Monday, June 30, 2014

tulukuta News



ದಿನಾಂಕ 29-ಜೂನ್ 2014 ಬೆಂಗಳೂರು
ಅಂತರ್ರಾಷ್ಟ್ರೀಯ ಖ್ಯಾತಿಯ  ಪತ್ರಕರ್ತ, ದಲಿತ ವಾಯ್ಸ್ ಪತ್ರಿಕೆಯ ಸಂಪಾದಕ,  ಬೆಂಗಳೂರಿನ ತುಳುಕೂಟದ ಸಂಸ್ಥಾಪಕ  ಅಧ್ಯಕ್ಷ ವಿ.ಟಿ ರಾಜಶೇಖರ್ ಅವರನ್ನು ಬೆಂಗಳೂರು ತುಳು ಕೂಟವು  ಕನ್ನಡ ಸಾಹಿತ್ಯ ಪರಿಷತ್ತಿನ ಕೃಷ್ಣರಾಜಪರಿಷನ್ಮಂದಿರದಲ್ಲಿ ಅಭಿಮಾನ ಪೂರ್ವಕವಾಗಿ ಸನ್ಮಾನಿಸಿತು.
ಬಿಷು ಕಣಿಗೆ ದೀಪ ಬೆಳಗಿಸಿ ಕನ್ನಡಿಯಲ್ಲಿ ಪ್ರತಿಫಲನ ನೋಡುವುದರ ಮೂಲಕ  ಅರಣ್ಯ ಖಾತೆ ಸಚಿವ ರಮನಾಥ ರೈಗಳು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ತುಳುನಾಡಿನ ರಾಜಕಾರಣಿಗಳಷ್ಟು ದಕ್ಷರು ಇಡಿಯ ಭಾರತದಲ್ಲಿ  ಎಲ್ಲಿಯೂ ಕಾಣಲಾರರು ಎನ್ನುತ್ತಾ ಉದ್ಯಮಶೀಲತೆ ಅವರ ರಕ್ತದಲ್ಲಿಯೇ ಬೆರೆತಿದೆ  ಎಂದು ರಮನಾಥ ರೈ ಅವರು ನುಡಿದರು. ತುಳುನಾಡಿನಲ್ಲಿ ಈಗ ಆಗುತ್ತಿರುವ ಜನಾಂಗೀಯ ದ್ವೇಷದ ಬಗ್ಗೆ ಪ್ರಸ್ತಾಪಿಸುತ್ತಾ “ಮನುಷ್ಯ ಮನುಷ್ಯನನ್ನು ದ್ವೇಷಿಸಿದಾಗ ಇಡೀ ಸಮುದಾಯವೇ ಎರಡು ಪಂಗಡಗಳಾಗಿ ಘರ್ಷಣೆಗೆ ಅವಕಾಶ ಉಂಟಾಗುತ್ತದೆ. ವೈಯುಕ್ತಿಕ ನೆಲೆಯ ದ್ವೇಷ ಸಾಮುದಾಯಿಕ ನೆಲೆಗೆ ಸ್ಥಿತ್ಯಂತರಗೊಳ್ಳುತ್ತದೆ.  ಜನಾಂಗೀಯ ದ್ವೇಷವನ್ನು ಪ್ರೋತ್ಸಾಹಿಸಿದ ಪ್ರಪಂಚದ ಯಾವುದೇ ದೇಶ ಉದ್ಧಾರ ಆಗಿಲ್ಲ ಆಗುವದೂ ಇಲ್ಲ ಎಂದು ಎಚ್ಚರಿಕೆಯ ಮಾತನ್ನು ಹೇಳಿದರು.
ತುಳುವರು ನಾಡು ಬಿಟ್ಟು ದೂರಹೋದಾಗ ಜಾತಿ ಮತಗಳನ್ನು ಮರೆತು ಒಂದಾಗುತ್ತಾರೆ ಎಂದು ಹೇಳಲು ಮರೆಯಲಿಲ್ಲ.

ಸನ್ಮಾನಕ್ಕೆ ಉತ್ತರಿಸಿದ ಶ್ರೀ ವಿ.ಟಿ. ರಾಜಶೇಖರ್ ‘ತುಳುನಾಡಿನಲ್ಲಿ ಈಗ ಮೊದಲಿನ ಪರಿಸ್ಥಿತಿ ಇಲ್ಲ. ನನ್ನ ಬಾಲ್ಯಕಾಲದ ತುಳುನಾಡು ಅದಲ್ಲ. ಈಗ ಅಲ್ಲಿ ದ್ವೇಷದ ರಾಜಕಾರಣ ತಾಂಡವವಾಡುತ್ತಿದೆ’ ಎಂದರು.
ಸ್ವಾಗತ ಮತ್ತು ಪ್ರಸ್ತಾವನೆ ಮಾಡಿದ ತುಳುಕೂಟದ ಕಾರ್ಯದರ್ಶಿ ಸ್ವಯಂಪ್ರಕಾಶ್ ಅವರು , ಬೆಂಗಳೂರಿನ ತುಳುಕೂಟ ಸ್ಥಾಪಿಸಿ 42 ವರುಷಗಳು ಸಂದಿವೆ.  ಈಗಲಾದರೂ ಬೆಂಗಳೂರಿನ ತುಳುಕೂಟಕ್ಕೆ ಕರ್ನಾಟಕದ ರಾಜಧಾನಿ ಬೆಂಗಳೂರಲ್ಲಿ ಒಂದು ನೆಲೆ ಕಲ್ಪಿಸಲು ಮಾಡಿದ ಪ್ರಯತ್ನ ರಾಜಕೀಯ ವ್ಯಕ್ತಿಗಳ ಕೈವಾಡದಿಂದ ತಪ್ಪಿ ಹೋದ ಬಗ್ಗೆ ವಿವರಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ತುಳು ಕೂಟದ ಅಧ್ಯಕ್ಷರು ಆದ ಎಸ್. ಆರ್. ಹೆಗ್ಡೆ ಅವರು ತುಳು ಭಾಷೆಯನ್ನು ಕರ್ನಾಟಕ ಸರಕಾರ ಅಧಿಕೃತ ಭಾಷೆಯನ್ನಾಗಿ ಘೋಷಿಸಿಲ್ಲ. ಅಧಿಕೃತಭಾಷೆಯಾಗಿ ಕರ್ನಾಟಕ ಸರಕಾರವೇ ಘೋಷಣೆ ಮಾಡದೆ ಇದ್ದರೆ ಕೇಂದ್ರ ಸರಕಾರ 8ನೆಯ ಪರಿಚ್ಛೇಧದಲ್ಲಿ ತುಳುಭಾಷೆಯನ್ನು ಸೇರಿಸುವುದು ಕಷ್ಟ. ಬರಗೂರು ರಾಮಚಂದ್ರಪ್ಪನವರ ಸಾಂಸ್ಕೃತಿಕ ನಿಯಮದಲ್ಲಿ –ತುಳುಭಾಷೆಯನ್ನು 8ನೇ ಪರಿಚ್ಛೇಧದಲ್ಲಿ ಸೇರಿಸುವ ಪ್ರಸ್ತಾಪವನೆ ಮಾಡಲಾಗಿದೆ ಎನ್ನುತ್ತಾ ಮಾನ್ಯ ರಮನಾಥ ರೈಅವರು ಈ ಬಗ್ಗೆ ಗಮನ ಹರಿಸಬೇಕು ಎಂದರು. ಮುಖ್ಯ  ಅತಿಥಿಗಳಾಗಿ . ವಿಜಯವಾಣಿ ಪತ್ರಿಕೆಯ ಅಂಕಣಕಾರ  ಎಸ್. ಆರ್ ವಿಜಯ ಶಂಕರ್ ಹಾಗೂ ಸುಂದರ್  ನಾಯಕ್  ಭಾಗವಹಿಸಿದ್ದರು.

ಇದೇ ಸಂದರ್ಭದಲ್ಲಿ ತುಳುಕೂಟದ ಸದಸ್ಯರ ವಿಳಾಸದ ಕೈಪಿಡಿಯನ್ನು ಬಿಡುಗಡೆ ಮಾಡಲಾಯಿತು.
ಕೂಟದ ಖಚಾಂಚಿ ಸುಂದರರಾಜ ರೈ ಅವರು ವಂದನಾರ್ಪಣೆ ಮಾಡಿದರು.

ಡಾ. ಇಂದಿರಾ ಹೆಗ್ಗಡೆ



No comments:

Post a Comment