Tuesday, August 25, 2015

ರಾವಣನ ಕನಕ ಲಂಕೆಯಲ್ಲಿ ಒಕ್ಕೆಲಕಲೆ ಪೊಂಜೊವು..... ಭಾಗ 1



ಬೆಂಗಳೂರು ಬಂಟರ ಸಂಘದ ಮಹಿಳಾ ವಿಭಾಗದವರು ಶ್ರೀ ಲಂಕಾ ಪ್ರವಾಸಕ್ಕೆ ಹೋಗುತ್ತಾ ಇದ್ದೇವೆ, ನೀವು ಬರುತ್ತಿರಾ ಇಂದ್ರಕ್ಕಎಂದು ಮಹಿಳಾ ವಿಭಾಗದ ಅಧ್ಯಕ್ಷೆ ಸರ್ವಾಣಿ ರೈ ನನ್ನನ್ನು ಕೇಳಿದರು.  “ಎಂತ ಇಂದ್ರಕ್ಕ ? ಲಂಕೆ ನಮ್ಮ ಊರಿನಂತಲ್ವ ಮಾರಾಯ್ರೆ? ಲಂಕೆಗೆ ಯಾಕೆ ಹೋಗುವುದು? ಅಲ್ಲೇನಿದೆ ನೋಡಲು?’’ ಎನ್ನುವ ಸಸಾರದ ಮಾತು ಗಟ್ಟದ ಕೆಳಗಿನವರದ್ದು. “ಅಲ್ಲ ಇಂದಿರಾ ಹೆಗ್ಗಡೆಯವರೇ, ನೀವು ಅಮೆರಿಕ ಅಥವಾ ನಿಮ್ಮ ಮಗ ಇರುವ ಆಸ್ಟ್ರೇಲಿಯಕ್ಕೆ ಹೋಗುವುದು ಬಿಟ್ಟು ಲಂಕಾಕ್ಕೆ ಹೋಗುವುದಾ?” ಎಂಬ ಆಕ್ಷೇಪಣಾ ನುಡಿ ಗಟ್ಟದ ಮೇಲಿನವರದ್ದು. “ಇಲ್ಲ ಮಾರಾಯ್ರೆ. ನನಗೆ ರಾವಣನ ಲಂಕೆಯನ್ನು ನೋಡುವಾಸೆ; ಸೀತೆಯ ಅಶೋಕವನದಲ್ಲಿ ಕೆಲವು ನಿಮಿಷಗಳಾದರೂ ಕೂರುವಾಸೆ; ಬುದ್ಧನಿಂದ ಪ್ರಭಾವಿತರಾದವರನ್ನು ಕಾಣುವಾಸೆ. ಬುದ್ದನ ಪುರಾತತ್ವ ನೆಲೆಗಳಲ್ಲಿ ನಡೆದಾಡುವಾಸೆ.” ಎಂದು ನನ್ನ ಆಶೆಯನ್ನೆಲ್ಲ ಬಿಚ್ಚಿಟ್ಟೆ. ನನ್ನ ಗಂಡನ ಸ್ವಭಾವವನ್ನುಗುತ್ತಿನಿಂದ ಸೈನಿಕ ಜಗತ್ತಿಗೆಕೃತಿಯಲ್ಲಿ ವಿವರವಾಗಿ ವರ್ಣಿಸಿದ್ದೆ. ಹೀಗಾಗಿ  ಈಗನೀನು ಯಾರ ಜತೆಯಾದರೂ ಹೋಗು ಮಾರಾಯ್ತಿ. ನಾನು ಅಡ್ಡ ಬರುವುದಿಲ್ಲ. ನನ್ನನ್ನು ಮಾತ್ರ ಕರೆಯಬೇಡ.” ಎಂದಾಗ ನಾನೂ ಸಂತೋಷದಿಂದಲೇಮಹಿಳಾ ಪ್ರವಾಸ ಕೂಟದಲ್ಲಿ 38 ಮಹಿಳೆಯರೊಂದಿಗೆ 39ನೆಯವಳಾಗಿ ಶ್ರೀಲಂಕಾ ವಿಮಾನ ಹತ್ತಿದೆ. ನನ್ನ ಮೊದಲ ವಿದೇಶ ಪ್ರಯಾಣವದು. ಲಂಕೆಯಲ್ಲಿ ಗಮ್ಮತ್ತು ಮಾಡುವಾಗ ತಿಳಿಯಿತು- ಗಂಡಂದಿರನ್ನು ಊರಲ್ಲಿ ಬಿಟ್ಟು ಹೀಗೆ ತಿರುಗಾಡುವುದೆಂದರೆ ಅದರ ಮಜಾವೇ ಬೇರೆ ಎಂದು. ಗಂಡ ಕೂರು ಎಂದೆಡೆ ಕೂರುವುದು; ನಿಲ್ಲು ಎಂದೆಡೆ ನಿಲ್ಲುವುದು; ಅವನಲ್ಲಿ ಏನು ಮಾತು? ಎಂದಾಗ ಆಡಲೆತ್ತಿದ ನುಡಿಯನ್ನು ನುಂಗುವುದು. ಇಂತಹ ಯಾವ ರಿಮೋಟ್ ಕಂಟ್ರೋಲ್ ಇಲ್ಲದೆ ಮಾಡುವ ಪ್ರವಾಸದ ಅನುಭವವೇ ಬೇರೆ ಎಂದು. ನಮ್ಮದುಮಾತೃವಂಶೀಯ ಮಹಿಳಾ ಕೂಟ. ಪುರುಷ ಪ್ರಧಾನ ಸಮಾಜದ ಮಾತೃವಂಶೀಯ ಮಹಿಳೆಯರು. ನಮ್ಮ ಘನ ಸರ್ಕಾರದ ಸರಕಾರಿ ಓಲ್ವೋ ಬಸ್ಸಿನಲ್ಲಿಯೂ ಕುಳಿತುಕೊಳ್ಳುವ ಸಂಭ್ರಮವನ್ನು ಅನುಭವಿಸಿಯೇ ನಾವು ಫೆಬ್ರವರಿ 3 2009 ನಸುಕಿನಲ್ಲಿ ದೇವನಹಳ್ಳಿ ವಿಮಾನ ನಿಲ್ದಾಣ ತಲುಪಿದ್ದು. ಮಹಿಳೆಯರಲ್ಲಿ 21 ವಯಸ್ಸಿನ ಕನ್ಯೆಯರು ಹಾಗೂ 75ವಯಸ್ಸಿನ ಆದರೆ 25 ಮನಸ್ಸಿನ ಚುರುಕು ಮಹಿಳೆಯರು ಇದ್ದರು. ಎಲ್ಲರಲ್ಲೂ ಜೀವನೋತ್ಸಾಹ ಇತ್ತು.
ನಮ್ಮ ಪ್ರಯಾಣದ ವೇಳಾ ಪಟ್ಟಿಯಂತೆ ವಿಮಾನ ನಿಲ್ದಾಣದಲ್ಲಿ ನಮ್ಮನ್ನು ಒಬ್ಬ ಗೈಡ್ ಎದುರಾಗುತ್ತಾನೆ. ಮುಂದೆ ಅವನ ಆಣತಿಯಂತೆ ನಡೆಯಬೇಕು ಎಂಬ ಸಲಹೆ ನೀಡಿದ್ದರು. ಶ್ರೀಲಂಕಾ ವಿಮಾನ ನಿಲ್ದಾಣದಲ್ಲಿ ನಮ್ಮನ್ನು ಮೊದಲು ಎದುರ್ಗೊಂಡವನು ಧ್ಯಾನಮುದ್ರೆಯಲ್ಲಿ ಕುಳಿತ ಬೃಹತ್ತಾದ ಶಾಂತಮೂರ್ತಿ ಬುದ್ದ! ಆಹಾ! ಎಂದಿತು ಮನಸ್ಸು. ಎಂತಹ ಕೊಳಕು ಮನಸ್ಸೂ ಇಲ್ಲಿ ಭಾವ ಶುದ್ದಿಗೆ ಒಳಗಾಗಬೇಕು. ಭಾರತದಲ್ಲಿ ಜನಿಸಿ ಸಮುದ್ರ ಲಂಘಿಸಿ ಹೋದ ಏಕೈಕ ಧರ್ಮ! ಮಾನವೀಯತೆಯನ್ನು ಹೇಳಿಕೊಟ್ಟ ಧರ್ಮ.
ನಿಲ್ದಾಣದ ಹೊರಗೆಬಂಟ್ಸ್ ಲೇಡಿಸ್ಎಂದು ಬರೆದ ಪೇಪರನ್ನು ತಲೆಯ ಮೇಲೆ ಹೊತ್ತು ನಿಂತಿದ್ದವನ ಬಳಿ ಹೋದೆವು. ಕಾಲೇಜಿನಿಂದ ಹೊರಬಂದು ಹೆಚ್ಚು ವರ್ಷ ಆಗಿರದ ತರುಣ. ನಮ್ಮ ಮಹಿಳಾ ಪಡೆ ಕಂಡ ಅವನ ಮುಖದಲ್ಲಿ ಒಂಚೂರುಪಸೆಇಲ್ಲ. ರೋಹಿಣಿ ಹೇಳಿದರುಇಂದ್ರಕ್ಕ. ಆಯೆ ನಮ್ಮ ಸೈನ್ಯ ತೂದು ಪೋಡಿದೇ ಪೋತೆ ತೋಜುಂಡು. ಅವುಲ ಒಕ್ಕೆಲಕಲ್ನ ಪೊಂಜೊವತ್ತೆ?” (ಇಂದ್ರಕ್ಕ ಆತ ನಮ್ಮನ್ನು ನೋಡಿ ಹೆದರಿಯೇ ಹೋದ. ಅದೂ ಬಂಟರ ಹೆಂಗುಸರಲ್ಲವೆ?) ಎಂದರು ನಗುತ್ತಾ. ನಾನು ಮೊದಲು ಅವನ ಬಳಿ ಹೋದೆ. ತಾನುಕನಾಲ್ಎಂದು ತನ್ನನು ಪರಿಚಯಿಸಿಕೊಂಡ.
ಎಲ್ಲಾ ಮಹಿಳೆಯರು ಹೊರಗೆ ಬಂದಿರಾ ಎಂದು ತನ್ನ ಅಪ್ರಬುದ್ಧ ಇಂಗ್ಲೀಷಿನಲ್ಲಿ ಮಾತನಾಡಿದ. ಬಗ್ಗೆ ಖಾತ್ರಿ ಪಡಿಸಿಕೊಳ್ಳಲು ಆತ ಒಂದು, ಎರಡು, ಮೂರು........ಎಂದು ನಮ್ಮ ತಲೆ ಲೆಕ್ಕ ಹಾಕಲಾರಂಭಿಸಿದ. ಕೆಲವರನ್ನು ಆತ ಕತ್ತೆತ್ತಿ ನೋಡಬೇಕಿತ್ತು. ಶಶಿ ಅಡಪರನ್ನು ನೋಡಲು ಕಾಲ್ಬೆರಳುಗಳ ಮೇಲೆ ನಿಂತ. ಕೊನೆಗೆನನ್ನ ಹಿಂದೆ ಬನ್ನಿಎಂದ.
ನಮ್ಮ ಲಗ್ಗೇಜುಗಳನ್ನು ಹೊತ್ತು ಆತ ನಿಲ್ಲಿಸಿದ್ದ ಬಸ್ಸಿನ ಬಳಿ ನಾವೆಲ್ಲ ಹೋದೆವು. ಲಗ್ಗೇಜನ್ನು ಒಂದು ವ್ಯಾನ್ನಲ್ಲಿ ಹಾಕಿನಿಮ್ಮ ಲಗ್ಗೇಜಲ್ಲಿ ಹಣ ಪಾಸ್ ಫೋಟ್ ಅಥವಾ ಯಾವುದೇ ಬೆಲೆಬಾಳುವ ವಸ್ತು ಇಡಬೇಡಿ ಇದ್ದರೆ ತೆಗೆಯಿರಿಎಂದ. ಅವನು ಹೇಳಿದಂತೆ ನಡೆದು ನಾವು ಬಸ್ಸು ಹತ್ತಿದೆವು. ನಮ್ಮ ಬಸ್ಸು ಅಲ್ಲಿಂದ ಹೊರಟಾಗ 12.30 ಆಗಿತ್ತು.

ಬಸ್ಸಿನಲ್ಲಿ 39 ಮಂದಿ ಮಹಿಳೆಯರು. ನಮ್ಮೊಂದಿಗೆ ಶ್ರೀಲಂಕಾದ ಒಬ್ಬ ಡ್ರೈವರ್, ಒಬ್ಬ ಸಹಾಯಕ, ಒಬ್ಬ ಗೈಡ್ _ ಮೂವರು ಪುರುಷರು. ಅವರಿಗೆ ನಮ್ಮ ಭಾಷೆ ಬಾರದು. ನಾವು ನುಡಿದದ್ದೇ ಭಾಷೆ, ಆಡಿದ್ದೇ ಮಾತು. ಪಾಪ ಗೈಡ್ ಗತಿ ಹೇಗಾಗ ಬೇಡ? ಅವನ ಪೆಚ್ಚು ಮೋರೆಯಲ್ಲಿ ಉತ್ಸಾಹ ತುಂಬಲು `ಶ್ರೀ ಲಂಕಾದ ಬಗ್ಗೆ ಏನಾದರೂ ಸ್ಥಳೀಯ ಪರಂಪರೆಯ ಕಥೆ ಇದೆಯಾ ಕನಾಲ್?’  ಎಂದೆ. ಆತನ ಮೊಗ ಮೊರದಗಲವಾಯಿತು. ಉತ್ಸಾಹದಿಂದ ಹೇಳತೊಡಗಿದ.....

No comments:

Post a Comment