Friday, July 15, 2016

ಪಾಡ್ದನ ಕಟ್ಟುವಿಕೆ



ಕರ್ನಾಟಕದ ಕರಾವಳಿ ಭಾಗದ ತುಳುನಾಡಿನ ತುಳು ಭಾಷೆ ಗ್ರಂಥ ಸಾಹಿತ್ಯದಲ್ಲಿ ಬಡವಾದರೂ ಮೌಖಿಕ ಸಾಹಿತ್ಯದಲ್ಲಿ ಶ್ರೀಮಂತವಾಗಿದೆ. ಹೀಗಾಗಿ ತುಳು ಸಾಹಿತ್ಯ ಎಂದಾಗ ಪಾಡ್ದನ ಸಾಹಿತ್ಯವೇ ಗಮನಸೆಳೆಯುತ್ತದೆ  ಅಕ್ಷರ ಜ್ಞಾನ ಇಲ್ಲದ ತುಳು ಜನಪದರು ಸೃಜಿಸಿದ ತುಳು ಮೌಖಿಕ ಕಾವ್ಯ ಪರಂಪರೆ ಶ್ರೀಮಂತವಾದುದು.
ತುಳುವರ ನೆಲದ ಸಂಸ್ಕøತಿಯ ಉಪಾಸನೆಯು ಮೌಖಿಕ ಪಾಡ್ದನ ಕಾವ್ಯ ಮೇಲೆ ಅವಲಂಬಿಸಿದೆ.
ತುಳುನಾಡಿನ ನೆಲದ ಸಂಸ್ಕøತಿಯ ವಿಶಿಷ್ಟ ಉಪಾಸನೆ ಭೂತಾರಾಧನೆ. ಈ ಉಪಾಸನೆಯ ಬೆನ್ನೆಲುಬು ಮೌಖಿಕ ಕಥನ ಕಾವ್ಯ. ಇವನ್ನು ರೂಢಿಯಲ್ಲಿ ಪಾಡ್ದನ ಎಂದು ಹೇಳುತ್ತಾರಾದರೂ ದೈವಾವೇಶದ ಹಾಡುಗಳನ್ನು ಸಂಧಿ, ಬೀರ ಎಂದು  ಕರೆಯುವುದು ರೂಢಿ. ಸಾಮನ್ಯವಾಗಿ ಸಂಧಿ ಮತ್ತು ಬೀರವನ್ನು ಭೂತಾರಾಧನೆಯ ಸಂದರ್ಭದಲ್ಲಿ ಶಕ್ತಿ ದೈವಗಳು ದೈವಮಾಧ್ಯಮನೊಳಗೆ ಆವಾಹನೆಗೊಳ್ಳಲು ಹಾಡುವುದು ಕಡ್ಡಾಯ ವಿಧಿ.
ಒಂದೇ ದೈವದ ಪಾಡ್ದನದ ಕಟ್ಟುವಿಕೆಯಲ್ಲಿ ಅಥವಾ ಪಾಡ್ದನದ ನಿರೂಪಣೆಯಲ್ಲಿ ವ್ಯಕ್ತಿಯಿಂದ ವ್ಯಕ್ತ್ಯಿಗೆ ಭಿನ್ನತೆÀ ಕಾಣಬಹುದು. ಆದರೆ ಒಟ್ಟು ಆಶಯದಲ್ಲಿ ಬದಲಾವಣೆ ಮಾಡುವ ಸ್ವಾತ್ತಂತ್ರ್ಯವನ್ನು ಪಾಡ್ದನಕಾರರು ತೆಗೆದುಕೊಳ್ಳುವುದಿಲ್ಲ. ರಾಮಾಯಣ-ಮಹಾಭಾರತವನ್ನು ಕವಿಗಳು ತಮ್ಮ ಸೃಜನಶೀಲತೆಗೆ ಬಗ್ಗಿಸಿಕೊಂಡಂತೆ ಕಥೆಯಲ್ಲಿ ಬದಲಾವಣೆ ಮಾಡಿಕೊಂಡಂತೆ ತುಳು ಮೌಖಿಕ - ಉಪಾಸನಾ ಕಥನ ಗೀತಗಳನ್ನು ಬಗ್ಗಿಸಲಾಗುವುದಿಲ್ಲ. ಇಲ್ಲಿ ದೈವ ಭಯ ಇದೆ.
-ಮೂಲತಾನದ ನಾಗಬ್ರಹ್ಮ  ಮತ್ತು  ಪರಿವಾರ ದೈವಗಳ ಸಂಧಿ / ಪಾಡ್ದನ. ಅಧ್ಯಾಯ 1 ಪುಟ1(ಜಾನಪದ ವಿಶ್ವ ವಿದ್ಯಾಲಯ ಗೊಟಗೋಡಿ ಹಾವೇರಿ 2014)

No comments:

Post a Comment