Wednesday, November 22, 2017

Sapta knneyru




ನನ್ನ ಪ್ರವಾಸ ಕಥನ ಓದುಗರ ಕೈ ಸೇರಲಿದೆ. ಮೈಸೂರು ಸಮ್ಮೇಳನದಲ್ಲಿ ಮಾರಾಟವಾಗಲಿದೆ ಎಂದು ಐ.ಬಿ ಎಚ್ ನ ಸಂಜಯ ಅಡಿಗರು ದೂರವಾಣಿ ಮಾಡಿದಾಗ ನಾನು ಮಂಗಳೂರಿಗೆ ಪ್ರಯಾಣಿಸುತ್ತಿದ್ದೆ. ಪ್ರೊ. ವಿವೇಕ ರೈ ಅವರ ಮುನ್ನುಡಿಯೊಂದಿಗೆ ಈ ಕೃತಿ ಹೊರಬರುತ್ತಿದೆ. ಬರೆದು ಕೆವು ವರ್ಷಗಳಾಗಿದ್ದರೂ ಅದು ಸೂಕ್ತ ಪ್ರಕಾಶಕರಿಗಾಗಿ ಕಾಯುತ್ತಿತ್ತು.

ಓದುಗರ ಬೆಂಬಲ ಬೇಕಾಗಿದೆ. ಇನ್ನೂ ಎರಡು ಪುಸ್ತಕ ಗಳು ಹೊರ ಬರಲು ತವಕಿಸುತ್ತಿದೆ. ನಿಮ್ಮಗಳ ಬೆಂಬಲದ ನಿರೀಕ್ಷೆಯಲ್ಲಿ.

Munnudi
ಕನ್ನಡದಲ್ಲಿ ಪ್ರವಾಸಸಾಹಿತ್ಯಕ್ಕೆ ಸುದೀರ್ಘವಾದ ಪರಂಪರೆ ಇದೆ . ಸಾವಿರಾರು ಪುಟಗಳ ಹರಹಿನಲ್ಲಿ ವೈವಿಧ್ಯಮಯ ಪ್ರವಾಸಸಾಹಿತ್ಯ ಕನ್ನಡದಲ್ಲಿ ರಚನೆಯಾಗಿದೆ. ಕನ್ನಡ ಪ್ರವಾಸಸಾಹಿತ್ಯವನ್ನು ಕುರಿತೇ ಪಿ ಎಚ್ ಡಿ ಮಹಾಪ್ರಬಂಧಗಳು ನಿರ್ಮಾಣವಾಗಿವೆ. ಆಧುನಿಕ ಕನ್ನಡ ಸಾಹಿತ್ಯದಲ್ಲಿ ಪ್ರವಾಸಸಾಹಿತ್ಯವು ಒಂದು ಮುಖ್ಯ ಮತ್ತು ವಿಶಿಷ್ಟ ಪ್ರಕಾರವಾಗಿ ಗುರುತಿಸಲ್ಪಟ್ಟಿದೆ. ಪ್ರವಾಸಾಹಿತ್ಯವೆಂದರೆ ನೋಡಿದ ಸ್ಥಳಗಳ, ಭೇಟಿಯಾದ ವ್ಯಕ್ತಿಗಳ, ಕಲಿತುಕೊಂಡ ಸಂಗತಿಗಳ, ಹೊಸತಾಗಿ ಶೋಧಿಸಿದ ವಸ್ತು ವ್ಯಕ್ತಿ ವಿಚಾರಗಳ ಜ್ಞಾನಕೋಶವಾಗಿ ಅಪೂರ್ವ ದಾಖಲೆಯಾಗಿ ಮಹತ್ವದ್ದಾಗಿದೆ. ಅಷ್ಟೇ ಮುಖ್ಯವಾದುದು ಪ್ರವಾಸಮಾಡಿದ ವ್ಯಕ್ತಿಗಳ ಕಥನದ ಮಾದರಿ . ಪ್ರವಾಸಕಥನವೊಂದು ಯಾವಾಗ ಪ್ರವಾಸಸಾಹಿತ್ಯವಾಗುತ್ತದೆ ಎಂದರೆ, ಅದನ್ನು ಕಥಿಸಿವವರು ತಮ್ಮ ಅನುಭವಗಳಿಗೆ ವಿಶ್ಲೇಷಣೆಯ ದೃಷ್ಟಿಕೋನದ ಆಯಾಮವನ್ನು ತಮ್ಮ ಬರವಣಿಗೆಯಲ್ಲಿ ಒಡಮೂಡಿಸಿದಾಗ . ಆದ್ದರಿಂದಲೇ ಕನ್ನಡದ ಪ್ರವಾಸ ಸಾಹಿತ್ಯದಲ್ಲಿ ಅತ್ಯದ್ಭುತ ಚಿಂತನೆಯ ಕೆಲವು ಕೃತಿಗಳು ಸಿಗುವಂತೆಯೇ , ಕೇವಲ ವರದಿ ರೂಪದ ಸಾಮಾನ್ಯ ದರ್ಜೆಯ ಕೃತಿಗಳೂ ದೊಡ್ಡ ಸಂಖ್ಯೆಯಲ್ಲಿ ದೊರೆಯುತ್ತವೆ . ಪ್ರವಾಸದ ಸಂದರ್ಭದಲ್ಲಿ ಬೇರೆ ಬೇರೆ ಮೂಲಗಳಿಂದ ದೊರೆಯುವ ಮಾಹಿತಿಗಳನ್ನು ಅಂಕೆ ಸಂಖ್ಯೆಗಳ ಮತ್ತು ಅಂತೆಕಂತೆಗಳ ವರದಿಯ ರೂಪದಲ್ಲಿ ಕೊಟ್ಟಾಗ ಅದು ನಿಜವಾದ ಅರ್ಥದಲ್ಲಿ ಸಾಹಿತ್ಯದ ಗುಣಗಳನ್ನು ಹೊಂದುವುದಿಲ್ಲ. ಹೊಸ ಪರಿಸರವನ್ನು ಹೊಸ ಜೀವನಕ್ರಮವನ್ನು ಸಂಸ್ಕೃತಿಯ ಒಳನೋಟಗಳಿಂದ ನೋಡಿದಾಗ ಮತ್ತು ಅವುಗಳ ಮೂಲಕ ಹೊಸ ಚಿಂತನೆಗಳನ್ನು ಹುಟ್ಟುಹಾಕಿದಾಗ ಪ್ರವಾಸಸಾಹಿತ್ಯ ಕೃತಿಯೊಂದು ಗಮನಾರ್ಹವಾಗುತ್ತದೆ .
ಲೇಖಕಿ ಡಾ . ಇಂದಿರಾ ಹೆಗ್ಗಡೆಯವರು ತಮ್ಮ ತುಳುನಾಡಿನ ಸಂಸ್ಕೃತಿಯ ಅಧ್ಯಯನದ ಕೃತಿಗಳಿಂದ ಸಾಂಸ್ಕೃತಿಕ ಸಂಶೋಧನೆಯಲ್ಲಿ ವಿಶಿಷ್ಟ ಸಾಧನೆಯನ್ನು ಮಾಡಿದ್ದಾರೆ. ಈಗ ಅವರು ಈಶಾನ್ಯ ರಾಜ್ಯಗಳ ತಮ್ಮ ಪ್ರವಾಸಕಥನವನ್ನು 'ಸಪ್ತಕನ್ಯೆಯರ ಕನ್ಯೆಭೂಮಿಯಲ್ಲಿ ನಮ್ಮ ನಡೆ ' ಎನ್ನುವ ಹೆಸರಿನಲ್ಲಿ ಪ್ರಕಟಿಸಿದ್ದಾರೆ . ಇಂದಿರಾ ಹೆಗ್ಗಡೆ ತಮ್ಮ ಪತಿ ಮಾಜಿ ಸೈನಿಕ ಲೇಖಕ ಸಂಘಟಕ ಎಸ ಆರ್ ಹೆಗ್ಗಡೆಯವರ ಜೊತೆಗೆ ಇತರ ಆಪ್ತ ಸ್ನೇಹಿತರ ಸಂಗದಲ್ಲಿ ಈಶಾನ್ಯ ರಾಜ್ಯಗಳಾದ ಅಸ್ಸಾಮ್ , ಮಣಿಪುರ , ಮೇಘಾಲಯ , ನಾಗಾಲ್ಯಾಂಡ್, ತ್ರಿಪುರ , ಅರುಣಾಚಲ, ಮಿಝೋರಾಮ್ ಮತ್ತು ಸಿಕ್ಕಿಂ ರಾಜ್ಯಗಳಳ್ಳಿ ಮಾಡಿದ ಪ್ರವಾಸಗಳ ಕಥನವು ಈ ಕೃತಿಯಲ್ಲಿ ಸಮ್ಮಿಲನಗೊಂಡಿದೆ .
ಇಂದಿರಾ ಹೆಗ್ಗಡೆಯವರ ಪ್ರವಾಸಕಥನದ ಕೆಲವು ವೈಶಿಷ್ಟ್ಯಗಳೆಂದರೆ ಅವರ ಶೈಕ್ಷಣಿಕ ಪೂರ್ವಸಿದ್ಧತೆ, ಪ್ರವಾಸದ ಸಂದರ್ಭದಲ್ಲಿ ಜನಸಾಮಾನ್ಯರಿಂದ ಮಾಹಿತಿ ಸಂಗ್ರಹ, ಸಾಂಸ್ಕೃತಿಕ ಕಣ್ಣಿನಿಂದ ಸ್ಥಳ ಆಚಾರವಿಚಾರಗಳ ಅವಲೋಕನ, ಮಹಿಳಾಪರವಾದ ನೋಟ, ತನ್ನ ಅನುಭವದ ತುಳು ಸಂಸ್ಕೃತಿಯ ಜೊತೆಗೆ ಮುಖಾಮುಖಿಯಾಗಿ ಇರಿಸಿ ನೋಡುವ ತುಲನೆಯ ದೃಷ್ಟಿಕೋನ. ಇವುಗಳ ಜೊತೆಗೆ ಈಶಾನ್ಯ ರಾಜ್ಯಗಳ ಅನೇಕ ಬುಡಕಟ್ಟುಗಳ ಜೀವನಪದ್ಧತಿಯ ಕುರಿತ ವಿವರವಾದ ವಿಶ್ಲೇಷಣೆಗಳು ಇಲ್ಲಿ ದೊರೆಯುತ್ತವೆ. ನಿಸರ್ಗದ ಸೊಬಗನ್ನು ಕಂಡು ಭಾವಪರವಶರಾಗುವ , ಜನರ ಜೀವಪರ ಬದುಕನ್ನು ಕೊಂಡಾಡುವ, ಮಹಿಳೆಯ ಸಾಹಸಗಾಥೆಗಳನ್ನು ಮುನ್ನೆಲೆಗೆ ತರುವ ಅನೇಕ ಪ್ರಸಂಗಗಳು ಈ ಪ್ರವಾಸಕಥನದ ಕೆಲವು ತೋರುಗಂಬಗಳು .
'ಯೋನಿ ಭೂಮಿಯಲ್ಲಿ ನಡೆದ ಹೆಜ್ಜೆಗುರುತು ' ಎಂದು ಆರಂಭವಾಗುವ ಭಾಗದಲ್ಲಿಯೇ ಈ ಇಡೀ ಗ್ರಂಥದ ಧೋರಣೆಯ ಹಿನ್ನೆಲೆ ಸ್ಪಷ್ಟವಾಗುತ್ತದೆ . ಹೆಣ್ಣಿನ ನೆಲೆಯಿಂದ ನೆಲಗಳನ್ನು ಪರಿಭಾವಿಸುವ ನಿಲುವು ಇಲ್ಲಿ ಸ್ಪಷ್ಟವಾಗುತ್ತದೆ. ಬುಡಕಟ್ಟಿನ ಜನರು ಹೊರನೋಟಕ್ಕೆ ಬೇರೆ ಬೇರೆ ಧರ್ಮಗಳನ್ನು ಒಪ್ಪಿಕೊಂಡಿದ್ದರೂ, ನಿಜದ ನೆಲೆಯಲ್ಲಿ ಅವರೆಲ್ಲರೂ ಅಪ್ಪಿಕೊಂಡಿರುವುದು ತಮ್ಮ ಮೂಲ ಬುಡಕಟ್ಟು ಧರ್ಮವನ್ನೇ ಎನ್ನುವ ಸತ್ಯದ ವಿವರಣೆ ಇಲ್ಲಿ ಸಿಗುತ್ತದೆ. ಈ ಆಶಯವು ಮುಂದೆ ಎಲ್ಲಾ ರಾಜ್ಯಗಳ ಪ್ರವಾಸದ ವಿವರಣೆಗಳಲ್ಲಿ ಪ್ರಾದೇಶಿಕ ನೆಲೆಯಲ್ಲಿ ಅನುರಣನಗೊಳ್ಳುತ್ತದೆ . ಜಾನಪದ ಆರಾಧನಾ ಸಂಪ್ರದಾಯಗಳನ್ನು ಕುರಿತು ಅನೇಕ ಕಡೆ ಅಧ್ಯಯನಾತ್ಮಕ ಮತ್ತು ತುಲನೆಯ ವಿವರಣೆಗಳಿವೆ . ಕಾಮಕ್ಯ ಕ್ಷೇತ್ರದ ಅವೈದಿಕ ವಿವರಣೆ ಮತ್ತು ತುಳುನಾಡಿನ ಜುಮಾದಿ ದೈವದ ಜೊತೆಗಿನ ಹೋಲಿಕೆ ಅಂತಹ ಒಂದು ನಿದರ್ಶನ . ಹಾಗೆಯೇ ವೈದಿಕ ಮತ್ತು ಅವೈದಿಕ ಧರ್ಮಗಳ ಪರಸ್ಪರ ಸಂಕರದ ಚರ್ಚೆ ಕೂಡಾ ಅನೇಕ ಕಡೆ ಬರುತ್ತದೆ .ಶೈವ , ಶಾಕ್ತ , ನಾಥ , ಬೌದ್ಧ ಧಾರ್ಮಿಕ ಪಂಥಗಳ ಮೂಲಕ ಸ್ಥಳೀಯ ಧಾರ್ಮಿಕ ಕೇಂದ್ರಗಳ ವ್ಯಾಖ್ಯಾನ ಸಿಗುತ್ತದೆ . ಮತಪಂಥಗಳ ಹೋಲಿಕೆಯ ವಿವರಣೆಗಳು ಈ ಕೃತಿಯ ಉದ್ದಕ್ಕೂ ದೊರೆಯುತ್ತವೆ .
ಭಾರತ ಮತ್ತು ಬಾಂಗ್ಲಾ , ಭಾರತ ಮತ್ತು ಚೀನಾ ದೇಶಗಳ ಗಡಿಗಳ ನಡುವಿನ ಅಡಚಣೆ ಮತ್ತು ಆತಂಕ ಗಳ ನೋಟಗಳು ಮತ್ತು ಕಥನಗಳು ತ್ರಿಪುರ ಮತ್ತು ಸಿಕ್ಕಿಂರಾಜ್ಯಗಳ ಪ್ರವಾಸದ ಭಾಗಗಳಲ್ಲಿ ವಿಶೇಷವಾಗಿ ದೊರೆಯುತ್ತವೆ. ದೇಶಗಳ ಗಡಿ ಎನ್ನುವುದು ಒಂದೇ ಸಂಸ್ಕೃತಿಯ ಜನರನ್ನು ರಾಜಕೀಯವಾಗಿ ಬೇರ್ಪಡಿಸುವ ಹುನ್ನಾರ ಎನ್ನುವ ಹೊಳಹು ಇಲ್ಲಿ ಪ್ರಕಟವಾಗಿದೆ. ಯುದ್ಧಗಳು ಮತ್ತು ಯುದ್ಧಸ್ಮಾರಕಗಳ ನೆನಪುಗಳನ್ನು ಆ ಸ್ಥಳಗಳ ಮತ್ತು ಸ್ಮಾರಕಗಳ ಸಂದರ್ಶನದ ಮೂಲಕ ಇಲ್ಲಿ ಮತ್ತೆ ಕಟ್ಟಿಕೊಡಲಾಗಿದೆ. ನಾಗಾಲ್ಯಾಂಡ್ ಮತ್ತು ಅರುಣಾಚಲ ರಾಜ್ಯಗಳ ಯುದ್ಧ ಸ್ಮಾರಕಗಳ ಚಿತ್ರಣ ಈ ರೀತಿಯಿಂದ ಗಮನ ಸೆಳೆಯುತ್ತದೆ. ತವಾಂಗ್ ನ ಬಳಿಯ ಯುದ್ಧ ಸ್ಮಾರಕದ ವಿವರಣೆ ಮನೋಜ್ಞವಾಗಿದೆ. ಜಸ್ವಂತ್ ಸಿಂಗ್ ರಾವತ್ ನ ಸಾಹಸಗಾಥೆ ರೋಮಾಂಚಕವಾಗಿದೆ; ಸಾಹಸಿ ಯೋಧನ ಅತ್ಯುನ್ನತ ಸಾಧನೆಯ ಹೆಗ್ಗುರುತು ಆಗಿದೆ .
ಇಂದಿರಾ ಹೆಗ್ಗಡೆಯವರ ಈ ಪ್ರವಾಸಕಥನದಲ್ಲಿ ಎಲ್ಲ ರಾಜ್ಯಗಳ ತಿರುಗಾಟದ ಸಂದರ್ಭಗಳಲ್ಲಿ ಮಹಿಳೆಯರ ಬದುಕು ಮತ್ತು ಆತ್ಮವಿಶ್ವಾಸದ ಅನೇಕ ಸೂಕ್ಷ್ಮ ಸಂಗತಿಗಳು ದಾಖಲಾಗಿವೆ. ಮಣಿಪುರದ ಮಹಿಳೆಯರ ಮಾರುಕಟ್ಟೆಯ ವಿವರಣೆ ಅಂತಹ ಒಂದು ನಿದರ್ಶನ. ಸೂಕ್ಷ್ಮ ಮನಸ್ಸಿನ ಹೆಣ್ಣು ತನ್ನ ಪ್ರವಾಸದಲ್ಲಿ ಹೆಣ್ಣಿನ ದೃಷ್ಟಿಯಿಂದ ನೋಡಿದಾಗ ಹೇಗೆ ಹೊಸಸಂಗತಿಗಳನ್ನು ಕಾಣಲು ಸಾಧ್ಯ ಎಂಬುದನ್ನು ಇಲ್ಲಿ ಗಮನಿಸಬಹುದು . .
ಹೀಗೆ ಏಳು ಸಣ್ಣ ರಾಜ್ಯಗಳ ಸಣ್ಣ ಪ್ರವಾಸದ ಅನುಭವದ ಈ ಕಿರು ಪ್ರವಾಸ ಕಥನದಲ್ಲಿ ಸಾಂಸ್ಕೃತಿಕ ಸಂಶೋಧಕಿ ಡಾ. ಇಂದಿರಾ ಹೆಗ್ಗಡೆಯವರು ಅನೇಕ ಸಣ್ಣ ಸಣ್ಣ ಸಂಗತಿಗಳ ಕಡೆಗೆ ತಮ್ಮ ಕಣ್ಣು ಹಾಯಿಸಿ , ಸಾಮಾನ್ಯ ನೋಟಕ್ಕೆ ದೊರೆಯದ ಸಾಂಸ್ಕೃತಿಕ ಸಂಗತಿಗಳಿಗೆ ಮರುಜೀವ ತುಂಬಿದ್ದಾರೆ ; ತಮ್ಮ ಅನುಭವದ ಅಧ್ಯಯನದ ತುಳುವ ಸಂಸ್ಕೃತಿಯ ಜೊತೆಗೆ ಮರುಜೋಡಿಸಿದ್ದಾರೆ . ಅವರ ಪತಿ ಮಾಜಿ ಸೈನಿಕ ಎಸ ಆರ್ ಹೆಗ್ಗಡೆಯವರ ಧೈರ್ಯ ಮತ್ತು ಸಾಹಸದ ಬದುಕಿನ ಪ್ರವಾಸದ ನೆನಪಿನ ಸ್ಮಾರಕವಾಗಿ ಈ ಪ್ರವಾಸಕಥನವನ್ನು ಕಟ್ಟಿಕೊಟ್ಟಿದ್ದಾರೆ . ಇಂತಹ ನಡೆನುಡಿಯ ಸ್ಮಾರಕದ ರಚನೆಯ ಸಾಹಸ ಮತ್ತು ವಿಶ್ವಾಸಕ್ಕಾಗಿ ಡಾ . ಇಂದಿರಾ ಹೆಗ್ಗಡೆಯವರಿಗೆ ಅಭಿನಂದನೆಗಳು .

ಡಾ. ಬಿ . ಎ . ವಿವೇಕ ರೈ
ಮಂಗಳೂರು

No comments:

Post a Comment