Friday, January 13, 2017

ತುಳುನಾಡಿನ ನೆಲದ ಸಂಸ್ಕøತಿಯ ಸೃಜನಶೀಲತೆ

ಒಂದು ಜನಾಂಗದ ಶ್ರೇಷ್ಟತೆಯ ಅಳತೆ ಗೋಳು ಆ ಜನಾಂಗದ ಸೃಜನ ಶೀಲತೆ.
ತುಳುನಾಡಿನ ನೆಲದ ಸಂಸ್ಕøತಿಯ ಸೃಜನಶೀಲತೆ ಮೌಖಿಕವಾಗಿ ಬೆಳೆದು ಬಂದಿದೆ. ದೈವ/ದೇವರ ಭಯವನ್ನು ಉದ್ದೀಪನಗೊಳಿಸುವಲ್ಲಿ  ತುಳು ಮೌಖಿಕ ಸಾಹಿತ್ಯ ಬಹಳ ಶಕ್ತಿಯುತವಾಗಿ ಕೆಲಸ ಮಾಡಿದೆ. ತುಳುನಾಡಿನ ನೆಲದ ಶಕ್ತಿಗಳ ಉಪಾಸನೆಗೆ ಈ ಮಾಖಿಕ ಸಾಹಿತ್ಯ ಬಹಳ ಅಗತ್ಯವಾಗಿದೆ. ಮೌಖಿಕ ಸಾಹಿತ್ಯ  ನೆಲಮೂಲ ಶಕ್ತಿಗಳ  ಉಪಾಸನೆಯ ಜೀವನಾಡಿ.

 ಅರಸು (ಚಕ್ರವರ್ತಿ) ರಾಜನ್ (ಅರಸು) ಬಂಟ (ಮಂತ್ರಿ) ಹಾಗೂ ಪರಿವಾರ ದೈವಗಳ ಶ್ರೇಣೀಕೃತ ಹಂತಗಳನ್ನು ಈ ದೈವವಗಳು ಹೊಂದಿರುವುದು ಕುತೂಹಲಕರ ಸಂಗತಿ. ಆಳುವ ಅರಸರತೆ ಈ ದೈವಗಳು ಕೂಡಾ ಪ್ರಾದೇಶಿಕ ವ್ಯಾಪ್ತಿಯನ್ನು ಹೊಂದಿವೆ.

ಆಯಾ ದೈವಗಳ ಪ್ರಾದೇಶಿಕ ವ್ಯಾಪ್ತಿಯೊಳಗೆ ಅನ್ಯ ಪ್ರದೇಶದ ದೈವಗಳ (ನಂಬಲು) ಸ್ಥಾಪನೆಗೆ ಆ
ಯಾ ಕ್ಷೇತ್ರದ ದೈವಗಳು ಅವಕಾಶ ಕೊಡುವುದಿಲ್ಲ. ಅಕಸ್ಮಾತ್ ಯಾರಾದರೂ ಮತ್ತೊಂದು ಪ್ರದೇಶದ ದೈವವನ್ನು ನಂಬಬೇಕಾದ ಅನಿವಾರ್ಯ ಸಂದರ್ಭ (ಉದಾಃ ತವರು ಮನೆಯ ದೈವವನ್ನು  ಗಂಡನ ಊರಲ್ಲಿ ನಂಬುವಾಗ) ಆ ಊರಿಗೆ ತಂದ ಅಥವಾ ವಲಸೆ ಬಂದ ದೈವವು ಇದ್ದ ದೈವದ ಅಡಿಯಾಳಾಗ ಬೇಕಾಗುತ್ತದೆ. ಒಂದು ಊರಿಗೆ ವಲಸೆ ಬಂದ ದೈವಕ್ಕೆ ಸಾರ್ವಭೌಮತೆ ಇರುವುದಿಲ್ಲ.

ಇತರ ಕೆಲವು ದೈವಗಳನ್ನು ಪರಿವಾರದೈವಗಳೆಂದು ಕರೆಯುತ್ತಾರೆ.
ಮೇಲ್ ಸ್ತರದ ದೈವಗಳು ನಾಥಪಂಥದಮೂಲದವುಗಳಾಗಿವೆ.


ಪರಿವಾರ ದೈವಗಳ ಹೊರತಾಗಿ ಕೆಲವು ಚಿಲ್ಲರೆ ದೈವಗಳು ತುಳುನಾಡಿನಲ್ಲಿ ಅನೇಕ ಇವೆ. ಇವನ್ನು ‘ಸಾರಮಾನಿ’ ದೈವಗಳು ಎಂದು ಕರೆಯುವ ರೂಢಿ ಇದೆ. `ಸಾರಮನ್ನ ಬೂತೊಲು ನೂತ್ರ ಗಂಡಗಣೊಕುಲು’ ಅಂದರೆ ಸಾವಿರಾರು ಭೂತಗಳು ನೂರಾರು ಗಂಡ ಗಣಗಳನ್ನು ಪರಿವಾರವಾಗಿ ಉಳ್ಳವ ನಾಗ ಬಿರ್ಮೆರ್ ಎಂದು ಪಾಡ್ದನಗಳಲ್ಲಿ ಬಿಂಬಿತವಾಗಿದೆ. ಭೂತಗಳ ಅರಸು ಉಲ್ಲಾಯ. ಅರಸು ದೈವ. ರಾಜನ್ ದೈವಗಳು ಹಾಗೂ ಅವುಗಳ ಪರಿವಾರ ದೈವಗಳು. ಈ ದೃಶ್ಯವನ್ನು ಉಲ್ಲಾಯ ಕೋಲದಲ್ಲಿ ಕಾಣಬಹುದು.
ಕೆಲವೊಂದು ಆಚರಣೆಗಳಲ್ಲಿ ‘ಸಾರಮನ್ನ ಬೂತೊಲು ನೂತ್ರ ಗಂಡಗಣೊಕುಲು’ ದೈವಗಳಿಗೆ ಸೇವೆ ಇದೆ. ಗಂಡಗಣಗಳಿಗೆ  ಬಾರ್ನೆಗೆ (ಆಹಾರ)ಮಾಂಸಾಹಾರ ಅಗೆಲ್ ಇದೆ.

 ಚಿಲ್ಲರೆ ದೈವಗಳಿಗೆ ಎಣ್ಣೆ ಬೂಲ್ಯದ ಪದ್ಧತಿ ಇಲ್ಲ. ಆ ದೈವಗಳಿಗೆ ಅರಿಕೆ ಇಲ್ಲ ಬೇಡಿಕೆ ಇಲ್ಲ. ಹರಕೆ ಇಲ್ಲ. ಅರಸು-ರಾಜನ್ ದೈವಗಳ ನೇಮದ ದಿನ, ಇಂತಹ ಕೆಲವು ಚಿಲ್ಲರೆ ದೈವಗಳು ನರ್ತಿಸುತ್ತವೆ. ಬೃಹತ್ ಅಣಿ ಕಟ್ಟಿ ನರ್ತನ ಸೇವೆಯ ಜೊತೆಗೆ ಮಾತಿನ ಚಾಕಚಕ್ಯತೆ ಮೆರೆಯುವ ಅರಸು ದೈವಗಳ ಪಾತ್ರಿಗಳಾದ ಪಂಬದ, ನಲ್ಕೆ ಪಾತ್ರಧಾರಿಗಳ ಮೇಲೆ ಇದ್ದ ಗಮನವನ್ನು ನೆರದ ಜನರಿಂದ ವಿಮುಖಗೊಳಿಸಿ ಆ ಪಾತ್ರಿಗಳಿಗೆ ತುಸು ಉಸಿರಾಡಲು ಅವಕಾಶ ನೀಡಲೆಂದು  ಇಂತಹ ಚಿಲ್ಲರೆ  ದೈವಗಳ ಪಾತ್ರಗಳನ್ನು ಪ್ರಹಸನ ರೂಪದಲ್ಲಿ ಅಬಿನಯಿಸಲು  ಅವಕಾಶ ಕಲ್ಪಿಸಲಾಗಿದೆ. ಈ ಪಾತ್ರಗಳಲ್ಲಿ ಹೆಚ್ಚಾಗಿ ಹುಡುಗರು ಇರುತ್ತಾರೆ. ಇದು ಒಂದು ವಿಧದಲ್ಲಿ ಮುಂದಿನ ಜನಾಂಗಕ್ಕೆ ತರಬೇತಿ ಕೂಡಾ. ಈ ಹುಡುಗರು ಹಾಸ್ಯ ಪ್ರಹಸನದ ಮೂಲಕ ಜನರನ್ನು ರಂಜಿಸಿ ನೆರದ ಜನರ ಗಮನವನ್ನು ಅಣಿ ಕಟ್ಟಿರುವ ಅರಸು /ರಾಜನ್ ದೈವದ  ಕಡೆಯಿಂದ ವಿಮುಖಗೊಳಿಸುತ್ತಾರೆ. ಆಗ ಅರಸು /ರಾಜನ್ ದೈವದ ಪಾತ್ರಧಾರಿಗೆ ದೈವತ್ವದಿಂದ ಮನುಷ್ಯತ್ವಕ್ಕೆ ಮರಳಲು ಅವಕಾಶ ಸಿಗುತ್ತದೆ. ಆತನ ದೇಹಾಲಸ್ಯ ತೆಗೆಯಲು ಈ ಸಂದರ್ಭವನ್ನು ಆತ ಉಪಯೋಗಿಸಿಕೊಳ್ಳುತ್ತಾರೆ.

No comments:

Post a Comment