Showing posts with label ಶ್ರೀ ಲಂಕಾ. Show all posts
Showing posts with label ಶ್ರೀ ಲಂಕಾ. Show all posts

Tuesday, August 25, 2015

ರಾವಣನ ಕನಕ ಲಂಕೆಯಲ್ಲಿ ಒಕ್ಕೆಲಕಲೆ ಪೊಂಜೊವು..... ಭಾಗ 1



“ಬೆಂಗಳೂರು ಬಂಟರ ಸಂಘದ ಮಹಿಳಾ ವಿಭಾಗದವರು ಶ್ರೀ ಲಂಕಾ ಪ್ರವಾಸಕ್ಕೆ ಹೋಗುತ್ತಾ ಇದ್ದೇವೆ, ನೀವು ಬರುತ್ತಿರಾ ಇಂದ್ರಕ್ಕ” ಎಂದು ಮಹಿಳಾ ವಿಭಾಗದ ಅಧ್ಯಕ್ಷೆ ಸರ್ವಾಣಿ ರೈ ನನ್ನನ್ನು ಕೇಳಿದರು.  “ಎಂತ ಇಂದ್ರಕ್ಕ ? ಲಂಕೆ ನಮ್ಮ ಊರಿನಂತಲ್ವ ಮಾರಾಯ್ರೆ? ಲಂಕೆಗೆ ಯಾಕೆ ಹೋಗುವುದು? ಅಲ್ಲೇನಿದೆ ನೋಡಲು?’’ ಎನ್ನುವ ಸಸಾರದ ಮಾತು ಗಟ್ಟದ ಕೆಳಗಿನವರದ್ದು. “ಅಲ್ಲ ಇಂದಿರಾ ಹೆಗ್ಗಡೆಯವರೇ, ನೀವು ಅಮೆರಿಕ ಅಥವಾ ನಿಮ್ಮ ಮಗ ಇರುವ ಆಸ್ಟ್ರೇಲಿಯಕ್ಕೆ ಹೋಗುವುದು ಬಿಟ್ಟು ಲಂಕಾಕ್ಕೆ ಹೋಗುವುದಾ?” ಎಂಬ ಆಕ್ಷೇಪಣಾ ನುಡಿ ಗಟ್ಟದ ಮೇಲಿನವರದ್ದು. “ಇಲ್ಲ ಮಾರಾಯ್ರೆ. ನನಗೆ ರಾವಣನ ಲಂಕೆಯನ್ನು ನೋಡುವಾಸೆ; ಸೀತೆಯ ಅಶೋಕವನದಲ್ಲಿ ಕೆಲವು ನಿಮಿಷಗಳಾದರೂ ಕೂರುವಾಸೆ; ಬುದ್ಧನಿಂದ ಪ್ರಭಾವಿತರಾದವರನ್ನು ಕಾಣುವಾಸೆ. ಬುದ್ದನ ಪುರಾತತ್ವ ನೆಲೆಗಳಲ್ಲಿ ನಡೆದಾಡುವಾಸೆ.” ಎಂದು ನನ್ನ ಆಶೆಯನ್ನೆಲ್ಲ ಬಿಚ್ಚಿಟ್ಟೆ. ನನ್ನ ಗಂಡನ ಸ್ವಭಾವವನ್ನು “ಗುತ್ತಿನಿಂದ ಸೈನಿಕ ಜಗತ್ತಿಗೆ’ ಕೃತಿಯಲ್ಲಿ ವಿವರವಾಗಿ ವರ್ಣಿಸಿದ್ದೆ. ಹೀಗಾಗಿ  ಈಗ “ನೀನು ಯಾರ ಜತೆಯಾದರೂ ಹೋಗು ಮಾರಾಯ್ತಿ. ನಾನು ಅಡ್ಡ ಬರುವುದಿಲ್ಲ. ನನ್ನನ್ನು ಮಾತ್ರ ಕರೆಯಬೇಡ.” ಎಂದಾಗ ನಾನೂ ಸಂತೋಷದಿಂದಲೇ “ಮಹಿಳಾ ಪ್ರವಾಸ ಕೂಟ’ದಲ್ಲಿ 38 ಮಹಿಳೆಯರೊಂದಿಗೆ 39ನೆಯವಳಾಗಿ ಶ್ರೀಲಂಕಾ ವಿಮಾನ ಹತ್ತಿದೆ. ನನ್ನ ಮೊದಲ ವಿದೇಶ ಪ್ರಯಾಣವದು. ಲಂಕೆಯಲ್ಲಿ ಗಮ್ಮತ್ತು ಮಾಡುವಾಗ ತಿಳಿಯಿತು- ಗಂಡಂದಿರನ್ನು ಊರಲ್ಲಿ ಬಿಟ್ಟು ಹೀಗೆ ತಿರುಗಾಡುವುದೆಂದರೆ ಅದರ ಮಜಾವೇ ಬೇರೆ ಎಂದು. ಗಂಡ ಕೂರು ಎಂದೆಡೆ ಕೂರುವುದು; ನಿಲ್ಲು ಎಂದೆಡೆ ನಿಲ್ಲುವುದು; ಅವನಲ್ಲಿ ಏನು ಮಾತು? ಎಂದಾಗ ಆಡಲೆತ್ತಿದ ನುಡಿಯನ್ನು ನುಂಗುವುದು. ಇಂತಹ ಯಾವ ರಿಮೋಟ್ ಕಂಟ್ರೋಲ್ ಇಲ್ಲದೆ ಮಾಡುವ ಪ್ರವಾಸದ ಅನುಭವವೇ ಬೇರೆ ಎಂದು. ನಮ್ಮದು ‘ಮಾತೃವಂಶೀಯ ಮಹಿಳಾ ಕೂಟ’. ಪುರುಷ ಪ್ರಧಾನ ಸಮಾಜದ ಮಾತೃವಂಶೀಯ ಮಹಿಳೆಯರು. ನಮ್ಮ ಘನ ಸರ್ಕಾರದ ಸರಕಾರಿ ಓಲ್ವೋ ಬಸ್ಸಿನಲ್ಲಿಯೂ ಕುಳಿತುಕೊಳ್ಳುವ ಸಂಭ್ರಮವನ್ನು ಅನುಭವಿಸಿಯೇ ನಾವು ಫೆಬ್ರವರಿ 3 2009ರ ನಸುಕಿನಲ್ಲಿ ದೇವನಹಳ್ಳಿ ವಿಮಾನ ನಿಲ್ದಾಣ ತಲುಪಿದ್ದು. ಮಹಿಳೆಯರಲ್ಲಿ 21 ವಯಸ್ಸಿನ ಕನ್ಯೆಯರು ಹಾಗೂ 75ವಯಸ್ಸಿನ ಆದರೆ 25ರ ಮನಸ್ಸಿನ ಚುರುಕು ಮಹಿಳೆಯರು ಇದ್ದರು. ಎಲ್ಲರಲ್ಲೂ ಜೀವನೋತ್ಸಾಹ ಇತ್ತು.
ನಮ್ಮ ಪ್ರಯಾಣದ ವೇಳಾ ಪಟ್ಟಿಯಂತೆ ವಿಮಾನ ನಿಲ್ದಾಣದಲ್ಲಿ ನಮ್ಮನ್ನು ಒಬ್ಬ ಗೈಡ್ ಎದುರಾಗುತ್ತಾನೆ. ಮುಂದೆ ಅವನ ಆಣತಿಯಂತೆ ನಡೆಯಬೇಕು ಎಂಬ ಸಲಹೆ ನೀಡಿದ್ದರು. ಶ್ರೀಲಂಕಾ ವಿಮಾನ ನಿಲ್ದಾಣದಲ್ಲಿ ನಮ್ಮನ್ನು ಮೊದಲು ಎದುರ್ಗೊಂಡವನು ಧ್ಯಾನಮುದ್ರೆಯಲ್ಲಿ ಕುಳಿತ ಬೃಹತ್ತಾದ ಶಾಂತಮೂರ್ತಿ ಬುದ್ದ! ಆಹಾ! ಎಂದಿತು ಮನಸ್ಸು. ಎಂತಹ ಕೊಳಕು ಮನಸ್ಸೂ ಇಲ್ಲಿ ಭಾವ ಶುದ್ದಿಗೆ ಒಳಗಾಗಬೇಕು. ಭಾರತದಲ್ಲಿ ಜನಿಸಿ ಸಮುದ್ರ ಲಂಘಿಸಿ ಹೋದ ಏಕೈಕ ಧರ್ಮ! ಮಾನವೀಯತೆಯನ್ನು ಹೇಳಿಕೊಟ್ಟ ಧರ್ಮ.
ನಿಲ್ದಾಣದ ಹೊರಗೆ ‘ಬಂಟ್ಸ್ ಲೇಡಿಸ್’ ಎಂದು ಬರೆದ ಪೇಪರನ್ನು ತಲೆಯ ಮೇಲೆ ಹೊತ್ತು ನಿಂತಿದ್ದವನ ಬಳಿ ಹೋದೆವು. ಕಾಲೇಜಿನಿಂದ ಹೊರಬಂದು ಹೆಚ್ಚು ವರ್ಷ ಆಗಿರದ ತರುಣ. ನಮ್ಮ ಮಹಿಳಾ ಪಡೆ ಕಂಡ ಅವನ ಮುಖದಲ್ಲಿ ಒಂಚೂರು ‘ಪಸೆ’ ಇಲ್ಲ. ರೋಹಿಣಿ ಹೇಳಿದರು “ಇಂದ್ರಕ್ಕ. ಆಯೆ ನಮ್ಮ ಸೈನ್ಯ ತೂದು ಪೋಡಿದೇ ಪೋತೆ ತೋಜುಂಡು. ಅವುಲ ಒಕ್ಕೆಲಕಲ್ನ ಪೊಂಜೊವತ್ತೆ?” (ಇಂದ್ರಕ್ಕ ಆತ ನಮ್ಮನ್ನು ನೋಡಿ ಹೆದರಿಯೇ ಹೋದ. ಅದೂ ಬಂಟರ ಹೆಂಗುಸರಲ್ಲವೆ?) ಎಂದರು ನಗುತ್ತಾ. ನಾನು ಮೊದಲು ಅವನ ಬಳಿ ಹೋದೆ. ತಾನು ‘ಕನಾಲ್’ ಎಂದು ತನ್ನನು ಪರಿಚಯಿಸಿಕೊಂಡ.
ಎಲ್ಲಾ ಮಹಿಳೆಯರು ಹೊರಗೆ ಬಂದಿರಾ ಎಂದು ತನ್ನ ಅಪ್ರಬುದ್ಧ ಇಂಗ್ಲೀಷಿನಲ್ಲಿ ಮಾತನಾಡಿದ. ಈ ಬಗ್ಗೆ ಖಾತ್ರಿ ಪಡಿಸಿಕೊಳ್ಳಲು ಆತ ಒಂದು, ಎರಡು, ಮೂರು........ಎಂದು ನಮ್ಮ ತಲೆ ಲೆಕ್ಕ ಹಾಕಲಾರಂಭಿಸಿದ. ಕೆಲವರನ್ನು ಆತ ಕತ್ತೆತ್ತಿ ನೋಡಬೇಕಿತ್ತು. ಶಶಿ ಅಡಪರನ್ನು ನೋಡಲು ಕಾಲ್ಬೆರಳುಗಳ ಮೇಲೆ ನಿಂತ. ಕೊನೆಗೆ ‘ನನ್ನ ಹಿಂದೆ ಬನ್ನಿ’ ಎಂದ.
ನಮ್ಮ ಲಗ್ಗೇಜುಗಳನ್ನು ಹೊತ್ತು ಆತ ನಿಲ್ಲಿಸಿದ್ದ ಬಸ್ಸಿನ ಬಳಿ ನಾವೆಲ್ಲ ಹೋದೆವು. ಲಗ್ಗೇಜನ್ನು ಒಂದು ವ್ಯಾನ್‍ನಲ್ಲಿ ಹಾಕಿ ‘ನಿಮ್ಮ ಲಗ್ಗೇಜಲ್ಲಿ ಹಣ ಪಾಸ್ ಫೋಟ್ ಅಥವಾ ಯಾವುದೇ ಬೆಲೆಬಾಳುವ ವಸ್ತು ಇಡಬೇಡಿ ಇದ್ದರೆ ತೆಗೆಯಿರಿ’ ಎಂದ. ಅವನು ಹೇಳಿದಂತೆ ನಡೆದು ನಾವು ಬಸ್ಸು ಹತ್ತಿದೆವು. ನಮ್ಮ ಬಸ್ಸು ಅಲ್ಲಿಂದ ಹೊರಟಾಗ 12.30 ಆಗಿತ್ತು.

ಬಸ್ಸಿನಲ್ಲಿ 39 ಮಂದಿ ಮಹಿಳೆಯರು. ನಮ್ಮೊಂದಿಗೆ ಶ್ರೀಲಂಕಾದ ಒಬ್ಬ ಡ್ರೈವರ್, ಒಬ್ಬ ಸಹಾಯಕ, ಒಬ್ಬ ಗೈಡ್ _ ಈ ಮೂವರು ಪುರುಷರು. ಅವರಿಗೆ ನಮ್ಮ ಭಾಷೆ ಬಾರದು. ನಾವು ನುಡಿದದ್ದೇ ಭಾಷೆ, ಆಡಿದ್ದೇ ಮಾತು. ಪಾಪ ಗೈಡ್ ಗತಿ ಹೇಗಾಗ ಬೇಡ? ಅವನ ಪೆಚ್ಚು ಮೋರೆಯಲ್ಲಿ ಉತ್ಸಾಹ ತುಂಬಲು `ಶ್ರೀ ಲಂಕಾದ ಬಗ್ಗೆ ಏನಾದರೂ ಸ್ಥಳೀಯ ಪರಂಪರೆಯ ಕಥೆ ಇದೆಯಾ ಕನಾಲ್?’  ಎಂದೆ. ಆತನ ಮೊಗ ಮೊರದಗಲವಾಯಿತು. ಉತ್ಸಾಹದಿಂದ ಹೇಳತೊಡಗಿದ.....

Sunday, March 1, 2015

ಶ್ರೀ ಲಂಕಾದ ದಂಬುಲಾ ಗುಹಾಲಯಗಳು







 ಶ್ರೀ ಲಂಕಾ ಪ್ರವಾಸ ಯೋಜನೆ ಸಿದ್ಧವಾಯಿತು. “ನಾವು ದಂಬುಲಾ ಬೆಟ್ಟ ಹತ್ತುವುದು ಬೇಡ. ನಮ್ಮ ವಯಸ್ಸಿಗೆ ಸಾಧ್ಯ ಇಲ್ಲ.” ಎಂದು ಹೆಗ್ಗಡೆಯವರು ಸಲಹೆ ನೀಡಿದಾಗ ನಾನು ಅನಿವಾರ್ಯವಾಗಿ ಒಪ್ಪಬೇಕಾಯಿತು.

ದಂಬುಲಾ ಗುಹಾಲಯ  ಕೊಲೊಂಬೋದಿಂದ 160 ಕಿಲೋಮೀಟರ್ ದೂರ  ಶ್ರಿ ಲಂಕಾದ ದ್ವೀಪದ ನಡುಭಾಗದಲ್ಲಿ ಇದೆ. ಇದರ ರಾಕ್ ಟವರ್‍ಗಳು ಸುತ್ತಲಿನ ಭೂಮಿ ಮಟ್ಟದಿಂದ 160 ಮೀಟರ್ ಎತ್ತರದಲ್ಲಿದೆ.   ಸಮುದ್ರ ಮಟ್ಟದಿಂದ 118 ಅಡಿ ಎತ್ತರದ ಬೆಟ್ಟದ ಮೇಲಿನಿಂದ 600 ಅಡಿ ಎತ್ತರಕ್ಕೆ ಬೆಳೆದಿರುವ ಶಿಲಾ ಗುಹೆ 2000ಮೀಟರ್ ಉದ್ದ ಹಬ್ಬಿದೆ.


 ಇದರ ಜೊತೆಗೆ ಸುಮಾರು 50 ಎಕ್ರೆ ಬೆಟ್ಟಪ್ರದೇಶವನ್ನು ಆವರಿಸಿರುವ 80 ಗುಹೆಗಳಿವೆ. ರಾಜ ವಿಜಯಬಾಹು (1055-1119) ಕಾಲದ ಮಹಾವಂಶದಲ್ಲಿ ಮೊದಲ ಬಾರಿಗೆ ದಂಬುಲಾ ಗುಹೆಯನ್ನು “ಜಂಬು ಕೊಳ” ಎಂದು ಉಲ್ಲೇಖಿಸಲಾಗಿದೆ. ಜಂಬೂಕೊಳವನ್ನು ಪಾಲಿಭಾಷೆಯಲ್ಲಿ ದಂಬುಲಾ ಎನ್ನುತ್ತಿದ್ದರು. ಗುಹೆಯ ಬಂಡೆ ಶಾಸನದಲ್ಲಿ “ಸ್ವರ್ಣಗಿರಿ ಗುಹೆ” ಎಂಬ ಬರಹ ಇದೆ.



ದೂರದಿಂದ ಆಕರ್ಷಿಸುವ ಧರ್ಮ ಚಕ್ರ ಪರಿವರ್ತನಾ ಮುದ್ರೆಯಲ್ಲಿ ಕುಳಿತ ಚಿನ್ನದ ಹೊಳಪಿನ ಬುದ್ಧನ ಭೂಮತೆ ಭೂಮಿಯಿಂದ ಆಕಾಶದವರೆಗೆ ಆವರಿಸಿ ಮುಂಭಾಗದಿಂದ ದಂಬುಲಾ ಬೆಟ್ಟವನ್ನು ಮರೆಮಾಡುತ್ತದೆ. ಬುದ್ಧನ ಚಿನ್ನದ ಪ್ರತಿಮೆಯ ಎಡಕ್ಕೆ ಬಂಡೆಗಳ ಮೇಲೆ ಹೆಜ್ಜೆ ಇಟ್ಟು ಬೆಟ್ಟ ಹತ್ತುವ ಬಿಕ್ಕುಗಳ ಸಾಲು ಪ್ರತಿಮೆಗಳಿವೆ.  ಅಂದಿನ ಕಾಲದಲ್ಲಿ ಬಿಕ್ಕುಗಳು ಹೀಗೆ ಬೆಟ್ಟ ಹತ್ತಿ ಹೋಗುತ್ತಿದ್ದಿರಬೇಕು.

“ನಮ್ಮಲ್ಲಿ ಬೆಟ್ಟ ಹತ್ತುವವರು ಯಾರು?” ಹೆಗ್ಡೆಯವರು ಕೇಳಿದರು. “ ನೀವು ಟಿಕೆಟ್ ತನ್ನಿ ಸಾಧ್ಯವಾದಷ್ಟು ಹತ್ತುವೆವು. ಇಲ್ಲವಾದಲ್ಲಿ ಮರಳಿ ಬರುತ್ತೇವೆ. ಈಗಾಗಲೇ ಸಿಗುರಿಯಾ ಬಂಡೆ ನೋಡಿ ಬೆದರಿ ಮರಳಿದ್ದ ನಾವು ಇಲ್ಲಿಂದಲೂ ಕಾಲ್ಕಿತ್ತರೆ ಹೇಗೆ?” ನಾನು ಹೇಳಿದಾಗ  `ನಾನು ಹತ್ತಲಾರೆ’ ಎಂದ ಹೆಗ್ಡೆಯವರು ತಮಗೂ ಟಿಕೆಟ್ ತಂದರು. ನಾವು ಕೆಲವೇ ಮೆಟ್ಟಲು ಹತ್ತಿದೆವು. ಗಂಟುನೋವಿನಿಂದ ಬಳಲುತ್ತಿದ್ದ ಸುನಂದಾ ಸೋತು ಮೆಟ್ಟಲ ಮೇಲೆ ಕುಳಿತರು. `ಪಾಂಡವರು ಸ್ವರ್ಗಾರೋಹಣ ಮಾಡಿದ ರೀತಿ ಉಳಿಯುವವರು ಉಳಿಯಲಿ ಹತ್ತುವವರು ಹತ್ತೋಣ’ ಎಂದು ನಾವು ಮುಂದೆ ಸಾಗಿದೆವು. ಸುನಂದ ಕೂಡಾ `ನೀವು ಹೋಗಿ ನಾನು ಇಲ್ಲಿಯೇ ಇರುತ್ತೇನೆ’ ಎಂದರು. ನಾನು ನಿಧಾನವಾಗಿ ನಡೆದೆ. ಒಬ್ಬೊಬ್ಬರದ್ದು ಒಂದೊಂದು ವೇಗ. ಆದರೆ ನಮ್ಮಂತೆ ದಮ್ಮು ಬಿಡುತ್ತಾ ಬೆಟ್ಟ ಹತ್ತುವ  ಪ್ರಯಾಣಿಕರೂ ಇದ್ದರು. ನನ್ನಿಂದ ಗುಹಾ ಸಂಕೀರ್ಣಕ್ಕೆ ಹೋಗಲಾಗದು ಎಂದುಕೊಂಡೇ ದಮ್ಮು ಬಿಡುತ್ತಾ ಗುರಿ ತಲುಪಿದೆ.




ದೂರದಿಂದಲೇ ಬೆಟ್ಟದ ಮೇಲೆ ಎಮ್ಮೆಯನ್ನು ನುಂಗಿದ್ದ ಹೆಬ್ಬಾವಿನಂತೆ ಉದ್ದಕ್ಕೆ ಮಲಗಿದ್ದ ಶಿಲಾ ಬಂಡೆ ಕಾಣುತ್ತಿತ್ತು. ಅದರ ಮೇಲ್ಗಡೆಯಿಂದ ನೀರು ಜಿನುಗಿ ಕೆಳಗೆ ಪಸೆಯಾಗಿ ಹರಿಯುತ್ತಿತ್ತು.






ಬೆಟ್ಟದ ಮೇಲೆ ಪುಟ್ಟ ಪುಟ್ಟ ಅಂಗಳದಂತೆ ಸ್ವಲ್ಪ ಭಾಗ ಸಮತಟ್ಟು ಇತ್ತು. ಬೆಟ್ಟದ ಮೇಲಿನಿಂದ ಕಾಣುವ ಸುತ್ತಲಿನ ರಮಣೀಯ ಹಸಿರುಸಿರಿ ನಮ್ಮ ದಣಿದ ಜೀವಕ್ಕೆ ನವಸಂಚಲನ ಮೂಡಿಸಿತ್ತು.





 ಗುಹಾ ದ್ವಾರದ ಕಡೆಗೆ ಹೆಜ್ಜೆಯಿಟ್ಟಾಗ ಪುರಾತತ್ವ ಕಛೇರಿಯವರು ನಮಗಾಗಿ ಗೈಡ್ ಒದಗಿಸಿದರು. ನಾವು ಖರೀದಿಸುವ ಟಿಕೆಟ್ ಗೈಡನ್ನು ಒಳಗೊಂಡಿರುತ್ತದೆ. ಅವನೊಂದಿಗೆ ಗುಹಾಲಯದ ಒಳಾಂಗಣಕ್ಕೆ ಕಾಲಿಟ್ಟಾಗ ಮಹಾರಾಷ್ಟ್ರದ ಅಜಂತ ಮತ್ತು ಎಲ್ಲೋರ ಗುಹಾ ಸಂಕೀರ್ಣ ನೆನÉಪಾಯಿತು. ಕುದುರೆಯ ಲಾಳಾಕರದಲ್ಲಿ ಇರುವ ಅಜಂತಾ ಗುಹೆಗಳು ಶಿಲಾ ಶಿಖರಗಳ ಕೊರಕಲು ಭಾಗದಲ್ಲಿವೆ. ಗುಹೆಯ ಮುಂದೆ ಸ್ಥಳಾವಕಾಶ ಕಡಿಮೆ. ಶಿಲೆಗಳನ್ನೇ ಕೊರೆದು ಗುಹಾ ದೇವಾಲಯಗಳನ್ನು ಮಾಡಲಾಗಿದೆ. ಒಳಗಿನ ಶಿಲೆಗಳಲ್ಲೇ ಪ್ರತಿಮೆಗಳನ್ನು ಕೊರೆಯಲಾಗಿದೆ.  ಅಜಂತಾದ ಗುಹಾಲಯದಲ್ಲಿ ಮಾನವನ ಕೈ ಚಳಕ ಹೆಚ್ಚು. ಅಜಂತಾ ಒಂದು ಅದ್ಭುತ! ಅಜಂತಾದದಲ್ಲಿ ಮತ್ತು ಎಲ್ಲೋರದಲ್ಲಿ ಶಿಲಾ ಪರ್ವತದ ಒಳಗಿನಿಂದಲೇ ಹಿಂದೂ ಮತ್ತು ಬೌದ್ಧ ಧರ್ಮಕ್ಕೆ ಸಂಬಂಧಿಸಿದ ಶಿಲ್ಪಗಳನ್ನು ಮಾತ್ರವಲ್ಲ ಎತ್ತರದ ಚೈತ್ಯಗಳನ್ನು ಕೊರೆಯಲಾಗಿದೆ. ಗುಹೆಯ ಮುಂಭಾಗದಲ್ಲಿ ಬಹಳ ಇಕ್ಕಟ್ಟು ಸ್ಥಳ.

ದಂಬುಲಾದಲ್ಲಿ ಪ್ರಕೃತಿಯೇ ನಿರ್ಮಿಸಿದ ಗುಹಾ ಅರಮನೆ ಇದೆ. ಎತ್ತರದ, ವಿಶಾಲ ಗುಹೆಗಳಿವು. ಗುಹೆಯ ಒಳಗೆ ಆಧಾರವಾಗಿ ಕಂಬಗಳೇ ಇಲ್ಲ. ಇದು ಪ್ರಕೃತಿಯ ಅದ್ಭುತ ಕೈಚಳಕ. ಇಲ್ಲಿ ಶಿಲೆಯಿಂದ ಶಿಲ್ಪಗಳನ್ನು ಮೂಡಿಸಿದ್ದು ಕಂಡು ಬರುವುದಿಲ್ಲ. ಬೇರೆಡೆ ರಚಿಸಿ ಇಲ್ಲಿ ಪ್ರತಿಷ್ಟಾಪಿಸಿದ ಪ್ರತಿಮೆಗಳು. ಹಾಗಂತ ಗೈಡ್ ಕೂಡಾ ಹೇಳಿದ. ಪುಟ್ಟ ಪುಟ್ಟ ಸ್ಥೂಪಗಳು ಇವೆ. ಗೋಡೆಗಳ ಮೇಲೆ ಒಳಛಾವಣಿಯಲ್ಲಿ ಮುರಾಲ್ ಚಿತ್ರಕಲೆಗಳು ಕಂಗೊಳಿಸುತ್ತವೆ. ಇವುಗಳಲ್ಲಿ ಹೆಚ್ಚಿನವು ಬುದ್ಧನ ಜೀವನಕ್ಕೆ ಸಂಬಂಧಿಸಿದ ಚಿತ್ರಗಳು.




ಗುಹೆಯ ಹೊರಗೆ ಗೋಡೆ ಬಾಗಿಲು ರಚಿಸಿ ಕಮಾನು ಕಟ್ಟಿ ಸುಣ್ಣ ಬಳಿದಿದ್ದಾರೆ. ನಮ್ಮ ವಾಸದ ಮನೆಯಂತೆ ಗುಹಾ ಸಮುಚ್ಛಯದ ಹೊರನೋಟ ಇದೆ.

1991ರಲ್ಲಿ ವಿಶ್ವಪಾರಂಪರಿಕ ತಾಣವೆಂದು ಹೆಗ್ಗಳಿಗೆಗಳಿಸಿಕೊಂಡ ದಂಬುಲಾ ಗುಹಾ ಇತಿಹಾಸವನ್ನು ಕ್ರೈಸ್ತಪೂರ್ವಕ್ಕೆ ಕೊಂಡು ಹೋಗಲಾಗಿದೆ.  ಗುಹೆಗಳಲ್ಲಿ ಇತಿಹಾಸ ಪೂರ್ವದ ಮಾನವರು ನೆಲಸಿದ್ದರಬಹುದು ಎನ್ನುವುದಕ್ಕೆ ಇಲ್ಲಿ ದೊರಕಿರುವ ಸಮಾಧಿಗಳು ಅಸ್ಥಿ ಪಂಜರಗಳು ಸಾಕ್ಷಿ ನೀಡುತ್ತವೆ ಎನ್ನುತ್ತಾರೆ ಪುರಾತತ್ವ ತಜ್ಞರು. ಕ್ರಿ.ಸ್ತಪೂರ್ವದ ಕೆಲವು ಬ್ರಾಹ್ಮಿ ಲಿಪಿಯ ಕಲ್ಬರಹಗಳು ಇಲ್ಲಿ ದೊರಕಿವೆ. ಸಿಂಹಳದ ಮೊದಲ ಬೌದ್ಧ ಅರಸನಾದ ದೇವನಾಂಪ್ರಿಯ ತಿಸ್ಸನ ಕಾಲಕ್ಕಿಂತಲೂ ಹಿಂದೆ ಈ ಗುಹಾ ಸಮುಚ್ಛಯದ ಇತಿಹಾಸವನ್ನು ಗುರುತಿಸಲಾಗಿದೆ.

ಸುಮಾರು ಕ್ರಿ.ಪೂರ್ವ 2ನೆಯ ಶತಮಾನದಿಂದ ಕ್ರಿ. ಶ. 18ನೆ ಶತಮಾನದವರೆಗೆ ಈ ಗುಹೆ ಸಿಂಹಳದ ಅರಸರ ಅಧೀನ ಇತ್ತು. ಕೀರ್ತಿ ಶ್ರೀ ರಾಜಾ ಸಿಂಗೈ (ಕೀರ್ತಿ ನಿಸಾಂಕ ಮಲ್ಲ)ಸಿಂಹಳದ ಕೊನೆಯ ಅರಸ. (1747-1781 A.D) ಈತನ ಪ್ರತಿಮೆ ದಂಬುಲಾ ಗುಹೆಯಲ್ಲಿ ಇದೆ.



ಕ್ರಿಸ್ತ ಪೂರ್ವದಲ್ಲಿ ದಕ್ಷಿಣ ಭಾರತದ ಅರಸನು ಅನುರಾಧಪುರವನ್ನು ಆಕ್ರಮಿಸುತ್ತಾನೆ. ಆಗ ಅನುರಾದಪುರದ  ಅರಸನಾಗಿದ್ದ ರಾಜಾ ವಾಲಗಬಾಹು ((King Vattagamini Abhaya 103 BC and 89-77 BC  ) ದಂಬುಲಾ ಗುಹೆಯಲ್ಲಿ 12 ವರ್ಷಗಳ ಕಾಲ ತಲೆಮರೆಸಿಕೊಳ್ಳುತ್ತಾನೆ. ಆತ ಮತ್ತೆ ಅನುರಾಧಪುರವನ್ನು ಸ್ವಾಧೀನ ಪಡಿಸಿಕೊಂಡ ಮೇಲೆ ತನಗೆ ಆಸರೆ ನೀಡಿದ ಗುಹಾಲಯವನ್ನು ಬೌದ್ಧ ವಿಹಾರವನ್ನಾಗಿ ಪರಿವರ್ತಿಸುತ್ತಾನೆ. ಪ್ರಕೃತಿ ನಿರ್ಮಿತ ಗುಹೆಯ ವಿಶಾಲ ಹಜಾರಕ್ಕೆ ಗೋಡೆಗಳನ್ನು ಕಟ್ಟಿ ಮುಖ್ಯ ಐದು ಭಾಗಗಳನ್ನಾಗಿ ವಿಭಾಗಿಸುತ್ತಾನೆ. ಇಲ್ಲಿ ಬುದ್ಧನ ಪ್ರತಿಮೆಗಳನ್ನು ಸ್ಥಾಪಿಸುತ್ತಾನೆ. ಮುಂದಿನ ಅರಸರು ಬುದ್ಧನ ಜೀವನ ಚರಿತ್ರೆಗೆ ಸಂಬಂಧಿಸಿದ ಪ್ರತಿಮೆಗಳನ್ನು ಸ್ಥಾಪಿಸುತ್ತಾರೆ. ಗುಹಾಲಯದ ಮೇಲ್ಛಾವಣಿ ಸೇರಿ ವಿಶಿಷ್ಠ ಕಲಾಕೃತಿಗಳಿಂದ ಗುಹೆಯ ವೈಶಿಷ್ಟ್ಯವನ್ನು  ಹೆಚ್ಚಿಸುತ್ತಾರೆ.

ವಿಜಯಬಾಹು (1055-1110 A.D )ಕಾಲದಲ್ಲಿ ಇಲ್ಲಿ ಬುದ್ಧಬಿಕ್ಕುಗಳ ವಿಹಾರವೂ ಇತ್ತು

ಮುಂದಿನ ಅರಸರೂ ಈ ಗುಹಾ ಸಮುಚ್ಛಯದ ಮಂದಿರಗಳನ್ನು ಮತ್ತೆ ಮತ್ತೆ ಊರ್ಜಿತಗೊಳಿಸುತ್ತಾರೆ. ಅರಸ ನಿಸಾಂಕ ಮಲ್ಲ 1190ರಲ್ಲಿ 70 ಬುದ್ಧ ಪ್ರತಿಮೆಗಳನ್ನು ಸ್ಥಾಪಿಸುತ್ತಾನೆ. ಇಲ್ಲಿ ಸುಮಾರು 157 ಬುದ್ಧ ಹಾಗೂ ಬೋಧಿ ಸತ್ವನ ಪ್ರತಿಮೆಗಳಿವೆ. ಕಾನಿಷ್ಕ ಶೈಲಿಯ ಶಿಲ್ಪಗಳು ಹೆಚ್ಚಾಗಿವೆ. ಶ್ರೀ ಲಂಕಾದ 3 ಅರಸರ  ಪ್ರತಿಮೆಗಳಿವೆ.  4 ಮಂದಿ ದೇವಿ ದೇವತೆಯರು ಇದ್ದಾರೆ. ಕಾಲಾನುಕ್ರಮದಲ್ಲಿ ಈ ಗುಹೆಯ ಒಳಗೆ ವಿಷ್ಣು ಮತ್ತು ಗಣೇಶನ ಶಿಲ್ಪಗಳೂ ಪ್ರತಿಷ್ಠಾಪನೆಯಾಗಿವೆ. ನಮ್ಮ ಗೈಡ್ ಪ್ರಕಾರ ಬೌದ್ಧ ಅರಸ ಹಿಂದೂ ಹೆಣ್ಣನ್ನು ವಿವಾಹವಾದಾಗ ಅವಳ ಸಂತೋಷಕ್ಕೆ ಹಿಂದೂ ದೇವರ ಪ್ರತಿಮೆಗಳನ್ನೂ ಪ್ರತಿಷ್ಠಾಪಿಸುತ್ತಾನೆ.

ಇಲ್ಲಿಯ ಐದು ಮುಖ್ಯ ಗುಹೆಗಳನ್ನು ಸಿಂಹಳದ ಐದು ಅರಸರ ಹೆಸರಲ್ಲಿ ಗುರುತಿಸುತ್ತಾರೆ. ದೇವರಾಜ ವಿಹಾರಾಯ, ಮಹಾರಾಜ ವಿಹಾರಾಯ, ಮಹಾ ಅಲುತ ವಿಹಾರಾಯ, ಪಶ್ಚಿಮ ವಿಹಾರಾಯ ಮತ್ತು ದೆವಿನಾ ಅತುಲ ವಿಹಾರಾಯ.

5ನೆಯ ಗುಹೆಯು ಬಹಳ ವಿಶಾಲವಾಗಿದು 53.28x36.63 ಮೀಟರ್ ಇದೆ. ಬಿಕ್ಕುಗಳ ಎಸೆಂಬ್ಲಿ ಹಾಲ್ ಇದಾಗಿತ್ತು.
ಇಲ್ಲಿ ಬುದ್ಧ ಹಾಗೂ ಅವನಿಗೆ ಸಂಬಂಧಿಸಿದ ಪ್ರತಿಮೆಗಳನ್ನು ಹೆಚ್ಚಾಗಿ ಬಣ್ಣದಲ್ಲಿ ನಿರ್ಮಿಸಲಾಗಿದೆ. ಬುದ್ಧನ ಪ್ರತಿಮೆಗಳ ಜುಟ್ಟಿನಲ್ಲಿ (ಜ್ಯೋತಿ)ಬೆಂಕಿ ಉಗುಳುವಂತೆ ಇದೆ. ಅದೇಕೆ ಹಾಗೆ ಎಂದು ಗೈಡನ್ನು ವಿಚಾರಿಸಿದರೆ ಬುದ್ಧನಿಗೆ ಜ್ಞಾನೋದಯವಾದ ಸಂಕೇತ ಎಂದ. ಶಾಖ್ಯ ಮುನಿ ಬುದ್ಧನಾದುದು ಜ್ಞಾನೋದಯ ಆದ ಮೇಲೆ. ಬುದ್ಧ ಪೂರ್ವದಲ್ಲಿ ಆತ ಅವಲೋಕಿತೇಶ್ವರ. ಆದರೂ ನಾವು ಗೈಡ ಜೊತೆ ತರ್ಕ ಮಾಡಲಿಲ್ಲ.

ಪರಿನಿರ್ವಾಣ ಮುದ್ರೆಯಲ್ಲಿ ಇರುವಂತೆ ಕಾಣುವ ಬುದ್ಧನ ಕಣ್ಣುಗಳು ಅರ್ಧ ತೆರೆದಿರಬೇಕು, ತಲೆಯ ಮೇಲೆ ಜ್ಯೋತಿ ಇರಬಾರದು, ಕೈ ತೊಡೆಯ ಮೇಲೆ ಪವಡಿಸಬೇಕು, ಎರಡು ಕಾಲುಗಳ ಹೆಬ್ಬೆರಳುಗಳು ಹಿಂದು ಮುಂದು ಇರಬೇಕು-ಹೀಗೆ ವಿವರಿಸುತ್ತಾ ಹೋಗುತ್ತಾನೆ ಗೈಡ್. ಬುದ್ಧನ ಬಗ್ಗೆ ಹೆಚ್ಚಿನ ಅರಿವು ಇಲ್ಲದವರು ಮಲಗಿರುವ ಬುದ್ಧ (sleeping Buddha) ಎಂದೇ ಪರಿನಿರ್ವಾಣ ಬುದ್ಧನನ್ನು ಕರೆಯುತ್ತಾರೆ.

ಬೆಟ್ಟದ ಮೇಲಿನ ಶಿಲಾಗುಹಾ ಮಂದಿರಗಳನ್ನು `ರಂಗಿರಿ ದಂಬುಲಾ ರಾಜಮಹಾ ವಿಹರಾಯ’ ಎಂದು ಕರೆದರೆ ಕೆಳಗಿನ ಗೋಲ್ಡ್‍ನ್ ಟೆಂಪ್‍ಲ್‍ನ್ನು `ರಂಗಿರಿ ದಂಬುಲಾ ಉಯನ್‍ವಟಾ ರಾಜ ಮಹಾ ವಿಹಾರಾಯ’ ಎಂದು ಕರೆಯುತ್ತಾರೆ. ಎರಡೂ ವಿಹಾರಗಳು ಒಂದೇ ಆಡಳಿತದಲ್ಲಿದೆ.

ನಾವು ಕೆಳಗಿಳಿದು ಬರುವಾಗ ಸ್ಥಳೀಯ ಯಾತ್ರಿಗಳು ಬುದ್ಧನ ಬಗೆಗೆ ಪಾಡ್ದನ ರೀತಿಯಲ್ಲಿ ಹಾಡುತ್ತಾ ಬೆಟ್ಟ ಹತ್ತುವುದನ್ನು ಡಿ. ವಿ. ಶಿವರಾಮ ಅವರು ವೀಡಿಯೋ ಚಿತ್ರೀಕರಿಸಿಕೊಂಡರು.



ಗೋಲ್ಡ್‍ನ್ ಟೆಂಪ್‍ಲ್‍ನ ಧರ್ಮ ಚಕ್ರ ಪರಿವರ್ತನಾ ಮುದ್ರೆಯ ಬೃಹತ್ ಬುದ್ಧನ ಶಿಲ್ಪ ಬಾಯ್ದೆರೆದ ರಾಕ್ಷಸನ ತಲೆಯ ಮೇಲೆ ಕುಳಿತಂತೆ ಭಾಸವಾಗುತ್ತದೆ. ಅದು ಡ್ರೇಗನ್. ಆ ಡ್ರೇಗನ್‍ನ ನಿಡಿದಾದ ಎರಡು ಕೈಗಳು ಉದ್ದಕ್ಕೆ ಕೆಳಗಿನ ಮೆಟ್ಟಲವರೆಗೆ ತೊಡೆಯ ಮೇಲೆ ಚಾಚಿದಂತೆ ಚಾಚಿವೆ. ಎರಡು ಕೈಗಳ ನಡುವಿನ ಮೆಟ್ಟಲುಗಳನ್ನು ಹತ್ತಿ ನಾವು ಒಳಹೋಗಬೇಕು. ಅಲ್ಲಿ ಸ್ವಾಗತಕಾರಿಣಿ ಎದುರಾಗುತ್ತಾಳೆ. ಎಡಭಾಗದ ಮೆಟ್ಟಲು ಹತ್ತಿ ಹೋದರೆ ವಿಶಾಲ ಹಜಾರಕ್ಕೆ ಬರುತ್ತೇವೆ. ಇಲ್ಲಿ ಬುದ್ಧನಿಗೆ ಸಂಬಂಧಿಸಿದ ಮತ್ತು ಸಿಂಹಳದ ಇತಿಹಾಸ ಸಂಸ್ಕøತಿಗೆ ಸಂಬಂಧಿಸಿದ ಸುಂದರ ವಸ್ತು ಪ್ರದರ್ಶನಾಲಯ ಇದೆ. ಒಟ್ಟು ಎರಡು ಅಂತಸ್ತುಗಳಲ್ಲಿ ದಕ್ಷಿಣ ಭಾರತದಲ್ಲಿ ಬಳಸುವ ಅನೇಕ ಪುರಾತನ ವಸ್ತುಗಳು - ಕಲ್ಲಿನ ಅಂಡೆ, ಹಿತ್ತಾಳೆ ಮರಿಗೆ ಇತ್ಯಾದಿ ಇವೆ. ತಾಳೆಗರಿ ಗ್ರಂಥಗಳು, ಉತ್ಖನನದಲ್ಲಿ ದೊರಕಿರುವ ಬುದ್ಧನ ವಿಗ್ರಹಗಳು, ಬುದ್ಧನಿಗೆ ಸಂಬಂಧಿಸಿದ ವಿಗ್ರಹಗಳು, ಹಿಂದೂ ದೇವರ ಶಿಲ್ಪಗಳು, ಸುಂದರ ಕಲಾಕೃತಿಗಳು-ಹೀಗೆ ಅಪೂರ್ವ ಸಂಪತ್ತು ಇಲ್ಲಿ ಬಹಳ ಅಚ್ಚುಕಟ್ಟಾಗಿ ಜೋಡಣೆಯಾಗಿವೆ. ಎಲ್ಲವೂ ಸ್ವಚ್ಚ ಸುಂದರ.










Monday, June 23, 2014

ಬುದ್ಧನ ಹಲ್ಲನ್ನು ಸಿಂಹಳಕ್ಕೆ ಕೊಂಡುಹೋದ ರಾಜಕುಮಾರಿ ಹೆಮಾ ಮತ್ತು ಅವಳ ಪತಿ ದಂತ.

ಕ್ರಿ.ಶ 4ನೆಯ ಶತಮಾನದಲ್ಲಿ ಬುದ್ಧ ದಂತ ಕಳಿಂಗ ಅರಸ ಗುಹಸೇನನ ಕೈವಶವಾಗುತ್ತದೆ. ಕಳಿಂಗ ಅರಸನು ಈ ಬುದ್ಧ ದಂತವನ್ನು ಪೂಜಿಸಲು ತೊಡಗುತ್ತಾನೆ. ಇದನ್ನು ಕಂಡು ಕಳಿಂಗದ ಜನರು ‘ಗುಹಸೇನ ದೇವರಲ್ಲಿ ಶ್ರದ್ಧೆ ಇಲ್ಲದವ. ಬುದ್ಧನ ಹಲ್ಲನ್ನು ಪೂಜೆ ಮಾಡುತ್ತಾನೆ.” ಎಂದು ಕಳಿಂಗದ ಅರಸ ಪಾಂಡುಮಹಾರಾಜನಲ್ಲಿ ದೂರುತ್ತಾರೆ. ಬುದ್ಧ ನಿರೀಶ್ವರವಾದಿ. ಪಾಂಡು ಮಹಾರಾಜನು ಬುದ್ಧನ ದಂತವನ್ನು ನಾಶಮಾಡುವ ಉದ್ದೇಶದಿಂದ  ದಂತವನ್ನು ತನ್ನಲ್ಲಿಗೆ ತರಲು ಆಜ್ಞಾಪಿಸುತ್ತಾನೆ.
ಆದರೆ ಬುದ್ಧ ದಂತ ತರುವಷ್ಟರಲ್ಲಿ ಅರಸನ ಮನಸ್ಸು ಪರಿವರ್ತನೆಗೊಂಡು ಆತನೂ ಬೌದ್ಧಧರ್ಮವನ್ನು ಒಪ್ಪಿಕೊಳ್ಳುತ್ತಾನೆ. ಈ ವಿಷಯ ಕ್ಷೀರಧಾರ ಅರಸನಿಗೆ ತಿಳಿದು ಆತ ಸೇನೆಯೊಂದಿಗೆ ಪಾಂಡುರಾಜನ ಮೇಲೆ ದಂಡೆತ್ತಿ ಬರುತ್ತಾನೆ. ಯುದ್ಧದಲ್ಲಿ ಕ್ಷೀರಧಾರ ಸಾವನ್ನಪ್ಪುತ್ತಾನೆ. ಉದೆನಿಯ ರಾಜಕುಮಾರ ಬುದ್ಧ ದಂತವನ್ನು ಭಕ್ತಿಯಿಂದ ಪೂಜಿಸಲು ಆರಂಭಿಸುತ್ತಾನೆ. ಹೀಗಾಗಿ ಈತನನ್ನು ‘ದಂತ’ ಎಂದೇ ಕರೆಯುತ್ತಾರೆ. ಈತನ ಭಕ್ತಿಯನ್ನು ಕಂಡು ಪಾಂಡುರಾಜ ತನ್ನ ಮಗಳು ರಾಜಕುಮಾರಿ ಹೇಮಮಾಲಿಯನ್ನು ದಂತನಿಗೆ ವಿವಾಹಮಾಡಿಕೊಡುತ್ತಾನೆ.
ಇಷ್ಟರಲ್ಲಿ ಕ್ಷೀರಧಾರ ಅರಸನ ಮಗ ಬೃಹತ್ ಸೇನೆಯೊಂದಿಗೆ ಪಾಂಡು ರಾಜ್ಯಕ್ಕೆ ದಂಡೆತ್ತಿ ಬರುತ್ತಾನೆ. ಆಗ ಪಾಂಡು ರಾಜನು ಮತ್ತು ಅಳಿಯನನ್ನು ಕರೆದು ಬುದ್ಧ ದಂತದ ಪುಟ್ಟ ಕರಂಡಕವನ್ನು ಅವರಿಗೆ ಒಪ್ಪಿಸಿ ಅದರ ರಕ್ಷಣೆಯ ಭಾರವನ್ನು ಹೊರಲು ಹೇಳಿ ನಗರದಿಂದ ಹೊರಗೆ ಕಳುಹಿಸುತ್ತಾನೆ.
ದಂತ ಮತ್ತು ರಾಜಕುಮಾರಿ ಹೇಮ ಮಾಲಿ ಬುದ್ಧ ದಂತದ ಕರಂಡಕವನ್ಉ ರಾಜಕುಮಾರಿಯ ಕೂದಲ ಗಂಟಿನಲ್ಲಿ ಅಡಗಿಸಿ ಬ್ರಾಹ್ಮಣರ ವೇಷದಲ್ಲಿ ಶ್ರೀ ಲಂಕಾದತ್ತ ಪ್ರಯಾಣಿಸುತ್ತಾರೆ.
ಕಥೆಯ ಪ್ರಕಾರ ಕಳಿಂಗದ (ಒರಿಸ್ಸಾ) ತಾಮ್ರಲಿಪಿ ಬಂದರಿನಿಂದ ದೋಣಿಯ ಮೂಲಕ ಪ್ರಯಾಣಿಸಿ ಲಂಕಾ ಪಟ್ಟಣಕ್ಕೆ ತಲುಪುತ್ತಾರೆ. ಆ ಕಾಲದಲ್ಲಿ ಶ್ರಿಲಂಕಾದ ಅನುರಾಧಪುರದಲ್ಲಿ ರಾಜ ಮೇಘವನ್ ಆಳುತ್ತಿದ್ದ. ಬುದ್ಧ ದಂತ ಸಿಂಹಳಕ್ಕೆ ಬಂದ ಸುದ್ಧಿ ಕೇಳಿ ಆತ ಸಂಬ್ರಮದಿಂದ ಬರಮಾಡಿಕೊಳ್ಳುತ್ತಾನೆ.ತನ್ನ ಅರಮನೆಯ ಬಳಿಯೇ ಸುಂದರ ಮಂದಿರ ಕಟ್ಟಿ ಅದರಲ್ಲಿ ಬುದ್ಧ ದಂತವನ್ನು ಇಡುತ್ತಾನೆ. ಮುಂದಿ ಅರಸ ರಾಜಧಾನಿಯನ್ನು ಕ್ಯಾಂಡಿಗೆ ಬದಲಾಯಿಸುತ್ತಾನೆ. ಅಗ ದಂತವನ್ನು ಅರಮನೆಯ ಬಳಿ ಪ್ರತಿಷ್ಟಾಪಿಸಿ ಮಂದಿರ ಕಟ್ಟುತ್ತಾನೆ. ಈಗ ಇರುವ ದಂತ ಮಂದಿರ ಸಿಂಹಳದ ಕೊನೆಯ ಅರಸನ ಅರಮನೆ ಎನ್ನಲಾಗುತ್ತದೆ.





ಈಗ ಬುದ್ಧ ದಂತ  ಇರುವ ಮಂದಿರ.








ಇಸ್ರುಮುನಿಯ ಗುಹೆ: ಇಲ್ಲಿ ಸ್ವತಃ ಬುದ್ಧ ತಪಸ್ಸಿಗೆ ಕುಳಿತಿದ್ದ ಎನ್ನುತ್ತಾರೆ. ಮುಂದೆ ಈ ಜಾಗದಲ್ಲಿ ಮಂದಿರ ಕಟ್ಟುತ್ತಾರೆ. ಬಾರತದಿಂದ ಹೋದ ಬುದ್ಧನ ಹಲ್ಲನ್ನು




ಇಸ್ರುಮುನಿಯ ಗುಹೆ
ಆರಂಭದಲ್ಲಿ ಈ ಗುಹೆಯಲ್ಲಿ ಇಡಲಾಗಿತ್ತು ಎಂಬ ಮಾಹಿತಿ ಇದೆ.


ಇಸ್ರುಮುನಿಯ=ಬುದ್ಧ.
Add caption