Sunday, August 16, 2015

ಕರ್ನಿಮಾತಾ -Bikaner





ಗುಜರಾತ್  ಮತ್ತು ರಾಜ್‍ಸ್ಥಾನದ ‘ಚರನ್’ ಜನಾಂಗದ ಸಂತಳು ಕರ್ನಿ ಮಾತೆ. ಈಕೆ ಐತಿಹಾಸಿಕ ಮಹಿಳೆ. (ಕ್ರಿ.ಶ.1387)  ಜಿ.ಕಿನಿಯಾ ಮತು ದಿವಾಲ್ ದಂಪತಿಗಳಿಗೆ ಜೋಧ್‍ಪುರ ವ್ಯಾಪ್ತಿಯ ಹಳ್ಳಿ ಸುವಪ್ ಎನ್ನುವಲ್ಲಿ ಜನಿಸಿದವಳು. ಇವಳ ಗಂಡನ ಹೆಸರು ‘ದೆಪ.’ ಈತ ತತ್ವಜ್ಞಾನಿ. ತನ್ನ ತಂಗಿಯನ್ನೇ  ತನ್ನ ಗಂಡನಿಗೆ ವಿವಾಹ ಮಾಡಿಸಿ ಬಡವರುದ್ಧಾರಕ್ಕಾಗಿ ತನ್ನ ಗಂಡ ಮತ್ತು ಮನೆಯನ್ನು ತ್ಯಜಿಸಿ ಹೊರಡುತ್ತಾಳೆ.  ಈ ಭಾಗದಲ್ಲಿ ಈಕೆಯ ಪ್ರಭಾವದಿಂದಾಗಿ ಮೊಘಲರ ಕಾಲದಲ್ಲಿ ಮಹಿಳೆಯರ ಮೇಲೆ ಆಗುತ್ತಿದ್ದ ದೌರ್ಜನ್ಯ ಕಡಿಮೆಯಾಗಿತ್ತು ಎನ್ನುತ್ತದೆ ಇವಳ ಕಥೆ. ಅಪರಾಧದ ಹಿನ್ನೆಲೆಯಿಂದ ಬಂದ ಆರೋಪಿಗಳಿಗೂ ಈಕೆ ರಕ್ಷಣೆ ನೀಡಿ ಅವರು ಅರೋಪ ಮುಕ್ತರಾಗುವಂತೆ ಮಾಡುತ್ತಿದ್ದಳು. ಮರೂಭೂಮಿಯಾಗಿರುವ ಈ ಭಾಗದಲ್ಲಿ ಹಸಿರು ಬೆಳೆಸಿ, ಅಂತರ್ಜಲ ಹೆಚ್ಚಿಸಿ, ಜೀವ ಸಂಕುಲಗಳಿಗೆ ಆಸರೆ ನೀಡಿದವಳು. ಹೀಗಾಗಿ ಈ ಭಾಗದಲ್ಲಿ ಹಸಿರು ಕಡಿಯಲು ನಿಷೇಧ ಇದೆ.  ಇವಳ ಆಸರೆಯಲ್ಲಿ ಪ್ರಾಣಿಗಳೂ ಇದ್ದುವು.
1538ನಲ್ಲಿ ಜೈಸಲ್ಮೇರ್ ಅರಸನ ಆಸ್ಥಾನಕ್ಕೆ ಹೋಗಿ ಅವಳ ಸವತಿ ಮಕ್ಕಳು ಮತ್ತು ಪರಿವಾರದೊಂದಿಗೆ  ಮರಳುವಾಗ ಗಿರಿಸಾಗರ್ ಬಳಿಯ ಗಡಿಯಾಲದಲ್ಲಿ ಅವಳು ಮಾಯವಾಗುತ್ತಾಳೆ.
ಈಕೆ 150 ವರ್ಷ ಬದುಕಿದ್ದಳು ಎನ್ನುತ್ತದೆ ಇವಳ ಐತಿಹ್ಯ. ಜೋಧಪುರದ ಚರನ್ ವಂಶದ ಮೂರು ತಲೆಮಾರುಗಳ-ರಾವ್ ರಿದ್‍ಮಲ್, ರಾವ್ ಜೋಧಾ, ರಾವ್ ಬಿಕಾ -ರಾಜ ವಂಶದ ಸಂರಕ್ಷಳಾಗಿದ್ದಳು. ಕ್ರಿ.ಶ.1453ನಲ್ಲಿ ಇವಳ ಆಶೀರ್ವಾದದಿಂದ ಇವಳ ಚರನ್ ವಂಶದ ರಾವ್ ಜೋಧಾ, ಅಜ್ಮೀರ್, ಮೆತ್ರಾ, ಮತ್ತು ಮಂಡೋರ್‍ನ್ನು ಗೆಲ್ಲುತ್ತಾನೆ. 1457ರಲ್ಲಿ ಈಕ ರಾವ್ ಜೋಧನ ಆಶಯದಂತೆ ಜೋಧಪುರ ಕೋಟೆಗೆ ಮೂಲೆಯ ಶಿಲಾನ್ಯಾಸ ಮಾಡುತ್ತಾಳೆ. 1485ರಲ್ಲಿ ರಾವ್ ಬಿಕಾನ ಆಶಯಕ್ಕೆ ಸ್ಪಂಧಿಸಿ ಬಿಖಾನೇರ್ ಕೋಟೆಯ ಶಿಲಾನ್ಯಾಸ ನೆರವೆರಿಸುತ್ತಾಳೆ.  1472ರಲ್ಲಿ ಜೋಧಪುರದ ಅರಸ ರಾವ್ ಬಿಕಾನ ವಿವಾಹವನ್ನು ಈಕೆ ನೆರವೇರಿಸುತ್ತಾಳೆ. ರಾವ್ ಬೀಕಾನ ವಿವಾಹವನ್ನು ಪುಗಾಲನ ರಾವ್ ಶೇಖಾನ ಜೊತೆ ಈಕೆಯೇ ನಿಗದಿಮಾಡುತ್ತಳೆ. ಆದರೆ ವಿವಾಹ ಕಾಲಕ್ಕೆ ಕನ್ಯೆಯ ತಂದೆ ಜೈಲಿನಲ್ಲಿದ್ದ. ಕರ್ನಿಮಾತಾ ಹದ್ದಿನ ರೂಪದಲ್ಲಿ  ಜೈಲಿಗೆ ಹೋಗಿ ರಾಜನನ್ನು ಎತ್ತಿಕೊಂಡು ಬರುತ್ತಾಳೆ.



ಮಂದಿರ : 1476 ರಲ್ಲಿ ಕರ್ನಿ ಮಾತಾ ದೇವಸ್ಥಾನಕ್ಕೆ ಮಾತಾನಿಯಾ ಎಂಬಲ್ಲಿ ಶಿಲಾನ್ಯಾಸ ಹಾಕಿದವಳು ಕರ್ನಿ ಮಾತೆಯೆನ್ನುತ್ತಾರೆ. ಗರ್ಭ ಗೃಹವನ್ನೂ ಆಕೆಯೇ ನಿರ್ಮಿಸುತ್ತಾಳೆ.
ಕಾಲ ಕಾಲಕ್ಕೆ ನವೀಕರಣಗೊಂಡ ಈ ಮಾರ್ಬಲ್ ಮಂದಿರವನ್ನು ಮಹಾರಾಜಾ ಗಂಗ ಸಿಂಗ್ ಕಾಲದಲ್ಲಿ ಮಾರ್ಬಲ್‍ನಿಂದ ಕಟ್ಟಲಾಗಿದೆ. ಬೆಳ್ಳಿ ಮತ್ತು ಚಿನ್ನದಿಂದ ಇದರ ಡೂಮ್ ತಯಾರಿಸಲಾಗಿದೆ. ಗರ್ಭಗೃಹದ ಒಳಗೆ 75 ಸೆ.ಮೀ. ಉದ್ದದ ಕರ್ನಿ ಮಾತೆಯ ಸುಂದರ ಪ್ರತಿಮೆ ಇದೆ. ಕತ್ತಿನಲ್ಲಿ ಉದ್ದವಾದ ಹಾರ, ಎಡಕೈಯಲ್ಲಿ ತ್ರಿಶೂಲ ಹಿಡಿದ ಈಕೆಯ ಹಿಂದೆ ಬೆಳ್ಳಿಯ ಸಿಂಹÀ ಇದೆ. ಬಲದ ಕೈ ಇಳಿಬಿಟ್ಟಿದ್ದಾಳೆ. ಬಂಗಾರದ ಝರಿಯುಳ್ಳ ರಾಜಾಸ್ಥಾನಿ ಲಂಗ ಧಾವಣಿ ತೊಟ್ಟಿದ್ದಾಳೆ.  ಗರ್ಭಗುಡಿಯ ಮಂಟಪ ಮತ್ತು ಅದರ ಮೇಲಿರುವ ಪೆನಲ್‍ಗಳೂ ಚಿನ್ನದ್ದು. ರಾಜಸ್ಥಾನದ ಸುಂದರ ಕನ್ಯೆಯಂತೆ ಕಾಣುವ ಈ ಪ್ರತಿಮೆಯ ಚಿನ್ನದ ಮೆರಗು ಅಪೂರ್ವ. ಗರ್ಭಗುಡಿಯ ಒಳಗೆ ಎಡಕ್ಕೆ ಮರದ ಕಾಂಡ ಇದೆ. ದೇವಿಯ ಮುಂದೆ ಬೆಳ್ಳಿಯ ಸುಂದರ ಟೀಪಾಯ್ ಇದೆ.  ಹೊಸಿಲ ಹೊರಗೆ  ಈ ಪೆಟ್ಟಿಗೆ ಕರ್ನಿ ಮಾತಾ ಪೂಜಿಸುತ್ತಿದ್ದ ‘ಅವಧ್ ಮಾತೆ’ಯ ಪ್ರತಿಮೆ ಇರುವ ಬೆಳ್ಳಿಯ ಪೆಟ್ಟಿಗೆ ಇದೆ. ಅದರ ಮೇಲೆ ಇಲಿಗಳ ಮತ್ತು ತ್ರಿಶೂಲದ ಉಬ್ಬು ಚಿತ್ರ ಇದೆ.



ಈ ಮಂದಿರದ ವೈಶಿಷ್ಟ್ಯ ಇರುವುದು ಇಲ್ಲಿಯ ಇಲಿಗಳಲ್ಲಿ. ಇಲ್ಲಿ ಹೆಜ್ಜೆ ಇಡುವಾಗ ಎಚ್ಚರದಿಂದ ಇರಬೇಕು. ಅವುಗಳು ನಮ್ಮನ್ನು ಲೆಕ್ಕಿಸುವುದೇ ಇಲ್ಲ. ಕಿಂದರ ಜೋಗಿಯ ನೆನಪಾಗುತ್ತದೆ ಇಲ್ಲಿ. ಅವುಗಳು ಮತ್ತೇರಿದಂತೆ ಇವೆ. ಎಲ್ಲೆಂದರಲ್ಲಿ ಚಲಿಸುತ್ತವೆ. ಅಕಸ್ಮಾತ್ ಯಾರಾದರೂ ಅದನ್ನು ತುಳಿದರೋ ಅವರು ಕರ್ನಿಮಾತಾಳಿಗೆ ಇಲಿಯಷ್ಟೇ ದೊಡ್ಡ ಚಿನ್ನದ ಅಥವಾ ಬೆಳ್ಳಿಯ ಇಲಿಯನ್ನು ಮಾಡಿಸಿ ಒಪ್ಪಿಸಬೇಕು. ಇಲ್ಲಿ ಸುಮಾರು 20ಸಾವಿರ ಇಲಿಗಳು ಇವೆಯೆಂದು ನಂಬಲಾಗಿದೆ. ಎಲ್ಲಡೆ ಇಲಿಗಳನ್ನು ಚುವಾ ಮತ್ತು ಚುವನಿ ಎಂದು ಕರೆಯುತ್ತಾರೆ. ಆದರೆ ಇಲ್ಲಿಯ ಇಲಿಗಳನ್ನು ‘ಕಾಬಾ’ ಎನ್ನುತ್ತಾರೆ.
ಕರ್ನಿ ಮಾತಳ ಮುಂದೆ ಇರುವ ವಿಶಾಲವಾದ ಬೆಳ್ಳಿಯ ತಟ್ಟೆಯಲ್ಲಿ ಇರುವ ಲಡ್ಡು ಪ್ರಸಾದವನ್ನು ತಿಂದುಂಡು ಇಲಿಗಳು ಬಿದ್ದಿರುವುದನ್ನು ಕಾಣಬಹುದು. ಗರ್ಭ ಗುಡಿಯ ಎಡಕ್ಕೆ ಸಪ್ತಮಾತೃಕೆಯರ ಏಕ ಶಿಲೆ ಇದೆ. ಸಪ್ತ ಕನ್ಯೆಯರು ರಾಜಸ್ತಾನ ಉಡುಗೆಯಲ್ಲಿರುವ ಸುಂದರಿಯರು. ಈ ಏಕ ಶಿಲಾ ಸಪ್ತಮಾತೃಕೆಯರ ಮೇಲ್ಗಡೆಯೂ ಇಲಿಗಳು ವಿಶ್ರಮಿಸಿವೆ.

ನಾಲ್ಕೈದು ಬಿಳಿ ಇಲಿಗಳು ಇಲ್ಲಿವೆಯಂತೆ. ಆದರೆ ಅದು ಕಣ್ಣಿಗೆ ಗೋಚರವಾಗುವುದು ಅಪರೂಪಕ್ಕೆ  ನಂಬಿಕೆಯ ಪ್ರಕಾರ ಬಿಳಿ ಇಲಿ ಕಣ್ಣಿಗೆ ಗೋಚರವಾದರೆ  ಕರ್ನಿಮಾತಾ ಒಲಿದು ಬಂದಂತೆ. ಯಾವುದೇ ಇಲಿಗಳು ಭಕ್ತರ ಪಾದ ಏರಿ ಮೇಲ್ಗಡೆ ಹರಿದರೆ ಅವರು ಸಮೃದ್ಧಿ ಹೊಂದುತ್ತಾರೆ ಎನ್ನುತ್ತಾರೆ ಇಲ್ಲಿಯ ಜನ.  ಸಾಮಾನ್ಯವಾಗಿ ಇಲಿಗಳ ಆಯುಷ್ಯ 28 ತಿಂಗಳು ಇಲ್ಲಿ 7 ವರ್ಷಬದುಕಿರುವ ಇಲಿಗಳು ಇವೆಯೆನ್ನುತ್ತಾರೆ. ಈ ಇಲಿಗಳು ಮಾನವರ ಮೈಮೇಲೆ ಓಡಾಡುತ್ತವೆ. ಕರನ್ ವಂಶದ ಭಕ್ತರು ಇಲ್ಲಿ ಇಲಿ ಮೈಮೇಲೆ ಹರಿದಾಡಿದರೆ ಮಾತೆ ಪ್ರಸನ್ನಳಾಗಿದ್ದಾಳೆ ಎಂದು ಭಾವುಕರಾಗುತ್ತಾರೆ.
ನವರಾತ್ರಿಗೆ ಇಲ್ಲಿ ವಿಶೇಷ ಉತ್ಸವ ಇದೆ.

ಇಲ್ಲಿಗಳ ಹಿನ್ನೆಲೆ:
ಐತಿಹ್ಯಗಳ ಪ್ರಕಾರ ಇಲ್ಲಿಯ ಇಲಿಗಳೆಲ್ಲ ಕರ್ನಿಮಾತೆಯ ಸವತಿಯ ಮಕ್ಕಳು. ಒಮ್ಮೆ ಅವಳ ಸವತಿಯ ಮಗ ಸತ್ತುಹೋಗುತ್ತಾನೆ. ಆ ಮಗನನ್ನು ಬದುಕಿಸಿಕೊಡಲು ಗುಹೆಯಲ್ಲಿ ಕುಳಿತು ತಪಸ್ಸು ಮಾಡುತ್ತಿದ್ದ ಕರ್ನಿಮಾತಾಳನ್ನು ತಂಗಿ ಬೇಡುತ್ತಾಳೆ. ಕರ್ನಿಮಾತಾಳು ಶವವನ್ನು ಗುಹೆಯ ಒಳಗೆ ಇಟ್ಟು ಹೋಗಲು ಬಂದವರಿಗೆ ಹೇಳುತ್ತಾಳೆ. ಅವಳ ಆದೇಶದಂತೆ ಶವವನ್ನು ಹುಹೆಯ ಒಳಗೆ ಇಟ್ಟು ಗುಹೆಯನ್ನು ಮುಚ್ಚುತ್ತಾರೆ. ಮೂರು ದಿ£ಗಳುÀ ಕಳೆದಾಗ ಸತ್ತ ಮಗ ಗುಹೆಯಿಂದ ಹೊರಗೆ ಬಂದಿದ್ದ.

ಇಲ್ಲಿಯ ಇಲಿಗಳೆಲ್ಲ ಕರ್ನಿಮಾತಾಳ ಮಕ್ಕಳ ಅವತಾರ ಎಂದ ಇಲ್ಲಿ ಭಕ್ತರು ನಂಬುತ್ತಾರೆ.ಅವುಗಳಿಗೆ ಆಕೆ ರಕ್ಷಣೆ ನೀಡುತ್ತಿದ್ದಾಳೆ ಎನ್ನುತ್ತದೆ ಐತಿಹ್ಯ. ಈ ಇಲಿಗಳು ಕಥೆ ಹೆಳುತ್ತವೆಯಂತೆ. ಎಲ್ಲ ಕಥೆ ಹೇಳುವ ಇಲಿಗಳಿಗೆ ಕರ್ನಿಮಾತೆ  ರಕ್ಷಣೆ ನೀಡುತ್ತಾಳೆ. ನಾಲ್ಕೈದು ಬಿಳಿ ಇಲಿಗಳು ಇಲ್ಲಿವೆಯಂತೆ.  ಅದು ಮೂಸಿದ, ನೆಕ್ಕಿದ ಪ್ರಸಾಧವನ್ನು ಸೇವಿಸುತ್ತಾರೆ. ಭಕ್ತಿಯಿಂದ ನಡೆದುಕೊಳ್ಳುತ್ತಾರೆ

ಕರ್ನಿಮಾತಾಗೆ ಪ್ರಾಣಿ ಬಲಿ ಇದೆ. ನವರಾತ್ರಿಗೆ ಟಗರು ಬಲಿ ನೀಡುತ್ತಾರೆ. ಕರ್ನಿಮಾತಾಳಿಗೆ ಭಕ್ತರು  ಶರಾಬು ಅರ್ಪಿಸುತ್ತಾರೆ. ಈಕೆಯ  ಮೂಲ ಮಂದಿರ ಇದೆ. ಒಳಗೆ ಹಳ್ಳಿಯಲ್ಲಿದೆ.



ಇಲ್ಲಿ ಅರ್ಚಕರು ಕರ್ನಿಮಾತೆಯ ಚರನ್ ವಂಶಜರು.


ಡಾ. ಇಂದಿರಾ ಹೆಗ್ಗಡೆ.

ತರಂಗ ಜನವರಿ 26-2012











No comments:

Post a Comment