Saturday, July 18, 2015

ಕಾಶ್ಮೀರದಿಂದ ಸಿಮ್ಲಾಕ್ಕೆ: ಸಸ್ಯ ಶ್ಯಾಮಲೆ ಸಿಮ್ಲಾಕಾಶ್ಮೀರದಿಂದ ಜಮ್ಮುವರೆಗೆ ವಿಮಾನದಲ್ಲಿ ಹಾರಾಡಿ ಜಮ್ಮುವಿನಿಂದ ದೆಹಲಿಗೆ ರೈಲಿನಲ್ಲಿ ಪಯಣಿಸಿದೆವು. ಈ ರೈಲಿನಲ್ಲಿ ಕಾಶ್ಮೀರದ ಪಂಡಿತರು ತಮ್ಮ ನೋವನ್ನು ನಮ್ಮಲ್ನಲಿ ಬಿಚ್ಚಿದ್ದು. ದೆಹಲಿಯಿಂದ  ಬಂದ ನಾವು  ಕಲ್ಕಾದವರೆಗೆ ಚೈರ್ ಕಾರ್. ಬಹುಷ ವಿದೇಶಿ ಪ್ರವಾಸಿಗರನ್ನು ಗಮನದಲ್ಲಿ ಇಟ್ಟುಕೊಂಡು ನಿರ್ಮಿಸಿದ ಐಷರಾಮದ ರೈಲು ಇದು. ವಿಮಾನದ ಆಸನಗಳಂತಹ ಆಸನಗಳು ಇದರಲ್ಲಿ ಇವೆ. ಮಾತ್ರವಲ್ಲ ಅಥಿತಿ ಸತ್ಕಾರ ಕೂಡಾ ಮೇಲ್ದರ್ಜೆಯದ್ದು. ರೈಲಿನ ಕಿಟಿಕಿಗಳಲ್ಲಿ ವಿಶಾಲವಾದ ಶುಭ್ರ ಗಾಜುಗಳನ್ನು ಅಳವಡಿಸಿರುವುದರಿಂದ ಇಕ್ಕಲೆಗಳ ಪ್ರಕೃತಿ ಸೌಂದರ್ಯವನ್ನು ನೋಡಿ ಆನಂದಿಸಬಹುದು.   ಈ ರೈಲು ಪಾಣಿಪತ್, ಕುರುಕ್ಷೇತ್ರ, ಅಂಬಾಲಾ, ಚಂಡೀಘಡದ ಮೂಲಕ ಕಲ್ಕಾ ತಲುಪಿತು.
ಕಲ್ಕಾದಿಂದ ಸಿಮ್ಲಾಗೆ ಹೋಗುವ ರೈಲಿನಲ್ಲಿ ನಮಗೆ ಆಸನ ಸಿಗಲಿಲ್ಲ. ಇಲ್ಲಿ ಮುಂಗಡ ಆಸನ ಕಾದಿರಿಸುವ ವ್ಯವಸ್ಥೆ ಇರಲಿಲ್ಲ. ಹೀಗಾಗಿ ಇಲ್ಲಿ ಟ್ಯಾಕ್ಸಿ ಮಾಡಿ ನಾವು ಸಿಮ್ಲಾಗೆ ತಲುಪಿದೆವು. ಪ್ರಯಾಣ ದುಬಾರಿ ಆದರೂ ಸಿಮ್ಲಾವನ್ನು ಸುತ್ತಿದ ಸಂತೋಷ. ಕೊರಕಲು ಶಿಖರಗಳ ನಡುವೆ 7,267 ಅಡಿ ಎತ್ತರದಲ್ಲಿ ಇರುವ ಸಿಮ್ಲಾದ ಪೇಟೆಯ ಮಾಲ್ ರೋಡ್ ತಲುಪಲು ಎರಡು ಹಂತಗಳಲ್ಲಿ ಲಿಫ್ಟ್ ಹತ್ತಬೇಕು. ಅಲ್ಲಿಂದ ಸುಮಾರು 2 ಕಿಲೋಮೀಟರ್ ದೂರ ಕಡಿದಾದ ಏರು ರಸ್ತೆಯಲ್ಲಿ  ನಡೆದು ದಮ್ಮು ಬಿಡುತ್ತಾ ನಾವು ಮಾಲ್ ರೋಡ್ ತಲುಪಿದೆವು.  ಸ್ಕ್ಯಾಂಡಲ್ ಪಾಯಿಂಟ್‍ಗೆ ನಾವು ತಲುಪುವ ಮೊದಲು ಕೆಳಗಡೆಯಿಂದ ಕಾಲ್ನಡಿಗೆಯಲ್ಲಿ ಸೂಟ್‍ಕೇಸ್ ಹೊತ್ತ ಕೂಲಿಗಳು ಹೊಟೇಲ್ ತಲುಪಿ ಮರಳುತ್ತಿದ್ದರು. ಅಲ್ಲಿಂದ ಡ್ರೀಮ್ ಲ್ಯಾಂಡ್ ಹೊಟೇಲ್‍ನ ಇಳಿಜಾರು ರಸ್ತೆಯಲ್ಲಿ ಕಾಲೆಳೆಯುತ್ತಾ ದಮ್ಮು ಬಿಡುತ್ತಾ ನಾವು ನಡೆದೆವು ಹೊಟೇಲಿನತ್ತ. ಚಳಿಯಿಂದ ಮೈ ಮರಗಟ್ಟಿದಂತಾಗಿತ್ತು. ಆ ದಿನ ಹೊಟೇಲಿನ ಹೊರಗೆ ಇಣುಕಿ ನೋಡುವ ಧೈರ್ಯ ಆಗಲಿಲ್ಲ. ಹೀಟರ್ ಅಳವಡಿಸಿ ಊಟವನ್ನು ಹೊಟೇಲ್ ಕೋಣೆಗೆ ತರಿಸಿ ಉಂಡು ಬೆಚ್ಚನೆ ಹೊದ್ದು ಮಲಗಿದೆವು.


ಶ್ಯಾಮಲೆಯೇ ಸಿಮ್ಲ
 1819ರ ಗೂರ್ಖಾ ಯುದ್ಧದ ಕಾಲದಲ್ಲಿ ಬ್ರಿಟಿಷರು ಸಿಮ್ಲಾವನ್ನು ಕಂಡು ಹಿಡಿದರು. ಅದಕ್ಕೂ ಮೊದಲು ಶ್ಯಾಮಲಾದೇವಿಯ ದೇವಸ್ಥಾನಕ್ಕೆ ಮಾತ್ರ ಅದು ಪ್ರಸಿದ್ಧಿಯಾಗಿತ್ತು. ಕಾಳಿ ದೇವಿಯ ಸೌಮ್ಯರೂಪ ಎಂದು ಭಾವಿಸಲಾದ ಶ್ಯಾಮಲಾದೇವಿ ಸಿಮ್ಲಾದ ಅಧಿದೇವತೆ. ಶ್ಯಾಮಲಾ ದೇವಿಯಿಂದಾಗಿ ಸಿಮ್ಲಾ ಎಂಬ ಹೆಸರು ಬಂತು ಎನ್ನುತ್ತಾರೆ. ಸಿಮ್ಲಾವನ್ನು ‘ಶ್ಯಾಮಾಲಯ’ ಎಂದೂ ಕರೆಯಲಾಗುತ್ತಿತ್ತು. ಈಕೆ ಸದಾ ಶ್ಯಾಮಲೆ. ಈಕೆಯ ಮೈಮೇಲೆ ಮಣ್ಣು ಕಾಣುವುದಿಲ್ಲ 19ನೆಯ ಶತಮಾನದಲ್ಲಿ ಬ್ರಿಟಿಷರು ಸಿಮ್ಲಾ ಎಂದು ನಾಮಕರಣ ಮಾಡಿದರು ಎನ್ನುವುದು ಇತಿಹಾಸ. ಬ್ರಿಟಿಷರ ಬೇಸಿಗೆ ಕ್ಯಾಂಪ್ ಇಲ್ಲಿ ಇರುತ್ತಿತ್ತು. ಸಿಮ್ಲಾ ನಗರದಿಂದ ಕಾಲ್ನಡಿಗೆಯ ದಾರಿಯ ದೂರದಲ್ಲಿ ಈಕೆಯ ಗುಡಿ ಇದೆ. ಶ್ಯಾಮಲಾದೇವಿಯನ್ನು ಕಾಳಿಯ ರೂಪ ಎಂದು ಪರಿಗಣಿಸುತ್ತಾರೆ. ಶ್ಯಾಮಲಾದೇವಿ, ಕಮ್ನಾ ಮತ್ತು ತಾರಾದೇವಿಯರು ಒಂದೇ ಗುಡಿಯಲ್ಲಿ ಪೂಜೆಗೊಳ್ಳುತ್ತಿದ್ದಾರೆ.  ಮೊದಲು ಪಂಜಾಬದ ರಾಜಧಾನಿಯಾಗಿದ್ದ ಸಿಮ್ಲಾವು ಅನಂತರ ಹಿಮಾಚಲ ಪ್ರದೇಶದ ರಾಜಧಾನಿಯಾಯಿತು.
ಸಸ್ಯಶ್ಯಾಮಲೆ ಪ್ರಕೃತಿಯ ಗಾಂಭೀರ್ಯ ನೋಡಬೇಕಾದರೆ ಸಿಮ್ಲಾಗೆ ಹೋಗಬೇಕು. ಮೊದಲನೆಯ ದಿನ ಬೆಟ್ಟ ಹತ್ತುವಾಗಿನ ಆಯಾಸದ ಜೊತೆಗೆ ಚಳಿಯೂ ಸೇರಿ ಕಂಬಳಿ ಹೊದ್ದು ಮಲಗುವಾಗ, ಸಿಮ್ಲಾವೂ ಬೇಡ, ಈ ಚಳಿಯೂ ಬೇಡ ಅನ್ನಿಸಿತ್ತು. ದಾಲ್ ಸರೋವರದ ಚಳಿಯಿಂದ ತಪ್ಪಿಸಿಕೊಂಡು ಬಂದವರು, ಸಿಮ್ಲಾದ ಚಳಿಗೆ ಮುದುರಿದ್ದೆವು. ಬೆಂಕಿಯಿಂದ ಬಾಣಲೆಗೆ ಬಿದ್ದ ಸ್ಥಿತಿ. ಆದರೆ ಮರುದಿನ ಜಾಕೂ ಮಂದಿರ ನೋಡಲು ಹೊಟೇಲ್‍ನಿಂದ ಹೊರಬಂದು ಮತ್ತೂ ಎತ್ತರೆತ್ತರ ಶಿಖರಗಳ ಏರಿನಲ್ಲಿ, ಏರುತ್ತಾ,  ಕೆಳಭಾಗದ ಕೊರಕಲುಗಳಲ್ಲಿ , ಅದರಾಚೆಗಿನ ಗಿರಿಶಿಖರಗಳಲ್ಲಿ  ಶೋಭಿಸುವ ಬಾನೆತ್ತರದ ದೇವದಾರು ವೃಕ್ಷಗಳ ಕಾನನ ನೋಡಿ ‘ಪ್ರಕೃತಿಯೇ ಏನು ಮಾಯೆ ನಿನ್ನದು’ ಎಂದು ಬೆರಗುಗೊಂಡೆವು. ಪ್ರಕೃತಿಯ ಈ ಲೌಕಿಕ ಪ್ರಭೆಯನ್ನು ನೋಡಿ ಬ್ರಿಟಿಷರು ""Queen of Hill Stations." ಎಂದು ಸಿಮ್ಲಾವನ್ನು ಕರೆದಿರಬಹುದು.


ನಾವು ಕಾರಿನಲ್ಲಿ ಮೇಲ್ಮುಖವಾಗಿ ಚಲಿಸುತ್ತಿದ್ದೆವು. ಸಮುದ್ರ ಮಟ್ಟದಿಂದ 8000 ಅಡಿಗಿಂತಲೂ ಮೇಲೆ ಇರುವ ಹೆಲಿಪ್ಯಾಡ್ ‘ಕಲ್ಯಾಣಿ’ಯಲ್ಲಿ ನಿಂತು ಅಸಂಖ್ಯ ದೇವದಾರು ಕಾನನಗಳ ಶಿಖರಗಳನ್ನು ನೊಡಬೇಕು. ನಮ್ಮ ಕಾರು ಹೆಲಿಪ್ಯಾಡ್ ಸ್ಥಳಕ್ಕೆ ಹೋಗಲಿಲ್ಲ. ಮೇಲ್ಭಾಗದಲ್ಲಿ ಕಾರುಗಳಿಗೆ ಪಾರ್ಕಿಂಗ್ ವ್ಯವಸ್ಥೆ ಇಲ್ಲ. ಹೀಗಾಗಿ ಸ್ವಲ್ಪ ದೂರ ನಾವು ನಡೆದೇ ಹೋದೆವು. ಹೆಲಿಪ್ಯಾಡ್ ತಲುಪುವ ಮಾರ್ಗದ ಕೆಳಭಾಗದ ಕೊರಕಲಿನಲ್ಲಿ ಪ್ರಿಯಾಂಕ ಗಾಂಧಿ ನಿರ್ಮಿಸುತ್ತಿದ್ದ ಕಾಟೇಜ್ ಇದೆ.
ಕಲ್ಯಾಣಿ ಹೆಲಿಪ್ಯಾಡ್‍ನಲ್ಲಿ ನಿಂತು ಸಿಮ್ಲಾದ ಪ್ರಕೃತಿ ಸೌಂದರ್ಯವನ್ನು ನೋಡಬೇಕು. ಈ ದೇವದಾರು ಕಾನನದ ಹಸಿರು ಒಂದು ವಿಸ್ಮಯ! ದೇವರೆಂದರೆ ಈ ಸೃಷ್ಟಿ, ಈ ಹುಟ್ಟು!. 8000 ಅಡಿ ಎತ್ತರದ ಪರ್ವತ ಶಿಖರದಲ್ಲಿ ನಿಂತು ಎಲ್ಲಾ ಮೂಲೆಗಳಿಂದಲೂ ಪ್ರಕೃತಿಯ ಸೌದರ್ಯವನ್ನು ಅಹ್ವಾದಿಸಿದೆವು. ಆನಂದಿಸಿದೆವು. ಕಾಶ್ಮೀರದ ಗುಲ್ ಮೊಹರ್‍ನಲ್ಲಿ 13,500 ಮೀಟರ್ ಎತ್ತರಕ್ಕೆ ಏರಿ ಪ್ರಕೃತಿಯನ್ನು ನೋಡಿದ್ದರೂ ಅದು ಹಸಿರು ಲೋಕವಲ್ಲ. ಮಾತ್ರವಲ್ಲ ಅಲ್ಲೆಲ್ಲಾ ನಡೆದಾಡುವ  ದಾರಿಯಲ್ಲಿ ಗುಂಡು ಕಲ್ಲುಗಳು. ಅವು ಶಿಲಾ ಶಿಖರಗಳು. ಸಿಮ್ಲಾದಂತೆ ದೇವದಾರು ವೃಕ್ಷ ಸಮೂಹ ಕಾಶ್ಮೀರದ ಆ ಎತ್ತರದಲ್ಲಿ  ಇರಲಿಲ್ಲ.

ಈ ಶಿಖರದಿಂದ ಪ್ರವಾಸಿಗರ ಕಾಲು ಜಾರಿ ಕಣಿವೆಗೆ ಬೀಳದಿರಲಿ ಎಂದು  ಅಡ್ಡ ಪಟ್ಟಿ (ರೇಲ್ )ಕಟ್ಟಿದ ಕೊರಕಲಿನಲ್ಲಿ ಗುಲಾಬಿ ಬೆಳೆದಿತ್ತು. ಯಾರ ಪೋಷಣೆಯೂ ಇಲ್ಲದ ಅದರ ಹೂಗಳು ಬೆಂಗಳೂರಿನ ಹೈಬ್ರೀಡ್ ಗುಲಾಬಿಗಳನ್ನು ನಾಚಿಸುವಂತಿತ್ತು.
ನಾವು ಹೋದ ಕಾಲದಲ್ಲಿ ಕಲ್ಯಾಣಿಯಲ್ಲಿ ಹಿಮ ಬಿದ್ದಿರಲಿಲ್ಲ. Mashobra  ದಲ್ಲಿ ಹಿಮದ ಹಾಸು ಯಾವಾಗಲೂ ಇರುತ್ತದೆ ಎಂದ ನಮ್ಮ ಡ್ರೈವರ್.  Mashobra  ಸಿಮ್ಲಾದಿಂದ 13 ಕಿಲೋಮೀಟರ್ ದೂರದಲ್ಲಿದೆ. 2500 ಮೀಟರ್ ಎತ್ತರದಲ್ಲಿದೆ. ಇಲ್ಲಿ ವಾರ್ಷಿಕ ಜಾತ್ರೆಯಂತೆ ಜೂನ್ ತಿಂಗಳಲ್ಲಿ. Sipi fair ಕೂಡಾ ನಡೆಯುತ್ತದೆಯೆಂದರು. ಸಿಮ್ಲಾದಿಂದ 16 ಕಿಲೋ ಮೀಟರ್ ದೂರದ ಸುಮಾರು 8,600 ಅಡಿ ಎತ್ತರದ ಶಿಖರದಲ್ಲಿರುವ ಕುಫ್ರಿ ಕೂಡಾ  skiing ಗೆ (ಹಿಮದ ಜಾರುನಡಿಗೆ ಪಂದ್ಯಾಟ) ಹೆಸರುವಾಸಿ. ಜನವರಿ ಫೆಬ್ರವರಿ ತಿಂಗಳಲ್ಲಿ  skiing ಸ್ಪರ್ಧೆ ನಡೆಯುತ್ತದೆ. ಇದು ಭಾರತ ಟಿಬೆಟ್ ರಸ್ತೆಯಲ್ಲಿ ಇದೆ. ಬದರೀನಾತ್, ಕೇದಾರನಾತ್, ಪ್ರಿಪಾಂಜಲ್ ಮತ್ತು ಶಿವಾಲಿಕ್ ಶಿಖರಗಳ ಸುಂದರ ನೋಟವನ್ನು ಇಲ್ಲಿಂದ ಆನಂದಿಸಬಹುದು  ಎನ್ನುತ್ತಾರೆ. ಮಾಹಿತಿದಾರರು ಆ ಪ್ರದೇಶದ ಸೇಬು ವಿಶ್ವದಲ್ಲಿ ಭಾರತಕ್ಕೆ ಹೆಸರು ತಂದಿದೆ. ಈ ವಿಶ್ವ ಪ್ರಸಿದ್ಧ ಸೇಬಿನ ರುಚಿ ಮೆಲ್ಲಬೇಕಾದರೆ ಆ ಪ್ರದೇಶಕ್ಕೆ ಹೋಗಬೇಕೆಂದರು. ಜೀವಮಾನದಲ್ಲಿ ಎಂದೂ ಸವಿಯದ ಸೇಬಿನ ರುಚಿಯನ್ನು ಕಾಶ್ಮೀರದ ಸೇಬಿನ ಮರದಡಿಯಲ್ಲಿ ಸವಿದಿದ್ದ ನಮಗೆ ಅದಕ್ಕಿಂತಲೂ ರುಚಿಯಾದ ಸೇಬನ್ನು ಸವಿದು ನೋಡುವ ಇಚ್ಛೆ ಆದರೂ ಹೋಗಲಿಲ್ಲ. ಕಾರಣ ಅಲ್ಲಿಗೆ ಪ್ರಯಾಣ ಕುದುರೆಯ ಮೇಲೆ. ಉಷ್ಣಪ್ರದೇಶದ ನಮಗೆ ಅಲ್ಲಿಯ ಚಳಿ ಅಸಹನೀಯ ಆಗುವ ಭಯ ಇತ್ತು. ಹೀಗಾಗಿ ನಾವು ಕುದುರೆ ಹತ್ತುವ ಪ್ರಯಾಸವನ್ನು ಮಾಡಲಿಲ್ಲ.


ಕಲ್ಯಾಣಿ ಹೆಲಿ ಪ್ಯಾಡ್‍ಗೆ ಕಪ್ಪು ಕೂದಲಿನ ಯೋಕ್ ಪ್ರಾಣಿಯನ್ನು ಪ್ರವಾಸಿಗರ ಆಕರ್ಷಣೆಗಾಗಿ ಮತ್ತು ಸವಾರಿಗಾಗಿ ಒಬ್ಬಾತ ತಂದಿದ್ದ. ಇದು ಚಮರೀ ಮೃಗ. ಇದರ ಬಾಲದ ಕೂದಲೂ ಬಲು ಸೊಗಸು. ಇದರ ಮೇಲೆ ಹತ್ತಿ ಫೋಟೋ ತೆಗೆದು ಕೊಳ್ಳಬಹುದಿತ್ತು. ಆದರೆ ಹಾಗೆ ಮಾಡಲಿಲ್ಲ.

ಅಲ್ಲಿಂದ ಜಾಕು ಶಿಖರಕ್ಕೆ ಬರುವ ಮಾರ್ಗದಲ್ಲಿ ಸಿಮ್ಲಾದ ಪಾರ್ಕ್ ಒಂದಕ್ಕೆ ಬಂದೆವು. ಇದು ಮಕ್ಕಳಪಾರ್ಕ್. ಪಾರ್ಕಿನ ಒಳಗಿನ ಕಟ್ಟಡ ಒಂದರಲ್ಲಿ ಮಕ್ಕಳಿಗೆ ಬೇಕಾದ ವಿಷಯಗಳಿದ್ದುವು. ನಾವದನ್ನು ನೋಡಲಿಲ್ಲ. ಪಾರ್ಕ್ ಒಳಗೆ ಕಾಶ್ಮೀರಿ ಅಂಗಡಿ ಇತ್ತು. ಆದರೆ ಇದರ ಪ್ರವೇಶಕ್ಕೆ ದರ ವಸೂಲಿ ಮಾಡುತ್ತಾರೆ. ಹೊರಗೆ ಇತರೆ ಅಂಗಡಿಗಳು ಇದ್ದುವು.ಈ ಉದ್ಯಾನವನದ ಒಳಗೆ ಒಂದು ಮರ ನನ್ನನ್ನು ಆಕರ್ಷಿಸಿತು. ಗೊನೆ ಕಡಿದು ಒಣಗಿದ ಬಾಳೆಯ ಗಿಡದಿಂದ  ತೊಗಟೆ ಎದ್ದು ನಿಂತಂತೆ ಬಿಳಿಯ ತೊಗಟೆಯನ್ನು ಆ ಬಿಳಿ ಮರ ಬಿಟ್ಟಿತ್ತು. ಅಲ್ಲಿದ್ದ ಸ್ಥಳೀಯರಲ್ಲಿ `ಇದ್ಯಾವ ಮರ?’ ಎಂದೆ. ಇದು ‘ಬೋಜ್’ ಪತ್ರ ಎಂದರು. ವಾಲ್ಮೀಕಿ ಮಹರ್ಷಿ ರಾಮಾಯಣವನ್ನು ಇದರ ತೊಗಟೆಯ ಮೇಲೆ ಬರೆದಿರುವುದಾಗಿ ನಾವು ಕೇಳಿದ್ದೇವೆ. ಇಲ್ಲಿಯೂ ಅದೇ ವಿವರ ನೀಡಿದರು. ನಾನು ಆ ಮರದ ಬಳಿ ಹೋಗಿ ತೊಗಟೆಯನ್ನು ಎಳೆದಾಗ ಅದು ಹಾಳೆಯಂತೆ ಎದ್ದು ಬಂತು. (ತೊಗಟೆಯೊಂದಿಗೆ ಆ ಮರದ ಎಲೆಯನ್ನೂ ಸಂಗ್ರಹಿಸಿ ತಂದು ಬಿ.ಎಂ.ಶ್ರೀ ಪ್ರತಿಷ್ಟಾನಕ್ಕೆ ನೀಡಿದೆ.)  ಹಿಮಾಲಯದ ಮೇಲೆ ವರ್ಷದ 12 ತಿಂಗಳೂ ಮಳೆ ಬೀಳುವ ಸ್ಥಳದಲ್ಲಿ ಬೋಜ್ ಪತ್ರದ ಬೃಹತ್ ಮರಗಳಿರುತ್ತವೆಯಂತೆ. ಮರ ಹೆಚ್ಚು ಬೆಳೆದಷ್ಟು ಹಾಲೆಗಳು ಚೆನ್ನಾಗಿದ್ದು, ದೊಡ್ಡ ದೊಡ್ಡ ಹಾಳೆಗಳನ್ನು ಮರ ಬಿಟ್ಟುಕೊಡುತ್ತದೆ ಎಂದರು ಇಲ್ಲಿಯ ಮಾಹಿತಿದಾರರು. ಆದರೆ ಇವು 500ರಿಂದ 1000 ವರ್ಷಗಳ ಕಾಲ ಮಾತ್ರ ಉಳಿಯ ಬಲ್ಲುವು ಎನ್ನುತ್ತಾರೆ. ನಾವು ಇಲ್ಲಿಂದ ಜಾಕೂ ಮಂದಿರಕ್ಕೆ ಹೋದೆವು.


ಜಾಕೂ ಮಂದಿರ ಸಿಮ್ಲಾ : ಜಾಕೂ ಅಥವಾ ಯಾಕೂ, ರಾಮಾಯಣ ಕಥೆ ನಡೆದಿದೆಯೆಂದು ನಂಬಲಾದ ಕಾಲದಲ್ಲಿ ಇದ್ದ ಒಬ್ಬ ಸಂನ್ಯಾಸಿ. ಈ ಜಾಕೂ ಮಂದಿರ, ಸಿಮ್ಲಾ ನಗರದಿಂದ ಸುಮರು 5 ಕಿಲೋ ಮೀಟರ್ ದೂರದಲ್ಲಿದೆ. ಆದರೆ ಪರ್ವತ ಶಿಖರಗಳನ್ನು ಸುತ್ತಿ ಬಳಸಿ ಸಮುದ್ರ ಮಟ್ಟದಿಂದ ಸುಮರು 8048 ಅಡಿ ಎತ್ತರ ಇರುವ ಜಾಕೂ ಪರ್ವತ ಶಿಖರ ತಲುಪ ಬೇಕಷ್ಟೆ. ಮರಗಳಿಂದ ತುಂಬಿದ ಕಾಡು ಆಗಿರುವ ಈ ಪರ್ವತ ಶಿಖರದಲ್ಲಿ ಹನುಮಂತನ ದೇವಸ್ಥಾನ ಇದೆ. ಇದು ರಾಮಾಯಣದ ಜೊತೆಗೆ ತಳುಕು ಹಾಕಿದೆ. ರಾಮ ರಾವಣರ ಯುದ್ಧ ಸಂದರ್ಭದಲ್ಲಿ ಲಕ್ಷ್ಮಣ ನಿಶ್ಚೇಶ್ಚಿತನಾಗುತ್ತಾನೆ. ಇವನನ್ನು ಬದುಕಿಸಲು ‘ಸಂಜೀವಿನಿ’ ಮೂಲಿಕೆಯನ್ನು ತರಲೆಂದು ಹನುಮಂತ ಹಿಮಾಲಯ ತಲುಪುತ್ತಾನೆ. ಆ ಸಂದರ್ಭದಲ್ಲಿ ಜಾಕು ಪರ್ವತ ಶಿಖರದಲ್ಲಿ ಪ್ರಾಯಶ್ಚಿತ್ತ ವಿಧಿಯಲ್ಲಿರುವ ‘ಯಾಕು’ ಸನ್ಯಾಸಿಯನ್ನು ಆತ ಭೇಟಿ ಮಾಡುತ್ತಾನೆ. ಈ ಯಾಕು ಸಂನ್ಯಾಸಿಯ ಹೆಸರಿನಿಂದ ‘ಜಾಕೂ ಪರ್ವತ’ ಎಂದು ಈ ಶಿಖರಕ್ಕೆ ಹೆಸರಾಯಿತು. ಯಾಕು ಹೆಸರು ಮುಂದೆ ಜಾಕು ಎಂದು ಪರಿವರ್ತನೆಯಾಗಿರಬೇಕು. ಅಂದಿನವರೆಗೆ ಈ ಪರ್ವತ ಅತಿ ಎತ್ತರದಲ್ಲಿ ಇತ್ತು. ಸಂಜೀವಿನಿ ಮೂಲಿಕೆ ಹುಡುಕಲೋಸುಗ ಹನುಮಂತನು ಈ ಪರ್ವತವನ್ನು ಕುಗ್ಗಿಸುತ್ತಾನೆ. ಆದರೂ ಈಗಲೂ ಇದು ಸಿಮ್ಲಾದ ಮೇಲಿರುವ ಅತ್ಯಂತ ಎತ್ತರದ ಬೆಟ್ಟ.
ಹನುಮಂತನಿಗೆ ಸಂಜೀವಿನಿ ಮೂಲಿಕೆ ಹುಡುಕಲು ಕೋತಿಗಳು ಸಹಕರಿಸುತ್ತವೆ. ಆದರೆ ಪ್ರಯಾಣದ ಆಯಾಸದಿಂದ ಅವು ನಿದ್ದೆ ಹೋಗುತ್ತವೆ. ಹನುಮಂತ ಮೂಲಿಕೆ ಹುಡುಕುತ್ತಾ ದೂರ ಸಾಗುತ್ತಾನೆ. ಮರಳಿ ಬರುವಾಗ ಇದೇ ದಾರಿಯಾಗಿ ಬಂದು ಯಾಕೂ ಸನ್ಯಾಸಿಯನ್ನು ಕಾಣುವುದಾಗಿ ಹನುಮಂತ ಮಾತು ಕೊಟ್ಟಿದ್ದ. ಆದರೆ ಆತ ಕೊಟ್ಟ ಮಾತಿಗೆ ತಪ್ಪುತ್ತಾನೆ. ಲಂಕಾ ತಲುಪುವುದು ತಡವಾದರೆ ಅನರ್ಥವಾಗಬಹುದು ಎಂದು ಇಲ್ಲಿಗೆ ಬಾರದೆ ನೇರವಾಗಿ ಲಂಕೆಗೆ ಹೋಗುತ್ತಾನೆ. ಹನುಮಂತ ಲಂಕೆಗೆ ಮರಳಿದ ವಿಷಯ ತಿಳಿದ ಸಂನ್ಯಾಸಿ ಬೇಸರಿಸಿದಾಗ ಹನುಮಂತ ಆತನ ಮುಂದೆ ಪ್ರತ್ಯಕ್ಷನಾಗಿ ತಾನು ಈ ದಾರಿಯಾಗಿ ಮರಳಲು ಆದ ಅಡಚಣೆಯನ್ನು ವಿವರಿಸಿ ಅದೃಶ್ಯನಾಗುತ್ತನೆ. ಆತ ಅದೃಶ್ಯನಾದ  ಕೂಡಲೇ ಹನುಮಂತನ ಶಿಲ್ಪವೊಂದು ಮೈದೋರುತ್ತದೆ. ಈ ಶಿಲ್ಪಕ್ಕೆ ಯಾಕು ಸನ್ಯಾಸಿ, ಮಂದಿರ ಕಟ್ಟುತ್ತಾನೆ. ಅದೇ ಶಿಲ್ಪ ಈಗಲೂ ಗರ್ಭಗುಡಿಯಲ್ಲಿ ಇದೆ. -ಇವಿಷ್ಟು ಇಲ್ಲಿ ನಂಬಿಕೊಂಡು ಬಂದ ವಿವರಗಳು.

ನಿದ್ದೆಯಿಂದ ಎದ್ದ ಕೋತಿಗಳು ಹನುಮಂತನನ್ನು ಕಾಣದೆ ಅವನ ಬರವಿಗಾಗಿ ಕಾಯುತ್ತಾ ಇಲ್ಲೇ ಉಳಿಯುತ್ತವೆ. ಅದೇ ಕೋತಿಗಳ ವಂಶ ಈಗಿನವು ಎನ್ನುತ್ತಾರೆ. ಈ ಕೋತಿಗಳು ಮನುಷ್ಯನ ಹಿಂದೆಯೇ ಸುತ್ತುತ್ತವೆ. ಹನುಮಂತನ ಪಾದ ಇರುವ ಗುಡಿಯಲ್ಲಿ ಭಕ್ತರು ಅರ್ಪಿಸಿದ ಹಣ್ಣುಗಳನ್ನು ಈ ಕೋತಿಗಳೇ ತಿನ್ನುತ್ತವೆ. ಮನುಷ್ಯರ ಕಣ್ಣಿನ ಕನ್ನಡಕವನ್ನೂ ಬಿಡದೆ ಎಳೆದೊಯ್ಯುತ್ತವೆ. ಕನ್ನಡಕ ಧರಿಸಿ ಈ ಶಿಖರ ಹತ್ತುವಂತಿಲ್ಲ. ಕೆಳಭಾಗದಲ್ಲಿ ಇರುವ ಅಂಗಡಿಗಳವರು ಪ್ರತಿಯೊಬ್ಬರಿಗೂ ಒಂದೊಂದು ಲಾಠಿ ಕೊಡುತ್ತಾರೆ. ಲಾಠಿಯನ್ನು ತೋರಿಸಿ ಕೋತಿಗಳನ್ನು ದೂರ ಓಡಿಸಬೇಕು. ಕೋತಿಗಳನ್ನು ಓಡಿಸುತ್ತಾ ಲಾಠಿಯನ್ನು ಊರುತ್ತಾ ಪರ್ವತ ಹತ್ತುವುದೂ ಒಂದು ಅನುಭವ, ಆನಂದ.


ಸಿಮ್ಲಾದಿಂದ ಕುಲು ಮನಾಲಿಗೆ:
ಸಿಮ್ಲಾದಿಂದ ಕುಲು ಮನಾಲಿಗೆ ಬಸ್ಸಿನಲ್ಲಿ ಆಸನಗಳನ್ನು ಕಾದಿರಸಲಾಗಿತ್ತು. ಆದರೆ ಅಲ್ಲಿ ನಾವು ಕಾದಿರಿಸಿದ್ದ ಹೆಸರಿನ ಬಸ್ಸು  ಇರಲಿಲ್ಲ. ಸಂಬಂಧ ಪಟ್ಟವರನ್ನು ವಿಚಾರಿಸಿದಾಗÀ ಆ ಹಣವನ್ನು ಮುಂದೆ ಮರಳಿ ನೀಡಲಾಗವುದು ಎಂಬ ಉತ್ತರ ನೀಡಿದರು.  ನಾವು ಟ್ಯಾಕ್ಸಿ ಮಾಡಿ ಕುಲು ದಾರಿಯ ಮೂಲಕ ಮನಾಲಿಗೆ ಪ್ರಯಾಣ ಬೆಳೆಸಿದೆವು. ನಮ್ಮ ಟ್ಯಾಕ್ಸಿ ಚಾಲಕ ಸರದಾರ್‍ಜೀ. ಆತನ ಹೆಸರು ಪಪ್ಪು. ಪ್ರತಿ ಮಾತಿಗೂ “ಕೋಯಿ ಚಿಂತಾ ನಹೀ” ಎನ್ನುತ್ತಿದ್ದ. ಸಿಮ್ಲಾದ ಸುಮರು 800 ಅಡಿ ಎತ್ತರದ ಪರ್ವತ ಸಾಲುಗಳನ್ನು ಕೊರೆದು ಮಾಡಲಾದ ಕೊರಕಲು ಮಾರ್ಗದ ಮೂಲಕ ಕೆಳಗೆ ಇಳಿಯದೆ ನಾವು ಕುಲು ದಾರಿಯಲ್ಲಿ ಸಾಗಿದೆವು. ನಮ್ಮ ಬಲಕ್ಕೆ ಆಕಾಶಕ್ಕೆ ಏರಿದ ಪರ್ವತ ಶಿಖರಗಳು ಎಡಕ್ಕೆ ಪರ್ವತ ಕಣಿವೆ ಭಾಗ. -ಇದು ನಮ್ಮ ಪಯಣದ ದಾರಿ. ಕಣ್ಮನಕ್ಕೆ ಆನಂದ ನೀಡುವ ಪ್ರಯಾಣ. ಕುಲು ಹತ್ತಿರವಾಗುತ್ತಾ ಬಿಯಾಸ್ ನದಿ ಪಾತ್ರಕ್ಕೆ ಬಂದೆವು.
ಕುಲುವಿನಲ್ಲಿ ನೋಡುವಂತಹುದೇನೂ ಇರಲಿಲ್ಲ. ಸರೋವರ ನೋಡುವ ಆಸಕ್ತಿ ನಮ್ಮಲ್ಲಿ ಇರಲಿಲ್ಲ. ಬಿಯಾಸ್ ನದಿಯ ಆ ಎಡದಂಡೆಯ ಪರ್ವತ ಶಿಖರದಿಂದ ಬಲದಂಡೆಯ ಪರ್ವತ ಶಿಖರಕ್ಕೆ ಸಾಮಾನು ಸಾಗಿಸುವ ರೋಪ್‍ವೇಯನ್ನು ಈ ಪರ್ವತ ಪ್ರದೇಶದಲ್ಲಿ ಕಂಡೆವು. ವಿದ್ಯುತ್ ಇಲ್ಲದ ಪುರಾತನ, ಸ್ಥಳೀಯ ತಂತ್ರಜ್ಞಾನದಿಂದ ರೋಪ್‍ವೇಯನ್ನು ನಡೆಸಲಾಗುತ್ತದೆ. ಇಂತಹ ರೋಪ್‍ವೇನಲ್ಲಿ ಮಾನವ ಸಂಚಾರ ಸಾಧ್ಯ ಇಲ್ಲ. ಸಾಮಾನು ಸಾಗಿಸಲು ಮಾತ್ರ ಈ ರೋಪ್‍ವೇಯನ್ನು ಉಪಯೋಗಿಸುತ್ತಾರೆ ಎಂದು ತಿಳಿದು ಬಂತು.

ಪರ್ವತ ಪ್ರದೇಶದ ಜನರನ್ನು ‘ಪಹಾಡಿ’ಗಳೆಂದು ಕರೆಯುವುದು ರೂಢಿ. ‘ಪಹಾಡಿ’ ಎಂದರೆ ಪರ್ವತ. ನಮ್ಮ ಹೆಗ್ಗಡೆಯವರು ಸೈನ್ಯದಲ್ಲಿ ಇದ್ದ ಒಬ್ಬ ಪಹಾಡಿ ಸೈನಿಕ ತನ್ನ ಊರಿಗೆ ತೆರಳುವಾಗ ಪ್ರಯಾಣ ಭತ್ಯೆ ಕೇಳಿದ್ದನ್ನು ನೆನಪಿಸಿಕೊಂಡರು.  “ಸೈನಿಕರ ರಜೆ 56 ದಿನ ಮತ್ತು 4 ದಿನ ಪ್ರಯಾಣಕ್ಕಾಗಿ- ಹೀಗೆ ಒಟ್ಟು 60 ದಿನಗಳು ಎಂದು ಲೆಕ್ಕ.  ಪ್ರಯಾಣ 4 ದಿನಗಳಿಂದ ಕಡಿಮೆ ಇದ್ದರೂ ಅಷ್ಟೇ ದಿನದ ರಜೆ ಕೊಡಲಾಗುತ್ತದೆ. ಅದಕ್ಕಿಂತ ಹೆಚ್ಚು ಆದರೆ 56 + ನಿಜವಾಗಿ ಆಗುವ ಪ್ರಯಾಣ ದಿನಗಳು ಎಂದು ಲೆಕ್ಕ ಹಾಕುತ್ತಾರೆ. ಪಹಾಡಿ ಪ್ರದೇಶದ ಒಬ್ಬ sssಸೈನಿಕ ರಜೆಯ ಮೇಲೆ ಊರಿಗೆ ಹೋಗುವಾಗ ತನ್ನ ಊರಿಗೆ ಹೋಗುವ ದಾರಿಯ ದಿನಗಳನ್ನು ಲೆಕ್ಕ ಹಾಕಿ 12 ದಿನಗಳ ಪ್ರಯಾಣ ರಜೆಗೆ ಭತ್ಯೆಯನ್ನೂ ಕೇಳುತಿದ್ದ. ‘ರೈಲು ಇಳಿದು ತನ್ನ ಸಾಮಾನು ಸರಂಜಾಮುಗಳನ್ನು ಬೆನ್ನ ಮೇಲೆ ಹಾಕಿ 6 ದಿನ ನಡೆದು ಪಹಾಡಿಗಳನ್ನು ಹತ್ತಿ ಇಳಿದು ತನ್ನ ಊರು ಸೇರುತ್ತೇನೆ ಬರುವಾಗಲೂ ಹಾಗೆಯೇ’ ಎನ್ನುತ್ತಿದ್ದ. ಅವನ ಮಾತನ್ನು ನಂಬಲು ನಾವು ಸಿದ್ಧರಿರಲಿಲ್ಲ. ಈಗ ಈ ಪರ್ವತ ಶಿಖರಗಳನ್ನು ಹತ್ತುವ, ಇಳಿಯುವ ಜನರನ್ನು ನೋಡುವಾಗ ಆತನ ಮಾತಿನಲ್ಲಿ ನಂಬಿಕೆ ಬರುತ್ತದೆ ನನಗೆ” ಎಂದು ಅಂದಿನ ದಿನಗಳನ್ನು ನೆನಪಿಸಿಕೊಂಡರು. ಪಹಾಡಿಗಳು ದೂರ ಪ್ರಯಾಣದಲ್ಲಿ ಇಂತಹ ತೊಂದರೆಯನ್ನು ಎದುರಿಸುತ್ತ್ತಿದ್ದಾರೆ. ಇಂತಹ ಪ್ರಯಾಣದಲ್ಲಿ ದಾರಿಯಲ್ಲಿ ರಾತ್ರಿಯನ್ನು ಕಳೆಯಬೇಕಾಗುತ್ತದೆ. ಆದರೆ ಅಷ್ಟು ದಿನವೂ ಬಾನೆತ್ತರಕ್ಕೆ ಜಿಗಿದು ನಿಂತ ಈ ಶಿಖರಗಳನ್ನು ಹತ್ತುವುದೂ ಇಳಿಯುವುದೂ ಶ್ರಮದ ಕೆಲಸವೇ. ಆದರೆ ಅನಿವಾರ್ಯತೆಯಿಂದ ಆದ ಅಭ್ಯಾಸ ಬಲ ಅವರ ಆರೋಗ್ಯವನ್ನೂ ಕಾಪಾಡುತ್ತದೆ.

ಪರ್ವತ ಶಿಖರ ಹತ್ತುವುದರಲ್ಲಿ ಪಹಾಡಿಗಳು ನಿಸ್ಸೀಮರು. ಇಲ್ಲಿಯ ಊರಿನ ಪರ್ವತ ಶಿಖರಗಳಿಗೆ ರಸ್ತೆಗಳಿಲ್ಲ. ಹೆಚ್ಚಿನ ಕಡೆ ಕಾಲ್ನಡಿಗೆಯಿಂದಲೇ ಹೋಗಬೇಕು. ಮುದುಕಿಯರೂ ಪರ್ವತ ಹತ್ತಿಹೋಗುವುದನ್ನು ಕಂಡು ಬೆರಗಿನಿಂದ ಅವರ ಶಕ್ತಿಯ ಬಗ್ಗೆ ಕೇಳಿದರೆ “ನೀವು ದಿನಾ ಹತ್ತಿ ಇಳಿಯುತ್ತಿದ್ದರೆ ಅಭ್ಯಾಸವಾಗುತ್ತದೆ. ನಿಮ್ಮಲ್ಲೂ ಶಕ್ತಿ ಸಂಚಯನವಾಗುತ್ತದೆ, ಗಂಟುನೋವೂ ಇರುವುದಿಲ್ಲ, ಕಾಲು ನೋವೂ ಬರುವುದಿಲ್ಲ” ಎಂದರಾಕೆ.

ನಾವು ದಾರಿಯಲ್ಲಿ ಸಿಕ್ಕ ದೇವಿ ಮಂದಿರದ ಪಕ್ಕದ ಹೋಟೇಲಿನಲ್ಲಿ ಊಟಕ್ಕೆಂದು ಹೋದೆವು. ಈ ರಸ್ತೆಯ ಎಡಕ್ಕೆ ಪರ್ವತ ಶಿಖರ. ಬಲಕ್ಕೆ ಬಿಯಾಸ್. ಇರುವ ಅಲ್ಪ ಜಾಗದಲ್ಲಿ ಹೊಟೇಲ್ ಇದೆ. ಹೊಟೇಲ್‍ಗೆ ಇಳಿದು ಹೋದಾಗ ಜುಳು ಜುಳು ಹರಿವ ಬಿಯಾಸ್ ಎದುರಾಯಿತು. ನದಿ ಪಾತ್ರಗಳಲ್ಲಿ ಬೂದು ಬಣ್ಣದ ಮರಳು ಇತ್ತು. ಬಹಷಃ ಶಿಲಾ ಪರ್ವತಗಳನ್ನು ಘರ್ಷಿಸಿ ಅದನ್ನು ಪುಡಿಗೊಳಿಸುತ್ತಾ ಹೀಗೆ ತಂದು ಚೆಲ್ಲುತ್ತಾಳೆ ಶಿಲಾ ಮರಳನ್ನು. ನಾವು ಬಿಯಾಸ್‍ನಲ್ಲಿ ಕೈಕಾಲು ಮುಖ ತೊಳೆದು ಹೊಟೇಲಲ್ಲಿ ಊಟ ಮಾಡಿದೆವು. ರಸ್ತೆ ಬದಿ ಇರವ ದೇವಿಯ ಗುಡಿಗೂ ಹೋದೆವು. ಮನಾಲಿಯ ವಾರ್ಷಿಕ ಜಾತ್ರೆಗೆ ಈ ದೇವಿಯೂ ಹೋಗುತ್ತಾಳೆ ಎಂದರು ಅಲ್ಲಿ.


 ಹಿಂದು ಮತ್ತು ಸಿಖ್ಖರ ಪವಿತ್ರ ಕ್ಷೇತ್ರ ಮಣಿ ಕರಣ್: ನಾವು ಕುಲು ನಗರದ ಒಳಗೆ ಎಲ್ಲಿಯೂ ವಿರಮಿಸಲಿಲ್ಲ. ಕಾರಣ ಅಲ್ಲಿ ಇದ್ದ ಸರೋವರವನ್ನು ನೋಡುವ ಕುತೂಹಲಕ್ಕಿಂತ ಮಣಿಕರನ್ ಬಿಸಿನೀರಿನ ಬುಗ್ಗೆ ನೋಡುವ ಕುತೂಹಲ ಇತ್ತು. ಕುಲುಭಾಗದ ಅದರಲ್ಲೂ ಬಿಯಾಸ್ ನದಿಯ ಭಾಗದಲ್ಲಿ ಕೆಲವು ಕಡೆ ಭತ್ತ ಮತ್ತು ಇತರ ಬೇಸಾಯ ಇದೆ. ಕೊಯ್ಲು ಮುಗಿದ ಗದ್ದೆಗಳಲ್ಲಿ ಭತ್ತದ ಒಕ್ಕಣೆ ಮಾಡುತ್ತಿದ್ದರು. ನಾವು ಬಿಯಾಸ್ ನದಿಯ ಈ ದಂಡೆಯಿಂದ ಆ ದಂಡೆಗೆ ಸಾಗಿ ಬಿಸಿನೀರಿನ ಬುಗ್ಗೆಯತ್ತ ಧಾವಿಸಿದೆವು. ದಾರಿಯಲ್ಲಿ ಸೇತುವೆ ನಿರ್ಮಾಣ ಆದುದರಿಂದ ವಾಹನಗಳ ಸಂಚಾರಕ್ಕೆ ತೊಡಕಾಯಿತು. ಆದರೆ ಯಾವೊಬ್ಬ ಚಾಲಕನೂ ಸಹನೆಯನ್ನು ಕಳೆದುಕೊಳ್ಳದೆ ಮುನ್ನುಗ್ಗದೆ ಸಹಕರಿಸಿದ್ದು, ನೋಡುವಾಗ ನಮ್ಮವರಿಗೆ ಇಲ್ಲಿ ತರಪೇತು ನೀಡಿ ವಾಹನ ಚಾಲನಾ ಪರವಾನಿಗಿ ನೀಡಬೇಕೆನಿಸಿತು.


ಮನಾಲಿ ನಗರದಿಂದ 45ಕಿಲೋಮೀಟರ್ ದೂರ ಸಿಮ್ಲಾದಿಂದ ಮನಾಲಿಗೆ ಹೋಗುವ ದಾರಿಯಲ್ಲಿ 3 ಕಿಲೋ ಮೀಟರ್ ಒಳಗೆ, 1737(1835?) ಮೀಟರ್ ಎತ್ತರದ ಪರ್ವತದ ಕೊರಕಲಿನಲ್ಲಿ ಬಿಸಿನೀರಿನ ಬುಗ್ಗೆ ಚಿಮ್ಮುತ್ತದೆ! ಇದು ಪಾರ್ವತಿ ನದಿಯ ಎಡದಂಡೆ. ಬಿಸಿನೀರಿನ ಬುಗ್ಗೆ ಇರುವ ಈ ಕ್ಷೇತ್ರವನ್ನು ‘ಮಣಿಕರನ್’ ಎನ್ನುತ್ತಾರೆ. ಸುಮರು 1.5 ಕಿಲೋ ಮೀಟರ್ ವ್ಯಾಪ್ತಿಯವರೆಗೆ ಇಲ್ಲಿ ಅನೇಕ ಬುಗ್ಗೆಗಳಾಗಿ ಅತ್ಯಂತ ಬಿಸಿನೀರು ಮೇಲಕ್ಕೆ ಜಿಗಿಯುತ್ತದೆ. ಕುಲು ಮನಾಲಿಯಲ್ಲಿ ಅನೇಕ ಕಡೆ ಬಿಸಿ ನೀರಿನ ಬುಗ್ಗೆಗಳು ಇರುತ್ತದೆಯಾದರೂ ಇದೊಂದು ವಿಶಿಷ್ಠ ಬುಗ್ಗೆ. ಬಂಡೆಯ ಸಂದಿಯಿಂದ ರಭಸವಾಗಿ ಧುಮ್ಮಿಕ್ಕುವ ಈ ಬುಗ್ಗೆಯ ಬಿಸಿ 88°C. ದಿಂದ 94°C.ಯೆನ್ನುತ್ತಾರೆ. ಇದರಲ್ಲಿರುವ ರೇಡಿಯಮ್ ಅಂಶ ಇಷ್ಟೊಂದು ಹೆಚ್ಚಿನ ಬಿಸಿ ಉತ್ತ್ತಿಯಾಗಲು ಕಾರಣ ಎಂದು ಜರ್ಮನ್ ವಿಜ್ಞಾನಿಯೊಬ್ಬರು ಹೇಳಿದ್ದಾರೆ ಎಂದು ತಿಳಿದುಬಂತು. ಕೆಲವು ಕಡೆ ನೆಲದ ಮೇಲೆ ನಿಂತರೆ ಕಾಲು ಸುಡುತ್ತದೆ. ಗುಹೆಯ ಒಳಗಿರುವ ಬಂಡೆಗಳ ಮೇಲೆ ದೋಸೆ ಹುಯ್ದರೆ ಬೇಯಬಹುದು. ಈ ನೀರಿನಲ್ಲಿ ಯಾವಗಲೂ ಸ್ನಾನ ಮಾಡುತ್ತಿದ್ದರೆÉ ಚರ್ಮ ರೋಗದ ಜೊತೆಗೆ ವಾಯು ದೋಷ ಮತ್ತು ಸಂಧಿವಾತ ನಿವಾರಣೆಯಾಗುತ್ತದೆ. ಬಿಸಿನೀರಿನ ಬುಗ್ಗೆಯ ಬಳಿಯಲ್ಲಿ ಇರುವ ಪಾರ್ವತಿ ನದಿಗೆ ಬಿಸಿನೀರು ಜೋರಾಗಿ ಸದ್ದು ಮಾಡುತ್ತಾ ಧುಮುಕುತ್ತದೆ. ಆಗ ಹೊಮ್ಮುವ ಆವಿಯಿಂದ ನದಿ ದಂಡೆಯಲ್ಲಿ ಇರುವ ಶಿವನ ಪುಟ್ಟ ಗುಡಿಯ ಪರಿಕ್ರಮದಲ್ಲಿ ನಿಂತು ಸ್ಟೀಮ್ ಬಾತ್ ಮಾಡಬಹುದು. ಮೈಸುಡುವಷ್ಟು ಆವಿ ಬಿಸಿಯಾಗಿರುತ್ತದೆ. ಗಾಳಿ ಜೋರಾಗಿ ಬೀಸಿದಾಗ ಸೇತುವೆಯಮೇಲೆ ನಿಂತರೂ ಆವಿಸ್ನಾನ ಮಾಡಿದಂತಾಗುತ್ತದೆ. ಬಿಸಿ ಗಾಳಿಯಿಂದಾಗಿ ಪರಿಸರವೆಲ್ಲ ಬೆಚ್ಚಗಾಗುತ್ತದೆ. ಬೀಸುವ ಗಾಳಿಯೂ ಬಿಸಿಯಾಗಿರುತ್ತದೆ. ಆದರೆ ಚಳಿಗೆ ಹಿತವಾಗುತ್ತದೆ. ಕೆಲವು ಕಡೆ ಸ್ವಲ್ಪ ಬಿಸಿಯೂ ಆಗುತ್ತದೆ. ನದಿಗೆ ನೀರು ಬಿದ್ದ ಭಾಗದ ಬಂಡೆಗಳು ಅರಶಿನ ಬಣ್ಣ ತಾಳಿವೆ. ನೀರಿನಲ್ಲಿ ಇರುವ ಕಾರ್ಬನ್‍ನ ಪರಿಣಾಮ ಇದು ಎನ್ನುತ್ತಾರೆ. ಈ ಸಿಹಿನೀರಿನ ಬಿಸಿನೀರು ಸೇವನೆಗೂ ಯೋಗ್ಯವಾಗಿದೆ.


ಬಿಜಿಲೀ ಮಹಾದೇವ: ಇಲ್ಲಿ ಶಿವನ ಹೆಸರು ಬಿಜಿಲೀ ಮಹಾದೇವ. ಐತಿಹ್ಯದ ಪ್ರಕಾರ ಶಿವ ಪಾರ್ವತಿಯವರು ಕೈಲಾಸದಲ್ಲಿ ಕುಳಿತು ಬೇಸರವಾದಾಗ ಪರ್ವತದ ತಪ್ಪಲಿಗೆ ಇಳಿದರು. ಈ ಪ್ರದೇಶ ತಲುಪಿದಾಗ ಇಲ್ಲಿಯ ಪ್ರಕೃತಿ ಸೌಂದರ್ಯಕ್ಕೆ ಮನಸೋತು 1100ದಿನಗಳನ್ನು ಇಲ್ಲಿಯೇ ಕಳೆಯುತ್ತಾರೆ.

ಒಮ್ಮೆ ಪಾರ್ವತಿಯು ಇಲ್ಲಿಯ ನೀರಿನ ಚಿಲುಮೆಯಲ್ಲಿ ಸ್ನಾನ ಮಾಡುತ್ತಿದ್ದಾಗ ಆಕೆಯ ಕಿವಿಯ ಮಣಿ ಚಿಲುಮೆಯ ಹೊಂಡಕ್ಕೆ ಬೀಳುತ್ತದೆ. ಅದನ್ನು ನೀರಿನಿಂದ ಎತ್ತಲು ಈಶ್ವರನು ತನ್ನ ಗಣಗಳಿಗೆ ಆದೇಶಿಸುತ್ತಾನೆ. ಅವರು ಎಷ್ಟು ಹುಡುಕಿದರೂ ಆ ಮಣಿ ಸಿಗುವುದಿಲ್ಲ. ಆಗ ಶಿವನಿಗೆ ಕೋಪಬಂದು ಆತ ತಾಂಡವ ನೃತ್ಯ ಮಾಡುತ್ತಾ ಮೂರನೆಯ ಕಣ್ಣು ತೆರೆಯುವಾಗ ಗುಡುಗು ಮಿಂಚುಗಳು ಸಿಡಿದು ಜಗತ್ತು ಅಲ್ಲೋಲ ಕಲ್ಲೋಲವಾಗುತ್ತದೆ. ಅಗ ದೇವತೆಗಳು ತಾಂಡವರೂಪಿ ಶಿವನನ್ನು ಮರಳಿ ವಾಸ್ತವಕ್ಕೆ ತರಲು ಶÉೀಷನಾಗನನ್ನು ಕೋರುತ್ತಾರೆ. ಶೇಷನಾಗ ಪಾತಾಳದಿಂದ ಕುದಿಯುವ ನೀರಿನ ಗುಳ್ಳೆಗಳನ್ನು ಒಮ್ಮೆಲೆ ತೀವ್ರ ರಭಸದಿಂದ ಮೇಲಕ್ಕೆ ಚಿಮ್ಮಿಸುತ್ತಾನೆ. ಬಿಸಿನೀರಿನ ಗುಳ್ಳೆಗಳು ಹೊಳೆಯುವ ಮಣಿಗಳಂತೆ ಚಿಮ್ಮುತ್ತವೆ. ಇದನ್ನು ಕಂಡು ಶಿವಪಾರ್ವತಿಯರು ಪ್ರಸನ್ನಗೊಳ್ಳುತ್ತ್ತಾರೆ. ಈಗಲೂ ಇಲ್ಲಿ ಗುಳ್ಳೆಗಳು ಚಿಮ್ಮಿ ಬರುತ್ತವೆ.


ಮುಖ್ಯ ಬಿಸಿನೀರಿನ ಕುಂಡದ ಬಳಿ ಗಂಗೆಯ ಗುಡಿ ಇದೆ. ಅದರ ಗೋಡೆಯ ಮೇಲೆ ಶಿವನ ತಾಂಡವ ನೃತ್ಯದ ಭಿತ್ತಿ ಶಿಲ್ಪ ಇದೆ.  ಗಂಗೆಯ ಗುಡಿಯ ಭೂಮಿಯಡಿಯಿಂದ ಚಿಮ್ಮುವ ಬಿಸಿನೀರಿನ ಬುಗ್ಗೆಯ ಕುಂಡದಿಂದ ಹೊರಬರುವ ಆವಿ ಗೋಡೆಯ ಮೇಲೆ ಇರುವ ತಾಂಡವ ನೃತ್ಯದ ಶಿಲ್ಪವನ್ನು ಆವರಿಸುತ್ತದೆ. ಗಂಗೆಯ ಗುಡಿ ನದಿಗೆ ಮುಖಮಾಡಿದರೆ ಶಿವ ಪಾರ್ವತಿಯರ ಗುಡಿ ಪಾರ್ವತಿ ನದಿಪಾತ್ರದತ್ತ್ತ ಮುಖಮಾಡಿದೆ.
ಗುರುದ್ವಾರ :
ಇದು ಇರುವ ಪರ್ವತ ತೀರಾ ಕೊರಕಲು ಭಾಗ. ಆದರೂ ಮೇಲ್ಭಾಗದ ಇಳಿಜಾರಿನಲ್ಲಿ ಉದ್ದಕ್ಕೆ ಗುರುದ್ವಾರ ನಿರ್ಮಿಸಿದ್ದಾರೆ.  ಇದರ ನೆಲಭಾಗದಲ್ಲಿ ಎರಡು ಸ್ನಾನದ ಕೊಳಗಳನ್ನು ನಿರ್ಮಿಸಲಾಗಿದೆ. ಒಂದು ಮಹಿಳೆಯರಿಗಾಗಿ ಇನ್ನೊಂದು ಪುರುಷರಿಗಾಗಿ. ಬಿಸಿನೀರಿಗೆ ತಣ್ಣೀರು ಬೆರೆತು ಸ್ನಾನದ ಕೊಳಗಳನ್ನು ಸೇರುತ್ತದೆ. ಶ್ರೀ ಗುರುನಾನಕ್ ದೇವ ತನ್ನ ಐವರು ಶಿಷ್ಯರೊಂದಿಗೆ ಈ ಬಿಜಿಲಿ ಮಹಾದೇವನ ಗುಡಿಗೆ ಭೇಟಿ ನೀಡಿದ್ದರಂತೆ. ಈಗಲೂ ಇಲ್ಲಿ ಯಾರು ಬಂದರೂ ಯಾವ ಹೊತ್ತಿನಲ್ಲಿ ಬಂದರೂ ಊಟ ಸಿದ್ಧ ಇರುತ್ತದೆ. ಅಕ್ಕಿ ಬೇಳೆ ಮತ್ತು ಕಡಲೆಕಾಳನ್ನು ಗಂಗೆಯ ಕುಂಡದ ಬಿಸಿನೀರಿನಲ್ಲಿ ಬೇಯಿಸುತ್ತಾರೆ. ತಾಮ್ರದ ಹಂಡೆಗಳಲ್ಲಿ ತೊಳೆದ ಅಕ್ಕಿಯನ್ನು ಹಾಕಿ ಅದಕ್ಕೆ ಬಟ್ಟೆಯನ್ನು ಕಟ್ಟಿ ಬಿಸಿನೀರಿನ ಕುಂಡದೊಳಗೆ ಇಳಿಸುತ್ತಾರೆ. 20 ನಿಮಿಷದೊಳಗೆ ಅಕ್ಕಿ ಬೇಯತ್ತದೆ. ಕಡಲೆ ಬೇಯಲು ಸ್ವಲ್ಪ ಮತ್ತು ಬೇಳೆ ಅದಕ್ಕಿಂತ ಸ್ವಲ್ಪ ಹೆಚ್ಚು ಸಮಯ ಪಡೆಯುತ್ತದೆ. ಹೀಗಾಗಿ ಈ ಕುಂಡವನ್ನು “ಲಂಗರು” (ಅಡುಗೆ ಬೇಯಿಸುವ ಸ್ಥಲ-ಅಡ್ಕಳ) ಎನ್ನುತ್ತಾರೆ. ಚಪಾತಿ ಒಂದನ್ನು ಬಿಟ್ಟು ಮಿಕ್ಕೆಲ್ಲ ಅಡುಗೆ ಇಲ್ಲಿಯೇ ಬೇಯುತ್ತದೆ. ಯಾತ್ರಾರ್ಥಿ ಅಥವಾ ಪ್ರವಾಸಿಗರು ಪ್ರಯೋಗಾರ್ಥ ಬೇಯಿಸಲು ಇನ್ನೊಂದು ಕುಂಡ ಇದೆ. ಅದರಲ್ಲಿ ಅನ್ನ ಬೇಯಿಸಿ ಪ್ರಸಾಧ ಎಂದು ಅಲ್ಲಿಯೇ ತಿಂದು ಹೋಗುತ್ತಾರೆ ಭಕ್ತರು. ನಾವು ಪ್ರಯತ್ನಿಸಿದೆವು. ಅನ್ನ ಬೇಯಿತು. ಆದರೆ ಕಡಲೆ ಬೇಯುವಷ್ಟು ಕಾಯಲು ನಾವು ಸಿದ್ಧರಿರಲಿಲ್ಲ.

ನಾವು ಪರ್ವತದ ಕೊರಕಲಿನಲ್ಲಿ ಇರುವ ಈ ಬಿಸಿನೀರಿನ ಕ್ಷೇತ್ರ ಮಣಿಕಂಠ ಪಾರ್ವತಿ ನದಿಯ ಆಚೆ ಅಂಚಿನಲ್ಲಿದೆ. ಅಲ್ಲಿಗೆ ಸೇತುವೆಯ ಮೇಲಿನಿಂದ ಹೋಗಬೇಕು. ಸೇತುವೆಗೆ ಅಂಟಿಕೊಂಡೇ ಮಂದಿರ ಇದೆ. ಸೇತುವೆಯ ಈಚೆ ದಡದಲ್ಲಿ ಶ್ರೀರಾಮ ಮಂದಿರ ಇದೆ. 17ನೆಯ ಶತಮಾನದಲ್ಲಿ ರಾಜ ಜಗತ್‍ಸಿಂಗ್ ಶ್ರೀ ರಾಮ ದೇವಸ್ಥಾನವನ್ನು ಕಟ್ಟಿದನಂತೆ. ಲಕ್ಷ್ಮಣನ ಪ್ರತಿಮೆ ಇಲ್ಲ. ಸೀತೆಯ ಶಿಲ್ಪ ಇದೆ.

ಬಿಜಿಲಿ ಮಹಾದೇವ ಹಾಗೂ ಪಾರ್ವತಿ ನದಿಯನ್ನು ಹಿಂದೆ ಹಾಕಿ, ನಾವು ಮುಂದೆ ಮನಾಲಿಯತ್ತ ಸಾಗಿದೆವು. ದಾರಿಯಲ್ಲಿ ವಿದೇಶಿಯರಿಗಾಗಿ ಎಂಬಂತೆ ನಿರ್ಮಿಸಿದ ಸುಸಜ್ಜಿತ ಹೊರಾಂಗಣ ಇರುವ ಅತಿಥಿಗೃಹ ಇತ್ತು. ಅಲ್ಲಿ ಸಂಜೆಯ ಟೀ ಕುಡಿದು ಮೈಭಾರ ಇಳಿಸಿ ಮನಾಲಿಯ ದಾರಿಯಲ್ಲಿ ಮುನ್ನಡೆದೆವು. ಕತ್ತಲಾಗಿತ್ತು. ದಾರಿಯುದ್ದಕ್ಕೂ ಪರ್ವತ ಶಿಖರಗಳ ಕೆಳಗಿನಿಂದ ತುತ್ತ ತುದಿಯವರೆಗೆ ಅಲ್ಲಲ್ಲಿ ನಕ್ಷತ್ರಗಳಂತೆ ಬೆಳಕು ಮಿನುಗುತ್ತಿತ್ತು. ಇಳಿಜಾರು ಪರ್ವತದÀಲ್ಲಿ ಭೂಮಿಯಿಂದ ಬಾನಿನವರೆಗೆ ಪ್ರಕೃತಿಗೆ ಸಲ್ಲಿಸಿದ ‘ದೀಪೋತ್ಸವ’ ದÀಂತೆ ಮನೆ ಮನೆಗಳಲ್ಲಿ ಬೆಳಗುತ್ತಿರುವ ದೀಪಗಳು- ನಮ್ಮನ್ನು ಭ್ರಮಾಲೋಕಕ್ಕೆ ಕೊಂಡೊಯ್ಯುತ್ತದೆ. ಇಷ್ಟು ಸಾಲದೆಂಬಂತೆ ಪರ್ವತ ತಪ್ಪಲುಗಳಿಂದ ಬಾನೆತ್ತರಕ್ಕೆ ನೇರ ಏರುವ ದೇವದಾರು ವೃಕ್ಷಗಳ ದಟ್ಟ ಕಾನನ!

No comments:

Post a Comment