Tuesday, February 18, 2014

ಜಾತಿಮೂಲ


ಜಾತಿ ತಂದ ಚಿಂತನೆ.


 

 

 

ನಾನು ಹುಟ್ಟಿನಿಂದ ಬಂಟ(ಒಕ್ಕೆಲಕುಲು) ಜಾತಿಯಲ್ಲಿ ಗುರುತಿಸಿಕೊಂಡಿದ್ದೆ. ಗುತ್ತು ಮನೆತನದ ಬಂಟ ಜಾತಿಯ ಎಲ್ಲ ಮೇಲರಿಮೆಗಳ ಆಯಾಮಗಳನ್ನು  ತಿಳಿ ಹೇಳುತ್ತಾ ಅವಿಭಕ್ತ ಕುಟುಂಬದ ಎಲ್ಲಾ ಮಕ್ಕಳನ್ನು ಬೆಳೆಸುವಲ್ಲಿ ಎಲ್ಲಾ ಹಿರಿಯರ ಪಾಲಿತ್ತು. 9 ಶಾಖೆಗಳ ಸುಮಾರು 13 ಮಕ್ಕಳು ಓರಗೆಯವರಿದ್ದೆವು. ಜಾತಿಯ ಮತ್ತು ಮನೆತನದ ಮೇಲರಿಮೆಯನ್ನು ಒಪ್ಪಿಕೊಳ್ಳೋಣವೆಂದರೆ ಕಾಡಿದ್ದು ಬ್ರಾಹ್ಮಣರ ಮೇಲರಿಮೆ.  ಅಂತಹ ಕೆಲವು ಸನ್ನಿವೇಶಗಳನ್ನು ನಾನಿಲ್ಲಿ ಪ್ರಸ್ತುಪಡಿಸುತ್ತೇನೆ.

 

1 ಆರನೇ ತರಗತಿ ಓದುತ್ತಿದ್ದ ನಾನು ಮತ್ತು ನನ್ನ ಓರಗೆಯ ಹಿರಿ ಕಿರಿಯರು (ಎಲ್ಲರೂ 10/11ವಯಸ್ಸಿನವರು)ಶಾಲಾ ವಾರ್ಷಿಕೋತ್ಸವ ಮುಗಿಯುವ ಮೊದಲೇ ರಾತ್ರಿಯಾಯಿತೆಂದು ಮನೆಯ ದಾರಿ ಹಿಡಿದಿದ್ದೆವು. ಮನೆ ಇನ್ನೇನು ಒಂದು ಕಿಲೋಮೀಟರ್ ದೂರ  ಇರುವಾಗ ಕಾಡಿನ ದಾರಿಗೆ ಹೆದರಿ ನನ್ನ ಓರಗೆಯವಳು, ದಾರಿಯಲ್ಲಿ ಇರುವ  ಬ್ರಾಹ್ಮಣರ ಮನೆಯಲ್ಲಿ ರಾತ್ರಿ ಮಲಗಿ ಬೆಳಿಗ್ಗೆ ನಮ್ಮ ಮನೆಗೆ ಹೋಗಲು ಸಲಹೆ ನೀಡಿದ್ದಳು. ನಾನು ಬೇಡ ಎಂದರೂ ಕೇಳದೆ ಅವರನ್ನು ಕೂಗಿ ಎಬ್ಬಿಸಿದ್ದಳು.  ಆದರೆ ಆ ಮನೆಯ ಬ್ರಾಹ್ಮಣ ಮಹಿಳೆ ನಾವು ಮಲಗುವ ಚಾಪೆಯನ್ನು ಬೆಳಿಗ್ಗೆ ಒಗೆದು ಹಾಕಬೇಕೆಂದಾಗ ನಾನು ಪ್ರತಿಭಟಿಸಿ ಅಲ್ಲಿ ಮಲಗಲಾರೆ ಎಂದು ಅಲ್ಲಿಗೆ ಬೆನ್ನು ತಿರುಗಿಸಿದ್ದೆ.  ನನ್ನ ಓರಗೆಯವಳು ತಾನು ಚಾಪೆ ಒಗೆದು ಹಾಕುತ್ತೇನೆ ಎಂದರೂ “ನಾನು ಒಗೆದರೂ ಒಂದೆ..ನೀನು ಒಗೆದರೂ ಒಂದೆ” ಎಂದು ನಾನೊಬ್ಬಳೆ ಮನೆಗೆ ಹೋಗ್ತೀನಿ ಎಂದು ಯಾವ ಸಮಜಾಯಿಸಿಗೂ ಬಗ್ಗದೆ ಮರಳಿದ್ದೆ. ಉಳಿದವರು ನನ್ನನ್ನು ಅನುಸರಿಸಲೆ ಬೇಕಾಗಿತ್ತು. ಹೀಗೆ ಆರನೆಯ ತರಗತಿಯಲ್ಲಿರುವಾಗಲೇ ಜಾತೀಯ ಪ್ರಭಾವವನ್ನು ಗಮನಿಸಲು ಆರಂಭಿಸಿದ್ದೆ.

 

2  ಈ ಪ್ರತಿಭಟನೆಯ ಮೆಲುಕು ಮುಗಿಯದಿರುವಾಗ, `ಕ್ರೈಸ್ತರ ಶಾಲೆಯಲ್ಲಿ ಓದುವ ನಿನ್ನನ್ನು ಮುಟ್ಟಬಾರದು, ನೀನು ಕೆಳ ಜಾತಿ  ಮನೆಯಲ್ಲಿ ನೀರು ಕುಡಿದು ಬಂದೆ’…ಎಂದೆಲ್ಲ ಹಂಗಿಸುವಿಕೆಗೆ ನಾನು ಪ್ರತಿಕ್ರಿಯಿಸುತ್ತಿರಲಿಲ್ಲ.  ಆದರೆ ನನ್ನೊಳಗೆ ಕೆಲವು  ಪ್ರಶ್ನೆ ಕಾಡುತ್ತಿತ್ತು. ನಮ್ಮ ಮನೆಗೆ ಬರುತ್ತಿದ್ದ ಕೆಳಜಾತಿಯ ಒಂದು ಸುಂದರ ಅಜ್ಜಿಯನ್ನು ನಮ್ಮ ಹಿರಿಯಜ್ಜರ ಪ್ರೇಯಸಿ ಎನ್ನುವುದು; ಅವಳ ಮಕ್ಕಳನ್ನು ಹಿರಿಯಜ್ಜನ ಮಕ್ಕಳು ಎನ್ನುವುದು ನನಗೆ ಅಚ್ಚರಿಯ ವಿಷಯ!  ಆ ಮಕ್ಕಳು  ಆ ಅಜ್ಜಿಯ ಜಾತಿಯಲ್ಲಿಯೇ ಗುರುತಿಸಿಕೊಂಡಿದ್ದವು. ಅಪ್ಪನ ಮನೆಯವರು ಅವರ ಮಕ್ಕಳೆಂದು ಗುರುತಿಸುವುದು ಅನಧಿಕೃತವಾಗಿ. ಆ ಮಕ್ಕಳು ನಮ್ಮ ಮನೆಗೆ ಬಂದರೆ ಕೆಳಜಾತಿಯರಂತೆ ಇರುತ್ತಿದ್ದರು. ಈ ಸಂಬಂಧ ನನ್ನಲ್ಲಿ ಪ್ರಶ್ನೆಗಳನ್ನು ಎತ್ತುತ್ತಿತ್ತು. ಹಾಗಾದರೆ ಹಿರಿಯಜ್ಜ  ಅವಳ(ಪ್ರೇಯಸಿ) ಮನೆಯಲ್ಲಿ ನೀರೂ ಕುಡಿದೇ ಇಲ್ಲವೆ? ಗಂಡ ಹೆಂಡತಿಯರಂತೆ ಇದ್ದರಲ್ಲವೆ ಮಕ್ಕಳಾಗುವುದು? ಅಜ್ಜ ಯಾವತ್ತೂ ಅವಳ ಪ್ರೀತಿಯ ಕೈ ತುತ್ತು ತಿಂದಿಲ್ಲವೆ? ಹಾಗಾದರೆ ಜಾತಿ ಹುಟ್ಟುವುದೆಲ್ಲಿ?

 

3  ನನ್ನ `ತುಳುವರ ಮೂಲತಾನ ಆದಿ ಆಲಡೆ ಪರಂಪರೆ ಮತ್ತು ಪರಿವರ್ತನೆ’ ಕೃತಿಗೆ ಕ್ಷೇತ್ರಾಧ್ಯಯನ ಮಾಡುತ್ತಿದ್ದಾಗ ಮತ್ತೆ ಜಾತಿ ಮೂಲ ನನ್ನನ್ನು ಕಾಡಿತು. ಈಗಲೂ ತುಳುನಾಡಿನಲ್ಲಿ ನಡೆಯುವ ಒಂದು ಆಚರಣೆ ಜಾತಿಯ ಮೂಲವನ್ನು ತೋರಿಸಿಕೊಡುತ್ತದೆ. ಮೂಲಸ್ಥಾನ  ಎಂದು ನಂಬಲಾದ ಕೆಲವು ನಾಗ ಬ್ರಹ್ಮ ಕ್ಷೇತ್ರಗಳು ಈಗಲೂ ಕಾಡಿನಲ್ಲಿ ಇವೆ. ಇವುಗಳು ವೈದಿಕೀಕರಣ ಗೊಂಡಿಲ್ಲ. ಆದರೆ ವೈದಿಕ ಪ್ರಭಾವಕ್ಕೆ ಒಳಗಾಗಿದೆ. ಇಂತಹ ಕ್ಷೇತ್ರಗಳಲ್ಲಿ  ಒಂದು ಆಚರಣೆ ನಡೆಯುತ್ತದೆ. ವರ್ಷಕ್ಕೆ ಒಮ್ಮೆ ಅನೇಕ ತುಳು ಜಾತಿಗಳು ಒಂದು ನಾಗಬ್ರಹ್ಮ ಕ್ಷೇತ್ರಕ್ಕೆ ಹೋಗಿ ಅಲ್ಲಿಯ ಆಚರಣೆಯಲ್ಲಿ ಭಾಗಿಗಳಾಗುತ್ತಾರೆ. ಅಂದು ನಾಗ ಬ್ರಹ್ಮರ ಉಪಾಸನೆ ಅಲ್ಲಿ ನಡೆಯುತ್ತದೆ.  ಅವರವರ ಪರಂಪರೆಯಂತೆ ಆಯ್ದ ದಿನ ಅಥವಾ ನಿಹಗಿತ ದಿನ  ಅನೇಕ ತುಳು ಜಾತಿಗಳವರು ತಮ್ಮ ತಮ್ಮ ಮೂಲಸ್ಥಾನ ನಾಗ ಬ್ರಹ್ಮ ಕ್ಷೇತ್ರದಲ್ಲಿ, ಕ್ಷೇತ್ರದ ನೀರನ್ನು ಬಳಸಿ ಅಡುಗೆ ಬೇಯಿಸಿ ಪೂರ್ವಜರಿಗೆ ಎಡೆ ಇಟ್ಟು ತಾವೂ ಉಂಡು ಮನೆಗೆ ಮರಳುತ್ತಾರೆ. ಇಲ್ಲಿ ನನ್ನ ವಿವೇಚನೆಗೆ ಹೊಳೆದುದು ತುಳುವರೆಲ್ಲ  ಒಂದು ಬುಡಗಟ್ಟು ಮೂಲದವರು ಎನ್ನುವುದಕ್ಕೆ ಈ ಆಚರಣೆ ದೃಷ್ಟಾಂತ  ಎನ್ನುವುದು. (ಇದರ ಚರ್ಚೆಯನ್ನು ಆ ಕೃತಿಯಲ್ಲಿ ಎತ್ತಿಕೊಂಡಿದ್ದೇನೆ) ಇಂತಹ ಮೂಲಕ್ಷೇತ್ರಗಳ   ಅಂಕೆಯಲ್ಲಿ ಇರುವ ಆಚರಣಾ ಕಂಬುಲವೂ ಜಾತಿ ರಹಿತ,ಧರ್ಮ(ಮತ)ರಹಿತ ಸಮಾಜ ಮೂಲವನ್ನು ಸಂಕೇತಿಸುತ್ತದೆ.

 

4  ಒಂದು ವಂಶ/ಬಳಿಯ ಕೊರಗರೂ ಇದ್ದಾರೆ, ಬಂಟರು, ಬಿಲ್ಲವರು ಮೊಗವೇರ, ಗೌಡ –ಹೀಗೆ ತುಳುಜಾತಿಗಳ ಬಳಿ ಒಂದು ಆಗಿದ್ದು ಈ ಬಳಿ ವ್ಯವಸ್ಥೆ ಜಾತಿ ಮೂಲವನ್ನು ಸಂಕೇತಿಸುತ್ತದೆ.

 

5 ಮಾತೃ ವಂಶೀಯ ಪದ್ಧತಿಯಲ್ಲಿ ನಡತೆ  ಕೆಟ್ಟ  ಅಥವಾ ಅನ್ಯಜಾತಿಯ ಪುರುಷನೊಂದಿಗೆ ಓಡಿಹೋದ ಹೆಣ್ಣು ‘ಮರ್ಯಾದಾ ಹತ್ಯೆ’ಗೆ ಸಿಗಲಿಲ್ಲವಾದರೆ ಅಂತಹ ಹೆಣ್ಣಿನ ಅನುಪಸ್ಥಿತಿಯಲ್ಲೂ ಆ  ಹೆಣ್ಣಿಗೆ ಮಾತೃ ವಂಶೀಯ ಕುಟುಂಬದಿಂದ ಬಹಿಷ್ಕಾರ ಹಾಕಲಾಗುತ್ತದೆ. (ಕೆಲವು ಸಂದರ್ಭಗಳಲ್ಲಿ ಬಹಿಷ್ಕಾರಕ್ಕೆ ಅನ್ಯಕಾರಣಗಳೂ ಇರಬಹುದು) ಹಾಗೆ ಓಡಿ ಹೋದ ಹೆಣ್ಣಿನ ಮಕ್ಕಳು ಕೆಲವು ತಲೆಮಾರುಗಳ ನಂತರ ಮತ್ತೆ ತಮ್ಮ ವಂಶಮೂಲ(ಬಳಿ)ದ ಹೆಸರಿನ (ಅಥವಾ ಮೌಖಿಕವಾಗಿ ನೆನಪಲ್ಲಿ ಉಳಿದರೆ) ಮನೆಯನ್ನು ಹುಡುಕುತ್ತಾ ಮತ್ತೆ ಮೂಲ ಕುಟುಂಬಕ್ಕೆ ಸೇರುವ  ಆಚರಣೆ ನಡೆಯುತ್ತದೆ. ಅಂತಹ ಶಾಖೆ  ಮತ್ತೆ ಮೂಲ ಕುಟುಂಬಕ್ಕೆ ಸೇರುವಾಗ ಹೆಚ್ಚಾಗಿ ಮಹಿಳೆಯರೇ ಅವರ ಸೇರುವಿಕೆಯನ್ನು ವಿರೋಧಿಸುತ್ತಾರೆ. ಆದರೆ ದೈವಾರಾಧನೆಯಲ್ಲಿ ಜಾತಿ ಮತ  ಇಲ್ಲವಾದುರಿಂದಲೋ ಏನೋ, ದೈವ  ಮಾತ್ರ  ಇಂತವರನ್ನು ತಪ್ಪು ದಂಡ ಹಾಕಿ ಒಪ್ಪಿಕೊಂಡು ಕುಟುಂಬಕ್ಕೆ ಸೇರಿಸಿಕೊಳ್ಳುತ್ತದೆ. ಅಂತಹ ಕೆಲವು ಸದಸ್ಯರ ಸೇರುವಿಕೆಯನ್ನು ನಾನು ಬಾಲ್ಯದಲ್ಲೂ ನೋಡಿದ್ದೇನೆ, ಈಗಲೂ ನೋಡುತ್ತಿದ್ದೇನೆ.

 

6 ಬ್ರಾಹ್ಮಣ ಪುರೋಹಿತರ ಗೃಹಸ್ಥೆ ಕೆಳಜಾತಿಯ ಪುರುಷನೊಂದಿಗೆ ಲೈಂಗಿಕ ಸಂಬಂಧ ಇರಿಸಿಕೊಂಡಿದ್ದು. ಬಂಟ ಗೃಹಸ್ಥೆ ಕೆಳಜಾತಿಯ ಪುರುಷನೊಂದಿಗೆ ಲೈಂಗಿಕ ಸಂಬಂಧ ಇರಿಸಿಕೊಂಡಿದ್ದು ನನ್ನಜ್ಜಿ ಹೇಳಿದ್ದ ಕಥೆ. ಜನನ ನಿಯಂತ್ರಣ ಇಲ್ಲದ  ಆ ಕಾಲದಲ್ಲಿ ಇವರಲ್ಲಿ ಜನಿಸಿದ ಮಕ್ಕಳು ಯಾವ ಜಾತಿ? ಪುರೋಹಿತರ ಮಡದಿಯ ಗರ್ಭದಿಂದ ಜನಿಸಿದ ಶಿಶು ಮುಂದೆ ಅರ್ಚಕ/ಪುರೋಹಿತ ಆಗಿದ್ದಿರಬಹುದು. ಹಾಗಾದರೆ ಜಾತಿಯ ಮಡಿ ಎಲ್ಲಿ ಉಳಿಯಿತು?

 

7 ಜಾತಿ ಹುಟ್ಟಿನಿಂದ ಬರುತ್ತದೆ ಎನ್ನುವುದು ಈಗ ಒಪ್ಪಿಕೊಂಡ ವಿಚಾರ. ಹುಟ್ಟು ಎನ್ನುವುದು ತಂದೆಯ ಮೂಲಕವೋ ತಾಯಿಯ ಮೂಲಕವೋ ಎಂದಾಗ ಅಲ್ಲಿ ಮತ್ತೆ ಗೊಂದಲ ಉಂಟಾಗುತ್ತದೆ. ಕೇರಳದ ನಂಬೂದಿರಿ ಬ್ರಾಹ್ಮಣರು ನಾಯರ್ ಮಹಿಳೆಯರನ್ನು ಸ್ಥಳೀಯ ನೆಲದ (ಅವೈದಿಕ)ಪದ್ಧತಿಯಂತೆ ವರಿಸುವ ಸಂಪ್ರದಾಯ ಇತ್ತು. ಅವರಿಗೆ ಹುಟ್ಟಿದ ಮಕ್ಕಳು ತಾಯಿಯ ಜಾತಿಯವರಾಗುತ್ತಿದ್ದರು. ಕಾಸರಗೋಡಿನ ಕುಂಬ್ಲೆ ಅರಮನೆಯ ಕನ್ಯೆಯರು ಬ್ರಾಹ್ಮಣ ಪುರುಷರನ್ನು ನೆಲದ ಪದ್ಧತಿಯಂತೆ ವಿವಾಹ ಆಗುತ್ತಿದ್ದರು. ಅವರಿಗೆ ಹುಟ್ಟಿದ ಮಕ್ಕಳು ಕುಂಬಳೆಯ ಕದಂಬ ವಂಶದ ರಾಜಕುಮಾರ ರಾಜಕುಮಾರಿಯರಾಗುತ್ತಿದ್ದರು. ಇದು ಮಾತೃವಂಶೀಯ ಪದ್ಧತಿಯ ಜೊತೆ ಬ್ರಾಹ್ಮಣರೂ ಮಾಡಿದ ಹೊಂದಾಣಿಕೆ.

 

ಎರಡು ಜಾತಿಗಳೊಳಗೆ ನಡೆಯುವ ವಿವಾಹವು ಅನುಲೋಮ ವಿಲೋಮ ಪದ್ಧತಿ ಆಗುತ್ತದೆ. ಮೇಲ್ ಜಾತೀಯ ಪುರುಷ ಕೆಳಜಾತೀಯ ಹೆಣ್ಣನ್ನು ವಿವಾಹ  ಆಗಲೀ, ಆಗದಿರಲಿ, ಅವರ ಸಂಪರ್ಕದಿಂದ ಜನಿಸುವ ಮಕ್ಕಳು ಕೆಳಜಾತಿಗೆ ಸೇರಿರುವ ಉದಾಹರಣೆ ಇದೆ. ಅದೇ ರೀತಿ ಮೇಲ್ ಜಾತೀಯ ಬ್ರಾಹ್ಮಣ ಹೆಣ್ಣು ಕೆಳಜಾತಿಯ ಗಂಡನ್ನು ವಿವಾಹ  ಆದಾಗ ಅವರ ಮಕ್ಕಳು ಕೆಳ ಜಾತಿಯ ಪುರುಷನ ಜಾತಿಗೆ ಸೇರಿದ ಉದಾಹರಣೆ ಇದೆ. ನಾನು ಉದಾಹರಿಸುವ ಪುರುಷ ಮಾತೃವಂಶೀಯ ಪದ್ಧತಿಯವ. ಮಾತೃವಂಶೀಯ ಪದ್ಧತಿಯಲ್ಲಿ ಪುರುಷನ ಮಕ್ಕಳು ಪುರುಷನ ವಂಶಕ್ಕೆ, ಸೇರುವುದಿಲ್ಲ. ವಂಶಕ್ಕೆ ಸೇರದೆ ಮೇಲೆ ಜಾತಿಗೆ ಸೇರಲು ಸಾಧ್ಯ  ಇಲ್ಲ.. ಆದರೂ ಬ್ರಾಹ್ಮಣ ಹೆಣ್ಣು ತನ್ನ ಹೆತ್ತವರ ಊರಲ್ಲೇ ಇದ್ದು ಕೆಳಜಾತಿಯ ಗಂಡನಿಗೆ ಜನಿಸಿದ ಮಕ್ಕಳು ತಂದೆಯ ಜಾತಿಯಲ್ಲಿಯೇ ಗುರುತಿಸಿಕೊಂಡಿದ್ದು 1960ರ ದಶಕದ ಕಥ. ಇವರ ಮಕ್ಕಳಿಗೆ ತಮ್ಮ ಜಾತಿಯಾವುದೆಂದು ತಿಳಿಯುವಾಗ ಗೊಂದಲ ಕಾಡಿರಬಹುದು. ಅದೇ ಊರಲ್ಲಿ ಇರುವ ಬ್ರಾಹ್ಮಣ ಜಾತಿಯ  ಅಜ್ಜ- ಅಜ್ಜಿಯಿಂದ ಪ್ರೀತಿಯನ್ನು ನಿರೀಕ್ಷೆ ಮಾಡುವುದಿರಲಿ, ಅವರ ಮುಂದೆ ಶೂದ್ರರಂತೆ ನಿಲ್ಲುವ ಸ್ಥಿತಿ ಉಂಟಾದಾಗ ಎಳೆಯ ಮಕ್ಕಳ ತುಮುಲ ಮಾತ್ರವಲ್ಲ ಅಜ್ಜ ಅಜ್ಜಿಯ ತುಮುಲವನ್ನೂ ನಾವು ನಿರ್ಲಕ್ಷಿಸುವಂತಿಲ್ಲ. ಮಕ್ಕಳು ಅಪ್ಪನ ವಂಶಕ್ಕೆ, ಜಾತಿಗೆ ಸೇರುವ ಪದ್ಧತಿಯೇ ಇಲ್ಲದ ಮಾತೃಸಮಾಜದ ಅಪ್ಪನ ಜಾತಿಯನ್ನು ಅಪ್ಪುವ  ಅನಿವಾರ್ಯತೆ ಪಿತೃಪ್ರಧಾನ ಸಮಾಜದ ಪುರುಷನ ಮಕ್ಕಳಿಗೆ ಬಂದೊದಗಿತ್ತು.  

                                                           

ಜಾತಿಯ ಪ್ರಕ್ರಿಯೆಯಲ್ಲಿ ಸಂಸ್ಕೃತೀಕರಣವಾಗಲೀ ಬ್ರಾಹ್ಮಣೀಕರಣವಾಗಲೀ ಕಾಣುವುದಿಲ್ಲ.  ಮಧ್ವಾಚಾರ್ಯರ ಕಾಲಕ್ಕೆ ಕೆಲವು ಮೊಗವೀರರನ್ನು ಅವರು ಬ್ರಾಹ್ಮಣರನ್ನಾಗಿ ಮಾಡಿದ್ದಿರಬಹುದು. ಒಬ್ಬ ಕೆಳಜಾತಿಯವನು ಬ್ರಾಹ್ಮಣನಾಗಿ, ಆ ಮೂಲಕ    ಜಾತೀಯ ಮೇಲ್ಮುಖ ಚಲನೆಯಾಗುವುದು ಅಪರೂಪದ ಪ್ರಸಂಗ.  ಅಂತರಜಾತೀಯ ಮದುವೆಗಳಲ್ಲಿ  ಜಾತೀಯ ಮೇಲ್ಮುಖ ಚಲನೆಯಾಗಬಹುದು. ಅದು ಇತ್ತೀಚೆಗೆ ನಗರಗಳಲ್ಲಿ ಬೆಳೆಯುವ ಪ್ರಕ್ರಿಯೆ. ಹಳ್ಳಿಗಳಲ್ಲಿ ಬ್ರಾಹ್ಮಣನಿಗೆ ಶೂದ್ರ ಹೆಣ್ಣಿನಲ್ಲಿ ಹುಟ್ಟಿದ ಮಗ ಬ್ರಾಹ್ಮಣನಾಗಿ ಪಿಂಡ ಪ್ರಧಾನ ಮಾಡುವ ಹಕ್ಕು ಪಡೆಯುವುದಿಲ್ಲ. ಎಂ.ಎನ‍್ ಶ್ರೀನಿವಾಸ ಹೇಳುವ ಸಂಸ್ಕೃತೀಕರಣ ಬ್ರಾಹ್ಮಣರ ಅನುಕರಣೆಯಲ್ಲಿ ಮಾತ್ರ ಕಾಣುವಂತಹುದು. ಅದೂ ನಗರಗಳಲ್ಲಿ. (ಶೂದ್ರರ ಮನೆಗಳಲ್ಲಿ ದೇವರ ಕೋಣೆ, ದೇವರ ಮಂತ್ರೋಚ್ಛಾರಣ ಸಮೇತ ಪೂಜೆ ಇತ್ಯಾದಿ ವಿಷಯದಲ್ಲಿ ಮಾತ್ರ.) ಒಳ್ಳೆಯ ಉಡುಗೆ, ಕೂಡಾ ಬ್ರಾಹ್ಮಣರ ಅನುಕರಣೆ ಎನ್ನಲಾಗದು. ಬ್ರಾಹ್ಮಣರಂತೆ ಮೇಲಂಗಿ ಧರಿಸದೆ ಶೂದ್ರರು ಇರುವುದಿಲ್ಲ. ವಿದ್ಯಾವಂತ ಜನರು ಸಂಸ್ಕೃತೀರಣಗೊಳ್ಳುವುದು ಸಹಜವಾದುದು. ಸಂಸ್ಕೃತೀಕರಣಗೊಂಡ ವ್ಯಕ್ತಿ ಮೇಲ್ ಜಾತಿಯ ಸ್ಥಾನ ಮಾನ ಪಡೆಯಬಹುದು, ಅದು ಪ್ರಜಾ ಪ್ರಭುತ್ವ ಪ್ರಕ್ರಿಯೆಯ ಭಾಗವಾಗಿ ಮಾತ್ರ. ಸಂಸ್ಕೃತೀಕರಣವನ್ನು ಬ್ರಾಹ್ಮಣೀಕರಣವೆನ್ನುವುದು ಸರಿಯಲ್ಲ.  ಭೂತಾರಾಧನೆಗೆ ಪುರಾಣ ಕಥೆ ಸೃಷ್ಟಿಸಿ ಭೂತಾರಾಧನೆಯನ್ನು ವೈದಿಕ ದೇವರನ್ನಾಗಿಸುವುದು ಬ್ರಾಹ್ಮಣೀಕರಣ. ಶ್ರೀನಿವಾಸ್ ಅವರು ಕೊಡಗಿನ ಹೀಗೆ ಪರಿವರ್ತನೆ ಆಗುತ್ತಿರುವ ಉಪಾಸನೆಯನ್ನು ಗಮನದಲ್ಲಿ ಇಟ್ಟುಕೊಂಡು ಬ್ರಾಹ್ಮಣೀಕರಣ ಎಂದಿರುವುದು. ಅದು ಉದಾಹರಿಸಿದ್ದ ಭೂತಾರಾಧನೆಯಂತಹ ಉಪಾಸನೆಗೆ ಸಂಬಂಧಿಸಿ. ಮೂಲತಃ ಶ್ರೀನಿವಾಸ್ ಅವರು ಪ್ರಯೋಗಿಸಿದ ಬ್ರಾಹ್ಮಣೀಕರಣ ಪದದ ಬದಲಿಗೆ ಅವರ ಗೈಡ್ ‘ಸಂಸ್ಕೃತೀಕರಣ’ ಎಂಬ ಪದ ಬಳಸಲು ಸಲಹೆ ನೀಡಿದ್ದು ಸರಿ ಅಲ್ಲ  ಎಂಬುದು ನನ್ನ ಅಭಿಪ್ರಾಯ. ಯಾಕೆಂದರೆ ಬ್ರಾಹ್ಮಣಿಕರಣ ಬೇರೆ ಸಂಸ್ಕೃತೀಕರಣ ಬೇರೆ. ಉಪಾಸನಾ ಕ್ಷೇತ್ರಗಳ ಬ್ರಾಹ್ಮಣಿಕರಣದತ್ತ ಆ ಕ್ಷೇತ್ರದ ಆಡಳಿತ ಇರುವ ವಿದ್ಯಾವಂತ ಜನರೇ ಒಲವು ತೋರಿಸುತ್ತಾರೆ. ಇಂತಹ ಕ್ಷೇತ್ರಗಳಿಗೆ ಪುರಾಣ ಕಥೆ ರಚಿಸಿ ಪ್ರಸಿದ್ಧಿಗೆ ತರುತ್ತಾರೆ.

 

 
 

                                                                                

 

 

 

 

 

 

 

 

 

 

 

 

 

4

No comments:

Post a Comment