Monday, April 27, 2020

“ಯಾನ್ ಪಿರ ತೂಪುಜಿ, ನಿಕುಲ ಪಿರಾವುಡೆ ಬಲೆ” (ನಾನು ಹಿಂತಿರುಗಿ ನೋಡುವುದಿಲ್ಲ. ನೀವು ಹಿಂದಿನಿಂದ ಅನುಸರಿಸಿ ಬನ್ನಿ .)

“ಯಾನ್ ಪಿರ ತೂಪುಜಿ, ನಿಕುಲ ಪಿರಾವುಡೆ ಬಲೆ”
(ನಾನು ಹಿಂತಿರುಗಿ ನೋಡುವುದಿಲ್ಲ. ನೀವು ಹಿಂದಿನಿಂದ ಅನುಸರಿಸಿ ಬನ್ನಿ .)

ಸಂದರ್ಭ 1 ಬಂಟರು ಒಂದು ಸಮಾಜೋ ಸಾಂಸ್ಕøತಿಕ ಅಧ್ಯಯನ -1997

ಬೋಲ ಸೋಮನಾಥೇಶ್ವರ ಬಹಳ ಅಪ್ಯಾಯಮಾನ ಕ್ಷೇತ್ರದಲ್ಲಿದೆ. ಈ ದೇವಸ್ಥಾನ ಬಹಳ ಎತ್ತರದ ಜಾಗಲ್ಲಿದೆ. ದೇವಸ್ಥಾನದ ಮುಂದೆ ನದಿ ಹರಿಯುತ್ತಿದೆ. ಈ ನದಿ ತಾನು ಹರಿವ ಪ್ರದೇಶಗಳಲ್ಲಿ ಆಯಾ ಪ್ರದೇಶದ ಹೆಸರು ತನಗಂಟಿಸಿ ಕೊಂಡು ಹರಿಯುತ್ತದೆ. “ಪಿಲಿಯೂರು ತುದೆ” ‘ಸಂಕಲೆ ಕರಿಯ ತುದೆ’...ಇತ್ಯಾದಿ. (ಕರಿಯ ಅಂದರೆ 1 ಗುಂಡಿ 2ದಾಟುವ ಸ್ಥಳ.) ಒಟ್ಟಾರೆ ಮುಲ್ಕಿಯ ಚಿತ್ರಾಪು ಬಳಿ ಕಡಲು ಸೇರುವ ಮೊದಲು “ಶಾಂಭವಿ” ನದಿ ಎಂದು ಹೆಸರು ಪಡೆಯುತ್ತದೆ.

‘ಸಂಕಪಾಲೆ’ ಎನ್ನುವುದು ಸರ್ಪದ ಹೆಸರು. ತುಳುವರು ಆರಾಧಿಸುವ ನಾಗಬ್ರಹ್ಮ. ಸಂಕಪಾಲೆ ಹೆಸರು ಈ ನದಿಯ ಈ ಭಾಗಕ್ಕೆ ಸಮೀಕರಣಗೊಂಡಿದೆ. ‘ಸಂಕಲೆ ಕರಿಯ’ ಎನ್ನುವುದು ಈ ನದಿಯಲ್ಲಿ ಇರುವ ಬೃಹತ್ ಗುಂಡಿ. ನೀರಿಗೂ ಹಾವಿಗೂ ನಂಟು ಇದೆ. (ಈ ವಿಷಯವನ್ನು ಶಂಬಾ ಜೋಷಿಯವರು ಬಹಳ ಅರ್ಥವತ್ತಾಗಿ ವಿವರಿಸುತ್ತಾರೆ) ಹೀಗಾಗಿ ಇಲ್ಲಿಯ ನೀರಿನ ಗುಂಡಿಗೆ ‘ಸಂಕಲೆ ಕರಿಯ’ ಎಂದು ಹೆಸರಾಗಿರಬಹುದು ಎನ್ನುವುದು ನನ್ನ ಊಹೆ. ದೇವಸ್ಥಾನದ ನೇರ ಎದುರಿಗೆ‘ಸಂಕಲೆ ಕರಿಯ ಗುಂಡಿ ಇದೆ. ಅದರಾಚೆ ನದಿದಾಟುವ ಕರಿಯವೂ ಇದೆ. ನಾಗನಿಗೂ ನೀರಿಗೂ ಸಂಬಂಧ ಇರುವಂತೆ ತುಳುನಾಡಿನ ನೆಲ ಮೂಲದ ಉಪಾಸನೆಯಲ್ಲಿ ನಾಗನಿಗೂ ಸೂರ್ಯನಿಗೂ ಸಂಬಂಧ ಇದೆ.

ಸೋಮನಾಥೇಶ್ವರ ದೇವಸ್ಥಾನ ಮೂಲತಃ ಸೋಮ/ಸೂರ್ಯ ದೇವಸ್ಥಾನ. ಈಗ ಸೋಮನಾಥೇಶ್ವರ. ಇದರ ಇತಿಹಾಸ ತಿಳಿದಿಲ್ಲ. ದೇವಸ್ಥಾನದ ಈಶಾನ್ಯ ಮೂಲೆಯಲ್ಲಿ ಪುಟ್ಟ ಗುಡಿಯಲ್ಲಿ ಸೋಮನಾಥನ ಶಿಲಾ ಪ್ರತಿಮೆ ಇದೆ. ಮಾತ್ರವಲ್ಲ ನೆಲಮೂಲದ ರೆಕ್ಕಸಿರಿ, ನಾಗಬ್ರಹ್ಮ ಪರಿವಾರ ದೈವಗಳ ಕ್ಷೇತ್ರ ಇದು. ಈ ಕ್ಷೇತ್ರದಲ್ಲಿ ರೆಕ್ಕೆಸಿರಿ ದೈವದ ಪ್ರಭಾವ ಪ್ರತಾಪ ಬಹಳ ಪ್ರಸಿದ್ಧಿ.

ನಾನು ಬೋಲ ಗ್ರಾಮಕ್ಕೆ ಕ್ಷೇತ್ರಕಾರ್ಯಕ್ಕೆ ಹೋಗುವ ಸಂದರ್ಭ. ನದಿಯ ಆಚೆ ದಡದ ಬೋಲಕ್ಕೆ ಹೊರಡುವಾಗ ನಾನು ನನ್ನ ನಾದಿನಿ ಕಸ್ತೂರಿಯನ್ನು ಜೊತೆಗೆ ಒಯ್ದೆ. ಬೋಲ ಗ್ರಾಮಕ್ಕೆ ಹೋಗಬೇಕಾದರೆ ನಾವು ‘ಸಂಕಲ ಕರಿಯ’ ನದಿ ದಾಟಬೆಕಿತ್ತು. ನಾವು ನದಿಯ ಕಡವಿಗೆ ಹೋದೆವು ನೀರು ಜುಳು ಜುಳು ಹರಿಯುತ್ತಿತ್ತು. ನದಿ ದಾಟ ಬಹುದು ಗುಂಡಿ ಇಲ್ಲ ಎಂಬ ಸಲಹೆ ಕೇಳಿ ನದಿಬಯಲಿಗೆ ಇಳಿದಿದ್ದೆವು. ಆದರೆ ನೀರೊಳಗೆ ಇರುವ ‘ಗುರಿ ಗುಂಡಿ’ (ಆಳ-ಹಳ್ಳ) ಎಲ್ಲಿ ಎಂದು ಹೇಗೆ ತಿಳಿಯುವುದು? ನಿತ್ಯ ಹೋಗುವವರಾದರೆ ಅವರಿಗೆ ಗುಂಡಿ ತಪ್ಪಿಸಿ ಹೋಗುವ ಕಾಲುದಾರಿ ಗೊತ್ತಿರುತ್ತದೆ. ನೀರೊಳಗೂ ಕಾಲು ದಾರಿ ಇರುತ್ತದೆ ಎಂದು ಹಳ್ಳಿಯಲ್ಲಿ ಬಾಲ್ಯ ಕಳೆದ ನನಗೆ ತಿಳಿದಿತ್ತು. ಹೀಗಾಗಿ ಅತ್ತ ಇತ್ತ ನೋಡಿದೆ. ದೂರದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ “ಬಟ್ರನ್ನು ಕೇಳಿ” ಎಂದರು. ಅಲ್ಲೇ ತೋಟದ ಮಧ್ಯೆ ಒಂದು ಮನೆ ಕಂಡಿತ್ತು. ಆ ಮನೆಯ ಬಳಿ ಒಬ್ಬರು ನಿವೃತ್ತಿಯ ವಯಸ್ಸಿನ ಹಿರಿಯರು ಕಣ್ಣಿಗೆ ಬಿದ್ದರು. ಅವರಲ್ಲಿ ಈ ನದಿ ದಾಟುವ ಬಗೆ ಹೇಗೆ ಕೇಳಿದೆ. “ ಪರವಾಗಿಲ್ಲ ಗುಂಡಿ ಇಲ್ಲ. ದಾಟಬಹುದು” ಎಂದರು. ನಾವಿಬ್ಬರೂ ಮುಖ ಮುಖ ನೋಡಿಕೊಂಡೆವು. ಅಲ್ಲೆ ನಿಂತ ನಮ್ಮ ನರ್ಗಾಟ ನೊಡಿ, “ನದಿ ಗುಂಡಿ ಇಲ್ಲ ನೇರವಾಗಿ ನಡೆದು ಹೋಗಿ ಅದೇ ದಾಟುವ ಜಾಗ” ಎಂದಾಗ ನಾನು ಮೆತ್ತಗೆ ಹೇಳಿದೆ, “ನಾವು ಈ ನದಿಗೆ ಹೊಸಬರು. ನೀವು ದಾರಿ ತೋರಿಸಿದರೆ ನಮಗೆ ...” ನನ್ನ ಮಾತು ಮುಗಿಸುವ ಮೊದಲು ಕೈಯಲ್ಲಿ ಇದ್ದ ಕತ್ತಿಯನ್ನು ಬಿಸಾಕಿ ಆತ ಲುಂಗಿ ಮೇಲೆತ್ತಿ ಕಟ್ಟಿ ನಮ್ಮ ಮುಂದೆ ನಡೆದರು. ನೀರಿಗಿಳಿಯುತ್ತಾ ಅವರು ಮುಂದೆ ನಡೆದರೆ ನಾವು ಹಸುವಿನ ಹಿಂದೆ ಕರು ಹೋಗುವಂತೆ ನಡದೆವು. “ಯಾನ್ ಪಿರ ತೂಪುಜಿ. ನಿಕುಲು ಪಿರವುಡೆ ಬಲೆ” ಎಂದು ಅದನ್ನೇ ಮಂತ್ರದಂತೆ ಪುನರುಚ್ಚರಿಸುತ್ತಾ (ನಾನು ಮುಂದೆ ಹೋಗ್ತೇನೆ, ನೀವು ಹಿಂದಿನಿಂದ ಬನ್ನಿ ನಾನು ತಿರುಗಿ ನೋಡುವುದಿಲ್ಲ) ಮುಂದೆ ಮುಂದೆ ನಡೆದರು. ನನಗೆ ನಗು ಬಂತು. ಕಸ್ತೂರಿಗೆ ಅವರ ಮಾತಿನ ನಿಗೂಢತೆ ಪಕ್ಕನೆ ಹೊಳೆಯಲಿಲ್ಲ. “ಇಂದಿರಾ, ಭಟ್ರು ಅದ್ಯಾಕೆ ಹಾಗೆನ್ನುತ್ತಾರೆ” ಎಂದಳು.
“ನಾವು ಸೀರೆಯನ್ನು ಒದ್ದೆ ಮಾಡುವುದು ಬೇಡ. ಎತ್ತಿ ಹಿಡಿಯಬಹುದು ಅವರೇನು ತಿರುಗಿ ನೋಡುವುದಿಲ್ಲ” ಎನ್ನುವುದು ಅವರ ಮಾತಿನ ನಿಗೂಢತೆ ಎಂದೆ.

ಸಂದರ್ಭ ತುಳುವರ ಮೂಲತಾನ ಆದಿ ಆಲಡೆ- 2005
ತುಳುವರ ಮೂಲತಾನ ಆದಿ ಆಲಡೆ ಪರಂಪರೆ ಮತ್ತು ಪರಿವರ್ತನೆ ಕೃತಿ ರಚನೆಗಾಗಿ ಕ್ಷೇತ್ರ ಕಾರ್ಯಕ್ಕೆ ಹೊರಟೆ. ನನಗೆ ಜೊತೆ ನೀಡಲು ಬೋಳ ಸಂಜೀವ ಶೆಟ್ಟಿಯವವೂ ಬಂದಿದ್ದರು. ಆಗ ಇದೇ ಬೋಲ ಸೋಮನಾಥೇಶ್ವರ ದೇವಸ್ಥಾನಕ್ಕೆ ಕ್ಷೇತ್ರ ಪರಿಚಯ ಮಾಡಿಕೊಳ್ಳಲು ಹೋದೆವು. ಅಲ್ಲಿ ಹೋದಾಗ ಒಬ್ಬ ಹಿರಿಯ ವ್ಯಕ್ತಿ ನನ್ನನ್ನು “ನೀವು ಕೆಲವು ವರ್ಷಗಳ ಹಿಂದೆ ನದಿ ದಾಟಲು ನನ್ನ ಸಹಾಯ ಕೇಳಿದವರು ಅಲ್ಲವೆ?” ಎಂದಾಗ ನನಗೆ ಅಚ್ಚರಿ. “ನೀವು ಗುರುತು ಹಿಡಿದಿರಿ? ಎಂದೆ

. ‘ನಿಮ್ಮ ಕೃತಿ ಅದ್ಭುತ. ನಿಮನ್ನು ಮರೆಯುವುದು ಹೇಗೆ?” ಎಂದರು. ಅದಾಗಲೇ ನನ್ನ ಮೊದಲ ಕ್ಷೇತ್ರ ಕಾರ್ಯದ ಫಲ ‘ಬಂಟರು -ಒಂದು ಸಮಾಜೋ ಸಾಂಸ್ಕøತಿಕ ಆಧ್ಯಯನ” ಕೃತಿ ಸಂಶೋಧನಾ ಕ್ಷೇತ್ರದಲ್ಲಿ ನನಗೆ ಒಂದು ಸ್ಥಾನವನ್ನು ಕಲ್ಪಿಸಿತ್ತು. ಅದರ ಫಲ ಈ ಆದರ! ಆ ಹಿರಿಯರಿಗೆ ಈ ಮೊದಲೇ ಪರಿಚಯ ಇದ್ದ ಕೆ. ಜಿ. ಶೆಟ್ಟಿ ಕಡಂದಲೆಯವರ ಬಳಿ ಅಂದು ನಮ್ಮನ್ನು ನದಿ ದಾಟಿಸಿದ್ದ ವಿಷಯ ತಿಳಿಸಿದರಲ್ಲದೆ ನನ್ನ ‘ಬಂಟರು ಒಂದು ಸಮಾಜೋ ಸಾಂಸ್ಕøತಿಕ ಕೃತಿ’ಯನ್ನು ಹೊಗಳಿದರು. ನನಗೆ ಅವರು ನನ್ನ ಕೃತಿಯನ್ನು ಓದಿದ್ದು ದೊಡ್ಡ ಗೌರವ ಅನಿಸಿತು. “ತಾವು ಇಲ್ಲೇ ಇರಿ ತಾನು ಮನೆಗೆ ಹೋಗಿ ಈಗ ಬರುತ್ತೇನೆ” ಎಂದ ಆತ ಮನೆಗೆ ಹೋದರು. ಒಂದು ತಟ್ಟೆಯಲ್ಲಿ ಹಣ್ಣುಗಳನ್ನು ತಂದು ನನ್ನನ್ನು ಕುಳಿತುಕೊಳ್ಳಲು ಹೇಳಿ ಗೌರವದಿಂದ ಹಣ್ಣಿನ ತಟ್ಟೆಯನ್ನು ನನಗೆ ನೀಡಿ, “ಇದು ನಾನು ನಿಮಗೆ ಮಾಡುವ ಕಿಂಚಿತ್ ಸನ್ಮಾನ. ಈ ಹಳ್ಳಿಯಲ್ಲಿ ಬೇರೆ ಏನೂ ಸಿಗುವುದಿಲ್ಲ ಮನೆಯಲ್ಲಿ ಇದ್ದ ಹಣ್ಣು ತಂದು ನಿಮ್ಮ ಮಹಾ ಸಾಧನೆಗೆ ಗೌರವ ಸೂಚಿಸುತ್ತೇನೆ. ಒಬ್ಬ ಮಹಿಳೆ ಇಂತಹ ಪರಿಶ್ರಮ ಪಟ್ಟು ಮಾಡುವ ಕೆಲಸವನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯ ಮತ್ತು ಧರ್ಮ” ಎಂದರು. ನಾನು ಅವರು ನೀಡಿದ ಗೌರವಾದರಗಳಿಂದ ಕುಗ್ಗಿಹೋಗಿದ್ದೆ. ಅವರು ನಿವೃತ್ತ ಪ್ರಾದ್ಯಾಪಕ ಜಯಶೀಲ ಭಟ್ಟರು ಎಂದು ಆಗ ಗೊತ್ತಾಯಿತು. ನಮ್ಮಂತವರನ್ನು ವಿದ್ವಜ್ಜನಗಳೆಂದು ಗೌರವದಿಂದ ಕಾಣುವ ಗುಣ ಇವರಂತಹವರಲ್ಲಿ ಮಾತ್ರ ಕಾಣಲು ಸಾಧ್ಯ. ಅವರು ಅಂದು ನೀಡಿದ ಗೌರವ ನಗರದಲ್ಲಿ “ತಾನು ತನ್ನವರು” ಎಂದು ನೀಡುವ ಗೌರವ ಸಮ್ಮಾನ, ಬೊಲ್ಮನ ಪ್ರಶಸ್ತಿಗಿಂತಲೂ ಮಹತ್ತರವಾದುದು.
ಮರೆಯಲಾಗದವರು -ಸಂಕಲಕರಿಯ ಜಯಶೀಲ ಭಟ್ರ್ !

No comments:

Post a Comment