Sunday, March 29, 2015

ಹೊಸಹಳ್ಳಿಯಿಂದ ಮಲ್ಲೇಶ್ವರಂಗೆ ಬಂದ 75 ಸಂಖ್ಯೆ ಬಸ್ಸಿನ ಕಥೆ


ಬಹುಷಃ 1980 ಇಸವಿಯಲ್ಲಿ ಇದು ನಡೆದುದು.  ಅಸ್ಸಾಂನಲ್ಲಿ ಸೈನ್ಯದಲ್ಲಿ ಇದ್ದ ಸೀತಾರಾಮ ಹೆಗ್ಡೆಯವರು ಸೈನ್ಯ ತೊರೆದು ಒಂದೆರಡು ತಿಂಗಳು ಮಂಗಳೂರಲ್ಲಿ ಇದ್ದು ಬೆಂಗಳೂರಿನ ಬಿ.ಎಚ್ ಇ.ಎಲ್ ನಲ್ಲಿ ನೌಕರಿ ಪಡೆದರು. ನಾವು ಬೆಂಗಳೂರಿನ ವಿಜಯನಗರದಲ್ಲಿ ನೆಲೆಯಾದೆವು. ನಮ್ಮ ಮಗಳು ಸರಿತಾ 4ನೆಯ ತರಗತಿ ಓದುತ್ತಿದ್ದು ಮಗ ಒಂದನೆಯ ತರಗತಿಯಲ್ಲಿ ಓದುತ್ತಿದ್ದ. ಕೇಂದ್ರೀಯ ವಿದ್ಯಾಲಯದ ವಿದ್ಯಾರ್ಥಿಗಳು ಅವರು. ಕೇಂದ್ರೀಯ ವಿದ್ಯಾಲಯ ಇದ್ದುದು ಮಲ್ಲೇಶ್ವರಂ 18ನೆಯ ಅಡ್ಡ ರಸ್ತೆಯಲ್ಲಿ. ವಿಜಯನಗರದ ಪಿ.ಡಬ್ಲು.ಡಿ ವಸತಿಗೃಹದ ಕೆಲವು ಮಕ್ಕಳು ಮಲ್ಲೇಶ್ವರದ 18ನೇ ಅಡ್ಡ ರಸ್ತೆಯಲ್ಲಿ ಇರುವ ಕೇಂದ್ರೀಯ ಶಾಲೆಯಲ್ಲಿ ಓದುತ್ತಿದ್ದರು.  ಆಗ ವಿಜಯನಗರದಿಂದ ಮಲ್ಲೇಶ್ವರಂಗೆ ನೇರ ಬಸ್ ಸಂಚಾರ ಇರಲಿಲ್ಲ. ವಿದ್ಯಾರ್ಥಿಗಳು ವಿಜಯಗರದಿಂದ ಮೆಜಿಸ್ಟಿಕ್ ಬಸ್ ನಿಲ್ದಾಣದಲ್ಲಿ ಇಳಿದು ಅಲ್ಲಿ ಆಗ ಸಾಯದೇ ಒದ್ದಾಡುತ್ತಿದ್ದ ಧರ್ಮಾಂಬುಧಿ ಕೆರೆಯ ಮತ್ತೊಂದು ಬದಿಗೆ ನಡೆದು ಹೋಗಿ, ಬಸ್ ಹಿಡಿದು ಮಲ್ಲೇಶ್ವರಂ ತಲುಪಬೇಕಿತ್ತು. ಮರಳಿ ಬರುವಾಗಲೂ ಮೆಜಿಸ್ಟಿಕ್ ನಲ್ಲಿ ಇಳಿದು ಧರ್ಮಾಂಬುಧಿ ಕೆರೆಗೆ ಅರ್ಧ ಸುತ್ತು ಹಾಕಿ ಪಾರ್ಕ್ ಬಳಿಯ ವಿಜಯನಗರ ಬಸ್ ನಿಲ್ದಾಣದಲ್ಲಿ ಬಸ್ಸು ಹತ್ತಿ ವಿಜಯನಗರ ತಲುಪುತ್ತಿದ್ದರು. ಬಸ್ಸು ಕಿಕ್ಕಿರಿದು  ತುಂಬುತ್ತಿದ್ದು  ಐದು ವರ್ಷದ ನನ್ನ ತುಂಟ ಮಗ ಶರತ್ ಹಿರಿಯರ ಕಾಲಡಿ ತೂರುತ್ತಾ ಅಡ್ಡ ಬಂದ ತೊಡೆಗಳಿಗೆ ಪುಟ್ಟ ಬಾಯಿಯಿಂದ ಕಚ್ಚುತ್ತಾ ಜಾಗ ಬಿಡಿಸಿಕೊಂಡು ಸ್ಥಳವಾಕಾಶ ಮಾಡಿಕೊಳ್ಳುತ್ತಿದ್ದ. “ ಕಚ್ಚಿಸಿಕೊಂಡವರು ಸುಮ್ಮನೆ ಬಿಡುತ್ತಾರಾ ? “ ಎಂದು ತುಂಟನನ್ನು ಕೇಳಿದರೆ “ ಅವರು ಬಗ್ಗಿ ನೋಡುವ ಮೊದಲು ನಾನು ಮುಂದೆ ಸಾಗುತ್ತಿದ್ದೆ” ಎನ್ನುತ್ತಿದ್ದ. 
ಒಮ್ಮೆ ಮಲ್ಲೇಶ್ವರಂನಿಂದ ಬಸ್ಸು ಹೊರಟು ಬರುವಾಗ ಮಾರ್ಗದಲ್ಲಿ ಮಗಳು ಸರಿತಾಳ ಊಟದ ಡಬ್ಬಿ ರಸ್ತೆಗೆ ಉರುಳುತ್ತದೆ. ಆಕೆ ಬಸ್ಸು ನಿಲ್ಲಿಸಿ ಡಬ್ಬಿ ಪಡೆಯಲು ಬಸ್ಸಿನಿಂದ ಇಳಿಯುತ್ತಾಳೆ, ಆದರೆ ಬಸ್ಸು ಅವಳಿಗಾಗಿ ಕಾಯದೆ ಮುಂದೆ ಚಲಿಸುತ್ತದೆ. ಅಷ್ಟರಲ್ಲಿ ಒಂದನೆಯ ತರಗತಿ ಓದುತ್ತಿದ್ದ ಮಗ ಶರತ್ ಗೆ ಅಕ್ಕ ಬಸ್ಸಿನಿಂದ ಇಳಿದ ವಿಚಾರ ತಿಳಿಯುತ್ತದೆ. ಗಾಬರಿಯಿಂದ ಬಸ್ಸು ನಿಲ್ಲಿಸಿ ಇಳಿಯುತ್ತಾನೆ. ಇತ್ತ ಓಡಿ ಬಂದ ಸರಿತಾ ಬಸ್ಸು ಹತ್ತಿ ನೋಡಿದರೆ ತಮ್ಮ ಆಗಲೇ ಬಸ್ಸಿನಿಂದ ಇಳಿದು ತನ್ನನ್ನು ಹುಡುಕಿ ಹೋದುದು ತಿಳಿಯುತ್ತದೆ. 3ನೆಯ ತರಗತಿಯ ಹುಡುಗಿ ಅಳುತ್ತಾ ಒಂದನೆಯ ತರಗತಿಯ ತಮ್ಮನನ್ನು ಹುಡುಕಿ ಮಲ್ಲೆಶ್ವರಂ ಮಾರ್ಗವಾಗಿ ನಡೆಯುತ್ತಾಳೆ. ಆಗ  ಅವಳಿಗೆದುರಾಗಿ ಬಂದ ಅಟೋ ಅವಳ ಮುಂದೆ ನಿಲ್ಲುತ್ತದೆ. ಆ ಅಟೋದಲ್ಲಿ ಅವಳ ತಮ್ಮ ಶರತ್ ಕುಳಿತಿದ್ದ. ಅಕ್ಕನನ್ನು ಕುಡುಕುತ್ತಾ ಅವರು ನಿಧಾನವಾಗಿ ಬರುತ್ತಿದ್ದರು.  ಅಟೋದಲ್ಲಿ ಅಜ್ಜ (ಸರಿತಾಳ ಭಾಷೆಯಲ್ಲಿ) ಕುಳಿತಿದ್ದು ಆತ ಸರಿತಾಳನ್ನು ಹತ್ತಿಸಿಕೊಂಡು “ನಿಮ್ಮನ್ನು ಎಲ್ಲಿಗೆ ಬಿಡಬೇಕು ಎಂದು ಕೇಳುತ್ತಾರೆ.” ಸರಿತಾ ನಮ್ಮನ್ನು ಮೆಜಿಸ್ಟಿಕ್ ನಲ್ಲಿ ಬಿಡಿ ಅಲ್ಲಿಂದ ನಾವು ಹೋಗುತ್ತೇವೆ. ಎನ್ನುತ್ತಾಳೆ. ಮೆಜಿಸ್ಟಿಕ್ನಲ್ಲಿ ಇಳಿದರೆ ಅಟೋರಿಕ್ಷಾ ಬಾಡಿಗೆ ಕೊಡಲು ಇವಳಲ್ಲಿ ಹಣ ಇಲ್ಲ. ಅಜ್ಜ  ಹಣ ನೀಡಲು ಕೈನೀಡಿದಾಗ  ರಿಕ್ಷಾದ ಡ್ರೈವರ್ ನಿರಾಕರಿಸುತ್ತಾನೆ. ಮಕ್ಕಳು ಮನೆಗೆ ಬಂದು ನಡೆದ ಕಥೆ ಹೇಳಿದಾಗ ಗಾಬರಿ ಹಾಗೂ ಅಚ್ಚರಿ ನಮಗೆ. ಆ ಇಬ್ಬರೂ ಅಪರಿಚಿತ ಪುಣ್ಯಾತ್ಮರನ್ನು ಮರೆಯಲಾಗದು. ಈ ಬೆಂಗಳೂರಲ್ಲಿಯೂ ಒಳ್ಳೆಯವರು ಅನೇಕರು ಇದ್ದಾರೆ.!

ಈ ಘಟನೆಯಿಂದ ವಿಚಲಿತಳಾದ ನಾನು ವಿಜಯನಗರದಿಂದ ಮಲ್ಲೇಶ್ವರಂ ಕೇಂದ್ರೀಯ ವಿದ್ಯಾಲಯಕ್ಕೆ ಹೋಗುವ ವಿದ್ಯಾರ್ಥಿಗಳಿಗೆ ವಿಶೇಷ ಬಸ್ ವ್ಯವಸ್ಥೆಗೆ ಆರ್. ಪಿ. ಸಿ. ಲೇ ಔಟ್ ಡಿಪೋಗೆ ಬೇಡಿಕೆ ಇಟ್ಟೆ. ಬಹಳ ಪ್ರಯತ್ನದ ಫಲವಾಗಿ (ಆಗ ಮಲ್ಲೆಶ್ವರಂಗೆ ಪ್ರಯಾಣಿಸುವವರ ಸಂಖ್ಯೆ ಕಡಿಮೆ ಇತ್ತು) ಶಾಲಾ ಬಸ್ಸು ಬೆಳಿಗ್ಗೆ ಮತ್ತು ಸಂಜೆ ಮಲ್ಲೆಶ್ವರಂಗೆ ಹೋಗಲಾರಂಭಿಸಿತು.  ಆದರೆ ಕೆಲವು ಬಾರಿ ಬಸ್ಸು ಬರುತ್ತಿರಲಿಲ್ಲ.   ಎರಡು ಬಾರಿ ವಿದ್ಯಾರ್ಥಿಗಳನ್ನು ಡಿಪೋಗೆ ಜೊತೆಗೊಯ್ದು ಧರಣ ಮಾಡಿದೆ. ಇದರಿಂದಾಗಿ ಮಕ್ಕಳು ಶಾಲೆಗೆ ತಡವಾಗಿ ಹೋಗಬೇಕಾಗಿ ಬಂತು.  ಕಾರಣ ಕೊಡಲು ನಾನೇ ಕೆಂದ್ರೀಯ ವಿದ್ಯಾಲಯಕ್ಕೆ ಅದೇ ಬಸ್ಸಿನಲ್ಲಿ ಪ್ರಯಾಣಿಸಿದ್ದು ಇದೆ. ಇದೇ ಬಸ್ಸು ಮುಂದೆ 75 ಅಂಕಿ ಹಾಕಿ ಸಾರ್ವಜನಿಕರಿಗಾಗಿ ಓಡಲಾರಂಭಿಸಿತು.


No comments:

Post a Comment