್ಠ ಹೆಸರು ಬಂದಿದೆ. ಭೂಮಿಯಡಿಯಿಂದ ಚಿಮ್ಮುವ 110°C ರಿಂದ 123°C. . ಇರುವ ಬಿಸಿನೀರನ್ನು ತಣ್ಣೀರು ಬೆರಸಿ ಎರಡು ಸ್ನಾನದ ತೊಟ್ಟಿಗಳಿಗೆ ಹಾಯಿಸುತ್ತಾರೆ. ಬಿಸಿ  88°Cರಿಂದ 94°C ಒಂದರಲ್ಲಿ ಪುರುಷರು ಮತ್ತೊಂದರಲ್ಲಿ ಮಹಿಳೆಯರು ಸ್ನಾನ ಮಾಡುತ್ತಾರೆ. ಊರಿನ ಹೆಚ್ಚಿನ ಜನರು ಹೆಚ್ಚಾಗಿ ಇಲ್ಲಿಯೇ ಸ್ನಾನ ಮಾಡುತ್ತಾರೆ. ಚಳಿಗಾಲದಲ್ಲಿ ಬಿಸಿನೀರಿನ ಬುಗ್ಗೆ ಬಹುಪಯೋಗಿಯಾಗಿದೆ. ಎಲ್ಲೆಲ್ಲೂ ಹಿಮ ಹಾಸಿರುವಾಗ ವಶಿಷ್ಠಕುಂಡದ ಬಿಸಿನೀರು ಸ್ಥಳೀಯರಿಗೆ ವರದಾಯಕವೂ ಆಗಿದೆ. ರಂಜಕಾಂಶದ ಇಲ್ಲಿಯ ಬಿಸಿನೀರು ಚರ್ಮರೋಗಕ್ಕೆ ರಾಮಬಾಣವಂತೆ. ದಿನಕ್ಕೆ ಮೂರು ಸಾವಿರ ಜನರು ಇಲ್ಲಿಗೆ ಬಂದು ಸ್ನಾನ ಮಾಡುತ್ತಾರೆ ಎನ್ನುತ್ತಾರೆ. ನಮ್ಮ ಗಮನಕ್ಕೆ ಬಂದಂತೆ ಇಲ್ಲಿ ಹೆಚ್ಚಾಗಿ ಸ್ಥಳೀಯರೇ ಸ್ನಾನ ಮಾಡುತ್ತಾರೆ. ಶಾಲಾ ಮಕ್ಕಳು ಶಾಲೆಯಿಂದ ನೇರವಾಗಿ ಇಲ್ಲಿಗೆ ಬಂದು ಸ್ನಾನ ಮುಗಿಸಿ ಹೋಗುತ್ತಾರೆ. ಚಳಿ ಪ್ರದೇಶದಲ್ಲಿ ಸುಲಭದಲ್ಲಿ ಸಿಗುವ ಪವಿತ್ರ, ಮತ್ತು ಆರೋಗ್ಯದಾಯಕ ಬಿಸಿನೀರಿನ ಲಾಭ ಮಾಡಿಕೊಳ್ಳುತ್ತಾರೆ. ವಶಿಷ್ಠ ಕುಂಡದ ಪವಿತ್ರ ನೀರನ್ನು ಪ್ರೋಕ್ಷಿಸಿಕೊಂಡು ಬರೋಣ ಎಂದು ನಾನು ಮತ್ತು ಸುಯೋಜ ಮಹಿಳೆಯರ ಸ್ನಾನದ ತೊಟ್ಟಿಯ ಬಳಿ ಹೋಗಿ ದಿಗ್ಭ್ಮೂಡರಾದೆವು! ಹದಿ ಹರೆಯದ (ಹೈಸ್ಕೂಲ್ ಹುಡುಗಿಯರು) ನಗ್ನ ಸುಂದರಿಯರು ನೀರಾಟವಾಡುತ್ತಿದ್ದರು? ಬಹುಷಃ ರೂಪಸಿ ಮೇನಕೆ ತಪಸ್ವಿ ವಿಶ್ವಾಮಿತ್ರನ ಮನಸ್ಸನ್ನು ಹೀಗೆಯೇ ಚಂಚಲಗೊಳಿಸಿರಬೇಕು ಎಂದೆನಿಸಿತು. ನಾವೇ ಅವರ ನಗ್ನ ಸೌಂದರ್ಯಕ್ಕೆ ಗಲಿಬಿಲಿಗೊಳ್ಳುವಾಗ ಪುರುಷರು ಅವರ ಅಧೀನರಾಗುವುದು ಸಹಜವಲ್ಲವೆ? ನನಗೆ ಉಡುಗೆಯನ್ನು ಬಿಚ್ಚಿ ನೀರಾಟವಾಡುತ್ತಿದ್ದ ಗೋಪಿಕೆಯರು ಮತ್ತು ಅವರ ಉಡುಗೆಯೊಂದಿಗೆ ಮರ ಹತ್ತಿದ್ದ ತುಂಟ ಕೃಷ್ಣ ನೆನಪಾದ. ನನಗೂ ಅಂತಹ ಅವಕಾಶ ಇದ್ದಿದ್ದರೆ ಕೃಷ್ಣನಂತೆ ಮಾಡುತ್ತಿದ್ದೆನೋ ಏನೋ? “ಎಂತದು ಇಂದ್ರಕ್ಕಸುಯೋಜಳ ಪ್ರಶ್ನೆ ನನ್ನನ್ನು ವಾಸ್ತವಕ್ಕೆ ಕರೆ ತಂದಿತ್ತು. “ಪುರುಷರು ಬರುವುದಿಲ್ಲ ಎಂದು ರೀತಿ ಬಟ್ಟೆ ಬಿಚ್ಚುವುದಾ?” ಎಂದು ಸುಯೋಜ ನನ್ನನ್ನೇ ಗದರಿಸಿದರು. ಅಷ್ಟರಲ್ಲಿಬೇಗ ಬನ್ನಿಎಂದ ಪುರುಷರ ಧ್ವನಿ ಕೇಳಿಸಿತು.
ನಾವು ಮೆಟ್ಟಲು ಹತ್ತಿ ಭೂಮಿ ಮಟ್ಟಕ್ಕೆ ಬರುವಾಗ ಹೆಗ್ಗಡೆ ಮತ್ತು ಜೀವನ್ ಮೇಲ್ಭಾಗದ ಶ್ರೀ ರಾಮ ಮಂದಿರದಲ್ಲಿ ಇದ್ದರು. ಸ್ವಲ್ಪ ಎತ್ತರದ ಭಾಗದಲ್ಲಿ ಶ್ರೀ ರಾಮನ ದೇವಸ್ಥಾನ ಇದೆ. ಇಲ್ಲಿ ಒಂದು ಪುಟ್ಟ ಹುಡುಗಿ ಹಿಮ ಪ್ರದೇಶದ ಮೊಲವನ್ನು ಕೈಯಲ್ಲಿ ಹಿಡಿದು ತನ್ನ ಪೋಟೋ ತೆಗೆಯಲು ಸಂಜ್ಞೆ ಮಾಡಿದಳು. ಸಂವಹನ ಮಾಡಲು ಬಾಷೆ ಬಾರದಿದ್ದರೇನಂತೆ. ಬುದ್ಧಿ ಇದ್ದರೂ ಸಾಕಾಗುತ್ತದೆ.
ವಶಿಷ್ಠ ಕುಂಡದ ಕ್ಷೇತ್ರವನ್ನು ಪ್ರವಾಸೋದ್ಯಮ ಇಲಾಖೆಯವರು ಅಭಿವೃದ್ದಿ ಪಡಿಸಿದ್ದಾರೆ. ನದಿಯ ಕಡೆ ನಾವು ಹೋಗಲಿಲ್ಲ. ಪಾರ್ವತಿ ನದಿಗೆ ಧುಮುಕುವ ಬಿಸಿನೀರು ಎಬ್ಬಿಸುವ ಬಿಸಿ ಆವಿ ಇಲ್ಲಿ ಕಾಣಲಿಲ್ಲ.
ಹಡಿಂಬಾಮನಾಲಿಯ ಅಧಿದೇವತೆ
ತುಳುನಾಡಿನ ಯಕ್ಷಗಾನ ಪಾತ್ರಗಳಲ್ಲಿ ರಾಕ್ಷಸ ಹಿಡಿಂಬನ ತಂಗಿಯಾಗಿ ವಿಕಾರ ರೂಪದಿಂದ ಹಿಡಿಂಬೆ ರಂಗ ಪ್ರವೇಶ ಮಾಡುತ್ತಾಳೆ. ಆದರೆ ಕುಲು ಮನಾಲಿಯ ಸ್ಥಳೀಯರಿಗೆ ಆಕೆ ರಾಕ್ಷಸಿಯಲ್ಲ. ಉಪಾಸನಾ ದೇವತೆ. ‘ಶಕ್ತಿ ದೇವತೆ.’ ಸ್ಥಳೀಯರ ಪ್ರಕಾರ ಆಕೆ ಹಿಡಿಂಬೆಯಲ್ಲಹಡಿಂಬಾ ದೇವಿಎಂದು. ಆದರೆ ಪುರಾತತ್ವ ಇಲಾಖೆಯವರ ಫಲಕದಲ್ಲಿ ಹಿಡಿಂಬೆ ಎಂದಿದೆ. ಸ್ಥಳೀಯರ ಹಡಿಂಬಾ ದೇವಿ ವೈದಿಕ ಮತ್ತು ಜನಪದದ ಎಲ್ಲಾ ದೇವಿಯ ಸ್ಥಾನ ದೇವತೆಗಳಿಗಿಂತಲೂ  ಹಿರಿದು. ಆದ್ದರಿಂದ ನಮ್ಮ ಮನಾಲಿ ಪ್ರವಾಸ ಸಂದರ್ಭದಲ್ಲಿಹಡಿಂಬಾ ದೇವಿದೇವಿಯ ದರ್ಶನ ಅತಿ ಮುಖ್ಯವಾಗಿತ್ತು.
ಪ್ರಕೃತಿಯ ಗಾಂಭೀರ್ಯ ನೋಡಬೇಕಾದರೆ ಹಿಮಾಚಲ ಪ್ರದೇಶಕ್ಕೆ ಹೋಗಬೇಕು. ಹಿಮಾಚಲ ಪ್ರದೇಶಗಳಲ್ಲಿ ಬೆಳೆಯುವ ಬಾನೆತ್ತರದ ದೇವದಾರು ವೃಕ್ಷಗಳ ಕಾನನವೇ ಒಂದು ವಿಸ್ಮಯ. ಇಂತಹ ಅನೇಕ ಬೆರಗುಗೊಳಿಸುವ ಪ್ರವಾಸಿ ತಾಣಗಳಲ್ಲಿಕುಲು ಮನಾಲಿಹಡಿಂಬಾವನವೂ ಸೇರಿದೆ.
ಮನಾಲಿಯಲ್ಲಿ ಹರಿಯುವ ಬಿಯಾಸ್ ನದಿ ಕಣಿವೆಯ ಬಲ ದಂಡೆಯ ಮೇಲೆ ಮನಾಲಿಯ ಪರ್ವತ ತಪ್ಪಲಲ್ಲಿ ಪೇಟೆಯಿಂದ ಮೂರು ಕಿಲೋಮೀಟರ್ ಎತ್ತರಕ್ಕೆ ದೇದದಾರು ವೃಕ್ಷಗಳ (cedar) ಮನ ಮೋಹಕ (ಈಗ ರಕ್ಷಿತ) ಕಾನನ ಇದೆ. ಇದನ್ನುದುಂಗ್ರಿ ವನಎಂದೂ ಕರೆಯುತ್ತಾರೆ. ಇಲ್ಲಿ ವನ ವಿಹಾರ ನಡೆಯುತ್ತದೆ. ಬೋಟ್ ರ್ಯಾಪ್ಟಿಂಗ್ ವ್ಯವಸ್ಥೆಯೂ ಇಲ್ಲಿದೆ.

ನಾವು ಇಲ್ಲಿಯ ದೇವದಾರು ವೃಕ್ಷಗಳ ರಕ್ಷಿತ ಕಾನನದಲ್ಲಿ ಸುತ್ತಾಡಿದೆವು. ‘ದೇವದಾರು ವೃಕ್ಷಗಳ ತುದಿಗಳು ಮುರಿದು ಬೀಳಲು, ಅದರ ಹಾಲಿನಿಂದ ಹೊಮ್ಮುವ ಸುವಾಸನೆಯಿಂದ ಭಾಗ ಗಾಳಿಯೂ ಸುವಾಸನೆಯುಕ್ತವಾಗಿದೆಎನ್ನುತ್ತಾನೆ ಕಾಳಿದಾಸನ ಗಂಧರ್ವ.


ನಾನು ದೇವದಾರು ಮರದಿಂದ ಉದುರಿರುವ ಒಣ ಹೂಗಳನ್ನು ಆರಿಸಿಕೊಂಡೆ. ಬಿಯಾಸ್ ನದಿಗೆ ಇಳಿದು ಸ್ಪಟಿಕ ನಿರ್ಮಲ ನೀರಿನ್ನು ಕುಡಿದು ಕೈಕಾಲು ಮುಖ ತೊಳೆದುಕೊಂಡೆ. ಮಧು ಚಂದ್ರಕ್ಕೆ ಬಂದಿರುವ ಕೆಲವು ತರುಣ ತರುಣಿಯರೂ ನೀರನಲ್ಲಿ ಕಾಲಾಡಿಸುತ್ತಿದ್ದರು. ಉಳಿದವರು ನದಿಗೆ ಇಳಿಯಲು ಒಪ್ಪಲಿಲ್ಲ. ನನಗೆ ಮಾತ್ರ ನದಿಯ ಸನಿಹ ಆನಂದ ತಂದಿತ್ತು. ಅದರ ನೀರಿನ ಸ್ಪರ್ಶ ಸುಖವೂ ಆನಂದ.  ಇಷ್ಟು ದೂರ ಹೋಗಿ ಬಿಯಾಸ್ ನದಿಯಲ್ಲಿ ಕಾಲಾದರೂ ಆಡಿಸ ಬೇಡವೆ? ಆದರೆ ಹೆಗ್ಗಡೆಯವರಿಗೆ ಆತಂಕ. ಮುದಿ ವಯಸ್ಸಲ್ಲಿ ಹೆಂಡತಿ ಕಳೆದು ಹೋದರೆ ಹೊಸ ಹೆಂಡತಿಯೂ ಸಿಗಲಾರಳಲ್ಲವೆ?

ವನದಲ್ಲಿ ಹಿಮಪ್ರದೇಶದ ಉದ್ದ ಕೂದಲಿನ ಮೊಲವನ್ನು ಹಿಡಿದು ಇಬ್ಬರು ಪಹಾಡಿ ಮಹಿಳೆಯರು ನಿಂತಿದ್ದರು. ಅದನ್ನು  ಹಿಡಿದು ಪ್ರವಾಸಿಗರು ಫೋಟೋ ತೆಗೆಸಿಕೊಂಡರೆ ತನ್ನ ಸಂಪಾದನೆ ಆಗುತ್ತದೆ ಎಂಬ ಆಶಯ ಅವಯದ್ದು. ಪಹಾಡಿ ಉಡುಗೆಯನ್ನು ನವ ಜೋಡಿಗೆ ತೊಡಿಸಿ ಪೋಟೋ ತೆಗೆಸಿ ತಮ್ಮ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ಕಾಯಕದ ಪಹಾಡಿ ಜನರೂ ಇದ್ದರು.
ಮನಾಲಿ- ನಿಜವಾಗಿ ಇದು ಹನಿಮೂನ್ ಸ್ಥಳ. ಕಾನನ ಯುವ ಜೋಡಿಗಳಿಗಾಗಿ ಮಾಡಿಸಿದಂತಿದೆ. ಅಂತಹ ಯುವ ಜೋಡಿಗಳ ನಡುವೆ 60-65 ವಯಸ್ಸಿನ ಜೋಡಿಯಾಗಿ ನಾನು ಮತ್ತು ಹೆಗ್ಗಡೆಯವರು, 50-55 ಜೋಡಿಯಾಗಿ ಜೀವನ್ ಶೆಟ್ಟಿ ಮತ್ತು ಸುಯೋಜ ಶೆಟ್ಟಿ ಬೆರಕೆಯಾಗಿದ್ದೆವು. ನಮಗೆ ಯುವ ಜೋಡಿಗಳ ಪರಿವೆ ಇದೆಯೇ ಹೊರತು ಅವರು ನಮ್ಮ ಅಸ್ಥಿತ್ವವನ್ನೇ ಗಮನಿಸುತ್ತಿರಲಿಲ್ಲ. ನಾವು ಸಿಮ್ಲಾ ಮನಾಲಿಗೆ ಪ್ರವಾಸ ಹೊರಡುವಾಗ ನಮ್ಮ ಅನೇಕ ಮಿತ್ರರು ಕೇಳಿದ್ದರು. “ಅದೇನು ವಯಸ್ಸಲ್ಲಿ ಹನಿಮೂನ್ ಸ್ಥಳಕ್ಕೆ ಹೋಗುವುದು?” ಎಂದು. “ಹೋಗ ಬೇಕಾದ ವಯಸ್ಸಿನಲ್ಲಿ ಹೋಗಲಾಗಲಿಲ್ಲ. ಅದಕ್ಕೆ.” ಎಂದು ನಾನೂ ಮುಲಾಜಿಲ್ಲದೆ ಉತ್ತರಿಸಿದ್ದೆ. ಆದರೆ ಇಲ್ಲಿ ಯುವ ಜೋಡಿಗಳ ದಂಡೇ ಇದೆ. ಇಂತಹ ಸುಂದರ ಪರಿಸರದಲ್ಲಿ ಹಿಡಿಂಬೆ ಭೀಮಳನ್ನು ಅಥವಾ ಭೀಮ ಹಿಡಿಂಬಾಳನ್ನು ನೋಡಿ ಮೋಹ ಗೊಂಡು ಘಟೋದ್ಗಜನ ಜನನಕ್ಕೆ ಕಾರಣರಾಗಿದ್ದರೆ ಮನಾಲಿಯ ಪ್ರಕೃತಿಯ ಪ್ರಭಾವದಿಂದ ಎನ್ನುವುದು ಖಚಿತ!





ಮಹಾಭಾರತದ ಪಾತ್ರಗಳಲ್ಲಿ ಅತಿಥಿ ಪಾತ್ರಗಳಂತೆ ಬರುವ ಪಾತ್ರಗಳು ಹಿಡಿಂಬಾ, ಹಿಡಿಂಬಿಯರದ್ದು. ಮಹಭಾರತದ ಪ್ರಕಾರ ಇವರು ರಾಕ್ಷಸ ಕುಲದವರು. (ಮಹಭಾರತದ ಪ್ರಕಾರ ಶ್ರೀ ಲಂಕೆಯವರೂ ರಾಕ್ಷಸ ಕುಲ. ದಕ್ಷಿಣ ಭಾರತದವರು ವಾನರ ಕುಲಆದರೆ ಸ್ಥಳೀಯ ಸಂಸ್ಕøತಿಯವರಿಗೆ ಆಕೆ ಶಕ್ತಿ ದೇವತೆ. ದುರ್ಗೆಗಿಂತಲೂ ಮಿಗಿಲು. ಮಹಾಭಾರತದ ಆಧಾರದಿಂದ ನಾವೆಲ್ಲಾ ಆಕೆಯನ್ನು ಹಿಡಿಂಬಾ ಎನ್ನುತ್ತೇವೆ. ಆದರೆ ಸ್ಥಳಿಯರು ಆಕೆಯನ್ನುಹಡಿಂಬಾ ದೇವಿಎಂದು ಕರೆಯುತ್ತಾರೆ. ಹಿಮ ಪರ್ವತಗಳಿಂದ ಚಿಮ್ಮಿ ಬಂದ ನೀರಿನೊಂದಿಗೆ ಬಿಯಾಸ್ (ನದಿ) ಇಲ್ಲಿ ರಭಸದಿಂದ ಮುನ್ನುಗ್ಗುತ್ತಾಳೆ.  ಬಿಯಾಸ್ ನದಿಯ ಎಡ ದಂಡೆಯ ವಿಹಾರ ಕಾನನದಲ್ಲಿ ದಕ್ಷಿಣ ಕನ್ನಡದ ಗುಡ್ಡೆಯ ಭೂತದ ಸ್ಥಾನ (ಗುಡಿ)ಗಳನ್ನು ಹೋಲುವ ಸುಮಾರು 24 ಮೀಟರ್ ಎತ್ತರ ಹಾಗೂ 3 ಚದರ ಮೀಟರ್ ಅಗಲದ ಚೌಕ ಮಂಟಪ ರೀತಿಯ ಗುಡಿ ಇದೆ. ಪಗೋಡಾ ಮಾದರಿಯ ಸುಂದರವಾದ ಗುಡಿ ಇದು. ಶಿಖರ ಸೇರಿ 4 ನೆಲೆಗಳಲ್ಲಿ ಇರುವ ಗುಡಿಯ ಮಾಡು ಇಳಿಜಾರಾಗಿದ್ದು ತುದಿಯ ಶಿಖರ ಅಧರ ತೆರೆದ ಕೆಳ ಮುಖವಾಗಿ ಹಿಡಿದ ಛತ್ರಿಯಂತೆ ಇದೆ. ಮಾಡಿನ ಮೂರು ನೆಲೆಗಳನ್ನು ಮರದ ಹೆಂಚುಗಳಿಂದ ಜೋಡಿಸಲಾಗಿದೆ. ನಾಲ್ಕು ನೆಲೆಗಳ ಮಧ್ಯೆ ಮೂರು ಮರದ ಗವಾಕ್ಷಗಳಿವೆ. ಇದು ತುಳುನಾಡಿನ ಹಳೆಯ ಕಾಲದ ಭೂತಗಳ ಗುಡಿಗಳ ಮತ್ತು  ಕೇರಳದಲ್ಲಿ ಇರುವ ದೇವಸ್ಥಾನ ತೈವಂ ಸ್ಥಾನಗಳ ಮಾದರಿಯಲ್ಲಿದೆ.   ಹೊರ ಚಾಚಿರುವ ಮರದ ಗವಾಕ್ಷ ಗುಡಿಯ ಸುತ್ತಲೂ ಇವೆ. ಇದರ ಮೇಲಿನ ನೆಲೆ ಕೋನದ ಆಕಾರದಲ್ಲಿ ಇದೆ.  ಹಿಮಪಾತವಾದಾಗ ಹಿಮ ಇಳಿದು ಹೋಗಲು ಇಂತಹ ಮಾಡನ್ನು ರಚಿಸುತ್ತಾರೆ. ತುತ್ತ ತುದಿಯಲ್ಲಿ ಒಂದರ ಮೇಲೊಂದರಂತೆ ಕಲಶಗಳಿವೆ.

ಇದರ ಗೋಡೆಗಳು ಮಣ್ಣಿನಿಂದ ರಚನೆಯಾಗಿವೆ. ಗೋಡೆಗಳಿಗೆ ಸುಣ್ಣ ಲೇಪಿಸಿದ್ದಾರೆ. ಅದರ ಮೇಲೆ ಮರದ ರೀಪುಗಳನ್ನು  ಅಡ್ಡಕ್ಕೆ ಮತ್ತು ಉದ್ದಕ್ಕೆ ಅಲ್ಲಲ್ಲಿ ಜೋಡಿಸಿದ್ದಾರೆ. ಬಾಗಿಲು ಮತ್ತು ಮುಂಭಾಗದ ಗೋಡೆಗೆ ಮರದ ಸುಂದರ ಕೆತ್ತನೆಯ ಅಲಂಕಾರ ಇದೆ. ಎಡ ದಿಕ್ಕಿನ ಗೋಡೆಗೆ ಒಂದು ಮರದ ಕಿಟಿಕಿ ಇದೆ.
  ಗುಡಿಯ ಸುತ್ತಲೂ ಸುಮಾರು 4 ಅಡಿ ಅಗಲದ ಜಗಲಿ ಇದೆ. ಆದರೆ ಇದು ಪ್ರದಕ್ಷಿಣಾ ಪಥ ಅಲ್ಲ.  ಪ್ರದಕ್ಷಿಣೆಯ ಪದ್ಧತಿ ಇಲ್ಲಿ ಇಲ್ಲ. (ತುಳುನಾಡಿನಲ್ಲಿ ಭೂತದ ಗುಡಿಗಳಿಗೂ ಪ್ರದಕ್ಷಿಣಾ ಪಥ ಇಲ್ಲ. ಜನಪದದಲ್ಲಿ ಪ್ರದಕ್ಷಿಣೆಯ ಪದ್ಧತಿ ಇಲ್ಲ)  ಜಗಲಿಯ ಮೇಲೆ ಅಲ್ಲಲ್ಲಿ ಇರುವ ಮರದ ಕಂಬಗಳು ಮಾಡಿನ ಇಳಿಜಾರಿಗೆ ಆಧಾರ ಒದಗಿಸಿವೆ. ಕೋಣೆಯ ಒಳಗೂ ಹೊರಗೂ ಗೋಡೆಗಳ ಮೇಲೆ ಕಾಡುಮೃಗಗಳ ವಿಭಿನ್ನ ಕೊಂಬುಗಳನ್ನು ಅಲಂಕರಿಸಿದ್ದಾರೆ.  ವಿಶಿಷ್ಟ ವಾಸ್ತು ರಚನೆಯ ನೆಲದ ಪರಂಪರೆಯ ಹಡಿಂಬಾಗುಡಿಯನ್ನು ಕ್ರಿ..1553 ರಲ್ಲಿ ಕುಲು ಮನಾಲಿಯ ಅರಸ, ಮಹಾರಾಜ ಬಹದ್ದೂರು ಸಿಂಗ್ ನಿರ್ಮಿಸಿದ್ದ. ಅದರ ಮೊದಲು ಗುಡಿ ಇದ್ದಿರಲಾರದು.... ಉಪಾಸನೆ ಇದ್ದಿರಬಹುದು. ಘಟೋತ್ಕಚನಂತೆ ಕ್ಷೇತ್ರ ಮಾತ್ರ ಇದ್ದಿರಬಹುದು.
ಪುಟ್ಟ ಕೋಣೆಯ ಒಳಗೆ ಬಾಗಿಲ ಬಳಿ ಒಂದಿಬ್ಬರು ನಿಂತುಕೊಳ್ಳುವಷ್ಟು ಮಾತ್ರ ಜಾಗ ಇದೆ. ಅಲ್ಲೇ 5 ಅಡಿ ಉದ್ದ 3 ಅಡಿ ಅಗಲದ ಶಿಲಾ ತೊಟ್ಟಿಲು, ಒಂದುವರೆ ಅಡಿ ಆಳಕ್ಕೆ ಭೂಮಿಯೊಳಗೆ ಹುದುಗಿದೆ. ಒಬ್ಬ ಮನುಷ್ಯ ಮಲಗಬಹುದಾದ, ಶಿಲೆಯನ್ನು ಕೊರೆದು ಮಾಡಿದ ತೊಟ್ಟಿಲಿನಂತೆ ಇದೆ. ಪ್ರಕೃತಿ ಸಹಜ ಶಿಲಾ ತೊಟ್ಟಿಲು. ಆಶ್ಚರ್ಯ ಎಂದರೆ ಇದಕ್ಕೆ ಶಿಲಾ ಮುಚ್ಚಳವೂ ಇದೆ. ಕಬ್ಬಿಣದ ಪೆಟ್ಟಿಗೆ- ಪತ್ತಾರ (ತುಳುನಾಡಿನ ಕಲೆಂಬಿ)ದಂತೆ ಇರುವ ತೊಟ್ಟಿಲಿನ ಬಾಗಿಲನ್ನು ಕಾಲಿನ (ಉತ್ತರದ) ಕಡೆಯಿಂದ ಎತ್ತಿ ಹಿಡಿದಂತೆ ಇದೆ. ಇದರ ದಕ್ಷಿಣಭಾಗ (ತಲೆಯ ಭಾಗ) ಗೋಡೆಯವರೆಗೆ ತಾಗಿದೆ. ಶಿಲಾ ತೊಟ್ಟಿಲ ಮಧ್ಯದಲ್ಲಿ ಜೋಡಿ ಶಿಲಾ ಪಾದಗಳಿವೆ. ಇದುಹಡಿಂಬಾ ದೇವಿ ಪಾದ ಎನ್ನುತ್ತಾರೆ. ಶಿಲಾ ತೊಟ್ಟಿಲಿನ ತಲೆಯ ಬಾಗದಲ್ಲಿ  ‘ಹಡಿಂಬಾದೇವಿಯ ಹಿತ್ತಾಳೆಯ ಮುಖವಾಡÀ ಇದೆ. ಅಲ್ಲೇ ಬಳಿ ಗಣಪತಿಯ ಹಿತ್ತಾಳೆಯ ಪುಟ್ಟ ಶಿಲ್ಪ ಇದೆ. ಶಿಲಾ ತೊಟ್ಟಿಲಿನÀ ಉದ್ದಕ್ಕೂ ಮೇಲ್ಭಾಗದಲ್ಲೂ ಇರುವ ಶಿಲಾ ಹಾಸು ತೊಟ್ಟಿಲಿನ ಮುಚ್ಚಳದಂತೆ ಕಾಣುತ್ತದೆ. ತಲೆಗೆ ಶಿಲೆ ತಗುಲ ಬಹುದೆಂಬ ಎಚ್ಚರಿಕೆ ವಹಿಸಿ ಬಗ್ಗಿ ತೊಟ್ಟಿಲಿಗೆ ಇಳಿಯಬಹುದು. ‘ಹಡಿಂಬಾ ದೇವಿಗೆ ಪ್ರಣಾಮ ಮಾಡಿ ಜಾಗರೂಕತೆಯಿಂದ ತಲೆ ಎತ್ತದೆ ಬಗ್ಗಿ ಮೇಲೆ ಬರಬಹುದು. ಇಲ್ಲವಾದಲ್ಲಿ ನೆತ್ತಿಯ ಮೇಲಿನ ಶಿಲೆಯು ನಮ್ಮ ತಲೆಯನ್ನು ಒಡೆಯ ಬಹದು. ನಾನು ಮೇಲೆ ಹತ್ತುವಾಗ ಹೆಗ್ಗಡೆಯವರು ಎಚ್ಚರಿಕೆ ನೀಡುತ್ತಿದ್ದರು. ಶಿಲಾ ತೊಟ್ಟಿಲಿನ ಆಚೆ, ಕೋಣೆಯ ಒಳಗೆ ಗೋಡೆಯ ಬಳಿ ಮಹಿಷ ಮರ್ದಿನಿಯ ಪುರಾತನ ಲೋಹ ಶಿಲ್ಪ ಇದೆ. ತೊಟ್ಟಿಲಿನ ಬಲಕ್ಕೆ (ಕಾಲಿನ ಭಾಗದಲಿ) ಇರುವ ಶಿಲೆಯ ಶಿಖರ  ಭೂಮಿಯಿಂದ ಎರಡಡಿ ಎತ್ತರಕ್ಕೆ ಎದ್ದಿದೆ. ಎತ್ತರದ ಶಿಖರದಲ್ಲಿ ಒಂದು ಬಿಲ ಇದೆ. ಇಲ್ಲಿ ಕುಳಿತ ಪೂಜಾರಿ ದಂಪತಿಗಳು ಬಿಲದ ಆಳ ಗೊತ್ತಿಲ್ಲ ಎಂದರು. ನಾವು ಫೋಟೋ ತೆಗೆಯಲು ಅವಕಾಶ ಅವರು ನೀಡಲಿಲ್ಲ.

ಹಲಾವಾರು ಮೆಟ್ಟಲುಗಳ ಎತ್ತರದ ಅಧಿಷ್ಟಾನದ ಮೇಲೆ ಇರುವಹಡಿಂಬಾಗುಡಿಯ ಮುಂದೆ ರಕ್ತದ ಕೋಡಿ ಹರಿದ ಕಲೆಗಳಿದ್ದುವು. ವಿಚಾರಿಸಲಾಗಿ ರಾತ್ರಿ ಇಡೀ ಪ್ರಾಣಿ ಬಲಿ ನಡೆದ ವಿಚಾರ ತಿಳಿಯಿತು. ನಿಷೇಧಿತ ದಿನಗಳಲ್ಲಿ ಉಳಿದು  ಇತರೆ ದಿನಗಳಲ್ಲಿ ಹೆಚ್ಚೂ ಕಡಿಮೆ ಪ್ರತಿ ರಾತ್ರಿ ಪ್ರಾಣಿ ಬಲಿ ನಡೆಯುತ್ತದೆ. (ನನ್ನ ಊರಲ್ಲಿ ಗುಳಿಗನಿಗೆ ಕೋಳಿಯ ಅಗೆಲ್ ನಡೆಯುವಂತೆ.) ಹೆಚ್ಚಾಗಿ ಕಾಡು ಮೃಗಗಳನ್ನು ಬಲಿಕೊಡುತ್ತಾರೆ. ಬಲಿಕೊಡುವಾಗ ರಕ್ತವನ್ನು ಶೇಖರಿಸಲಾಗುತ್ತದೆ. ಹಾಗೆ ಶೇಖರಿಸಿದ ರಕ್ತವನ್ನು ಗುಡಿಯ ಒಳಗೆ ಇರುವ ಶಿಲಾ ಬಿಲದ ಒಳಗೆ ಸುರಿಯುತ್ತಾರೆ. ಎಷ್ಟು ರಕ್ತ ಸುರಿದರೂ ಬಿಲ ತುಂಬುವುದಿಲ್ಲ ಎಂದು ಆಶ್ಚರ್ಯ ಹುಟ್ಟಿಸುತ್ತಾರೆ. (ಉಡುಪಿಯ ಬಳಿಯ ಉದ್ಯಾವರದ ಶಂಬುಕಲ್ಲು ಬಳಿ, ದೇವಿಯ ಶ್ರೀ ಗಂಧದ ಶಿಲ್ಪ ಇರುವ ಮಂದಿರ ಇದೆ. ಹೊರಾಂಗಣದಲ್ಲಿ ಚಾಮುಂಡಾಳ ಶಿಲ್ಪ ಇದೆ. ಶಿಲ್ಪದಲ್ಲಿ ಒಂದು ಬಿಲ ಇದೆ. ಚಾಮುಂಡಾಳಿಗೆ ನೀಡಿದ ಬಲಿಯ ರಕ್ತವನ್ನು ಬಿಲದೊಳಗೆ ಸುರಿಯುವುದು ಪದ್ಧತಿಯಂತೆ) ಬಲಿ ನೀಡಿದ ಪ್ರಾಣಿಗಳ ಕೊಂಬುಗಳಿಂದ ಗುಡಿಯ ಗೋಡೆಯನ್ನು ಅಲಂಕರಿಸಿದ್ದಾರೆ.   ಗುಡಿ ಕುಲು ಮನಾಲಿಯ ಅಧಿ ದೇವತೆ, ಆಳರಸರ ರಾಜ್ಯಾಧಿದೇವತೆಹಡಿಂಬಾ ದೇವಿ ಮಾಎಂಬ ಶಕ್ತಿ ದೇವತೆಯದ್ದು,

ಗುಡಿಯ ಆಚೆ ಇರುವ ಬೃಹತ್ ದೇವದಾರು ಮರದ ಬುಡದಲ್ಲಿ ಸ್ತ್ರೀ ಮತ್ತು ಪುರುಷ ಮುಖವಾಡ ಇದೆ. ಇತರ ಅನೇಕ ವಸ್ತುಗಳಿವೆ. ಇಲ್ಲೂ ರಕ್ತ ಬಲಿ ನಡೆಯುತ್ತದೆ. ಬಲಿ ನೀಡಿದ ಪ್ರಾಣಿಗಳ ಕೊಂಬುಗಳನ್ನು ಅದೇ ಮರದಲ್ಲಿ ಅಲಂಕರಿಸಿದ್ದಾರೆ. ಮರದಡಿಯಲ್ಲಿ ನಡೆಯುತ್ತಿರುವ ಆರಾಧನೆ ಹಡಿಂಬಾ ದೇವಿಯ ಮಗ ಘಟೋತ್ಕಜನಿಗೆ.
ಗುಡಿಯ ಒಳಗಿನ ಶಿಲಾ ತೊಟ್ಟಿಲಿನಲ್ಲಿ ಕುಳಿತುಹಡಿಂಬೆತಪ್ಪಸ್ಸು ಮಾಡಿ ದುರ್ಗೆಯ ಸ್ಥಾನಪಡೆದಳು ಎನ್ನುವುದು ಇಲ್ಲಿ ನಂಬಿಕೊಂಡು ಬಂದ ಕಥೆ. ಸ್ಥಳೀಯ ಭಾಷೆಯಲ್ಲಿ ಶಿಲೆಯನ್ನು DOONGERಎನ್ನುತ್ತಾರೆ. ಹೀಗಾಗಿ ದೇವಸ್ಥಾನವನ್ನುದುಂಗ್ರಿ ದೇವಳಎಂದೂ ಕರೆಯುತ್ತಾರೆ.
 ಪ್ರತಿ ವರುಷ ಮೇ ತಿಂಗಳ ಸುಮಾರಿಗೆ ಕುಲುಮನಾಲಿಯ ಜಾತ್ರೆ ನಡೆಯುತ್ತದೆ. ಆಗ ಕುಲುಮನಾಲಿಯ ಎಲ್ಲಾ ದೇವಸ್ಥಾನಗಳ ದೇವಾದಿ ದೇವತೆಗಳ ಉತ್ಸವ ಮೂರ್ತಿಗಳು ಒಂದೇ ಸ್ಥಳದಲ್ಲಿ ಸೇರುತ್ತವೆ. ಇವುಗಳಲ್ಲಿ ವೈದಿಕ ಮತ್ತು ಜನಪದ ದೇವಿ ದೇವರುಗಳು ಸೇರುತ್ತಾರೆ. ಅವುಗಳಿಗೆಲ್ಲ ಅಧಿದೇವತೆಯಾಗಿಹಡಿಂಬಾ ದೇವಿಅಗ್ರ ಪೂಜೆ ಪಡೆಯುತ್ತಾಳೆ.
ಹಿಂಧೂ ಧರ್ಮದ ವೈದಿಕ ಪದ್ಧತಿಯ ಪರಿಚಯ ಭಾರತದ ಅನೇಕ ಜನರಿಗೆ ಇವತ್ತಿಗೂ ಇಲ್ಲ. ಪರಿಚಯ ಆದವರೂ ಹೆಚ್ಚಿನ ಕಡೆ ಪರಂಪರೆಯ ಆಚರಣೆಗಳನ್ನು ತೊರೆಯಲು ಸಿದ್ಧರಿಲ್ಲ. ಭಾರತೀಯರು ಪರಂಪರೆಯಿಂದ ಆಚರಿಸಿಕೊಂಡು ಬಂದಂತಹ ವೈವಿಧ್ಯಪೂರ್ಣ ಜನಪದ ಧರ್ಮದಲ್ಲಿ ಜನತೆ ಈಗಲೂ ನಂಬಿಕೆ ಇಟ್ಟುಕೊಂಡಿದ್ದಾರೆ. ಜನಪದ ಧರ್ಮದ ವಾರ್ಷಿಕ ಜಾತ್ರೆಗಳು ಮತ ಧರ್ಮವನ್ನು ಹೊರಗಿಟ್ಟು, ಮತರಹಿತ ಸಮಾಜದ, (ಇವು ಮತ ಪ್ರವರ್ತಕ ಪ್ರವಾದಿಗಳು ಹುಟ್ಟುವ ಮೊದಲೇ ಇದ್ದ ಆದಿ ಸಂಸ್ಕøತಿ ಆದ್ದರಿಂದ) ಒಟ್ಟು ಜನತೆಯ ಸೌಖ್ಯ, ನೆಮ್ಮದಿಯನ್ನು ಗಮನದಲ್ಲಿ ಇರಿಸಿಕೊಂಡು ಆಚರಣೆಗೆ ಬಂದಿವೆ. ಅದಕ್ಕೆ ಹೇಳುವುದು ಹಿಂದೂ ಧರ್ಮ ಎನ್ನುವುದುನೆಲದ ಸಂಸ್ಕøತಿಎಂದು. ಇಂತಹ ಜನಪದ ಪರಂಪರೆಗಳು ವೇದಗಳ ಆಧಾರದ ಮೇಲೆ ನಿರ್ಭರವಾಗಿಲ್ಲ. ಅಂತಹ ಒಂದು ಸಂಸ್ಕøತಿ ಹಡಿಂಬಾ ದೇವತೆಯ ಆರಾಧಕರದ್ದು. ಇದು ಮನಾಲಿಯ ನೆಲದ ಸಂಸ್ಕøತಿ. ತುಳುನಾಡಿನ ಭೂತಾರಾಧನೆಯೂ ಇಂತಹುದೇ ಒಂದು ನೆಲದ ಸಂಸ್ಕøತಿ.


ಇಲ್ಲಿ ಹೊಳೆಯುವ ಬಿಳಿ ಕೂದಲಿನ ಚಮರೀ ಮೃಗವನ್ನು ಕಂಡೆವು. ನಾವು ಸಿಮ್ಲಾದಲ್ಲಿ ಕಂಡಿದ್ದು ಕರಿ ಕೂದಲಿನ ಚಮರೀ ಮೃಗವನ್ನು. ಚಮರೀ ಮೃಗ  ಪ್ರವಾಸಿಗರ ಮನರಂಜನೆಗಾಗಿ ಇಲ್ಲಿತ್ತು. ಇದರ ಬಾಲವು ಆಕರ್ಷಕವಾಗಿದೆ. ವಿದೇಶಿ ಪ್ರವಾಸಿಗರ ಪ್ರಕಾರ ಪ್ರಾಣಿಗಳು ಬೇಟೆಗಾರರನ್ನು ಕಂಡಾಕ್ಷಣ ಓಡಿ ಹೋಗಿ ಪೊದೆಯ ಮರೆಯಲ್ಲಿ ತನ್ನ ಬಾಲವನ್ನು ಅಡಗಿಸಿಟ್ಟು ಪಿಳಿ ಪಿಳಿ ಕಣ್ಣು ಬಿಟ್ಟು ಬೇಟೆಗಾರರನ್ನು ನೋಡುತ್ತಾ ಅವರ ಬಾಣಗಳಿಗೆ ಬಲಿಯಾಗುತ್ತಿತ್ತಂತೆ. ಪಾಪ ಅದು ತನ್ನ ಸುಂದರ ಕೂದಲಿನ ಬಾಲವನ್ನು ಅಡಗಿಸಿಟ್ಟರೆ ಇವರು ತನ್ನನ್ನು ಬಿಟ್ಟು ಬಿಡುತ್ತಾರೆ ಎಂದು ಭಾವಿಸಿರುವಂತಿದೆ ಮುಗ್ದ ಪ್ರಾಣಿ.

ವಸ್ತು ಪ್ರದರ್ಶನಾಲಯ: ಮನಾಲಿಯ ಹಡಿಂಬಾ ಗುಡಿಯ ಬಳಿ ಮನಾಲಿ ವಸ್ತುಪ್ರದರ್ಶನಾಲಯ ಇದೆ. ಇಲ್ಲಿ ಮನಾಲಿ ಸಂಸ್ಕøತಿಯ, ಜನಪದ ಸಂಸ್ಕøತಿಯ ನೃತ್ಯಗಳ ವಿಭಿನ್ನ ಛಾಯಾ ಚಿತ್ರಗಳಿವೆ.
ಮರದ ಕಲಾತ್ಮಕ ಕಂಬಗಳಿವೆ. ಮರದ ಮರಿಗೆಗಳು ತುಳುನಾಡಿನ ಮರಿಗೆಗಳನ್ನು ಹೋಲುತ್ತವೆ. ಬೆಂಕಿ ಹೊತ್ತಿಸುವ ಕಲ್ಲು, ರಾಟೆ, ಬೀಸುವ ಕಲ್ಲು ಹಿತ್ತಾಳೆಯ ಪಾತ್ರೆಗಳು, ಡಬರಿಗಳು, ಬೆತ್ತದ ಸರಕುಗಳು, ನಮ್ಮೂರಿನಲ್ಲಿರುವ ಕೊಂಬು, ನಾಗ ಸ್ವರ, ಮುಖವಾಡದ ಅಲಂಕೃತ ದೇವಿ, ಕನ್ನಡ ಕರಾವಳಿಗಿಂತಲೂ ಸುಂದರವಾದ ಮರದ ಬಾಗಿಲ ಚೌಕಟ್ಟು, ಇತ್ಯಾದಿ ಅನೇಕ ಸಾಮಾಗ್ರಿಗಳಿವೆ.  
ನಮ್ಮ ಮುಂದಿನ ನಡಿಗೆ ಮನಾಲಿ ಬಜಾರಿನ ಕೆಳಭಾಗದಲ್ಲಿ ಇರುವ ಟಿಬೆಟ್ ವಜ್ರಾಯಾನ ಸಂಪ್ರದಾಯದ ಬುದ್ಧ ಮಂದಿರಕ್ಕೆ.

ಬೌದ್ಧ ಮಂದಿರ: ಇಲ್ಲಿ ಟಿಬೆಟ್ಟಿಯನ್ನರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಅವರು 1969ರಲ್ಲಿ ಇದನ್ನು ನಿರ್ಮಿಸಿದರು  ಇಲ್ಲಿಯ ವೈಶಿಷ್ಟ್ಯ ಎಂದರೆ ಗಿರಗಿಟದಂತೆ ಸುತ್ತುವ ಪುಟ್ಟ ಪುಟ್ಟ ಡ್ರಮ್ಗಳು. ಡ್ರಮ್ಗಳನ್ನುPreyaer Wheel ಎನ್ನುತ್ತಾರೆ. ದೇವಾಲಯಕ್ಕೆ ಪ್ರದಕ್ಷಿಣೆ ಹಾಕುತ್ತಾ ಇಲ್ಲಿ ಜೋಡಿಸಿರುವ ಡ್ರಮ್ಗಳನ್ನು ತಿರುವುತ್ತಾ ನಡೆದರೆ ಸುಶ್ರಾವ್ಯ ನಾದ ಹೊಮ್ಮುತ್ತದೆ. ಡ್ರಮ್ ಒಳಗೆ ಎಲ್ಲಾ ಬೌದ್ಧ ಮಂತ್ರಗಳನ್ನು ಹಾಕಲಾಗಿದೆಯೆಂತೆ. ನಾವು ಇವುಗಳನ್ನು ಉರುಳಿಸಿದರೆ ಆಗುವ ಅನುರಣಕ್ಕೆ ಮಂತ್ರ ಉಚ್ಛರಿಸಿದಂತೆ ಆಗುತ್ತದೆ ಎಂದರು ಬಿಕ್ಕುವೊಟ್ಟರು. ಇನ್ನೊಂದು ಕೋಣೆಯಲ್ಲಿ ಸುಮಾರು 10 ಅಡಿ ಎತ್ತರದ ಡ್ರಮ್ಮನ್ನು (ಪ್ರಾರ್ಥನಾ ಚಕ್ರ) ನೆಲ ಬಿಟ್ಟು ನೆಟ್ಟಗೆ ಜೋಡಿಸಿದ್ದರು. ಇದನ್ನು ತಿರುಗಿಸಿದರೆ ಜೋರಾದ ಶುಶ್ರಾವ್ಯ ನಾದ ಹೊಮ್ಮುತ್ತದೆ.

ಬುದ್ಧ ಧರ್ಮಕ್ಕೆ ಸಂಬಂಧಿಸಿದ ಅನೇಕ ವಿಗ್ರಹಗಳು ಇಲ್ಲಿವೆ. ಭೂಮಿ ಸ್ಪರ್ಶಾ ಮುದ್ರೆಯಲ್ಲಿ ಇರುವ ಬುದ್ಧನ ಪ್ರಧಾನ ಶಿಲ್ಪಕ್ಕೆ ಚಿನ್ನದ ಬಣ್ಣ ಇದೆ. ಐದು ತಲೆಬುರುಡೆಗಳ ಕಿರೀಟ ಧರಿಸಿದ ಶಿಲ್ಪದ ಕೈಯಲ್ಲೂ ತುದಿಯಲ್ಲಿ ತಲೆಬುರುಡೆ ಇರುವ ಕೋಲು ಇತ್ತು. ಇದು ಪದ್ಮ ಸಂಭವನ ರೂಪಗಳಲ್ಲಿ ಒಂದು. ಇನ್ನೊಂದು ಆತನ ಶಿಲ್ಪ ಸುಂದರವಾಗಿದೆ. ಅವನ ಬೇರೆ ಬೇರೆ ರೂಪಗಳ ಶಿಲ್ಪ ಮತ್ತು ಭಿತ್ತಿ ಚಿತ್ರಗಳು ಇಲ್ಲಿ ಇವೆ. ಇಲ್ಲಿ ಬೌದ್ಧ ಗುರು ದಲೈಲಾಮನ ಫೋಟೋವನ್ನು ಪೂಜಿಸಲಾಗುತ್ತಿದೆ. ಒಬ್ಬ ಬಿಕ್ಕು ನಮಗೆ ಕೆಲವನ್ನು ವಿವರಿಸಿದರಾದರೂ ಬೆಂಗಳೂರಿಗೆ ಬಂದಾಗ ಯಾವುದೂ ನೆನಪಿನಲ್ಲಿ ಉಳಿಯಲಿಲ್ಲ.
ಮಧ್ಯೆ ತನಗೆ ಸಿಮ್ಲಾಕ್ಕೆ ಮರಳಲು ಗ್ರಾಹಕರು ಸಿಕ್ಕಿರುವರೆಂದು ಹೇಳಿ ನಮ್ಮನ್ನು ದೆಹಲಿಗೆ ಹೋಗುವ ಬಸ್ಸು ನಿಲ್ದಾಣಕ್ಕೆ ಹೋಗುವ ಮತ್ತು ಹೊಟೇಲಿಗೆ ಮರಳಲು ವ್ಯವಸ್ಥೆ ಮಾಡಿ ಸರ್ದಾರ್ ಜೀ -ಪಪ್ಪು ಡ್ರೈವರ್ ಹೊರಟು ಹೋದ. ನಾವೂಕೋಯಿ ಚಿಂತಾ ನಹೀಎನ್ನುತ್ತಾ ಆತನನ್ನು ಬೀಳ್ಕೊಟ್ಟೆವು. ಹೀಗಾಗಿ ನಾವು ಅಟೋ ಮಾಡಿ ಹೊಟೇಲಿಗೆ ಮರಳಿದೆವು.  ಹೊಟೇಲಿನಿಂದ 5 ಗಂಟೆಗೆ ಬಸ್ ನಿಲ್ದಾಣ ತಲುಪಿದೆವು.
ಮನಾಲಿಗೆ ರೈಲು ಅಗಲೀ ವಿಮಾನವಾಗಲೀ ಇಲ್ಲ. ಎಲ್ಲರಿಗೂ ಬಸ್ಸು ಅಥವಾ ಕಾರು ಗತಿ. ನಮ್ಮ ಬಸ್ಸು ಬಿಯಾಸ್ ನದಿಯ ಕಣಿವೆ ಮಾರ್ಗದಲ್ಲಿ ಮುಂದುವರಿದಿತ್ತು. ಮಳೆಗಾಲದಲ್ಲಿ ತುಂಬಿ ಹರಿವ ಬಿಯಾಸ್ ಈಗ ಒಂದು ಭಾಗದಲ್ಲಿ ಮಾತ್ರ ಹರಿಯುತ್ತಿರುವುದರಿಂದ ನದಿ ಪಾತ್ರದಲ್ಲಿ ಅನೇಕ ಲಾರಿಗಳು ನಿಂತಿದ್ದುವು. ನದಿಯ ಭಾಗ ಈರುಳ್ಳಿ ಮಂಡಿಯಂತೆ. ಮನಾಲಿಯ ಬಳಿ ಬಿಯಾಸ್ ಪರ್ವತ ಕಣಿವೆಗಳ ಇಕ್ಕಟ್ಟಾದ ದಾರಿಯನ್ನು ಹುಡುಕಿ ಹರಿಯುವುದರಿಂದ ಭಾಗದಲ್ಲಿ ನದಿಯ ಇಕ್ಕಲೆಗಳಲ್ಲಿ ಬೆಳೆತೆಗೆಯಲು ಸಮತಟ್ಟು ಭೂಮಿ ಇಲ್ಲ.
ಕತ್ತಲಾದಂತೆ ನದಿಯ ದಂಡೆಯ ಮೇಲಿನ ಪರ್ವತ ಶಿಖರಗಳಲ್ಲಿ ಕಾಣುವ ಮಿಣುಕು ಬೆಳಕು ಪರಿಸರವನ್ನು ಆಕರ್ಷಕಗೊಳಿಸಿತ್ತು. ಅಷ್ಟೆತ್ತರಕ್ಕೂ ವಿದ್ಯುದ್ದೀಪಗಳ ವ್ಯವಸ್ಥೆ ಮಾಡಿದ್ದೇ ನಮಗೆ ಆಶ್ಚರ್ಯವಾಯಿತು.
ಸುಮಾರು ಹತ್ತು ಗಂಟೆಯ ಹೊತ್ತಿಗೆ ನಮ್ಮ ಬಸ್ಸನ್ನು ನಿಲ್ಲಿಸಿ ಊಟ ಮಾಡಲು ಡ್ರೈವರ್ ಸೂಚಿಸಿದ. ನಾನು ಮೊದಲೇ ಹೇಳಿದಂತೆ ಮನಾಲಿಗೆ ಬಂದವರು ಯುವ ಜೋಡಿಗಳೇ. ಊಟದ ಹೊಟೇಲಿನವರು ಅಷ್ಟು ಮಂದಿಗೆ ಊಟ ನೀಡಲು ಪರದಾಡಿದರು. ಎಲ್ಲರಿಗೂ ಹಸಿವಾಗಿತ್ತು. ಅಲ್ಲಿ ತಿನ್ನುವಂತಹುದು ಇದ್ದುದು ಅವರ ರೋಟಿ ಮಾತ್ರ.. ಎಲ್ಲರೂರೋಟಿ ರೋಟಿಎಂದರೂ ಎಲ್ಲರಿಗೂ ರೋಟಿ ಕೊಡಲು ಹೊಟೇಲ್ನವನಿಂದ ಸಾಧ್ಯವಾಗಲಿಲ್ಲ. ಆದರೆ ಎಲ್ಲರಿಗೂ ಹಸಿವಾಗಿತ್ತು. ನಮ್ಮ ಪಕ್ಕದ ಮೇಜಿನಲ್ಲಿ ಕುಳಿತ ಯುವ ದಂಪತಿಗಳಲ್ಲಿ, ಗಂಡ ಬಾಯಿ ಮುಚ್ಚಿ ಕುಳಿತಿದ್ದ. ಹೆಂಡತಿವಟ ವಟ ವಟಎಂದು ಕಪ್ಪೆಯಂತೆ ವಟಗುಟ್ಟುತ್ತಿದ್ದಳು
 ಅವಳ ಮದುಮಗರೊಟ್ಟಿ ರೊಟ್ಟಿಎಂದರೂ ಅವನತ್ತ ಯಾರೂ ಮುಖ ಮಾಡಲಿಲ್ಲ. ಬಸ್ಸು ಹೊರಡುವ ವೇಳೆ ಆಯಿತು ಎಂದು ಅವರು ಎದ್ದು ಹೊರಟರು. ನನ್ನ ಮದುಮಗ, ಹೆಗ್ಗಡೆಯವರು ರೊಟ್ಟಿ ತಿನ್ನುತ್ತಾ ಇದ್ದವರು ನನ್ನ ಪಾಲಿನ ರೊಟ್ಟಿಯನ್ನೂ ಗಬ ಗಬನೇ ತಿಂದಾಗ ನನಗೆ ಅಚ್ಚರಿ. ನಾನು ಬೆರಗಿನಲ್ಲಿ ಇರುವಾಗಲೇ ಹೆಗ್ಗಡೆಯವರು ಜೋಡಿಯ ಹಿಂದೆ ಓಡಬೇಕೆ? ನನಗೆ ನನ್ನ ಪಾಲಿನ ರೊಟ್ಟಿಯನ್ನೂ ತಿಂದು ಓಡಿದರು ಎಂದು ಸಿಟ್ಟು. ಜೋಡಿಗಳನ್ನು ಮರಳಿ ಕರೆತಂದು ಅವರನ್ನು ಕೂರಿಸಿ ಅವರಿಗೆ ರೊಟ್ಟಿ ಕೊಡಿಸಿ ಬಸ್ ಡ್ರೈವರಿಗೆ ಅವರು ರೊಟ್ಟಿ ತಿನ್ನುವವರೆಗೆ ಇರಲು ಸೂಚಿಸಿದರು ಹೆಗ್ಗಡೆಯವರು. ಇದೆನ್ನೆಲ್ಲ ಗಮನಿಸಿದ ನಾನುನಿಮ್ಮ ಹೆಂಡತಿ ರೊಟ್ಟಿ ತಿಂದಳೋ ಇಲ್ಲವೋ ಎಂದು ನಿಮಗೆ ತಿಳಿದಿಲ್ಲ. ಹುಡುಗಿಯ ಬಗ್ಗೆ ಯಾಕಷ್ಟು ಕಾಳಜಿ? ಎಂದೆ.” ನಿನ್ನ ರೊಟ್ಟಿ ನಾನು ತಿಂದುದನ್ನು ಗಮನಿಸಲಿಲ್ಲ. ಆದರೆ ಹುಡುಗಿ ಕನ್ನಡದಲ್ಲಿ ಗಂಡನಿಗೆ ಬೈಯುತ್ತಿತ್ತು. ನಾನು ಅವರನ್ನೇ ಗಮನಿಸುತ್ತಿದ್ದೆ ಎನ್ನಬೇಕೆ? ‘ಪಾಪ ಮಕ್ಕಳು ಅವರು. ಅವರಿಗೆ ಮನಾಲಿಯಲ್ಲಿ ಯಾರಿದ್ದಾರೆ ಕನ್ನಡ ಬಂಧುಗಳು.  ಆಕೆಗೆ ಹಸಿವಾಗಿತ್ತು. ಸಾಧು ಗಂಡರೊಟ್ಟಿ ರೊಟ್ಟಿಎಂದರೆ ಯಾರೂ ಗಮನ ನೀಡಲಿಲ್ಲ. ಹೆಚ್ಚಿಗೆ ಮಾತನಾಡುವಷ್ಟು ಅವನಿಗೆ ಹಿಂದಿ ಬರುವುದಿಲ್ಲ.” ಎಂದರು. ಆಗ ನಾನಂದೆಅವಳ ಜಾಗದಲ್ಲಿ ನಾನು ಇದ್ದಿದ್ದರೆ ನೀವೂ ಸಾಧುವೇ ಆಗುತ್ತಿದ್ದಿರಿ. ಬೇರೆಯವರ ಬಗ್ಗೆ ಇರುವ ಕಾಳಜಿ ಮಡದಿಯ ಬಗ್ಗೆ ಯಾಕಿರುವುದಿಲ್ಲ ಪುರುಷರಿಗೆ ?” ಎಂದು ಸುಯೋಜಳತ್ತ ನೋಡಿ ನಕ್ಕೆ.
ನಾವು ದೆಹಲಿ ತಲುಪಿದಾಗಲೂ ನಮ್ಮೊಂದಿಗೆ ಇದ್ದ ಎರಡು ಕನ್ನಡದ ಜೋಡಿಗಳ ಬಗ್ಗೆ ಹೆಗ್ಗಡೆಯವರು ವಿಚಾರಿಸಿದರು.  ಹಾಗೆ ಅಗತ್ಯ ಉಳ್ಳವರಿಗೆ ಸಹಾಯ ಮಾಡುವುದು ಅವರ ಜನ್ಮದತ್ತ ಸ್ವಭಾವ .



No comments:

Post a Comment