ಶ್ರೀ ಲಂಕಾ ಪ್ರವಾಸ ಯೋಜನೆ ಸಿದ್ಧವಾಯಿತು. “ನಾವು ದಂಬುಲಾ ಬೆಟ್ಟ ಹತ್ತುವುದು ಬೇಡ. ನಮ್ಮ ವಯಸ್ಸಿಗೆ ಸಾಧ್ಯ ಇಲ್ಲ.” ಎಂದು ಹೆಗ್ಗಡೆಯವರು ಸಲಹೆ ನೀಡಿದಾಗ ನಾನು ಅನಿವಾರ್ಯವಾಗಿ ಒಪ್ಪಬೇಕಾಯಿತು.
ದಂಬುಲಾ ಗುಹಾಲಯ ಕೊಲೊಂಬೋದಿಂದ 160 ಕಿಲೋಮೀಟರ್ ದೂರ ಶ್ರಿ ಲಂಕಾದ ದ್ವೀಪದ ನಡುಭಾಗದಲ್ಲಿ ಇದೆ. ಇದರ ರಾಕ್ ಟವರ್‍ಗಳು ಸುತ್ತಲಿನ ಭೂಮಿ ಮಟ್ಟದಿಂದ 160 ಮೀಟರ್ ಎತ್ತರದಲ್ಲಿದೆ. ಸಮುದ್ರ ಮಟ್ಟದಿಂದ 118 ಅಡಿ ಎತ್ತರದ ಬೆಟ್ಟದ ಮೇಲಿನಿಂದ 600 ಅಡಿ ಎತ್ತರಕ್ಕೆ ಬೆಳೆದಿರುವ ಶಿಲಾ ಗುಹೆ 2000ಮೀಟರ್ ಉದ್ದ ಹಬ್ಬಿದೆ.
ಇದರ ಜೊತೆಗೆ ಸುಮಾರು 50 ಎಕ್ರೆ ಬೆಟ್ಟಪ್ರದೇಶವನ್ನು ಆವರಿಸಿರುವ 80 ಗುಹೆಗಳಿವೆ. ರಾಜ ವಿಜಯಬಾಹು (1055-1119) ಕಾಲದ ಮಹಾವಂಶದಲ್ಲಿ ಮೊದಲ ಬಾರಿಗೆ ದಂಬುಲಾ ಗುಹೆಯನ್ನು “ಜಂಬು ಕೊಳ” ಎಂದು ಉಲ್ಲೇಖಿಸಲಾಗಿದೆ. ಜಂಬೂಕೊಳವನ್ನು ಪಾಲಿಭಾಷೆಯಲ್ಲಿ ದಂಬುಲಾ ಎನ್ನುತ್ತಿದ್ದರು. ಗುಹೆಯ ಬಂಡೆ ಶಾಸನದಲ್ಲಿ “ಸ್ವರ್ಣಗಿರಿ ಗುಹೆ” ಎಂಬ ಬರಹ ಇದೆ.
ದೂರದಿಂದ ಆಕರ್ಷಿಸುವ ಧರ್ಮ ಚಕ್ರ ಪರಿವರ್ತನಾ ಮುದ್ರೆಯಲ್ಲಿ ಕುಳಿತ ಚಿನ್ನದ ಹೊಳಪಿನ ಬುದ್ಧನ ಭೂಮತೆ ಭೂಮಿಯಿಂದ ಆಕಾಶದವರೆಗೆ ಆವರಿಸಿ ಮುಂಭಾಗದಿಂದ ದಂಬುಲಾ ಬೆಟ್ಟವನ್ನು ಮರೆಮಾಡುತ್ತದೆ. ಬುದ್ಧನ ಚಿನ್ನದ ಪ್ರತಿಮೆಯ ಎಡಕ್ಕೆ ಬಂಡೆಗಳ ಮೇಲೆ ಹೆಜ್ಜೆ ಇಟ್ಟು ಬೆಟ್ಟ ಹತ್ತುವ ಬಿಕ್ಕುಗಳ ಸಾಲು ಪ್ರತಿಮೆಗಳಿವೆ. ಅಂದಿನ ಕಾಲದಲ್ಲಿ ಬಿಕ್ಕುಗಳು ಹೀಗೆ ಬೆಟ್ಟ ಹತ್ತಿ ಹೋಗುತ್ತಿದ್ದಿರಬೇಕು.
“ನಮ್ಮಲ್ಲಿ ಬೆಟ್ಟ ಹತ್ತುವವರು ಯಾರು?” ಹೆಗ್ಡೆಯವರು ಕೇಳಿದರು. “ ನೀವು ಟಿಕೆಟ್ ತನ್ನಿ ಸಾಧ್ಯವಾದಷ್ಟು ಹತ್ತುವೆವು. ಇಲ್ಲವಾದಲ್ಲಿ ಮರಳಿ ಬರುತ್ತೇವೆ. ಈಗಾಗಲೇ ಸಿಗುರಿಯಾ ಬಂಡೆ ನೋಡಿ ಬೆದರಿ ಮರಳಿದ್ದ ನಾವು ಇಲ್ಲಿಂದಲೂ ಕಾಲ್ಕಿತ್ತರೆ ಹೇಗೆ?” ನಾನು ಹೇಳಿದಾಗ `ನಾನು ಹತ್ತಲಾರೆ’ ಎಂದ ಹೆಗ್ಡೆಯವರು ತಮಗೂ ಟಿಕೆಟ್ ತಂದರು. ನಾವು ಕೆಲವೇ ಮೆಟ್ಟಲು ಹತ್ತಿದೆವು. ಗಂಟುನೋವಿನಿಂದ ಬಳಲುತ್ತಿದ್ದ ಸುನಂದಾ ಸೋತು ಮೆಟ್ಟಲ ಮೇಲೆ ಕುಳಿತರು. `ಪಾಂಡವರು ಸ್ವರ್ಗಾರೋಹಣ ಮಾಡಿದ ರೀತಿ ಉಳಿಯುವವರು ಉಳಿಯಲಿ ಹತ್ತುವವರು ಹತ್ತೋಣ’ ಎಂದು ನಾವು ಮುಂದೆ ಸಾಗಿದೆವು. ಸುನಂದ ಕೂಡಾ `ನೀವು ಹೋಗಿ ನಾನು ಇಲ್ಲಿಯೇ ಇರುತ್ತೇನೆ’ ಎಂದರು. ನಾನು ನಿಧಾನವಾಗಿ ನಡೆದೆ. ಒಬ್ಬೊಬ್ಬರದ್ದು ಒಂದೊಂದು ವೇಗ. ಆದರೆ ನಮ್ಮಂತೆ ದಮ್ಮು ಬಿಡುತ್ತಾ ಬೆಟ್ಟ ಹತ್ತುವ ಪ್ರಯಾಣಿಕರೂ ಇದ್ದರು. ನನ್ನಿಂದ ಗುಹಾ ಸಂಕೀರ್ಣಕ್ಕೆ ಹೋಗಲಾಗದು ಎಂದುಕೊಂಡೇ ದಮ್ಮು ಬಿಡುತ್ತಾ ಗುರಿ ತಲುಪಿದೆ.
ದೂರದಿಂದಲೇ ಬೆಟ್ಟದ ಮೇಲೆ ಎಮ್ಮೆಯನ್ನು ನುಂಗಿದ್ದ ಹೆಬ್ಬಾವಿನಂತೆ ಉದ್ದಕ್ಕೆ ಮಲಗಿದ್ದ ಶಿಲಾ ಬಂಡೆ ಕಾಣುತ್ತಿತ್ತು. ಅದರ ಮೇಲ್ಗಡೆಯಿಂದ ನೀರು ಜಿನುಗಿ ಕೆಳಗೆ ಪಸೆಯಾಗಿ ಹರಿಯುತ್ತಿತ್ತು.
ಬೆಟ್ಟದ ಮೇಲೆ ಪುಟ್ಟ ಪುಟ್ಟ ಅಂಗಳದಂತೆ ಸ್ವಲ್ಪ ಭಾಗ ಸಮತಟ್ಟು ಇತ್ತು. ಬೆಟ್ಟದ ಮೇಲಿನಿಂದ ಕಾಣುವ ಸುತ್ತಲಿನ ರಮಣೀಯ ಹಸಿರುಸಿರಿ ನಮ್ಮ ದಣಿದ ಜೀವಕ್ಕೆ ನವಸಂಚಲನ ಮೂಡಿಸಿತ್ತು.
ಗುಹಾ ದ್ವಾರದ ಕಡೆಗೆ ಹೆಜ್ಜೆಯಿಟ್ಟಾಗ ಪುರಾತತ್ವ ಕಛೇರಿಯವರು ನಮಗಾಗಿ ಗೈಡ್ ಒದಗಿಸಿದರು. ನಾವು ಖರೀದಿಸುವ ಟಿಕೆಟ್ ಗೈಡನ್ನು ಒಳಗೊಂಡಿರುತ್ತದೆ. ಅವನೊಂದಿಗೆ ಗುಹಾಲಯದ ಒಳಾಂಗಣಕ್ಕೆ ಕಾಲಿಟ್ಟಾಗ ಮಹಾರಾಷ್ಟ್ರದ ಅಜಂತ ಮತ್ತು ಎಲ್ಲೋರ ಗುಹಾ ಸಂಕೀರ್ಣ ನೆನÉಪಾಯಿತು. ಕುದುರೆಯ ಲಾಳಾಕರದಲ್ಲಿ ಇರುವ ಅಜಂತಾ ಗುಹೆಗಳು ಶಿಲಾ ಶಿಖರಗಳ ಕೊರಕಲು ಭಾಗದಲ್ಲಿವೆ. ಗುಹೆಯ ಮುಂದೆ ಸ್ಥಳಾವಕಾಶ ಕಡಿಮೆ. ಶಿಲೆಗಳನ್ನೇ ಕೊರೆದು ಗುಹಾ ದೇವಾಲಯಗಳನ್ನು ಮಾಡಲಾಗಿದೆ. ಒಳಗಿನ ಶಿಲೆಗಳಲ್ಲೇ ಪ್ರತಿಮೆಗಳನ್ನು ಕೊರೆಯಲಾಗಿದೆ. ಅಜಂತಾದ ಗುಹಾಲಯದಲ್ಲಿ ಮಾನವನ ಕೈ ಚಳಕ ಹೆಚ್ಚು. ಅಜಂತಾ ಒಂದು ಅದ್ಭುತ! ಅಜಂತಾದದಲ್ಲಿ ಮತ್ತು ಎಲ್ಲೋರದಲ್ಲಿ ಶಿಲಾ ಪರ್ವತದ ಒಳಗಿನಿಂದಲೇ ಹಿಂದೂ ಮತ್ತು ಬೌದ್ಧ ಧರ್ಮಕ್ಕೆ ಸಂಬಂಧಿಸಿದ ಶಿಲ್ಪಗಳನ್ನು ಮಾತ್ರವಲ್ಲ ಎತ್ತರದ ಚೈತ್ಯಗಳನ್ನು ಕೊರೆಯಲಾಗಿದೆ. ಗುಹೆಯ ಮುಂಭಾಗದಲ್ಲಿ ಬಹಳ ಇಕ್ಕಟ್ಟು ಸ್ಥಳ.
ದಂಬುಲಾದಲ್ಲಿ ಪ್ರಕೃತಿಯೇ ನಿರ್ಮಿಸಿದ ಗುಹಾ ಅರಮನೆ ಇದೆ. ಎತ್ತರದ, ವಿಶಾಲ ಗುಹೆಗಳಿವು. ಗುಹೆಯ ಒಳಗೆ ಆಧಾರವಾಗಿ ಕಂಬಗಳೇ ಇಲ್ಲ. ಇದು ಪ್ರಕೃತಿಯ ಅದ್ಭುತ ಕೈಚಳಕ. ಇಲ್ಲಿ ಶಿಲೆಯಿಂದ ಶಿಲ್ಪಗಳನ್ನು ಮೂಡಿಸಿದ್ದು ಕಂಡು ಬರುವುದಿಲ್ಲ. ಬೇರೆಡೆ ರಚಿಸಿ ಇಲ್ಲಿ ಪ್ರತಿಷ್ಟಾಪಿಸಿದ ಪ್ರತಿಮೆಗಳು. ಹಾಗಂತ ಗೈಡ್ ಕೂಡಾ ಹೇಳಿದ. ಪುಟ್ಟ ಪುಟ್ಟ ಸ್ಥೂಪಗಳು ಇವೆ. ಗೋಡೆಗಳ ಮೇಲೆ ಒಳಛಾವಣಿಯಲ್ಲಿ ಮುರಾಲ್ ಚಿತ್ರಕಲೆಗಳು ಕಂಗೊಳಿಸುತ್ತವೆ. ಇವುಗಳಲ್ಲಿ ಹೆಚ್ಚಿನವು ಬುದ್ಧನ ಜೀವನಕ್ಕೆ ಸಂಬಂಧಿಸಿದ ಚಿತ್ರಗಳು.
ಗುಹೆಯ ಹೊರಗೆ ಗೋಡೆ ಬಾಗಿಲು ರಚಿಸಿ ಕಮಾನು ಕಟ್ಟಿ ಸುಣ್ಣ ಬಳಿದಿದ್ದಾರೆ. ನಮ್ಮ ವಾಸದ ಮನೆಯಂತೆ ಗುಹಾ ಸಮುಚ್ಛಯದ ಹೊರನೋಟ ಇದೆ.
1991ರಲ್ಲಿ ವಿಶ್ವಪಾರಂಪರಿಕ ತಾಣವೆಂದು ಹೆಗ್ಗಳಿಗೆಗಳಿಸಿಕೊಂಡ ದಂಬುಲಾ ಗುಹಾ ಇತಿಹಾಸವನ್ನು ಕ್ರೈಸ್ತಪೂರ್ವಕ್ಕೆ ಕೊಂಡು ಹೋಗಲಾಗಿದೆ. ಗುಹೆಗಳಲ್ಲಿ ಇತಿಹಾಸ ಪೂರ್ವದ ಮಾನವರು ನೆಲಸಿದ್ದರಬಹುದು ಎನ್ನುವುದಕ್ಕೆ ಇಲ್ಲಿ ದೊರಕಿರುವ ಸಮಾಧಿಗಳು ಅಸ್ಥಿ ಪಂಜರಗಳು ಸಾಕ್ಷಿ ನೀಡುತ್ತವೆ ಎನ್ನುತ್ತಾರೆ ಪುರಾತತ್ವ ತಜ್ಞರು. ಕ್ರಿ.ಸ್ತಪೂರ್ವದ ಕೆಲವು ಬ್ರಾಹ್ಮಿ ಲಿಪಿಯ ಕಲ್ಬರಹಗಳು ಇಲ್ಲಿ ದೊರಕಿವೆ. ಸಿಂಹಳದ ಮೊದಲ ಬೌದ್ಧ ಅರಸನಾದ ದೇವನಾಂಪ್ರಿಯ ತಿಸ್ಸನ ಕಾಲಕ್ಕಿಂತಲೂ ಹಿಂದೆ ಈ ಗುಹಾ ಸಮುಚ್ಛಯದ ಇತಿಹಾಸವನ್ನು ಗುರುತಿಸಲಾಗಿದೆ.
ಸುಮಾರು ಕ್ರಿ.ಪೂರ್ವ 2ನೆಯ ಶತಮಾನದಿಂದ ಕ್ರಿ. ಶ. 18ನೆ ಶತಮಾನದವರೆಗೆ ಈ ಗುಹೆ ಸಿಂಹಳದ ಅರಸರ ಅಧೀನ ಇತ್ತು. ಕೀರ್ತಿ ಶ್ರೀ ರಾಜಾ ಸಿಂಗೈ (ಕೀರ್ತಿ ನಿಸಾಂಕ ಮಲ್ಲ)ಸಿಂಹಳದ ಕೊನೆಯ ಅರಸ. (1747-1781 A.D) ಈತನ ಪ್ರತಿಮೆ ದಂಬುಲಾ ಗುಹೆಯಲ್ಲಿ ಇದೆ.
ಕ್ರಿಸ್ತ ಪೂರ್ವದಲ್ಲಿ ದಕ್ಷಿಣ ಭಾರತದ ಅರಸನು ಅನುರಾಧಪುರವನ್ನು ಆಕ್ರಮಿಸುತ್ತಾನೆ. ಆಗ ಅನುರಾದಪುರದ ಅರಸನಾಗಿದ್ದ ರಾಜಾ ವಾಲಗಬಾಹು ((King Vattagamini Abhaya 103 BC and 89-77 BC ) ದಂಬುಲಾ ಗುಹೆಯಲ್ಲಿ 12 ವರ್ಷಗಳ ಕಾಲ ತಲೆಮರೆಸಿಕೊಳ್ಳುತ್ತಾನೆ. ಆತ ಮತ್ತೆ ಅನುರಾಧಪುರವನ್ನು ಸ್ವಾಧೀನ ಪಡಿಸಿಕೊಂಡ ಮೇಲೆ ತನಗೆ ಆಸರೆ ನೀಡಿದ ಗುಹಾಲಯವನ್ನು ಬೌದ್ಧ ವಿಹಾರವನ್ನಾಗಿ ಪರಿವರ್ತಿಸುತ್ತಾನೆ. ಪ್ರಕೃತಿ ನಿರ್ಮಿತ ಗುಹೆಯ ವಿಶಾಲ ಹಜಾರಕ್ಕೆ ಗೋಡೆಗಳನ್ನು ಕಟ್ಟಿ ಮುಖ್ಯ ಐದು ಭಾಗಗಳನ್ನಾಗಿ ವಿಭಾಗಿಸುತ್ತಾನೆ. ಇಲ್ಲಿ ಬುದ್ಧನ ಪ್ರತಿಮೆಗಳನ್ನು ಸ್ಥಾಪಿಸುತ್ತಾನೆ. ಮುಂದಿನ ಅರಸರು ಬುದ್ಧನ ಜೀವನ ಚರಿತ್ರೆಗೆ ಸಂಬಂಧಿಸಿದ ಪ್ರತಿಮೆಗಳನ್ನು ಸ್ಥಾಪಿಸುತ್ತಾರೆ. ಗುಹಾಲಯದ ಮೇಲ್ಛಾವಣಿ ಸೇರಿ ವಿಶಿಷ್ಠ ಕಲಾಕೃತಿಗಳಿಂದ ಗುಹೆಯ ವೈಶಿಷ್ಟ್ಯವನ್ನು ಹೆಚ್ಚಿಸುತ್ತಾರೆ.
ವಿಜಯಬಾಹು (1055-1110 A.D )ಕಾಲದಲ್ಲಿ ಇಲ್ಲಿ ಬುದ್ಧಬಿಕ್ಕುಗಳ ವಿಹಾರವೂ ಇತ್ತು
ಮುಂದಿನ ಅರಸರೂ ಈ ಗುಹಾ ಸಮುಚ್ಛಯದ ಮಂದಿರಗಳನ್ನು ಮತ್ತೆ ಮತ್ತೆ ಊರ್ಜಿತಗೊಳಿಸುತ್ತಾರೆ. ಅರಸ ನಿಸಾಂಕ ಮಲ್ಲ 1190ರಲ್ಲಿ 70 ಬುದ್ಧ ಪ್ರತಿಮೆಗಳನ್ನು ಸ್ಥಾಪಿಸುತ್ತಾನೆ. ಇಲ್ಲಿ ಸುಮಾರು 157 ಬುದ್ಧ ಹಾಗೂ ಬೋಧಿ ಸತ್ವನ ಪ್ರತಿಮೆಗಳಿವೆ. ಕಾನಿಷ್ಕ ಶೈಲಿಯ ಶಿಲ್ಪಗಳು ಹೆಚ್ಚಾಗಿವೆ. ಶ್ರೀ ಲಂಕಾದ 3 ಅರಸರ ಪ್ರತಿಮೆಗಳಿವೆ. 4 ಮಂದಿ ದೇವಿ ದೇವತೆಯರು ಇದ್ದಾರೆ. ಕಾಲಾನುಕ್ರಮದಲ್ಲಿ ಈ ಗುಹೆಯ ಒಳಗೆ ವಿಷ್ಣು ಮತ್ತು ಗಣೇಶನ ಶಿಲ್ಪಗಳೂ ಪ್ರತಿಷ್ಠಾಪನೆಯಾಗಿವೆ. ನಮ್ಮ ಗೈಡ್ ಪ್ರಕಾರ ಬೌದ್ಧ ಅರಸ ಹಿಂದೂ ಹೆಣ್ಣನ್ನು ವಿವಾಹವಾದಾಗ ಅವಳ ಸಂತೋಷಕ್ಕೆ ಹಿಂದೂ ದೇವರ ಪ್ರತಿಮೆಗಳನ್ನೂ ಪ್ರತಿಷ್ಠಾಪಿಸುತ್ತಾನೆ.
ಇಲ್ಲಿಯ ಐದು ಮುಖ್ಯ ಗುಹೆಗಳನ್ನು ಸಿಂಹಳದ ಐದು ಅರಸರ ಹೆಸರಲ್ಲಿ ಗುರುತಿಸುತ್ತಾರೆ. ದೇವರಾಜ ವಿಹಾರಾಯ, ಮಹಾರಾಜ ವಿಹಾರಾಯ, ಮಹಾ ಅಲುತ ವಿಹಾರಾಯ, ಪಶ್ಚಿಮ ವಿಹಾರಾಯ ಮತ್ತು ದೆವಿನಾ ಅತುಲ ವಿಹಾರಾಯ.
5ನೆಯ ಗುಹೆಯು ಬಹಳ ವಿಶಾಲವಾಗಿದು 53.28x36.63 ಮೀಟರ್ ಇದೆ. ಬಿಕ್ಕುಗಳ ಎಸೆಂಬ್ಲಿ ಹಾಲ್ ಇದಾಗಿತ್ತು.
ಇಲ್ಲಿ ಬುದ್ಧ ಹಾಗೂ ಅವನಿಗೆ ಸಂಬಂಧಿಸಿದ ಪ್ರತಿಮೆಗಳನ್ನು ಹೆಚ್ಚಾಗಿ ಬಣ್ಣದಲ್ಲಿ ನಿರ್ಮಿಸಲಾಗಿದೆ. ಬುದ್ಧನ ಪ್ರತಿಮೆಗಳ ಜುಟ್ಟಿನಲ್ಲಿ (ಜ್ಯೋತಿ)ಬೆಂಕಿ ಉಗುಳುವಂತೆ ಇದೆ. ಅದೇಕೆ ಹಾಗೆ ಎಂದು ಗೈಡನ್ನು ವಿಚಾರಿಸಿದರೆ ಬುದ್ಧನಿಗೆ ಜ್ಞಾನೋದಯವಾದ ಸಂಕೇತ ಎಂದ. ಶಾಖ್ಯ ಮುನಿ ಬುದ್ಧನಾದುದು ಜ್ಞಾನೋದಯ ಆದ ಮೇಲೆ. ಬುದ್ಧ ಪೂರ್ವದಲ್ಲಿ ಆತ ಅವಲೋಕಿತೇಶ್ವರ. ಆದರೂ ನಾವು ಗೈಡ ಜೊತೆ ತರ್ಕ ಮಾಡಲಿಲ್ಲ.
ಪರಿನಿರ್ವಾಣ ಮುದ್ರೆಯಲ್ಲಿ ಇರುವಂತೆ ಕಾಣುವ ಬುದ್ಧನ ಕಣ್ಣುಗಳು ಅರ್ಧ ತೆರೆದಿರಬೇಕು, ತಲೆಯ ಮೇಲೆ ಜ್ಯೋತಿ ಇರಬಾರದು, ಕೈ ತೊಡೆಯ ಮೇಲೆ ಪವಡಿಸಬೇಕು, ಎರಡು ಕಾಲುಗಳ ಹೆಬ್ಬೆರಳುಗಳು ಹಿಂದು ಮುಂದು ಇರಬೇಕು-ಹೀಗೆ ವಿವರಿಸುತ್ತಾ ಹೋಗುತ್ತಾನೆ ಗೈಡ್. ಬುದ್ಧನ ಬಗ್ಗೆ ಹೆಚ್ಚಿನ ಅರಿವು ಇಲ್ಲದವರು ಮಲಗಿರುವ ಬುದ್ಧ (sleeping Buddha) ಎಂದೇ ಪರಿನಿರ್ವಾಣ ಬುದ್ಧನನ್ನು ಕರೆಯುತ್ತಾರೆ.
ಬೆಟ್ಟದ ಮೇಲಿನ ಶಿಲಾಗುಹಾ ಮಂದಿರಗಳನ್ನು `ರಂಗಿರಿ ದಂಬುಲಾ ರಾಜಮಹಾ ವಿಹರಾಯ’ ಎಂದು ಕರೆದರೆ ಕೆಳಗಿನ ಗೋಲ್ಡ್‍ನ್ ಟೆಂಪ್‍ಲ್‍ನ್ನು `ರಂಗಿರಿ ದಂಬುಲಾ ಉಯನ್‍ವಟಾ ರಾಜ ಮಹಾ ವಿಹಾರಾಯ’ ಎಂದು ಕರೆಯುತ್ತಾರೆ. ಎರಡೂ ವಿಹಾರಗಳು ಒಂದೇ ಆಡಳಿತದಲ್ಲಿದೆ.
ನಾವು ಕೆಳಗಿಳಿದು ಬರುವಾಗ ಸ್ಥಳೀಯ ಯಾತ್ರಿಗಳು ಬುದ್ಧನ ಬಗೆಗೆ ಪಾಡ್ದನ ರೀತಿಯಲ್ಲಿ ಹಾಡುತ್ತಾ ಬೆಟ್ಟ ಹತ್ತುವುದನ್ನು ಡಿ. ವಿ. ಶಿವರಾಮ ಅವರು ವೀಡಿಯೋ ಚಿತ್ರೀಕರಿಸಿಕೊಂಡರು.
ಗೋಲ್ಡ್‍ನ್ ಟೆಂಪ್‍ಲ್‍ನ ಧರ್ಮ ಚಕ್ರ ಪರಿವರ್ತನಾ ಮುದ್ರೆಯ ಬೃಹತ್ ಬುದ್ಧನ ಶಿಲ್ಪ ಬಾಯ್ದೆರೆದ ರಾಕ್ಷಸನ ತಲೆಯ ಮೇಲೆ ಕುಳಿತಂತೆ ಭಾಸವಾಗುತ್ತದೆ. ಅದು ಡ್ರೇಗನ್. ಆ ಡ್ರೇಗನ್‍ನ ನಿಡಿದಾದ ಎರಡು ಕೈಗಳು ಉದ್ದಕ್ಕೆ ಕೆಳಗಿನ ಮೆಟ್ಟಲವರೆಗೆ ತೊಡೆಯ ಮೇಲೆ ಚಾಚಿದಂತೆ ಚಾಚಿವೆ. ಎರಡು ಕೈಗಳ ನಡುವಿನ ಮೆಟ್ಟಲುಗಳನ್ನು ಹತ್ತಿ ನಾವು ಒಳಹೋಗಬೇಕು. ಅಲ್ಲಿ ಸ್ವಾಗತಕಾರಿಣಿ ಎದುರಾಗುತ್ತಾಳೆ. ಎಡಭಾಗದ ಮೆಟ್ಟಲು ಹತ್ತಿ ಹೋದರೆ ವಿಶಾಲ ಹಜಾರಕ್ಕೆ ಬರುತ್ತೇವೆ. ಇಲ್ಲಿ ಬುದ್ಧನಿಗೆ ಸಂಬಂಧಿಸಿದ ಮತ್ತು ಸಿಂಹಳದ ಇತಿಹಾಸ ಸಂಸ್ಕøತಿಗೆ ಸಂಬಂಧಿಸಿದ ಸುಂದರ ವಸ್ತು ಪ್ರದರ್ಶನಾಲಯ ಇದೆ. ಒಟ್ಟು ಎರಡು ಅಂತಸ್ತುಗಳಲ್ಲಿ ದಕ್ಷಿಣ ಭಾರತದಲ್ಲಿ ಬಳಸುವ ಅನೇಕ ಪುರಾತನ ವಸ್ತುಗಳು - ಕಲ್ಲಿನ ಅಂಡೆ, ಹಿತ್ತಾಳೆ ಮರಿಗೆ ಇತ್ಯಾದಿ ಇವೆ. ತಾಳೆಗರಿ ಗ್ರಂಥಗಳು, ಉತ್ಖನನದಲ್ಲಿ ದೊರಕಿರುವ ಬುದ್ಧನ ವಿಗ್ರಹಗಳು, ಬುದ್ಧನಿಗೆ ಸಂಬಂಧಿಸಿದ ವಿಗ್ರಹಗಳು, ಹಿಂದೂ ದೇವರ ಶಿಲ್ಪಗಳು, ಸುಂದರ ಕಲಾಕೃತಿಗಳು-ಹೀಗೆ ಅಪೂರ್ವ ಸಂಪತ್ತು ಇಲ್ಲಿ ಬಹಳ ಅಚ್ಚುಕಟ್ಟಾಗಿ ಜೋಡಣೆಯಾಗಿವೆ. ಎಲ್ಲವೂ ಸ್ವಚ್ಚ ಸುಂದರ.
No comments:
Post a Comment