Thursday, February 27, 2014

ಉಭಯಲಿಂಗಿ ಶಕ್ತಿಗಳು


  • ದ್ವಿಲಿಂಗಿ  ಶಕ್ತಿಗಳು :-ತುಳುನಾಡಿನ ಭೂತಗಳು
    ಮಾನವ ಕುಲದ ಆದಿ ಸಂಸ್ಕ್ರತಿಯ ಕೆಲವೊಂದು ಪಳೆಯುಳಿಕೆಗಳು  ಕರ್ನಾಟಕ ಮತ್ತು ಕೇರಳದ ಕರಾವಳಿ ಭಾಗವಾದ ತುಳುನಾಡಿನಲ್ಲಿ ಕೆಲವೆಡೆಯಾದರೂ ಇಂದಿಗೂ ಉಳಿದು ಬಂದಿದೆ. ಈ ಪಳೆಯುಳಿಕೆಗಳಲ್ಲಿ ಕೆಲವೊಂದು ನಂಬಿಕೆಗಳು ಕೂಡ ಸೇರಿವೆ.
    ತುಳುನಾಡು ನಾಗರಖಂಡ ಎಂದು ಪ್ರಸಿದ್ಧಿ.  ಇಲ್ಲಿಯ ನೆಲದ ಮಕ್ಕಳ ಕುಲದೈವ ಕೂಡ ನಾಗ. ನಾಗನ ಭಿನ್ನರೂಪಗಳಿಗೆ ವಿಭಿನ್ನ ರೀತಿಯಲ್ಲಿ ಇಲ್ಲಿ ಉಪಾಸನೆ ನಡೆಯುತ್ತಿದೆ .
    ತುಳುನಾಡಿನ ತುಳುವರ ಕುಲದೈವ ನಾಗನನ್ನು ಬಿರ್ಮೆರ್ (ಬ್ರಹ್ಮ) , ನಾಗ ಬೆರ್ಮೆರ್  ಎಂದು ತುಳು ಜನಪದರು ರೂಢಿಯಲ್ಲಿ ಕರೆಯುತ್ತಾರೆ. ಈ ನಾಗ ಬ್ರಹ್ಮನಿಗೂ ವೈದಿಕ ಪಂಥದ ಚುತುರ್ಮು‍ಖ ಬ್ರಹ್ಮನಿಗೂ ಯಾವುದೇ ಹೋಲಿಕೆ ಇಲ್ಲ. ನಾಗ ಬ್ರಹ್ಮ ಎಂದರೆ ಬೃಹತ್ತಾದುದು. ನಾಗಬ್ರಹ್ಮನೇ ಸಂಕಪಾಲ, ಆದಿಶೇಷ.. ನಾಗ ಬ್ರಹ್ಮನಿಗೆ 1001 ಹೆಡೆ ಇದೆ ಎಂಬುದು ನಂಬಿಕೆ. ಆಚರಣೆಯಲ್ಲಿ ಸಾವಿರದ ಒಂದು ಹೆಡೆಗಳ ಅಣಿ/ಪ್ರಭಾವಳಿಯನ್ನು ಕಂಗಿನ ಹಾಳೆಯಲ್ಲಿ ಚಿತ್ರಿಸಿ ಬಳಸಲಾಗುತ್ತಿದೆ. ಅದರೆ ಬಹುಭಾರ ಆಗುವ 1001 ಹಾಳೆಯ ಅಣಿಯನ್ನು ಎತ್ತಲು/ಹೊರಲು ಶ್ರಮದ ಕೆಲಸ. ಅದೂ ಅಲ್ಲದೆ ಬೆಳ್ಳಿಯ ನಾಗ ಹೆಡೆಯ ಅಣಿ ಚಲಾವಣಿಗೆ ಬಂದ ಅನಂತರ ಕಂಗಿನ ಪಾಲೆಯ ಅಣಿ ಹಿಂದೆ ಸರಿದಿದೆ. ಆದರೂ ಕೆಲವೊಂದು ಕಡೆ ಈಗಲೂ  1001 ಅಥವಾ 101 ಹೆಡೆಗಳ ಕಂಗಿನ ಹಾಳೆಯ ಸರ್ಪ ಚಿತ್ರದ ಅಣಿ/ಪ್ರಭಾವಳಿಗಳನ್ನು ಸಿದ್ದಪಡಿಸುತ್ತಾರೆ.
    ಇತಿಹಾಸಕಾರರು ತುಳುನಾಡನ್ನು ನಾಗಖಂಡ ಎಂದು ಕರೆಯತ್ತಾರೆ,
    ತುಳು ಪಾಡ್ದನಗಳು ‘ಸಿರಿಬಾರಿಲೋಕ’ ಎನ್ನುತ್ತವೆ.( ಸಿರಿ ಅಂದರೆ ನಾಗ ಶಕ್ತಿಗಳು.)
    ತುಳು ಜನಪದರು ಈ ನೆಲವನ್ನು ಸತ್ಯಲೋಕ ಎನ್ನುತ್ತಾರೆ,(ಸತ್ಯಲೋಕ ಎಂದರೆ ಶಕ್ತಿಲೋಕ) ಎಂದು ಅರ್ಥಾ‍ತ್ ನಾಗ ಶಕ್ತಿಗಳ ಲೋಕ.)
    ,ಅಪ್ಯ ಆದ್ ಮಿರೆಪೇರ್ ಪರ್ಪಾದ್ ಜಕ್ಕೆಲ್ಡ್ ಪಾಡೆದ್ ಬಾಮಿವೆ.ತಮ್ಮಲೆ ಆದ್ ಬೆರಿಟ್ ಉಂತುದು ಕಾಪುವೆ ‘ಎಂಬಲ್ಲಿ (‘ತಾಯಿಯಂತೆ ಎದೆ ಹಾಲುಣಿಸಿ ಮಡಿಲಲ್ಲಿ ಹಾಕಿ ರಮಿಸುತ್ತೇನೆ,ಸೋದರ,ಮಾವನಾಗಿ ಬೆನ್ನ ಹಿಂದೆ ನಿಂತು ರಕ್ಷಿಸುತ್ತೇನೆ.’) ಎನ್ನುವ ಸಾಂತ್ವನದ ನುಡಿ ಇದೆ. ಆದ್ದರಿಂದ ಇಲ್ಲಿ ಉಪಾಸನೆ ಮಾಡುವ ದೈವಗಳು ಅರ್ಥಾ‍ತ್
    ಭೂತಗಳು ಪುರುಷರೂಪದಲ್ಲಿ ಸೋದರ ಮಾವನಾಗಿ ನೆಲದ ಮಕ್ಕಳನ್ನು ರಕ್ಷಿಸುತ್ತವೆ.ಸ್ತ್ರೀ ರೂಪದಲ್ಲಿ ಹೆತ್ತತಾಯಿಯಂತೆ ರಮಿಸಿ ಸಂತೈಸುತ್ತವೆ.ತುಳುನಾಡಿನಲ್ಲಿ ಪತಿ ಪತ್ನಿ ದೈವ/ಭೂತಗಳಿಲ್ಲ ಎನ್ನುವುದುಗಮನಿಸಬೇಕಾದ ವಿಷಯ.

ಆನ ತರೆ ಪೊಣ್ಣ ನೆರಿ’ ಎಂದರೆ ( ಗಂಡಿನ ಶಿರ, ಹೆಣ್ಣಿನ ನೆರಿಗೆ-.( ‘ಹೆಣ್ಣಿನ ಮಾನದ ರಕ್ಷಣೆ, ಗಂಡಿನ ಜೀವದ ರಕ್ಷಣೆ’) )ಯನ್ನು ಕಾಯುವ ಭಾರ ತನ್ನದು ಎನ್ನುವ ಅಭಯ ನುಡಿಯನ್ನು ಕೊಡುತ್ತವೆ.

ತಾಯಿಯ ಮತ್ತು ಸೋದರ ಮಾವನ ಪಾತ್ರಗಳನ್ನು ಒಂದೇ ದೈವ ಮಾಡುತ್ತದೆ ಉಭಯಲಿಂಗಿಗಳಾಗಿರುವ ಈ ಶಕ್ತಿಗಳು ಪುರುಷ ಮತ್ತು ಸ್ತ್ರೀ ಶಕ್ತಿಗಳಾಗಿ ಕೆಲಸಮಾಡುತ್ತವೆ.

ಕೊಡಮಣಿತ್ತಾಯ ( ಯಿ), ಮಲರಾಯ (ಯಿ), ಧೂಮಾವತಿ (ಜುಮಾದಿ) ಕಾಳರ್ಕಾ‍ಯಿ, ಉಲ್ಲಾಯೆ, ನಾಲ್ಕೈತ್ತಾಯ (ತಾಯಿ)-ಇತ್ಯಾದಿ ದೈವಗಳು ದ್ವಿಲಿಂಗಿಗಳು. ಮೂಲಸ್ಥಾನ ದೈವಗಳ ನರ್ತನಕಾರರ (ಕೋಲಕಟ್ಟುವವರು) ಪ್ರಕಾರ ತುಳುನಾಡಿನ ಎಲ್ಲಾ ದೈವಗಳು ಸ್ತ್ರೀ ಶಕ್ತಿಗಳು ಆದರೆ ಸ್ತ್ರೀ ಶಕ್ತಿಗಳೊಳಗೆ  ಪುರುಷ ಶಕ್ತಿಯೂ ಅಡಕವಾಗಿವೆ. ಹೀಗಾಗಿ ಈ ದೈವಗಳಿಗೆ ಪುರುಷ ಪ್ರತ್ಯಯವನ್ನು ಆರೋಪಿಸಲಾಗಿದೆ, ಹೀಗೆ ಅನೇಕ ದೈವಗಳ ಉಭಯಲಿಂಗಿ ಸ್ವರೂಪವನ್ನು ಆಚರಣೆಯ ಸಂದರ್ಭಗಳಲ್ಲಿ ಕಾಣಬಹುದು.

ಉಲ್ಲಾಯ ಭೂತಕ್ಕೆ ಸೊಂಟದ ಮೇಲ್ಭಾಗ ಪುರುಷ ರೂಪ ಮೀಸೆ ಇದೆ. ಕೆಳಭಾಗ ಸ್ತ್ರೀ ರೂಪ. ಹೀಗಾಗಿ   ಉಲ್ಲಾಯನನ್ನು ಪುರುಷ ದೈವ ಎನ್ನುತ್ತಾರೆ. ಬಾಕುಡರ ಉಲ್ಲಾಯಕೋಲದಲ್ಲಿ ಉಲ್ಲಾಯ ಪಾತ್ರಿ 1001 ಹೆಡೆಗಳ ಅಣೆ ಧರಿಸುತ್ತಾನೆ. ಉಲ್ಲಾಲ್ತಿಗೆ ಅಣೆ ಇರುವುದಿಲ್ಲ. ಈಕೆಯ ಉಡುಗೆಯಲ್ಲಿ ಸ್ತ್ರೀ ರೂಪ ಇದೆ. ಇವು ‘ ಅಣ್ಣ-ತಂಗಿ ‘ ಶಕ್ತಿಗಳು.  ಬಂಟ್ವಾಳ ತಾಲ್ಲೂಕಿನ ಮೇಲ್ವಗ‍್ದವರ ಉಲ್ಲಾಲ್ತಿ ದೈವಸ್ಥಾನಗಳಾದ ಅನಂತಾಡಿ, ಕೆಲಿಂಜ ಮುಂತಾದೆಡೆ ಉಲ್ಲಾಲ್ತಿ ಕೋಲದಲ್ಲಿ ಉಲ್ಲಾಲ್ತಿಯು ವಿಶಾಲವಾದ ಬೆಳ್ಳಿಯ ಅಣಿ ಧರಿಸುತ್ತಾಳೆ. ಆಗಮ ಸಂಪ್ರದಾಯಕ್ಕೆ ಪರಿವರ್ತನೆಯಾದ ಮಂಗಳೂರು ತಾಲ್ಲೂಕಿನ ಬಪ್ಪನಾಡು ಮತ್ತು ಕಟೀಲು ಉಲ್ಲಾಲ್ತಿಗೆ ಕೋಲದ ನರ್ತನ ಸೇವೆ ಇಲ್ಲ. ಇಲ್ಲಿ ಸಂಪೂರ್ಣವಾಗಿ ಆಗಮ ಪದ್ದತಿಯಲ್ಲಿ ಪೂಜೆ ಪುರಸ್ಕಾರಗಳು ನಡೆಯಯತ್ತವೆ.

ಹೀಗೆ ಅನೇಕ ಉಭಯ ಲಿಂಗಿ ದೈವಗಳನ್ನು ಆಚರಣೆಯ ಸಂದರ್ಭದಲ್ಲಿ ಕಾಣಬಹುದು.

ಜುಮಾದಿಗೆ ಮತ್ತು ಮಲರಾಯಿಗೆ ಸೊಂಟದ ಮೇಲ್ಬಾಗ ಸ್ತ್ರೀ ರೂಪ ಕೋಲ ನರ್ತನ ಸಂದರ್ಭದಲ್ಲಿ ಮುಡಿಯೇರುವಾಗ ಪಾತ್ರಧಾರಿ ಎದೆಯ ಮೇಲೆ ಮೊಲೆ ಕಟ್ಟು ಧರಿಸಿದ  ಹೆಣ್ತನ  ತೋರಿಸುವ  ಸಂಪ್ರದಾಯ ಇದೆ.

ನಾಗಬಿರ್ಮೆರನ್ನು ಉಲ್ಲಾಯ ಉಲ್ಲಾಲ್ತಿ ಎಂದು ಕರೆಯುತ್ತಾರೆ. ಆತ ಪುರುಷನಾಗಿ ಉಲ್ಲಾಯ, ಸ್ತ್ರೀಯಾಗಿ ಉಲ್ಲಾಲ್ತಿ. ವೈದಿಕ ಪ್ರಭಾವದಿಂದ ಅನೇಕ ಕಡೆ ಉಲ್ಲಾಲ್ತಿ ಭಗವತಿಯಾಗಿ , ಮುಂದೆ ದುರ್ಗೆಯಾಗಿದ್ದಾಳೆ. ಉಲ್ಲಾಯ  ಬ್ರಹ್ಮಲಿಂಗೇಶ‍್ವರನಾಗಿ ಹೆಚ್ಚಿನ ಕಡೆ ಪರಿವರ್ತನೆಗೊಂಡಿವೆ. ಜನಪದ ನಂಬಿಕೆಯಲ್ಲಿ ಉಲ್ಲಾಲ್ತಿ ಉಲ್ಲಾಯನ ಮಡದಿಯಲ್ಲ. ಅಣ್ಣ ತಂಗಿ ಶಕ್ತಿಗಳು.  ಸೋದರ ಶಕ್ತಿಗಳು.  ಕುಂದಾಪುರದ ಕಡೆ ಹುತ್ತವನ್ನು ಸ್ವಾಮಿ ಮನೆ ಎನ್ನುತ್ತಾರೆ. ಸ್ವಾಮಿ ಎಂದರೆ  ಸರ್ಪ. ಇಲ್ಲಿ ಅಣ್ಣ ಸ್ವಾಮಿ ಮತ್ತು ತಂಗಿ ಸ್ವಾಮಿಗೆ ಕೋಲ ನಡೆಯುತ್ತದೆ.

ಮೂಲಸ್ಥಾನ ದೈವಗಳ ನರ್ತನ ಸೇವಕರ ಪ್ರಕಾರ ತುಳುನಾಡಿನ ಎಲ್ಲಾ ದೈವಗಳು ಸ್ತ್ರೀ ಶಕ್ತಿಗಳು. ಅವರ ಹೇಳಿಕೆ ನಿಜವಾಗಿರಬಹುದು. ಕಾಲಾಂತರದಲ್ಲಿ ಪುರುಷ ಪ್ರಧಾನ ಸಮಾಜದಲ್ಲಿ ಸ್ತ್ರೀ ದೈವಗಳು ಪುರುಷ ದೈವಗಳಾಗಿ ಪರಿರ್ವತನೆಯಾಗಿರಲು ಸಾಧ್ಯ ಇದೆ.ಮೌಖಿಕ ಸಂಪ್ರದಾಯದಲ್ಲಿ ಇದು ಸಾಧ್ಯ.

ಶಂಭಾ ಜೋಶಿಯವರು ನಾಗನನ್ನು ಉಭಯಲಿಂಗಿ ಎಂದು ಪ್ರತಿಪಾದಿಸಿದ್ದಾರೆ. ‘ನಾಗಮ್ಮ (ಅಮ್ಮ ) ಉಭಯಲಿಂಗಿ’ ಎಂದು ಹೇಳುತ್ತಾರೆ. ಅವರ ಪ್ರತಿಪಾದನೆಗೆ ತುಳುನಾಡಿನ ನಂಬಿಕೆಗಳು ಆಚರಣೆಗಳು ಸಮರ್ಥನೆ ಒದಗಿಸುತ್ತವೆ. ನಾಗಬಿರ್ಮೆರ್  ವಾಸ್ತವದಲ್ಲಿ ನಾಗನೇ, ನಾಗಗಳಲ್ಲಿ ಪ್ರಧಾನವಾದುದು ಬೃಹತ್ತಾದು. ಮಹತ್ತಾದುದು. ಈ  ನಾಗಬ್ರಹ್ಮನನ್ನು ಸಂಕಪಾಲ ಎಂದು ಕರೆಯುವುದು ಇದೆ.

ತುಳುನಾಡಿನಲ್ಲಿ ಉಪಾಸನೆಗೊಳ‍್ಳುತ್ತಿರುವ ಉಭಯಲಿಂಗಿ ದೈವಗಳಲ್ಲಿ ಮೇಲಂತಸ್ತಿನಲ್ಲಿ, ಅರಸು ದೈವವಾಗಿ  ಉಲ್ಲಾಯನಾಗಿ  ನಾಗ ಬ್ರಹ್ಮ (ತುಳು: ನಾಗ ಬಿರ್ಮೆರ್) ದೈವಕ್ಕೆ ಉಪಾಸನೆ ಪಡೆಯುತ್ತವೆ. ಉಲ್ಲಾಯ ಕೋಲದ ಸಂದರ್ಭದಲ್ಲಿ ಉಲ್ಲಾಯ ಚಕ್ರವರ್ತಿಯಾಗಿ, ಉಳಿದ ರಾಜನ್ ದೈವಗಳು ಅದರ ಅಜ್ಞಾನುವರ್ತಿ  ದೈವಗಳಾಗಿ ವಲಸರಿ

 ( ವಾಲಗ ಸವಾರಿ)  ಹೊರಡುತ್ತವೆ. ಎಲ್ಲಾ ಶಕ್ತಿಗಳಿಗೆ ಚಕ್ರವರ್ತಿಯಂತೆ ನಾಗ ಬ್ರಹ್ಮ ಅರ್ಥಾತ್ ಉಲ್ಲಾಯ ಇರುವುದನ್ನು ಆಚರಣೆಯ ಸಂದರ್ಭದಲ್ಲಿ ಕಾಣಬಹುದು.

ವೈದಿಕ ಮತದ ಪ್ರಭಾವದಿಂದ ತುಳುವರ ಬೆರ್ಮೆರ್ ಬ್ರಹ್ಮಲಿಂಗೇಶ್ವರ ಆಗಿ ಪರಿವರ್ತನೆಗೊಂಡ ಮೇಲೂ ಬ್ರಹ್ಮ ಅರ್ಥಾತ್ ನಾಗಬ್ರಹ್ಮ ದ್ವಿಲಿಂಗಿಯಾಗಿರುವ ನಂಬಿಕೆ ಮುಂದುವರೆದಿದೆ. ಕೆಲವರ ಮೂಲಸ್ಥಾನ ಆಗಿರುವ ಕಾರ್ಕಳ ತಾಲೂಕಿನ ಪೊಸ್ರಾಲ್ ಮಹಾಲಿಂಗೇಶ್ವರ ದೇವಸ್ಥಾನ ಕೆಲವು ತುಳುವರ ಮೂಲಸ್ಥಾನ ಆಗಿದೆ.

ಇಲ್ಲಿ ಪ್ರತಿಷ್ಟಾಪಿಸಲಾಗಿರುವ ಬ್ರಹ್ಮ ಶಿಲ್ಪದ ಮುಂಭಾಗ ಹೆಣ‍್ಣಿನ ರೂಪದಲ್ಲಿದ್ದರೆ  ಅಸ್ಪಷ್ಟ ಹಿಂಭಾಗ ಗಂಡನ್ನು ಸಂಕೇತಿಸುತ್ತದೆ.

“ಪೊಸ್ರಾಲ್ ಆಲಡೆ ಸ್ಥಾನದಲ್ಲಿ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಎದುರಾಗಿ ಪಂಚದೈವಗಳ ಸಂಕೀರ್ಣ ಇದೆ, ಸಂಕೀರ್ಣದ ಸುತ್ತ ಪಾಗಾರ ನಿರ್ಮಿಸಿದ್ದಾರೆ. ಇಲ್ಲಿ ನಾಗಶಿಲ್ಪಗಳ ಕಟ್ಟೆಯ ಬಲಭಾಗದ ಎತ್ತರದ ಕಂಬದ ಮೇಲೆ ಎರಡು ಅಂತಸ್ತಿನ ಕಲ್ಲಿನ ಪೀಠದಲ್ಲಿ ಚತುರ್ಮುಖ ಬ್ರಹ್ಮನನ್ನು ಹೋಲುವ ಪದ್ಮಾಸನದಲ್ಲಿ ಕುಳಿತ ಶಿಲಾ ಶಿಲ್ಪ ಇದೆ. ಇದು ನಾಲ್ಕು ತಲೆ ಇರುವ ಸ್ತ್ರೀ ವಿಗ್ರಹ. ನಾಲ್ಕು ಮುಖಗಳು ಇದ್ದರೂ ಮುಂಭಾಗದಲ್ಲಿ ಮಾತ್ರ ಮುಖದ ಕೆತ್ತನೆ ಸ್ಷಷ್ಟವಾಗಿದೆ. ಎದೆಯ ಭಾಗ ಸ್ತ್ರೀ. ಪಂಚದೈವಗಳಿಗೆ ಬೆನ್ನು ಹಾಕಿ ದೇವಸ್ಥಾನಕ್ಕೆ ಮುಖ ಹಾಕಿದೆ. ಶಿಲ್ಪದ ಬಲದ ಕೈ ಅಭಯ ಮುದ್ರೆಯಲ್ಲಿ ಇದೆ.ಎಡ ಕೈಯಲ್ಲಿ ಫಲವಿದೆ. ಹುತ್ತದ ಆಕೃತಿಯಲ್ಲಿ ಪ್ರಭಾವಳಿಯನ್ನು ನಿರ್ಮಿಸಲಾಗಿದೆ. ಎರಡು ಕೈಗಳು ಪ್ರಭಾವಳಿಯನ್ನು ಸ್ಪರ್ಶಿಸಿವೆ. ಇವುಗಳ ವಸ್ತು ಅಥವಾ ಮುದ್ರೆಗಳನ್ನು ಗುರುತಿಸಲಾಗಲಿಲ್ಲ. ಹಿಂಭಾಗದ ಮೊಗಕ್ಕೆ ಸ್ಪಷ್ಟ ರೂಪ ನೀಡಿದಂತಿಲ್ಲ.ಹಿಂಭಾಗದ ಕೈಗಳೂ     ಅಸ್ಪಷ್ಟವಾಗಿದೆ. ಎಡಗೈಯಲ್ಲಿ ಕಪಾಲ ಇರಬಹುದು ಎಂದು ಕೆಲವರು ಇತಿಹಾಸಕಾರರು ಊಹೆ ಮಾಡುತ್ತಾರೆ, ಶಿಲ್ಪದ ಬೆನ್ನಿನ ಭಾಗವನ್ನು ಬ್ರಹ್ಮ ಎಂದೂ ಮುಂಭಾಗವನ್ನು ಬ್ರಾಹ್ಮಿ ಎಂದೂ ಈ ದೇವಸ್ಥಾನದ ಅರ್ಚಕರು ವಿವರಿಸುತ್ತಾರೆ.

ಮುಂಡ್ಕೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ದೊರೆತ ಕ್ರಿ.ಶ.1298 ಶಾಸನವೊಂದರಲ್ಲಿ “ಹೊಸರಾಳ ಲೋಕೇಶ್ವರ ಸ್ತಾನವ “ ಎಂಬ ಉಲ್ಲೇಖ ಇದೆ. ಈ ಶಾಸನದಲ್ಲಿ ‘ನಮ್ಮ ನೆಲದವರು, ನಾಡವರು ಏಕಸ್ತರಾಗಿ ಇರಿಸಿದ ಬಂಮೊತ್ತಿಯ (ಬರ್ಮೆತ್ತಿ) ಕಲ್ಲು’ ಎಂದಿದೆ. ‘ಬೆರ್ಮೆತ್ತಿ ಎನ್ನುವುದು ಸ್ತ್ರೀ ಲಿಂಗ ಸೂಚಕ. ಕ್ರಿ.ಶ. 1298ರವರೆಗೆ ಈ ಕ್ಷೇತ್ರ ‘ಲೋಕೇಶ‍್ವರ’ ಸ್ಥಾನ ಎಂದು ಕರೆಸಿಕೊಂಡಿತ್ತು. (ಇಂದಿರಾ ಹೆಗ್ಗಡೆ ತುಳುವರ ಮೂಲತಾನ ಆದಿ ಆಲಡೆ :ಪರಂಪರೆ ಮತ್ತು ಪರಿವರ್ತನೆ. ಪ್ರ. ನವಕರ್ನಾಟಕ ಬೆಂಗಳೂರು 2012.ಪು.111)”


ನಾಗಬ್ರಹ್ಮನ ಕೋಲ :

ನಾಗ ಮತ್ತು ನಾಗ ಬ್ರಹ್ಮ ಭೂತಗಳ ಸಾಲಿಗೆ ಸೇರುತ್ತವೆ “ಕೆಲವೊಂದು ತುಳುನಾಡಿನ ಶಾಸನಗಳು ಬೆರ್ಮರನ್ನು ದೇವರೆಂದು ಉಲ್ಲೇಖಿಸಿದ್ದು, ಆದರೆ ಬಹಳ ವಿಚಿತ್ರವೆನ್ನುವಂತೆ ಅವನ್ನು ಭೂತಗಳ ಸಾಲಿಗೆ ಸೇರಿಸಿವೆ. ನಾಗನನ್ನು ಬ್ರಹ್ಮನೊಂದಿಗೆ ಅವಿಭಾಜ್ಯವಾಗಿ ಸಂಗಡಿಸಲಾಗಿದೆ ಹಾಗೂ ಬ್ರಹ್ಮನಿಗೆ ಹಾಲು ನೈವೇದ್ಯ ಮಾಡಿದ ಪ್ರಸಂಗದ ವಿವರಣೆ ಶಾಸನವೊಂದಲ್ಲಿ ಸಿಗುತ್ತದೆ,” ಎನ್ನುತ್ತಾರೆ.

( ಪೀಟರ್ ಜೆ. ಕ್ಲಾಸ್. ತುಳುವ ದರ್ಶನ ಪು.125)

ನಾಗ ಮತ್ತು ನಾಗ ಬ್ರಹ್ಮರಿಗೆ ಕೋಲರೂಪದ ನರ್ತನ ಸೇವೆ ನಡೆಯುತ್ತದೆ. ಆಗ ನಾಗಬ್ರಹ್ಮನ ಪಾತ್ರಿಯ ಉಡುಪು ಈ ಕೆಳಗಿನಂತಿದೆ  :

ನಾಗಬಿರ್ಮೆರ್ ಪಾತ್ರಿ ಸೀರೆ ಉಡಬೇಕು. ಮೇಲ್ಗಡೆ ರವಕೆ ತೊಡಬೇಕು. ( ಇತ್ತೀಚಿನ ವರ್ಷಗಳಲ್ಲಿ ಮೇಲ್ಭಾಗಕ್ಕೆ ಅಂಗಿ ಹಾಕುತ್ತಾರೆ )

ಒಡವೆ ಎಷ್ಟು ಬೇಕಾದರೂ ಧರಿಸಬಹುದು. ಕಂಗಿನ ಹಾಳೆಯಲ್ಲಿ ನಾಗನ ಹೆಡೆಗಳನ್ನು ಸಿದ್ದಪಡಿಸಿ ಅದರ ಪ್ರಭಾವಳೀ

( ತುಳು ಅಣಿ ) ಯನ್ನು  ರಚಿಸಿ ನರ್ತನದ ಸಂದರ್ಭದಲ್ಲಿ ಧರಿಸಬೇಕು. ಬಿಲ್ಲು ಬಾಣ ಹೊಂದಿ ಏಳು ಕೋಲ ಕೈಗೊಳ್ಳುವ ನಾಗ ಬಿರ್ಮೆರ್ ದೈವ /ಭೂತಗಳಲ್ಲಿ ಹಿರಿದಾದುದು. ಭೂತಗಳ ಚಕ್ರವರ್ತಿ.

ಬ್ರಾಹ್ಮಣರ ಪ್ರವೇಶದಿಂದ ನಡೆಯುವ ನಾಗ ಮಂಡಲ ಬ್ರಹ್ಮಮಂಡಲ ಕೂಡಾ ನಾಗಬ್ರಹ್ಮನ ಪಾತ್ರಿಯಲ್ಲಿ ವೈದ್ಯರು ಸೀರೆ ರವಕೆ ತೊಟ್ಟು ಡಮರು ನುಡಿಸುತ್ತಾರೆ,  ಬ್ರಾಹ್ಮಣ ನಾಗ ಪಾತ್ರಿಯಾಗುತ್ತಾನೆ.

ಬ್ರಾಹ್ಮಣನ ಪ್ರವೇಶ ಇಲ್ಲದೆ ಜನಪದ ಸಂಸ್ಕ್ರತಿಯಲ್ಲಿ ಆಚರಿಸಲಾಗುವ ಢಕ್ಕೆ ಬಲಿಯಲ್ಲಿಯೂ ಡಮರು ನುಡಿಸುವ ಪಾಣ

( ವೈದ್ಯರ ಮತ್ತೊಂದು ಪಂಗಡ ) ಕೆಳಭಾಗ ಸೀರೆ ಉಟ್ಟು ಮೇಲ್ಬಾಗದಲ್ಲಿ ಅಂಗಿ ರವಕೆ ಧರಿಸುತ್ತಾನೆ. ಸ್ವಾಮಿಕೋಲದಲ್ಲಿಯೂ  ಇದೇ ರೀತಿಯ ಉಡುಗೆ ಸ್ವಾಮಿಯ ( ನಾಗ ) ಪಾತ್ರಿಗೆ ಇದೆ. ಜನಪದ ಪದ್ದತಿಯಲ್ಲಿ ಉಳಿದು ಬಂದಿರುವ ಢಕ್ಕೆ ಬಲಿಯಲ್ಲಿ ಪಾಣ ಢಮರು ನುಡಿಸುವ ಬ್ರಹ್ಮನಾಗಿ ಅರ್ಧನಾರಿ ವೇಷದಲ್ಲಿದ್ದರೆ ( ವೈದ್ಯನ ಜಾಗದಲ್ಲಿ ) ಬಂಟ ನಾಗ ಪಾತ್ರಿಯಾಗಿ ಬ್ರಾಹ್ಮಣ ಪಾತ್ರಿಯ ಸ್ಥಾನದಲ್ಲಿ ಇರುತ್ತಾನೆ.

ಸ್ವಾಮಿ ಕೋಲದಲ್ಲಿ ಸ್ವಾಮಿಯಾಗಿ ಬಂಟ ಪಾತ್ರಿ ಇರುತ್ತಾನೆ.ಪಾಣ ಸೀರೆ ಉಟ್ಟು ರವಕೆ ತೊಟ್ಟ ಢಕ್ಕೆ ನುಡಿಸುತ್ತಾನೆ.

ಸ್ವಾಮಿಯಾಗುವ ಬಂಟ ಪಾತ್ರಿಗಳು ಅದೇ ಕುಟುಂಬದ ಸದಸ್ಯ ಆಗಬೇಕೆಂಬುದು ಗಮನಿಸಬೇಕಾದ ಅಂಶ. ಬಂಟ್ವಾಳ ತಾಲ್ಲೂಕಿನ ಕೆಲಿಂಜ ಉಲ್ಲಾಲ್ತಿ ದೈವಸ್ಥಾನಕ್ಕೂ ಉಲ್ಲಾಲ್ತಿ ಕುಲದೈವ ಆಗಿರುವ ಕುಟುಂಬದ ( ಬಂಟ ) ವ್ಯಕ್ತಿ ಪಾತ್ರಿಯಾಗುವ ಪದ್ದತಿ ಮುಂದುವರೆದಿದೆ.ದಲಿತ ವರ್ಗದವರ  ಮೂಲಸ್ಥಾನ ದೈವವಾದ ಕಾಡ್ಯನಾಟದಲ್ಲಿಯೂ ಕಾಡ್ಯನಾಗಿ ಕುಟುಂಬ ಸದಸ್ಯನೇ ಇರುತ್ತಾನೆ. ಕಾಡ್ಯನಾಟದಲ್ಲಿಯೂ ಮೇಲಿನಂತೆ ಆರ್ಧನಾರೀವೇಷ ತೊಡುತ್ತಾನೆ. ಕಾಡ್ಯ ಎಂದರೆ ಸರ್ಪ. ಚಿಕ್ಕು  ಕ್ಷೇತ್ರಗಳ ಢಕ್ಕೆ ಬಲಿಯಲ್ಲೂ ಬಂಟ ಮತ್ತು ಪಾಣ ಇರುತ್ತಾರೆ.ಪಾಣನ ಉಡುಗೆ ಸೀರೆ ರವಕೆ.

ಸ್ವಾಮಿಕೋಲದಲ್ಲಿ ಕುರಿ ಕೋಳಿಗಳ ಬಲಿ ನೀಡಲಾಗುತ್ತದೆ.

ಹೀಗೆ ಕೆಲವೆಡೆ ಉಳಿದು ಬಂದಿರುವ ಆಚರಣೆಗಳು ಸ್ಥಳೀಯ ಮೂಲ ಸಂಸ್ಕ್ರತಿಯನ್ನು ಪರಿಚಯಿಸುತ್ತವೆ.

 ವೈದಿಕ ಸಂಪ್ರದಾಯಗಳು ಮೇಲ್ ಗೈ ಪಡೆಯುತ್ತಿರುವಾಗಲು ಇಂತಹ ಆಚರಣೆ ಕೆಲವೊಂದು ಕಡೆ ಉಳಿದು ಬಂದಿರುವುದು ನಮ್ಮ ಶೋಧಕ್ಕೆ ಖಚಿತತೆಯನ್ನು ಒದಗಿಸುತ್ತದೆ.

ತುಳುನಾಡಿನ ಎಲ್ಲ ಭೂತಗಳು ಪಂಚಶಕ್ತಿಗಳ  ಬೆರ್ಮೆರ ಪರಿವಾರ ದೈವಗಳಾಗಿ ಬೆರ್ಮರೆ ತಾನ ಹಾಗೂ ಆಲಡೆ ಮನೆಗಳಲ್ಲಿ ಇವೆ.  ಸಾರಮನ್ನ ಬೂತೊಲು  ಎನ್ನುವುದು ರೂಢಿ, ಆದರೆ ಸಾವಿರ ಭೂತಗಳು ಗೋಚರಕ್ಕೆ ಬರುವುದಿಲ್ಲ. ತುಳುನಾಡಿನ ಜನರಿಗೆ ಮಾತ್ರವಲ್ಲ ಸಾರಮನ್ನ ಪರಿವಾರ ಭೂತಗಳಿಗೂ ನಾಗಬೆರ್ಮೆರ್ ಉಲ್ಲಾಯ ( ಒಡೆಯ ). ನಾಗಕನ್ನಿಕೆ  ಉಲ್ಲಾಲ್ತಿ ( ಒಡೆಯ ) , “ ಉಲ್ಲಾ ಯನ ಅಪ್ಪಣೆ ಪಡೆದು ‘ ಎಲ್ಲಾ ಭೂತಗಳು.

ಸಿರಿಬಾರಿ ಲೋಕದ ಸಿರಿಗಳು: ಸಿರಿಗಳು ಅಂದರೆ ನಾಗ ಕನ್ನಿಕೆಯರು. ಇವರು ನಾಗ ಬೆರ್ಮರ್  ಜೊತೆಯಲ್ಲಿ ಹುಟ್ಟಿದ ಜೋವುಗಳು. ‘ ಎಡದಲ್ಲಿ ಅರವತ್ತಾರು ಕೋಟಿ ಹಾವು, ಬಲದಲ್ಲಿ ಎಪ್ಪತ್ತಾರು ಕೋಟಿ ನಾಗರ ಜೋವು ( ಕನ್ಯೆ?) ಗಳೊಂದಿಗೆ’ ಬೆರ್ಮೆರ್ ಉದಿಸಿದರು.ಎಂದು ಪಾಡ್ದನದಲ್ಲಿ  ಹೇಳಲಾಗಿದೆ. ತುಳುನಾಡ  ಸಿರಿ ಪಾಡ್ದನದ ಸಿರಿಯೂ ಜೋವು ಪದ ಗಂಡಿಗೂ ಅನ್ವಯಾಗುತ್ತದೆ. ಹೆಣ್ಣಿಗೂ ಅನ್ವಯಾಗುತ್ತದೆ.( 1 ಆನ್ + ಜೋವು  - ಅಂಜೋವು, ಗಂಡಸು 2 ಪೊಣ್ ಜೋವು + ಪೊಣ್ಣು ಜೋವು , ಹೆಂಗಸು )  ಅರ್ಥಾತ್  ಈ ನಾಗ ಶಕ್ತಿಗಳು ಯಾವ ರೂಪವನ್ನು ಬೇಕಾದರೂ ಧರಿಸಬಲ್ಲವುಗಳು. ಅಥವಾ ಈ ಎರಡೂ ಶಕ್ತಿಗಳನ್ನು ತನ್ನೊಳಗೆ ಸಮೀಕರಿಸಿಕೊಂಡಿರುವಂತಹುದು. ಪ್ರತಿಷ್ಟಿತ ಕುಟುಂಬಗಳ ನಾಗಬನಗಳಲ್ಲಿ ಮಾನವರೂಪದ ನಾಗಶಿಲ್ಪಗಳು ಹೆಚ್ಚಾಗಿ ಕಂಡುಬರುತ್ತದೆ. ನಾಗ ಕನ್ನಿಕಾ ಶಿಲ್ಪಗಳಲ್ಲಿ ತುಂಬು ಮೊಲೆಗಳನ್ನು ಕೆತ್ತಿರುವುದು ವಿಶೇಷ.

ಪುರುಷ ಸಂಪರ್ಕ ಇಲ್ಲದೆ ಮಗುವಿನ ಜನನ

ಸಿರಿ ಪಠ್ಯಗಳ ಪ್ರಕಾರ ಸಿರಿ ಕಾಂತುಪೂಂಜನನ್ನು ಮದುವೆಯಾಗುತ್ತಾಳೆ, ಮಾಚರು ಗೋಪಾಲ ಕೃಷ್ಣ ನಾಯ್ಕರ  ಪ್ರಕಾರ  ಕುಮಾರನಿಗೆ ಕಾಂತುಪೂಂಜ ತಂದೆಯಲ್ಲ. ಪಾಡ್ದನ ಕಾವ್ಯದ ಸಿರಿಯೂ ಪುರುಷ ಸಂರ್ಪಕವಿಲ್ಲದೆ ಮಗುವನ್ನು ಹಡೆದವಳು. ನಾಯ್ಕರು ನನ್ನ ಮುಂದೆ ಪಾಡ್ದನದ ಈ ಭಾಗವನ್ನು ಹೇಳಿದರು: “ ಕುಮಾರ ನಿಜವಾಗಿ ಕಾಂತು ಪೂಂಜನಿಗೆ ಹುಟ್ಟಿದ ಮಗನಲ್ಲ. ಏಳು ದಿನ ಗಂಡನಿಗೆ ಪರಿಣಾಮದ ನಿದ್ರೆ ಮಾಡಿಸಿ ಗುರುತು ಹಿಡಿದು ಆ ಮಗುವನ್ನು ಪಡೆಯುತ್ತಾಳೆ. ( ಇತರೆ ಕೆಲವು ತುಳು ಪಾಡ್ದನಗಳಲ್ಲೂ ಹೆಣ್ಣು ಪುರುಷ ಸಂಪರ್ಕ ಇಲ್ಲದೆ ಬಸಿರಾಗುವ ನಿರೂಪಣೆ ಇವೆ. ಉದಾ ಕೋಟೆದ  ಬಬ್ಬು ಮತ್ತು ಕಾಂತಾ ಬಾರೆ ಬೂದಾ ಬಾರೆ  ಜನಿಸುವುದು ಪುರುಷ ಸಂಪರ್ಕ ಇಲ್ಲದ  ತಾಯಿಯ ಗರ್ಭದಲ್ಲಿ. ಕಬತಾರಿನ ವೇದ ನಲಿಕೆ ಹಾಡಿದ ಗುಳಿಗ ಪಾಡ್ದನದಲ್ಲೂ ಪುರುಷ ಸಂಪರ್ಕ ಇಲ್ಲದೆ ಮಗು ಪಡೆಯುವ ವರವನ್ನು ಸೂರ್ಯನಿಂದ ಪಡೆಯುತ್ತಾರೆ. ) ಕುಮಾರ ಅಂದರೆ ನಾಗಬಿರ್ಮೆರ್ ಪಾದದಲ್ಲಿ ಪನಿನಾಗ, ತೊಡೆಯಲ್ಲಿ ಕೃಷ್ಣ ಸರ್ಪ, ಬೆನ್ನಲ್ಲಿ ಕಾಲಿಂಗ ಸರ್ಪ,16 ನೆರಿಗೆ ಹಣೆಯಲ್ಲಿ ಮೂರು ನಾಮ ಕೋಟಿ ಕೋಟಿ ನಾಗ ಕನ್ನಿಕೆಯರ ಕೋಟಿ ದೇವರ ಸಮ ಆದ ಕೋಟಿ ಕುಮಾರ. ಹೀಗಿರುವ ಕುಮಾರ .”
( ಅಮ್ಮಗ ಪುಟ್ಟಿ ಮಗೆ ಅತ್ತ್. ಏಳ್ ದಿನ ಕಂಡನಗ ಪರಿನಾಮದ ನಿದ್ರೆ ಮಲ್ಪಾದ್,

ಗುರ್ತ ಪತ್ತದ್ ಆ ಬಾಲೆನ್ ಪಡೆಯಿನಿ. ಕುಮಾರೆ ಪಂಡ ನಾಗ ಬಿರ್ಮೆರ್-

ಪಾದೊಡು ಪನಿ ನಾಗೆ, ತುಡೆಟ್ ಕೃಷ್ಣ ಸರ್ಪೆ, ಬೆರಿಟ್ ಕಾಲಿಂಗ ಸರ್ಪೆ,

16 ನೆರಿ ಮುಂಡೊಗು ಮೂಜಿ ನಾಮ, ಕೋಟಿ ಕೋಟಿ ಜೋವುಲೆನ್

ಕೋಟಿ ಕೋಟಿ ದೇವೆರೆನ್ ಸಮ ಆಯಿ ಕೋಟಿ ಕುಮಾರೆ,” – ಇಂಚಿತ್ತಿ ಕುಮಾರೆ.”)

ಕುಮಾರನ ಉದಿಪನೆಗೂ ಬಿರ್ಮೆರ್ ಉದಿಪನೆಗೂ ವ್ಯತ್ಯಾಸ ಕಾಣುವುದಿಲ್ಲ. ಸಿರಿಯು ಏಳು ದಿನ ತನ್ನ ಗಂಡ ಕಾಂತುಪೂಂಜನಿಗೆ ಪರಿಣಾಮದ ನಿದ್ರೆ ಬರಿಸಿ ಗುರುತು ಹಿಡಿಸಿ ಮಗು ಪಡೆದವಳು.

ಸಾಂಸ್ಕ್ರತಿಕ ವೀರರಾದ ತುಳು ಪಾಡ್ದನದ ಕಾಂತಾಬಾರೆ ಬೂದಬಾರೆಯರ ತಾಯಿ ಆಚು ಬೈದೆದಿ ಪುರುಷ ಸಂಪರ್ಕ ಇಲ್ಲದೆ ಮಕ್ಕಳಿಗೆ ಜನ್ನ ನೀಡುತ್ತಾಳೆ.

ಒಟ್ಟಿನಲ್ಲಿ ಭೂತಾರಾಧನೆಗೆ ವಿಶ್ವ ಪ್ರಸಿದ್ದ ಆಗಿರುವ, ನಾಗ ಕ್ಷೇತ್ರವಾದ ತುಳುನಾಡಿನಲ್ಲಿ ನಾಗಗಳನ್ನು ಪ್ರತಿನಿಧೀಕರಿಸುವ ಭೂತಗಳು / ಶಕ್ತಿ ದೈವಗಳು ಸ್ತ್ರೀ ಪುರುಷ – ಹೀಗೆ ಎರಡು ಶಕ್ತಿಗಳು ಒಂದೇ ಶಕ್ತಿಯಲ್ಲಿ ಸಮೀಕರಣಗೂಂಡ ದ್ವಿಲಿಂಗಿಗಳಾಗಿವೆ.

                                  
ವರಸರಿ ಹೊರಟ ಅರಸು ದೈವ ಸಜಿಪ ಬಂಟ್ವಾಳ -ಸಂಗ್ರಹ ಚಿತ್ರ
ಗರಡಿ ಬೆರ್ಮೆರ್ : ಈ ಬೆರ್ಮೆರ್ ದ್ವಿಲಿಂಗಿ ಅತ್ತಾರ್ ಮನೆ ಸುರತ್ಕಲ್ ಬಳಿ-ಸಂಗ್ರಹ ಚಿತ್ರ
-
ದ್ವಿಲಿಂಗಿ ದೈವ ಧೂಮಾವತಿ ಮತ್ತು ಬಂಟ : ಎಳತ್ತೂರು ಗುತ್ತು -ಸಂಗ್ರ ಚಿತ್ರ


ಪ್ರತಿಕ್ರಿಯೆಗಳನ್ನು ಆಹ್ವಾನಿಸಲಾಗಿದೆ.

No comments:

Post a Comment