Monday, June 30, 2014

ಚಿಂತನೆ

ನಾವು ಅಮೆರಿಕಾದಲ್ಲಿ  ಚೀನೇ ಪ್ರವಾಸಿಗರ ಜೊತೆ ಪ್ರವಾಸಲ್ಲಿದ್ದೆವು.  ಆಗ ಚೀನೀ ಪ್ರವಾಸಿಗಳೊಬ್ಬಳು ಹೀಗೆ ಹೇಳಿದಳು,” ಭಾರತದಲ್ಲಿ ಪ್ರವಾಸ ಕೈಗೊಳ್ಳಲು ನನಗೆ ಬಹಳ ಆಸಕ್ತಿ. ಭಾರತದಲ್ಲಿ ಪ್ರಾಕೃತಿಕ ಸೌಂದರ್ಯ ಇದೆ, ಅಪಾರ ಐತಿಹಾಸಿಕ ಸ್ಮಾರಕಗಳಿವೆ, ಶ್ರೀಮಂತ ಅರಮನೆಗಳು, ಕೋಟೆಗಳು ಇವೆ. ಎಲ್ಲಕ್ಕಿಂತ ಮುಖ್ಯವಾಗಿ ಬುದ್ಧ ಹುಟ್ಟಿದ ನಾಡು ಅದು”
“ ಬನ್ನಿ ಬಾರತಕ್ಕೆ ನಾನೂ ಭಾರತದ 27 ರಾಜ್ಯಗಳಿಗೂ ಪ್ರವಾಸ ಮಾಡಿದ್ದೇನೆ, ರಾಜಸ್ಥಾನಕ್ಕೆ ಮೂರು ಭಾರಿ ಪ್ರವಾಸ ಹೋಗಿದ್ದೇನೆ. ಪ್ರವಾಸಿಗಳಿಗೆ ಭಾರತ ಸ್ವರ್ಗ!”
“ ಹೌದು ಆದರೆ?”
“ ಏನು?’’
“ ನಿಮ್ಮ ನಗರಗಳಲ್ಲಿ ಪುರುಷರು ಸಾರ್ವಜನಿಕವಾಗಿ ಬರ್ಹಿದೆಸೆಗೆ ಹೋಗುವುದು, (ನಗರದ ರೈಲು ಹಳಿಗಳ ಮೇಲೆ)ನಗರದ ಮುಖ್ಯ ರಸ್ತೆಗಳ ಬದಿ ಸಾರ್ವಜನಿಕರಿಗೆ ಬೆನ್ನು ಹಾಕಿ ನಿಂತು ಮೂತ್ರ ವಿಸರ್ಜನೆ ಮಾಡುವುದು –ಇದನ್ನೆಲ್ಲ ನೋಡಲು ನಮ್ಮಿಂದ ಸಾದ್ಯ ಇಲ್ಲ. ಹೀಗಾಗಿ ಭಾರತ ಪ್ರವಾಸ ಕನಸಾಗಿಯೇ ಉಳಿದಿದೆ.”
ನಾನು ಗರಬಡಿದವಳಂತೆ ಕುಳಿತೆ. ವಿದ್ಯಾವಂತ ನಾಗರಿಕರು ಕೂಡಾ  ಮಹಿಳೆಯರ ಮುಂದೆಯೂ ಹೀಗೆ ಬೆನ್ನು ಹಾಕಿ ನಿಂತುಕೊಂಡೇ ಮೂತ್ರವಿಸರ್ಜನೆ ಮಾಡುವುದನ್ನು ಕಂಡು ಕಂಡು ನಮ್ಮ (ಮಹಿಳೆಯರ)ಮನಸ್ಸು ರೋಸಿ ಹೋಗಿದೆ. ರಾತ್ರಿ ದೂರ ಪ್ರಯಾಣದಲ್ಲಿ ರಾತ್ರಿ ಮೂತ್ರ ವಿಸರ್ಜನೆಗೆ ಬಸ್ಸು ನಿಲ್ಲುತ್ತದೆ. ಆದರೆ ಪುರುಷರು ಬಸ್ಸಿನಿಂದ ಇಳಿದು ಮೂತ್ರ ವಿಸರ್ಜನೆಗೆ ನಿಲ್ಲುವ ಸ್ಥಿತಿ ನೋಡುವುದು ಮಹಿಳೆಯರ ಪಾಲಿಗೆ ಬಹಳ ಮುಜುಗರ.   ಬಸ್ಸಿನಿಂದ  ಇಳಿವ ಪುರುಷರು  ಮಹಿಳೆಯರು ಬಸ್ಸಿನಿಂದ ಇಳಿದು ಬರುವ ದಾರಿಯಲ್ಲೇ ತಮ್ಮ ಅನಾಗರಿಕತೆಯನ್ನು ಪ್ರದರ್ಶಿಸಿ ಮೂತ್ರ ವಿಸರ್ಜನೆ ಮಾಡುತ್ತಾರೆ.
ನಗರಗಳಲ್ಲಿ ಬಳಿಯಲ್ಲಿಯೇ ಶೌಚಾಲಯ ಇದ್ದರೂ ಅದರೊಳಗೆ ಹೋಗದೆ ಪುಕ್ಕಟೆ ಪ್ರದರ್ಶಕರಾಗುತ್ತಾರೆ. ಈ ರೀತಿ ಪ್ರದರ್ಶನ ಮಾಡುವುದು ಪುರುಷರ ಜನ್ಮ ಸಿದ್ಧ ಹಕ್ಕು ಎಂದು ಭಾವಿಸಿದ್ದಾರೆ. ನಮ್ಮ ಹಳ್ಳಿಯಲ್ಲಿ ಶೌಚಾಲಯವೇ ಇರಲಿಲ್ಲ. ಆ ದಿನಗಳಲ್ಲಿ ಪುರುಷರು ಮರೆಯಲ್ಲಿ ಕುಳಿತು ಮೂತ್ರವಿಸರ್ಜನೆ ಮಾಡುತ್ತಿದ್ದರು. ನಗರದ ಪುರುಷರಿಗೆ ಮರಮಾಚುವುದು ಬೇಕಿಲ್ಲ. ಇಲ್ಲಿ ಹೆತ್ತವರ ಬೇಜವಾಬ್ದಾರಿಯೂ ಇದೆ. ಹೆಣ್ಣು ಮಗುವಿಗೆ ಹೇಗೆ ಕುಳಿತುಕೊಳ್ಳಬೇಕು, ಎಲ್ಲಿ ಮೂತ್ರವಿಸರ್ಜನೆ ಮಾಡಬೇಕು ಎಂದೆಲ್ಲ ಬೋಧಿಸುವಂತೆ  ಹೆತ್ತವರು ಗಂಡು ಮಕ್ಕಳಿಗೂ ಬೋಧಿಸಬೇಕು.
ಅಮೆರಿಕದಲ್ಲಿ ಕಾರಿನಲ್ಲಿ ಪ್ರಯಣಿದುತ್ತಿದ್ದಾಗ ಎರಡು ವರುಷದ ಕಂದ ತನಗೆ ‘ಪೀ,ಪೀ’ (ಮೂತ್ರ) ಬರುತ್ತದೆ ಎಂದು ಹೇಳಿದ. ಮಲಗಿದ್ದ ಮಗುವನ್ನು ಎಬ್ಬಿಸಿ ಹಾಗೇ ಹೆಗಲಿಗೆ ಹಾಕಿಕೊಂಡು ಬಂದು ಕಾರಿನಲ್ಲಿ ಕೂರಿಸಿದ್ದರು. ಈಗ ಮಗು ‘ಪೀ, ಪೀ ‘ಎನ್ನುತ್ತಿದೆ. ದಾರಿಯಲ್ಲಿ ಕಾರು ನಿಲ್ಲಿಸಿ ಮಗುವಿಗೆ  ‘ಪೀ ಪೀ’ ಮಾಡಿಸುವ ನಿಯಮ ಇಲ್ಲಿ ಇಲ್ಲ. ವಿಮಾಣ ನಿಲ್ದಾಣಕ್ಕೆ ಮತ್ತೂ ಒಂದು ಗಂಟೆಯ ದಾರಿ ಇದೆ. ಮಗುವಿನ ತೊಯ್ದಾಟ ನೋಡಿ ಮಗುವಿನ ಅಪ್ಪ ಹೇಳಿದ,” ಬಾಟಲಿಗಾದರೂ ‘ಪೀ, ಪೀ, ಮಾಡಿಸಲಿಕ್ಕಾಗುತ್ತಾ ನೋಡು” ಎಂದ. ತಾಯಿ ಉತ್ತರಿಸಿದಳು. “ ಏನೂ ಬೇಡ. ವಿಮಾನ ನಿಲ್ದಾಣದಲ್ಲಿ ನೋಡೋಣ”
ಹಾಗೆಯೇ ವಿಮಾನ ನಿಲ್ದಾಣದ ಮುಂದೆ ಕಾರು ನಿಲ್ಲಿಸುತ್ತಿದ್ದಂತೆ ಆಕೆ ಮಗುವಿನೊಂದೆಗೆ  ನಿಲ್ದಾಣದ ರೆಸ್ಟ್ ರೂಮ್ಗೆ ಹೋಗಿ ಮೂತ್ರ ವಿಸರ್ಜನೆ ಮಾಡಿಸಿ ಬಂದಳು. (ಅಮೆರಿಕದ ವಿಮಾನ ನಿಲ್ದಾಣದಲ್ಲಿ ಸಾರ್ವಜನಿಕರಿಗೆ ಮುಕ್ತ ಪ್ರವೇಶ ಇದೆ.) ಇದು ತಾಯಿ ಮಗುವಿಗೆ ಕಲಿಸುವ ಪಾಠ.

ನಾವೇ ನಾವು ತಪ್ಪಿ ನಡೆಯುವುವಾಗ  ವ್ಯವಸ್ಥೆಯನ್ನು ದೂರಿ ಫಲ  ಇಲ್ಲ. ನಾವೆಷ್ಟು ಸಾವರ್ಜನಿಕ ಹೊಣೆಗಾರಿಕೆಯನ್ನು ಹೊರುತ್ತೇವೆ ಎನ್ನುವುದರತ್ತ ಆತ್ಮ ವಿಮರ್ಶೆ ಮಾಡಿಕೊಳ್ಳಬೇಕು.  

No comments:

Post a Comment