Thursday, January 25, 2018

ಕೃತಿ ಪರಿಚಯ -‘ಸಪ್ತ ಕನ್ಯೆಯರ ಕನ್ಯೆ ಭೂಮಿಯಲ್ಲಿ ನಮ್ಮ ನಡೆ’ -2017


ಹೆಣ್ಣು ನೋಟದ ಕನ್ಯೆ ಭೂಮಿಯ ನಡೆ

ಲೋಕ ಗ್ರಹಿಕೆಗೆ ದೇಶ ಸುತ್ತುವುದು ಕೋಶ ಓದುವುದು ಅವಶ್ಯ. ಹೀಗೆ ಕಂಡದನ್ನು ದಾಖಲುಗೊಳಿಸುತ್ತಾ ತಮ್ಮ ವಿವೇಚನೆಯ ಚಿಂತನೆಯೊಳಗೆ ಮರುಸೃಷ್ಟಿ ಮಾಡಿ ತಿಳುವಳಿಕೆಯ ವಿಸ್ತಾರವನ್ನು ಹೆಚ್ಚಿಸುವುದೇ ಪ್ರವಾಸ ಸಾಹಿತ್ಯ. ಪಾಶ್ಚಿಮಾತ್ಯರ ಲೋಕ ದೃಷ್ಟಿ ಮತ್ತು ಸಹಾಸಿ ಪ್ರವೃತ್ತಿಯ ಕೊಡುಗೆಯಾದ ಪ್ರವಾಸ ಹೊಸ ಅನ್ವೇಷಣೆಗಳ ಮೂಲವೂ ಹೌದು. ಹೀಗೆ ಪ್ರಯಾಣ ಹೊರಟವರೆಲ್ಲಾ ಬರೆದುದು ವರದಿಯ ರೂಪವಾದರೆ ದಾಖಲು ಸಾಹಿತ್ಯವಾಗುತ್ತದೆ. ಅದಕ್ಕಿಂತ ಭಿನ್ನವಾಗಿ ತಮ್ಮ ಪಯಣದ ಅನುಭವಗಳನ್ನು ವಿಚಾರ, ಚಿಂತನೆಗಳಿಂದ ಕಥಿಸುತ್ತ ಹೋಗುವವರು ಕಂಡ ಲೋಕ ದೃಷ್ಟಿಯು ಪ್ರವಾಸ ಸಾಹಿತ್ಯದ ಸೃಜನಶೀಲತೆಗೆ ಮಾದರಿಯಾಗುತ್ತದೆ. ಬಹಳ ದೀರ್ಘ ಪರಂಪರೆಯಿರುವ ಕನ್ನಡದ ಪ್ರವಾಸ ಸಾಹಿತ್ಯ ಅಧ್ಯಯನ ಯೋಗ್ಯವಾಗಿ ಹೊಸ ಹೊಳಹುಗಳನ್ನು ಸಾಹಿತ್ಯ ಕ್ಷೇತ್ರಕ್ಕೆ ನೀಡಿದೆ. ವೃತ್ತಿ ಮತ್ತು ಪ್ರವೃತ್ತಿಗಳೊಂದಿಗೆ ಜೀವನ ಪ್ರೀತಿ ಲೋಕವನ್ನು ನೋಡುವ ‘ಕಣ್ಣ ನೋಟ’ ದ ಕಾಣ್ಕಿಗೆ ಹೊಸ ಅರ್ಥ ಸಾಧ್ಯತೆಗಳನ್ನು ತೊಡಗುತ್ತದೆ. ಅಂತಹ ಕೃತಿಯಾಗಿ ಹೊರ ಹೊಮ್ಮಿದೆ ಇಂದಿರಾ ಹೆಗ್ಗಡೆಯವರ ಪ್ರವಾಸ ಕಥನ – ‘ಸಪ್ತ ಕನೈಯರ ಕನ್ಯೆ ಭೂಮಿಯಲ್ಲಿ ನಡೆ’.

ಮೂಲತಃ ಕರ್ನಾಟಕ ಕರಾವಳಿಯವರಾದ ಇಂದಿರಾ ಹೆಗ್ಗಡೆ ತುಳುನಾಡಿನ ಸಂಸ್ಕøತಿ ಚಿಂತನೆಯ ಸಂಶೋಧನೆಯಾಗಿ ಮಹತ್ತ್ವದ ಲೇಖಕಿ. ತುಳು ನಾಡಿನ ಚರಿತ್ರೆ, ಸಮುದಾಯಗಳ ಸಾಂಸ್ಕøತಿಕ ವೈಶಿಷ್ಟ್ಯಗಳು, ಜನಪದದ ತಾತ್ತ್ವಿಕತೆ, ಆರಾಧನಾ ಪರಂಪರೆಯ ಮೂಲಗಳು ಹೀಗೆ ಮೂರು-ನಾಲ್ಕು ಧಾರೆಗಳಾದ ಚರಿತ್ರೆ, ಮಾನವಶಾಸ್ತ್ರ, ಸಂಸ್ಕøತಿ ಚಿಂತನೆ, ಜನಪದ, ಕ್ಷೇತ್ರಕಾರ್ಯ ಅನುಭವಗಳು ಅವರ ಲೋಕ ದೃಷ್ಟಿಯನ್ನು ವಿಸ್ತಾರಗೊಳಿಸಿವೆ. ಜಗತ್ತನ್ನು ಬಹುತ್ವದ ಮೂಲಧಾತುವಿನಲ್ಲಿ ಕಾಣುವ ವಾಸ್ತವಿಕ ದೃಷ್ಟಿ ಅವರಲ್ಲಿದೆ. ಒಬ್ಬ ಒಳ್ಳೆಯ ಸಂಶೋಧಕಿಯೂ ಆಗಿರುವ ಅವರಿಗೆ ಕಂಡದನ್ನು, ಕೇಳಿದನ್ನು ಒರೆಗೆ ಹಚ್ಚಿ ನೋಡುವ ಸತ್ಯ ಶೋಧದ ದೃಷ್ಟಿಯೂ ಇದೆ. ಈ ಎಲ್ಲಾ ಮೂಲ ಧಾತುಗಳನ್ನಿರಿಸಿಕೊಂಡು ಕಾಣುವಾಗ ಕಣ್ಣಿಗೆ ಪಟ್ಟಿಕಟ್ಟಿ ಕೊಳ್ಳದೆ ಎಲ್ಲವನ್ನೂ ತೆರೆದ ಮನದಿಂದ ಪರಿಭಾವಿಸುತ್ತಾ ಹೋಗುತ್ತಾರೆ. ಒಬ್ಬ ಪ್ರವಾಸಿಗನಿಗೆ ಇರಬೇಕಾದ ಎಚ್ಚರವಿದು. ಆರಾಧನಾ ಭಾವವನ್ನು ತ್ಯಜಿಸಿ ಸಕಾರಾತ್ಮಕ ಮತ್ತು ನಕರಾತ್ಮಕತೆಗೆರಡರ ಸಮ್ಮಿಲನದಿಂದ ಕಂಡಿರುವುದರಿಂದಲೇ ಅವರು ಹೇಳಿರುವ ಪ್ರವಾಸ ಅನುಭವಗಳು ಕಿರಿದಾಗಿ, ಸೊಗಸಾಗಿ, ಬಿಡಿ ಬಿಡಿಯಾಗಿದ್ದರೂ ಅದರಾಚೆಗೆ ಆಳವಾದ ಆಲೋಚನೆ ಚಿಂತನೆಗಳೊಂದಿಗೆ ನೂರು ಪ್ರಶ್ನೆಗಳನ್ನೆತ್ತಿ ಮತ್ತೊಂದಿಷ್ಟು ಅಧ್ಯಯನದ ಹುಡುಕಾಟದೊಂದಿಗೆ, ಕೃತಿಯನ್ನು ಸ್ಥಳಗಳನ್ನು ಮತ್ತೊಮ್ಮೆ ನೋಡಬೇಕೆಂಬ ಹುಮ್ಮಸ್ಸು ಮೂಡುತ್ತದೆ.

ಪ್ರವಾಸ ತೆರಳಲು ನಾಲ್ಕರಿಂದ ಆರು ಜನರು ಚೇತೋಹಾರಿ ಎಂಬ ಯೋಜನೆಯಲ್ಲಿ ಯೋಚನೆ ಮತ್ತು ಯೋಜನೆಗಳನ್ನು ಸಮ್ಮಿಲಸಿಕೊಂಡು ಬೇರೆ ಬೇರೆ ಸಂದರ್ಭಗಳಲ್ಲಿ ಈಶಾನ್ಯ ರಾಜ್ಯಗಳಲ್ಲಿ ಮಾಡಿರುವ ಪ್ರವಾಸದ ಕಥನವಿದು. ಯೋಧ, ಸಂಘಟಕ ಲೇಖಕ, ಮನುಜ ಪ್ರೇಮದ ಒಲವಿನ ಪತಿ ಎಸ್. ಆರ್. ಹೆಗಡೆಯವರೊಂದಿಗೆ ತಮ್ಮ ಆಪ್ತ ವರ್ಗದವರ ಜತೆ ಈಶಾನ್ಯ ರಾಜ್ಯಗಳಾದ ಅಸ್ಸಾಂ, ಮಣಿಪುರ, ಮೇಘಾಲಯ, ನಾಗಾಲ್ಯಾಂಡ್, ತ್ರಿಪುರ, ಅರುಣಾಚಲ, ಮಿಝೋರಾಮ್ ಮತ್ತು ಸಿಕ್ಕಿಂ ರಾಜ್ಯಗಳಲ್ಲಿ ಮಾಡಿದ ಪ್ರವಾಸಗಳ ಕಥನವು ಈ ಕೃತಿಯಲ್ಲಿ ಸಮ್ಮಿಲನಗೊಂಡಿದೆ. ಭಾರತದ ಈಶಾನ್ಯ ರಾಜ್ಯಗಳನ್ನು ವಸಾಹತುಶಾಹಿ ಪ್ರಭುತ್ವವು ‘Seveಟಿ Sisಣeಡಿs’ ಎಂದಿದೆ. ಈ ಪರಿಭಾಷೆಯನ್ನು ಹೊಸ ಅರ್ಥದಲ್ಲಿ ಸಹೋದರತ್ವದಿಂದ ಕನ್ಯತ್ವದ ನೆಲೆಯಲ್ಲಿ ಪರಿಭಾವಿಸಿದ ರೀತಿಯೇ ಕೃತಿಯ ಸೃಜನಶೀಲತ್ವ ಮತ್ತು ಹೊಸ ಎಚ್ಚರದ ಕಾಣ್ಕಿಗೆ ಸಾಕ್ಷಿಯಾಗಿದೆ. ‘ಸಪ್ತಕನ್ಯೆಯರ ಕನ್ಯೆ ಭೂಮಿ’ ಎಂಬ ಸಂಶೋಧನೆ ಸಂಸ್ಕøತಿ ವಿಕಾಸದ ಹೆಜ್ಜೆ ಗುರುತುಗಳಿಗೆ ಸಾಕ್ಷಿ ಪ್ರಜ್ಞೆಯಾಗಿದೆ. ಬುಡಕಟ್ಟು ಸಮುದಾಯಗಳ ನೆ¯ದ ಪಿಸುಮಾತುಗಳು ಮಾತೃಮೂಲ ಪರಂಪರೆಯ ಹೆಜ್ಜೆ ಗುರುತುಗಳಾಗಿ ಆ ಸಂಸ್ಕøತಿಯ ಸೂಕ್ಷ್ಮ ಒಳನೋಟಗಳ ಗ್ರಹಿಕೆಯೂ ನಿರೂಪಣೆಗೊಳ್ಳಲು ಸಾಧ್ಯವಾಗಿದೆ. ಕರಾವಳಿಯು ಮಾತೃಮೂಲ ಸಮುದಾಯದ ಬೇರುಗಳನ್ನು ಹೊಂದಿದ್ದು, ತುಳು ಸಂಸ್ಕøತಿಯ ನಾಗಾರಾಧನೆ, ಸಿರಿಯಾರಾಧನೆ, ದೈವರಾಧನೆಗಳು ಬಹಳ ಆಳವಾಗಿ ಜೀವಪರವಾದ ಮೌಲ್ಯಗಳನ್ನು ಸಾಬೀತು ಪಡಿಸುತ್ತದೆ. ಈ ಬಗ್ಗೆ ಒಳ ನೋಟಗಳುಳ್ಳ ಲೇಖಕಿ ಈ ಕೃತಿಯ ಹದಿನಾಲ್ಕು ಅಧ್ಯಾಯಗಳಲ್ಲಿ ಬಿಚ್ಚಿಕೊಳ್ಳುವ ಪ್ರವಾಸ ಕಥನ ಯೋನಿ ಭೂಮಿಯಲ್ಲಿ ನಡೆದ ಹೆಜ್ಜೆ ಗುರುತುವಿನೊಂದಿಗೆ ಆರಂಭಗೊಂಡು ಭಾರತೀಯ ಸಂಸ್ಕøತಿಯ ವಿವಾಹ ಪೂರ್ವ ಸಹಬಾಳ್ವೆಯಲ್ಲಿ ಕೊನೆಗೊಳ್ಳುತ್ತದೆ. ಲೋಕವನ್ನು ಕಂಡ ಲೇಖಕಿಯ ಮಹಿಳಾಪರ ದೃಷ್ಟಿಕೋನವೂ ಇಲ್ಲಿ ಬಹಳ ಮುಖ್ಯವೆನಿಸುತ್ತದೆ.

ಚರಿತ್ರೆ, ಮಾನವಶಾಸ್ತ್ರ, ಜಾನಪದ, ಸಂಸ್ಕøತಿ ಚಿಂತನೆಯ ಧಾರೆಗಳ ಹುಡುಕಾಟಗಳ ಮೂಲಕ ಹೊರಗಿನ ಜಗತ್ತನ್ನು ನೋಡುತ್ತಾ ಮಾನವನೊಳಗಿನ ಜೀವ ಜಗತ್ತನ್ನು ಅರ್ಥೈಸುವ ಪ್ರಯತ್ನ ಮಾಡಲಾಗಿದೆ. ಭೂಮಿಯ ತತ್ವ, ಸೃಷ್ಟಿಯ ಮಹತ್ವ, ಜೀವ ಸೃಷ್ಟಿಗೆ ಮೂಲಧಾತುವಾದ ನೀರು, ಮಣ್ಣು ಇವುಗಳು ಆರಾಧನಾ ಪರಂಪರೆಯಲ್ಲಿ ಹೇಗೆ ದಾಖಲಾಗಿದೆ ಎನ್ನುವುದನ್ನು ವಿವರಿಸುತ್ತಾರೆ. ಯೋನಿ ಭೂಮಿ, ಯೋನಿ ದೇವಿ ಎಂದು ಸಂಭೋಧಿಸುತ್ತಾ  ಅಸ್ಸಾಂನ ಅಂಬಾವಾಟಿ ದೇವಿಯ, ಕಾಮುಕ್ಯ ಕ್ಷೇತ್ರದ ಆಚರಣೆಯನ್ನು ತುಳುನಾಡಿನ ಕೆಡ್ಡಸದೊಂದಿಗೆ ಸಮೀಕರಿಸುತ್ತಾರೆ. ಯೋನಿ ಕೂಲು ಜಗನ್ಮಾತೆ ಎಂದು ವಿಶ್ಲೇಷಿಸುವಾಗ ಮಾತೃಮೂಲ ಸಂಸ್ಕøತಿಯ ಒಳ ಹೊರಗುಗಳನ್ನು ಅರ್ಥೈಸಿದ ಸೂಕ್ಷ್ಮ ಒಳನೋಟ ಇದೆ.  ಬೋಡೋ ಬುಡಕಟ್ಟಿನ ಜನ ಗ್ರಹಿಸಿದ ಪ್ರಕೃತಿಯೇ ಸೃಷ್ಟಿರೂಪಿಣಿ ಯೋನಿ ಎಂಬ ತಿಳುವಳಿಕೆಯನ್ನು ಅವರ ಹಿನ್ನಲೆಯನ್ನು ವಿಶ್ಲೇಷಿಸುತ್ತಾರೆ.

ಹೆಣ್ಣಿನ ನಿಹಿತ ಶಕ್ತಿಯನ್ನು ಅರಿತು ಕಾಲಾಂತರದಲ್ಲಿ ಸ್ಥಿತ್ಯಂತರಗೊಂಡ ಸ್ವರೂಪವನ್ನು ಅರ್ಥೈಸುತ್ತಾರೆ. ಅಸ್ಸಾಂನ್ನು ಕಾಮರೂಪ ಎಂಬ ಹೆಸರಿನಿಂದ ಕರೆಯಲ್ಪಡುವ ಬ್ರಹ್ಮಪುತ್ರಾ ನದಿ ಬಯಲಿನಲ್ಲಿರುವ ಈ ದೇವಾಲಯದ ಬಗೆಗೆ ಇರುವ ಅಧ್ಯಯನದ ವಿವರಗಳನ್ನು ನೀಡುತ್ತಾರೆ. ಆರಾಧನಾ ಪರಂಪರೆಯಲ್ಲಿ ಬೇರೆ ಬೇರೆ ಪಂಥಗಳು ಮಾಡಿದ ಪ್ರಭಾವ ಇದ್ದರೂ ಮೂಲದಲ್ಲಿರುವ ಅದರ ತಾತ್ವಕತೆಯ ಅರ್ಥವನ್ನು ಪ್ರತಿಪಾದಿಸುತ್ತಾರೆ. ಬುಡಕಟ್ಟು ಧರ್ಮ ಮೂಲದಲ್ಲಿರಿಸಿಕೊಂಡ ಆದಿಮದರ್ಮದ ಪ್ರಕೃತಿಯ ಪೂಜೆಯನ್ನು ಬೇರೆ ಬೇರೆ ಪ್ರದೇಶಗಳಿಗೆ ಹೋದಾಗಲೂ ಅದು ಅನುರಣನಗೊಳ್ಳುತ್ತದೆ. ಮೇಲ್ನೋಟಕ್ಕೆ ಬುಟಕಟ್ಟಿನ ಜನರು ಹೊರನೋಟಕ್ಕೆ ಬೇರೆ ಬೇರೆ ಧರ್ಮಗಳನ್ನು ಒಪ್ಪಿಕೊಂಡಿದ್ದರೂ ಮೂಲದಲ್ಲಿ ಅಪ್ಪಿಕೊಂಡಿರುವುದು ಬುಡಕಟ್ಟು ಧರ್ಮವನ್ನೇ. ಹೆಣ್ಣಿಗೆ ಇರುವ ಸ್ವಾತಂತ್ರ್ಯದ ಮುಕ್ರತೆ ಇಂದಿನ ಪರಿಭಾಷೆಯಲ್ಲಿ ‘ಲಿವಿಂಗ್ ಟುಗೆದರ್’ ಎಂದು ಕರೆದರೂ ಮೆಚ್ಚಿಗೆಯಾಗುವ ಹೆಣ್ಣು ಗಂಡು ಕಾಡಿನಲ್ಲಿ ರಾತ್ರಿ ಕಳೆದು ಬಂದು ವಿವಾಹವಾಗುವ ವರ್ಷ ಜತೆಗಿದ್ದು ವಿವಾಹವಾಗುವ ಪ್ರಸಂಗಗಳನ್ನು ವಿವರಿಸಲಾಗಿದೆ. ಒಟ್ಟು ಭೂಮಿಯನ್ನು ಮಾತ್ರವಲ್ಲ ಬದುಕನ್ನು ಹೆಣ್ಣಿನ ನೆಲೆಯಿಂದಲೇ ಕಟ್ಟಿಕೊಳ್ಳುವ ಬುಡಕಟ್ಟು ಸಂಸ್ಕøತಿಯನ್ನು ವಿಶ್ಲೇಷಿಸುತ್ತಾರೆ. ಇಲ್ಲಿ ಸರಿ ತಪ್ಪುಗಳ ವಿಶ್ಲೇಷಣೆಗೆ ಇರುವ ಸಮುದಾಯದ ಬದುಕಿನ ಮೌಲ್ಯಗಳು ಮುಖ್ಯವೆನಿಸುತ್ತವೆ. ಮತೃಮೂಲ ಸಮುದಾಯದ ಮೂಲಬೇರುಗಳನ್ನು ತಡಕಾಡುತ್ತಾ ಅದಕ್ಕೆ ರೂಪಕದಂತಿರುವ ಇಮಾ ಮಾರುಕಟ್ಟೆಯ ಬಗೆಗಿನ ವಿವರಣೆಗಳು ಸ್ವತಂತ್ರ್ಯವಾಗಿ ಬದುಕುವ ಸ್ತ್ರೀಯರ ಸ್ವಾಯತ್ತತೆಯನ್ನು ನಿರೂಪಿಸುತ್ತದೆ. ಹೆಣ್ಣಿಗಿರುವ ಲೈಂಗಿಕ ಸ್ವಾತಂತ್ರ್ಯದಿಂದ ದೌರ್ಜನ್ಯದ ಪ್ರಕರಣಗಳಿಲ್ಲ ಎಂಬ ಸೂಕ್ಷ್ಮ ದಾಖಲಾಗಿದೆ. ಆರ್ಥಿಕವಾಗಿಯೂ ಸ್ವತಂತ್ರರಾಗಿರುವುದಲ್ಲದೆ, ಸಂಸಾರವನ್ನು ಕಷ್ಟ ಪಟ್ಟು ದುಡಿದು ಸಾಕುವ ‘ಮಣಿಪುರದ ಮಹಿಳಾ ಶಕ್ತಿ’ಯ ಬೇರೆ ಬೇರೆ ಆಯಾಮಗಳ ವಿವರಣೆಗಳಿವೆ. ವಾಸ್ತವದ ನೂರು ಪರಶ್ನೆಗಳಿವೆ. ಉತ್ತರದ ಹುಡುಕಾಟವಿದೆ. ‘ಎಮಾ ಮಾರ್ಕೆಟ್’ ಬಗ್ಗೆ ನಿರೂಪಿಸುತ್ತಾ ‘ಎಮಾ’ ಎಂದರೆ ತಾಯಿ ಎಂಬ ವಿವರಣೆ ನೀಡುತ್ತಾ ಇಡೀ ಸಮುದಾಯದ ತಾಯ್ತನದ ಭಾವವನ್ನು ನಿರೂಪಿಸುತ್ತಾರೆ. ಹೆಣ್ಣಿನ ನೆಲೆಯಿಂದ ನೆಲವನ್ನು ಪ್ರೀತಿಸಿ ಬದುಕನ್ನು ಕಟ್ಟಿದ ಸಮುದಾಯಗಳು ಬದುಕಿನ ಪ್ರೀತಿಯನ್ನು ಹಂಚಿದ ಸ್ವರೂಪ ಆಚರಣೆ, ಆರಾಧನೆಗಳಲ್ಲೂ ಪ್ರಕಟಗೊಂಡಿವೆ.
ಸಂಸ್ಕøತಿಯ ಮುಖ್ಯಭಾಗವಾಗಿರುವ ಆಹಾರ ಸಂಸ್ಕøತಿಯ ಬಗೆಗೆ ಸಾಂದರ್ಭಿಕ ವಿವರಣೆಗಳು ಲಭ್ಯ. ನಾಗಾಲ್ಯಾಂಡ್, ಮಿಜೋರಾಂ ರಾಜ್ಯಗಳ ಜನರು ದಟ್ಟವಾದ ಕಾಡಿದ್ದರೂ ಪೂರ್ವಜರು ಒಂದೂ ಪ್ರಾಣಿಯೂ ಬಿಡದೆ ಇರುವುದರಿಂದ ಕಾಡುಪ್ರಾಣಿಗಳ ಅಲಭ್ಯತೆ ಮತ್ತು ಲಭ್ಯವಾಗಿರುವ ಪ್ರಾಣಿಗಳನ್ನು ಮಾಂಸಹಾರಿಗಳು ತಿನ್ನುವ ಉಲ್ಲೇಖಗಳ ಕುತೂಹಲ ಹುಟ್ಟಿಸುತ್ತವೆ. ಕಾಡು ಮತ್ತು ನಾಡುಗಳ ಮಧ್ಯೆ ಅಭೇಧ್ಯ ಪರಿಕಲ್ಪನೆಗಳ ನಡುವೆ ಬದುಕಿನ ಅಭದ್ರತೆಯೊಂದಿಗೆ ಕಟ್ಟಿಕೊಂಡ ಲೋಕದೃಷ್ಟಿಗಳೂ ಮುಖ್ಯ.

ವರ್ತಮಾನದ ಬಕ್ಕಟ್ಟುಗಳ ಮೂರು ಪ್ರಶ್ನೆಗಳಿಗೆ ಪ್ರವಾಸದ ಅನುಭವಗಳಿಂದ ಸೂಕ್ಷ್ಮ ಒಳನೋಟಗಳಿಂದ ಉತ್ತರವಿದೆ. ಹೆಣ್ಣಿನ ನೋಟದ ಗ್ರಹಿಕೆಯ ಲೋಕ ದೃಷ್ಟಿ ಮತ್ತು ಸೂಕ್ಷ್ಮ ಗ್ರಹಿಕೆಗಳು ಸೆಳೆಮಿಂಚಿನಂತೆ ದಾಖಲೆಯೊಂದಿಗೆ ಹೊಸತನ್ನು ಅರಿಯುವ ಪ್ರಯತ್ನವೂ ಆಗಿದೆ. ತಮ್ಮ ಪತಿ ಮಾಜಿ ಸೈನಿಕ ಸಂಘಟಕರಾದ ಎಸ್. ಆರ್. ಹೆಗಡೆಯವರ ಧೈರ್ಯ ಮತ್ತು ಸಾಹಸದ ಬದುಕಿನ ಪ್ರವಾಸದ ನೆನಪಿನ ಸ್ಮಾರಕವಾಗಿ ಈ ಪ್ರವಾಸ ಕಥನವನ್ನು ಕಟ್ಟಿಕೊಟ್ಟಿದ್ದಾರೆ. ನಿಜದ ಅರ್ಥದಲ್ಲಿ ಬದುಕಿನ ಪಯಣದಲ್ಲಿ ಸಾಹಸ ಮತ್ತು ಕುತೂಹಲಗಳು ನಮ್ಮನ್ನು ಹೊಸ ಹೊಳಹಿನೆಡೆಗೆ ಒಯ್ಯುತ್ತದೆ. ಪ್ರವಾಸದ ಕೃತಿಯೊಂದು ಸಂಸ್ಕøತಿಯ ಶೋಧ ನಡೆಸುತ್ತಾ ಗಂಡು ಹೆಣ್ಣಿನ ತಾರತಮ್ಯಕ್ಕೆ ಉತ್ತರವಾಗಿ ನೆಲದ ಶೋಧವನ್ನು ನಾಡಿಮಿಡಿತದಂತೆ ಮಿಡಿದು ನಿಜದ ಅರ್ಥದಲ್ಲಿ ಕಾಣುವ ಕಾಣ್ಕಿಯೇ ಅಯಾಚಿತವಾಗಿ ಸಾಹಿತ್ಯದ ಓದಿನ ರಸಾನೂಭೂತಿಯನ್ನು ನೀಡುತ್ತದೆ. ಒಂದಿಷ್ಟು ಹಿಡಿ ಮಣ್ಣಿನ ಪರಿಮಳದ ಈ ಕೃತಿ ರಚನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡ ಇಂದಿರಾ ಹೆಗ್ಗಡೆಯವರಿಗೆ ಅಭಿನಂದನೆಗಳು.

ಜ್ಯೋತಿ ಚೇಳಾರು


.


 

No comments:

Post a Comment