Friday, April 17, 2015

ಕಡಲ ಕಿನಾರೆ ಶೌಚಾಲಯವೆ?




ಮಂಗಳೂರು ತಾಲೂಕಿನ ಸುರತ್ಕಲ್ ಮತ್ತು ಹೊಸಬೆಟ್ಟು ಭಾಗದಲ್ಲಿ ಸುಂದರ ಕಡಲ ಕಿನಾರೆ ಇದೆ. ಇಲ್ಲಿಯದು ಪ್ರಶಾಂತ ವಾತಾವರಣ.  ಮುಕ್ಕ ಶ್ರೀನಿವಾಸ ಕಾಲೇಜು, ಸರತ್ಕಕಲ್ ಎನ್. ಇ. ಟಿ .ಕೆ. ಕಾಲೇಜುಗಳಿಂದ ವಿದ್ಯಾರ್ಥಿಗಳು ಈ ಕಡಲ ತೀರದಲ್ಲಿ ವಿಹಾರಕ್ಕೆ ಬರುತ್ತಾರೆ. ಕೆಲವು ಪ್ರವಾಸಿಗರೂ ಈ ತೀರದ ಸೌಂದರ್ಯವನ್ನು ಕಂಡು ಆನಂದಿÀಸಲು ಬರುತ್ತಾರೆ. ಈ ದಾರಿಯ ಮುಂಜಾನೆ ನಡಿಗೆ ಅನೇಕ ಹಿರಿಕಿರಿಯರಿಗೆ ಮುದ ನೀಡುತ್ತದೆ. ಮಕ್ಕಳು ಕಡಲಮರಳಿನೊಂದಿಗೆ ಆಟವಾಡುವುದರಲ್ಲಿ ಬಹಳ ಸಂತೋಷಪಡುತ್ತಾರೆ. ಆದರೆ ಅಲ್ಲಿಯೇ ಮರಳಮೇಲೆ ಕುಳಿತು ಅನೇಕ ಪುರುಷರು ಯಾವ ಮುಜಗರವೂ ಇಲ್ಲದೆ ಬಹಿರ್ದೆಸೆಯಲ್ಲಿ ನಿರತರಾಗಿರುತ್ತಾರೆ. ಮಹಿಳೆಯರು ಹೀಗೆ ಕುಳಿತ ಬೆತ್ತಲೆ ಮಂದಿಯನ್ನು ನೋಡಿ ಮುಂಜಾವ ನಡಿಗೆಯನ್ನು ಸ್ಥಗಿತ ಗೊಳಿಸಿ ಹಿಂತಿರುಗ ಬೇಕಾಗುತ್ತದೆ. ಇತ್ತೀಚೆಗೆ ಅಖಿಲ ಕರ್ನಾಟಕ ಲೇಖಕಿಯರ ಸಂಘದ ಮಹಿಳೆಯರು ಈ ಭಾಗದಲ್ಲಿ ಸಮುದ್ರ ನೋಡಲು ಬಂದವರು ಮುಜುಗರಪಟ್ಟುಕೊಳ್ಳಬೇಕಾಯಿತು. 

ಸ್ಥಳೀಯರ ಪ್ರಕಾರ ಈ ರೀತಿ ಕಡಲ ಮರಳಮೇಲೆ ಬಹಿರ್ದೆಸೆಗೆ ಕುಳಿತುಕೊಳ್ಳುವವರು ವಲಸೆ ಕಾರ್ಮಿಕರು. ಈ ಭಾಗದಲ್ಲಿ ವಲಸೆ ಕಾರ್ಮಿಕರಿಗಾಗಿ ಮನೆ ಬಾಡಿಗೆ ನೀಡುವ ಮನೆ ಮಾಲಿಕರು ಅವರಿಗೆ ಪಾಯಿಖಾನೆಯ ಸೌಲಭ್ಯವನ್ನು ನೀಡುವುದಿಲ್ಲ. ಕಾರ್ಮಿಕ ಮಹಿಳೆಯರು ಮುಂಜಾನೆ ನಸುಕಿನಲ್ಲಿ ಎದ್ದು ಬಿಂದಿಗೆ ಹಿಡಿದು ಮರೆಹುಡುಕಿ ಹೋಗುತ್ತಾರೆ. ಪುರುಷರು ಅಂಜದೆ ಅಳುಕದೆ ತೆರೆಗಳ ಮುಂದೆ ಬೆತ್ತಲೆ ಕುಳಿತಿರುತ್ತಾರೆ. ಇದರಿಂದಾಗಿ ಆ ಪರಿಸರ ಹಾಳಾಗುತ್ತಿದೆ. ಇಷ್ಟು ಮಾತ್ರವಲ್ಲದೆ ಕೆಲವು ಮನೆಗಳವರು ಮನೆಯ ಕಸವನ್ನು ಪ್ಲಾಸ್ಟಿಕ್ ಚೀಲಕ್ಕೆ ಹಾಕಿ ಸಮುದ್ರಕ್ಕೆ ಎಸೆಯುತ್ತಾರೆ. 

 ಈ ಭಾಗÀದ ಕಡಲ ಕಿನಾರೆಯ ಪರಿಸರದಲ್ಲಿ ಅನೇಕ ಮೀನುಗಾರರು ಮುಂಗೋಳಿ ಕೂಗಿದಾಗ ನಾಡ ದೋಣಿಯಲ್ಲಿ ಮೀನು ಹಿಡಿಯಲು ಕಡಲಿಗೆ ಹೋಗುತ್ತಾರೆ. ಅವರ ಬಂಧು ಮಿತ್ರರು ಕಡಲಿಗೆ ಹೋದ ಮೀನುಗಾರರ ನಾಡ ದೋಣಿಯನ್ನು ಕಾಯುತ್ತಾ ನಿಂತಿರುತ್ತಾರೆ.  ಮರಳುವ ದೋಣಿಗಳನ್ನು ದಡಕ್ಕೆ ಎಳೆಯುವ ಇವರು, ಹಿಡಿದ ಮೀನನ್ನು ಅದೇ ಸ್ಥಳದಲ್ಲಿ ಬಟವಾಡೆ ಮಾಡುತ್ತಾರೆ. 


ಉತ್ತರ ಕರ್ನಾಟಕದಿಂದ ಬದುಕು ಅರಸುತ್ತಾ ಬಂದ ವಲಸೆ ಬಂದ ಕಾರ್ಮಿಕರಿಂದ ಆಗುವ ಈ ಮುಜುಗರವನ್ನು ಬಾಡಿಗೆಗೆ ನೀಡುವ ಮನೆ ಮಾಲಿಕರು ತಪ್ಪಿಸಬೇಕು. ಅಥವಾ ಮಂಗಳೂರಿನ ನಗರಪಾಲಿಕೆಯ ಉಪಕೇಂದ್ರ ಆದ  ಸುರತ್ಕಲ್ ನಗರಪಾಲಿಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು. ಕಡಲ ದಡದಲ್ಲಿ ಸಾರ್ವಜನಿಕ ಶೌಚಾಲಯ (ಖesಣ ಡಿoom)ನಿರ್ಮಿಸಬೇಕು. ಈ ಭಾಗದಲ್ಲಿ ಗಾರ್ಡ್‍ಗಳ ಅಗತ್ಯವೂ ಇದೆ. 

ವಲಸೆ ಕಾರ್ಮಿಕರ ಬಯಲು ಪಾಯಿಖಾನೆಯಾದ ಕಡಲ ತೀರದಲ್ಲಿ ನೆಲೆಸುವ ಸ್ಥಳೀಯರು ಮತ್ತು ಮೀನುಗಾರರು ಯಾವಾಗ ಸ್ಪೋಟಗೊಳ್ಳುವರೋ ಹೇಳಲಾಗದು. ಅವರಲ್ಲಿ ಈ ವಿಷಯದಲ್ಲಿ ಅಸಹನೆ ಮನೆ ಮಾಡಿದೆ. 

ಇಲ್ಲಿಯ ಕಾರ್ಮಿಕರಿಗೆ ಒಳ್ಳೆಯ ಸಂಬಳ ಸಿಗುತ್ತದೆ. ಹೀಗಾಗಿ ಬಾಡಿಗೆ ನೀಡಲು ಅವರು ಸಿದ್ಧರಿರುತ್ತಾರೆ. ಆದರೆ ಒಂದು ಕೋಣೆ ಕಟ್ಟಿ ಬಾಡಿಗೆ ನೀಡಿ ಹಣ ಮಾಡಲಿಚ್ಚಿಸುವ ಮಾಲಿಕರು ಶೌಚಾಲಯ ಮಾಡಿದರೆ ಹೆಚ್ಚಿನ ಲಾಭ ಬಾರದು ಎಂಬ ಲೆಕ್ಕಾಚಾರದಲ್ಲಿ ಇರುತ್ತಾರೆ. 

ಹೀಗಾಗಿ ಸಂಬಂಧ ಪಟ್ಟವರು ಈ ಕೂಡಲೇ ಸೂಕ್ತ ಕ್ರಮಜರುಗಿಸಬೇಕೆಂದು ಸ್ಥಳೀಯರ ಪರವಾಗಿ ಆಗ್ರಹಿಸುತ್ತೇನೆ. 


No comments:

Post a Comment