ಹೇಗೆ ಮಾಯವಾದಳು ಅಮ್ಮ
ನನ್ನಮ್ಮನ ಗರ್ಭದಲ್ಲಿ
ನಾನು ಅಣುವಾಗಿ ಮೂಡುವಲ್ಲಿ
ಅಪ್ಪನ ಪಾಲು ಇದ್ದರೂ
ಅದು ಆತ ಪಡೆದ ಆನಂದದ ಅನುಭೂತಿ!
ಬೀಜಾಂಕುರವಾಗಿ ಗರ್ಭದಲ್ಲಿ
ಅಮ್ಮ ಉಣ್ಣುವ ತುತ್ತನ್ನು
ಬಹಿಷ್ಕರಿಸಿ ಪರೀಕ್ಷಿಸಿದ್ದೆ.
ಅಮ್ಮನ ಮೋಹವನ್ನು.
ಅಮ್ಮ ಬಸವಳಿದದ್ದರೂ
ಹೊಟ್ಟೆಯ ಕಂದನ ಮೇಲೆ
ಮುನಿಸಲಿಲ್ಲ.
ತಿಂಗಳು ಒಂಬತ್ತೂ ಸಹಿಸಿದಳು
ಬಸಿರು ಸವರುತ್ತಾ
ನಾನು ಒಡ್ಡಿದ ಪರೀಕ್ಷೆಗಳನ್ನು ಮಂದಸ್ಮಿತಳಾಗಿ ಆನಂದಿಸಿದಳು.
ಮೃತ್ಯು ಮುಖ ನೋಡಿ
ಬಂದಳು ಹೆರಿಗೆಯಲ್ಲಿ
ಕಣ್ತೆರೆದು ಒಂದು
ನೋಟದಲ್ಲಿ
ನನ್ನ ನೋಡಿ ಯಮಯಾತನೆ ಮರೆತಳು
ಆನಂದ ಹಂಚಿದಳು ನನ್ನೊಂದಿಗೆ
ಮಂದಹಾಸದಲಿ
ಆದರೂ ನನ್ನ ಅಸ್ಮಿತೆಗೆ
ಅಪ್ಪನ ಹೆಸರು…
ನಾನು ಕಂಡಿರದ ಅಪ್ಪನ ಮುದ್ರೆ
ಆಸ್ವತ್ರೆಯಲ್ಲಿ
ಶಾಲೆಯಲ್ಲಿ ದಾಖಲೆಯಲ್ಲಿ
ಹೇಗೆ ಮಾಯವಾದಳು
ಅಮ್ಮ
*****
ಡಾ. ಇಂದಿರಾ ಹೆಗ್ಗಡೆ.
No comments:
Post a Comment