Friday, April 24, 2015

ಅಗಲಲಾರದೆ ಅಗಲಿದೆಯಾ?

ನನ್ನ ಒಳಗೂ ಹೊರಗೂ ಆವರಿಸಿದ್ದೆ
ಅನುದಿನವೂ ನನಗೆ ಅಂಟಿ ಬಾಳುತ್ತಿದ್ದೆ .
ಸಾವಿನಲ್ಲೂ ನನ್ನನ್ನು ಜೊತೆಗೊಯ್ಯೊವೆ ಎಂದವ
ಕಡಲಮ್ಮನ ಗರ್ಭಸೇರಿದಾಗ ಮರೆತೆ

ನಲ್ವತ್ತೈದು ವಸಂತಗಳು ಸಂದುವು ನಿನ್ನ ಆತ್ಮೀಯ ಸಂಗದಲ್ಲಿ
ನಮ್ಮ ಸಾಂಗತ್ಯವನ್ನು  ಕಡಿದೊಗೆಯಿತು  ಕಡಲು
ಕಡಲೆಂದೂ ನಿನ್ನ ಕರೆದಿರಲಿಲ್ಲ
ನನ್ನ ಕರೆಯುತ್ತಿದ್ದ ಕಡಲಿಗೆ ನೀನು ಮನಸೋತೆ
ಯಾವ ಮಾಯೆಗೆ ಕಟ್ಟು ಬಿದ್ದೆ?
         
 ಒಂಟಿ ಬದುಕು ಒಲ್ಲೆ ಎಂದವ.
ಒಂಟಿತನವನ್ನು ನನ್ನ ಪಾಲಿಗಿತ್ತು ನಗು ನಗುತ್ತಾ ಹೋದ ತುಂಟ ನೀನು
ತುಂಟ ನಗುವಿನಿಂದಲೇ `ಬಾಳ ಸಂಗಾತಿಯಾಗಿ ಬಾ` ಎಂದ ನಿನ್ನ ಮಾತಿಗೆ ನಾನು ಒಪ್ಪಿದ್ದೆ ಅಂದು
ಸೈನಿಕರೆಲ್ಲ ಕೆಂಗುಡ  ಎಂದಾಗ ನೀನು ನಕ್ಕಿದ್ದೆ
ಮತ್ತೆ ಕೆಂಗುಡನಂತೆ ನನ್ನನ್ನು ಒಂಟಿಯಾಗಿಸಿದೆ.
ದಲಿತ ಬ್ರಾಹ್ಮಣ, ಬಡವ ಬಲ್ಲಿದ ಎನ್ನದೆ
ಎಲ್ಲರೊಂದಿಗೆ ಬೆರೆಯುವುದು ನಿನ್ನ ಗುಣವಾಗಿತ್ತು
ನಗುವುದು ನಗಿಸುವುದು ನಿನ್ನ ಧರ್ಮವಾಗಿತ್ತು
 ಸತ್ತು ಶವವಾದರೂ ನಿನ್ನ ಮೊಗದಲ್ಲಿ ನನಗೆ ಕಂಡಿದ್ದು
ಅದೇ ತುಂಟನಗು!

ಹೆತ್ತಮ್ಮನ ಗರ್ಭದಲ್ಲಿ ಭ್ರೂಣವಾದವ
 ಕಡಲಮ್ಮನ  ಗರ್ಭದಲ್ಲಿ ದೇಹ ತೊರೆದೆ
ಹುಟ್ಟಿಗೂ ನೀರು! ಸಾವಿಗೂ ನೀರು!

 ದೇಹದೊಳಗಿನ ಗಾಳಿ ದೇಹ ತೊರೆದಾಗ
 ಕಡಲ ಗಾಳಿಯಲ್ಲಿ ಲೀನವಾಯಿತು
ಜಾತ್ಯಸ್ಯ  ಮರಣಂ ಧ್ರುವಂ!

ಪಂಚಭೂತಗಳೇ ದೇವರೆಂದು ಕಡಲದಡದಲ್ಲಿ ನಿಂತು
 ಆಡಿದ್ದು ನಿನ್ನ ಕೊನೆಯ ಮಾತಾಯಿತು
ನೀನೂ ಐಕ್ಯನಾದೆ ಪಂಚ ಭೂತಗಳಲ್ಲಿ!
ಅಮವಾಸೆಯ ಕತ್ತಲಲ್ಲಿ ಮರೆಯಾದೆ
ಪ್ರಕೃತಿಯ ಮಡಿಲು ಸೇರಿದೆ.  

ಬಿದ್ದ ಮನೆಯಡಿ ಒಂಟಿಯಾಗಿ  ಕುಳಿತು
ಹುಡುಕುತ್ತಿದ್ದೇನೆ ನೀನಿತ್ತ ಭರವಸೆಯನ್ನು
ನಾವಿಬ್ಬರೂ ಒಟ್ಟಿಗೇ ಸಾಯೋಣ  ಎಂದಿದ್ದ
ನಿನ್ನ ಆತ್ಮೀಯ ನುಡಿಗಳನ್ನು


 ಡಾ ಇಂದಿರಾ ಹೆಗ್ಗಡೆ
17-01-2015




No comments:

Post a Comment