Saturday, February 7, 2015

ತುಳುನಾಡಿನ ಭೂತಾರಾಧನೆಯಲ್ಲಿ ಮಹಿಳೆ.



ಬಹು ಮುಖೀ ಸಂಸ್ಕøತಿಯ ಭಾರತದಲ್ಲಿ ಧರ್ಮದ ಪರಿಕಲ್ಪನೆ ಕೂಡಾ ಬಹುಮುಖಿಯಾಗಿದೆ. ಧರ್ಮ ಎಂದರೆ ಕೇವಲ ದೇವಸ್ಥಾನ, ಚರ್ಚು, ಮಸೀದಿ ಗುರುದ್ವಾರದಂತಹ ನಿರ್ದಿಷ್ಟ ಜಾಗದಲ್ಲಿ ನಿರ್ದಿಷ್ಟ ವರ್ಗದ ಜನತೆಯ ಅರ್ಚನೆ ಸಂಪ್ರದಾಯ ಆಚಾರ ವಿಚಾರಗಳಿಗೆ ಮಾತ್ರ ಸೀಮಿತವಾದ ವಿಷಯಗಳಲ್ಲ. ಸ್ಥಾಪಿತ ಧರ್ಮ/ಮತ  Riligionಗೆ ಸಂಬಂಧಿಸಿದ ವಿಚಾರವಾದರೆ ನೆಲದ ಸಂಸ್ಕøತಿಯ ಧರ್ಮ, ಅಂದರೆ ಉಪಾಸನೆ ಮಾನವನ ಸಹಬಾಳ್ವೆಗೆ ನೆರವಾಗುವ ಉದ್ದೇಶವನ್ನು ಹೊಂದಿದೆ.  ಮತ, ಪಂಥ ಎಂಬ ಪದಗಳು ತುಳು ಸಂಸ್ಕøತಿಯಲ್ಲಿ ಇಲ್ಲ. ಧರ್ಮ ಎಂಬ ಪದವಷ್ಟೇ ಇಲ್ಲಿ ಇರುವುದು. ದೇಶೀಯ ಜನರು ತಮ್ಮ ಪೂರ್ವಜರಿಂದ ಅರ್ಥಾತ್ ನಾಗರಿಕಪೂರ್ವ ಯುಗದಿಂದ ಬಳುವಳಿಯಾಗಿ ಪಡೆದು ಬಂದಂತಹ ದೇವರ ಬಗೆಗಿನ ಕೆಲವು ಆಚರಣೆಗಳನ್ನು ಉಪಾಸನೆಗಳನ್ನು ಅನುಸರಿಸುತ್ತಿದ್ದಾರೆ. ಇದು “ಧರ್ಮ ಸಂಸ್ಥಾಪಕ”ರ (ಪ್ರವಾದಿ) ಧರ್ಮದಿಂದ ಪ್ರೇರೇಪಿತವಾದುದಲ್ಲ. ಇಲ್ಲಿ ಕೆಲವು ಪದ್ಧತಿ, ಪರಂಪರೆಗಳು ಪೂರ್ವಪರಂಪರೆಯಿಂದ  ಮುಂದುವರಿದುಕೊಂಡು ಬಂದಿರುವಂತಹುದು ಮಾನವನ ಸಹಜೀವನಕ್ಕೆ ಅಗತ್ಯವಾದುವುಗಳು. ಅವುಗಳಿಗೆ ಲಿಖಿತ ಶಾಸ್ತ್ರನಿಯಮಗಳು ಇಲ್ಲ. ಅವು ಸಂಪ್ರದಾಯಗಳ ಮೂಲಕ, ಕಟ್ಟುಕಟ್ಟಳೆಗಳ ಮೂಲಕ ಮುಂದುವರಿದುಕೊಂಡು ಬಂದಿವೆ. ನಮ್ಮನ್ನು ಯಾವುದು ಕಾಪಾಡುತ್ತದೋ ಅದು  ಧರ್ಮ! ನಮ್ಮನ್ನು ಸನ್ಮಾರ್ಗದಲ್ಲಿ ನಡೆಯಲು ಯಾವುದು ಪ್ರೇರೇಪಿಸುತ್ತದೋ ಅವು ಮಾನವ ಧರ್ಮವಾಗಿ ರೂಢಿಯಲ್ಲಿ ಮುಂದುವರಿಯುತ್ತದೆ. ಈ ನಂಬಿಕೆಗಳು ಕಾಲ ಕಾಲಕ್ಕೆ ತಕ್ಕ ಬದಲಾವಣೆಗಳನ್ನೂ ಪಡೆಯುತ್ತವೆ. ಇಂತಹ ನಂಬಿಕೆಗಳು ಸಮಾಜದ ಹಿತಕ್ಕೆ ಸ್ಪಂಧಿಸುವಂತಹುದು ಆಗಿರುತ್ತವೆ. ಇಂತಹ ಧರ್ಮ ತುಳುನಾಡಿನಲ್ಲಿಯೂ ಮುಂದುವರಿದುಕೊಂಡು ಬಂದಿವೆ.

ತುಳುನಾಡು ಶಕ್ತಿಪೂಜೆಯ ನಾಡು : ತುಳುವರು ಶಕ್ತಿಯ ಆರಾಧಕರು. ಶಕ್ತಿಗಳು ಸತ್ಯ ಎಂದು ಅಪಭ್ರಂಶವಾಗಿವೆ. ಸತ್ಯೊಲು ಅಥವಾ ಬೂತೊಲು ಎಂದು ಕರೆಯುವುದು ಶಕ್ತಿದೈವಗಳನ್ನು. ಇವು ಹೆಚ್ಚಾಗಿ ಅರ್ಧನಾರೀ ಶಕ್ತಿಗಳು. ಈ ಶಕ್ತಿಗಳೇ ತುಳುವರ ದೇವರು. ಈ ದೇವರು ಮಾನವನ ನ್ಯಾಯಯುತ ಬದುಕಿಗೆ ನೆರವಾಗುತ್ತವೆ. ಸತ್ಯ, ಧರ್ಮದ ರಕ್ಷಣೆ ಶಕ್ತಿಗಳ ಗುರಿಯಾಗಿವೆ. ಎಲ್ಲ ಶಕ್ತಿಗಳು ‘ಸೂರ್ಯ ಚಂದ್ರರು ಇರುವವರೆಗೆ ಈ ನೆಲದಲ್ಲಿ ಸತ್ಯ ಧರ್ಮವನ್ನು ರಕ್ಷಿಸುತ್ತೇವೆ’ ಎಂದು ಭರವಸೆಯನ್ನು ನೀಡುತ್ತವೆ. ಶಕ್ತಿಯ ಆರಾಧನೆ ಆಗಮ ಸಂಪ್ರದಾಯಕ್ಕೆ ಪರಿವರ್ತನೆ ಆಗುವಾಗ ಅದು ವೈದಿಕ/ಶಿಷ್ಟ ಧರ್ಮದ ತೆಕ್ಕೆಗೆ ಬೀಳುತ್ತದೆ. ಆಗ ಶಕ್ತಿಗಳು ದೇವಿಯೆಂದೋ, ಈಶ್ವರನೆಂದೋ ಪೂಜೆಗೊಂಡು ದೇವಸ್ಥಾನಗಳಾಗುತ್ತವೆ. ಈ ಪರಿವರ್ತನೆಯನ್ನು ತುಳುನಾಡಿನ ಉದ್ದಕ್ಕೂ ಕಾಣಬಹುದು. ಹೀಗೆ ತುಳುನಾಡಿನಲ್ಲಿ ಮಾನವಧರ್ಮದ ರಕ್ಷಕರಂತೆ ಇರುವ ಶಕ್ತಿಗಳ  ಉಪಾಸನಾ ಆಚರಣೆಗಳಲ್ಲಿ,  ವಿಧಿಗಳಲ್ಲಿ, ಇನ್ನಿತರ ಚಟುವಟಿಕೆಗಳಲ್ಲಿ ಮಹಿಳೆಯರಿಗೆ ಯಾವ ಸ್ಥಾನವಿದೆ ಎಂಬುದನ್ನು ಪ್ರಸ್ತುತ ಪಡಿಸುವುದು ಈ ಪ್ರಬಂಧದ ಉದ್ದೇಶ.

ನಾನು ಹೇಳುವ “ಧಾರ್ಮಿಕ ತುಳುನಾಡು” ಕಾಸರಗೋಡು ಜಿಲ್ಲೆಯಿಂದ ಉಡುಪಿ ಜಿಲ್ಲೆಯವರೆಗೆ ಹಬ್ಬಿದೆ.

ತುಳುನಾಡು ಸಣ್ಣ ಸಣ್ಣ ಪಾಳೆಯಗಾರರ ಆಡಳಿತದಲ್ಲಿ ಇದ್ದುದರಿಂದ ಇಡಿಯ ತುಳುನಾಡಿನಲ್ಲಿ ಸಾಮಾಜಿಕ, ಧಾರ್ಮಿಕ ನೀತಿ ಸಂಹಿತೆಗಳು ನಿಷೇಧಗಳು ಏಕ ರೂಪವಾಗಿಲ್ಲ. ದೈವಗಳು ಪಾಳೆಯಗಾರಿಕೆಗೆ ನೆರವಾಗುವಂತಹುಗಳು. ಆಯಾ ಪಾಳೆಯಗಾರನ ವ್ಯಾಪ್ತಿಯ ಸಂಪ್ರದಾಯಗಳು ಆಯಾ ಪಾಳೆಯಗಾರನ ಇಚ್ಚೆಯಂತೆ ನಡೆಯುತ್ತಿದ್ದುವು. ಮತ್ತು ಬದಲಾವಣೆ ಹೊಂದುತ್ತಿದ್ದುವು.  ಗ್ರಾಮಗಳ ದೈವಾರಾಧನೆಯಲ್ಲಿ ಅಜಲಿನ ಪಾತ್ರ ಇದ್ದರೂ ಗ್ರಾಮದ ಹಿರಿಯ ಯಜಮಾನನ ಆಡಳಿತದಡಿ ಸಂಪ್ರದಾಯ ನಂಬಿಕೆಗಳಲ್ಲಿ ಬಿಗಿತ ಮತ್ತು ಸಡಿಲಗಳು ಆಗುತ್ತಿದ್ದುವು  ಧಾರ್ಮಿಕ (ಉಪಾಸನೆ)ಸ್ವಾತಂತ್ರ್ಯ ವಿಷಯದಲ್ಲಿ ಕರಾವಳಿಯ ಕಡೆ ಮಹಿಳೆಯರು ಹೊಂದಿರುವ ಸ್ವಾತಂತ್ರ್ಯ ಬಂಟ್ವಾಳ, ಬೆಳ್ತಂಗಡಿ, ಪುತ್ತೂರು, ಕಾಸರಗೋಡು ಕಡೆ ಕಾಣುವುದಿಲ್ಲ. ತುಳುನಾಡಿನಲ್ಲಿ ಮಾತೃವಂಶೀಯ ವ್ಯವಸ್ಥೆಯ ಪುರುಷ ಪ್ರಧಾನ ಕುಟುಂಬ/ಸಮಾಜ ಇದೆ. ಹೀಗಾಗಿ ಕುಟುಂಬ ಅಥವಾ ಗ್ರಾಮದ ಯಜಮಾನನು ಭೂತಾರಾಧನೆಯ ಕ್ರಿಯೆಯೆ ಮುಂದಾಳತ್ವ ವಹಿಸುತ್ತಾನೆ.

ತುಳು ಸಂಸ್ಕøತಿ, ಪರಂಪರೆಯಲ್ಲಿ ಜಾತಿ ಭೇದ ಇಲ್ಲ: ಮೂಲತಃ ಕಟ್ಟಡಗಳೇ ಇಲ್ಲದ ಕಾಡಿನ ಪರಿಸರವೇ ಈ ಶಕ್ತಿಸ್ಥಳಗಳು. ಅದು ಅಣ್ಣಪ್ಫ ಬೆಟ್ಟ ಇರಬಹುದು. ಶಬರಿಮಲೆ (ಮಣಿಮಲೆ ಬೆಟ್ಟ ಸಾಲು-ಮಣಿಕಂಠನ್ )ಇರಬಹುದು, ಅಥವಾ ಸಿರಿಪಾಡ್ದನದಲ್ಲಿ ಬರುವ ಮುಗುಳಿ ಬಿರ್ಮೆರ ಬೆಟ್ಟ ಇರಬಹುದು.
ನಾಗಬಿರ್ಮೆರ್ ಸಾನಿಧ್ಯ ಇರುವ ಪವಿತ್ರ ಕ್ಷೇತ್ರದಲ್ಲಿ ಮೂಲತಃ ಗುಡಿಸಲುಗಳು ಅತವಾ ಕಟ್ಟಡಗಳು ಇದ್ದಿರಲಿಲ್ಲ. ಈಗಳೂ ಅನೆಕ ಕಡೆ ಒಂದು ಮರವನ್ನೋ ಕಲ್ಲನ್ನೋ ನಿಲುವುಗಲ್ಲನ್ನೋ ನಾಗಬ್ರಹ್ಮನಿಗೆ ಸಂಕೇತಿಸಿರುವುದು ಕಾಣಸಿಗುತ್ತವೆ. ಇಲ್ಲ. ಕೆಲವೆಡೆ ಚೈತ್ಯ/ಚಿತ್ರಕೂಟ ಇದೆ. ಇದು ಸಮಾದಿ. ಇಲ್ಲಿಂದ ದೈವಗಳನ್ನು ಪಾಳೆಯಗಾರಿಕೆಗೆ ನೆರವು ನಿಡಲು ಊರಿಗೆ ತಂದು ಸ್ಥಾಪಿಸದ್ದನ್ನು ಪಾಡ್ದನಗಳೂ ಹೇಳುತ್ತವೆ.

ಆರಾಧನೆ ಮತು ಮಹಿಳೆ
ತುಳುನಾಡಿನ ಸ್ಥಳೀಯ ಧರ್ಮದ ಆರಾಧನಾ ಪ್ರಕ್ರ್ರಿಯೆಗಳಲ್ಲಿ ಜಾತಿ ಭೇದ ಇಲ್ಲ. (ಕೆಲವು ಮನೆಗಳೋ ಚಾವಡಿ ದೈವಗಳ ಆರಾಧನಾ ಪ್ರಕ್ರಿಯೆಗಳಲ್ಲಿ ಕೆಳವರ್ಗದವರು ಚಾವಡಿ ಹತ್ತಲು ನಿಷೇಧ ಇದೆ. ಆದರೆ ಈ ದೈವಗಳು ಕಾಡಿನಿಂದ ಚಾವಡಿಗೆ ಬಂದವುಗಳು. ಈ ದೈವಗಳನ್ನು ಪರಿಶಿಷ್ಟರು ಅವು ಮೂಲತಃ ಇದ್ದ ನೆಲೆಯಲ್ಲಿಯೇ ಆರಾಧಿಸುತ್ತಾರೆ. ಮಾತ್ರವಲ್ಲ ಈ ಚಾವಡಿಯ ದೈವಗಳು ಕೂಡಾ ಪರಿಶಿಷ್ಟ ಮತ್ತು ಹಿಂದುಳಿದ ಜಾತಿಗಳ ಜನರ ಮೈಮೇಲೆ ಆವೇಶಗೊಂಡು ಆ ಮನೆಯ ನಡಾವಳಿಗಳನ್ನು ನಡೆಸಿಕೊಡುತ್ತವೆ ಎಂಬುದು ಗಮನಾರ್ಹ ವಿಷಯ.) ಆದರೆ ಇಲ್ಲಿ ಮಹಿಳೆ ಮತ್ತು ಪುರುಷ ಎಂಬ ಲಿಂಗ ಭೇದ ಇದೆ. ಮೇಲ್ವರ್ಗದ (ಬ್ರಾಹ್ಮಣ/ಬಂಟ ಇತ್ಯಾದಿ) ಮಹಿಳೆಯರಿಗೂ ಉಪಾಸನಾ ಆಚರಣೆಗಳಲ್ಲಿ ಭಾಗವಹಿಸಲು ಅವಕಾಶ ಇಲ್ಲ, ಪರಿಶಿಷ್ಟ ಮಹಿಳೆಯರು ಮಾತ್ರ ಕೋಲ/ನೇಮಗಳ ಸಂದರ್ಭದಲ್ಲಿ ಪುರುಷ ಮಾಧ್ಯಮನ ಮೈಯಲ್ಲಿ ದೈವದ ಆವೇಶ ಬರಿಸಲು ನಾಂದಿ ಪಾಡ್ದನ ಹಾಡುತ್ತಾರೆ. ಅವಕಾಶ ಇಲ್ಲ. ಹಳ್ಳಿಗಳ ಮನೆಗಳಲ್ಲಿ ಪುರುಷ ಸದಸ್ಯರ ಕೊರತೆ ಇದೆ. ಆದರೂ ಮಹಿಳೆಯರು ಇಲ್ಲಿ ಬರೇ ಪ್ರೇಕ್ಷಕರು.
ಈ ಕೆಳಗಿನ ಸಂದರ್ಭಗಳಲ್ಲಿ ಇಂತಹ ನಿಷೇಧಗಳನ್ನು ಕಾಣಬಹುದು.

1 ಮಹಿಳೆಯರು ದೈವಮಾಧ್ಯಮರಾಗುವಂತಿಲ್ಲ. ಪುರುಷ ದೈವ ಇರಲಿ, ಸ್ತ್ರೀ ದೈವ ಇರಲಿ ಮಾನೆಚ್ಚಿಯ (ಪುರುಷ ಮಾಧ್ಯಮನಲ್ಲಿ ದೈವ ಮೈದುಂಬುವುದು) ಮಾಧ್ಯಮ ಪುರುಷನೇ ಆಗಬೇಕು. ಪರಿಶಿಷ್ಠ ಪಂಗಡದವರು ನೀಡುವ ನರ್ತನ ಸೇವೆಯಂತಹ ನೇಮ, ಕೋಲ ಸಂದರ್ಭದ ಪರವ/ಪಂಬದೆಚ್ಚಿಗಳಲ್ಲೂ ಪುರುಷನೇ ದೈವಮಾಧ್ಯನಾಗಬೇಕು. ಆತ ಸ್ತ್ರೀ ಶಕ್ತಿಗೆ ನರ್ತನ ಸೇವೆ ನೀಡುವುದಿದ್ದರೂ ಪುರುಷನೇ ಸೀರೆ ಉಟ್ಟು ಸೆರಗು ಹಾಕಿ ನರ್ತನ ಸೇವೆ ನೀಡುತ್ತಾನೆ.

2 ಯಾವುದೇ ದೈವಗಳಿಗೂ ಮಹಿಳೆಯರು ಪೂನೀರ್ ಇಡುವಂತಿಲ್ಲ. ಸುತ್ಯ, ಹೋಮ ಪಂಚಕಜ್ಜಾಯ ಮುಂತಾದ ಕೆಲಸಗಳನ್ನು ಮಾಡಬಾರದು; ಆ ಸೇವೆಗೆ ಪೂರಕ ಸಾಮಾಗ್ರಿಗಳನ್ನು ಒದಗಿಸುವವರಲ್ಲಿ (ಶ್ರಮಿಕಳಾಗಿ) ಮಹಿಳೆ ಇರಬಾರದು.  ಅಡುಗೆಯನ್ನು ಪುರುಷರೇ ಸಿದ್ಧಪಡಿಸಬೇಕು.

3  ಕಂಬುಲ ಬೀಡುಗಳ ಪಾಳೆಯಗಾರಿಕೆಯ ಹಿನ್ನೆಲೆಯುಳ್ಳ ಕೃಷಿ ಸಂಸ್ಕøತಿಗೆ ಸಂಬಂಧಪಟ್ಟ ಒಂದು ಗ್ರಾಮದ, ಒಂದು ಸೀಮೆಯ ಸಾಮೂಹಿಕ ಆಚರಣೆ. ಮಣ್ಣಿನ ಆರಾಧನೆ ಎಂದರೆ ‘ನಾಗಬಿರ್ಮೆರ್’ಆರಾಧನೆ. ಇದು ಫಲವಂತಿಕೆಗೆ ಸಂಬಂಧ ಪಟ್ಟಿದೆ. ಮಣ್ಣಿಗೆ ಮದುವೆ ಎಂದೂ ಹೇಳುತ್ತಾರೆ. ಈ ಆಚರಣೆಯಲ್ಲಿಯೂ ಮಹಿಳೆಯರು ಭಾಗವಹಿಸುವಂತಿಲ್ಲ. ಪ್ರೇಕ್ಷಕರಾಗಿಯೂ ಭಾಗವಹಿಸುವ ಸಂಪ್ರದಾಯ ಇರಲಿಲ್ಲ. (ಇದರಲ್ಲಿ ಇತ್ತೀಚಿಗೆ ಬದಲಾವಣೆÉ ಬರುತ್ತಿದೆ)  ಬಂಟ್ವಾಳ, ಪುತ್ತೂರು, ಬೆಳ್ತಂಗಡಿ ಕಡೆ ಕಂಬುಲ ಗದ್ದೆಯ  ಬಳಿ ಇರುವ ನಾಗಬಿರ್ಮೆರೆ ಬನಗಳಿಗೆ ಮಹಿಳೆಯರು ಹೋಗಬಾರದು. ನಾಟಿ ಮಾಡಲೂ (ಕೆಲವೆಡೆ  )ಕಂಬುಲ ಗದ್ದೆಗೆ ಮತ್ತು ಬಾಕಿಮಾರು ಗದ್ದೆಗೆ ಮಹಿಳೆಯರು ಇಳಿಯಬಾರದು. ಇಂತಹ ಜಾಗದಲ್ಲಿ ಬಿತ್ತನೆ ಮಾಡುತ್ತಾರೆ.

4 ಒಂದು ಊರಿನ ನೇಮ ಕೋಲಗಳಿಗೆ ಮತ್ತೊಂದು ಊರಿನ ಗುತ್ತು ಬೀಡುಗಳ ಮಹಿಳೆ ಹೋದರೆ ಅವಳ ಮನೆಗೆ ದೈವಮಾಧ್ಯಮ ನೀಡಬೇಕಾದ ಗೌರವ -ಒಸಯದ ಗಂಧ/ಕೊಡಿ ಇರೆ ಪ್ರಸಾದ ಅವಳ ಮೂಲಕ ನೀಡುವುದಿಲ್ಲ. ಅವಳನ್ನು ಸಭಗೆ ಅಹ್ವಾನಿಸುವುದೂ ಇಲ್ಲ. ಆದರೆ ಅವಳದೇ ಮನೆಯ (ಮಾತೃ ಕುಟುಂಬದ) ಒಬ್ಬ ಬಾಲಕ ಆ ಚಾವಡಿಯಿಂದ ಹೋದರೆ ಹಿರಿಯರಿಲ್ಲದ ಸಂದರ್ಭದಲ್ಲಿ ಆತ ತನ್ನ ಮನೆಯ ಪ್ರತಿನಿಧಿಯಾಗಿ ಆ ಮನೆಗೆ ಸಲ್ಲ ತಕ್ಕ ಸ್ಥಾನ ಮಾನಗಳನ್ನು (ಒಸಯದ ಗಂಧ/ಕೊಡಿ ಇರೆ ಪ್ರಸಾದ)ಪಡೆಯುತ್ತಾನೆ.

5 ಕೆಲವು ಕಡೆ ಗಡಿ ಆದವರಿಗೆ ಮತ್ತು ಕೆಲವೊಂದು ಸಂದರ್ಭದಲ್ಲಿ ಮುಟ್ಟಾಗಬಲ್ಲ (9ರಿಂದ 55 ವರುಷದ ವರೆಗೆ) ಮಹಿಳೆ ಅಡುಗೆ ಬೇಯಿಸುವಂತಿಲ್ಲ. ಕೊರಗ ಮುಖಂಡನಿಗೂ ಅವನ ಮನೆಯ ಮಹಿಳೆ ಆಗಲೀ ಮೇಲ್ವರ್ಗದ ಮಹಿಳೆ ಆಗಲೀ ಆಡುಗೆ ಬೇಯಿಸುಂತಿಲ್ಲ.

5 ಮಹಿಳಗೆ ‘ಗಡಿ’ ಇಲ್ಲ:  ಗಡಿ ಎಂಬುದು ಗ್ರಾಮೀಣ ಆಡಳಿತಕ್ಕೆ ಸಂಬಂಧ ಪಟ್ಟಿದೆ. ಪಟ್ಟಾಭಿಷೇಕ, ಆಡಳಿತದ ಮೇಲಿನ ಹಂತವಾದರೆ ಗಡಿ, ಪಟ್ಟದ ನಂತರದ ಸ್ಥಾನಮಾನ. ಎಲ್ಲೂ ಮಹಿಳೆಗೆ ಗಡಿ ಆಗುವುದಿಲ್ಲ. ಗಡಿ ಆಗದೆ ಯಜಮಾನಿಕೆ ನಡೆಸುವಾಗ ನೇಮ ಕೋಲಗಳ ಸ್ಥಳದಲ್ಲಿ ಮಹಿಳಾ ಅಡಳಿತಗಾರರು ಇರುವುದಿಲ್ಲ. 12ನೆಯ ಶತಮಾನದಲ್ಲಿ ಒಡ್ಡೋಲಗ ಗೊಟ್ಟಿರುವ ಆಳುಪ ರಾಣಿ ಬಲ್ಲಮಹಾದೇವಿ ಮತ್ತು ಅನಂತರದಲ್ಲಿ ಕಾಣಬರುವ ಕೆಲವು ರಾಣಿಯರದೂ ಇದೇ ಸ್ಥಿತಿ ಆಗಿರಬಹುದು. ಆರಾಧನ ಸ್ಥಳದಲ್ಲಿ ತಮ್ಮ ಮನೆತನದ ಆಧಿಕಾರವನ್ನು ಮಹಿಳೆಯರು ಸತ್ತುಗುತ್ತುಗಳ ಪುರುಷರ ಮೂಲಕ ನಡೆಸುತ್ತಾರೆ.

 ಮಲೆನಾಡು ಹಾಗೂ ಕರಾವಳಿಗೆ ಇರುವ ವ್ಯತ್ಯಾಸ:
ಇದು ಒಟ್ಟು ತುಳುನಾಡಿನಲ್ಲಿ ಮಹಿಳೆಯಯ ಭಾಗವಹಿಸುವಿಕೆ ಆಯಿತು. ಆದರೆ ಕರಾವಳಿ ಕಡೆ ರಾಜನ್ ದೈವಗಳ ದೈವಮಾಧ್ಯಮನ ಮುಂದೆ ನಿಂತು ಮಹಿಳೆ ತನ್ನ ಹರಕೆ ಒಪ್ಪಿಸಿ, ಪರಿಹಾರವನ್ನು ನೇರವಾಗಿ ತಾನೇ ಕೇಳಬಹುದು, ವಸಯದ ಗಂಧ ಪಡೆಯಬಹುದು. ಅಥವಾ ಪುರುಷ ಯಜಮಾನ ಅವಳ ಪರವಾಗಿ ಮಾತನಾಡುತ್ತಾನೆ. ಆದರೆ ಈ ಪದ್ಧತಿ  ಸುಳ್ಯ, ಪುತ್ತೂರು, ಬಂಟ್ವಾಳ ತಾಲೂಕುಗಳಲ್ಲಿ ಇಲ್ಲ. ಆ ಭಾಗದಲ್ಲಿ ಮಹಿಳೆಯರು ದೈವಮಾಧ್ಯಮನ ಬಳಿ ಹೋಗುವಂತಿಲ್ಲ. ಒಂದು ರೀತಿಯ ಭಯಮಿಶ್ರಿತ ನಿಷೇಧ ಆಭಾಗದಲ್ಲಿ ಕಾಣಬರುತ್ತದೆ. ಅರಸು ದೈವಗಳ ನೇಮಗಳಲ್ಲಿ ‘ಮಾಡ’ದ (ಆರಸು ದೈವಗಳ ಆಲಯಕ್ಕೆ ‘ಮಾಡ’ ಎಂದು ಹೆಸರು) ಅಂಗಳಕ್ಕೂ ಮಹಿಳೆ ಇಳಿಯಬಾರದು. ಕಂಬುಲ ಗದ್ದೆಗಳಿಗೆ ಸಂಬಂಧ ಪಟ್ಟ  ನಾಗಬಿರ್ಮೆರ ಬನಗಳಿಗೆ ಮಹಿಳೆಯರು ಹೋಗಬಾರದು. ಕರಾವಳಿ ಕಡೆ ನಾಗಬಿರ್ಮೆರ ಬನಗಳಿಗೆ ಮಹಿಳೆಯರು ಹೋಗುತ್ತಾರೆ.  ಬ್ರಾಹ್ಮಣ ಪುರೋಹಿತರ ಮೂಲಕ ತಾವೇ ಮುಂದೆ ನಿಂತು ಹಾಲೆರೆಯುವ, ತನು ಎರೆಯುವ ಪೂಜಾವಿಧಿಗಳನ್ನು ನೆರವೇರಿಸುತ್ತಾರೆ.

 ವಯಸ್ಸು ನೋಡಿ ಲಿಂಗಭೇದ. :  ಬೆಳ್ತಂÀಗಡಿ, ಪುತ್ತೂರು ಕಡೆ ಹೋದಂತೆ ಸಂಪೂರ್ಣ ಲಿಂಗ ಭೇದ ಇದೆ. ಆದರೆ ಕರಾವಳಿ ಕಡೆ ಮಹಿಳೆಯರಿಗೆ `ಮುಟ್ಟು’ ನಿಂತ ಮೇಲೆ ಕೆಲವೊಮ್ಮೆ ರಿಯಾಯಿತಿ ಇದೆ. ವಯಸ್ಸಿನ ಲೆಕ್ಕಾಚಾರದ ಮೇಲೆ ಮಹಿಳೆಯರನ್ನು ದೂರ ಇಡಲಾಗುತ್ತದೆ. (ಮುಟ್ಟು ಆರಂಭವಾಗುವ ಕಾಲದಿಂದ ಮುಟ್ಟು ನಿಂತು ಒಂದು ವರ್ಷ ಆಗುವವರೆಗೆ)  ಅಂದರೆ ಫಲವತಿಯಾಗಬಲ್ಲ ಹೆಣ್ಣು ಇಡಿಯ ತುಳುನಾಡಿನ ಜನಪದ ಸಂಸ್ಕøತಿಯ ಆರಾಧನಾ ವಿಧಿವಿಧಾನಗಳಲ್ಲಿ ಭಾಗವಹಿಸಲು ನಿಷೇಧ ಇದೆ.

ಉದಾಹರಣೆಗೆ ನಾನು ಕ್ಷೇತ್ರ ಕಾರ್ಯದ ಸಂದರ್ಭದಲ್ಲಿ ಒಂದು ಗುತ್ತಿನ ಅಂಗಳದಲ್ಲಿ ಇರುವ ಕುಮಾರನ ಗುಡಿಯ ಚಾವಡಿಗೆ  ಮಹಿಳೆಯರು ಪ್ರವೇಶ ಮಾಡಬಹುದಾ ಎಂದು ಕೇಳಿದೆ. “ಇಲ್ಲ” ಎಂಬ ಉತ್ತರ ಒಕ್ಕೊರಳಿನಿಂದ ಬಂತು. ಕೂಡಲೇ ‘ನೀವು ಹೋಗ ಬಹುದು ಒಳಗೆ’ ಎಂಬ ಇನ್ನೊಂದು ದನಿಯೂ ಬಂತು. ನಗುತ್ತಾ ನಾನು ಒಳಹೋದೆ.

ಇನ್ನೊಂದು ಕಡೆ ಅರಸು ಪರಂಪರೆಯ ಚಾವಡಿ. ಅಲ್ಲಿ ದೈವದ ಉಯ್ಯಾಲೆ ಕೋಣೆಯ ಒಳಗೆ ಆ ಮನೆಯ ಹಿರಿಯ ಯಜಮಾನಿ ಮತ್ತು ಯಜಮಾನ ನನ್ನನ್ನು ಮತ್ತು ನನ್ನೊಂದಿಗಿದ್ದ ಪುರುಷ ಮಾರ್ಗದರ್ಶಕರನ್ನು ಬನ್ನಿ ಎಂದು ದೈವದ ಕೋಣೆಗೆ ಕರೆದರು. ಅವರೆಲ್ಲ ಮುಂದೆ. ನಾನು ಹಿಂದೆ. ಬಲದ ಹೆಜ್ಜೆ ದೈವದ ಕೋಣೆಯ ಹೊಸಿಲೊಳಗೆ ಇಟ್ಟಿದ್ದೆ, ಎಡದ ಹೆಜ್ಜೆ ಎತ್ತಿ ಇಡಲು ಮುಂದಾದಾಗ ನಿಮಗೆ ಮುಟ್ಟು ನಿಂತಿದೆಯೇ? ಎಂಬ ಪ್ರಶ್ನೆಯನ್ನು ಆ ಮನೆಯ ಯಜಮಾನಿ ಮಹಿಳೆಯೇ ಕೇಳಿದಾಗ ನಾನು ತಬ್ಬಿಬ್ಬು.

ಇಷ್ಟಲ್ಲದೆ ಇನ್ನೂ ಅನೇಕ ಸಂದರ್ಭಗಳಲ್ಲಿ ವೃದ್ದಾಪ್ಯದ ಅಂಚಿನಲ್ಲಿರುವ ಕುಟುಂಬದ ಹಿರಿಯ ಮಹಿಳೆಯರು ಮತ್ತು ಬಾಲಕಿಯರಿಂದ ಭೂತಾರಾದನೆಯ ಕೆಲವು ಸಣ್ಣ ಪುಟ್ಟ ಕೆಲಸಗಳಿಗೆ ನೆರವು ಪಡೆಯಲಾಗುತ್ತದೆ.

 ಶಬರಿ ಮಲೆಯೂ ಮೂಲತಃ ಶಕ್ತಿ ಆರಾಧನಾ ಸ್ಥಳ. ಮಣಿಮಲೆ ಬೆಟ್ಟದ ಮೂಲ ದೈವ ಶಾಸ್ತಾವು! ಅಂದರೆ ನಾಗನ ಆರಾಧನೆ. ಇದು ನೆಲದ ಸಂಸ್ಕøತಿಯಿಂದ ವೈದಿಕ ಸಂಸ್ಕøತಿಗೆ ಪಲ್ಲಟ ಗೊಂಡಿದ್ದರೂ ಕೆಲವೊಂದು ನೆಲದ ಆರಾಧನಾ ಪದ್ಧತಿಗಳು ಉಳಿದು ಕೊಂಡು ಬಂದಿವೆ. ಇಲ್ಲಿಯೂ ಮಹಿಳೆಯರನ್ನು ಫಲವತಿಯಾಗಬಲ್ಲ ವಯಸ್ಸಿನಲ್ಲಿ ದೂರ ಇಡುತ್ತಾರೆ. ಮುಟ್ಟಾಗುವ ಮಹಿಳೆ ಶಬರಿ ಮಲೆಗೆ ಹೋಗುವ ಭಕ್ತರಿಗೆ ಅಡುಗೆ ಬೇಯಿಸುವಂತಿಲ್ಲ

ಲಿಂಗ ಭೇದ ಪೂರ್ವ ಸಂಪ್ರದಾಯ ಅಲ್ಲ : ಅನೇಕ ಚಾವಡಿಗಳಲ್ಲಿ ದೈವಗಳ ಉಯ್ಯಾಲೆ ಈಗಲೂ ಮನೆ ಮಂದಿ ಓಡಾಡುವ ಜಾಗದಲ್ಲಿ ಇವೆ. ಚಾವಡಿಯ ದಕ್ಷಿಣ ದಿಕ್ಕಿನಲ್ಲಿ ದೈವಗಳ ಉಯ್ಯಾಲೆ ಇರುತ್ತದೆ. ಇಡಿಯ ಚಾವಡಿ ತುಂಬಾ ಮಹಿಳೆಯರು ಮಕ್ಕಳು ಓಡಾಡಿಕೊಂಡು ಇರುತ್ತಾರೆ. ಸೂತಕದ ಸದಸ್ಯರು, ಮುಟ್ಟಾದ ಮಹಿಳೆಯರು ಚಾವಡಿ ಹತ್ತುವುದಿಲ್ಲ. ಆದರೆ ಇಂತಹ ಮನೆಗಳನ್ನು ನವೀಕರಿಸುವಾಗ ದೈವಗಳ ಚಾವಡಿಯನ್ನು ಪ್ರತ್ತೇಕಿಸುತ್ತಾರೆ; ಹಾಗೂ ಫಲವತಿಯಾಗಬಲ್ಲ ಮಹಿಳೆಯರಿಗೆ ನಿಷೇಧ ಹೇರುತ್ತಾರೆ. ಈ ರೀತಿ ನವೀಕರಣ ಆದ ಬಳಿಕ ಮಹಿಳೆಯರಿಗೆ  ಅನೇಕ ಸ್ಥಳ/ ಮನೆಗಳಲ್ಲಿ ನಿಷೇಧ ಹೇರಿದ್ದಾರೆ.

ಕೆಲವೊಂದು ಕಡೆ ಕುಟುಂಬದ ವಾಸದ ಬೀಡುಗಳು ಕ್ರಮೇಣ ವಾಸವನ್ನು ತೆರೆವುಗೊಳಿಸಿ, ದೈವಗಳ ವಾಸಕ್ಕಾಗಿ ಬಿಟ್ಟ ನಿದರ್ಶನಗಳಿವೆ. ಈ ರೀತಿ ದೈವಾಲಯಗಳನ್ನಾಗಿ ಪರಿವರ್ತಿಸಿದ ಮೇಲೆ ಅದೇ ಬೀಡುಗಳಿಗೆ ಮಹಿಳೆಯರ ಪ್ರವೇಶ ನಿಷೇಧಿಸಿದ್ದು ಅಚ್ಚರಿಯ ಸಂಗತಿ. ಉದಾಹರಣೆ ಧರ್ಮಸ್ಥಳದಲ್ಲಿ ನಾಲ್ಕು ಧರ್ಮದೈವಗಳು ಹಿಂದೆ ಇದ್ದುದು ವಾಸದ ಮನೆಯ ಬೀಡಿನ ಚಾವಡಿಯಲ್ಲಿ ಮುಂದೆ ಇಲ್ಲಿಯ ಕುಟುಂಬ ವಾಸವನ್ನು ತೆರವು ಗೊಳಿಸಿ ಬೇರೆಡೆ ವಾಸಿಸಿದರು. ಮುಂದೆ ಮಹಿಳೆಯರಿಗೆ (ರತ್ನಮ್ಮ ಹೆಗ್ಗಡೆಯವರಿಗೂ) ಬೀಡಿಗೆ ಪ್ರವೇಶ ನಿಷೇಧಿಸಿದ್ದಾರೆ. ಇದನ್ನೇ ಮಾದರಿಯನ್ನಾಗಿಸಿ ಇನ್ನೂ ಕೆಲವು ಬೀಡುಗಳು ಗುತ್ತುಗಳು ಸಂಪೂರ್ಣ ದೈವಗಳ ನೆಲೆಯಾಗಿವೆ. ಅಂತಹ ಸಂದರ್ಭಗಳಲ್ಲಿ ಮಹಿಳೆಯರಿಗೆ ನಿಷೇಧ ಹೇರಲಾಗಿದೆ. ಮೂಲ ಆಚರಣೆಗಳಲ್ಲಿ ದೈವಗಳಿಂದ ಮಹಿಳೆಯರು ದೂರ ಇರಬೇಕಾಗಿರಲಿಲ್ಲ. ಶಬರಿ ಮಲೆಯಂತೆ ಧರ್ಮಸ್ಥಳದಲ್ಲಿ ಅಣ್ಣಪ್ಪ ಬೆಟ್ಟಕ್ಕೆ ಮಹಿಳೆಯರು ಹತ್ತುವಂತಿಲ್ಲ. ಆದರೆ ಬೀರ (ಹಾಡುಗಬ್ಬ)ಹೇಳುವ ಪರವೆದಿ (ದೈವ ಮಾಧ್ಯಮನ ಮಡದಿ-ಅಥವಾ ತಾಯಿ) ಬೆಟ್ಟದ ಹಿಂದುಗಡೆಯಿಂದ ನಿರ್ದಿಷ್ಟ ಜಾಗದವರೆಗೆ ಹತ್ತಿ ತೆಂಬೆರೆ ನುಡಿಸಿ ಬೀರ ಹೇಳಿ ದೈವಾವೇಶಕ್ಕೆ ಪೋಷಕ ವಾತಾವರಣವನ್ನು ಕಲ್ಪಿಸಿಕೊಡುತ್ತಾಳೆ. ಎಲ್ಲಾ ಕಡೆಯ ಕೋಲ ನೇಮಗಳಲ್ಲೂ ಪರಿಶಿಷ್ಟ ದೈವ ಮಾಧ್ಯಮನಿಗೆ ತೆಂಬೆರೆ ನುಡಿಸಿ ದೈವ ಪ್ರಸರಣ ಬೀರವನ್ನು ಹೇಳುತ್ತಾ ಪೋಷಕ ವಾತಾವರಣ ನಿರ್ಮಿಸಿಕೊಡುವವಳು ಮಹಿಳೆ.

ಮಹಿಳೆಯರು ಶಕ್ತಿ/ದೈವದ ಬಳಿ ಹೋಗಲು ನಿಷೇಧದ ಹಿನ್ನೆಲೆ:
ಸತ್ಯ ಮತ್ತು ಧರ್ಮದ ರಕ್ಷಣೆ ಮಾಡಲು, ನ್ಯಾಯನೀತಿ ಉಳಿಸಲು ಅತೀತ ‘ಶಕ್ತ್ತಿ’ಗಳನ್ನು ನಂಬುವ ಸಂಪ್ರದಾಯಗಳನ್ನು ಮುಂದುವರಿಸಿಕೊಂಡು ಬರಲಾಗಿದೆ ಎಂಬ ವಿಚಾರ ಗೊತ್ತಿರುವುದೇ. ಆದರೂ ಇಂತಹ ಶಕ್ತಿಗಳಿಗೆ/ದೈವಗಳಿಗೆ ರೌದ್ರತೆಯನ್ನು  ಭಯಾನಕತೆಯನ್ನು ಆರೋಪಿಸಲಾಗಿದೆ.  ಇಲ್ಲಿಯ ದೈವ ಪ್ರಸರಣ ಬೀರಗಳಲ್ಲಿ  ಬಸುರಿ ಹೆಣ್ಣು ಮತ್ತು ಗಬ್ಬದ ಹಸು ದೈವದ ದೃಷ್ಟಿಗೆ ಬಿದ್ದು ಮಾಯವಾಗುವ ನಿರೂಪಣೆ ಇವೆ. ಹೊಸ್ತಿಲ ಬಳಿ ನಿಂತು ದೈವವನ್ನು ಇಣುಕಿ ನೋಡಿದ ಕನ್ಯೆಯರು, ಮಾಯವಾದ ಕಥೆಗಳಿವೆ. ಸಿರಿ ಪಾಡ್ದನದಲ್ಲೂ ಮುಗುಳಿ ಬಿರ್ಮೆರ ಕಾಡಿನ ಪ್ರಯಾಣದಲ್ಲಿ ಬಿರ್ಮೆರ ರೌದ್ರತೆಯನ್ನು ಬಸುರಿ ಸಿರಿ ಕೇಳಲು ತವಕ ಪಟ್ಟಾಗ ಅವಳ ಅಕ್ಕ ಸಾಮು ಹೇಳಲಾರೆ ಎಂದು ಪರಿಪರಿಯಾಗಿ ಹೇಳುತ್ತಾಳೆ. ಕೊನೆಗೆ ಸಿರಿಯ ಮಾತಿಗೆ ಕಟ್ಟು ಬಿದ್ದು ಆಕೆ ಹೇಳುತ್ತಾಳೆ. ಆಗ ಮುಂದಾಗುವ ತೊಂದರೆಗಳಿಂದ ತಾಯಿಗೆ ರಕ್ಷಣೇ ನೀಡಲು ಮಗ ಕುಮಾರ ಮಾನವ ರೂಪ ಧರಿಸಿ ಬರುತ್ತಾನೆ. ಜುಮಾದಿ ಪ್ರಸರಣ ಪಾಡ್ದನದಲ್ಲಿ ಕನ್ಯೆ ಕರ್ನಿಗೆಯ ಮಾವ ಆಕೆಗೆ ಹೇಳಿದ ಹರಕೆ ಒಪ್ಪಿಸುವಾಗ ನೋಡಬಾರದೆಂದು ಹೇಳುತ್ತಾರೆ. ಆಕೆ ಕುತೂಹಲ ತಾಳಲಾರದೆ ಹೊಸಿಲ ಒಳಗಿನಿಂದ ಕಾಲ್ಬೆರಳ ಮೇಲೆ ನಿಂತು ನೋಡಿ ದೈವದ ದೃಷ್ಟಿಗೆ ಬಿದ್ದು  ಮಾಯ ಆಗುತ್ತಾಳೆ.


ಈಜಿಪ್ಟ್, ಬೆಬಿಲೋನಿಯಾ ಮುಂತಾದ ಕ್ರೈಸ್ತ ಪೂರ್ವ ಯುಗದ ನಾಗರಿಕತೆಯ ತವರು ನೆಲೆಗಳನ್ನು ಗಮನಿಸುವಾಗ  ಆಯಾ ನೆಲದ ಸಂಸ್ಕøತಿಯಲ್ಲಿ  ಮಹಿಳೆಯರನ್ನು ಭೋಗ ವಸ್ತುವನ್ನಾಗಿ ಶೋಷಣೆ ಮಾಡಿದ ಬಗ್ಗೆ ವಿವರಗಳು ಲಭ್ಯವಾಗುತ್ತವೆ.   ಜಪಾನ್ ಕೂಡಾ ಇದಕ್ಕೆ ಹೊರತಾಗಿಲ್ಲ. ಇಂತಹ ಓದಿಗೆ ಪೋಷಕವಾಗಿ ತುಳುನಾಡಿನ ಸಂಸ್ಕøತಿಯಲ್ಲೂ ಕೆಲವು ಕುರುಹುಗಳನ್ನು ಮೇಲಿನ ಆಚರಣೆಗಳು ನೀಡುತ್ತವೆ.
ಇದಕ್ಕೊಂದು ಉದಾಹರಣೆ ನೀಡಬಲ್ಲೆ:

  ದೇವಾಲಯದ ಆಡಳಿತ ನಡೆಸುವ ಮೇಲ್ವರ್ಗದ ತುಳು ಸಮಾಜದ ಪ್ರತಿಷ್ಟಿತ ಮನೆತನಕ್ಕೆ ತೆಂಕು ಭಾಗದಿಂದ (ಕಾಸರಗೋಡು ಕಡೆಯಿಂದ) ದೈವಮಾಧ್ಯಮ ದೈವಾವೇಶದಲ್ಲಿ ಓಡಿ ಬರುತ್ತಿದ್ದ. ಹಾಗೆ ಬಂದವನಿಗೆ ಈ ಪ್ರತಿಷ್ಟಿತ ಮನೆತನದವರು ಹೆಣ್ಣು ಕೊಡಬೇಕಿತ್ತು. ಆ ಮನೆಯಲ್ಲಿ ಮದುವೆಯಾಗದ ಹುಡುಗಿ ಇಲ್ಲವಾದರೆ ಮದುವೆ ಆದ ಹುಡುಗಿಯನ್ನು ಆ ದೈವಮಾಧ್ಯಮನಿಗೆ ಒಪ್ಪಿಸಬೇಕಿತ್ತು. ದೈವ ಮಾಧ್ಯಮ ಮೇಲ್ವರ್ಗದವನಾಗಿದ್ದ. 20ನೆಯ ಶತಮಾನದ ಮಧ್ಯಭಾಗದವರೆಗೆ ಈ ಸಂಪ್ರದಾಯ ಮುಂದುವರಿದಿತ್ತು.”

ತುಳುವರ ಹೆಣ್ಣು ಸಂತಾನಲಕ್ಷ್ಮಿ. ಹೀಗಾಗಿ ಅವಳನ್ನು ಜೋಪಾನವಾಗಿ ಕಾಪಾಡುವ ಹೊಣೆಗಾರಿಕೆ ಹೊತ್ತ ಸಮಾಜ ದೈವದ ದೃಷ್ಟಿಯಿಂದಲೂ ಅವಳನ್ನು ತಪ್ಪಿಸಲು ಕಾಳಜಿ ವಹಿಸಿರಬಹುದು. ಈ ಹಿನ್ನೆಲೆಯನ್ನು ಅಧ್ಯಯನ ಮಾಡುವಾಗ ತುಳು ಸಂಪ್ರದಾಯದಲ್ಲಿ ಮಹಿಳೆಯರನ್ನು ದೂರ ಇಟ್ಟಿದ್ದು ತಪ್ಪಲ್ಲ ಎನ್ನಬಹುದು. ಆದರೆ ಈಗಲೂ ಇಂತಹ ನಿಷೇಧಗಳು ಬೇಕೆ? ಹಿಂದಿನಂತೆ ಆಧುನಿಕ ಮಹಿಳೆ ಮುಗ್ಧೆ ಅಲ್ಲ. ಆಧುನಿಕ ಮಹಿಳೆ ಪುರುಷನ ಸಮಾನಾಗಿ ಹೆಜ್ಜೆ ಇಡುತ್ತಿದ್ದಾಳೆ. ದೈವಾರಾಧನೆಯಲ್ಲೂ ಹಿಂದಿನ ರೌದ್ರತೆ ಉಳಿದಿಲ್ಲ. ರುದ್ರ ಸ್ವರೂಪದ ಗುಳಿಗ ಕೋಲವನ್ನೂ ಮಹಿಳೆಯರು ವೀಕ್ಷಿಸುವ ಪರಿಪಾಠ ಪ್ರಾರಂಭವಾಗಿದೆ. ಮಹಿಳೆಯರು ಕಂಬುಲಗಳಲ್ಲಿ ಪ್ರೇಕ್ಷಕರಾಗಿ ಭಾಗವಹಿಸುತಿದ್ದಾರೆ. ಅನೇಕ ಶಕ್ತಿ/ದೈವಾಲಯಗಳಲ್ಲಿ  ಪ್ರಾಣಿ ಬಳಿ ನಿಂತಿದೆ. ಬ್ರಾಹ್ಮಣರ ಪ್ರವೇಶ ನಿಷೇಧ ಇದ್ದ ಶಕ್ತಿ ಸ್ಥಳಗಳಿಗೆ ಬ್ರಾಹ್ಮಣ ಅರ್ಚಕರ ನೇಮಕವಾಗಿದೆ. ಹೀಗೆ ಆರಾಧನಾ ಆಚರಣೆಗಳಲ್ಲಿ ಅನೇಕ ಬದಲಾವಣೆಗಳನ್ನು ತಂದಿದ್ದಾರೆ.

ಕೆಲವು ವರ್ಷಗಳಿಂದ ದೇವಸ್ಥಾನ/ದೈವಸ್ಥಾನಗಳಲ್ಲಿ  ಟ್ರಸ್ಟ್ ರಚನೆಯಾಗುತ್ತಿವೆ. ಇಲ್ಲಿ ಸಮೂಹ ಅಭಿಪ್ರಾಯಗಳು ಕಾರ್ಯನಿರ್ವಹಿಸುತ್ತವೆ. ಸರಕಾರ ವಶಪಡಿಸಿಕೊಂಡು ಆಡಳಿತ ನಡೆಸುವ ದೇವಸ್ಥಾನ, ದೈವಸ್ಥಾನಗಳ ಮಂಡಳಿಗಳಲ್ಲೂ ಮಹಿಳಾ ಧಮದರ್ಶಿಗಳಾಗಲೀ ಸದಸ್ಯರಾಗಲೀ ಇಲ್ಲ. ಸುಮಾರು 10 ವರ್ಷಗಳಿಂದ ತುಳುನಾಡಿನಲ್ಲಿ ಪ್ರತಿ ವರ್ಷ ಅನೇಕ ಧಾರ್ಮಿಕ ಸಮಾರಂಭಗಳು ನಡೆಯುತ್ತಿವೆ. ಸಾಲು ಸಾಲು ಪುರುಷರು ವೇದಿಕೆ ಹತ್ತುವ ಇಂತಹ ಧಾರ್ಮಿಕ ಸಭೆಗಳಲ್ಲಿ ಮಹಿಳೆಗೆ ವೇದಿಕೆ ನೀಡಿದ್ದು ಎಲ್ಲೂ ಕಾಣುವುದಿಲ್ಲ. ಸಭೆ ಸಮಾರಂಭಗಳಲ್ಲಿ ಸ್ಥಳೀಯ ರಾಜಕೀಯ ವ್ಯಕ್ತಿಗಳಿಗೆ ವೇದಿಕೆ ನೀಡಬೇಕೆಂಬ ನಿಯಮ ಇದೆ. ಕಳೆದ ವರ್ಷದಿಂದ ಅಪರೂಪಕ್ಕೆ ರಾಜಕೀಯದ ಮಹಿಳೆಯರಿಗೆ ಧಾರ್ಮಿಕ ಸಮಾರಂಭಗಳಲ್ಲಿ ವೇದಿಕೆ ನೀಡುತ್ತಿದ್ದಾರೆ. ಅದು ಬಿಟ್ಟರೆ ಬೇರೆ ಕ್ಷೇತ್ರದಲ್ಲಿ ಹೆಸರುಗಳಿಸಿದ ಮಹಿಳೆಯರು ಇಲ್ಲಿ ಕಂಡುಬರುವುದಿಲ್ಲ. ಇಲ್ಲಿಯ ನಾಗರಿಕ ಸಮಾಜವೂ ಮಹಿಳೆಯರನ್ನು ಧಾರ್ಮಿಕ ಸಮಾರಂಭಗಳಿಂದ ದೂರ ಇರಿಸುತ್ತಿರುವುದು ಅಚ್ಚರಿ. ಇದಕ್ಕೆ ಪಾರಂಪರಿಕ ಸಂಪ್ರದಾಯಗಳು ಕಾರಣವಾಗಿರಬಹುದು. ನಿನ್ನೆಯ ಸಂಪ್ರದಾಯಗಳನ್ನು ಪ್ರಶ್ನಿಸುವುದು ಬೇಡ. ಆದರೆ ನಾಳೆಯೂ ಇಂತಹ ನಿಷೇಧ ಮುಂದುವರಿಯುವ ಅಗತ್ಯ ಇಲ್ಲ ಎಂಬುದು ಇಲ್ಲಿಯ ವಾದ. ಸಂಪ್ರದಾಯಗಳಲ್ಲಿ ಬದಲಾವಣೆ ಆಗವುದು ಸ್ವಸ್ಥ ಸಮಾಜದ ಲಕ್ಷಣ.  ಮಾತೃವಂಶೀಯ ಕುಟುಂಬಗಳ ಪುರುಷ ಪ್ರಧಾನ ಸಮಾಜ ಮಹಿಳೆಯ ಧಾರ್ಮಿಕ ಸ್ವಾತಂತ್ರ್ಯದ ವಿಷಯದಲ್ಲಿ ಮಾತ್ರ ಹಳೆಯ ರಿವಾಜಿಗೆ, ಪೂರ್ವ ಸಂಪ್ರದಾಯಕ್ಕೆ  ಅಂಟಿಕೊಳ್ಳುವುದು ತರವಲ್ಲ. ಸಾಧ್ಯವಾಗುವ ಕಡೆಯಾದರೂ ಪುರುಷರ ಸಮಾನವಾಗಿ ಮಹಿಳೆಯರಿಗೂ ಅವಕಾಶ ನೀಡಬೇಕು. ನಿಷೇಧ ಹೇರಬಾರದು.

ಉಡುಪಿಯಲ್ಲಿ 2007 ಡಿಸೆಂಬರ್ 12ರಿಂದ 15ರವರೆಗೆ ನಡೆದ 74ನೆಯ ಅಖಿಲಭಾರತ ಸಾಹಿತ್ಯ ಸಮ್ಮೇಳನದಲ್ಲಿ ಮಾಡಿದ ಭಾಷಣದ ಲಿಖಿತ ರೂಪ.






ಡಾ. ಇಂದಿರಾ ಹೆಗ್ಗಡೆ
ಬೆಂಗಳೂರು -40
9845577553


No comments:

Post a Comment