Wednesday, December 20, 2017

Sapta knyeyara Nadinalli namma nade















ಡಾ. ಇಂದಿರಾ ಹೆಗ್ಗಡೆಯವರ ಪ್ರವಾಸ ಕಥನ “ಸಪ್ತ ಕನ್ಯೆಯರ ಕನ್ಯೆ ಭೂಮಿಯಲ್ಲಿ ನಮ್ಮ ನಡೆ” ದಿನಾಂಕ 16-12-2017ರಂದು ರವೀಂದ್ರ ಕಲಾಕ್ಷೇತ್ರದ ಮಹಿಳಾ ವಿಶ್ರಾಂತಿ ಗೃಹದಲ್ಲಿ ಡಾ. ವಿಜಯಮ್ಮ ಅವರಿಂದ ಲೋಕಾರ್ಪಣೆಗೊಂಡಿತು. ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಡಾ, ವಸುಂದರಾ ಭೂಪತಿಯವರು ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಲೇಖಕಿಯರ ಸಂಘ   ಐ ಬಿ. ಎಚ್ ಪ್ರಕಾಶನ  ಮತ್ತು ಯಸ್ ಆರ್ ಹೆಗ್ಡೆ ಚಾರಿಟೇಬಲ್  ಟ್ರಸ್ಟ್ ಜಂಟಿಯಾಗಿ ಪುಸ್ತಕ ಬಿಡುಗಡೆ ಸಮಾರಂಭವನ್ನು ಏರ್ಪಡಿಸಿತ್ತು
ಕೃತಿಯನ್ನು ಲೋಕಾರ್ಪಣೆಗೊಳಿಸಿದ ಡಾ ವಿಜಯಾ ಅವರು ತನಗಾದ ಆಘಾತದಿಂದ  ಖಿನ್ನತೆಯಿಂದ ಬಳಲುತ್ತಿದ್ದ ಡಾ. ಇಂದಿರಾ ಹೆಗ್ಗಡೆಯವರನ್ನು ತಟ್ಟಿ ಹುರುಪುಗಳನ್ನು ತುಂಬಿಸಿ ಬರವಣಿಗೆಯ ಕಡೆ ಮುಖ ಮಾಡಲು ಹೇಳಿದಾಗ ‘ಈ ಮೊದಲು ಬರೆದಿರುವು ಕೃತಿಗಳು ಪ್ರಕಟಣೆಗೆ ಕಾದಿವೆ. ಅವು ಮೊದಲು ಹೊರ ಬರಲಿ ಆಮೇಲೆ ನೋಡುವಾ’ ಎಂದರಾಕೆ. ಆಗ ತಾನು ಕೆಲವು ಪ್ರಕಾಶಕರನ್ನು ಸಂಪರ್ಕಿಸಿದ್ದೆ.  ನನ್ನ ಸಲಹೆಯಂತೆ ಈ ಕೃತಿಯನ್ನು ಹೊರತಂದ  ಐ.ಬಿ.ಎಚ್ ನ ಸಂಜಯ ಅಡಿಗರು ಅವರಲ್ಲಿ ಒಬ್ಬರು ಎಂದರು.
ಇಂದಿರಾ ಹೆಗ್ಗಡೆಯವರ ಪತಿ ಸೈನ್ಯದಲ್ಲಿ ಇದ್ದುದಕ್ಕೆ ಅವರಿಗಿದ್ದ  ಧೈರ್ಯ ಇಂತಹ ಆತಂಕ ಕಾರಿ ಪ್ರವಾಸ ಕೈಗೊಳ್ಳಲು ಸಾಧ್ಯವಾಗಿರಬೇಕು ಎಂದರು. ಅವರು ತಾನು ಸ್ತ್ರೀವಾದಿ ಎಂದು ತಮ್ಮನ್ನು ಕರೆದುಕೊಂಡವರಲ್ಲ. ಆದರೆ ಇಲ್ಲಿ ಪುಟ ಪುಟಗಳಲ್ಲೂ ಮಾತೃ ಸಂಸ್ಕೃತಿಯ ಬಗ್ಗೆ ವಿವರಿಸಿದ್ದಾರೆ. ಸ್ತ್ರೀ ಪ್ರಧಾನವಾದ ದೇವಸ್ಥಾನಗಳು, ನೆಲಗಳು, ಯೋನಿಗರ್ಭದಲ್ಲಿ ಇರುವ ಶಿವನ ಬಗ್ಗೆ ವಿವರಿಸಿದ್ದಾರೆ. ಶಿವನನ್ನು ಬಗೆದು  ಮೆಟ್ಟಿ ನಿಂತ ಕಾಳಿಯನ್ನು ನೋಡಿ ಬೆರಗುಗೊಂಡು ಅದರ ಹಿನ್ನಲೆ ಹುಡುಕಿ ವಿವರಿಸಿದ್ದಾರೆ. ಇಂತಹ ಒಳ್ಳೆಯ ಪುಸ್ತಕವನ್ನು ಕೊಟ್ಟು ನಮ್ಮನ್ನು ಗಂಭೀರ ಚಿಂತನೆಗೆ ಒಡ್ಡುತ್ತಾರೆ- ಎಂದು ಡಾ. ವಿಜಯಮ್ಮ ವಿವರಿಸಿದರು.
ಪುಸ್ತಕದ ಪರಿಚಯವನ್ನು ಡಾ. ಭೈರಮಂಗಲ ರಾಮೇ ಗೌಡ ಅವರು ಬಹಳ ಸೊಗಸಾಗಿ ಮಾಡಿದರು. ಒಂದು ಪ್ರವಾಸ ಕಥನ ಹೇಗಿರಬೇಕೆಂಬುದಕ್ಕೆ ಇದೊಂದು ಮಾದರಿ ಕೃತಿ ಎಂದರು. ತಾನು ಓಡಾಡಿದ ನೆಲದಲ್ಲಿ ಪಡೆದ ಅನುಭವಗಳನ್ನು , ಎದುರಿಸಿದ ಆತಂಕಗಳನ್ನು ಬಹಳ ರೋಮಾಂಚನಕಾರಿಯಾಗಿ ವಿವರಿಸಿದ್ದಾರೆ ಎಂದರು.
ಮಾತೃಪ್ರಧಾನ ಕುಟುಂಬದಲ್ಲಿ ಜನಿಸಿ, ಅದರ ದಟ್ಟ  ಪ್ರಭಾವದ  ನಡುವೆ ಬೆಳೆದ ಇವರು  ‘ಬಂಟರು ಒಂದು ಸಮಾಜೋ ಸಾಂಸ್ಕೃತಿಕ ಅಧ್ಯಯನ’ ಕೃತಿಯನ್ನು ರಚಿಸಿದ್ದಾರೆ.  ಎಲ್ಲಾ ಜನಾಂಗ ಗಳ ಅಧ್ಯಯನಕ್ಕೆ  ಉತ್ತಮ ಆಕರ ಗ್ರಂಥವಾಗುವ  ರೀತಿಯಲ್ಲಿ ಆ ಕೃತಿಯನ್ನು ಇಂದಿರಾ ಹೆಗ್ಗಡೆಯವರು ನೀಡಿದ್ದಾರೆ. ತುಳುನಾಡಿನ ಸಂಸ್ಕೃತಿಯ ಬಗ್ಗೆ ಬುಡಗಟ್ಟಗಳ ಬಗ್ಗೆ ಅಧಿಕೃತವಾಗಿ ಮಾತನಾಡಬಲ್ಲ ಕೆಲವೇ ಮಂದಿಗಳಲ್ಲಿ ಇಂದಿರಾ ಹೆಗ್ಗಡೆಯವರು ಕೂಡಾ ಒಬ್ಬರು.

 ಮಾತೃಪ್ರದಾನ ಸಂಸ್ಕೃತಿಯ ಈಶಾನ್ಯ ಭಾರತದ ಏಳು ರಾಜ್ಯಗಳ ಸಂಸ್ಕೃತಿಯನ್ನು, ಉಪಾಸನೆಯನ್ನು ತನ್ನ ನೆಲದ ಸಂಸ್ಕೃತಿ ಮತ್ತು ಉಪಾಸನೆಯ ಜೊತೆ ತುಲನೆ ಮಾಡಿ ಇಲ್ಲಿ ಬರೆದಿದ್ದಾರೆ. ಈ ಭಾಗಕ್ಕೆ 2010 ಮತ್ತು 2012ರಲ್ಲಿ ಹೀಗೆ ಎರಡು ಬಾರಿ ಪ್ರವಾಸ ಹೋಗಿದ್ದಾರೆ. ಜೊತೆಗೆ ಇಲ್ಲಿ ಸಿಕ್ಕಿಂ ಕೂಡಾ ಸೇರಿದೆ.
ಈ ಪ್ರವಾಸ ಕಥನಕ್ಕೆ  ಉತ್ತಮ ಪ್ರವೇಶಿಕೆಯನ್ನು ತುಳುನಾಡಿನ  ಸಂಸ್ಕೃತಿ ಸಂಪ್ರದಾಯಗಳ ಬಗ್ಗೆ ಅಧಿಕೃತವಾಗಿ.,ಖಚಿತವಾಗಿ ಮಾತನಾಡಬಲ್ಲ ಡಾ. ಬಿ. ಎ. ವಿವೇಕ್ ರೈ ಅವರು ನೀಡಿ ಇವರನ್ನು ಹರಸಿದ್ದಾರೆ.
ಮಾತೃ ಪ್ರಧಾನ ವ್ಯವಸ್ಥೆಯಲ್ಲಿ ಹೆಣ್ಣು ಮಕ್ಕಳಗೆ ಆಗುವ ಲಾಭಗಳೇನು ಎಂಬುದನ್ನು ತಿಳಿದುಕೊಳ್ಳಬೇಕಾದರೆ ಈ ಕೃತಿಯನ್ನು ಓದಬೇಕು.
ನಮ್ಮ ಹೆಣ್ಣು ಮಕ್ಕಳ ಬಗ್ಗೆ ಪುರುಷರೂ ಮಾತನಾಡುತ್ತೇವೆ, ಮಹಿಳೆಯರೂ ಮಾತನಾಡುತ್ತಾರೆ. ಆದರೆ ನಮ್ಮ ಹೆಣ್ಣು ಮಕ್ಕಳಿಗೆ ಬೇಕಾಗುವಂತಹ,  ಅವರನ್ನು ಇಕ್ಕಟ್ಟಿನಿಂದ ಬಿಡಿಸುವಂತಹ ಪ್ರಾಮಾಣಿಕ ಪ್ರಯತ್ನವನ್ನು ನಾವು ಮಾಡುತ್ತಿದ್ದೇವೆಯೇ ಎನ್ನುವುದನ್ನು, ನಾವು  ಪ್ರಶ್ನಿಸಿಕೊಳ್ಳಬೇಕಾಗಿದೆ.
ಬುಡಕಟ್ಟು ಜನಾಂಗಗಳ ಬಗ್ಗೆ ಈ ಪ್ರವಾಸ ಕಥನದಲ್ಲಿ ಇವರು ಬಹಳ ಚೆನ್ನಾಗಿ ಬರೆಯುತ್ತಾರೆ. ಉದಾಹರಣೆಗೆ ಪರಸ್ಪರ ಮೆಚ್ಚುವ ಗಂಡು ಹೆಣ್ಣು ಗಳ ವಿವಾಹದ ಬಗ್ಗೆ ಬರೆಯುತ್ತಾರೆ, ತಮಗೆ ಡ್ರೈವರ್ ಆಗಿ ಬಂದಿದ್ದ ಅಪ್ಪ ಮಗನ ಸಂಭಾಷಣೆಯನ್ನು ಬರೆಯುತ್ತಾ ವಿವಾಹದ ಬಗೆಗೆ ಅವರ ನಿಲುವನ್ನು ಬರೆಯುತ್ತಾರೆ.  ಅಲ್ಲಿಯ ವಿವಾಹ ಪದ್ಧತಿಯ ಬಗ್ಗೆ ಬರೆಯುತ್ತಾರೆ. ಅಲ್ಲಿ ಹೆಣ್ಣು ಗಂಡನ್ನು ಮೆಚ್ಚಬೇಕು ಗಂಡು ಹೆಣ್ಣನ್ನು ಮೆಚ್ಚಬೇಕು – ಆಮೇಲೆ ಹಿರಿಯರು ಆ ಮದುವೆಯಲ್ಲಿ ತಮ್ಮ ಕರ್ತವ್ಯ ಮಾಡುತ್ತಾರೆ.
ಹೋಟೇಲ್ ನೌಕರಿಂದ ತೊಡಗಿ ಎಲ್ಲರನ್ನೂ ಮಾತನಾಡಿಸಿ ಅವರಿಂದ ಅವರ ಭಾವನೆಗಳನ್ನು ,ವಿಷಯಗಳನ್ನು ಅಚ್ಚುಕಟ್ಟಾಗಿ ಇಂದಿರಾ ಹೆಗ್ಗಡೆಯವರು ಸಂಗ್ರಹಿಸುತ್ತಾರೆ.
ಇಲ್ಲಿ ಇಂದಿರಾ ಹೆಗ್ಗಡೆಯವರು ಬುಡಕಟ್ಟು ಜನಾಂಗದ  ತಾವು ನೋಡಿದ ಒಂದು ಮದುವೆಯ ಬಗ್ಗೆ ಬರೆಯುತ್ತಾರೆ. ವರ ಮತ್ತು ವಧುವಿನ ಕಡೆಯ ಹತ್ತು ಹದಿನೈದು ಮಂದಿಯ ಉಪಸ್ಥಿತಿಯಲ್ಲಿ ಆ ವಿವಾಹ ನಡೆಯುತ್ತದೆ. ಮತ್ತೇನೂ ಅಲ್ಲಿ ಖರ್ಚಿಲ್ಲ. ನಮ್ಮಲ್ಲಿ ಆದರೆ ಒಂದು ಹೆಣ್ಣು ಮಗುವಿನ ವಿವಾಹ ಅಂದರೆ ಅದು ಹೆಣ್ಣಿನ ಮತ್ತು  ಹೆತ್ತವರಿಗೆ  ಶೋಷಣೆ ಕೂಡಾ ಎಂದರು.
ಇಲ್ಲಿಯ  ಆಚರಣೆಗಳನ್ನು ನಮ್ಮಲ್ಲೂ ಅಳವಡಿಸಿಕೊಂಡರೂ, ನಮ್ಮಲ್ಲಿ  ಹೆಣ್ಣು ಮಕ್ಕಳ ಮೇಲೆ ಆಗುವ ದೌರ್ಜನ್ಯ ವನ್ನು ಕಡಿಮೆ ಮಾಡಬಹುದು..
ಬಾಬ್ರಿ ಮಸೀದಿಯ ಬಗ್ಗೆ ತೀರ್ಪು ಬರುವ ದಿನ ಇವರು ಅಸ್ಸಾಮ್ ನ ಗ್ವಹಾಟಿಯಲ್ಲಿ ಇದ್ದರು. ಅವರು ಬೆಂಗಳೂರು ಬಿಡುವ ಮೊದಲು ಆ ತೀರ್ಪಿನಿಂದ ಸಂಭವಿಸಬಹುದಾದ ಘಟನೆಗಳ ಬಗ್ಗೆ ಪೂರ್ವ ಬಾವಿ ಸುರಕ್ಷತೆಯನ್ನು ಕರ್ನಾಟಕ ಸರಕಾರ ಮಾಡಿತ್ತು.  ಆದರೆ ಅಲ್ಲಿ ಹೋದಾಗ ಎಲ್ಲವೂ ಮಾಮೂಲಿಯಾಗಿತ್ತು. ಈ ಬಗ್ಗೆ ಇಂದಿರಾ ಹೆಗ್ಗಡೆಯವರು ಸ್ಥಳೀಯರನ್ನು ಪ್ರಶ್ನಿಸುತ್ತಾರೆ. “ ಹಸಿದ ಹೊಟ್ಟೆಗಳಿಗೆ ಮಸೀದಿಯೂ ಬೇಕಾಗಿಲ್ಲ ರಾಮನೂ ಬೇಕಾಗಿಲ್ಲ. ನಮಗೆ  ರಾಮನೂ ಬೇಡ ರಹಿಮನೂ ಬೇಡ” ಎನ್ನುತ್ತಾರೆ ಇವರು ಪ್ರಶ್ನಿಸಿದ ಜನಗಳು. ಅವರಿಗೆ  ದುಡಿಮೆ ಮುಖ್ಯ.
ಕಾಮಾಖ್ಯ ಕ್ಷೇತ್ರದಲ್ಲಿ ಇಂದಿರಾ ಹೆಗ್ಗಡೆಯವರು ಜಗಜನನಿಯ ಗರ್ಭರೂಪದ ಬಾವಿಗೆ ಇಳಿಯುವ ಸಂದರ್ಭ.  ಅದು ಒಂದು ಸಾಹಸ ಮಾತ್ರವಲ್ಲ ದುಸ್ಸಾಹಸ ಎಂದೇ ಹೇಳಬಹುದು. ತನ್ನ ಸೈನಿಕ ಪತಿ ಬಾರದೆ ಇದ್ದರೂ ಅವರು ಬೆನ್ನಿಗೆ ಇದ್ದಾರೆ ಎಂಬ ಧೈರ್ಯವನ್ನು ಕಟ್ಟಿಕೊಂಡು ಪ್ರಪಾತದಲ್ಲಿ ಇರುವ ಶಕ್ತಿ ದೇವತೆಯ ಗರ್ಭ ರೂಪದ, ಯೋನಿ ರೂಪದ  ಗರ್ಭಗೃಹಕ್ಕೆ ಇವರು ಇಳಿಯುತ್ತಾರೆ.
 ಮತ್ತೊಂದೆಡೆ ಗರ್ಭರೂಪದ ಯೋನಿ ಯೊಳಗೆ ಇರುವ ಶಿವಲಿಂಗದ ಬಗ್ಗೆ ಬರೆಯುತ್ತಾರೆ.
ಜಸ್ವಂತ್ ಸಿಂಗ್ ರಾವತ್ 1962ರಲ್ಲಿ ಚೀನಾ ಯುದ್ಧದಲ್ಲಿ ಏಕಾಂಗಿಯಾಗಿ ಹೋರಾಡಿದ ಕಥೆಯನ್ನು ಹಾಗೂ ಅವನ ಹೋರಾಟದ ಸಂದರ್ಭದಲ್ಲಿ ಅವರಿಗೆ ಆಹಾರ ಸರಬರಾಜು ಮಾಡಿದ ಇಬ್ಬರು ಸೋದರಿಯರ ಬಗ್ಗೆ ಬರೆಯುತ್ತಾರೆ. ಅವರಲ್ಲಿ ಒಬ್ಬಳು ಅವರ ಗುಂಡಿಗೆ ಆಹುತಿಯಾಗುತ್ತಾಳೆ. ಮತ್ತೊಬ್ಬಳನ್ನು ಸೆರೆ ಹಿಡಿದು ಚೀನಾದ ಸೈನಿಕ ಅಧಿಕಾರಿ ಮದ್ದುಗುಂಡು ದಾಸ್ತಾನು ಇಟ್ಟ ಸ್ಥಳ ತೋರಿಸು ಎಂದು ಶಿಖರಗಳ ತುದಿಯಲ್ಲಿ ಕರೆದೊಯ್ಯುವಾಗ ಶಿಖರದಿಂದ ಅವನನ್ನೂ ಎಳದು ಕಣಿವೆಗೆ ಹಾರುತ್ತಾಳೆ. ಈ ಘಟಣೆಯ ಬಗ್ಗೆ ಇಂದಿರಾ ಹೆಗ್ಗಡೆಯವರು ಬರೆಯುತ್ತಾ ಆ ಸೈನಿಕನಿಗೆ ಮರೋತ್ತರ ಪ್ರಶಸ್ತಿ ಬಂತು. ಆದರೆ ಈ ಇಬ್ಬರು ಹೆಣ್ಣಮಕ್ಕಳ ಬಗ್ಗೆ ಸೈನ್ಯದ  ಇತಿಹಾಸದಲ್ಲಿ ದಾಖಲಾಗಿಲ್ಲ. ಮೌಖಿಕವಾಗಿ ಮಾತ್ರ ಉಳಿದು ಬಂದಿದೆ ಎಂದು ಬರೆಯುತ್ತಾರೆ.
ಹೀಗೆ ತಮಗೆ ದಕ್ಕಿದ ವಿಶಿಷ್ಟ ಅನುಭವಗಳನ್ನು ಬಹಳ ಸ್ವಾರಸ್ಯವಾಗಿ ವಿವರಿಸುತ್ತಾರೆ.
ನಾವು ಈ ಭಾಗಕ್ಕೆ ಹೋಗದೆ ಇದ್ದರೂ ಈ ಭಾಗದ ಪರಿಚಯವನ್ನು ಬಹಳ ಚೆನ್ನಾಗಿ  ಸಂಪೂರ್ಣ ಕೊಟ್ಟಿದ್ದಾರೆ ಎಂಬ ರೀತಿಯಲ್ಲಿ ಇಂದಿರಾ ಹೆಗ್ಗಡೆಯವರು ಈ ಕೃತಿಯಲ್ಲಿ ಬರೆದಿದ್ದಾರೆ
ಆ ಮೇಲೆ ಮಾತನಾಡಿದ ಇಂದಿರಾ ಹೆಗ್ಗಡೆಯವರು ತಾವು ತನಗಾದ ಆಘಾತದಿಂದ  ಚೇತರರಿಸಿ ಕೊಳ್ಳಲಾಗದೆ ಖಿನ್ನತೆಯಲ್ಲಿ  ಇದ್ದಾಗ ಬರವಣಿಗೆ ನಿಲ್ಲಿಸ ಬಾರದೆಂದು ಪದೇ ಪದೇ ತನ್ನನ್ನು ವಿಚಾರಿಸುತ್ತಿದ್ದ ಡಾ. ಬಿ. ಎ. ವಿವೇಕ ರೈ ಹಾಗೂ ತನ್ನ ಬರವಣಿಗೆ ನಿಲ್ಲಬಾರದು ಎಂದು ತನ್ನನ್ನು ಮತ್ತೆ ಹೊರ ಪ್ರಪಂಚಕ್ಕೆ ಎಳೆಯುತ್ತಾ  ಮಂಗಳೂರು ಪರಿಸರದಲ್ಲಿ ಸಾರ್ವಜನಿಕ ವೇದಿಕೆಗಳಲ್ಲಿ ತನ್ನನ್ನು ಭಾಗವಹಿಸುವಂತೆ ಮಾಡಿದ ಭಾಸ್ಕರ ರೈ ಕುಕ್ಕುವಳ್ಳಿಯವರನ್ನು ನೆನಸಿಕೊಂಡರು. ಬೆಂಗಳೂರಲ್ಲಿ ಡಾ. ವಿಜಯಾ ಅವರು ಬರವಣಿಗೆ ಮುಂದುವರಿಸಮ್ಮಾ ಎಂದಾಗ ತಾನು ಈ ಮೊದಲೇ ಬರೆದ ಕೃತಿ ರೂಪದ ಬರವಣಿಗೆಗಳು ಕೆಲವು ಇವೆ. ಅವು ಈಚೆ ಗೆ ಬರಲಿ. ಮುಂದಿನ ಬರವಣಿಗೆ ಆ ಮೆಲೆ ನೋಡೋಣ ಎಂದಾಗ ತನ್ನ ಬಳಗದ ಪ್ರಕಾಶಕರನ್ನು ಸಂಪರ್ಕಿಸಿ ಈ ಕೃತಿ ಹೊರ ಬರುವಂತೆ ಮಾಡಿದ ವಿಜಯಾ ಅವರಿಗೂ ಈ ಪ್ರವಾಸ ಕಥನವನ್ನು ಹೊರತಂದ ಐ.ಬಿ. ಎಚ್ ಪ್ರಕಾಶನದ ಸಂಜಯ ಅಡಿಗಾ ಅವರಿಗೂ ಕೃತಜ್ಞತೆಯನ್ನು ಸಲ್ಲಿಸಿದರು.
ಇಂದಿರಾ ಹೆಗ್ಗಡೆಯವರ ಮಾತಿನ ಅನಂತರ ಸುಮಾರು ಒಂದು ಗಂಟೆ ಸಂವಾದ ಕಾರ್ಯಕ್ರಮ ನಡೆಯಿತು. ಪುರುಷರು ಮಹಿಳೆಯರು ಎಲ್ಲರೂ ಕುತೂಹಲದಿಂದ ಇಂದಿರಾ ಹೆಗ್ಗಡೆಯವರ ಜೊತೆ  ಸಂವಾದ ನಡೆಸಿದರು.
ಅಧ್ಯಕ್ಷಸ್ಥಾನದಿಂದ ಮಾತನಾಡಿದ ಲೇಖಕಿಯರ ಸಂಘದ ಮತ್ತು ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ಡಾ, ವಸುಂದರಾ ಭೂಪತಿಯವರು ನಾವೆಲ್ಲಾ ಅದರಲ್ಲೂ ಮಹಿಳೆಯರು ಈ ಭಾಗಕ್ಕೆ ಪ್ರವಾಸ ಹೋಗಲೇ ಬೇಕು. ನನ್ನ ಮಗ ಒಂದುವರೆ ವರ್ಷದ ಮಗುವಾಗಿದ್ದಾಗ ನಾನೂ ಈ ಭಾಗಕ್ಕೆ ಹೋಗಿದ್ದೆ. ದೈವ ಭಕ್ತಳಲ್ಲ ವಾದರೂ ಕಾಮಾಖ್ಯ ದೇವಸ್ಥಾನ ನೋಡಬೇಕೆಂದು ಹೋದೆ. ಆ ದೇವಿಗೆ ಇರುವ ಮುಟ್ಟಿನ ಆಚರಣೆಯನ್ನು ಬಹಳ ಪವಿತ್ರ ಎಂದು ಅಲ್ಲಿ ಮಾಡುತ್ತಾರೆ. ಮತ್ತೇಕೆ ನಮ್ಮಲ್ಲಿ ಮುಟ್ಟಾಗುವ ಮಹಿಳೆಯನ್ನು ಅಸ್ಪೃಶ್ಯಳನ್ನಾಗಿಸುತ್ತಾರೆ ಎಂಬ ಚಿಂತನೆಯನ್ನು ಹರಿಯ ಬಿಟ್ಟರು. ಕೃತಿಯ ಬಗ್ಗೆ ಮಾತನಾಡುತ್ತಾ ಈ ಭಾಗದ ಜನರ ಬಗ್ಗೆ ಬಹಳ ಚೆನ್ನಾಗಿ ಈ ಕೃತಿಯಲ್ಲಿ ವಿವರಿಸಲಾಗಿದೆ ಎಂದರು. ಮುಂದೊಂದು ದಿನ ಈ ಕೃತಿಯ ಬಗ್ಗೆ ಸಂವಾದ  ಕಾರ್ಯಕ್ರಮ ಇಡೋಣ ಎಂದರು.

 ಡಾ. ಸರ್ವ ಮಂಗಳಾ ಅವರು ನಿರೂಪಿಸಿದರು. ಸಂಘದ ಉಪಾಧ್ಯಕ್ಷೆ ವನಮಾಲಾ ಅವರು ಸ್ವಾಗತಿಸಿದರು.
…ಸೌಜನ್ಯ : ಸುಜಾತಾ ಕೊಡ್ಮನ್





No comments:

Post a Comment